ಸಮಾಜದಲ್ಲಿ ಸ್ವಲ್ಪ ಹೆಸರುಗಳಿಸಿಕೊಂಡು ಗಣ್ಯವ್ಯಕ್ತಿಗಳ ಸಾಲಿಗೆ ಸೇರಿದೊಡನೆಯೇ ಬಹಳಷ್ಟು ಜನ ತಾವು ಇತರರಿಗಿಂತ ತೀರ ಭಿನ್ನರೆಂಬ ರೀತಿಯಲ್ಲಿ ಸಾಮಾನ್ಯವಾಗಿ ವರ್ತಿಸುವುದುಂಟು. ಅಂಥವರ ನಡವಳಿಕೆಯೇ ಅವರ ಧೋರಣೆಯನ್ನು ಬಯಲು ಮಾಡುತ್ತದೆ. ಇನ್ನು ಸರ್ಕಾರದಲ್ಲಿರುವವರ ಸಖ್ಯ ಸ್ವಲ್ಪ ಸಿಕ್ಕಿದರು ಸಾಕು, ಅದು ಮತ್ತೊಂದು ಕಥೆಯಾಗುತ್ತದೆ.
ಆದರೆ ಕೆಲವರಿರುತ್ತಾರೆ ತಾವು ಎಷ್ಟೇ ಪ್ರಮುಖರೆನಿಸಿಕೊಂಡರೂ ಸಮಾಜದ ಇತರರಂತೆಯೇ ತಾವೂ ಒಬ್ಬರು ಅನ್ನುವುದನ್ನು ಎಂದಿಗೂ ಮರೆಯುವುದಿಲ್ಲ. ಎಲ್ಲರೊಡನೆಯು ಸೌಜನ್ಯಪೂರಿತ ನಡೆಯನ್ನೇ ತೋರಿಸುತ್ತಾರೆ. ಆ ಸೌಜನ್ಯವು ಸಹ ತೋರಿಕೆಯ ಸೌಜನ್ಯವಾಗಿರದೆ ಅಂಥವರ ವ್ಯಕ್ತಿತ್ವದ ಭಾಗವೇ ಆಗಿರುತ್ತದೆ. ಮಹಾನ್ ನಾಯಕರಾಗಿಯೂ ಅವರು ಅತಿ ಸಾಮಾನ್ಯರಂತೆಯೇ ಇರುತ್ತಾರೆ. ಶ್ರೀ ದೊರೆಸ್ವಾಮಿಯವರು ಇಂಥವರ ಸಾಲಿಗೆ ಸೇರಿದವರು. ನಾನು ಅವರನ್ನು ಭೇಟಿ ಮಾಡಿದ ದಿನದಿಂದಲೂ ಗುರುತಿಸಿದ್ದ ಅವರ ವಿಶಿಷ್ಟ ಗುಣವಿದು.
1980ರ ದಶಕದ ಮಧ್ಯ ಭಾಗದಲ್ಲಿ ಗೌರಿಬಿದನೂರಿನ ಸಮೀಪದ ಗಂಗಸಂದ್ರವೆಂಬ ಹಳ್ಳಿಯಲ್ಲಿ ಶ್ರೀಮತಿ ಗೌರಮ್ಮ ಎಂಬ ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿಯವರ ಆಶ್ರಮದಲ್ಲಿ ನಮ್ಮ ’ಸಮುದಾಯ’ ತಂಡದ ಬೀದಿ ನಾಟಕದ ಪ್ರದರ್ಶನ ಏರ್ಪಟ್ಟಿತ್ತು. ಅದೇ ದಿನ ಅಲ್ಲಿಗೆ ಬಂದಿದ್ದ ಶ್ರೀ ದೊರೆಸ್ವಾಮಿಯವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ನಮ್ಮ ನಾಟಕವನ್ನು ನೋಡಿದ ಅವರು ಕೆಲವು ಪ್ರೋತ್ಸಾಹಕ ಮಾತುಗಳನ್ನು ಆಡಿದರು. ಆ ಮೊದಲ ಭೇಟಿಯಲ್ಲಿಯೇ ನಮ್ಮೆಲ್ಲರಿಗೆ ಅವರ ಬಗ್ಗೆ ಮತ್ತು ಅವರ ಸರಳತೆಯ ಬಗ್ಗೆ ಗೌರವ ಭಾವ ಮೂಡಿತು.
1990ರ ದಶಕದ ಪ್ರಾರಂಭದಿಂದ ದೇಶದಲ್ಲಿ ಜಾಗತೀಕರಣ, ಉದಾರೀಕರಣಗಳ ಗಾಳಿ ಬೀಸತೊಡಗಿತ್ತು. ಅಂದಿನ ಕಾಂಗ್ರೆಸ್ ಸರ್ಕಾರ ತನ್ನದೇ ಆದ ಕಾರಣಗಳಿಗಾಗಿ ದೇಶವನ್ನು ಮುಕ್ತಮಾರುಕಟ್ಟೆಯ ಆರ್ಥಿಕತೆಯ ತೆಕ್ಕೆಗೆ ದೂಡಿತು. ಇದರ ವಿರುದ್ಧ ದೇಶದಾದ್ಯಂತ ಎಡಪಂಥೀಯರು, ಗಾಂಧಿವಾದಿಗಳು, ರೈತಸಂಘಟನೆಗಳು ಹೋರಾಟದಲ್ಲಿ ನಿರತರಾದರು. ಬೆಂಗಳೂರಿನಲ್ಲಿ ನಡೆದ ಇಂಥ ಹಲವು ಪ್ರತಿಭಟನೆಗಳ ಮುಂಚೂಣಿಯಲ್ಲಿದ್ದವರು ದೊರೆಸ್ವಾಮಿಯವರು. 1997ರ ನಂತರ ಗೌರಿಬಿದನೂರಿನಿಂದ ಬೆಂಗಳೂರಿಗೆ
ವರ್ಗವಾಗಿ ಬಂದ ನಾನೂ ಸಹ ಅವರ ನೇತೃತ್ವದ ಸಾಮ್ರಾಜ್ಯಶಾಹಿ ವಿರೋಧಿ ಒಕ್ಕೂಟದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದೆ. ಸಾಮ್ರಾಜ್ಯಶಾಹಿಗಳ ನೇರ ಆಳ್ವಿಕೆಯ ವಿರುದ್ಧ ಹೋರಾಡಿ ಜೈಲು ವಾಸವನ್ನೂ ಅನುಭವಿಸಿದ್ದ ದೊರೆಸ್ವಾಮಿಗಳಿಗೆ ಸಾಮ್ರಾಜ್ಯಶಾಹಿಗಳ, ಬಂಡವಾಳಶಾಹಿಗಳ ಕೈಮೇಲಾಗುವ ಪರಿಣಾಮಗಳ ಸ್ಪಷ್ಟ ತಿಳುವಳಿಕೆ ಇತ್ತು. ಆ ಸ್ಪಷ್ಟ ಅರಿವಿನ ಆಧಾರದಲ್ಲಿಯೇ, ಅವರು ಹಿಂದೆ ಯಾವ ಪಕ್ಷದ ಸದಸ್ಯರಾಗಿದ್ದರೋ, ಅದೇ ಪಕ್ಷದ ಸರ್ಕಾರವನ್ನು ಎದುರಿಸಿ ನಿಂತರು.
1947ರಲ್ಲಿ ಅಧಿಕಾರ ಹಸ್ತಾಂತರವಾದರೂ ಇಲ್ಲಿನ ಬಹುಸಂಖ್ಯಾಂತರಿಗೆ ನಿಜವಾದ ಸ್ವಾತಂತ್ರ್ಯ ದೊರೆಯದಿರುವ ಬಗ್ಗೆ ದೊರೆಸ್ವಾಮಿಯವರಿಗೆ ಖೇದವಿತ್ತು. ಹಾಗಾಗಿ ಅವರು ಯಾವುದೇ ಲಾಭವಿರುವ ಹುದ್ದೆಗಳಿಗೆ ಆಸೆ ಪಡದೆ ತಮ್ಮಲ್ಲಿನ ಹೋರಾಟದ ಕಿಚ್ಚನ್ನು ಕಾಪಾಡಿಕೊಂಡು ಬಂದರು. ತಮ್ಮ ಸುತ್ತಲಿನ ಯಾವುದೇ ಜನ ವರ್ಗಕ್ಕೆ ಅನ್ಯಾಯವಾಗಿದ್ದು ಕಂಡರೂ, ಸರ್ಕಾರದಲ್ಲಿರುವವರು ಯಾರೇ ಆಗಿರಲಿ, ಸಾಮಾನ್ಯ ಜನರಿಗೆ ನ್ಯಾಯ ದೊರಕಿಸಿಕೊಡಲು ಇತರರ ಜತೆ ಸೇರಿ, ಅದು ತಮ್ಮ ಪಾಲಿನ ಕರ್ತವ್ಯವೆಂದು, ಹೊಣೆಯೆಂದು ಎಂದು ಭಾವಿಸಿ ನಿಭಾಯಿಸುತ್ತಿದ್ದರು.

ಮುಂದಿನ ದಿನಗಳಲ್ಲಿ, ಅಜ್ಞಾತವಾಸದಲ್ಲಿದ್ದ ನಕ್ಸಲೀಯ ನಾಯಕರನ್ನು ಹೊರಬರುವಂತೆ ಮಾಡುವುದರಲ್ಲಿ ಅವರ ದೂರದೃಷ್ಟಿ ಸ್ಪಷ್ಟವಾಗುತ್ತದೆ. ಅವರು ಹೊರಬಂದು ತಮ್ಮ ಪಾಡಿಗೆ ತಾವು ಜೀವನ ನಡೆಸುವರೆಂದು ಅನ್ನಿಸಿರದಿದ್ದರೆ, ದೊರೆಸ್ವಾಮಿಗಳು ಆ ಕೆಲಸಕ್ಕೆ ಕೈ ಹಾಕುತ್ತಿರಲಿಲ್ಲ ಅನಿಸುತ್ತದೆ. ಮುಖ್ಯವಾಗಿ ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್ ’ಮುಖ್ಯವಾಹಿನಿ’ಯ ಭಾಗವಾಗಿ ಜನಪರ ಚಳುವಳಿಗಳನ್ನು ನಡೆಸಿಕೊಂಡು ಹೋಗುವವರೆಂಬ ವಿಶ್ವಾಸವಿದ್ದಿದ್ದರಿಂದಲೇ, ಗೌರಿ ಲಂಕೇಶ್ ಮತ್ತು ಎ.ಕೆ ಸುಬ್ಬಯ್ಯನವರೊಂದಿಗೆ ಸೇರಿ ಆ ದಿಕ್ಕಿನಲ್ಲಿ ತಮ್ಮೆಲ್ಲಾ ಶ್ರಮವನ್ನೂ ಧಾರೆ ಎರೆದರು. ಅವರ ಆ ನಿರೀಕ್ಷೆ ಹುಸಿಯಾಗಲಿಲ್ಲ. ಆ ಇಬ್ಬರೂ ಇಂದು ಹಲವಾರು ಜನಪರ ಹೋರಾಟಗಳ ಭಾಗವಾಗಿದ್ದಾರೆ.
ಅಂಥ ಹೋರಾಟಗಳಲ್ಲಿ ಅತಿ ಮುಖ್ಯವಾದದ್ದು ಭೂಮಿ ಮತ್ತು ವಸತಿ ವಂಚಿತರ ಚಳುವಳಿ. ಈ ಚಳುವಳಿಯ ಕೇಂದ್ರಬಿಂದು ದೊರೆಸ್ವಾಮಿಯವರು. ಇಂದಿಗೂ ಈ ಚಳುವಳಿ ತಾರ್ಕಿಕ ಅಂತ್ಯವನ್ನು ಕಾಣದಿದ್ದರೂ, ಅದಕ್ಕೊಂದು ಭದ್ರ ಬುನಾದಿಯನ್ನು ಹಾಕಿಕೊಟ್ಟವರು ದೊರೆಸ್ವಾಮಿಗಳು.
ಗೌರಿ ಲಂಕೇಶ್ ಹತ್ಯೆಯ ನಂತರ ಗೌರಿ ಮೆಮೋರಿಯಲ್ ಟ್ರಸ್ಟ್‌ನ ಅಧ್ಯಕ್ಷರಾಗಿದ್ದರು. ನಾನೂ ಭಾಗಿಯಾಗಿರುವ ಗೌರಿ ಮೀಡಿಯಾ ಟ್ರಸ್ಟ್‌ಗೂ ಅವರ ಕೊಡುಗೆ ಅಪಾರ. ಈ ಟ್ರಸ್ಟ್‌ಗಳ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ನನಗೆ ಅವರನ್ನು ಅಂತ್ಯಂತ ಹತ್ತಿರದಿಂದ ನೋಡುವ ಸದವಕಾಶ ಒದಗಿ ಬಂತು. ಜಯನಗರದಲ್ಲಿನ ಅವರ (ಬಾಡಿಗೆ) ಮನೆಗೆ ಹೋದಾಗಲೆಲ್ಲ ಆತ್ಮೀಯವಾಗಿ ’ಏನ್ ಮೇಷ್ಟ್ರೇ ಹೇಗಿದ್ದೀರಿ’ ಎಂದು ಅತ್ಯಂತ ಆತ್ಮೀಯವಾಗಿ ಮಾತನಾಡಿಸುತ್ತಿದ್ದರು. ಅವರಿಗಿಂತಲೂ ಮುವತ್ತು ವರ್ಷ ಚಿಕ್ಕವನಾದ ನನ್ನ ಜೊತೆ ದೇಶದ ರಾಜಕೀಯ, ಸಾಮಾಜಿಕ ಸಮಸ್ಯೆಗಳು ಮುಂತಾದ ಗಂಭೀರ ವಿಷಯಗಳನ್ನು ಚರ್ಚಿಸುತ್ತಿದ್ದರು. ಈ ವಿಷಯಗಳ ಬಗೆಗಿನ ಅವರ ಚಿಕಿತ್ಸಕ ದೃಷ್ಟಿ ನಮಗೆ ಅರಿವಾಗುತ್ತಿತ್ತು.
ಅವರ ಜೀವನದ ಕೊನೆಯ ದಿನಗಳಲ್ಲಿಯೂ, ಆಸ್ಪತ್ರೆಯ ಹಾಸಿಗೆಯ ಮೇಲಿದ್ದಾಗಲೂ ಅವರಿಗೆ ಜನರದ್ದೇ ಚಿಂತೆ. ದೇಶದ ರಾಜಕೀಯ ಭವಿಷ್ಯ ಏನಾಗಬಹುದು ಅನ್ನುವುದೇ ಅವರನ್ನು ಕಾಡುತ್ತಿದ್ದ ಪ್ರಶ್ನೆಯಾಗಿತ್ತು. ಅವರ ಅಂತಿಮ ದಿನಗಳಲ್ಲಿ ಕೊರೊನಾ ಕಾರಣದಿಂದಾಗಿ ಅವರನ್ನು ಭೇಟಿ ಮಾಡಲಾಗದ ಸ್ಥಿತಿ ಮತ್ತು ಮುಖ್ಯವಾಗಿ ಅವರ ನಿಧನದ ನಂತರ ಅವರ ಪಾರ್ಥಿವ ಶರೀರವನ್ನೂ ನೋಡಲಾಗಲಿಲ್ಲ ಅನ್ನುವ ಕೊರಗು ನನ್ನನ್ನು ಹಾಗೂ ನಮ್ಮ ಬಳಗದ ಹಲವರನ್ನು ಬಹುಕಾಲ ಕಾಡುತ್ತಲೇ ಇರುತ್ತದೆ. ಆದರೆ ಅತಿ ಸಾಮಾನ್ಯವಾಗಿದ್ದ ಆ ಮಹಾನ್ ವ್ಯಕ್ತಿಯ ನೆನಪು ಮಾತ್ರ ನಮ್ಮ ಜೀವನದುದ್ದಕ್ಕೂ ನಮ್ಮ ನೆನಪುಗಳ ಭಾಗವಾಗಿದ್ದು ಅವರ ಆದರ್ಶಗಳು ನಮ್ಮನ್ನು ಮುನ್ನಡೆಸುತ್ತವೆ ಅನ್ನುವ ಖಾತ್ರಿಯಂತೂ ಇದೆ. ದೊರೆಸ್ವಾಮಿಯವರಿಗೆ ಅತ್ಯಂತ ಗೌರವ ಪೂರ್ವಕ ನಮನಗಳು.

ಪ್ರೊ. ನಗರಗೆರೆ ರಮೇಶ್
ಪ್ರೊ. ನಗರಗೆರೆ ರಮೇಶ್ ಅವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ನಗರಗೆರೆಯವರು. ನ್ಯಾಶನಲ್ ಕಾಲೇಜಿನಲ್ಲಿ ಇಂಗ್ಲೀಶ್ ಪ್ರಾಧ್ಯಾಪಕರಾಗಿದ್ದು ನಂತರ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದಾರೆ. ಮಾನವ ಹಕ್ಕು ಸಂಘಟನೆಯಾದ ಪ್ರಜಾತಾಂತ್ರಿಕ ಜನರ ವೇದಿಕೆ ಮೊದಲಾದವುಗಳ ಭಾಗವಾಗಿದ್ದಾರೆ. ಎಲ್ಲ ಜನಪರ ಚಳುವಳಿಗಳ ದೀರ್ಘಕಾಲದ ಒಡನಾಡಿ.


