‘ಶಿಕ್ಷಣ ನೀತಿಯಿಂದ ಬೇಸತ್ತು, ಶಿಕ್ಷಣ ವ್ಯವಸ್ಥೆ ಬದಲಾಗಲಿ, ನನ್ನ ಬಲಿದಾನ ಬದಲಾವಣೆಗೆ ದಾರಿದೀಪವಾಗಲಿ’ ಎನ್ನುತ್ತಾ ಎಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿರುವ ದುರ್ಘಟನೆ ಹಾಸನದಲ್ಲಿ ನಡೆದಿದೆ.

ಶಿಕ್ಷಣ ವ್ಯವಸ್ಥೆ ಬದಲಾಗದಿದ್ದರೆ ಸಾಧನೆ ಸಾಧ್ಯವಿಲ್ಲ ಎಂದು ಸಾಯುವ ಮುನ್ನ ವೀಡಿಯೋ ಮಾಡಿರುವ ಹೇಮಂತ್‌ ಎಂಬ ವಿದ್ಯಾರ್ಥಿ, ಮುಖ್ಯಮಂತ್ರಿಗಳು, ಶಿಕ್ಷಣ ಇಲಾಖೆ, ವಿಟಿಯು ಸೇರಿದಂತೆ ಎಲ್ಲಾ ರಾಜಕೀಯ ನಾಯಕರು ಶಿಕ್ಷಣ ಸುಧಾರಣೆಗೆ ಸಹಕರಿಸಿ ಎಂದು ಮನವಿ ಮಾಡಿದ್ದಾರೆ. ಅರಸೀಕೆರೆ ತಾಲ್ಲೂಕಿನ ಹಿರಿಯಾಳು ಗ್ರಾಮದ ನಿವಾಸಿಯಾಗಿದ್ದ ಹೇಮಂತ್‌ ಹಾಸನದ ಖಾಸಗಿ ತಾಂತ್ರಿಕ ಕಾಲೇಜೊಂದರಲ್ಲಿ ಎಂಜಿನಿಯರಿಂಗ್‌ ಪದವಿ ವ್ಯಾಸಂಗ ಮಾಡುತ್ತಿದ್ದರು.

‘ನನ್ನಪ್ಪ ಶಿಕ್ಷಕರು, ಅವರ ವಿದ್ಯಾರ್ಥಿಗಳು ದೊಡ್ಡ ಸಾಧನೆ ಮಾಡಿದ್ದಾರೆ. ಹಿಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅದು ಸಾಧ್ಯವಿತ್ತು. ಆದರೆ ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಇದು ಸಾಧ್ಯವೇ ಇಲ್ಲ. ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಎಂಜಿನಿಯರಿಂಗ್‌ ಕಲಿತ ವಿದ್ಯಾರ್ಥಿ ಸೈಬರ್‌ ಸೆಂಟರ್‌ನಲ್ಲಿ ಕೆಲಸ ಮಾಡಬಹುದು ಅಷ್ಟೇ. ನನ್ನ ಸಾವು ವ್ಯರ್ಥ ಅಲ್ಲ. ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಯಾರಾದರೂ ಒಬ್ಬರ ಬಲಿದಾನ ಆಗಲೇಬೇಕಿದೆ. ನಾನು ಬದಲಾವಣೆಗೆ ಬುನಾದಿ ಹಾಕುವ ಕೆಲಸ ಮಾಡಿದ್ದೇನೆ’ ಎಂದು ವೀಡಿಯೋದಲ್ಲಿ ಮಾತನಾಡಿದ್ದಾರೆ.

ವೀಡಿಯೋದಲ್ಲಿ ಪೋಷಕರ ಬಗ್ಗೆಯೂ ಭಾವನಾತ್ಮಕವಾಗಿ ಮಾತನಾಡಿರುವ ಅವರು, ’ಅಪ್ಪ ಅಮ್ಮ ಐ ಲವ್‌ ಯೂ, ನಾನು ನಿಮ್ಮನ್ನು ಮಿಸ್‌ ಮಾಡಿಕೊಳ್ಳುತ್ತೇನೆ. ನನ್ನ ಸಾವಿನ ನಂತರ ಅಪ್ಪ ಅಮ್ಮ ಇಬ್ಬರು ಅನಾಥ ಮಕ್ಕಳನ್ನು ದತ್ತು ಪಡೆದು ಸಾಕಿ. ಆ ಇಬ್ಬರಲ್ಲಿ ನಾನು ಇರುತ್ತೇನೆ ಎಂದು ಹೇಳಿದ್ದಾರೆ. ಎಲ್ಲರೂ ಈ ವೀಡಿಯೋವನ್ನು ನೋಡಲಿ. ಈ ವೀಡಿಯೋವನ್ನು ನ್ಯೂಸ್‌ ಚಾನೆಲ್‌ನಲ್ಲಿ ಪ್ರಸಾರ ಮಾಡಿ’ ಎಂದಿದ್ದಾರೆ.

ಈ ಘಟನೆ ಕುರಿತಂತೆ ಬೇಸರ ವ್ಯಕ್ತಪಡಿಸಿರುವ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ರಾಜ್ಯ ಸಂಚಾಲಕರಾದ ಸರೋವರ್‌ ಬೆಂಕಿಕೆರೆ, ’ ಹೇಮಂತ್‌ ಅವರ ಆತ್ಮಹತ್ಯೆ ಕರ್ನಾಟಕಕ್ಕೆ ಬಹಳ ಆಘಾತಕಾರಿಯಾದಂತಹ ಘಟನೆಯಾಗಿದೆ. ಸರ್ಕಾರಗಳು ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರ ಅಲ್ಲ ಎಂದು ಹೇಳಿ ನುಣುಚಿಕೊಳ್ಳುವ ಪ್ರಯತ್ನ ಮಾಡಬಾರದು. ಇದು ಇಡೀ ವ್ಯವಸ್ಥೆ ತಲೆತಗ್ಗಿಸಬೇಕಾದ ಘಟನೆಯಾಗಿದೆ. ಹೇಮಂತ್‌ ಅವರ ಬಲಿದಾನವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರಗಳು ಉಚಿತ ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವತ್ತ ಗಮನಹರಿಸಬೇಕು. ಶಿಕ್ಷಣದ ನಂತರ ಯುವಜನರ ಉದ್ಯೋಗ ಮತ್ತು ಉದ್ಯೋಗ ಭದ್ರತೆಯ ಖಾತರಿಯನ್ನು ಸರ್ಕಾರ ನೀಡುವ ನಿಟ್ಟಿನಲ್ಲಿ ಆಲೋಚಿಸಬೇಕು” ಎಂದು ಒತ್ತಾಯಿಸಿದರು.

ಈ ಬಗ್ಗೆ ಮಾತನಾಡಿದ ಸಮಾನ ಶಿಕ್ಷಣಕ್ಕಾಗಿ ಜನಾಂದೋಲನದ ಮುಖಂಡರಾದ ಬಿ. ಶ್ರೀಪಾದ್‌ ಭಟ್‌, ’ಹೊಸ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ತರುತ್ತಿರುವುದಕ್ಕೂ ಈ ಸಾವಿಗೂ ಪರೋಕ್ಷ ಸಂಬಂಧವಿದೆ. 34 ವರ್ಷಗಳ ನಂತರ ಹೊಸ ಶಿಕ್ಷಣ ನೀತಿ ಬರುತ್ತಿದೆ. ಈ ಹಿಂದೆ ಇದ್ದ ಶಿಕ್ಷಣ ನೀತಿಯಲ್ಲಿಯ ಉತ್ತಮ ಅಂಶಗಳೇನು? ಮಿತಿಗಳೇನು ಎಂಬುದನ್ನು ಅರ್ಥಮಾಡಿಕೊಂಡು, ಮಿತಿಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರಗಳು ಕೆಲಸ ಮಾಡಬೇಕಿತ್ತು. ಆದರೆ ಸರ್ಕಾರಗಳು ಅದರ ಬಗ್ಗೆ ಗಮನ ಕೊಡುತ್ತಿಲ್ಲ. ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರ ನೇಮಕಾತಿ ನಡೆಯುತ್ತಿಲ್ಲ. ಹೊಸ ಶಿಕ್ಷಣ ನೀತಿಯಲ್ಲಿ ಶೇ.40 ರಷ್ಟು ಆನ್‌ ಲೈನ್‌ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಇದರಿಂದಾಗಿ ಉದ್ಯೋಗ ಸಿಗುವುದಿಲ್ಲ, ಕಾಲೇಜಿನಲ್ಲಿ ಶಿಕ್ಷಕರಿಲ್ಲ ಎಂಬುದನ್ನು ಸೇರಿದಂತೆ ಭ್ರಮನಿರಸನವಾಗಿರುತ್ತದೆ. ಹೊಸ ಶಿಕ್ಷಣ ನೀತಿಯಲ್ಲಿ ಪದವಿ ಶಿಕ್ಷಣವನ್ನು ನಾಲ್ಕು ವರ್ಷಕ್ಕೆ ಮಾಡಲಾಗಿದೆ. ಮೊದಲ ವರ್ಷಕ್ಕೂ ಪ್ರಮಾಣಪತ್ರ ಎರಡನೇ ವರ್ಷಕ್ಕೂ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ತಿಳಿಸುತ್ತಿದ್ದಾರೆ. ಆದರೆ ಉದ್ಯೋಗ ಖಾತ್ರಿಯಿಲ್ಲದೇ ಯುವಜನರು ಕಂಗಾಲಾಗಲಿದ್ದಾರೆ. ಸರಿಯಾದ ಆಲೋಚನೆಯಿಲ್ಲದ, ತರಾತುರಿಯಿಂದ ತಂದಿರುವ ಹೊಸ ಶಿಕ್ಷಣ ನೀತಿಯಿಂದಾಗಿ ವಿದ್ಯಾರ್ಥಿ ಯುವಜನರಲ್ಲಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ” ಎಂದು ಆಂತಕ ವ್ಯಕ್ತಪಡಿಸಿದರು.

ಕೊರೊನಾದಿಂದಾಗಿ ಎದುರಾಗಿರುವ ಬಡತನ, ಆರ್ಥಿಕ ಸಂಕಷ್ಟ ಹಾಗೂ ಇತರ ಸಮಸ್ಯೆಯಿಂದಾಗಿ ರಾಜ್ಯದಲ್ಲಿ 850 ಜನರು ಆತ್ಮಹತ್ಯೆ ಮಾಡಿಕೊಂಡ ಮತ್ತು ಆತ್ಮಹತ್ಯೆಗೆ ಪ್ರಯತ್ನಿಸಿದ ಪ್ರಕರಣಗಳು ವರದಿಯಾಗಿವೆ. ಕೊರೊನಾ ನಂತರದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಯುವ ತಲೆಮಾರಿನವರ ಆತ್ಮಹತ್ಯೆ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವುದು ಎಲ್ಲರಲ್ಲಿಯೂ ಆತಂಕ ಸೃಷ್ಟಿಸಿದೆ. ಇದಕ್ಕೆ ಕಾರಣವೇನೆಂದು ಅಧ್ಯಯನ ನಡೆಸಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದ್ದ ಸರ್ಕಾರಗಳು ತಮ್ಮ ಕುರ್ಚಿಗಳನ್ನು ಭದ್ರಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವುದು ಬೇಸರದ ಸಂಗತಿ. ಸರ್ಕಾರಗಳು ಈಗಲಾದರೂ ಎಚ್ಚೆತ್ತುಕೊಳ್ಳಲಿ.

ಜೀವ ಅಮೂಲ್ಯವಾಗಿದ್ದು, ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ಯಾವುದೆ ಮಾನಸಿಕ ಸಮಸ್ಯೆಗಳಿಗೆ ವೈದ್ಯರನ್ನು ಸಂಪರ್ಕಿಸಿ.

ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ
ಆರೋಗ್ಯ ಸಹಾಯವಾಣಿ 104.


ಇದನ್ನೂ ಓದಿ: ಬಡತನ ಮತ್ತು ಆರ್ಥಿಕ ಸಂಕಷ್ಟ: ಒಂದು ವರ್ಷದೊಳಗೆ ರಾಜ್ಯದಲ್ಲಿ 850 ಆತ್ಮಹತ್ಯೆ ಪ್ರಕರಣ

1 COMMENT

  1. ಶಿಕ್ಷಣ ವ್ಯವಸ್ಥೆ ಬದಲಾವಣೆ ಆಗಬೇಕಾಗಿರುವುದು ನಿಜ. ಆದರೆ ಇದಕ್ಕೆ ಆತ್ಮಹತ್ಯೆ ಪರಿಹಾರವಲ್ಲ.

LEAVE A REPLY

Please enter your comment!
Please enter your name here