ಅದಾನಿ ಕುರಿತ ವಿಷಯಗಳನ್ನು ತೆಗೆದು ಹಾಕುವಂತೆ ಮಾಧ್ಯಮ ಸಂಸ್ಥೆಗಳಿಗೆ ಆದೇಶ ನೀಡಿರುವ ಬಗ್ಗೆ ಪತ್ರಕರ್ತರ ಸಂಘಟನೆ ‘ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’ ತೀವ್ರ ಕಳವಳ ವ್ಯಕ್ತಪಡಿಸಿದೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಮಂಗಳವಾರ (ಸೆಪ್ಟೆಂಬರ್ 16) ಎರಡು ಮಾಧ್ಯಮ ಸಂಸ್ಥೆಗಳು ಮತ್ತು ಹಲವು ಯೂಟ್ಯೂಬ್ ಚಾನೆಲ್‌ಗಳಿಗೆ ನೋಟಿಸ್ ಜಾರಿ ಮಾಡಿದ್ದು, ಅದಾನಿ ಸಮೂಹವನ್ನು ಉಲ್ಲೇಖಿಸುವ ಒಟ್ಟು 138 ವಿಡಿಯೋಗಳು ಮತ್ತು 83 ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಆದೇಶಿಸಿದೆ ಎಂದು ವರದಿಯಾಗಿದೆ.
ಅದಾನಿ ಎಂಟರ್‌ಪ್ರೈಸಸ್ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ವಾಯುವ್ಯ ದೆಹಲಿ ಜಿಲ್ಲಾ ನ್ಯಾಯಾಲಯವು ಸೆಪ್ಟೆಂಬರ್ 6ರಂದು ಹೊರಡಿಸಿದ ಏಕಪಕ್ಷೀಯ ಆದೇಶವನ್ನು ಆಧರಿಸಿ ಈ ನಿರ್ದೇಶನ ನೀಡಲಾಗಿದೆ ಎಂದು ಮಂಗಳವಾರ ಬರೆದ ಪತ್ರದಲ್ಲಿ ಸಚಿವಾಲಯ ತಿಳಿಸಿರುವುದಾಗಿ ದಿ ವೈರ್ ವರದಿ ಮಾಡಿದೆ.
ಅಲ್ಲದೆ, ಗೌತಮ್ ಅದಾನಿ ಅವರ ಅದಾನಿ ಎಂಟರ್‌ಪ್ರೈಸಸ್ ಬಗ್ಗೆ ಮಾನನಷ್ಟಕರ ವಿಷಯಗಳನ್ನು ಪ್ರಕಟಿಸದಂತೆ ಪತ್ರಕರ್ತರಾದ ಪರಂಜೋಯ್ ಗುಹಾ ಠಾಕೂರ್ತಾ, ರವಿ ನಾಯರ್, ಅಬೀರ್ ದಾಸ್‌ಗುಪ್ತ, ಆಯಸ್ಕಾಂತ್ ದಾಸ್, ಆಯುಷ್ ಜೋಶಿ ಮತ್ತು ವೆಬ್‌ಸೈಟ್‌ಗಳಾದ ಪರಂಜೋಯ್ ಡಾಟ್ ಇನ್, ಅದಾನಿ ವಾಚ್ ಡಾಟ್ ಓಆರ್‌ಜಿ, ಮತ್ತು ಅದಾನಿ ಫೈಲ್ಸ್ ಡಾಟ್ ಕಾಮ್ ಡಾಟ್ ಎಯುಗೆ ಸೆಪ್ಟೆಂಬರ್ 6ರಂದು ನ್ಯಾಯಾಲಯ ನಿರ್ಬಂಧ ವಿಧಿಸಿದೆ ಎಂದು ಲೈವ್‌ಲಾ ವರದಿ ಮಾಡಿದೆ.
ದೆಹಲಿಯ ರೋಹಿಣಿ ನ್ಯಾಯಾಲಯದ ವಿಶೇಷ ಸಿವಿಲ್ ನ್ಯಾಯಾಧೀಶ ಅನುಜ್ ಕುಮಾರ್ ಸಿಂಗ್ ಅವರು ಅದಾನಿ ಎಂಟರ್‌ಪ್ರೈಸಸ್ ಪರವಾಗಿ ತಡೆಯಾಜ್ಞೆ ಹೊರಡಿಸಿದ್ದು, ಪ್ರತಿವಾದಿಗಳು ತಮ್ಮ ಲೇಖನಗಳು ಅಥವಾ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಂದ ವಿಷಯವನ್ನು ತೆಗೆದುಹಾಕುವಂತೆ ನಿರ್ದೇಶಿಸಿದ್ದಾರೆ ಎಂದಿದೆ.
ಮಂಗಳವಾರ ಪ್ರಕಟಣೆ ನೀಡಿರುವ ಎಡಿಟರ್ಸ್ ಗಿಲ್ಡ್, “ಅದಾನಿ ಎಂಟರ್‌ಪ್ರೈಸಸ್ Vs ಪರಂಜೋಯ್ ಗುಹಾ ಠಾಕೂರ್ತಾ ಮತ್ತು ಇತರರು ಪ್ರಕರಣದಲ್ಲಿ ರೋಹಿಣಿ ಜಿಲ್ಲಾ ನ್ಯಾಯಾಲಯವು ಇತ್ತೀಚೆಗೆ ನೀಡಿರುವ ಆದೇಶದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸುತ್ತಿದ್ದೇವೆ. ಈ ಆದೇಶವು ಒಂಬತ್ತು ಪತ್ರಕರ್ತರು, ಮಾಧ್ಯಮ ಸಂಸ್ಥೆಗಳು ಹಾಗೂ ಹೆಸರಿಸದ ಇತರರಿಗೆ ಕಂಪನಿಯ ಬಗ್ಗೆ ‘ಪರಿಶೀಲಿಸದ, ಆಧಾರರಹಿತ ಮತ್ತು ಮೇಲ್ನೋಟಕ್ಕೆ ಅವಹೇಳನಕಾರಿ’ ಎಂದು ಆರೋಪಿತ ವಿಷಯವನ್ನು ಪ್ರಕಟಿಸದಂತೆ ಅಥವಾ ಹಂಚಿಕೆ ಮಾಡದಂತೆ ‘ಜಾನ್ ಡೋ’ ಎಂಬ ತಡೆಯಾಜ್ಞೆಯನ್ನು ಏಕಪಕ್ಷೀಯವಾಗಿ ನೀಡಿದೆ” ಎಂದಿದೆ.
ಮುಂದುವರಿದು, “ಇದಕ್ಕಿಂತಲೂ ಗಂಭೀರವಾದ ವಿಷಯವೆಂದರೆ, ಈ ಆದೇಶವು ಕಾರ್ಪೊರೇಟ್ ಸಂಸ್ಥೆಗೆ (ಅದಾನಿ ಸಮೂಹ) ತಾನು ಅವಹೇಳನಕಾರಿ ಎಂದು ಭಾವಿಸುವ ಯಾವುದೇ ವಿಷಯದ ಯುಆರ್‌ಎಲ್‌ಗಳು ಮತ್ತು ಲಿಂಕ್‌ಗಳನ್ನು ಮಧ್ಯವರ್ತಿಗಳಿಗೆ ಅಥವಾ ಸರ್ಕಾರಿ ಸಂಸ್ಥೆಗಳಿಗೆ ಕಳುಹಿಸುವ ಅಧಿಕಾರವನ್ನು ನೀಡಿದೆ. ಅಂತಹ ವಿಷಯವನ್ನು 36 ಗಂಟೆಗಳ ಒಳಗೆ ತೆಗೆದುಹಾಕಲು ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳು ಕಡ್ಡಾಯವಾಗಿ ಬದ್ಧರಾಗಿರುತ್ತಾರೆ” ಎಂದು ವಿವರಿಸಿದೆ.
“ಇದೇ ರೀತಿಯ ಕಳವಳಕಾರಿ ವಿಷಯವೆಂದರೆ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ವೇದಿಕೆಗಳಿಗೆ ನೋಟಿಸ್ ಜಾರಿಗೊಳಿಸಿದೆ, 138ಕ್ಕೂ ಹೆಚ್ಚು ಯೂಟ್ಯೂಬ್ ಲಿಂಕ್‌ಗಳನ್ನು ಮತ್ತು 83 ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ತೆಗೆದುಹಾಕಲು ಆದೇಶಿಸಿದೆ. ಈ ಕಾರ್ಯನಿರ್ವಾಹಕ ಅಧಿಕಾರದ ವಿಸ್ತರಣೆಯು ಖಾಸಗಿ ಸಂಸ್ಥೆಗೆ ತಮ್ಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವ ವಿಷಯವು ಅವಹೇಳನಕಾರಿ ಎಂದು ನಿರ್ಧರಿಸುವ ಅಧಿಕಾರವನ್ನು ಪರಿಣಾಮಕಾರಿಯಾಗಿ ನೀಡಿದೆ, ಇದು ವಿಷಯವನ್ನು ತೆಗೆದುಹಾಕಲು ಆದೇಶಿಸುವ ಅಧಿಕಾರವನ್ನು ವಿಸ್ತರಿಸುತ್ತದೆ” ಎಂದಿದೆ.
Statement on Delhi Court’s Adani Takedown Order pic.twitter.com/3oXFiEnOxv
— Editors Guild of India (@IndEditorsGuild) September 17, 2025
“ಒಂದು ಕಾರ್ಪೊರೇಟ್ ಸಂಸ್ಥೆಗೆ ಇಂತಹ ವ್ಯಾಪಕ ಅಧಿಕಾರ ನೀಡಿರುವುದು, ಜೊತೆಗೆ ಸಚಿವಾಲಯ ವಿಷಯವನ್ನು ತೆಗೆದುಹಾಕಲು ಆದೇಶ ನೀಡಿರುವುದು ಸೆನ್ಸಾರ್‌ಶಿಪ್‌ನತ್ತ ಒಂದು ಹೆಜ್ಜೆಯಾಗಿದೆ. ಇವು ಕಾನೂನುಬದ್ಧ ವರದಿಗಾರಿಕೆ, ವಿಮರ್ಶೆ ಮತ್ತು ವ್ಯಂಗ್ಯವನ್ನು ತಡೆಯುವ ಅಪಾಯವನ್ನು ಒಡ್ಡುತ್ತವೆ, ಹಾಗೂ ಭಾಷಣ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ದುರ್ಬಲಗೊಳಿಸುತ್ತವೆ” ಎಂದು ಎಡಿಟರ್ಸ್ ಗಿಲ್ಡ್ ಕಳವಳ ವ್ಯಕ್ತಪಡಿಸಿದೆ.
“ಮಾನನಷ್ಟ ಆರೋಪಗಳನ್ನು ಸೂಕ್ತ ಕಾನೂನು ಪ್ರಕ್ರಿಯೆಯ ಮೂಲಕ ಪರಿಹರಿಸಬೇಕು, ಏಕಪಕ್ಷೀಯ ತಡೆಯಾಜ್ಞೆಗಳ ಮೂಲಕವಲ್ಲ. ಇವು ಪೂರ್ವ ನಿರ್ಬಂಧಕ್ಕೆ ಸಮಾನವಾಗಿರುತ್ತವೆ ಎಂದು ಎಡಿಟರ್ಸ್ ಗಿಲ್ಡ್ ನ್ಯಾಯಾಂಗಕ್ಕೆ ಮನವಿ ಮಾಡಿದೆ. ಇದಲ್ಲದೆ, ಖಾಸಗಿ ವ್ಯಾಜ್ಯಗಾರರಿಗೆ ಸಿವಿಲ್ ವಿವಾದಗಳಲ್ಲಿ ಕಾರ್ಯಗತಗೊಳಿಸುವ ಶಕ್ತಿಯಾಗಿ ಕಾರ್ಯನಿರ್ವಹಿಸದಂತೆ ಸರ್ಕಾರವು ಅತ್ಯಂತ ಸಂಯಮವನ್ನು ವಹಿಸಬೇಕೆಂದು ಗಿಲ್ಡ್ ಕರೆ ನೀಡಿದೆ.
“ಸ್ವತಂತ್ರ ಮತ್ತು ನಿರ್ಭೀತ ಪತ್ರಿಕಾ ವ್ಯವಸ್ಥೆಯು ಪ್ರಜಾಪ್ರಭುತ್ವಕ್ಕೆ ಅತ್ಯಗತ್ಯವಾಗಿದೆ. ಖಾಸಗಿ ಹಿತಾಸಕ್ತಿಗಳಿಗೆ ಏಕಪಕ್ಷೀಯವಾಗಿ ಟೀಕಾತ್ಮಕ ಅಥವಾ ಅನಾನುಕೂಲಕರ ಧ್ವನಿಗಳನ್ನು ಮೌನಗೊಳಿಸಲು ಅವಕಾಶ ನೀಡುವ ಯಾವುದೇ ವ್ಯವಸ್ಥೆಯು, ಸಾರ್ವಜನಿಕರಿಗೆ ತಿಳಿಯುವ ಹಕ್ಕಿಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ” ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಹೇಳಿದೆ.
ಅದಾನಿ ಕುರಿತ ಪೋಸ್ಟ್ ತೆಗೆದು ಹಾಕಲು ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಆದೇಶ; ವರದಿ


