ಸ್ವಾತಂತ್ರ್ಯ ಸೇನಾನಿ ಎಚ್.ಎಸ್.ದೊರೆಸ್ವಾಮಿಯವರು ಜನತೆಯ ನೈಜ ಸಮಸ್ಯೆಗಳ ಪರಿಹಾರಕ್ಕೆ ಸರಕಾರ ಆದ್ಯತೆಯಿಂದ ಗಮನ ಕೊಡಬೇಕೆಂದು ಆಗ್ರಹಿಸಿ ಮಾರ್ಚ್ 14, 15, 16ರಂದು ’ಪ್ರಜಾಧಿಕಾರ ಹೋರಾಟ ಸಮಿತಿ’ಯ ನೇತೃತ್ವದಲ್ಲಿ ಮೂರು ದಿನಗಳ ಧರಣಿ ಸತ್ಯಾಗ್ರಹಕ್ಕೆ ಕರೆ ನೀಡಿದ್ದಾರೆ.
ದೇಶದಲ್ಲಿ ಜನಸಮಾನ್ಯರ ಸಮಸ್ಯೆಗಳು ಮಿತಿ ಮೀರಿವೆ. ನಿರುದ್ಯೋಗ ತಾಂಡವವಾಡುತ್ತಿದೆ, ಉದ್ಯೋಗ ಕಲ್ಪಿಸುವ ಕೈಗಾರಿಕೆಗಳು, ಉದ್ಯಮ ಸಂಸ್ಥೆಗಳೆಲ್ಲ ಸರಕಾರದ ಕಾರ್ಪೊರೇಟ್-ಪರ ಆರ್ಥಿಕ ನೀತಿಗಳಿಂದಾಗಿ ಬಾಗಿಲು ಮುಚ್ಚುತ್ತಿವೆ. ರೈತರ, ವಿದ್ಯಾರ್ಥಿಗಳ, ಭೂಮಿ-ವಸತಿ ರಹಿತರ, ಸಣ್ಣಪುಟ್ಟ ವ್ಯಾಪಾರ-ವ್ಯವಹಾರಸ್ಥರ, ದಲಿತರ-ಹಿಂದುಳಿದವರ-ಮಹಿಳೆಯರ ಸಮಸ್ಯೆಗಳಿಗೆ ಸರಕಾರ ಯಾವುದೇ ಪರಿಹಾರೋಪಾಯ ರೂಪಿಸುತ್ತಿಲ್ಲ ಎಂದು ಅವರು ದೂರಿದ್ದಾರೆ.
ದುರ್ಬಲರ ಮೇಲೆ, ಅಲ್ಪಸಂಖ್ಯಾತರ ಮೇಲೆ ಜಾತಿ-ಧರ್ಮಗಳ ನೆಲೆಯಲ್ಲಿ ಗುಂಪು ಹಿಂಸೆ, ಬಡಿದು ಕೊಲ್ಲುವಂತಹ ಕ್ರೌರ್ಯದ ಕೃತ್ಯಗಳು ಹಾದಿಬೀದಿಗಳಲ್ಲಿ ಜರುಗುತ್ತಿವೆ. ರಕ್ಷಣೆ ಕೊಡಬೇಕಾದ ಪೊಲೀಸರೇ ದೊಂಬಿಕೋರ ಗ್ಯಾಂಗುಗಳ ಜೊತೆ ಸೇರಿ ಅಶಕ್ತರ ಮೇಲೆ ಹಿಂಸೆ ನಡೆಸುತ್ತಿದ್ದಾರೆ. ಅಧಿಕಾರಕ್ಕೆ ಬರುವ ಮೊದಲು ಕೊಟ್ಟಿದ್ದ ಯಾವ ಆಶ್ವಾಸನೆಯನ್ನೂ ಕೇಂದ್ರ ಸರ್ಕಾರ ಈಡೇರಿಸಿಲ್ಲ. ಅದರ ಬದಲು ಮತ್ತಷ್ಟು ಸಮಸ್ಯೆಗಳನ್ನೇ ಹುಟ್ಟುಹಾಕಿದೆ. ತನ್ನ ವಿಫಲತೆಗಳನ್ನು ಮರೆಮಾಚಲು, ಜನರ ಬದುಕಿಗೆ ಸಂಬಂಧವಿಲ್ಲದ ಯಾವಯಾವುದೋ ಕ್ರಮಗಳನ್ನು ಜಾರಿಗೆ ತರುತ್ತ ದೇಶವನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಇತ್ತ, ಕಳೆದ ಕೆಲವು ವರ್ಷಗಳಿಂದ ನಮ್ಮ ರಾಜ್ಯಕ್ಕೆ ನ್ಯಾಯವಾಗಿ ಸಲ್ಲಬೇಕಾದ ಸಂಪನ್ಮೂಲದ ಪಾಲು, ಪ್ರಕೃತಿ ವಿಕೋಪ ಪರಿಹಾರದ ನೆರವು ಮುಂತಾದ ಹಣಕಾಸಿನ ಬಾಬತ್ತನ್ನೆಲ್ಲ ವಿಪರೀತ ಕಡಿತಗೊಳಿಸಿ, ಅತಿಯಾಗಿ ತಾರತಮ್ಯ ಮಾಡುತ್ತಿದೆ. ಇದರಿಂದಾಗಿ ಇನ್ನು ಎರಡು ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿ ಕಾರ್ಯಕ್ರಮ ಪೂರ್ತಿ ಸ್ಥಗಿತಗೊಳ್ಳಲಿದೆಯೆಂದು ವರದಿಗಳು ಹೇಳಿವೆ. ಕೇಂದ್ರ ಸರಕಾರದ ನಿರಂಕುಶ ದಬ್ಬಾಳಿಕೆ, ದುರಾಡಳಿತಗಳನ್ನು ಪ್ರಶ್ನಿಸುವವರನ್ನು, ಪ್ರತಿಭಟಿಸುವವರನ್ನು ದೇಶದ್ರೋಹಿಗಳೆಂದು ಘೋಷಿಸಿ ಅವರ ವಿರುದ್ಧ ರಾಜದ್ರೋಹದ ಆಪಾದನೆ ಹೊರಿಸಿ ದೀರ್ಘಕಾಲ ಜೈಲಿಗೆ ತಳ್ಳಲಾಗುತ್ತಿದೆ ಎಂದು ದೊರೆಸ್ವಾಮಿಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನ್ಯಾಯಾಲಯಗಳನ್ನೂ ಒಳಗೊಂಡಂತೆ ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನೂ, ಪ್ರಭಾವಿ ಮಾಧ್ಯಮಗಳನ್ನೂ ಸರಕಾರದ ಆಣತಿಗೆ ತಕ್ಕಂತೆ ಕುಣಿಯುವ ಕೈಗೊಂಬೆಗಳನ್ನಾಗಿ ಮಾಡಿಕೊಳ್ಳಲಾಗಿದೆ. ಬಗ್ಗದವರಿಗೆ ಸತತ ಕಿರುಕುಳ ನೀಡಲಾಗುತ್ತಿದೆ. ಇದೆಲ್ಲಕ್ಕೆ ಕಳಸವಿಟ್ಟಂತೆ ಇದೀಗ ದೇಶವನ್ನು ಧಾರ್ಮಿಕ ಆಧಾರದಲ್ಲಿ ಛಿದ್ರಛಿದ್ರಗೊಳಿಸುವ, ದಲಿತರು-ಆದಿವಾಸಿಗಳು-ಅಲೆಮಾರಿಗಳು ಮತ್ತಿತರ ಅಂಚಿಗೆ ಒತ್ತಲ್ಪಟ್ಟಿರುವ ಸಮುದಾಯಗಳನ್ನು ದೇಶಭ್ರಷ್ಟಗೊಳಿಸುವ ‘ಪೌರತ್ವ ತಿದ್ದುಪಡಿ ಕಾಯ್ದೆ’ ತಂದು, ದೇಶದಲ್ಲಿ ಅಶಾಂತಿಯ ಬೆಂಕಿ ಹಚ್ಚಲಾಗಿದೆ. ದೇಶ ದಿನದಿನಕ್ಕೆ ಅಧಃಪತನದತ್ತ ಜಾರಿಹೋಗುತ್ತಿದೆ. ಹಾಗಾಗಿ ಹೋರಾಟ ಅನಿವಾರ್ಯ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸರಕಾರದ ಈ ಎಲ್ಲ ದುರಾಡಳಿತ, ಸರ್ವಾಧಿಕಾರ, ದಿಕ್ಕುತಪ್ಪಿಸುವ ತಂತ್ರಗಳನ್ನು ವಿರೋಧಿಸುತ್ತ, ಜನತೆಯ ಬದುಕಿನ ನೈಜ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವ ಕ್ರಮಗಳನ್ನು ಕೈಗೊಳ್ಳುವುದಲ್ಲದೆ, ಸುಸ್ಥಿರ ಆರ್ಥಿಕ ಕ್ರಮಗಳನ್ನು ಅನುಷ್ಠಾನಕ್ಕೆ ತಂದು ದೇಶವನ್ನು ಪುನಃ ಅಭಿವೃದ್ಧಿ ಹಾದಿಯಲ್ಲಿ ನಡೆಸುವಂತೆ ಸರಕಾರಕ್ಕೆ ಗಟ್ಟಿ ದನಿಯಲ್ಲಿ ಎಚ್ಚರಿಕೆ ನೀಡುವುದಕ್ಕಾಗಿ, ‘ಪ್ರಜಾಧಿಕಾರ ಹೋರಾಟ ಸಮಿತಿ’ ವೇದಿಕೆಯು ಮಾರ್ಚ್ 14, 15, 16ರ ಶನಿವಾರ, ಭಾನುವಾರ ಮತ್ತು ಸೋಮವಾರ ಧರಣಿ ಸತ್ಯಾಗ್ರಹ ಶಾಂತಿಯುತ ಪ್ರತಿಭಟನಾ ಸತ್ಯಾಗ್ರಹವನ್ನು ನಡೆಸಲಿದ್ದೇವೆ ಎಂದಿದ್ದಾರೆ.
ಬೆಂಗಳೂರಿನ ಮೌರ್ಯ ಹೋಟೆಲ್ ವೃತ್ತದ, ಗಾಂಧೀ ಪ್ರತಿಮೆ ಬಳಿ ಪ್ರತಿದಿನ ಬೆಳಿಗ್ಗೆ 11ರಿಂದ ಸಂಜೆ 5ರವರೆಗೆ ಧರಣಿ ನಡೆಯಲಿದೆ. ಪ್ರಜ್ಞಾವಂತರು ಪಾಲ್ಗೊಳ್ಳಬೇಕೆಂದು ಕರೆ ನೀಡಿದ್ದಾರೆ.


