ದೇಶದ ಪ್ರಮುಖ 5 ಅತಿದೊಡ್ಡ ಖಾಸಗೀ ಬ್ಯಾಂಕುಗಳಲ್ಲಿ ಒಂದಾಗಿದ್ದ ಯೆಸ್ ಬ್ಯಾಂಕ್ ಸಾಲ ಮರುಪಾವತಿ ಸಮಸ್ಯೆಯ ಸುಳಿಗೆ ಸಿಕ್ಕು ಆರ್ಥಿಕವಾಗಿ ದಿವಾಳಿಯಾಗಿದೆ. ಯೆಸ್ ಬ್ಯಾಂಕ್‍ನ ಆಡಳಿತವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‍ಬಿಐ), ಬ್ಯಾಂಕ್‍ನ ವಹಿವಾಟಿನ ಮೇಲೆ ಒಂದು ತಿಂಗಳ ಹಲವಾರು ನಿಬರ್ಂಧಗಳನ್ನು ಹೇರಿದೆ.
ಯೆಸ್ ಬ್ಯಾಂಕ್‍ನ ದಿವಾಳಿತನದಿಂದಾಗಿಯೂ ಹಾಗೂ ಗ್ರಾಹಕರು 50 ಸಾವಿರವನ್ನಷ್ಟೇ ಮರು ಪಡೆಯಲು ಸಾಧ್ಯವೆಂಬ ಆರ್‍ಬಿಐ ನಿರ್ಬಂಧದಿಂದಾಗಿ ಗ್ರಾಹಕರು ತಾವು ಬ್ಯಾಂಕ್‍ನಲ್ಲಿ ಡಿಪಾಸಿಟ್ ಇರಿಸಿದ್ದ ಹಣ ವಾಪಸ್ ಬರುವುದೋ ಇಲ್ಲವೋ ಎಂಬ ಗೊಂದಲದಿಂದ ಕಂಗಾಲಾಗಿದ್ದಾರೆ. ಒಂದು ತಿಂಗಳ ನಿರ್ಬಂಧ ಹೇರಿರುವ ಆರ್‍ಬಿಐ, ಯೆಸ್ ಬ್ಯಾಂಕ್ ಆರ್ಥಿಕವಾಗಿ ಚೇತರಿಸಿಕೊಳ್ಳಲಿದೆ, ಎಲ್ಲಾ ಗ್ರಾಹಕರ ಹಣವೂ ಸೇಫಾಗಿರಲಿದೆ ಎಂದು ತಿಳಿಸಿದೆ. ಕೇಂದ್ರ ಸರ್ಕಾರದ ಕಪಿಮುಷ್ಠಿಯಲ್ಲಿರುವ ಆರ್‍ಬಿಐ, ಯೆಸ್ ಬ್ಯಾಂಕ್ ಪುನರುಜ್ಜೀವನದ ಹೊಣೆಗಾರಿಕೆಯನ್ನು ಸಾರ್ವಜನಿಕ ಕ್ಷೇತ್ರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) ನೇತೃತ್ವದ ಒಕ್ಕೂಟಕ್ಕೆ ವಹಿಸಿಕೊಡಲಾಗಿದೆ. ‘ತೊಂದರೆ ಸಿಲುಕಿರುವ ಬ್ಯಾಂಕುಗಳು ವಿಫಲಗೊಳ್ಳಲು ಅವಕಾಶ ನೀಡುವುದಿಲ್ಲ” ಎಂದು ಎಸ್‍ಬಿಐ ಅಧ್ಯಕ ರಜನೀಶ್ ಕುಮಾರ್ ಹೇಳಿಕೆಯನ್ನೂ ಕೊಟ್ಟಿದ್ದಾರೆ. ಇಷ್ಟು ಮಾತ್ರಕ್ಕೆ ಸಮಾಧಾನ ಮಾಡಿಕೊಳ್ಳಲಾಗುವುದಿಲ್ಲ. ಬ್ಯಾಂಕುಗಳ ದಿವಾಳಿಕೆಗೆ ಯೆಸ್ ಬ್ಯಾಂಕ್ ಆರಂಭದ ಹಂತವಷ್ಟೇ. ಆರ್ಥಿಕತೆಯನ್ನು ಸರಿದೂಗಿಸಲಾಗದ ಸರ್ಕಾರಗಳ ಅಸಮರ್ಥತೆಯಿಂದಾಗಿ ಬ್ಯಾಂಕುಗಳು ದಿವಾಳಿಯಾಗುವ ಪ್ರೋಸೆಸ್ ಈಗಷ್ಟೇ ಆರಂಭವಾಗಿದೆ. ಬ್ಯಾಂಕುಗಳ ಬಿಕ್ಕಟ್ಟಿಗೆ ಕಾರಣ ಬ್ಯಾಂಕ್ ಆಡಳಿತದ ಅಸಮರ್ಥತೆಯಷ್ಟೇ ಅಲ್ಲದೆ, ಸರ್ಕಾರ ಮತ್ತು ಆರ್‍ಬಿಐನ ಹೊಣೆಗೇಡಿತನವೂ ಆಗಿದೆ.
ಯೆಸ್ ಬ್ಯಾಂಕನ್ನು ಎಸ್‍ಬಿಐ ಬ್ಯಾಂಕ್ ಜೊತೆಗೆ ವಿಲೀನ ಮಾಡಲಾಗುತ್ತಿಲ್ಲ. ಬದಲಾಗಿ ಯೆಸ್ ಬ್ಯಾಂಕ್‍ನ 49% ಶೇರುಗಳನ್ನು 2450 ಕೋಟಿ ರೂಪಾಯಿಗಳಿಗೆ ಕೊಂಡುಕೊಳ್ಳಲಾಗುತ್ತಿದೆ. ಕೇವಲ 2ರೂ ಬೆಲೆ ಬಾಳುವ ಒಂದು ಷೇರ್‍ಗೆ 10 ರೂ.ಕೊಟ್ಟು ಎಸ್‍ಬಿಐ ಕೊಂಡುಕೊಳ್ಳುತ್ತಿದೆ. ಯೆಸ್ ಬ್ಯಾಂಕ್ ಸುಧಾರಣೆಗೊಂಡ ನಂತರ ಷೇರುಗಳ ಮೌಲ್ಯವನ್ನು ಹೆಚ್ಚಿಸಿ ಮಾರಾಟ ಮಾಡುತ್ತೇವೆಂಬ ತಿಪ್ಪೆ ಸಾರಿಸುವ ಮಾತನಾಡುತ್ತಿದೆ. ಯೆಸ್ ಬ್ಯಾಂಕ್‍ನ ಶೇರುಗಳನ್ನು ಖರೀದಿಸಲು ಎಸ್‍ಬಿಐ ಮುಂದಾಗಿದೆ ಎಂಬ ಸುದ್ದಿ ಬರುತ್ತಿದ್ದಂತೆಯೇ ಎಸ್‍ಬಿಐ ಷೇರುಗಳ ಮೌಲ್ಯ ಶೇ.7ರಷ್ಟು ಕುಸಿದಿದೆ. ಹೀಗಿರುವಾಗ ಯೆಸ್ ಬ್ಯಾಂಕ್ ಮಾರುಕಟ್ಟೆಯಲ್ಲಿ ತನ್ನ ಮೌಲ್ಯಹೆಚ್ಚಿಸಿಕೊಳ್ಳುತ್ತದೆ ಎಂಬುದು ‘ಬರಡು ಭೂಮಿಯಲ್ಲಿ ಭತ್ತ ಬೆಳೆಯುತ್ತೇವೆ’ ಎಂಬಂತಿದೆ. ಅದಾಗಿಯೂ, ಯೆಸ್ ಬ್ಯಾಂಕ್ ಮೇಲಿನ ವಿಶ್ವಾಸ ಕಳೆದುಕೊಂಡಿರುವ ಜನರು ಮತ್ತೆ ಆ ಬ್ಯಾಂಕ್‍ನಲ್ಲಿ ವ್ಯವಹರಿಸುತ್ತಾರೆ ಎಂಬುದೇ ಭ್ರಮಾತ್ಮಕವಾಗಿದೆ.
ಆರ್ಥಿಕ ಬಿಕ್ಕಟ್ಟು ಬಂದೊದಗಿರುವುದು ಕೇವಲ ಯೆಸ್ ಬ್ಯಾಂಕ್‍ಗೆ ಮಾತ್ರವಲ್ಲ. ಇಡೀ ಬ್ಯಾಂಕಿಂಗ್ ವ್ಯವಸ್ಥೆಯ ತಳಹದಿಯೇ ಇಂದು ಅಲುಗಾಡುತ್ತಿದೆ. ಯೆಸ್ ಬ್ಯಾಂಕ್ ರೀತಿಯ ಬಿಕ್ಕಟ್ಟಿಗೆ ಉಳಿದ ಬ್ಯಾಂಕುಗಳು ಸಿಲುಕದಿದ್ದರೂ, ರಾಷ್ಟ್ರೀಕೃತ ಬ್ಯಾಂಕುಗಳೂ ಸೇರಿದಂತೆ ಖಾಸಗೀ ಬ್ಯಾಂಕುಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. 2019ರಲ್ಲಿ ಪಂಜಾಬ್ ಮಹಾರಾಷ್ಟ್ರ ಕೋ-ಆಪರೇಟಿವ್ ಬ್ಯಾಂಕ್ ಕೂಡ ಇಂಥದ್ದೇ ಬಿಕ್ಕಟ್ಟಿಗೆ ಒಳಪಟ್ಟಿತ್ತು. ಆಗ ಸಾರ್ವಜನಿಕ ಬ್ಯಾಂಕುಗಳ ಹಣವನ್ನು ಸುರಿದು ಗ್ರಾಹಕರಿಗೆ ಕೊಡಲಾಗಿತ್ತು. 2008-09ರಲ್ಲಿ ಜಾಗತಿಕ ಹಣಕಾಸು ಬಿಕ್ಕಟ್ಟು ಶುರುವಾದಾಗಲೂ ಮುಂದುವರಿದ ರಾಷ್ಟ್ರಗಳು ಸಾರ್ವಜನಿಕ ಹಣಕ್ಕೆ ಕೈ ಹಾಕಿದ್ದವು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಬಿಕ್ಕಟ್ಟಿಗೆ ಮುಖ್ಯ ಕಾರಣ ಬ್ಯಾಂಕುಗಳ ವಿಲೀನ ಮಾಡಿದ್ದಾಗಿತ್ತು.
ಬ್ಯಾಂಕುಗಳ ಸಂಕಷ್ಟವನ್ನು ನಿವಾರಿಸುವ ಪಾಲಿಸಿಗಳನ್ನಾಗಲೀ, ಕ್ರಮಗಳನ್ನಾಗಿ ರೂಪಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರ ಬ್ಯಾಂಕುಗಳ ವಿಲೀನಕ್ಕೆ ಮುಂದಾಗಿದೆ. ದೇಶದ ಬ್ಯಾಂಕುಗಳಿಗೆ ಅಂತಾರಾಷ್ಟ್ರೀಯ ಮನ್ನಣೆ ದೊರೆಯುವಂತೆ ಮಾಡುವುದಕ್ಕಾಗಿ ಹಲವು ಬ್ಯಾಂಕುಗಳನ್ನು ಒಂದೇ ಬ್ಯಾಂಕ್‍ನೊಂದಿಗೆ ವಿಲೀನಮಾಡಿ ದೊಡ್ಡ ಬ್ಯಾಂಕನ್ನಾಗಿಸುತ್ತೇವೆ ಎಂಬುದು ಸರ್ಕಾರದ ವಾದ. ಅಮೆರಿಕ, ಇಂಗ್ಲೆಂಡ್‍ನಂತಹ ದೇಶಗಳಲ್ಲಿನ ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವ ಸಣ್ಣ ಬ್ಯಾಂಕುಗಳ ಷೇರುಗಳ ಮೌಲ್ಯ 40 ಬಿಲಿಯನ್ ಡಾಲರ್‍ಗಳಿಗೂ ಹೆಚ್ಚು. ಆದರೆ, ಎಸ್‍ಬಿಐ ಸೇರಿದಂತೆ ದೇಶದಲ್ಲಿನ ಎಲ್ಲಾ ಬ್ಯಾಂಕುಗಳನ್ನು ಸೇರಿಸಿದರೂ ನಮ್ಮ ಬ್ಯಾಂಕುಗಳ ಒಟ್ಟು ಮೌಲ್ಯ 04 ಬಿಲಿಯನ್ ಡಾಲರ್‍ಗಳು ಮಾತ್ರ. ಬ್ಯಾಂಕುಗಳೇ ದಿವಾಳಿಯಾಗುತ್ತಿರುವ ಈ ಸಂದರ್ಭದಲ್ಲಿ, ಅಂತಾರಾಷ್ಟ್ರೀಯ ಮನ್ನಣೆ ಸಾಧ್ಯವಾಗದ ಮಾತು. ಬ್ಯಾಂಕುಗಳ ವಿಲೀನದಿಂದಾಗಿ ಜಾಗತಿಕ ಬಿಕ್ಕಟ್ಟು ಎದುರಾಗಿದ್ದ ಉದಾಹರಣೆ ಕಣ್ಣೆದುರಿಗಿದ್ದರೂ, ಕೇಂದ್ರ ಸರ್ಕಾರ ಬ್ಯಾಂಕುಗಳನ್ನು ವಿಲೀನಗೊಳಿಸಲು ಮುಂದಾಗಿರುವುದು ಹಂತಹಂತವಾಗಿ ಬ್ಯಾಂಕುಗಳನ್ನು ಖಾಸಗೀಕರಣ ಮಾಡುವ ಹುನ್ನಾರವಷ್ಟೇ ಆಗಿದೆ.
ಕಳೆದ ವರ್ಷ ಎಸ್‍ಬಿಎಂ ಸೇರಿದಂತೆ ಐದು ಬ್ಯಾಂಕುಗಳನ್ನು ಎಸ್‍ಬಿಐ ಜೊತೆಗೆ ವಿಲೀನ ಮಾಡಿದ ನಂತರದಲ್ಲಿ ಒಟ್ಟು 7,000 ಶಾಖೆಗಳನ್ನು ಮುಚ್ಚಲಾಯಿತು. ಮುಂದೆಯೂ ಇದು ಮುಂದುವರಿಯಲಿದೆ. ಇದರಿಂದ ಬ್ಯಾಂಕು ದೊಡ್ಡದಾಗಿ ಬೆಳೆಯಲು ಸಾಧ್ಯವೇ ಇಲ್ಲವೆಂಬುದು ಬ್ಯಾಂಕ್ ಅಧಿಕಾರಿಗಳ ಅಭಿಪ್ರಾಯ.
60ರ ದಶಕದಲ್ಲಿ ಬ್ಯಾಂಕುಗಳ ಬಿಕ್ಕಟ್ಟು ಆರಂಭಗೊಳ್ಳುತ್ತಿದ್ದ ಕಾರಣದಿಂದಾಗಿಯೇ 1969 ಮತ್ತು ನಂತರದ ವರ್ಷಗಳಲ್ಲಿ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಲಾಗಿತ್ತು. ಅದಾದ ನಂತರದಲ್ಲಿ ಸಾರ್ವಜನಿಕ ಕ್ಷೇತ್ರದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಈ ರೀತಿಯ ಬಿಕ್ಕಟ್ಟು ಎಂದೂ ಕಂಡುಬಂದಿಲ್ಲ. ಆದರೆ, 1991ರಲ್ಲಿ ಬಂದ LPG (ಉದಾರೀಕರಣ, ಖಾಸಗೀಕರಣ, ಜಾಗತೀಕರಣ)ಯ ಕಾರಣದಿಂದಾಗಿ ಮತ್ತೆ ಖಾಸಗೀ ಬ್ಯಾಂಕುಗಳ ಹಾವಳಿ ಹೆಚ್ಚಾಗಲಾರಂಭಿಸಿತು. ಈ ಬ್ಯಾಂಕುಗಳ ಶೇರುಗಳ ಬಹುಭಾಗ ವಿದೇಶಿ ಹೂಡಿಕೆಯಿಂದ ತುಂಬಿಹೋಯಿತು. ಲಾಭದ ದುರಾಸೆಯಿಂದಾಗಿ ಸರ್ಕಾರದ ನಿಯಮಗಳನ್ನೂ ಮೀರಿ ವ್ಯವಹರಿಸಲಾರಂಭಿಸಿದ್ದ ಖಾಸಗೀ ಬ್ಯಾಂಕುಗಳು ಕಾರ್ಪೊರೇಟ್ ಕಂಪನಿಗಳಿಗೆ ಸಾಲದ ಹೊಳೆ ಹರಿಸಿದ್ದವು. ಆ ಸಾಲದ ಹಣ ಮರಳಿ ಪಾವತಿಯಾಗದ ಕಾರಣದಿಂದಾಗಿ ಸರಣಿಯಲ್ಲಿ ಖಾಸಗೀ ಬ್ಯಾಂಕುಗಳ ದಿವಾಳಿಯಾಗುತ್ತಿವೆ.
ಯೆಸ್ ಬ್ಯಾಂಕ್ ಕೂಡ ಲಾಭದ ದುರಾಸೆಯಿಂದ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ನೀಡಲು ನಿರಾಕರಿಸಿದ್ದ ಕಂಪನಿಗಳಿಗೆ ಹೆಚ್ಚು ಬಡ್ಡಿ ದರದಲ್ಲಿ ಸಾಲ ಕೊಡಲು ಆರಂಭಿಸಿತ್ತು. 2018-19ರಲ್ಲಿ ಯೆಸ್ ಬ್ಯಾಂಕ್ ಸಾಲ ನೀಡಿದ ಪ್ರಮಾಣ 1,00,000 ಕೋಟಿ. ಇದರಲ್ಲಿ ಬಹುಪಾಲನ್ನು ಆರ್ಥಿಕವಾಗಿ ದಿವಾಳಿಯಾಗಿದ್ದ, ಮೋದಿ ಮತ್ತು ಅಮಿತ್ ಶಾರ ಆಪ್ತಮಿತ್ರರೂ ಆದ ILFSನ ರವಿ ನಾರಾಯಣ, ದಿವಾನ್ ಹೌಸಿಂಗ್ ಮತ್ತು ಅನಿಲ್ ಅಂಬಾನಿಯ ಕಂಪನಿಗಳಿಗೆ ನೀಡಲಾಗಿತ್ತು. 2015ರಲ್ಲಿಯೇ ಯೆಸ್ ಬ್ಯಾಂಕ್ ಕ್ರೈಸಿಸ್ ಶುರುವಾಗಿದ್ದು ತಿಳಿದಿದ್ದರೂ ಕೇಂದ್ರ ಸರ್ಕಾರದ ಕಪಿಮುಷ್ಠಿಯಲ್ಲಿದ್ದ ಆರ್‍ಬಿಐ ಬಾಯಿಮುಚ್ಚಿ ಕುಳಿತ್ತಿತ್ತು. ಇದು ಇಂದಿನ ಸ್ಥಿತಿಗೆ ಕಾರಣವಾಗಿದೆ.
ಸಾರ್ವಜನಿಕರ ಹಣದಿಂದಲೇ ಜೀವಂತವಾಗಿರುವ ಖಾಸಗೀ ಬ್ಯಾಂಕುಗಳು ಸಾರ್ವಜನಿಕರ ಹಿತಕ್ಕಾಗಿ ಯಾವ ಕೆಲಸವನ್ನೂ ಮಾಡುವುದಿಲ್ಲ. 2014ರ ನಂತರದಲ್ಲೇ ಜಾರಿಗೆ ತಂದ ಜನಧನ್ ಯೋಜನೆ, ಸ್ವ ಉದ್ಯೋಗ ಮತ್ತು ಸಣ್ಣ ಕೈಗಾರಿಕೆಗಳಿಗೆ ಸಾಲ ನೀಡುವ ಕೇಂದ್ರ ಸರ್ಕಾರದ ಯೋಜನೆಗಳನ್ನು ಯಾವೊಂದು ಖಾಸಗೀ ಬ್ಯಾಂಕುಗಳು ಜಾರಿ ಮಾಡಲಿಲ್ಲ. ಬದಲಾಗಿ ದೊಡ್ಡ ಕಾರ್ಪೊರೇಟ್ ಕಂಪನಿಗಳಗೆ ಸಾರ್ವಜನಿಕರ ಹಣವನ್ನು ಸುರಿದಿವೆ. ಇತ್ತೀಚೆಗೆ ಜಾರಿಗೆ ಬಂದ ಎನ್‍ಪಿಎ (ಮರು ಪಾವತಿಯಾಗದ ಸಾಲ)ಯಿಂದಾಗಿ ಕಾರ್ಪೊರೇಟ್ ಕಳ್ಳರ ಸಾಲವನ್ನು ಪರೋಕ್ಷವಾಗಿ ಮನ್ನಾ ಮಾಡುವ ಕೇಂದ್ರ ಯೋಜನೆಯಿಂದಾಗಿ ಹಣ ಹಿಂದಿರುಗದೆ ಬ್ಯಾಂಕುಗಳು ಬರಿದಾಗಿವೆ.
ಖಾಸಗೀ ಬ್ಯಾಂಕುಗಳ ಅವ್ಯವಹಾರಕ್ಕೆ ಲಗಾಮು ಹಾಕುವುದಕ್ಕಾಗಿ ರಘುರಾಮ್ ರಾಜನ್ ಅವರು ಆರ್‍ಬಿಐನ ಗವರ್ನರ್ ಆಗಿದ್ದ ಸಂದರ್ಭದಲ್ಲಿ ಬ್ಯಾಂಕುಗಳ ಅಸೆಟ್ಸ್ ಕ್ವಾಲಿಟಿ ರಿವಿವ್ ಅಂಡ್ ಮ್ಯಾನೇಜ್‍ಮೆಂಟ್ ನಿಯಮವನ್ನು ಜಾರಿಗೆ ತಂದಿದ್ದರು. ಇದು ಬಂಡವಾಳಿಗರ ಲೂಟಿಗೆ ಕಡಿವಾಣ ಹಾಕುತ್ತಾದ್ದರಿಂದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜನ್ ಅವರನ್ನೇ ಗವರ್ನರ್ ಸ್ಥಾನದಿಂದ ಕೆಳಗಿಳಿಸಿ, ತಮ್ಮ ಕೈಗೊಂಬೆಯಾಗಿದ್ದ ಊರ್ಜಿತ್ ಪಟೇಲ್ ಅವರನ್ನು ಆರ್‍ಬಿಐ ಗವರ್ನರ್ ಮಾಡಿತ್ತು.
ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಖಾಸಗೀ ಬ್ಯಾಂಕುಗಳು ಲಂಗು-ಲಗಾಮು ಇಲ್ಲದೆ ವ್ಯವಹರಿಸುತ್ತಿರುವುದರಿಂದಲೇ ಈ ಬಿಕ್ಕಟ್ಟನ್ನು ಎದುರಿಸುತ್ತಿವೆ. ದೇಶದ ಎಲ್ಲಾ ಬ್ಯಾಂಕುಗಳಲ್ಲಿ 1,35,000 ಕೋಟಿ ಹಣವನ್ನು ಸಾಮಾನ್ಯ ಜನರು ಡಿಪಾಸಿಟ್ ಮಾಡಿದ್ದಾರೆ. ಖಾಸಗೀ ಬ್ಯಾಂಕುಗಳ ದಿವಾಳಿಯನ್ನು ನಿಯಂತ್ರಿಸಲು ಸಾರ್ವಜನಿಕ ಬ್ಯಾಂಕುಗಳ ಹಣವನ್ನು ಬಂಡವಾಳವಾಗಿ ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳೂ ಸಂಕಷ್ಟವನ್ನು ಎದುರಿಸುವ ಹಂತಕ್ಕೆ ತಲುಪುತ್ತಿವೆ. 20,000 ಕೋಟಿ ಲಾಭದಲ್ಲಿದ್ದ ಎಸ್‍ಬಿಐ ಇಂದು 500 ಕೋಟಿ ಲಾಭಕ್ಕೆ ಕುಸಿದಿದೆ. ದೇಶದ ಜಿಡಿಪಿಯೂ ಹಳ್ಳ ಹಿಡಿಯುತ್ತಿದೆ. ಇದು ದೇಶದ ಆರ್ಥಿಕ ಅಧೋಗತಿಯನ್ನು ಸೂಚಿಸುತ್ತಿದೆ.
ಖಾಸಗೀ ಬ್ಯಾಂಕುಗಳನ್ನು ನಿಯಂತ್ರಿಸಲು, ದಿವಾಳಿಯಾಗುವುದನ್ನು ತಪ್ಪಿಸಲು, ಆರ್ಥಿಕ ಸ್ಥಿತಿಗತಿ ಸುಧಾರಿಸಲು 1969ರ ರೀತಿಯಲ್ಲೇ ಮತ್ತೆ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಬೇಕು. ಬಂಡವಾಳಶಾಹಿ ಖೂಳರಿಗೆ ಕಡಿವಾಣ ಹಾಕಿ, ನೀಡಲಾಗಿರುವ ಸಾಲವನ್ನು ವಸೂಲಿ ಮಾಡಬೇಕು. ಎನ್‍ಪಿಎ ರದ್ದಾಗಬೇಕು ಎಂದು ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯ್ಸ್ ಅಸೋಸಿಯೇಷನ್ (AIBEA) ಎಲ್.ಪಿ.ಜಿ ಜಾರಿಯಾದಾಗಿನಿಂದಲೂ ಹೋರಾಟ ಮಾಡುತ್ತಿದೆ.
ಬ್ಯಾಂಕ್ ಅಸೋಸಿಯೇಷನ್ನಿನ್ನ ಹೋರಾಟದಿಂದ ಯುಪಿಎ ಸರ್ಕಾರವಿದ್ದಾಗ ಹಲವಾರು ಸುಧಾರಣೆಗಳನ್ನು ತರಲು ಸಾಧ್ಯವಾಗಿತ್ತು. ಕಾರ್ಪೊರೇಟ್ ಹಿತಾಸಕ್ತಿಯನ್ನು ಹೊಂದಿರುವ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದನಂತರ ಜನಸಾಮಾನ್ಯರ ಅಭಿಪ್ರಾಯಕ್ಕಾಗಲೀ, ಬ್ಯಾಂಕ್ ಉದ್ಯೋಗಿಗಳ ಹೋರಾಟ, ಸಲಹೆಗಳಿಗಾಗಿ ಕಿಂಚಿತ್ತೂ ಬೆಲೆ ಕೊಡದೆ ದೇಶದ ಆರ್ಥಿಕ ಸ್ಥಿತಿಯನ್ನು ಅಧೋಗತಿಗೆ ಕೊಂಡೊಯ್ಯುತ್ತಿದ್ದಾರೆ. ಬ್ಯಾಂಕುಗಳ ವಿಲೀನವನ್ನು ವಿರೋಧಿಸಿ ಮಾರ್ಚ್ 25ರಂದು ರಾಷ್ಟ್ರಾದ್ಯಂತ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿರುವುದಾಗಿ AIBEAನ ರಾಜ್ಯಾಧ್ಯಕ್ಷರಾದ ಹೆಚ್.ವಿ.ರೈ ಅವರು ಪತ್ರಿಕೆಗೆ ತಿಳಿಸಿದ್ದಾರೆ.
“ಬ್ಯಾಂಕುಗಳ ರಾಷ್ಟ್ರೀಕರಣವಾಗದೆ ಆರ್ಥಿಕ ಬಿಕ್ಕಟ್ಟನ್ನು ಸರಿದೂಗಿಸಲು ಸಾಧ್ಯವಿಲ್ಲ. ಸರ್ಕಾರವು ಖಾಸಗೀ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಬೇಕು. ಬಂಡವಾಳಶಾಹಿಗಳಿಗೆ ನೀಡಲಾಗಿರುವ ಸಾಲವನ್ನು ವಸೂಲಿ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. Peoples money should be in the hands of the peoples government. That is public sector bank.” – ಹೆಚ್.ವಿ.ರೈ, ರಾಜ್ಯಾಧ್ಯಕ್ಷರು, ಎಐಬಿಇಎ