ದೆಹಲಿಯ ಗಡಿಗಳಲ್ಲಿ ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಪಟ್ಟು ಹಿಡಿದಿರುವ ರೈತರ ಪ್ರತಿಭಟನೆ ಮೂರು ವಾರಗಳನ್ನು ಪೂರ್ಣಗೊಳಿಸಿದೆ. ಅನ್ನದಾತರ ಹೋರಾಟಕ್ಕೆ ರಾಜಕೀಯ ಪಕ್ಷಗಳು, ದೇಶದಾದ್ಯಂತ ಹಲವು ಸಂಘಟನೆಗಳು ಕೈ ಜೋಡಿಸಿವೆ. ಈಗ ಈ ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ 10 ಹಿರಿಯ ಖ್ಯಾತ ಅರ್ಥಶಾಸ್ತ್ರಜ್ಞರು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ಗೆ ಪತ್ರ ಬರೆದಿದ್ದಾರೆ.
ದೇಶದ ಸಣ್ಣ ಮತ್ತು ಅಂಚಿನಲ್ಲಿರುವ ಅತಿಸಣ್ಣ ರೈತರ ಹಿತಾಸಕ್ತಿಗಳಿಲ್ಲದ ಕಾರಣ ಈ ಕಾನೂನುಗಳನ್ನು ರದ್ದುಗೊಳಿಸಬೇಕಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದು, ಕೃಷಿ ಕಾನೂನುಗಳ ಏಕೆ ರದ್ದಾಗಬೇಕು ಎಂಬುದಕ್ಕೆ 5 ಕಾರಣಗಳನ್ನು ನೀಡಿದ್ದಾರೆ.
“ದೇಶದ ಸಣ್ಣ ಮತ್ತು ಅತಿಸಣ್ಣ ರೈತರ ಹಿತದೃಷ್ಟಿ ಹೊಂದಿಲ್ಲದ ಇತ್ತೀಚಿನ ಕೃಷಿ ಕಾಯ್ದೆಗಳನ್ನು ಭಾರತ ಸರ್ಕಾರ ರದ್ದುಪಡಿಸಬೇಕು ಎಂದು ನಾವು ಆಗ್ರಹಿಸುತ್ತೇವೆ. ಈ ಕಾಯ್ದೆಗಳ ಬಗ್ಗೆ ರೈತ ಸಂಘಟನೆಗಳು ಭಾರಿ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿವೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಕೃಷಿ ವ್ಯಾಪಾರೋದ್ಯಮವನ್ನು ಸುಧಾರಿಸುವ ಅವಶ್ಯಕತೆ ಇದೆ. ಆದರೆ, ಈ ಕಾನೂನುಗಳು ಆ ಉದ್ದೇಶವನ್ನು ಪೂರೈಸುವುದಿಲ್ಲ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.
ಇದನ್ನೂ ಓದಿ: ’ಮೋದಿಯವರಂತೆ ಆಗಬೇಡಿ, ಮಾಸ್ಕ್ ಧರಿಸಿ’: ಮೋದಿ ವಿಡಿಯೋ ಟ್ರೋಲ್ ಮಾಡಿದ ಆಪ್
ಈ ವಿವಾದಾತ್ಮಕ ಕೃಷಿ ಕಾನೂನುಗಳು ಸಣ್ಣ ರೈತರಿಗೆ ಮೂಲಭೂತವಾಗಿ ಹಾನಿಕಾರಕವಾಗಿರುವುದಕ್ಕೆ ಐದು ಕಾರಣಗಳನ್ನು ಅರ್ಥಶಾಸ್ತ್ರಜ್ಞರು ಪಟ್ಟಿ ಮಾಡಿದ್ದಾರೆ.
೧. ಈ ಕಾನೂನುಗಳು, ರಾಜ್ಯ ಸರ್ಕಾರಗಳ ಪಾತ್ರವನ್ನು ದುರ್ಬಲಗೊಳಿಸುತ್ತವೆ. ಆದರೆ, ಕೇಂದ್ರ ಸರ್ಕಾರಕ್ಕಿಂತ ರಾಜ್ಯ ಸರ್ಕಾರ ರೈತರ ಹಿತಾಸಕ್ತಿಗಳಿಗೆ ಹೆಚ್ಚು ಬೇಗ ಸ್ಪಂದಿಸಬಹುದು ಮತ್ತು ಜವಾಬ್ದಾರಿ ಹೊಂದಿರುತ್ತದೆ.
೨. ಈ ಕಾನೂನುಗಳು ಎರಡು ನಿಯಮಗಳೊಂದಿಗೆ ಎರಡು ಮಾರುಕಟ್ಟೆಗಳ ರಚನೆಗೆ ಕಾರಣವಾಗುತ್ತವೆ. “ಎಪಿಎಂಸಿ ಮಾರುಕಟ್ಟೆ ಪ್ರಾಂಗಣಗಳಲ್ಲಿ ನಿಯಂತ್ರಿತ ಮಾರುಕಟ್ಟೆ ಮತ್ತು ವ್ಯಾಪಾರ ಪ್ರದೇಶದಲ್ಲಿ ಅನಿಯಂತ್ರಿತ ಮಾರುಕಟ್ಟೆ ಸೃಷ್ಟಿಯಾಗುತ್ತದೆ. ಎರಡು ಕೂಡ ವಿಭಿನ್ನ ಕಾರ್ಯಗಳಿಗೆ, ಮಾರುಕಟ್ಟೆ ಶುಲ್ಕದ ವಿಭಿನ್ನ ನಿಯಮಗಳು ಮತ್ತು ವಿಭಿನ್ನ ಗುಂಪುಗಳ ನಿಯಮಗಳ ಸೃಷ್ಟಿ ಈ ಕಾನೂನುಗಳು ಕಾರಣವಾಗುತ್ತವೆ.
೩. ಕಾನೂನುಗಳು ಛಿದ್ರಗೊಂಡ ಮಾರುಕಟ್ಟೆಗಳನ್ನು ಸೃಷ್ಟಿಸುತ್ತವೆ. ಉದಾಹರಣೆಗೆ ಬಿಹಾರ ರಾಜ್ಯವನ್ನು ತೆಗೆದುಕೊಳ್ಳಬಹುದು. ಬಿಹಾರದಲ್ಲಿ 2006 ರಲ್ಲಿ ಎಪಿಎಂಸಿ ಕಾಯ್ದೆಯನ್ನು ತೆಗೆದುಹಾಕಲಾಯಿತು. ಇದರಿಂದಾಗಿ ಅಲ್ಲಿ ರೈತರಿಗೆ ಕಡಿಮೆ ಖರೀದಿದಾರರು ಇದ್ದು ಬೇರೆ ರಾಜ್ಯಗಳಿಗೆ ಹೋಲಿಸಿದರೆ ಬೆಳೆಗಳ ಬೆಲೆಗಳು ಗಮನಾರ್ಹವಾಗಿ ಕಡಿಮೆಯಾಗಿವೆ.
ಇದನ್ನೂ ಓದಿ: ರೈತರ ಹೋರಾಟ ಮುಂದುವರೆಯಲಿ. ಪ್ರತಿಭಟಿಸುವುದು ಸಾಂವಿಧಾನಿಕ ಹಕ್ಕು: ಸುಪ್ರೀಂ ಕೋರ್ಟ್

೪. ಕೃಷಿಯ ಒಪ್ಪಂದದ ಕಾನೂನಿನ ಪ್ರಕಾರ ಮಾರುಕಟ್ಟೆ ಅಸಮಾನತೆ ಇರುವ ಇಬ್ಬರು ವ್ಯವಹಾರ ನಡೆಸುವಂತಾಗುತ್ತದೆ. ಕಾರ್ಪೊರೇಟರ್ ಕಂಪನಿಗಳು ಬರುತ್ತವೆ. ಇವರಿಂದ ರೈತರ ಹಿತಾಸಕ್ತಿಗಳನ್ನು ರಕ್ಷಿಸಲಾಗುವುದಿಲ್ಲ.
೫. ಅಂತಿಮವಾಗಿ, ಈ ಕಾನೂನುಗಳು ದೊಡ್ಡ ಕೃಷಿ ವ್ಯವಹಾರಗಳು ಕೃಷಿಯಲ್ಲಿ ಪ್ರಾಬಲ್ಯದ ಸಾಧಿಸುವ ಬಗ್ಗೆ ಕಳವಳ ಮೂಡಿಸುತ್ತವೆ. ಇಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರು ತಮ್ಮ ಹಿತಾಸಕ್ತಿಯನ್ನು ಬಲಿಕೊಡಬೇಕಾಗುತ್ತದೆ.
ಇದನ್ನೂ ಓದಿ: ಡಾ. ಕಫೀಲ್ ಖಾನ್ ವಿರುದ್ದದ ಅರ್ಜಿ ವಜಾಗೊಳಿಸಿದ ಸುಪ್ರೀಂ: ಯುಪಿ ಸರ್ಕಾರಕ್ಕೆ ಮುಖಭಂಗ
ಹೈದರಾಬಾದ್ ವಿಶ್ವವಿದ್ಯಾಲಯದ ನಿವೃತ್ತ ಪ್ರೊ.ಡಿ.ನರಸಿಂಹ ರೆಡ್ಡಿ, ನವದೆಹಲಿಯ ಸಾಮಾಜಿಕ ವಿಜ್ಞಾನ ಸಂಸ್ಥೆಯ ನಿವೃತ್ತ ಪ್ರೊ.ಕಮಲ್ ನಯನ್ ಕಬ್ರಾ, ತಿರುವನಂತಪುರಂನ ಅಭಿವೃದ್ಧಿ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಮತ್ತು ಕೇರಳ ರಾಜ್ಯ ಯೋಜನಾ ಮಂಡಳಿಯ ಸದಸ್ಯರಾದ ಪ್ರೊ.ಕೆ.ಎನ್. ಹರಿಲಾಲ್, ರೋಹ್ಟಕ್‌ನ ಎಂ.ಡಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಪ್ರೊ.ರಜಿಂದರ್ ಚೌಧರಿ, ಚಂಡೀಗಢದ ಸಿಆರ್‌ಆರ್‌ಐಡಿಯ ಪ್ರೊ.ಸುರಿಂದರ್ ಕುಮಾರ್ ಪತ್ರಕ್ಕೆ ಸಹಿ ಮಾಡಿದ್ದಾರೆ.
ಇನ್ನೂ, ನವದೆಹಲಿಯ ಸಾಮಾಜಿಕ ವಿಜ್ಞಾನ ಸಂಸ್ಥೆಯ ಮಾಲ್ಕಮ್ ಎಸ್. ಆದಿಶೇಶಿಯ ಚೇರ್ ಪ್ರೊಫೆಸರ್ ಪ್ರೊ.ಅರುಣ್ ಕುಮಾರ್, ಅಮೃತಸರದ ಗುರುನಾನಕ್ ದೇವ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಚಂಡೀಗಢದ CRRIDಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕ ಪ್ರೊ.ರಂಜಿತ್ ಸಿಂಗ್ ಘುಮನ್, ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನಲ್ಲಿ ನಬಾರ್ಡ್ ಚೇರ್ ಪ್ರೊಫೆಸರ್ ಪ್ರೊ.ಆರ್.ರಾಮಕುಮಾರ್, ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಸೆಂಟರ್ ಫಾರ್ ಎಕನಾಮಿಕ್ ಸ್ಟಡೀಸ್ ಅಂಡ್ ಪ್ಲಾನಿಂಗ್ (CESP) ಯಲ್ಲಿ ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ವಿಕಾಸ್ ರಾವಲ್ ಮತ್ತು ಹಿಮಾಂಶು ಅರ್ಥಶಾಸ್ತ್ರಜ್ಞರು ಸಹಿ ಮಾಡಿ ಪತ್ರ ಬರೆದಿದ್ದಾರೆ.
ಈ ಹೊಸ ವಿವಾದಾತ್ಮಕ ಕಾನೂನುಗಳನ್ನು ತಿದ್ದುಪಡಿ ಮಾಡುವುದು ಸಾಕಾಗುವುದಿಲ್ಲ, ಅವುಗಳನ್ನು ಹಿಂತೆಗೆದುಕೊಳ್ಳಬೇಕು. ರೈತರ ನಿಜವಾದ ಕಾಳಜಿಯನ್ನು ದಾರಿ ತಪ್ಪಿಸಲಾಗಿದೆ ಎಂದು ಚಿತ್ರಿಸಬಾರದು ಎಂದು ಅರ್ಥಶಾಸ್ತ್ರಜ್ಞರು ಹೇಳುತ್ತಾರೆ.
ಯಾವ ಕ್ರಮಗಳು ರೈತರಿಗೆ ಮತ್ತು ಆರ್ಥಿಕತೆಗೆ ಸಮನಾದ ಮತ್ತು ಸುಸ್ಥಿರ ಲಾಭವನ್ನು ತರುತ್ತವೆ ಎಂಬುದರ ಕುರಿತು ರೈತ ಸಂಘಟನೆಗಳು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಸರ್ಕಾರ ವ್ಯಾಪಕವಾದ ಚರ್ಚೆ ನಡೆಸಬೇಕೆಂದು ಅರ್ಥಶಾಸ್ತ್ರಜ್ಞರು ಕರೆ ನೀಡುತ್ತಾರೆ. ಜೊತೆಗೆ “ಇದು ನಿಜವಾದ ಪ್ರಜಾಪ್ರಭುತ್ವದ ಕೆಲಸ” ಎಂದು ಪತ್ರದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ತೀವ್ರ ಚಳಿಗಾಳಿಯಿಂದಾಗಿ ಪಂಜಾಬ್- ಹರಿಯಾಣ ಗಡಿಯಲ್ಲಿ ಪ್ರತಿಭಟನಾ ನಿರತ ರೈತ ಸಾವು


