ಸಂಪಾದಕೀಯ |
ಹೆದರಿಕೊಳ್ಳಬೇಕಿಲ್ಲ. ದೀರ್ಘವಾದ ಯಾವುದೇ ಕೆಲಸಕ್ಕೂ ಸಹನೆಯಿಲ್ಲದ ಮನೋಭಾವ ಇಂದಿನ ದಿನಮಾನದ್ದು. ಯಾವುದೂ ದೀರ್ಘವಾಗಬಾರದು, ಸ್ವಲ್ಪವೂ ಬೋರ್ ಎನಿಸಬಾರದು, ಎಲ್ಲವೂ ಇನ್‍ಸ್ಟಂಟ್ ಆಗಿರಬೇಕು. ಹಾಗಿರುವಾಗ ಸುದೀರ್ಘ ಕಾಲದ ಪ್ರಕ್ರಿಯೆಯೊಂದಕ್ಕೆ ಸಿದ್ಧರಾಗಲೇಬೇಕು ಎಂದುಕೊಂಡರೆ, ಓದುಗರು ಹೆದರಿಕೊಳ್ಳುವ ಸಾಧ್ಯತೆ ಇದೆ. ಇಲ್ಲ, ಹೆದರಿಕೊಳ್ಳಬೇಕಿಲ್ಲ.
ಏಕೆಂದರೆ, ಆಗಲೇ ಪರಿಸ್ಥಿತಿ ಕೈ ಮೀರಿ ಹೋಗಿದೆ. ನಾವು ಬದುಕುತ್ತಿರುವ ಭೂಮಿಯನ್ನು, ಲಕ್ಷ ಲಕ್ಷ ವರ್ಷಗಳಿಂದ ಉಳಿದುಕೊಂಡು ಬಂದಿದ್ದ ಭೂಮಿಯನ್ನು ಕೇವಲ 100 ವರ್ಷಗಳಲ್ಲಿ ಹಿಂದೆಂದೂ ಇಲ್ಲದ ಪ್ರಮಾಣದಲ್ಲಿ ಹಾಳು ಮಾಡಿದ್ದೇವೆ.
ಹಾಗಾಗಿ ತುರ್ತಾಗಿ ಏನೋ ಮಾಡಿ ಇದನ್ನು ಒಮ್ಮಿಂದೊಮ್ಮೆಗೇ ಸುಧಾರಿಸಲೂ ಸಾಧ್ಯವಿಲ್ಲ. ಮೊದಲಿಗೆ ಇನ್ನಷ್ಟು ಹಾಳುಗೆಡವುವುದನ್ನು ಕಡಿಮೆ ಮಾಡಿಕೊಳ್ಳಬೇಕು. ಭೂಮಿಗೆ ಜ್ವರ ಬರಿಸಿರುವುದರಿಂದ, ಅದರ ತಾಪವನ್ನು ತಡೆದುಕೊಳ್ಳಲೇಬೇಕು, ಬೇರೆ ದಾರಿಯಿಲ್ಲ. ಇದನ್ನು ತಂಪಾಗಿಸಲು, ಪುನಶ್ಚೇತನಗೊಳಿಸಲು ದೃಢವಾದ ದೀರ್ಘಕಾಲಿಕ ಹೆಜ್ಜೆಗಳನ್ನಿಡಬೇಕು.
ಚುನಾವಣಾ ಕಾವು ಸಹಾ ಭೂಮಿಯ ಜ್ವರವನ್ನು ಏರಿಸಿದೆಯೆಂದರೆ ಆಶ್ಚರ್ಯವಾಗಬಹುದು. ಹೌದು, ಚುನಾವಣೆಯ ಸಂದರ್ಭದಲ್ಲಿ ತೀವ್ರವಾಗಿ ಕಾಡುತ್ತಿರುವ ಬರ ಸಹಾ ಯಾರಿಗೂ (ಬರಪೀಡಿತವಾದ ಪ್ರದೇಶಗಳ ರೈತರಿಗೂ) ಒಂದು ಪ್ರಮುಖ ವಿಷಯವೆನಿಸಿಲ್ಲ. ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‍ಗಳೆರಡೂ ‘ತಾಪಮಾನ ಏರಿಕೆ’ಯ ಕುರಿತು ತಮ್ಮ ಪ್ರಣಾಳಿಕೆಗಳಲ್ಲಿ ಪ್ರಸ್ತಾಪಿಸಿವೆ. ನಿರ್ದಿಷ್ಟವಾದ ಕೆಲವು ಅಂಶಗಳೂ ಅವುಗಳಲ್ಲಿವೆ. ಕಾಂಗ್ರೆಸ್ ಪಕ್ಷವು ಬಿಜೆಪಿಗಿಂತ ಒಂದೆರಡು ಹೆಜ್ಜೆ ಮುಂದಿದ್ದು, ಮಹಾರಾಷ್ಟ್ರದ ಕಾಂಗ್ರೆಸ್ ಘಟಕವು, ಏಪ್ರಿಲ್ 8ರಂದು ಪ್ರತ್ಯೇಕ ಪರಿಸರ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದೆ.
ಆದರೆ, ಈ ಎಲ್ಲಾ ಭರವಸೆಗಳೂ ಸಹಾ ಪರಿಣಾಮಕಾರಿಯಾದ ಫಲಿತಾಂಶಗಳಾಗಿ ಮುಂದಿನ ದಿನಗಳಲ್ಲಿ ಸಾಕಾರಗೊಳ್ಳುತ್ತವೆಂಬ ನಂಬಿಕೆ ಯಾರಿಗೂ ಇಲ್ಲ. ಅಷ್ಟೇ ಅಲ್ಲದೇ, ಈ ಕ್ರಮಗಳಷ್ಟೇ ಭೂಮಿಯನ್ನು ಉಳಿಸಲು ಸಾಧ್ಯವೂ ಇಲ್ಲ.
ಜನಸಂಖ್ಯೆಯ ಬಹಳಷ್ಟು ಜನರು ತೊಡಗಿಕೊಂಡಿರುವ ಕೃಷಿಯಿಂದ ಹಿಡಿದು, ಬೆರಳೆಣಿಕೆಯ ಕುಟುಂಬಗಳಿಗೆ ಭಾರೀ ಲಾಭ ತಂದುಕೊಡುವ ಉದ್ದಿಮೆಗಳವರೆಗೆ ಎಲ್ಲವೂ ಪರಿಸರ, ಅಂತರ್ಜಲ ಮತ್ತು ಗಾಳಿಯನ್ನು ಮನುಕುಲಕ್ಕೆ ಅಪಾಯಕಾರಿಯನ್ನಾಗಿಸುತ್ತಿದೆ. ಕರ್ನಾಟಕದಂತಹ ರಾಜ್ಯವು ಕಳೆದ 19 ವರ್ಷಗಳಲ್ಲಿ 16 ವರ್ಷಗಳು, ತನ್ನ ಭೂಭಾಗದ ಅರ್ಧದಷ್ಟು ಪ್ರದೇಶದಲ್ಲಿ ಬರ ಕಂಡಿದೆ. ಹೀಗಿರುವಾಗ ನಮಗೆ ಭಾರೀ ತೊಂದರೆ ಕಾದಿದೆಯೆಂಬ ಅಪಾಯದ ಭಾವವನ್ನು ಎಲ್ಲರೂ ತಳೆಯದೇ ಇದಕ್ಕೆ ಪರಿಹಾರವೆಲ್ಲಿಯದು?
ಕನಿಷ್ಠ ಚುನಾವಣೆಯ ನಂತರವಾದರೂ, ಈ ನಿಟ್ಟಿನಲ್ಲಿ ಸಮರೋಪಾದಿ ಕೆಲಸಗಳಾಗಬೇಕು. ಈಗಾಗಲೇ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವವರ ಜೊತೆ ಕೈ ಜೋಡಿಸಬೇಕು. ಇದೇ ಮೇ 17ರಿಂದ 19ರವರೆಗೆ ತುಮಕೂರು ಜಿಲ್ಲೆಯ ಸಮತಾ ವಿದ್ಯಾಲಯದ ಆವರಣದಲ್ಲಿ ಆಸಕ್ತರಿಗೆ ಒಂದು ಕಾರ್ಯಾಗಾರವನ್ನು ಪ್ರೊ.ರವಿವರ್ಮಕುಮಾರ್ ಹಾಗೂ ಪ್ರೊ.ಯತಿರಾಜುರಂತಹ ಹಿರಿಯರು ಆಯೋಜಿಸುತ್ತಿದ್ದಾರೆ. ನೀರಿನ ತಜ್ಞ ರಾಜೇಂದ್ರ ಸಿಂಗ್ ಸಹಾ ಅಲ್ಲಿಗೆ ಬರುತ್ತಿದ್ದಾರೆ. ಇಂತಹ ಎಷ್ಟೋ ಪ್ರಯತ್ನಗಳು ಆಗುವ ಅಗತ್ಯವಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕರಿಗೌಡರು ತಮ್ಮ ವ್ಯಾಪ್ತಿಯ ಕೆರೆಗಳ ಹೂಳೆತ್ತಿಸುವುದನ್ನು ಆದ್ಯತೆಯ ವಿಷಯವನ್ನಾಗಿಸಿಕೊಂಡಿದ್ದಾರೆ. ಇಂತಹುದೇ ಕೆಲಸವನ್ನು ಮಾರುತಿ ಪ್ರಸನ್ನ ಎಂಬ ತಹಸೀಲ್ದಾರರು ಮಂಡ್ಯ ತಾಲೂಕಿನಲ್ಲಿ ಮಾಡಿದ್ದರು. ಕಲಬುರಗಿ ಜಿಲ್ಲೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ವತಿಯಿಂದ ನರೇಗಾ ಮೂಲಕವೇ ಕೆರೆಗಳನ್ನು ಸಂಪನ್ನಗೊಳಿಸುವ ಕೆಲಸವನ್ನು ಮಾಡಲಾಗಿತ್ತು. ಹೋರಾಟಗಾರ್ತಿ ಕೆ.ನೀಲಾರಂಥವರು ಅದರ ಪ್ರೇರಕ ಶಕ್ತಿಯಾಗಿದ್ದರು. ಹಾಸನದಲ್ಲಿ ರೂಪಾ ಹಾಸನ, ಅಧಿಕಾರಿ ಎಚ್.ಎಲ್.ನಾಗರಾಜು ಅವರುಗಳೂ ರಚನಾತ್ಮಕವಾದ ಈ ಕೆಲಸಗಳಲ್ಲಿ ಮುಂಚೂಣಿ ಪಾತ್ರ ವಹಿಸಿದ್ದರು. ಸರ್ಕಾರ ಮತ್ತು ಜನರು ಜೊತೆಗೂಡಬಹುದಾದ ಬಹಳ ಮುಖ್ಯವಾದ ಕ್ಷೇತ್ರ ಇದು.
ಆದರೆ, ನಮ್ಮ ಹೆಚ್ಚಿನ ಜನಪ್ರತಿನಿಧಿಗಳು ಮತ್ತು ಅಧಿಕಾರಶಾಹಿಯು ಸಾಮಾನ್ಯವಾಗಿ ಇಂಥವನ್ನು ಹಾಳುಗೆಡಹುವ ಯೋಜನೆಗಳನ್ನೇ ರೂಪಿಸುತ್ತಾರೆ. ಪ್ರಾಮಾಣಿಕರೆಂದು ಹೆಸರು ಮಾಡಿರುವವರು ರೂಲ್ ಪುಸ್ತಕವನ್ನಿಟ್ಟುಕೊಂಡು ತೊಂದರೆ ಕೊಡಲು ಸಾಧ್ಯವಿರುವುದನ್ನೆಲ್ಲಾ ಮಾಡುತ್ತಾರೆ. ಪಾರ್ಲಿಮೆಂಟ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗ್ರಾಮೀಣಾಭಿವೃದ್ಧಿ ಸಚಿವರು, ‘ಹೇಗೂ ಕರ್ನಾಟಕದ ಚುನಾವಣೆ ಮುಗಿದಿದೆ. ಬರಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲು ಜಿ.ಪಂ ಸಿಇಓಗಳ ಸಭೆ ಕರೆಯಬೇಕು’ ಎಂದರೆ ಚುನಾವಣಾ ಆಯೋಗ ಬಿಡುತ್ತಿಲ್ಲವಂತೆ.
ನಾವಿರುವ ಪರಿಸರ, ನೆಲ, ಜಲಗಳನ್ನು ಸಂರಕ್ಷಿಸುವುದು ಮುಂದಿನ ದಿನಗಳಲ್ಲಿ ಎಲ್ಲಾ ಪಂಥೀಯರ, ವರ್ಗ ಜಾತಿ ಧರ್ಮ ಲಿಂಗಗಳ ಜನರ ಆದ್ಯತೆಯಾಗದೇ ಉಳಿಗಾಲವಿಲ್ಲ. ಅದರಲ್ಲೂ ರಾಜಸ್ತಾನದ ನಂತರ ಅತ್ಯಂತ ಹೆಚ್ಚು ಬರಪೀಡಿತ ಪ್ರದೇಶವನ್ನು ಹೊಂದಿರುವ ಕರ್ನಾಟಕವು ಎಚ್ಚೆತ್ತುಕೊಳ್ಳಬೇಕಿದೆ. ಶಿರಾದಲ್ಲಿ ನಡೆಯುತ್ತಿರುವ ಶಿಬಿರವು ಚೈತನ್ಯವುಳ್ಳ ಯುವಜನರನ್ನು ಸಿದ್ಧಗೊಳಿಸಿ, ಕರ್ನಾಟಕವನ್ನು ಜಾಗೃತಿಗೊಳಿಸಲಿ ಎಂಬ ಆಶಯ ನಮ್ಮದು.


