ಮೂಲ: ಸ್ವಾತಿ ಶುಕ್ಲಾ
ಅನುವಾದ: ನಿಖಿಲ್ ಕೋಲ್ಪೆ
ಈಕ್ವಡೋರ್ ರಾಜಧಾನಿ ಕ್ವಿಟೋ ಕಳೆದ ಎರಡು ವಾರಗಳಿಂದ ರಣರಂಗವಾಗಿಬಿಟ್ಟಿತ್ತು. ಕಾರಣವೆಂದರೆ, ಇಂಧನ ಸಬ್ಸಿಡಿಯ ಹಿಂತೆಗೆತವನ್ನು ಮೂಲ ನಿವಾಸಿ ಜನರು ಖಂಡತುಂಡವಾಗಿ ಪ್ರತಿಭಟಿಸಿದ್ದರು. ಇಂಧನ ಸಬ್ಸಿಡಿಯನ್ನು ಹಿಂತೆಗೆದುಕೊಂಡಿರುವುದಾಗಿ ಅಧ್ಯಕ್ಷ ಲೆನಿನ್ ಮೊರೆನೊ ಘೋಷಿಸಿದ ಬೆನ್ನಲ್ಲೇ ದೇಶದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಇದೀಗ ಪ್ರತಿಭಟನಕಾರರಿಗೆ ಮಣಿದಿರುವ ಸರಕಾರ, ಐಎಂಎಫ್ ಹೇರಿದ್ದ ಪ್ಯಾಕೇಜನ್ನು ಹಿಂತೆಗೆದುಕೊಂಡಿದೆ.
ಮೊರೆನೊ ಸರಕಾರವು ಪ್ರಸ್ತಾಪಿಸಿದ್ದ ಹಲವಾರು ನವ ‘ಉದಾರವಾದಿ’ ಕ್ರಮಗಳಲ್ಲಿ ತೈಲ ಸಬ್ಸಿಡಿ ಹಿಂತೆಗೆತವೂ ಒಂದಾಗಿತ್ತು. ಮೂಲನಿವಾಸಿ ಗುಂಪುಗಳು ದೇಶದ ಅತ್ಯಂತ ದೊಡ್ಡ ಕಾರ್ಮಿಕ ಸಂಘಟನೆಗಳು ಹಾಗೂ ವಿದ್ಯಾರ್ಥಿ ಚಳವಳಿಗಳ ಜೊತೆ ಸೇರಿ ರಾಷ್ಟ್ರೀಯ ಮುಷ್ಕರವನ್ನು ಆಯೋಜಿಸಿದ್ದು, ಮಿಲಿಟರಿ ಮತ್ತು ಪೊಲೀಸ್ ಪಡೆಗಳು ಅತ್ಯಂತ ದಮನಕಾರಿಯಗಿ ಪ್ರತಿಭಟನೆಯನ್ನು ಬಗ್ಗುಬಡಿಯಲು ಯತ್ನಿಸಿದ್ದವು.
ಮೊದಲಾಗಿ ಇಂಧನ ಸಬ್ಸಿಡಿ ಹಿಂತೆಗೆತದ ವಿರುದ್ಧ ಆರಂಭವಾದ ಪ್ರತಿಭಟನೆಗಳು ಮೂಲನಿವಾಸಿ ಗುಂಪುಗಳ ನೇತೃತ್ವದಲ್ಲಿ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಮತ್ತು ಅದರ ಧಣಿಗಳು ಹೇರಿರುವ ‘ನವ ಉದಾರವಾದಿ’ ಮಾದರಿಯ ವಿರುದ್ಧದ ಪ್ರತಿಭಟನೆಯಾಗಿ ಪರಿವರ್ತನೆಗೊಂಡು ಉಗ್ರರೂಪ ತಳೆಯಿತು.

ಮಾರ್ಚ್ 2019ರಲ್ಲಿ ಐಎಂಎಫ್ ಹಲವು ಶರತ್ತುಗಳೊಂದಿಗೆ ಈಕ್ವಡೋರ್‌ಗೆ 4.2 ಬಿಲಿಯನ್ (420 ಕೋಟಿ) ಡಾಲರ್‌ಗಳ ಸಾಲ ನೀಡಿತ್ತು. ಇಂತಹ ಶರತ್ತುಗಳಲ್ಲಿ ಹಲವು ಅಂತರರಾಷ್ಟ್ರೀಯ ಹಗರಣಗಳನ್ನು ಬಯಲು ಮಾಡಿದ ವೀಕೀಲೀಕ್ಸ್ ಸಂಪಾದಕ ಜೂಲಿಯನ್ ಅಸ್ಸಾಂಜೆಯನ್ನು ಯುಎಸ್‌ಎಗೆ ಬಿಟ್ಟುಕೊಡಬೇಕು ಎಂಬುದೂ ಒಂದಾಗಿತ್ತು.
“ನಾವು ಈಕ್ವಡೋರ್‌ಗೆ ನೆರವಾಗಲು ಇಲ್ಲಿದ್ದೇವೆ. ನಮ್ಮ ಉದ್ದೇಶ ಎಂದರೆ, ಆರ್ಥಿಕತೆಯನ್ನು ಆಧುನಿಕರಣಗೊಳಿಸಲು ಈಕ್ವಡೋರಿಗೆ ನೆರವಾಗಿ, ಸುದೃಢ, ಸುಸ್ಥಿರ ಮತ್ತು ನ್ಯಾಯಸಮ್ಮತ ಅಭಿವೃದ್ಧಿಗೆ ದಾರಿಮಾಡಿಕೊಡುವುದು” ಎಂದು ಐಎಂಎಫ್ ಆಡಳಿತ ಮಂಡಳಿ ತನ್ನ ಎಂದಿನ ಬಂಡವಾಳಶಾಹಿ ಶೈಲಿಯಲ್ಲಿ ಬುರುಡೆ ಬಿಟ್ಟಿತ್ತು. ಇದರ ಬೆನ್ನಲ್ಲೇ ಹಲವಾರು “ಸಂಯಮದ” “ಸುಧಾರಣಾ” ಕ್ರಮಗಳನ್ನು ಹೇರಲಾಗಿತ್ತು.
ಐಎಂಎಫ್ ಜೊತೆ ಕಳೆದ ವರ್ಷ ನಡೆಸಿದ ಒಪ್ಪಂದಕ್ಕೆ ಅನುಗುಣವಾಗಿ ಮೊರೆನೊ ಸರಕಾರ ಸೆಪ್ಟೆಂಬರ್ 30ರಂದು ಪೆಟ್ರೋಲ್ ಮತ್ತು ಡೀಸೆಲ್ ಸಬ್ಸಿಡಿಯನ್ನು ಹಿಂತೆಗೆದುಕೊಂಡಿತ್ತು. ಇದರಿಂದ ಸಹಜವಾಗಿ ಇವೆರಡರ ಬೆಲೆಗಳು ಗಗನಕ್ಕೇರಿದ್ದವು.
ಇಂಧನ ಸಬ್ಸಿಡಿ ಹಿಂತೆಗೆತದ ಅರ್ಥವೆಂದರೆ, ಬಡವರು ಮತ್ತು ದುಡಿಯುವ ವರ್ಗದವರು ಇಂಧನಕ್ಕೆ ಹೆಚ್ಚು ಬೆಲೆ ತೆರಬೇಕಾದರೆ, ಖಾಸಗಿ ಇಂಧನ ಸಂಸ್ಥೆಗಳು ಹೆಚ್ಚು ಲಾಭವನ್ನು ದೋಚಬಹುದು.
“ಸರಕಾರ ಮಾಡಿರುವುದು ಏನೆಂದರೆ, ದೊಡ್ಡ ಬ್ಯಾಂಕುಗಳು, ಬಂಡವಾಳಶಾಹಿಗಳಿಗೆ ಬಹುಮಾನ ನೀಡಿ, ಬಡ ಈಕ್ವಡೋರಿಯನ್ನರಿಗೆ ಶಿಕ್ಷೆ ನೀಡಿರುವುದು” ಎಂದು ಕಾರ್ಮಿಕರ ಸಂಘಟನೆಗಳ ಒಕ್ಕೂಟವಾಗಿರುವ ವರ್ಕರ್ಸ್ ಯುನೈಟೆಡ್ ಫ್ರಂಟ್‌ನ ಮುಖ್ಯಸ್ಥ ಮೆಸಿಯಾಸ್ ಟಟಮುಯೆಸ್ ಹೇಳಿದ್ದಾರೆ.
ಹೆಚ್ಚಿನ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಏಕೆಂದರೆ, ಇಂಧನ ಬೆಲೆ ಏರಿಕೆಯಿಂದ ಆಹಾರ ಮತ್ತು ಸಾರಿಗೆ ದರಗಳು ಗಗನಕ್ಕೇರಿದ್ದು, ಮೂಲ ನಿವಾಸಿ ಜನರು ಎಲ್ಲರಿಗಿಂತಲೂ ಹೆಚ್ಚು ಬಾಧಿತರಾಗಿದ್ದಾರೆ ಎಂದು ಪ್ರತಿಭಟನೆಯ ನಾಯಕರು ಹೇಳುತ್ತಾರೆ.
ಪ್ರತಿಭಟನಕಾರರು ಅಧ್ಯಕ್ಷೀಯ ಅರಮನೆಯ ಸುತ್ತಲಿನ ತಡೆಗಳನ್ನು ಭೇದಿಸಿ ಮುನ್ನುಗ್ಗುವ ವಿಫಲ ಪ್ರಯತ್ನ ನಡೆಸಿದ ಬಳಿಕ ಹೆದರಿದ ಮೊರೆನೊ, ತನ್ನ ಸರಕಾರವನ್ನು, ಆಡಳಿತವನ್ನು ಅಕ್ಟೋಬರ್ 7ರಂದು ಬಂದರು ನಗರ ಗ್ವಾಯಾಗುಲಿಗೆ ಸ್ಥಳಾಂತರಿಸಬೇಕಾಗಿ ಬಂದಿತ್ತು.
ಮಾಜಿ ಅಧ್ಯಕ್ಷ ರಫಾಯೆಲ್ ಕೊರ್ರಿಯಾ ಮೇ, 2017ರಂದು ಅಧಿಕಾರ ತೊರೆದ ಮೇಲೆ ಮೊರೆನೊ ಸರಕಾರ ದೇಶವನ್ನು ಬಲಪಂಥದತ್ತ ಒಯ್ಯುತ್ತಿದೆ. ಈಗ ಮೊರೆನೊ, ಉದ್ಯಮಿಗಳು ಮತ್ತು ಸೇನೆಯ ಬೆಂಬಲ ಹೊಂದಿದ್ದರೂ, ಅವರ ಜನಪ್ರಿಯತೆ 2017ರಲ್ಲಿದ್ದ 70 ಶೇಕಡಾದಿಂದ 30 ಶೇಕಡಾಕ್ಕೆ ಕುಸಿದಿದೆ. ಮೊರೆನೊ ಅಧಿಕಾರಕ್ಕೆ ಬಂದ ಮೇಲೆ ಮಾಜಿ ಅಧ್ಯಕ್ಷ ರಫಾಯೆಲ್ ಕೊರ್ರಿಯಾ ಸರಕಾರ ತಂದಿದ್ದ ಹಲವು ಪ್ರಗತಿಪರ ಕ್ರಮಗಳನ್ನು ಹಿಂತೆಗೆದುಕೊಳ್ಳಲಾಗಿತ್ತು.
ಪ್ರತಿಭಟನೆಯು ಎರಡನೇ ವಾರ ಪ್ರವೇಶಿಸುತ್ತಿದ್ದಂತೆ, ಮೂಲ ನಿವಾಸಿ ಪ್ರತಿಭಟನಕಾರರು ತಾವು ವಶಕ್ಕೆ ತೆಗೆದುಕೊಂಡ ಕೆಲವು ಪೊಲೀಸರನ್ನು ವೇದಿಕೆಯಲ್ಲಿ ಪ್ರದರ್ಶನ ಮಾಡುವ ಮೂಲಕ ಮೊರೆನೊ ಸರಕಾರಕ್ಕೆ ತಾವು ಅಂಜುವುದಿಲ್ಲ ಎಂಬ ದಿಟ್ಟ ಸಂದೇಶ ನೀಡಿದ್ದರು.
ಮೂಲನಿವಾಸಿಗಳ ಪ್ರತಿಭಟನೆಗಳು 1997ರಲ್ಲಿ ಅಬ್ದಲಾ ಬುಕಾರಮ್, 2000ದಲ್ಲಿ ಜಮಿಲ್ ಮಹುವದ್ ಮತ್ತು 2005ರಲ್ಲಿ ಲೂಸಿಯೋ ಗುಟಿಯೆರೆಝ್ ಸಹಿತ ಹಲವಾರು ಅಧ್ಯಕ್ಷರನ್ನು ಅಧಿಕಾರದಿಂದ ಕೆಳಗಿಳಿಸುವುದರಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ.
ಇದೀಗ ಪ್ರತಿಭಟನೆಗೆ ಮಣಿದಿರುವ ಮೊರೆನೊ ಸರಕಾರವು ಮೂಲನಿವಾಸಿಗಳೊಂದಿಗೆ ಬುಧವಾರ ಒಪ್ಪಂದಕ್ಕೆ ಬಂದಿದ್ದು, ಐಎಂಎಫ್ ಹೇರಿಕೆಯ ‘ಸುಧಾರಣಾ ಕ್ರಮ’ಗಳನ್ನು ಹಿಂತೆದುಕೊಳ್ಳಲು ಒಪ್ಪಿದೆ. ಇದರೊಂದಿಗೆ ಆರ್ಥಿಕತೆಯನ್ನು ಸಂಪೂರ್ಣ ನಿಷ್ಕ್ರಿಯಗೊಳಿಸಿ, ಏಳು ಜನರ ಸಾವಿಗೆ ಕಾರಣವಾದ ಹೆಚ್ಚುಕಡಿಮೆ ಎರಡು ವಾರ ಕಾಲದ ಪ್ರತಿಭಟನೆ ಕೊನೆಗೊಳ್ಳಲಿದೆ.
ಒಪ್ಪಂದದ ಪ್ರಕಾರ, ತೈಲ ಬೆಲೆ ತೀವ್ರ ಏರಿಕೆಗೆ ಕಾರಣವಾದ ಡಿಕ್ರಿ 883 ಎಂದು ಕರೆಯಲ್ಪಡುವ ಐಎಂಎಫ್ ಪ್ರೇರಿತ ಪ್ಯಾಕೇಜನ್ನು ಮೊರೆನೊ ಸರಕಾರ ಹಿಂತೆಗೆದುಕೊಳ್ಳಲಿದೆ. ಇದಕ್ಕೆ ಬದಲಾಗಿ, ಪ್ರತಿಭಟನೆ ಮತ್ತು ರಸ್ತೆ ತಡೆಯನ್ನು ಹಿಂತೆಗೆದುಕೊಳ್ಳುವಂತೆ ಮೂಲ ನಿವಾಸಿ ಗುಂಪುಗಳ ನಾಯಕರು ತಮ್ಮ ಬೆಂಬಲಿಗರಿಗೆ ಕರೆ ನೀಡಲಿದ್ದಾರೆ.


