Homeಅಂಕಣಗಳುಹಿಂದುತ್ವಕ್ಕೆ ವಿರುದ್ಧವಾದ ಧ್ರುವೀಕರಣಕ್ಕೆ ನಾಂದಿ ಹಾಡಿದ ಚುನಾವಣಾ ಫಲಿತಾಂಶ

ಹಿಂದುತ್ವಕ್ಕೆ ವಿರುದ್ಧವಾದ ಧ್ರುವೀಕರಣಕ್ಕೆ ನಾಂದಿ ಹಾಡಿದ ಚುನಾವಣಾ ಫಲಿತಾಂಶ

- Advertisement -
- Advertisement -

ನರೇಂದ್ರ ಮೋದಿಯವರು ಎರಡನೇ ಬಾರಿಗೆ ಭಾರಿ ಬಹುಮತದಲ್ಲಿ ಪ್ರಧಾನಿಯಾದ ನಂತರ ಇನ್ನು ಮಂದೆ ಬಿಜೆಪಿ ಪಕ್ಷಕ್ಕೆ ಸೋಲಿನ ಆಯ್ಕೆಯೇ ಇಲ್ಲ ಮತ್ತು ವಿರೋಧ ಪಕ್ಷಗಳ ಸಂಖ್ಯಾಬಲ ಹಾಗೂ ಜಂಘಾಬಲವೆರಡನ್ನೂ ಉಡುಗಿಸುತ್ತೇವೆಂಬ ಅಬ್ಬರದಲ್ಲಿ ತೇಲುತ್ತಿದ್ದ ಬಿಜೆಪಿಯನ್ನು ಹಲವು ರಾಜ್ಯಗಳು ಚುನಾವಣೆಗಳಲ್ಲಿ ಸೋಲಿಸಿದ್ದರೂ ಕರ್ನಾಟಕದ ಚುನಾವಣಾ ಫಲಿತಾಂಶ ಕೆಲವು ಕಾರಣಗಳಿಗೆ ಮಹತ್ವದ್ದಾಗಿದೆ. 2021ರಲ್ಲಿ ಕೇರಳದಲ್ಲಿ ಬಿಜೆಪಿ ಇದೇ ರೀತಿಯ ಅಬ್ಬರದ ಪ್ರಚಾರ ಕೈಗೊಂಡಿದ್ದರೂ ಅಲ್ಲಿ ಶೂನ್ಯ ಸಂಪಾದನೆ ಮಾಡಿತ್ತು. ಹಿಂದಿನ ಅವಧಿಯಲ್ಲಿ ಗಳಿಸಿದ್ದ ಒಂದು ಸ್ಥಾನವನ್ನೂ ಕಳೆದುಕೊಂಡಿತ್ತು. ಹಾಗೆಯೆ ಅದೇ ವರ್ಷ ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಚುನಾವೆಣೆಗಳಲ್ಲೂ ಬಿಜೆಪಿ ಅಬ್ಬರಿಸಿದ್ದಕ್ಕೂ ಮತ್ತು ಅದು ಗಳಿಸಿದ ಸ್ಥಾನಗಳಗೂ ಅಜಗಜಾಂತರ ವ್ಯತ್ಯಾಸವಿತ್ತು. ಈಗ 2023 ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು 2018ಕ್ಕೆ ಹೋಲಿಸಿದರೆ ಬಿಜೆಪಿ ಪಕ್ಷ ದಯನೀಯ ಸೋಲು ಕಂಡಿದೆ. ಇಲ್ಲಿ ಉದಾಹರಿಸಿದ ರಾಜ್ಯಗಳಿಗೂ ಕರ್ನಾಟಕದ ಸೋಲಿಗೂ ಇರುವ ಮುಖ್ಯ ವ್ಯತ್ಯಾಸವೆಂದರೆ ಆ ರಾಜ್ಯಗಳಲ್ಲಿ ಬಿಜೆಪಿ ಇನ್ನೂ ನೆಲೆ ಕಂಡಿರಲಿಲ್ಲ ಅಥವಾ ಬೀಡುಬಿಟ್ಟಿರಲಿಲ್ಲ. ಅದಕ್ಕೆ ವಿರುದ್ಧವಾಗಿ ಕರ್ನಾಟಕದಲ್ಲಿ 2018ರಲ್ಲಿ ಬಿಜೆಪಿ ಪಕ್ಷ ಸುಮಾರು 36% ಮತ ಹಂಚಿಕೆ ಪ್ರಮಾಣದೊಂದಿಗೆ 104 ಸ್ಥಾನಗಳನ್ನು ಗಳಿಸಿಕೊಂಡಿತ್ತು. ನಂತರ 2019ರ ಆಪರೇಷನ್ ಕಮಲದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮತ್ತಷ್ಟು ಸಚಿವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಬಹುಮತವನ್ನು ಕೂಡ ಪಡೆದುಕೊಂಡು (ಆಗಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಿ) ಸರ್ಕಾರ ರಚಿಸಿತ್ತು. 2023ರಲ್ಲಿ ತನ್ನ ಹಿಂದಿನ ಮತ ಹಂಚಿಕೆ ಪ್ರಮಾಣ 36%ಅನ್ನು ಉಳಿಸಿಕೊಂಡಿದ್ದರೂ ಗೆದ್ದ ಸೀಟುಗಳ ಸಂಖ್ಯೆ 66ಕ್ಕೆ ಕುಸಿದಿದೆ. ಇದು ಮೇಲ್ನೋಟಕ್ಕೇ ನಮಗೆ ತಿಳಿಸುವುದೇನೆಂದರೆ ಬಿಜೆಪಿಯ ವಿರುದ್ಧ ಮತ್ತು ಬಿಜೆಪಿ ಪ್ರತಿನಿಧಿಸುವ ಹಿಂದುತ್ವದ ವಿರುದ್ಧದ ವೋಟುಗಳು ಧ್ರುವೀಕರಣಗೊಂಡಿವೆ ಎಂದು. ಈ ಮತಗಳನ್ನು ತನ್ನೆಡೆಗೆ ಕ್ರೋಢೀಕರಿಸಿಕೊಳ್ಳುವುದರಲ್ಲಿ ಕಾಂಗ್ರೆಸ್ ಸಫಲವಾದಂತೆ ಕಾಣುತ್ತದೆ. ಹಿಂದೆ 2018ರಲ್ಲಿ ಗಳಿಸಿದ್ದ 38% ವೋಟ್ ಶೇರ್‌ನಿಂದ ಕಾಂಗ್ರೆಸ್ ಈ ಚುನಾವಣೆಯಲ್ಲಿ 42.9% ಮತ ಹಂಚಕೆ ಪ್ರಮಾಣವನ್ನು ಪಡೆದದೆ. ಇದು ಕಾಂಗ್ರೆಸ್ ಗೆದ್ದ ಸ್ಥಾನಗಳನ್ನು 78ರಿಂದ 135ಕ್ಕೆ ಏರಿಸಿದೆ!

ಭಜರಂಗ ದಳ ನಿಷೇಧ ಕೂಡ ಈ ರಿವರ್ಸ್ ಪೋಲರೈಸೇಷನ್‌ಗೆ ಸಹಕರಿಸಿತೇ?

ಇಂತಹ ಪ್ರಶ್ನೆಯೊಂದಕ್ಕೆ ಉತ್ತರ ಪಡೆಯಲು ಮತ ಹಂಚಿಕೆಯ ಇನ್ನೂ ಆಳವಾದ ವಿಶ್ಲೇಷಣೆ ಅಗತ್ಯವಿದ್ದರೂ ಮತದಾನಕ್ಕೂ ಮುಂಚಿತವಾಗಿ ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಭಜರಂಗ ದಳ ನಿಷೇಧದ ಪ್ರಸ್ತಾಪದ ಕಾರಣಕ್ಕೆ ಬಂದಂತಹ ಪ್ರತಿಕ್ರಿಯೆಗಳನ್ನು ನೆನಪಿಸಿಕೊಳ್ಳಿ. ಆ ಸಮಯಕ್ಕಾಗಲೇ ಹಲವು ಒಪಿನಿಯನ್ ಸರ್ವೇಗಳ ಪ್ರಕಾರ ಕಾಂಗ್ರೆಸ್ ಪಕ್ಷಕ್ಕೆ 115-135 ಸ್ಥಾನಗಳು ಬರಲಿವೆ ಎಂಬ ಅಂದಾಜಿತ್ತು. ಪ್ರಣಾಳಿಕೆ ಬಿಡುಗಡೆಯ ನಂತರ ಭಜರಂಗ ದಳದ ಸದಸ್ಯರು ಶುರು ಮಾಡಿದ ಅಭಿಯಾನದಿಂದ ಹಾಗೂ ಮೋದಿ ತಮ್ಮ ಪ್ರತಿ ಭಾಷಣದಲ್ಲಿಯೂ ಭಜರಂಗ ಬಲಿಯನ್ನು ಇನ್ವೋಕ್ ಮಾಡಲು ಆರಂಭಿಸಿದ್ದರಿಂದ ಕಾಂಗ್ರೆಸ್‌ಗೆ ಸುಮಾರು 10-15 ಸ್ಥಾನಗಳು ಕುತ್ತಾಗಲಿವೆ ಎಂಬ ವಿಶ್ಲೇಷಣೆ ಎಲ್ಲೆಡೆ ಕೇಳಿಬಂದಿತ್ತು. ಆದರೆ ಈ ಎಪಿಸೋಡ್ ಬಿಜೆಪಿಗೆ ಸಹಾಯ ಮಾಡಿತು ಅನ್ನುವುದನ್ನು ಫಲಿತಾಂಶಗಳು ಸುಳ್ಳು ಮಾಡಿದವು. ಈ ಊಹೆಗೆ ವಿರುದ್ಧವಾಗಿ ಕಾಂಗ್ರೆಸ್‌ಗೆ ಸ್ಪಷ್ಟ ಮ್ಯಾಂಡೇಟ್ ಕೊಡಬೇಕು ಅನ್ನುವ ಕಾರಣಕ್ಕೆ ಅಲ್ಪಸಂಖ್ಯಾತ ಮತ್ತು ಹಿಂದುಳಿದ ಸಮುದಾಯದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ನಿರ್ಣಾಯಕವಾಗಿ ಮತ ನೀಡಿರುವುದನ್ನು ಕಾಣಬಹುದಾಗಿದೆ.

ಮಧ್ಯ ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡರೆ, ಬಾಬಾಬುಡನ್‌ಗಿರಿಯನ್ನು ಕೋಮುವಾದೀಕರಣಕ್ಕೆ ಯೋಜನೆಗೆ ಒಳಪಡಿಸಿ ಹಿಂದುತ್ವ ರಾಜಕೀಯದಲ್ಲಿ ಬೆಳೆದ ಸಿ.ಟಿ ರವಿ ಸೋಲಿಗೆ ಶರಣಾಗಿದ್ದಾರೆ. ಭಜರಂಗ ದಳ ಎಪಿಸೋಡ್ ಆದರೂ ಇವರನ್ನು ಕಾಪಾಡಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಇಡೀ ಚಿಕ್ಕಮಗಳೂರು ಜಿಲ್ಲೆಯಲ್ಲಿಯೇ ಬಿಜೆಪಿ ಶೂನ್ಯ ಸಂಪಾದನೆ ಮಾಡಿದೆ. 2018ರಲ್ಲಿ ಐದರಲ್ಲಿ ನಾಲ್ಕನ್ನು ಗೆದ್ದುಕೊಂಡಿದ್ದ ಬಿಜೆಪಿ ಈ ಬಾರಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸೋಲನುಭವಿಸಿದೆ. ದಾವಣಗೆರೆಯಲ್ಲಿಯೂ ಕಳೆದ ಬಾರಿ ಗೆದ್ದಿದ್ದ 5 ಸ್ಥಾನಗಳಲ್ಲಿ ಒಂದನ್ನು ಮಾತ್ರ ಬಿಜೆಪಿಗೆ ಉಳಿಸಿಕೊಳ್ಳಲು ಸಾಧ್ಯವಾಗಿದೆ. ಹೊನ್ನಾಳಿಯಲ್ಲಿ ಬಿಜೆಪಿಯ ಮಾಜಿ ಸಚಿವ ರೇಣುಕಾಚಾರ್ಯ ಸೋತಿದ್ದಾರೆ. ಮಾಜಿ ಮುಖ್ಯಮಮಂತ್ರಿ ಯಡಿಯೂರಪ್ಪನವರ ಜಿಲ್ಲೆಯಾದ ಶಿವಮೊಗ್ಗದಲ್ಲಿ ತನ್ನ ಸ್ಕೋರ್‌ಅನ್ನು 6ರಿಂದ ಮೂರಕ್ಕೆ ಇಳಿಸಿಕೊಂಡಿದೆ ಬಿಜೆಪಿ. ಯಡಿಯೂರಪ್ಪನವರು ಪ್ರತಿನಿಧಿಸುತ್ತಿದ್ದ ಶಿಕಾರಿಪುರದಲ್ಲಿ ಅವರ ಪುತ್ರ ವಿಜಯೇಂದ್ರ ಬಿಜೆಪಿಯಿಂದ ಸ್ಪರ್ಧಿಸಿ ಪಕ್ಷೇತರ ಅಭ್ಯರ್ಥಿ ನಾಗರಾಜಗೌಡ ಎದುರು ಕೇವಲ 10664 ಮತಗಳ ಅಂತರದಿಂದ ಪ್ರಯಾಸಕರ ಗೆಲುವು ಸಾಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮಾಜಿ ಸಚಿವ ಕಾಂಗ್ರೆಸ್‌ನ ಆಂಜನೇಯ ಪ್ರತಿನಿಧಿಸುವ ಮೀಸಲು ಕ್ಷೇತ್ರ ಹೊಳಲ್ಕೆರೆ ಒಂದನ್ನು ಬಿಟ್ಟು ಇನ್ನೆಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ನೆಲಕಚ್ಚಿದೆ. ಹೀಗೆ ಮಧ್ಯ ಕರ್ನಾಟಕದಲ್ಲಿ 2018ರಲ್ಲಿ ಗೆದ್ದಿದ್ದ 21 ಸೀಟುಗಳಿಂದ ಬಿಜೆಪಿ 5ಕ್ಕೆ ಕುಸಿದಿದೆ. ಹಿಂದುತ್ವ ಮತ್ತು ಲಿಂಗಾಯತ ಮತಗಳು ಹೆಚ್ಚಿರುವ ಈ ಪ್ರದೇಶದಲ್ಲಿ ಬಿಜೆಪಿಗೆ ವಿರುದ್ಧವಾಗಿ ಮತದಾರರು ನಿರ್ಣಾಯಕವಾಗಿ ಮತ ಚಲಾಯಿಸಿರುವುದನು ಸ್ಪಷ್ಟವಾಗಿ ಗಮನಿಸಬಹುದಾಗಿದೆ.

ಇದಕ್ಕಿಂತಲೂ ಈ ರಿವರ್ಸ್ ಪೋಲರೈಸೇಷನ್‌ಅನ್ನು ಮೈಸೂರು ಭಾಗದಲ್ಲಿ ಸ್ಪಷ್ಟವಾಗಿ ಕಾಣಬಹುದು. ಈ ಬಾರಿ ಬಿಜೆಪಿ ಪಕ್ಷ ಮಂಡ್ಯ-ಮೈಸೂರು-ಚಾಮರಾಜನಗರ-ರಾಮನಗರ-ಚನ್ನಪಟ್ಟಣ ಜಿಲ್ಲೆಗಳನ್ನು ಟಾರ್ಗೆಟ್ ಮಾಡಿದ್ದು ಸ್ಪಷ್ಟವಾಗಿತ್ತು. ಟಿಪ್ಪುವನ್ನು ಕೊಂದಿದ್ದು ಒಕ್ಕಲಿಗರ ಸಮುದಾಯದ ಉರಿಗೌಡ ಮತ್ತು ನಂಜೇಗೌಡ ಎಂಬ ಕಾಲ್ಪನಿಕ ಕಥೆ; ಸಿದ್ದರಾಮಯ್ಯನವರನ್ನು ಟಾರ್ಗೆಟ್ ಮಾಡಿ ಸೋಮಣ್ಣನವರನ್ನು ಅವರ ವಿರುದ್ಧ ನಿಲ್ಲಿಸಿದ್ದು; ಅಮಿತ್ ಶಾ- ಯೋಗಿ ಆದಿತ್ಯನಾಥ್- ನರೇಂದ್ರ ಮೋದಿ ಈ ಪ್ರದೇಶದಲ್ಲಿ ಹೆಚ್ಚು ಪ್ರಚಾರ ಕೈಗೊಂಡಿದ್ದು; ಸಂಸದ ಪ್ರತಾಪ್ ಸಿಂಹ ಅವರ ಪ್ರಚೋದನಾಕಾರಿ ಮಾತು ಇತ್ಯಾದಿ ಸಂಗತಿಗಳನ್ನು ಇಲ್ಲಿ ಮೆಲುಕು ಹಾಕಬಹುದು. ಅದಕ್ಕೂ ಸ್ವಲ್ಪ ಹಿಂದಕ್ಕೆ ಹೋಗಿ ನೋಡಿದರೆ ಟಿಪ್ಪು ವಿರುದ್ಧ ಅನವರತ ಅಪಪ್ರಚಾರ, ಶ್ರೀರಂಗಪಟ್ಟಣದಲ್ಲಿ ಮಸೀದಿ ಜಾಗದಲ್ಲಿ ಮಂದಿರವಿದೆ ಎಂದು ಗುಲ್ಲೆಬ್ಬಿಸಿದ್ದು, ಹನುಮ ಜಯಂತಿಯ ಹೆಸರಿನಲ್ಲಿ ಗಲಾಟೆ-ಗಲಭೆಗಳಿಗೆ ಆಸ್ಪದ ನೀಡಿದ್ದು, ರಾಮನಗರದ ರಾಮದೇವರಬೆಟ್ಟದಲ್ಲಿ ದಕ್ಷಿಣದ ಅಯೋಧ್ಯೆಯನ್ನು ನಿರ್ಮಿಸುತ್ತೇವೆ ಎಂದು ಸಿ.ಎನ್ ಅಶ್ವತ್ಥ ನಾರಾಯಣ ಹೇಳಿದ್ದು, ತಮ್ಮ ಅವಧಿಯುದ್ದಕ್ಕೂ ಸಂಸದ ಪ್ರತಾಪ್ ಸಿಂಹ ದ್ವೇಷದ ಮಾತುಗಳನ್ನು ಆಡಿಕೊಂಡು ಬಂದದ್ದು- ಹೀಗೆ ಕಳೆದ ನಾಲ್ಕೈದು ವರ್ಷಗಳಿಂದಲೂ ಒಕ್ಕಲಿಗ ಹಾಗೂ ದಲಿತ ಸಮುದಾಯಗಳ ಮತದಾರರು ಹೆಚ್ಚಿರುವ ಈ ಭಾಗವನ್ನು ಹೆಚ್ಚು ಕಮ್ಯುನಲೈಸ್ ಮಾಡಲು ಬಿಜೆಪಿ ಪಕ್ಷ ಪ್ರಯತ್ನಿಸುತ್ತಲೇ ಬಂದಿತ್ತು. ಈ ಭಾಗಗಳಲ್ಲಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುತ್ತಿದ್ದ ಜೆಡಿಎಸ್‌ಗೆ ಭಾರಿ ನಷ್ಟ ಉಂಟಾಗಿರಲು ಕಾರಣ, ಜನಸಾಮಾನ್ಯರಲ್ಲಿ ಒಡಕು ಮೂಡಿಸುವ ಹಿಂದುತ್ವ ಅಭಿಯಾನದ ವಿರೋಧಿ ವೋಟುಗಳು ಕನ್ಸಾಲಿಡೇಟ್ ಆಗಿ ಕಾಂಗ್ರೆಸ್‌ಗೆ ಬಿದ್ದಿರುವುದು. ಜೆಡಿಎಸ್‌ನ ಭದ್ರ ಕೋಟೆ ಎನ್ನಲಾಗುವ ಮಂಡ್ಯ ಜಿಲ್ಲೆಯಲ್ಲಿ ಆ ಪಕ್ಷ 6 ಸ್ಥಾನಗಳನ್ನು ಕಳೆದುಕೊಂಡಿದೆ. ಬಿಜೆಪಿ ಕೆಲವು ಕಡೆಗೆ ತನ್ನ ಮತ ಹಂಚಿಕೆ ಪ್ರಮಾಣವನ್ನು ಹೆಚ್ಚಿಸಿಕೊಂಡಿದ್ದರೂ, ಬಿಜೆಪಿ ಪ್ರತಿನಿಧಿಸುವ ಸಿದ್ಧಾಂತದ ವಿರುದ್ಧ ಮತಗಳು ಕ್ರೋಢೀಕರಣ ಆಗಿ ಕಾಂಗ್ರೆಸ್‌ಗೆ ಒಲಿದಿರುವುದು ಎದ್ದು ಕಾಣುತ್ತದೆ. ಮುಸಲ್ಮಾನ, ದಲಿತ ಮತ್ತು ಹಿಂದುಳಿದ ಸಮುದಾಯಗಳು ಹೆಚ್ಚು ಸಂಖ್ಯೆಯಲ್ಲಿ ಕಾಂಗ್ರೆಸ್‌ಅನ್ನು ಬೆಂಬಲಿಸಿರುವುದರಿಂದ ಇದು ಸಾಧ್ಯವಾಗಿದೆ ಎಂದು ಅಂದಾಜಿಸಲಾಗುತ್ತಿದೆ. 2018ಕ್ಕೆ ಹೋಲಿಸಿದರೆ ಕಾಂಗ್ರೆಸ್ ಈ ಭಾಗದಲ್ಲಿ ಗಣನೀಯ ಸೀಟುಗಳಲ್ಲಿ ಗೆದ್ದಿದೆ. ಸಂಘ ಪರಿವಾರದ ಕೋಮು ಧ್ರುವೀಕರಣ ಯೋಜನೆಯನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟದ ಜೆಡಿಎಸ್‌ನ ಸೋಲಿಗೂ ಇದೊಂದು ಮುಖ್ಯ ಕಾರಣ ಎಂಬುದನ್ನು ಮನಗಾಣಬಹುದಾಗಿದೆ.

ಇವೆಲ್ಲಾ ಚರ್ಚೆಗಳ ನಡುವೆ, ಕರಾವಳಿಯಲ್ಲಿ ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ಇಂತಹ ರಿವರ್ಸ್ ಪೋಲರೈಸೇಷನ್ ಯಾಕಿಲ್ಲ ಎಂಬ ಪ್ರಶ್ನೆ ತಲೆದೋರುವುದು ಸಹಜ. ಉತ್ತರ ಕನ್ನಡದಲ್ಲಿ ಒಂದು ಮಟ್ಟಕ್ಕೆ ಕಾಂಗ್ರೆಸ್ ತನ್ನ ಸೀಟುಗಳ ಸಂಖ್ಯೆಯನ್ನು ವೃದ್ಧಿಸಿಕೊಂಡಿದೆಯಾದರೂ ಅದನ್ನು ಹಿಂದುತ್ವ ವಿರೋಧಿ ಮತಗಳ ಕನ್ಸಾಲಿಡೇಶನ್ ಎಂದು ಕರೆಯಲು ಸಾಧ್ಯವಾಗದ ಸ್ಥಿತಿ ಅಲ್ಲಿದೆ. ಕರಾವಳಿಯಲ್ಲಿ ಹಿಂದುತ್ವದ ವಿರುದ್ಧ ಗಟ್ಟಿಯಾಗಿ ನಿಲ್ಲಬಲ್ಲ ಮುಂದಾಳತ್ವವನ್ನೇ ಕಾಂಗ್ರೆಸ್ ಪಕ್ಷ ಸೃಷ್ಟಿಸಿಕೊಂಡಿಲ್ಲ. ಹಿಂದುತ್ವದ ಹಿಂದೆಹಿಂದೆ ತುಸು ಲಿಬರಲ್ ಮನೋಧೋರಣೆಯ ಮೃದು ಹಿಂದುತ್ವವನ್ನು ಪಾಲಿಸುವ ನಾಯಕರೇ ಅಲ್ಲಿ ಹೆಚ್ಚು. ಉದಾಹರಣೆಗೆ ಪುತ್ತೂರು ನೋಡಿ, ಅಲ್ಲಿ ಸೆಣಸಿದ್ದ ಬಿಜೆಪಿ-ಕಾಂಗ್ರೆಸ್-ಪಕ್ಷೇತರ ಅಭ್ಯರ್ಥಿಗಳ ಮನೋಧೋರಣೆ ಬಹುತೇಕ ಸಮಾನಾಂತರ ಹಿಂದುತ್ವ. ಅಲ್ಲಿ ಕಾಂಗ್ರೆಸ್‌ನ ಹಿಂದುತ್ವ ಗೆದ್ದಿದೆಯಷ್ಟೇ. ಹೀಗೆ ಕರಾವಳಿಯಲ್ಲಿ ಬಿಜೆಪಿ ಕೋಮು ಧ್ರುವೀಕರಣದ ಯೋಜನೆಗೆ ವಿರುದ್ಧವಾಗಿ ಒಂದು ಸ್ಪಷ್ಟ ಉತ್ತರವನ್ನು ಕಂಡುಕೊಳ್ಳದೆ, ಆ ಸ್ಪಷ್ಟತೆಯನ್ನು ನಿರ್ಭಿಡೆಯಿಂದ ಪ್ರತಿಪಾದಿಸುವ ನಾಯಕರನ್ನು ಬೆಳೆಸದೇ ಇರುವುದರಿಂದ, ಇಡೀ ರಾಜ್ಯ ಒಂದು ಕಡೆಗೆ ವೋಟ್ ಮಾಡಿದ್ದರೆ, ಕರಾವಳಿ ಮಾತ್ರ ಹಾಗೆಯೇ ಹಿಂದೆಬಿದ್ದಿದೆ.

ಆರೆಸ್ಸೆಸ್ ವಿರುದ್ಧ ಗಟ್ಟಿ ನಿಲುವುಗಳನ್ನು ತಳೆದು, ಸಂಘ ಪರಿವಾರದ ದ್ವೇಷದ ವಿರುದ್ಧ ಪ್ರೀತಿ ಮತ್ತು ಸಾಮರಸ್ಯದ ಸಂದೇಶ ಹೊತ್ತು ನಡೆಸಿದ ರಾಹುಲ್ ಗಾಂಧಿ ಮುಂದಾಳತ್ವದ ಭಾರತ್ ಜೋಡೊ ಯಾತ್ರೆ ಕೂಡ ಕರ್ನಾಟಕ ಚುನಾವಣೆಯಲ್ಲಿ ಪ್ರಭಾವಿಸಿರುವ ಸಾಧ್ಯತೆಗಳನ್ನು, ಆ ಜಾಥಾ ಹೋದ ಪ್ರದೇಶಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿರುವ ಸಂಗತಿ ತೋರಿಸುತ್ತದೆ. ಇದರ ಜೊತೆಗೆ ಎದ್ದೇಳು ಕರ್ನಾಟಕ, ಬಹುತ್ವ ಕರ್ನಾಟಕದಂತಹ ನಾಗರಿಕ ಸಮಾಜ ಸಂಘಟನೆಗಳು ಕೋಮು ದ್ವೇಷವನ್ನು ಸೋಲಿಸಲು ನಡೆಸಿದ ಅಭಿಯಾನವೂ ಹಿಂದುತ್ವದ ವಿರುದ್ಧ ಮತಗಳ ಧ್ರುವೀಕರಣಕ್ಕೆ ಕೊಡುಗೆ ನೀಡಿರುವ ಸಾಧ್ಯತೆ ಹೆಚ್ಚಿದೆ. 2021ರ ಯುಎಸ್‌ಎ ಚುನಾವಣೆಯಲ್ಲಿ ಕೂಡ ಅಲ್ಲಿನ ಬಲಪಂಥೀಯ ಪಕ್ಷ ರಿಪಬ್ಲಿಕನ್‌ರ ವಿರುದ್ಧ ಮತದಾರರು ಧ್ರುವೀಕರಣಗೊಂಡು ಡೆಮಾಕ್ರಟ್ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದರು. ರಿಪಬ್ಲಿಕನ್ ಪಕ್ಷ ತನ್ನ ವೋಟ್ ಬೇಸ್‌ಅನ್ನು ಉಳಿಸಿಕೊಂಡಿತ್ತಾದರೂ ಡೆಮಾಕ್ರಟ್ ಪಕ್ಷ ಬಲಪಂಥೀಯತೆಯನ್ನು ವಿರೋಧಿಸುವ ಮತದಾರರನ್ನು ಕನ್ಸಾಲಿಡೇಟ್ ಮಾಡಿ ಟ್ರಂಪ್‌ಅನ್ನು ಸೋಲಿಸಲು ಸಾಧ್ಯವಾಗಿತ್ತು. ಈ ರಿವರ್ಸ್ ಪೋಲರೈಸೇಷನ್ ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಕೆಲಸ ಮಾಡುವ ಸಾಧ್ಯತೆಯಿದೆ. ಇದಕ್ಕೆ ವಿರೋಧ ಪಕ್ಷಗಳ ಒಗ್ಗೂಡುವಿಕೆ ಮತ್ತು ಬಲಪಂಥೀಯ ಕೋಮುವಾದದ ವಿರುದ್ಧ ಸ್ಪಷ್ಟ ಯೋಜನೆಯನ್ನು ರೂಪಿಸಿಕೊಳ್ಳುವ ಹಾಗೂ ಅದನ್ನು ಜನರ ಮುಂದೆ ಗಟ್ಟಿ ಧ್ವನಿಯಲ್ಲಿ ಪ್ರತಿಪಾದಿಸುವ ನಾಯಕತ್ವದ ಅಗತ್ಯವೂ ಇದೆ.

ರಾಷ್ಟ್ರ ರಾಜಕಾರಣಕ್ಕೂ ಹೊಸ ಹುರುಪು

ಕರ್ನಾಟಕ ಚುನಾವಣೆಗಳ ಫಲಿತಾಂಶದ ಬೆನ್ನಲ್ಲೇ ಲೋಕಸಭಾ ಚುನಾವಣೆಯಲ್ಲಿ ಸೆಣೆಸಲು ವಿರೋಧ ಪಕ್ಷಗಳಿಗೆ ಹೊಸ ಹುರುಪೊಂದು ಮೂಡಿರುವುದನ್ನು ಅಲ್ಲಗಳಯುವಂತಿಲ್ಲ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಕಾಂಗ್ರೆಸ್ ಬಲವಾಗಿರುವ ಕಡೆಗೆ ಟಿಎಂಸಿ ಬೆಂಬಲಿಸುವುದಾಗಿ ಹೇಳಿದ್ದಾರೆ. ಅದೇ ಬೆಂಬಲವನ್ನು ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ನೀಡಬೇಕೆಂಬ ಕಿವಿಮಾತನ್ನೂ ಸೇರಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಸಾಂಪ್ರದಾಯಕ ವಿರೋಧಿಯಾದ ಮಮತಾ ಅವರಿಂದ ಈ ತರಹದ ಮಾತೊಂದು ಹೊರಬಿದ್ದಿರುವುದು ಕರ್ನಾಟಕ ಫಲಿತಾಂಶ ವಿರೋಧ ಪಕ್ಷಗಳಲ್ಲಿ ಮೂಡಿಸಿರುವ ಭರವಸೆ-ಉತ್ಸಾಹವನ್ನು ಸೂಚಿಸುತ್ತದೆ. ಇದು ಮುಂದೆ ಯಾವಯಾವ ತಿರುವುಗಳನ್ನು ಪಡೆದುಕೊಳ್ಳುತ್ತದೋ ಕಾದುನೋಡಬೇಕಿದೆ.

– ಗುರುಪ್ರಸಾದ್ ಡಿ ಎನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...