ನಾಲ್ಕು ವರ್ಷದ ಹಿಂದಿನ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಕುಲ್ ಪ್ರೀತ್ ಸಿಂಗ್, ನಟರಾದ ರಾಣಾ ದಗ್ಗುಬಾಟಿ, ರವಿತೇಜಾ, ನಿರ್ದೇಶಕ ಪುರಿ ಜಗನ್ನಾಥ್, ನಟಿ ಚಾರ್ಮಿ ಕೌರ್ ಮತ್ತು ಮುಮೈತ್ ಖಾನ್ ಸೇರಿದಂತೆ 12 ಮಂದಿ ಟಾಲಿವುಡ್ ನಟರು ಮತ್ತು ನಿರ್ದೇಶಕರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿದೆ.
ಆಗಸ್ಟ್ 31 ಕ್ಕೆ ನಿರ್ದೇಶಕ ಪುರಿ ಜಗನ್ನಾಥ್ ಅವರಿಗೆ ಸಮನ್ಸ್ ನೀಡಿದ್ದರೆ, ಸೆಪ್ಟೆಂಬರ್ 6 ಕ್ಕೆ ನಟಿ ರಾಕುಲ್ ಪ್ರೀತ್ ಸಿಂಗ್‌ಗೆ ಸಮನ್ಸ್ ನೀಡಲಾಗಿದೆ. ನಟರಾದ ರಾಣಾ ದಗ್ಗುಬಾಟಿ ಮತ್ತು ರವಿತೇಜಾ ಅವರಿಗೆ ಕ್ರಮವಾಗಿ ಸೆಪ್ಟೆಂಬರ್ 8 ಮತ್ತು 9 ರಂದು ಸಮನ್ಸ್ ನೀಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ನಟಿ ಮುಮೈತ್ ಖಾನ್‌ಗೆ ನವೆಂಬರ್ 15 ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದು, ನಟಿ ಚಾರ್ಮಿ ಕೌರ್ ಅವರಿಗಗೂ ಇಡಿ ಸಮನ್ಸ್ ಜಾರಿ ಮಾಡಿದೆ.
2017 ರ ಡ್ರಗ್ ಕೇಸ್ ಸಂಬಂಧವಾಗಿ ಈ 12 ಜನ ನಟರು ಮತ್ತು ನಿರ್ದೇಶಕರನ್ನು ವಿಶೇಷ ತನಿಖಾ ತಂಡವು (ಎಸ್‌ಐಟಿ) ಈ ಹಿಂದೆ ವಿಚಾರಣೆ ನಡೆಸಿತ್ತು. ಸಾಕ್ಷಿ, ಆಧಾರಗಳ ಕೊರತೆಯಿಂದ ಪ್ರಕರಣವನ್ನು ಬಿಟ್ಟುಬಿಡಲಾಗಿತ್ತು.
ಇದನ್ನೂ ಓದಿ: ನಟಿ ರಾಗಿಣಿ, ಸಂಜನಾ ಡ್ರಗ್ಸ್ ಸೇವಿಸಿದ್ದು FSL ಪರೀಕ್ಷೆಯಲ್ಲಿ ದೃಢ
ಈಗ ಇದೇ ಪ್ರಕರಣದಲ್ಲಿ ಸೆಲೆಬ್ರಿಟಿಗಳನ್ನು ಸಾಕ್ಷಿಯಾಗಿ ಕರೆಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಕ್ರಮ ಹಣ ವರ್ಗಾವಣೆ, ಡ್ರಗ್ಸ್ ಸೇವನೆ ಮತ್ತು ಸರಬರಾಜು ಪ್ರಕರಣಗಳಲ್ಲಿ ಸಮನ್ಸ್ ನೀಡಲಾಗಿದೆ.
ಜುಲೈ 2017 ರಲ್ಲಿ ಹೈದರಾಬಾದ್ ಅಬಕಾರಿ ಇಲಾಖೆಯ ವಿಶೇಷ ತನಿಖಾ ತಂಡವು ಟಾಲಿವುಡ್ ಸೆಲೆಬ್ರಿಟಿಗಳು ಮತ್ತು ಇತರರ ವಿರುದ್ಧ ತನಿಖೆಯನ್ನು ಆರಂಭಿಸಿತ್ತು.
2017 ರ ಜುಲೈನಲ್ಲಿ ಡ್ರಗ್ ಪ್ರಕರಣ ಬಹಿರಂಗವಾಗಿತ್ತು. ಡ್ರಗ್ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಹಲವಾರು ಪ್ರಕರಣಗಳು ದಾಖಲಾಗಿದ್ದವು. ಡಚ್ ಪ್ರಜೆ, ದಕ್ಷಿಣ ಆಫ್ರಿಕಾದ ಪ್ರಜೆ ಸೇರಿದಂತೆ ಮಾಜಿ ಏರೋಸ್ಪೇಸ್ ಎಂಜಿನಿಯರ್ ಆಗಿದ್ದ ಯುಎಸ್ ಪ್ರಜೆ ಸೇರಿದಂತೆ 20 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿತ್ತು. ಇದೇ ಪ್ರಕರಣದಲ್ಲಿ ಎಸ್‌ಐಟಿ ದಕ್ಷಿಣ ಆಫ್ರಿಕಾದ ಪ್ರಜೆ, ರಾಫೆಲ್ ಅಲೆಕ್ಸ್ ವಿಕ್ಟರ್ ಎಂಬುವವರನ್ನು ಮುಂಬೈನಿಂದ ಹೈದರಾಬಾದ್‌ಗೆ ಕೊಕೇನ್ ಸಾಗಿಸಿದ ಆರೋಪದ ಮೇಲೆ 2017 ರ ಆಗಸ್ಟ್‌ನಲ್ಲಿ ಬಂಧಿಸಿತ್ತು.
ವಿಶೇಷ ತನಿಖಾ ತಂಡವು ಸೆಲೆಬ್ರಿಟಿಗಳು ಸೇರಿದಂತೆ 62 ಶಂಕಿತರ ಕೂದಲು ಮತ್ತು ಉಗುರಿನ ಮಾದರಿಗಳನ್ನು ಸಂಗ್ರಹಿಸಿತ್ತು, ಆದರೆ ಇಲ್ಲಿಯವರೆಗೆ, ಎಸ್‌ಐಟಿ ಯಾವುದೇ ಸೆಲೆಬ್ರಿಟಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿಲ್ಲ. ಯಾವ ಸೆಲೆಬ್ರಿಟಿಗಳು ಡ್ರಗ್ ಕಳ್ಳಸಾಗಣೆ, ಡ್ರಗ್ ಸೇವನೆಯ ಭಾಗವಾಗಿದ್ದಾರೆ ಎಂಬುದನ್ನು ಕೂಡ ಎಸ್‌ಐಟಿ ಇಲ್ಲಿಯವರೆಗೆ ಬಹಿರಂಗಪಡಿಸಿಲ್ಲ.
ಇದನ್ನೂ ಓದಿ: ಪಮೇಲಾ-ಡ್ರಗ್ಸ್ ಪ್ರಕರಣ : ಬಂಗಾಳ ಬಿಜೆಪಿ ನಾಯಕ ರಾಕೇಶ್ ಅರೆಸ್ಟ್


