ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್ ಮತ್ತು ಮಣಿಪುರದಲ್ಲಿ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಫೆಬ್ರವರಿ 8 ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರ ಮತ ನೀಡುವಂತೆ ಮತದಾರರನ್ನು ಒಲಿಸಿಕೊಳ್ಳಲು ಭಾರಿ ಕಸರತ್ತು ನಡೆಸುತ್ತಿವೆ.
ಐದು ರಾಜ್ಯಗಳ ಚುನಾವಣಾ ಕಣದ ಇಂದಿನ ಪ್ರಮುಖ ಅಂಶಗಳು ಹೀಗಿವೆ:
1. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಲು ನಿರ್ಧರಿಸಿತ್ತು. ಆದರೆ, ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪ್ರಣಾಳಿಕೆ ಬಿಡುಗಡೆಯನ್ನು ಮುಂದೂಡಿದೆ.
2. ಪಂಜಾಬ್ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಸಿಎಂ ಅಭ್ಯರ್ಥಿ ಚರಣ್ ಜಿತ್ ಚನ್ನಿ ಎಂದು ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಘೋಷಿಸಿದ್ದಾರೆ.
3. ಪಂಜಾಬ್ ಕಾಂಗ್ರೆಸ್‌ನ ಉಪಾಧ್ಯಕ್ಷರಾಗಿರುವ ಸುನೀಲ್ ಜಾಖರ್ ಅವರು ರಾಜಕೀಯ ನಿವೃತ್ತಿ ಪಡೆಯಲಿದ್ದಾರೆ ಎಂದು ಎಎಪಿ ಬಂಡಾಯ ಶಾಸಕ ಕನ್ವರ್ ಸಂಧು ಟ್ವೀಟ್ ಮಾಡಿದ್ದಾರೆ. ಆದರೆ, ಕಾಂಗ್ರೆಸ್‌ನಿಂದ ಯಾವುದೇ ಸ್ಪಷ್ಟನೆ ದೊರೆತಿಲ್ಲ.
4. ಕೊರೊನಾ ಹಿನ್ನೆಲೆಯಲ್ಲಿ ಐದು ರಾಜ್ಯಗಳಲ್ಲಿಯೂ ದೈಹಿಕ ಪ್ರಚಾರವನ್ನು ನಿರ್ಬಂಧಿಸಿದ್ದ ಚುನಾವಣಾ ಆಯೋಗ, ಭಾನುವಾರ ನಿರ್ಬಂಧಗಳನ್ನು ಸಡಿಸಿಲಿದೆ. ಸೈಕಲ್ ಜಾಥಾ, ವಾಹನ ರ್‍ಯಾಲಿ, ರೋಡ್ ಶೋಗಳ ಮೇಲಿನ ನಿರ್ಬಂಧಗಳು ಮುಂದುವರಿಯಲಿದ್ದು, ಒಳಾಂಗಣ, ಹೋರಾಂಗಣ ಸಭೆ, ಸಮಾವೇಶಗಳಿಗೆ ಅನುಮತಿ ನೀಡಲಾಗಿದೆ.
ಇದನ್ನೂ ಓದಿ: ಪಂಜಾಬ್ ಚುನಾವಣೆ: ಚರಣ್‌ಜಿತ್ ಸಿಂಗ್ ಚನ್ನಿ ಕಾಂಗ್ರೆಸ್ ಸಿಎಂ ಅಭ್ಯರ್ಥಿ- ರಾಹುಲ್ ಗಾಂಧಿ ಘೋಷಣೆ
5. ಮಣಿಪುರದಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇದು ಮಣಿಪುರದ ಉಳಿವು ಮತ್ತು ಪುನರುಜ್ಜೀವನಕ್ಕಾಗಿ ಕಾಂಗ್ರೆಸ್ ಶ್ರಮಿಸಲಿದೆ. ಅಲ್ಲದೆ, ರಾಜ್ಯದ ಅಭಿವೃದ್ಧಿಯನ್ನು ಉನ್ನತ ಮಟ್ಟಕ್ಕೇರಿಸುವ ಪ್ರಣಾಳಿಕೆ ಇದಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
6. ಮಣಿಪುರದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಇಂಫಾಲ್ ಪೂರ್ವ ಜಿಲ್ಲೆಯ ಹೀಂಗಾಂಗ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅವರು ಹೀಂಗಾಂಗ್ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಜಯಗಳಿಸಿದ್ದು, ಇದೀಗ ಅವರು ಐದನೇ ಅವಧಿಗೆ ಚುನಾವಣೆಯನ್ನು ಎದುರಿಸಲಿದ್ದಾರೆ.
7. ಗೋವಾ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಗೋವಾದಲ್ಲಿ 2018ರಿಂದ ಸ್ಥಗಿತಗೊಂಡಿರುವ ಗಣಿಗಾರಿಕೆಯನ್ನು ಮರಳಿ ಆರಂಭಿಸುವುದಾಗಿ ಭರವಸೆ ನೀಡಿದೆ. ಗೋವಾದ ಪ್ರಮುಖ ಆದಾಯ ಮೂಲಗಳಲ್ಲಿ ಗಣಿಗಾರಿಕೆಯೂ ಒಂದಾಗಿದೆ.
8. ಗೋವಾದ 20 ವಿಧಾನಸಭಾ ಕ್ಷೇತ್ರಗಳನ್ನು ಉದ್ದೇಶಿಸಿ ಬಿಜೆಪಿ ಆಯೋಜಿಸಿರುವ ವರ್ಚುವಲ್ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿ ಮಾತನಾಡಿದ್ದಾರೆ. ಅವರು, ಡಬಲ್ ಇಂಜಿನ್ ಬಿಜೆಪಿ ಸರ್ಕಾರಗಳು ಗೋವಾದ ಜನರಿಗೆ ಸ್ಥಿರತೆ ಮತ್ತು ಉತ್ತಮ ಆಡಳಿತವನ್ನು ನೀಡಿದೆ. ಮುಂದೆಯೂ ನೀಡುತ್ತದೆ ಎಂದು ಹೇಳಿದ್ದಾರೆ.
9. ಕಾಂಗ್ರೆಸ್ ಮುಖಂಡ ಹರೀಶ್ ರಾವತ್ ಅವರ ಮಾರ್ಪ್ ಮಾಡಿದ ಚಿತ್ರವನ್ನು ಟ್ವೀಟ್ ಮಾಡಿದ್ದ ಬಿಜೆಪಿ, ರಾವತ್ ಅವರನ್ನು ಮುಸ್ಲಿಂ ಧರ್ಮಗುರು ಎಂದು ಬರೆದಿತ್ತು. ಇದು ಪ್ರಚೋದನಾಕಾರಿ ಮತ್ತು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಹೇಳಿರುವ ಚುನಾವಣಾ ಆಯೋಗ, ಉತ್ತರಾಖಂಡ ಬಿಜೆಪಿಗೆ ನೋಟಿಸ್ ನೀಡಿದೆ. ಬಿಜೆಪಿ ಟ್ವೀಟ್ ಅಳಿಸಿದೆ.
ಇದನ್ನೂ ಓದಿ: ತಮಿಳುನಾಡು ಸ್ಥಳೀಯ ಚುನಾವಣೆಯಲ್ಲಿ BJP ಸೇರಿದಂತೆ ಯಾರ ಜೊತೆಯೂ ಮೈತ್ರಿಯಿಲ್ಲ; ಏಕಾಂಗಿ ಹೋರಾಟ: ಎಐಎಡಿಎಂಕೆ


