ನಮ್ಮ ಸಂವಿಧಾನ ಎಲ್ಲ ರೀತಿಯ ಅಸ್ಪೃಶ್ಯತೆ ಆಚರಣೆಯನ್ನು ನಿಷೇಧಿಸಿದೆ. ಅದರ ಭಾಗವಾಗಿ ದಲಿತರು ದೇವಾಲಯಗಳಿಗೆ ಪ್ರವೇಶಿಸುತ್ತಿದ್ದಾರೆ. ಆದರೆ ಸ್ವಾಭಿಮಾನ ಮೆರೆದ ದಲಿತರ ಆರ್ಥಿಕ ಮೂಲಗಳಿಗೆ ಸವರ್ಣಿಯರು ಅಡ್ಡಿಯುಂಟು ಮಾಡುವ ವಿದ್ಯಮಾನಗಳು ವರದಿಯಾಗುತ್ತಿವೆ. ಅದಕ್ಕೆ ಇತ್ತೀಚಿನ ಉದಾಹರಣೆ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕಿನ ದಿಂಡಗನೂರು ಪ್ರಕರಣ.
8 ತಿಂಗಳ ಹಿಂದೆ ಜಾತಿ ಕಾರಣಕ್ಕೆ ದಲಿತರಿಗೆ ಹೊಟೇಲ್ ಒಳಗೆ ಪ್ರವೇಶ ನೀಡದೇ ಹೊರ ಕಳುಹಿಸಲಾಗಿತ್ತು. ಅದೇ ಗ್ರಾಮದಲ್ಲಿ ದೇವಾಲಯ ಪ್ರವೇಶಿಸುವ ಮೂಲಕ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ದಿಂಡಗೂರಿನ ದಲಿತರು ಹೊಸ ಇತಿಹಾಸ ಬರೆದಿದ್ದರು.
ಮೇಲ್ಜಾತಿ ಮತ್ತು ದಲಿತರ ಜೊತೆಗೆ ತಹಶೀಲ್ದಾರ್ ಮಾರುತಿ ಸಭೆ ನಡೆಸಿದ್ದರು. ಬಳಿಕ ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಜಿಲ್ಲಾ ಭೀಮ್ ಆರ್ಮಿ ಸಂಘಟನೆ, ಮುಜರಾಯಿ ಇಲಾಖೆ ಸಮ್ಮುಖದಲ್ಲಿ ದಿಂಡಗೂರು ಗ್ರಾಮದ ದಲಿತರು ದೇವಾಲಯಗಳಿಗೆ ಮೊದಲ ಬಾರಿಗೆ ಪ್ರವೇಶ ಪಡೆದಿದ್ದರು.
ದೇವಾಲಯಗಳಿಗೆ ದಲಿತರು ಪ್ರವೇಶಿಸಿದ ಬಳಿಕ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಸವರ್ಣೀಯರನ್ನು ದಲಿತರು ಅವಲಂಬಿಸಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ದೇವಾಲಯ ಪ್ರವೇಶವನ್ನೇ ನೆಪವಾಗಿಟ್ಟುಕೊಂಡು ದಲಿತರನ್ನು ಮೂಲೆಗುಂಪು ಮಾಡುವ ಪ್ರವೃತ್ತಿಯನ್ನು ಎಲ್ಲೆಡೆ ಕಾಣಬಹುದು. ಇದಕ್ಕೆ ದಿಂಡಿಗನೂರು ಗ್ರಾಮ ಒಂದು ಉದಾಹರಣೆಯಷ್ಟೇ.
ಇದನ್ನೂ ಓದಿರಿ: ಚಿಲ್ಲರೆ ನೆಪದಲ್ಲಿ ದಲಿತರಿಗೆ ಹಾಲು ನೀಡದ ‘ಬ್ಯಾಲಹಳ್ಳಿ ಹಾಲು ಉತ್ಪಾದಕರ ಸಂಘ’
ದಿಂಡಗನೂರು ದಲಿತ ಮುಖಂಡ, ಭೀಮ್ ಆರ್ಮಿಯ ಸಂಘಟಕ ನಟರಾಜ್ ‘ನಾನುಗೌರಿ.ಕಾಂ’ ಜೊತೆ ಮಾತನಾಡಿ ದೇವಾಲಯ ಪ್ರವೇಶೋತ್ತರ ಪರಿಸ್ಥಿತಿಗಳನ್ನು ಬಿಚ್ಚಿಟ್ಟರು.
“ನಾವು ದೇವಾಲಯ ಪ್ರವೇಶ ಮಾಡಿದ್ದು ಸಾಮಾಜಿಕ ನ್ಯಾಯಕ್ಕಾಗಿ. ನಾವು ಕೂಡ ಮನುಷ್ಯರು ಎಂಬುದನ್ನು ಸಾರುವುದಕ್ಕಾಗಿ. ನಮ್ಮ ಧಾರ್ಮಿಕ ಹಕ್ಕಿಗಾಗಿ ದೇವಾಲಯ ಪ್ರವೇಶಿಸಿದೆವು. ಆದರೆ ಆನಂತರದಲ್ಲಿ ನಮ್ಮ ಮೇಲೆ ಅಘೋಷಿತ ಸಾಮಾಜಿಕ ಬಹಿಷ್ಕಾರ ಹಾಕುವುದು ನಡೆಯುತ್ತಿದೆ” ಎಂದರು.
“ನಮ್ಮ ಊರಿನಲ್ಲಿ ದಲಿತರು ಸೇರಿ ಸುಮಾರು ಏಟೆಂಟು ಜಾತಿಗಳಿವೆ. ದಲಿತರಿಗೆ ಮಾತ್ರ ಬಹಿಷ್ಕಾರ ಹಾಕುವ ಪದ್ಧತಿ ರೂಢಿಗೆ ಬಂದಿದೆ. ನಾವು ದೇವಾಲಯ ಪ್ರವೇಶಿಸಿದ ಬಳಿಕ ಸವರ್ಣೀಯ ಮುಖಂಡರು ಸಭೆ ಸೇರಿ ಅಘೋಷಿತ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ. ದಲಿತರ ಬಳಿ ಯಾವುದೇ ಮಾತುಕತೆ, ವ್ಯವಹಾರ ಮಾಡಬೇಡಿ ಎಂದು ತಮ್ಮ ಜಾತಿಯ ಜನರಿಗೆ ತಿಳಿಸಿದ್ದಾರೆ. ನಮ್ಮ ಜೊತೆ ಮಾತನಾಡಿದವರಿಗೆ ದಂಡ ಹಾಕುವ ಪದ್ಧತಿಯನ್ನು ಆಂತರಿಕವಾಗಿ ಮಾಡಿಕೊಂಡಿದ್ದಾರೆ. ಈಗಲೂ ಅದು ಚಾಲ್ತಿಯಲ್ಲಿದೆ” ಎಂದು ಮಾಹಿತಿ ನೀಡಿದರು.
“ಕೂಲಿಯನ್ನೇ ನಂಬಿಕೊಂಡಿದ್ದ ದಲಿತರನ್ನು ಕೂಲಿಗೆ ಕರೆಯುತ್ತಿಲ್ಲ. ಕೇಳಿದರೆ ಅದಕ್ಕೆ ಸಬೂಬುಗಳನ್ನು ಹೇಳುತ್ತಿದ್ದಾರೆ. ಇಷ್ಟು ದಿನ ಕೆಲಸ ಇತ್ತು, ಕರೆಯುತ್ತಿದ್ದೆವು; ಈಗ ಕೆಲಸ ಇಲ್ಲ ಎನ್ನುತ್ತಾರೆ. ಮಿಲ್ ಅಂಗಡಿಗೆ ದಲಿತರು ಹೋದರೆ ನಮಗೆ ಹುಷಾರಿಲ್ಲ, ನಾವು ಮಿಲ್ ನಿಲ್ಲಿಸಬೇಕೆಂದಿದ್ದೇವೆ ಎನ್ನುತ್ತಾರೆ. ಅವರಿಗೆ ಸರಿಸಮಾನವಾಗಿ ದೇವಾಲಯ ಪ್ರವೇಶಿಸಿದ್ದೇ ಅವರಿಗೆ ಸಹಿಸಲು ಆಗಿಲ್ಲ. ನಾವು ಯಾವಾಗಲೂ ಅವರ ಕಾಲಡಿ ಇರಬೇಕೆಂಬುದು ಅವರ ಮನಸ್ಥಿತಿ. ಹೊರಗಿನ ಪ್ರಪಂಚಕ್ಕೆ ಇದು ಗೊತ್ತಾಗುತ್ತಿಲ್ಲ” ಎಂದು ವಿಷಾದಿಸಿದರು.

“ನಾವು ಕೂಲಿನಾಲಿ ಮಾಡಿಕೊಂಡು ಹೇಗೋ ಇದ್ದೆವು. ಸಂಘಟಕರೆಲ್ಲ ಸೇರಿ ದೇವಾಲಯಕ್ಕೆ ಕರೆದುಕೊಂಡು ಹೋಗಿದ್ದೇ ಇದಕ್ಕೆಲ್ಲ ಕಾರಣ ಎಂದು ಕೆಲವು ದಲಿತರೇ ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ. ದೇವಾಲಯಕ್ಕೆ ಹೋಗಿ ನಮಗೆ ಆರ್ಥಿಕವಾಗಿ ಹಿನ್ನೆಡೆಯಾಯಿತು. ಆದರೆ ಧಾರ್ಮಿಕ ಸ್ವತಂತ್ರವನ್ನು ಪಡೆದುಕೊಂಡಿದ್ದೇವೆ” ಎನ್ನುತ್ತಾರೆ ನಟರಾಜ್.
“ನಮಗೆ ಸರ್ಕಾರಿ ಸವಲತ್ತುಗಳನ್ನು ದೊರಕಿಸಿ, ಸ್ವಾವಲಂಬಿಗಳಾಗಲು ಅವಕಾಶವನ್ನು ಸರ್ಕಾರ ನೀಡಬೇಕು. ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಶಾಸಕರ ಗಮನಕ್ಕೆ ತರುವ ಕೆಲಸ ಮಾಡುತ್ತಿದ್ದೇವೆ. ದಲಿತರ ಸ್ವಯಂ ಉದ್ಯೋಗಕ್ಕೆ ಜನಪ್ರತಿನಿಧಿಗಳು ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ಶ್ರೀಶಕ್ತಿ ಸಂಘವನ್ನು ಆರಂಭಿಸಿದ್ದೇವೆ. ಎಷ್ಟು ದಿನ ಸವರ್ಣೀಯರನ್ನೇ ಅವಲಂಬಿಸಲು ಸಾಧ್ಯ?” ಎಂದು ಕೇಳುವ ನಟರಾಜ್ ಅವರ ಪ್ರಶ್ನೆಯಲ್ಲಿ ಬಿಡುಗಡೆಯ ಮಾರ್ಗವಿದೆ. ಆದರೆ ಇದಕ್ಕೆ ಸರ್ಕಾರ, ಜನಪ್ರತಿನಿಧಿಗಳು ಬೆನ್ನೆಲುಬಾಗಿ ನಿಲ್ಲಬೇಕಿದೆ.
ಇದನ್ನೂ ಓದಿರಿ: ವಿಡಿಯೊ ವರದಿ: ಬ್ಯಾಲಹಳ್ಳಿ ದಲಿತರಿಂದ ದೇವಾಲಯ ಪ್ರವೇಶ; ಸವರ್ಣೀಯರ ಅಸಹನೆ



ಇವೆಲ್ಲಾ ಹುನ್ನಾರಗಳಿಗೆ ದಲಿತರು ಎದರಬಾರದು ಸರ್ಕಾರ ಮಧ್ಯಪ್ರವೇಶಿಸಿ ಅವರಿಗೆ ಭೂಮಿ ಸ್ವಯಂ ಉದ್ಯೋಗ ಸಾಲಸೌಲಭ್ಯ ನೀಡಿ ಅವರ ಗೌಲವಯುತ ಬದುಕಿಗೆ ನೆರವಾಗಬೇಕು ವಿದ್ಯಾವಂತ ದಲಿತರ ಜವಾಬ್ದಾರಿಯು ಹೆಚ್ಚಿದೆ