ಮಾಸ್ಕ್ ಧರಿಸದ, ದೈಹಿಕ ಅಂತರ ಪಾಲಿಸದೆ ಕೊರೊನಾ ನಿಯಮಗಳನ್ನು ಉಲ್ಲಂಘಿಸುವ ಸಾಮಾನ್ಯ ಜನರಿಗೆ ಮಾತ್ರ ದಂಡ ವಿಧಿಸುತ್ತೀರಿ. ಅದೇ ನಿಯಮಗಳು ರಾಜಕೀಯ ರ್‍ಯಾಲಿಗಳಲ್ಲಿ ಭಾಗವಹಿಸಿದ್ದಾಗ ಮಾಸ್ಕ್ ಧರಿಸದೆ, ದೈಹಿಕ ಅಂತರ ಪಾಲಿಸದ ರಾಜಕೀಯ ನಾಯಕರಿಗ್ಯಾಕಿಲ್ಲ? ಎಂದು ಹೈಕೋರ್ಟ್ ರಾಜ್ಯ ಸರ್ಕಾರವನ್ನು ಕಟುವಾಗಿ ಪ್ರಶ್ನಿಸಿದೆ.
ಮಾಸ್ಕ್ ಧರಿಸದೇ ನಿಯಮ ಉಲ್ಲಂಘಿಸಿದ ರಾಜಕಾರಣಿಗಳ ವಿರುದ್ಧ ಮಾತ್ರ ಯಾವುದೇ ಕ್ರಮ ಜರುಗಿಸಿಲ್ಲ. ಕೇವಲ ಸಾಮಾನ್ಯ ಜನರಿಗಷ್ಟೇ ಕಾನೂನು ಇದೆಯೇ? ಅವರು ಮಾತ್ರ ದಂಡ ಪಾವತಿಸಬೇಕೆ ಎಂದು ಹೈಕೋರ್ಟ್ ಕೇಳಿದೆ.
ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಲೆಟ್ಜ್ ಕಿಟ್ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ನೇತೃತ್ವದ ವಿಭಾಗೀಯ ಪೀಠ ಅರ್ಜಿ ವಿಚಾರಣೆ ಮಾಡುತ್ತಿದೆ.
ರಾಜಕೀಯ ನಾಯಕರು, ಗಣ್ಯರು ಕೊರೊನಾ ನಿಯಮಗಳನ್ನು ಉಲ್ಲಂಘಿಸಿರುವುದು ಫೋಟೋಗಳಲ್ಲೇ ಸ್ಪಷ್ಟವಾಗಿ ಕಾಣುತ್ತಿದೆ. ಆದರೆ, ಅವರ ವಿರುದ್ಧ ದಂಡ ಸಂಗ್ರಹಿಸಿಲ್ಲ. ಸರ್ಕಾರ ಕ್ರಮ ಜರುಗಿಸಿಲ್ಲ. ಬದಲಿಗೆ ಕ್ರಮ ಜರುಗಿಸಲಾಗುತ್ತಿದೆ ಎಂಬುದಾಗಿ ಉತ್ತರ ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಇದನ್ನೂ ಓದಿ: ತೇಜಸ್ವಿ ಸೂರ್ಯನ ಕೋಮುವಾದಿ ಭಾಷಣ ಬೇಡ: ಜರ್ಮನ್ ಭಾರತೀಯರ ಒತ್ತಾಯ
ಸೆ.30 ರಂದು ಸಂಸದ ತೇಜಸ್ವಿ ಸೂರ್ಯರನ್ನು ವಿಮಾನ ನಿಲ್ದಾಣದಿಂದ ಪಕ್ಷದ ಕಚೇರಿಗೆ ಸ್ವಾಗತಿಸುವ ವೇಳೆ ನಡೆದ ರ್‍ಯಾಲಿಯಲ್ಲಿ ತೇಜಸ್ವಿ ಮಾಸ್ಕ್ ಧರಿಸಿದ್ದರು. ಅಲ್ಲಿದ್ದ ಕಾರ್ಯಕರ್ತರು ಮಾಸ್ಕ್ ಧರಿಸದೇ ಇರುವುದು ಹಾಗೂ ದೈಹಿಕ ಅಂತರ ಕಾಯ್ದುಕೊಳ್ಳದೇ ಇರುವುದು ಕಂಡುಬಂದಿದೆ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿತು.
ಆದರೆ, ವಕೀಲ ಜಿ.ಆರ್. ಮೋಹನ್ ಪೋಟೊಗಳ ಸಹಿತ ಸಲ್ಲಿಸಿರುವ ಮೆಮೊದಲ್ಲಿ ಸಂಸದ ಸೇರಿದಂತೆ ಯಾರೂ ಕೂಡ ಆ ದಿನ ಮಾಸ್ಕ್‌ಗಳನ್ನು ಧರಿಸಿರಲಿಲ್ಲ. ಸುರಕ್ಷಿತ ಅಂತರ ಕಾಯ್ದುಕೊಂಡಿರಲಿಲ್ಲ. ರ್‍ಯಾಲಿಯ ಆಯೋಜನೆಯ ವೇಳೆ ಪಾಲಿಸಬೇಕಾದ ಕೇಂದ್ರ ಸರಕಾರದ ಎಸ್‌ಒಪಿ ನಿಯಮವನ್ನು ಉಲ್ಲಂಘಿಸಲಾಗಿದೆ ಎಂದು ಹೇಳಿದ್ದಾರೆ.
ಮಾಸ್ಕ್‌ಗಳನ್ನು ಧರಿಸದೇ ಇರುವುದಕ್ಕೆ ಸಂಸತ್ ಸದಸ್ಯ (ತೇಜಸ್ವಿ ಸೂರ್ಯ) ಹಾಗೂ ಇತರ ರಾಜಕೀಯ ಮುಖಂಡರಿಂದ ನೀವು ದಂಡ ಸಂಗ್ರಹಿಸಿದ್ದೀರಾ? ರಾಜಕಾರಣಿಗಳ ವಿರುದ್ಧ ಏಕೆ ಎಫ್‌ಐಆರ್ ದಾಖಲಿಸಿಲ್ಲ? ಕಠಿಣ ಕ್ರಮ ಜರುಗಿಸಲು ಹಿಂದೇಟು ಹಾಕುತ್ತಿರುವ ಸರ್ಕಾರವು ಸಮಾಜಕ್ಕೆ ಯಾವ ಸಂದೇಶ ರವಾನಿಸುತ್ತಿದೆ ಎಂದು ನ್ಯಾಯಪೀಠ ಪ್ರಶ್ನಿಸಿದೆ.
ಇದಕ್ಕೆ ಉತ್ತರಿಸಿರುವ ಸರ್ಕಾರದ ಪರ ವಕೀಲರು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ನಡೆಸಿದ ರ್‍ಯಾಲಿಯಲ್ಲಿ ಭಾಗವಹಿಸಿದ್ದವರ ವಿರುದ್ಧ ಹಾಗೂ ಆರ್.ಆರ್.ನಗರ ಚುನಾವಣಾ ಪ್ರಚಾರದಲ್ಲಿ ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
ದೂರು ದಾಖಲಾದ ನಂತರ ಈ ಸಂಬಂಧ ಕೈಗೊಂಡ ಕ್ರಮಗಳೇನು ಎಂದು ನ್ಯಾಯಪೀಠ ಪ್ರಶ್ನಿಸಿತು. ಜೊತೆಗೆ, ರ್‍ಯಾಲಿಯಲ್ಲಿ ಮಾಸ್ಕ್ ಧರಿಸದ ಹಾಗೂ ದೈಹಿಕ ಅಂತರ ಪಾಲಿಸದವರ ವಿರುದ್ಧ ಪೋಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತುನಗರ ಪೊಲೀಸ್ ಆಯುಕ್ತರು ವಿವರಣೆ ನೀಡಬೇಕು ಎಂದು ಸೂಚಿಸಿ ವಿಚಾರಣೆಯನ್ನು ನವೆಂಬರ್ 9ಕ್ಕೆ ಮುಂದೂಡಿದೆ.


