ಮಹಾರಾಷ್ಟ್ರದ ಪಾಯಲ್ ತಡ್ವಿ ಎಂಬ 26 ವರ್ಷದ ಆದಿವಾಸಿ ಯುವತಿ ತಾನು ಮೆಡಿಕಲ್ ಸ್ನಾತಕೋತ್ತರ ಪದವಿ ಓದುತ್ತಿದ್ದ ಮುಂಬೈನ ಟೋಪಿವಾಲ ರಾಷ್ಟ್ರೀಯ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ಲಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಳು. ಮಹಾರಾಷ್ಟ್ರದ ಮೂಲೆಯೊಂದರ ಕುಗ್ರಾಮದ ಆದಿವಾಸಿ ಕುಡಿಯೊಂದರ ಕನಸು ಅಂದು ನೇಣಿಗೆ ಶರಣಾಗಿ ಅಸುನೀಗಿತು. ಪಾಯಲ್ ತಡ್ವಿಗೆ ತನ್ನ ಗ್ರಾಮದಲ್ಲಿ ಒಂದು ಆಸ್ಪತ್ರೆ ತೆರೆಯುವ ಆಸೆಯಿತ್ತು. ಆ ಆಸೆ ಆಸೆಯಾಗಿಯೇ ಉಳಿದುಹೋಯಿತು. ಇಂತಹ ಅನ್ಯಾಯಕ್ಕೆ ಮೂಲ ಕಾರಣ ಭಾರತದ ಜಾತಿಪದ್ಧತಿ. ಅದರಲ್ಲೂ ಸಂಸ್ಕಾರವಂತರೆನಿಸಿಕೊಂಡ ಮೆಡಿಕಲ್ ಕಾಲೇಜಿನ ಕ್ಯಾಂಪಸ್ಸಿನೊಳಗಿನ ಜಾತಿಪದ್ಧತಿ.
ಇಲ್ಲಿ ದುಃಖದಿಂದಲೇ ನೆನಪಿಸಿಕೊಳ್ಳಬೇಕಾದ ಮತ್ತೊಬ್ಬ ದಲಿತ ವಿದ್ಯಾರ್ಥಿ ರೋಹಿತ್ ವೇಮುಲ. ಅವನನ್ನು ಈ ದೇಶದ ಮೇಲ್ಜಾತಿ ರಾಜಕೀಯ-ಸಾಂಸ್ಥಿಕ ವ್ಯವಸ್ಥೆ ಬಲಿಪಡೆದಾಗ ಕಾಕತಾಳಿಯವೆಂಬಂತೆ ಅವನಿಗೂ 26 ವರ್ಷ ತುಂಬಿತ್ತು.
ಪಾಯಲ್ ತಡ್ವಿ ಮೆಡಿಕಲ್ ಕಾಲೇಜಿಗೆ 2018ರಲ್ಲಿ ದಾಖಲಾದಳು. ಅವಳಿಗೆ ಆ ಸದ್ಯಕ್ಕೆ ಯಾವ ರೂಮುಗಳೂ ಖಾಲಿ ಇಲ್ಲದ ಕಾರಣ ಆರಂಭಿಕ ಎರಡು ತಿಂಗಳನ್ನು ಹಿರಿಯ ಸಹಪಾಠಿಗಳಾದ ಅಂಕಿತ ಖಾಂಡೇವಾಲ ಮತ್ತು ಹೇಮಾ ಅಹುಜ ರೂಮಿನಲ್ಲಿ ಹೊಂದಾಣಿಕೆ ಮಾಡಿಕೊಂಡು ಕಳೆಯುವಂತಾಯಿತು. ಈ ಎರಡು ತಿಂಗಳ ಸಮಯದಲ್ಲಿ ತಡ್ವಿಗೆ ನರಕದರ್ಶನವಾಗಿತ್ತು. ಯಾವ ಜಾತಿ ತಾರತಮ್ಯಗಳೂ ಇಲ್ಲದೆ ಜೀವಿಸಿದ್ದ ಆದಿವಾಸಿ ಯುವತಿಗೆ ’ಸೋ ಕಾಲ್ಡ್ ಸಂಸ್ಕಾರವಂತರ’ ನೀಚತನದ ದರ್ಶನವಾಗಿತ್ತು. ಆ ರೂಮಿನಲ್ಲಿ ಅಹುಜ ಮತ್ತು ಖಾಂಡೇವಾಲರಿಗೆ ಮಲಗಲು ಹಾಸಿಗೆ ಇದ್ದವು. ಅವರಿಬ್ಬರೂ ಅದರ ಮೇಲೆ ಮಲಗುತ್ತಿದ್ದರು. ಆದರೆ ಪಾಯಲ್‌ಳಿಗೆ ಹಾಸಿಗೆ ವ್ಯವಸ್ಥೆಯನ್ನು ಮಾಡಿರದ ಕಾರಣ ಆಕೆ ನೆಲದ ಮೇಲೆ ಚಾಪೆ ಹಾಸಿಕೊಂಡು ಮಲಗುತ್ತಿದ್ದಳು. ದಲಿತ-ಆದಿವಾಸಿ ಮಕ್ಕಳಿಗೆ ಇದೇನು ಹೊಸದಲ್ಲ ಬಿಡಿ. ಇದೇನು ಪಾಯಲ್‌ಳಿಗೆ ಬೇಸರ ತರಿಸಲಿಲ್ಲ. ಆದರೆ ಯಾವಾಗ ಅಹುಜ ಮತ್ತು ಖಾಂಡೇವಾಲ ಶೌಚಾಲಯಕ್ಕೆ ಹೋಗಿ ಬಂದು ತಮ್ಮ ಕಾಲುಗಳನ್ನು ಪಾಯಲ್ ಚಾಪೆಗೆ ಒರೆಸಿಕೊಂಡು ನಗುತ್ತಿದ್ದರೋ ಆಗ ಪಾಯಲ್‌ಗೆ ಜಾತಿಪದ್ಧತಿಯ ಹಾಗೂ ಮೇಲ್ಜಾತಿಯವರ ಕ್ರೂರ ವರ್ತನೆ ಅರ್ಥವಾಗಿಹೋಗಿತ್ತು. ಬಂದಿರುವುದು ಓದಲಿಕ್ಕಾಗಿ ಅಲ್ಲವೇ ಎಂದುಕೊಂಡು ಆಗ ಕಣ್ಮುಚ್ಚಿ ಸಹಿಸಿಕೊಳ್ಳುತ್ತಿದ್ದಳು.

ಅಂಕಿತ ಖಾಂಡೇವಾಲ ಮತ್ತು ಹೇಮಾ ಅಹುಜ ಇವರೊಟ್ಟಿಗೆ ಭಕ್ತಿ ಮೆಹರೆ ಎಂಬ ಮತ್ತೊಬ್ಬ ಮೇಲ್ಜಾತಿ ಯುವತಿ ಸೇರಿಕೊಂಡು ತಮ್ಮ ವಿಕೃತ ಮೇಲ್ಜಾತಿ ಮನಸ್ಸನ್ನು ಸಂತುಷ್ಟಗೊಳಿಸಿಕೊಳ್ಳಲು ಆರಂಭಿಸಿದರು. ಜಾತಿ ನಿಂದನೆ ಮಾಡುವುದು, ಮಾನಸಿಕ ಕಿರುಕುಳ ನೀಡುವುದನ್ನು ಮುಂದುವರಿಸಿದರು. ಅವಳ ಜಾತಿ ಹಿಡಿದು ಹೀಯಾಳಿಸುತ್ತಿದ್ದರು. ಈ ಕುರಿತು ಕಾಲೇಜಿನ ಆಡಳಿತಕ್ಕೆ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಪಾಯಲ್ ಗೈನೋಕಾಲಜಿಸ್ಟ್ ಆಗಿ ತರಬೇತಿ ಪಡೆಯುತ್ತಿದ್ದಳು. ಬರಬರುತ್ತಾ ಆಕೆಯನ್ನು ಆಪರೇಷನ್ ಥಿಯೇಟರ್ ಹೊರಗಡೆಯೇ ನಿಲ್ಲುವಂತೆ ಮೇಲ್ಜಾತಿಯ ಆ ಮೂವರು ಧಮಕಿ ಹಾಕುತ್ತಿದ್ದರು; ಸರ್ಜರಿ ಮಾಡದಂತೆ ಪಾಯಲ್‌ಳನ್ನು ನಿರ್ಬಂಧಿಸಿದ್ದರು. ನಿರ್ಬಂಧವನ್ನು ಉಲ್ಲಂಘಿಸಿದರೆ, ಎಲ್ಲರೂ ಒಟ್ಟಾಗಿ ಆಕೆಯ ಮೇಲೆ ಇಲ್ಲಸಲ್ಲದ ದೂರು ಹೇಳಿ ಸಸ್ಪೆಂಡ್ ಮಾಡಿಸುವುದಾಗಿ ಬೆದರಿಕೆ ಒಡ್ಡುತ್ತಿದ್ದರು. ಪಾಯಲ್ ಆತ್ಮಹತ್ಯೆ ಮಾಡಿಕೊಳ್ಳುವ ಮೂರು ದಿನದ ಮುಂಚೆ ಈ ಮೂವರೂ ಯುವತಿಯರು ಆಕೆಯನ್ನು ಆಸ್ಪತ್ರೆಯ ಕೆಳಹಂತದ ಕೆಲಸವೊಂದಕ್ಕೆ ಮೀಸಲಾಗುವಂತೆ ಮಾಡಿದ್ದರು.
ಇದನ್ನೂ ಓದಿ: ಮಾತು ಮರೆತ ಭಾರತ-25; ಅರಿಯೂರು ಫೈಲ್: ಹಿಂದೂಗಳ ದೃಷ್ಟಿಯಲ್ಲಿ ’ದಲಿತರೆಂದಿಗೂ ಹಿಂದೂಗಳಲ್ಲ’
ಈ ಎಲ್ಲಾ ಕಿರುಕುಳಗಳನ್ನು ಸಹಿಸಲಾರದ ಮುಗ್ಧ ಮನಸ್ಸಿನ ಆದಿವಾಸಿ ಮಗಳು ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡುಬಿಟ್ಟಳು. ಆ ಪತ್ರದಲ್ಲಿ ಅಂಕಿತ ಖಾಂಡೇವಾಲ, ಹೇಮಾ ಅಹುಜ ಮತ್ತು ಭಕ್ತಿ ಮೆಹರೆಯನ್ನು ಉಲ್ಲೇಖಿಸಿದ್ದ ಕಾರಣ ಆ ಮೂವರನ್ನೂ ಬಂಧಿಸಲಾಯಿತು. ಈಗವರು ಜಾಮೀನಿನ ಮೇಲೆ ಹೊರಗಿದ್ದಾರೆ. ಆದರೆ, ಮೆಡಿಕಲ್ ಪರೀಕ್ಷೆ ಬರೆಯಲು ಬಾಂಬೆ ಹೈ ಕೋರ್ಟ್ ಅವಕಾಶ ಮಾಡಿಕೊಟ್ಟಿಲ್ಲ.
ದಲಿತ, ಆದಿವಾಸಿ ಮತ್ತು ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳು ಮೆಡಿಕಲ್ ಕಾಲೇಜಿನ ಕ್ಯಾಂಪಸ್ಸಿಗೆ ಪ್ರವೇಶ ಪಡೆದೊಡನೆ ಇತರೆ ಮೇಲ್ಜಾತಿ ವಿದ್ಯಾರ್ಥಿಗಳು ಅವರನ್ನು ಕೇಳುವ ಮೊದಲ ಪ್ರಶ್ನೆ ’ನಿನ್ನ ನೀಟ್ ಅಂಕಗಳೆಷ್ಟು?’ ಎಂಬುವುದಾಗಿರುತ್ತದೆ. ಉತ್ತರ ಪಡೆದ ನಂತರ ಅವರು ಮಾಡುವ ಮೊದಲ ಕೆಲಸ ’ಮೀಸಲಾತಿ ಪಡೆದವರು’ ಮತ್ತು ’ಸಾಮಾನ್ಯ ವಿದ್ಯಾರ್ಥಿಗಳು’ ಎಂದು ಪ್ರತ್ಯೇಕಿಸುವುದಾಗಿದೆ. ಲೈವ್‌ಮಿಂಟ್ ವರದಿಯೊಂದು ತಿಳಿಸುವ ಮಾಹಿತಿ ಭಯಾನಕವಾಗಿದೆ. ಅದು ಪ್ರಕಟಿಸಿದಂತೆ 2019ರ ಸಂಸತ್ತಿನ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಗಳಿಸಿದ ಸ್ಥಾನಗಳನ್ನು (303) ಸಾಮಾನ್ಯ ಅಭ್ಯರ್ಥಿಗಳಿಗೂ, ಕಾಂಗ್ರೆಸ್ ಗಳಿಸಿದ ಸ್ಥಾನಗಳನ್ನು (52) ’ಮೀಸಲಾತಿ ಪಡೆದ ವಿದ್ಯಾರ್ಥಿ’ಗಳಿಗೂ ಹೋಲಿಸಿ ಆಡಿಕೊಳ್ಳುವುದನ್ನೂ ಕ್ಯಾಂಪಸ್ಸಿನ ಮೇಲ್ಜಾತಿ ವಿದ್ಯಾರ್ಥಿಗಳು ಆರಂಭಿಸಿದ್ದಾರೆ. ’ನೀವು ಪ್ರತಿಭಾವಂತ ವಿದ್ಯಾರ್ಥಿಯ ಸ್ಥಾನವನ್ನು ಕಳ್ಳತನ ಮಾಡಿಕೊಂಡಿದ್ದೀರಿ; ನೀವು ಓದಿ ಆಸ್ಪತ್ರೆ ಕ್ಲಿನಿಕ್ ತೆರೆದಾಗ ಅದರ ಬಾಗಿಲಿಗೆ ನಿಮ್ಮ ಜಾತಿ ಪ್ರಮಾಣ ಪತ್ರವನ್ನೂ ಅಂಟಿಸಿಕೊಳ್ಳಿ’ ಎಂದು ಎಲ್ಲರೆದುರು ಹೀಯಾಳಿಸಲಾಗುತ್ತದೆ.
ಉನ್ನತ ಶಿಕ್ಷಣದಲ್ಲಿ ಜಾತಿತಾರತಮ್ಯ ಎಂಬುದು ತೀರ ಸಾಮಾನ್ಯ ವಿಷಯವಾಗಿದೆ. ಅದನ್ನು ಸಹಿಸಿಕೊಂಡು ಬದುಕುವ ದಲಿತ-ಆದಿವಾಸಿಗಳು ಬದುಕುಳಿಯುತ್ತಾರೆ. ಆದರೆ ಸ್ವಾಭಿಮಾನಿಗಳಾಗಿ ಸಿಡಿದು ಬಿದ್ದವರು ರೋಹಿತ್ ವೇಮುಲಗಳಾಗುತ್ತಾರೆ. ಸಹಿಸಿಕೊಳ್ಳದೆ ಖಿನ್ನತೆಗೆ ಜಾರುವವರು ಪಾಯಲ್ ತಡ್ವಿಯರಾಗುತ್ತಾರೆ.
2010ರಲ್ಲಿ ದೆಹಲಿಯ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ಆತ್ಮಹತ್ಯೆ ಮಾಡಿಕೊಂಡು ಅಸುನೀಗಿದ ದಲಿತ ಯುವಕ ಬಲ್ಮಕುಂದ್ ಭಾರ್ತಿಯನ್ನು ಅಲ್ಲಿನ ಪ್ರೊಫೆಸರ್ ’ಏಯ್ ಕೋಟಾ ಸ್ಟೂಡೆಂಟ್’ ಎಂದು ಕರೆಯುತ್ತಿದ್ದನು. ಇದು ಉನ್ನತ ಶಿಕ್ಷಣದಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿರುವ ಪರಿಯಾಗಿದೆ.
ಇದನ್ನೂ ಓದಿ: ಮಾತು ಮರೆತ ಭಾರತ-24; ಧರ್ಮಾಪುರಿ ಫೈಲ್: ಒಂದು ದುರಂತ ಪ್ರೇಮಕಥೆ
ಉನ್ನತ ಶಿಕ್ಷಣದಲ್ಲಿ ಜಾತಿ ತಾರತಮ್ಯಗಳ ಬಗ್ಗೆ 2007ರಲ್ಲಿಯೇ ಅಧ್ಯಯನವಾಗಿತ್ತು. ಈ ಸಮಿತಿಯ ಅಧ್ಯಕ್ಷರು ಪ್ರಖ್ಯಾತ ಸಮಾಜ ಶಾಸ್ತ್ರಜ್ಞ ಸುಖದೇವ್ ಥೋರಟ್. ಆಲ್ ಇಂಡಿಯಾ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಸಮೀಕ್ಷೆ ಮಾಡಿದ ಸುಖದೇವ್ ಥೋರಟ್‌ರವರಿಗೆ ಭಯಾನಕ ಸಂಗತಿಗಳು ಬಿಚ್ಚಿಕೊಂಡಿದ್ದವು. ಅವರು ನೀಡಿದ ವರದಿಯ ಪ್ರಕಾರ ಶೇ.69 ದಲಿತ ವಿದ್ಯಾರ್ಥಿಗಳಿಗೆ ಕಾಲೇಜಿನ ಶಿಕ್ಷಕ ವೃಂದದಿಂದ ಸಂಪೂರ್ಣ ಸಹಕಾರ ಸಿಗುವುದಿಲ್ಲ. ಶೇ.76 ದಲಿತ ವಿದ್ಯಾರ್ಥಿಗಳು ಹೇಳಿವಂತೆ ಅವರ ಉತ್ತರ ಪತ್ರಿಕೆಗಳನ್ನು ಸರಿಯಾಗಿ ಮೌಲ್ಯಮಾಪನ ಮಾಡುವುದಿಲ್ಲ. ಶೇ.84ರಷ್ಟು ವಿದ್ಯಾರ್ಥಿಗಳ ಮೌಖಿಕ ಪರೀಕ್ಷೆಯನ್ನು ನ್ಯಾಯಯುತವಾಗಿ ನೆರವೇರಿಸುವುದಿಲ್ಲ. ಶೇ.84 ದಲಿತ ವಿದ್ಯಾರ್ಥಿಗಳು ಹೇಳುವಂತೆ ಅವರ ಅಂಕಶ್ರೇಣಿಯನ್ನು ಅವರವರ ಜಾತಿಗಳು ನಿರ್ಧರಿಸುತ್ತವೆ. ಈ ವರದಿಯು ಹಾಸ್ಟೆಲ್, ಖಾಸಗಿ ಮೆಸ್‌ಗಳಲ್ಲಿನ ಜಾತಿತಾರತಮ್ಯದ ಕುರಿತೂ ಹೇಳುತ್ತದೆ.
ಎದುರಾಗುವ ನೂರಾರು ಅಡಚಣೆಗಳನ್ನು, ಸಂಕಷ್ಟಗಳನ್ನು ಮೀರಿ ಮುಂದುವರಿಯುವ ದಲಿತ-ಆದಿವಾಸಿ ವಿದ್ಯಾರ್ಥಿಗಳಿಗೆ ಇನ್ನೇನು ಹಣ್ಣು ಕೈಗೆ ದಕ್ಕುವ ಸ್ಥಿತಿ ಬರುವಷ್ಟರಲ್ಲಿ ಉನ್ನತ ಶಿಕ್ಷಣದ ಕ್ಯಾಂಪಸ್ಸಿನ ಜಾತಿ ಮನಸ್ಸುಗಳು ಅದನ್ನೂ ದಕ್ಕದಂತೆ ಮಾಡಿಬಿಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ ದಲಿತ-ಆದಿವಾಸಿ-ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳನ್ನು ಕಾಪಾಡುವವರಾರು?


