Homeಮುಖಪುಟಕಾಯ್ದೆಗಳನ್ನು ತಡೆಹಿಡಿಯುವ ಅಧಿಕಾರ ಸರ್ಕಾರಕ್ಕಿದೆಯೇ?: ತಜ್ಞರ ಪ್ರಶ್ನೆ

ಕಾಯ್ದೆಗಳನ್ನು ತಡೆಹಿಡಿಯುವ ಅಧಿಕಾರ ಸರ್ಕಾರಕ್ಕಿದೆಯೇ?: ತಜ್ಞರ ಪ್ರಶ್ನೆ

ಸುಪ್ರೀಂಕೋರ್ಟ್‌ಗೆ ಮಾತ್ರ ಕಾನೂನನ್ನು ತಡೆ ಹಿಡಿಯುವ ಅಧಿಕಾರವಿದೆ, ಸರ್ಕಾರಕ್ಕಲ್ಲ. ಸರ್ಕಾರವು ಸಂಸತ್ತಿನ ಕಾರ್ಯವನ್ನು ರದ್ದುಗೊಳಿಸಬಹುದಾದರೆ, ಸಂಸತ್ತಿನ ಅಗತ್ಯವಾದರೂ ಏನಿದೆ? ಎಂಬ ಪ್ರಶ್ನೆ ಎದ್ದಿದೆ.

- Advertisement -
- Advertisement -

ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು 18 ತಿಂಗಳುಗಳ ಕಾಲ ತಡೆಹಿಡಿಯುವ ಸರ್ಕಾರದ ಪ್ರಸ್ತಾಪವನ್ನು ರೈತರು ತಿರಸ್ಕರಿಸುತ್ತಿರುವುದರಿಂದ, ಸರ್ಕಾರದ ಮುಂದಿರುವ ಶಾಸನಬದ್ಧ ಆಯ್ಕೆಗಳ ಬಗ್ಗೆ ತಜ್ಞರು ಪ್ರಶ್ನೆಗಳನ್ನು ಎತ್ತಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸಂಸತ್ತು ಅಂಗೀಕರಿಸಿದ ಕಾನೂನುಗಳನ್ನು ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್‌ರವರು ಒಪ್ಪಿಗೆ ನೀಡಿದ ನಂತರ ಸೆಪ್ಟೆಂಬರ್ 27 ರಂದು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಲಾಯಿತು. ಸಂಸತ್ತು ಕಾನೂನನ್ನು ರದ್ದುಗೊಳಿಸಬಹುದಾದರೂ, ಸಂವಿಧಾನದಲ್ಲಿ ಮತ್ತು ಸಂಸದೀಯ ಪ್ರಕ್ರಿಯೆಗಳಲ್ಲಿ ಯಾವುದೇ ಕಾನೂನನ್ನು ತಡೆ ಹಿಡಿಯುವ ಕಾರ್ಯವಿಧಾನಗಳಿಲ್ಲ ಎನ್ನಲಾಗುತ್ತಿದೆ.

ದಿ ಇಂಡಿಯನ್ ಎಕ್ಸ್‌ಪ್ರೆಸ್‌‌ನೊಂದಿಗೆ ಮಾತನಾಡಿದ ಕೇಂದ್ರ ಸಚಿವರೊಬ್ಬರು, ಹಿಂದಿನ ಗೆಜೆಟ್ ಅಧಿಸೂಚನೆಯನ್ನು ರದ್ದುಗೊಳಿಸುವ ಹೊಸ ಅಧಿಸೂಚನೆಯನ್ನು ಹೊರಡಿಸುವುದು ಒಂದು ಆಯ್ಕೆಯಾಗಿದೆ ಎಂದು ಹೇಳಿದ್ದಾರೆ. “ನಮ್ಮ ಮುಂದಿನ ಹೆಜ್ಜೆಯನ್ನು ನಿರ್ಧರಿಸಲು ಕೃಷಿ ಸಂಘಟನೆಗಳ ಪ್ರತಿಕ್ರಿಯೆಗಾಗಿ ನಾವು ಕಾಯುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ. “ಒಂದು ಕಾನೂನಿನ ಅಧಿಸೂಚನೆಯನ್ನು ಈಗಾಗಲೇ ಮಾಡಿದ ನಂತರ, ಮತ್ತೊಂದು ಅಧಿಸೂಚನೆಯ ಮೂಲಕ ಅದನ್ನು ರದ್ದುಪಡಿಸಬಹುದು. ಇದಕ್ಕೆ ಕೇವಲ ಕಾರ್ಯಕಾರಿ ಆದೇಶ ಬೇಕು, ಅದು ಸಂಸತ್ತಿಗೆ ಹೋಗಬೇಕಾಗಿಲ್ಲ” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರಿ, “ನನ್ನ ದೃಷ್ಟಿಯಲ್ಲಿ, ಕಾನೂನನ್ನು ಸರ್ಕಾರವು ತಡೆ ಹಿಡಿಯಲು ಆಗದು. ಸಂಸತ್ತು ಒಂದು ಕಾನೂನನ್ನು ಅಂಗೀಕರಿಸಿದ ನಂತರ, ಸರ್ಕಾರಕ್ಕೆ ಅನುಷ್ಠಾನಗೊಳಿಸುವ ಅಧಿಕಾರ ಮಾತ್ರವಿದೆ ಮತ್ತು ಅದು ಕಾನೂನನ್ನು ನಿಗ್ರಹಿಸಲು/ ತಡೆಹಿಡಿಯಲು ಸಾಧ್ಯವಿಲ್ಲ”ಎಂದು ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಇದನ್ನು ಲೋಕಸಭೆಯ ಮತ್ತೊಬ್ಬ ಮಾಜಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಕಶ್ಯಪ್ ಪ್ರತಿಧ್ವನಿಸಿದ್ದಾರೆ.
“ಕಾನೂನನ್ನು ಜಾರಿಗೆ ತಂದ ನಂತರ ಅದನ್ನು ತಡೆ ಹಿಡಿಯಲು ಸರ್ಕಾರವೇ ಬಯಸುತ್ತಿರುವ ಇಂತಹ ಪರಿಸ್ಥಿತಿಯನ್ನು ನಾನು ನೋಡಿಲ್ಲ” ಎಂದು ಕಶ್ಯಪ್ ಹೇಳಿದರು. “ಹಿಂದೆ ಮಸೂದೆಗಳನ್ನು ಹಿಂತೆಗೆದುಕೊಳ್ಳಲಾಗಿದೆ, ನೋಟಿಫೈ ಮಾಡದೇ ಇರುವ ಮೂಲಕ ಕಾನೂನು ಜಾರಿಗೊಳಿಸುವುದನ್ನು ವಿಳಂಬ ಮಾಡಲಾಗಿದೆ ಮತ್ತು ಕೆಲವೊಮ್ಮೆ ಕಾನೂನುಗಳನ್ನು ರದ್ದುಪಡಿಸಲಾಗಿದೆ. ಆದರೆ ಶಾಸಕಾಂಗ ಪ್ರಕ್ರಿಯೆ ಮುಗಿದ ನಂತರ ಅದನ್ನು ತಡೆ ಹಿಡಿಯುವ ಇಂತಹ ಪ್ರಕ್ರಿಯೆ ಹಿಂದೆಂದೂ ಸಂಭವಿಸಿಲ್ಲ’ ಎಂದು ಕಶ್ಯಪ್ ಅಭಿಪ್ರಾಯ ಪಟ್ಟಿದ್ದಾರೆ.

ಸರ್ಕಾರವು ಕಾಯ್ದೆಗಳನ್ನು ತಡೆಹಿಡಿಯುವ ಪ್ರಸ್ತಾಪ ಮತ್ತು ಜನವರಿ 12 ರಂದು ಸುಪ್ರೀಂಕೋರ್ಟ್ ಕಾಯ್ದೆಗಳಿಗೆ ತಡೆಯಾಜ್ಞೆ ನೀಡಿರುವುದು- ಎರಡೂ ಭಿನ್ನವಾಗಿವೆ. ಎಂಟು ವಾರಗಳಲ್ಲಿ ತಾನು ನೇಮಿಸಿದ ಸಮಿತಿಯು ಶಿಫಾರಸುಗಳನ್ನು ಸಲ್ಲಿಸಿದ ನಂತರ ಆ ತಡೆಯಾಜ್ಞೆ ಆದೇಶವನ್ನು ನ್ಯಾಯಾಲಯವು ವಜಾ ಮಾಡಬಹುದು.
“ಸುಪ್ರೀಂ ಕೋರ್ಟ್‌ಗೆ ಮಾತ್ರ ಕಾನೂನನ್ನು ತಡೆ ಹಿಡಿಯುವ ಅಧಿಕಾರವಿದೆ, ಸರ್ಕಾರಕ್ಕಲ್ಲ. ಸರ್ಕಾರವು ಸಂಸತ್ತಿನ ಕಾರ್ಯವನ್ನು ರದ್ದುಗೊಳಿಸಬಹುದಾದರೆ, ಸಂಸತ್ತಿನ ಅಗತ್ಯವಾದರೂ ಏನಿದೆ” ಎಂದು ಆಚಾರಿ ಪ್ರಶ್ನಿಸಿದ್ದಾರೆ.

ಸರ್ಕಾರವು ಕಾಯ್ದೆಯನ್ನು ತಡೆ ಹಿಡಿಯಲು ಸಾಧ್ಯವಿಲ್ಲವಾದರೂ, ನಿಯಮಗಳನ್ನು ನೋಟಿಫೈ ಮಾಡುವ ಮೊದಲು ಅದರ ಅನುಷ್ಠಾನವನ್ನು ವಿಳಂಬಗೊಳಿಸಬಹುದು. ಉದಾಹರಣೆಗೆ, 2019 ರ ಡಿಸೆಂಬರ್‌ನಲ್ಲಿ ಉಭಯ ಸದನಗಳು ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಧಿಕೃತ ಗೆಜೆಟ್‌ನಲ್ಲಿ 2020 ರ ಜನವರಿಯಲ್ಲಿ ನೋಟಿಫೈ ಮಾಡಲಾಗಿತು. ಗೆಜೆಟ್‌ನಲ್ಲಿ ಪ್ರಕಟವಾದ ದಿನಾಂಕದಿಂದ ಆರು ತಿಂಗಳೊಳಗೆ ಶಾಸನದ ನಿಯಮಗಳನ್ನು ನೋಟಿಫೈ ಮಾಡಬೇಕು ಎಮದು ಸಂಸತ್ತಿನ ನಿಯಮಗಳು ಹೇಳುತ್ತವೆ. ಆದರೆ ಈ ಸಂದರ್ಭದಲ್ಲಿ ಕಾನೂನು ಜಾರಿಗೆ ಬರಬೇಕಾದ ನಿಯಮಗಳನ್ನು ಸರ್ಕಾರ ಇನ್ನೂ ತಿಳಿಸಿಲ್ಲ.

ಅದೇ ರೀತಿ, 1988 ರ ಬೇನಾಮಿ ವಹಿವಾಟು (ನಿಷೇಧ) ಕಾಯ್ದೆ ಸುಮಾರು 28 ವರ್ಷಗಳವರೆಗೆ ಜಾರಿಗೆ ಬಂದಿರಲಿಲ್ಲ. 2016ರಲ್ಲಿ ನಿಯಮಗಳನ್ನು ನೋಟಿಫೈ ಮಾಡಿದ ನಂತರ ಅದು ಜಾರಿಗೆ ಬಂದಿತು.
‘ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ಸರ್ಕಾರದ ಮುಂದೆ ಇರುವ ಆಯ್ಕೆಗಳೆಂದರೆ, ಸುಪ್ರೀಂ ಕೋರ್ಟ್ ತನ್ನ ತಡೆಯಾಜ್ಞೆ ಮುಂದುವರಿಸಲು ಕೇಳಿಕೊಳ್ಳವುದು ಅಥವಾ ಕಾನೂನುಗಳನ್ನು ಮತ್ತೆ ಸಂಸತ್ತಿನ ಮುಂದೆ ಪ್ರಸ್ತುತಪಡಿಸುವುದು. ಸಂಸತ್ತು ಕಾನೂನುಗಳನ್ನು ತಿದ್ದುಪಡಿ ಮಾಡಬಹುದು ಅಥವಾ ರದ್ದುಪಡಿಸಬಹುದು’ ಎಂದು ಆಚಾರಿ ತಿಲಿಸಿದ್ದಾರೆ.

ಕಾನೂನುಗಳನ್ನು ಮಾಡಲು ಸಂಸತ್ತಿಗೆ ಅಧಿಕಾರ ನೀಡುವ ಸಂವಿಧಾನದ 245 ನೇ ವಿಧಿಯೇ, ಕಾನೂನುಗಳನ್ನು ರದ್ದುಗೊಳಿಸುವ ಅಧಿಕಾರವನ್ನೂ ಸಂಸತ್ತಿಗೆ ನೀಡಿದೆ. ಕಾನೂನುಗಳು ತಮ್ಮ ಉದ್ದೇಶವನ್ನು ಈಡೇರಿಸಿದ ನಂತರ ಅವುಗಳ ಅಸ್ತಿತ್ವಕ್ಕೆ ಹೆಚ್ಚಿನ ಕಾರಣಗಳಿಲ್ಲದಿದ್ದಾಗ ಕಾನೂನುಗಳನ್ನು ರದ್ದುಪಡಿಸಬಹುದು. ಅಥವಾ ಕೆಲವು ಸಂದರ್ಭಗಳಲ್ಲಿ, ಅಸಂಗತತೆಗಳನ್ನು ತೆಗೆದುಹಾಕುವಾಗ ಕಾನೂನುಗಳನ್ನು ರದ್ದುಪಡಿಸಲಾಗುತ್ತದೆ. ಸಾಮಾನ್ಯವಾಗಿ, ಹೊಸ ಕಾನೂನನ್ನು ಜಾರಿಗೊಳಿಸಿದಾಗ, ಹೊಸ ಕಾನೂನಿನಲ್ಲಿ ಹಳೆದನ್ನು ರದ್ದುಗೊಳಿಸುವ ಷರತ್ತನ್ನು ಸೇರಿಸುವ ಮೂಲಕ ಹಳೆಯ ಕಾನೂನನ್ನು ರದ್ದುಪಡಿಸಲಾಗುತ್ತದೆ.

ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್‌


ಇದನ್ನೂ ಓದಿ: ವಿಶೇಷ ವರದಿ: ಪ್ರತಿರೋಧಕ್ಕೆ ಹೊಸ ಅರ್ಥ ಮತ್ತು ಹುರುಪು ಕೊಟ್ಟ ದೆಹಲಿ ರೈತ ಹೋರಾಟ..!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...