ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ದೆಹಲಿಯ ಸಾರ್ವಜನಿಕ ಸ್ಥಳಗಳಲ್ಲಿ, ಕೊಳಗಳು ಮತ್ತು ನದಿ ತೀರಗಳಲ್ಲಿ ಛತ್ ಪೂಜಾ ಆಚರಣೆಯನ್ನು ನಿಷೇಧಿಸುವ ಆಪ್ ಸರ್ಕಾರದ ನಿರ್ಧಾರಕ್ಕೆ ಮಧ್ಯ ಪ್ರವೇಶಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿ, ಅರ್ಜಿ ವಜಾಗೊಳಿಸಿದೆ.
ರಾಷ್ಟ್ರದ ರಾಜಧಾನಿಯಲ್ಲಿ ಈಗಾಗಲೇ ಕೊರೊನಾ ಸೋಂಕಿನ ಮೂರನೇ ಅಲೆ ವ್ಯಾಪಿಸುತ್ತಿದ್ದು, ದೊಡ್ಡ ಸಭೆ, ಸಂಭ್ರಮಾಚರಣೆಗಳಿಗೆ ಅವಕಾಶ ನೀಡುವುದರಿಂದ ಜನರು “ಸೂಪರ್ ಸ್ಪ್ರೆಡರ್ಸ್” ಆಗುತ್ತಾರೆ ಎಂದು ಹೈಕೋರ್ಟ್ ಹೇಳಿದೆ.
ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಡಿಡಿಎಂಎ) ಅಧ್ಯಕ್ಷರು ನವೆಂಬರ್ 10 ರಂದು, ನ. 20ರಂದು ಸಾರ್ವಜನಿಕ ಸ್ಥಳಗಳಲ್ಲಿ ಛತ್ ಪೂಜೆಗೆ ಅವಕಾಶ ನೀಡುವುದಿಲ್ಲ ಎಂದು ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ದುರ್ಗಾ ಜನ್ ಸೇವಾ ಟ್ರಸ್ಟ್ ಸಲ್ಲಿಸಿದ್ದಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸುಬ್ರಮಣಿಯಂ ಪ್ರಸಾದ್ ಅವರ ನ್ಯಾಯಪೀಠ ಅರ್ಜಿ ವಜಾಗೊಳಿಸಿತು.
ಇದನ್ನೂ ಓದಿ: ಬಿಬಿಎಂಪಿ ಗೆದ್ದರೆ ದೆಹಲಿ ಮಾದರಿಯ ’ಮೊಹಲ್ಲಾ ಕ್ಲಿನಿಕ್’ ಆರಂಭ: ಆಮ್ ಆದ್ಮಿ ಪಕ್ಷ
ಛತ್ ಪೂಜೆಗೆ 1,000 ಜನರ ಸಭೆ ನಡೆಸಲು ದುರ್ಗಾ ಜನ್ ಸೇವಾ ಟ್ರಸ್ಟ್ ಅನುಮತಿ ಕೋರಿತು. ಇದಕ್ಕೆ ನ್ಯಾಯಪೀಠ, “ಮದುವೆಗಳಲ್ಲಿ ಪಾಲ್ಗೊಳ್ಳುವ ಅತಿಥಿಗಳ ಸಂಖ್ಯೆಯನ್ನು 50ಕ್ಕೆ ಸೀಮಿತಗೊಳಿಸಿ ಇಂದು ದೆಹಲಿ ಸರ್ಕಾರವು ಆದೇಶ ಹೊರಡಿಸಿರುವಾಗ, ನಿಮಗೆ ಛತ್ ಪೂಜೆಗೆ ಬೇಕಾಗಿರುವುದು 1,000 ವ್ಯಕ್ತಿಗಳು ಮಾತ್ರ. ಹೇಗೆ ಬರುತ್ತಾರೆ?” ಎಂದು ವ್ಯಂಗ್ಯವಾಡಿದೆ.
ದೆಹಲಿಯಲ್ಲಿ ಸೋಂಕು ಹರಡುತ್ತಿರುವುದನ್ನು ಪರಿಗಣಿಸಿ ಅಧಿಕಾರಿಗಳು ಈ ಆದೇಶವನ್ನು ಅಂಗೀಕರಿಸಿದ್ದಾರೆ ಹಾಗಾಗಿ ಅರ್ಜಿಯು ಅರ್ಹವಲ್ಲ ಎಂದು ನ್ಯಾಯಪೀಠ ಹೇಳಿದೆ.
ದೆಹಲಿಯಲ್ಲಿ ಸೋಂಕಿನ ಪ್ರಮಾಣವು ಪ್ರತಿದಿನ 7,800 ರಿಂದ 8,593 ರ ನಡುವೆ ಸುಳಿದಾಡುತ್ತಿದೆ. ಸಾವಿನ ಪ್ರಮಾಣವು ಎರಡು ಅಂಕಿ ಅಂಶಗಳಲ್ಲಿದೆ. 42,000 ಸಕ್ರಿಯ ಪ್ರಕರಣಗಳಿವೆ. ಅರ್ಜಿದಾರರು ನಗರದ ಪ್ರಸ್ತುತ ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿತ್ತು. ಇಂತಹ ಸನ್ನಿವೆಶದಲ್ಲಿ ಅರ್ಜಿ ಅರ್ಹವಲ್ಲ” ಎಂದು ಹೈಕೋರ್ಟ್ ತಿಳಿಸಿದೆ.
ಛತ್ ಪೂಜೆಯನ್ನು ರಾಜಧಾನಿಯಲ್ಲಿ ಸಾವಿರಾರು ಮಂದಿ ಆಚರಿಸುತ್ತಾರೆ, ವಿಶೇಷವಾಗಿ ಬಿಹಾರ ಮತ್ತು ಪೂರ್ವ ಉತ್ತರ ಪ್ರದೇಶದಿಂದ ರಾಜಧಾನಿಗೆ ವಲಸೆ ಬಂದಿರುವ ಜನರು ಈ ಆಚರಣೆಯಲ್ಲಿ ತೊಡಗುತ್ತಾರೆ.


