ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಾಟದಲ್ಲಿ ನ್ಯೂಝಿಲ್ಯಾಂಡ್ ವಿರುದ್ದ ಸೋತ ಭಾರತ ತಂಡವನ್ನು ‘ದಿಗ್ವಿಜಯ ನ್ಯೂಸ್’ ಕನ್ನಡದ ಸುದ್ದಿ ವಾಹಿನಿಯು ‘ದಂಡುಪಾಳ್ಯದ ದಂಡಪಿಂಡಗಳು’ ಎಂದು ಕರೆದಿದೆ ಎನ್ನಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇತ್ತೀಚೆಗೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ವಿರುದ್ದ ಭಾರತ ತಂಡವು ಎಂಟು ವಿಕೆಟ್ ಅಂತರದಲ್ಲಿ ಸೋತಿತ್ತು. ಇದಕ್ಕೆ ಭಾರತ ತಂಡದ ಅಭಿಮಾನಿಗಳು ನಿರಾಸೆಯನ್ನೂ ವ್ಯಕ್ತಪಡಿಸಿದ್ದರು. ಆದರೆ ದಿಗ್ವಿಜಯ ನ್ಯೂಸ್ ತಂಡವನ್ನು ದಂಡುಪಾಳ್ಯದ ದಂಡಪಿಂಡಗಳು ಎಂದು ಕರೆದು ಅವಮಾನಿಸಿದೆ ಎಂದು ಆರೋಪಿಸಲಾಗಿದೆ. ದಿಗ್ವಿಜಯ ನ್ಯೂಸ್ ನಡೆಸಿದೆ ಎನ್ನಲಾಗಿರುವ ಕಾರ್ಯಕ್ರಮದ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಚಾನೆಲ್ ವಿರುದ್ದ ಕಿಡಿಕಾರಿದ್ದಾರೆ. ತೀವ್ರ ಆಕ್ರೋಶ ವ್ಯಕ್ತವಾದ ನಂತರ ಸದ್ಯಕ್ಕೆ ಆ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ತಬ್ಲೀಘಿಗಳನ್ನು ಕೆಟ್ಟದಾಗಿ ಬಿಂಬಿಸಿದ್ದಕ್ಕೆ ಕ್ಷಮೆ ಕೇಳಿದ ‘ನ್ಯೂಸ್18 ಕನ್ನಡ’!
ಭಾರತ ತಂಡದ ಮಾಜಿ ಕ್ರಿಕೆಟಿಗ, ಕನ್ನಡಿಗ ದೊಡ್ಡ ಗಣೇಶ್ ಅವರು ಈ ಬಗ್ಗೆ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು ಚಾನೆಲ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ತನ್ನ ಟ್ವೀಟ್‌ನಲ್ಲಿ, “ನಮ್ಮ ಈ ಕನ್ನಡ ನ್ಯೂಸ್ ಚ್ಯಾನಲ್‌ಗಳಿಗೆ ವೃತ್ತಿಪರ ನೀತಿ ಎನ್ನವುದೇ ಇಲ್ವಾ? ಒಂದು ಪಂದ್ಯ ಸೋತ ಮಾತ್ರಕ್ಕೆ ನಮ್ಮ ಆಟಗಾರರನ್ನು ಇಂತಹ ಕೀಳು ಮಟ್ಟದ ಶೀರ್ಷಿಕೆಯಿಂದ ಟೀಕೆ ಮಾಡೋದು ಎಷ್ಟರ ಮಟ್ಟಿಗೆ ಸರಿ ?” ಎಂದು ದಿಗ್ವಿಜಯ ನ್ಯೂಸ್‌ಗೆ ಪ್ರಶ್ನೆ ಮಾಡಿದ್ದಾರೆ.
ನಮ್ಮ ಈ ಕನ್ನಡ ನ್ಯೂಸ್ ಚ್ಯಾನಲ್ ಗಳಿಗೆ professional ethics ಅನ್ನೋದೇ ಇಲ್ವಾ ? ಒಂದು ಪಂದ್ಯ ಸೋತ ಮಾತ್ರಕ್ಕೆ ನಮ್ಮ ಆಟಗಾರರನ್ನು ಇಂತಹ ಕೀಳು ಮಟ್ಟದ ಶೀರ್ಷಿಕೆಯಿಂದ ಟೀಕೆ ಮಾಡೋದು ಎಷ್ಟರ ಮಟ್ಟಿಗೆ ಸರಿ ? @DighvijayNews24 @DighvijayNews pic.twitter.com/ghtaH87g71
— ದೊಡ್ಡ ಗಣೇಶ್ | Dodda Ganesh (@doddaganesha) June 24, 2021
ಫೇಸ್‌ಬುಕ್‌ನಲ್ಲಿ ಕೂಡಾ ದಿಗ್ವಿಜಯ ನ್ಯೂಸ್ ಪದ ಬಳಕೆಗೆ ಆಕ್ರೋಶ ವ್ಯಕ್ತವಾಗಿದೆ. ಬೋಪಣ್ಣ ಬೊಳ್ಳಿಯಂಗಡ ಅಪ್ಪು ಎಂಬವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, “ಈ ಚಾನಲ್ ಗಳು ಅದೆಷ್ಟು ಕೀಳು ಮಟ್ಟಕ್ಕೆ ಇಳಿಯುತ್ತವೆ ಎನ್ನುವುದು ಈ ಶಿರ್ಷಿಕೆ ನೋಡಿದರೆ ತಿಳಿಯುತ್ತದೆ. ದಿಗ್ವಿಜಯ ನ್ಯೂಸ್ ಅವರೆ ಒಂದೇ ಒಂದು ಪಂದ್ಯ, ಅದೂ ಫೈನಲ್‌ನಲ್ಲಿ ಸೋತಿದಕ್ಕೆ ತಂಡವನ್ನು ‘ದಂಡುಪಾಳ್ಯ’ಕ್ಕೆ…’ದಂಡಪಿಂಡ’ಗಳಿಗೆ ಹೋಲಿಸುತ್ತೀರಿ ಎಂದರೆ ನಾಚಿಕೆ ಆಗಬೇಕು ನಿಮಗೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ತಬ್ಲೀಘಿ ಜಮಾತ್ ಗುರಿಯಾಗಿಸಿ ಕಾರ್ಯಕ್ರಮ: ಸುವರ್ಣ ನ್ಯೂಸ್ ಮತ್ತು ನ್ಯೂಸ್ 18 ಕನ್ನಡಕ್ಕೆ 1.5 ಲಕ್ಷ ದಂಡ
ದೊಡ್ಡ ಗಣೇಶ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದರು ಕ್ರುಶಿಕ ಎನ್ನುವವರು, “ಪಾಕಿಸ್ತಾನದ ಜೊತೆಗಿನ ಆಟದ ಬಗ್ಗೆ ಹೀಗೆ ವರದಿ ಮಾಡಿ ಮಾಡಿ ಅದನ್ನೇ ನ್ಯೂಜಿಲೆಂಡ್ ಜೊತೆಗಿನ ಆಟಕ್ಕೂ ಹೇಳುತ್ತಾ ಇದ್ದಾರೆ. ಪಾಕಿಸ್ತಾನದ ಜೊತೆಗಿನ ಆಟದ ಸಮಯದಲ್ಲಿ ಕಿತ್ತೊದವರಂತೆ ಬರೆಯುವವರನ್ನು ಜಾಡಿಸಿದ್ದಿದ್ರೆ, ಈಗ ಬುದ್ದಿ ಕಲ್ತಿರೋರು. ಇಂಡಿಯಾದ ಜನಕ್ಕೆ ಭಾವನಾತ್ಮಕತೆಯೇ ಜಾಸ್ತಿ, ಅದೇ ಆಸ್ತಿ. ಆಟವನ್ನು ಆಟ ಅಂತ ನೋಡಲ್ಲ!” ಎಂದು ಹೇಳಿದ್ದಾರೆ.
ಪಾಕಿಸ್ತಾನದ ಜೊತೆಗಿನ ಆಟದ ಬಗ್ಗೆ ಹೀಗೆ ವರದಿ ಮಾಡಿ ಮಾಡಿ ಅದನ್ನೇ ನ್ಯೂಜಿಲೆಂಡ್ ಜೊತೆಗಿನ ಆಟಕ್ಕೂ ಹೇಳ್ತಾ ಇದಾರೆ. ?
ಪಾಕಿಸ್ತಾನದ ಜೊತೆಗಿನ ಆಟದ ಸಮಯದಲ್ಲಿ ಕಿತ್ತೊದವರಂತೆ ಬರೆಯುವವರನ್ನು ಜಾಡಿಸಿದ್ದಿದ್ರೆ ಈಗ ಬುದ್ದಿ ಕಲ್ತಿರೋರು
ಇಂಡಿಯಾದ ಜನಕ್ಕೆ ಭಾವನಾತ್ಮಕತೆಯೇ ಜಾಸ್ತಿ ಅದೇ ಆಸ್ತಿ.
ಆಟವನ್ನು ಆಟ ಅಂತ ನೋಡಲ್ಲ!— ಕ್ರುಶಿಕ ಎವಿ/Krushika AV (@KrishKrushik) June 24, 2021
ದಿಗ್ವಿಜಯ ನ್ಯೂಸ್ ಈ ಹಿಂದೆ ‘ಓಂ ಫಿನಿಶಾಯ ನಮಃ’ ಎಂಬ ಶಿರ್ಷಿಕೆಯನ್ನು ನೀಡಿ ಕಾರ್ಯಕ್ರಮವನ್ನು ನಡೆಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಗಿರಿಧರ ಕಾರ್ಕಳ ಅವರು, ‘ದಿಗ್ವಿಜಯದ ಶಬ್ಧ ದಾರಿದ್ರ್ಯ’ ಎಂದು ಹೇಳಿದ್ದರು.
ಅವರು, “ಇದು ಧೋನಿ ಎಂಬ ಮಹಾನ್ ಕ್ರಿಕೆಟಿಗನ ನಿವೃತ್ತಿಯ ಕುರಿತ ನುಡಿಚಿತ್ರಕ್ಕೆ ದಿಗ್ವಿಜಯ ಟಿವಿ ನೀಡಿದ ತಲೆಬರಹ.. ಅಲ್ಲಲ್ಲ ತಲೆಕೆಟ್ಟ ಬರಹ..!! ಭಾರತೀಯ ಕ್ರಿಕೆಟ್ ಚರಿತ್ರೆಯಲ್ಲೊಂದು ಅದ್ಭುತ ಅಧ್ಯಾಯ ಬರೆದ ಜಂಟಲ್ ಮ್ಯಾನ್ ಯಾರನ್ನು ಫಿನಿಶ್ ಮಾಡಿದರು? ಅಥವಾ ಅವರನ್ನೇ ಅವರು ಫಿನಿಶ್ ಮಾಡಿಕೊಂಡ್ರಾ? ತಲೆಬರಹ ಕೊಡುವವರಿಗೇನಾದರೂ ತಲೆಕೆಟ್ಟಿದೆಯೇ? ನುಡಿಚಿತ್ರ ಕಾರ್ಯಕ್ರಮದಲ್ಲಿ ಸೊಗಸಾದ ‘ಮಾಹಿ’ತಿಯನ್ನೇನೋ ನೀಡಿದರು. ಆದರೆ ನೆಗೆಟಿವ್ ಅರ್ಥ ಕೊಡುವ ತಲೆಬರಹವೇಕೆ?” ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ: ಮಹಾಪಂಚಾಯತ್‌ನಲ್ಲಿ ಎಬಿಪಿ ನ್ಯೂಸ್‌ಗೆ ರಾಜೀನಾಮೆ ನೀಡಿದ ಪತ್ರಕರ್ತನ ಮಾತುಗಳು


