Homeಅಂಕಣಗಳುಬದುಕು ಮತ್ತು ಅನುಭವಕ್ಕೆ ಅಲ್ಪನಿಷ್ಠೆಯ ಭೈರಪ್ಪನ ಕುರಿತು 

ಬದುಕು ಮತ್ತು ಅನುಭವಕ್ಕೆ ಅಲ್ಪನಿಷ್ಠೆಯ ಭೈರಪ್ಪನ ಕುರಿತು 

- Advertisement -
- Advertisement -

ಗೌರಿ ಲಂಕೇಶ್|

ಭೈರಪ್ಪನವರ ಸಾಹಿತ್ಯ ಮತ್ತು ಜೀವನ ದರ್ಶನಗಳ ಬಗ್ಗೆ ವಸ್ತುನಿಷ್ಠವಾಗಿ ಚರ್ಚಿಸುವ ಅಗತ್ಯತೆ ಇದ್ದೇ ಇದೆ. ಯಾಕೆಂದರೆ ಭೈರಪ್ಪನವರ ಸಾಹಿತ್ಯಿಕ ಜನಪ್ರಿಯತೆಯನ್ನೇ ಅವರು ಎತ್ತಿ ಹಿಡಿಯುವ ಬ್ರಾಹ್ಮಣೀಯ ಮೌಲ್ಯಗಳಿಗೆ ಸಿಗುತ್ತಿರುವ ಜನಮನ್ನಣೆ ಎಂದು ಕೆಲವರು ಅರ್ಥೈಸುತ್ತಿದ್ದಾರೆ. ಇಲ್ಲಿ ಆರಂಭದಲ್ಲೇ ಒಂದೆರಡು ವಿಷಯಗಳನ್ನು ಸ್ಪಷ್ಟಪಡಿಸುವ ಅಗತ್ಯವಿದೆ. ನಾನು ಭೈರಪ್ಪನವರ ಸಾಹಿತ್ಯಿಕ ಪ್ರತಿಭೆಯನ್ನು ನಿರಾಕರಿಸುವುದಿಲ್ಲ. ಅವರು ಬಳಸುವ ಭಾಷೆ ನನಗೆ ವಿಭಿನ್ನವಾಗಿ ಕಂಡರೂ ಅವರು ಪಾತ್ರಗಳನ್ನು, ಸಂದರ್ಭಗಳನ್ನು ಮತ್ತು ಸನ್ನಿವೇಶಗಳನ್ನು ಸಮಗ್ರವಾಗಿ ಚಿತ್ರಿಸುವಲ್ಲಿ ಎಷ್ಟು ಯಶಸ್ವಿಯಾಗುತ್ತಾರೆಂದರೆ ಅವರ ಕೃತಿಗಳು ಸುಲಭವಾಗಿ ಓದಿಸಿಕೊಂಡು ಹೋಗುತ್ತವೆ. ಅಂತಹ ಕೃತಿಗಳಲ್ಲಿ ಅವರ `ಗೃಹಭಂಗ’ ಒಂದು. ಇತ್ತೀಚೆಗೆ ನಾನು ಮತ್ತೊಮ್ಮೆ ಇದನ್ನು ಓದಿದಾಗ ಬೆರಗಾಗಿದ್ದೆ. ಇಂತಹ ಉತ್ತಮ ಕೃತಿ ಬರೆದ ಭೈರಪ್ಪನವರು ಅದು ಹೇಗೆ `ಕವಲು’ ತರಹದ ಕೆಟ್ಟ ಕಾದಂಬರಿ ಬರೆಯಲು ಸಾಧ್ಯ ಎಂದು ನನಗೆ ಅಚ್ಚರಿ ಆಗಿತ್ತು.

ಇರಲಿ, ಭೈರಪ್ಪನವರ ಸಮಗ್ರ ಸಾಹಿತ್ಯಕ್ಕೆ ಬರುವುದಾದರೆ ಅವರ ಕೃತಿಗಳನ್ನು ಓದಿ ಮುಗಿಸಿದನಂತರ ಸಾಮಾನ್ಯ ಓದುಗರಲ್ಲಿ ಒಂದು ಒಳ್ಳೆಯ ಕತೆಯನ್ನು ಓದಿದ ಅನುಭವವಾಗುತ್ತದೆಯೇ ಹೊರತು ಆ ಕತೆಯ ಆಳದಲ್ಲಿ ಅಡಗಿರುವ ಅವರ ಜನವಿರೋಧಿ ಮತ್ತು ಮಹಿಳಾ ವಿರೋಧಿ ನಿಲುವುಗಳಾಗಲಿ ಅಥವಾ ಪುರೋಹಿತಶಾಹಿಯನ್ನು ಎತ್ತಿಹಿಡಿಯುವ ಅವರ ಸಿದ್ಧಾಂತವಾಗಲಿ ಓದುಗರ ಗ್ರಹಿಕೆಗೆ ಸಿಗುವುದಿಲ್ಲ. ಅದಕ್ಕೆ ಉತ್ತಮ ಉದಾಹರಣೆ `ವಂಶವೃಕ್ಷ.’
`ವಂಶವೃಕ್ಷ’ ಕಾದಂಬರಿಯಲ್ಲಿ `ಕವಲು’ ಕಾದಂಬರಿಯಲ್ಲಿರುವಂತಹ ಪೇಲವ ಪಾತ್ರಗಳಾಗಲಿ, ಅಸೂಕ್ಷ್ಮ ಭಾವಸಂಬಂಧಗಳಾಗಲಿ, ಸರಳ ರೇಖೆಯಂಥ ಕಾರ್ಡ್‍ಬೋರ್ಡ್ ವ್ಯಕ್ತಿತ್ವಗಳಾಗಲೀ ಇಲ್ಲ. ಆದ್ದರಿಂದ ಮೇಲುನೋಟಕ್ಕೆ ಇದೊಂದು ಒಳ್ಳೆಯ ಕೃತಿಯಂತೆ ಸಾಮಾನ್ಯ ಓದುಗರಿಗೆ ಭಾಸವಾಗುತ್ತದೆ. ಅದರಲ್ಲೂ ಕಾತ್ಯಾಯಿನಿ ಎಂಬ ಯುವ ವಿಧವೆ ಬ್ರಾಹ್ಮಣೀಯ ಕಟ್ಟುಪಾಡುಗಳನ್ನು ವಿರೋಧಿಸಿ ಹೊಸ ಬದುಕು ಕಂಡುಕೊಳ್ಳುವ ಪ್ರಯತ್ನವೂ ಕ್ರಾಂತಿಕಾರಿಯಾಗಿಯೇ ಕಾಣಿಸುತ್ತದೆ. ಅಷ್ಟೇ ಮುಖ್ಯವಾಗಿ ಕಾದಂಬರಿಯ ಅಂತ್ಯದಲ್ಲಿ ಆಕೆಯ ಸಂಪ್ರದಾಯಸ್ಥ ಮಾವ ಶ್ರೋತ್ರಿಗೇ ತನ್ನ ಹುಟ್ಟು ಪರಿಶುದ್ಧವಾಗಿರಲಿಲ್ಲವಾದ್ದರಿಂದ ವಂಶ ಎಂಬ ವೃಕ್ಷದ ಪವಿತ್ರತೆಯೆ ಅರ್ಥಹೀನವಾಗಿ ಕಾಣಿಸುವುದೂ ಚಾರಿತ್ರಿಕವಾಗಿ ಭಾಸವಾಗುತ್ತದೆ. ಆದರೆ ಆಳದಲ್ಲಿ `ವಂಶವೃಕ್ಷ’ ಕಾದಂಬರಿ ಏನನ್ನು ಹೇಳುತ್ತಿದೆ ಎಂದು ನೋಡುವುದು ಮುಖ್ಯವಾಗುತ್ತದೆ, ಯಾಕೆಂದರೆ ಬ್ರಾಹ್ಮಣಿಕೆಯ ಕಟ್ಟುಪಾಡುಗಳನ್ನು ವಿರೋಧಿಸುವ ಕಾತ್ಯಾಯಿನಿ `ಸತತ ಗರ್ಭಪಾತಕ್ಕೆ’ ತುತ್ತಾಗುತ್ತಾಳೆ; ತಾನು ತಪ್ಪು ಮಾಡಿದೆ, ಪಾಪ ಮಾಡಿದೆ ಎಂಬ ಕೊರಗಿನಲ್ಲೇ ಸಾಯುತ್ತಾಳೆ. ಅದರರ್ಥ, ಮಹಿಳೆಯರು ಸಂಪ್ರದಾಯವನ್ನು ಮುರಿದರೆ, ಕಟ್ಟುಪಾಡುಗಳನ್ನು ವಿರೋಧಿಸಿದರೆ ಅವರು ಎಂದೂ ಸಂತೋಷದಿಂದಿರಲು ಸಾಧ್ಯವಿಲ್ಲ ಎಂಬ ನಿಲುವನ್ನು ಭೈರಪ್ಪ ಚೆಂದವಾಗಿ ರೂಪಿಸಿದ್ದಾರೆ ಎಂದಲ್ಲವೆ?

ಹಾಗೆಯೇ ಆಕೆಯ ಮಾವ ಶ್ರೋತ್ರಿಗೆ ತಾನು ಕಾತ್ಯಾಯಿನಿಗೆ ಅನ್ಯಾಯ ಮಾಡಿದೆ ಎಂಬ ಭಾವನೆ ಕಾಡುತ್ತದೆಯೇ ಹೊರತು ಸಂಪ್ರದಾಯ, ವಂಶದ ಪವಿತ್ರತೆ, ಕಟ್ಟುಪಾಡುಗಳೆಲ್ಲ ನಿರುಪಯುಕ್ತ ಎಂದೆನಿಸುವುದೇ ಇಲ್ಲ. ಯಾಕೆಂದರೆ ಅವನು ಅದ್ಯಾವುಗಳನ್ನು ವಿರೋಧಿಸುವ ಗೋಜಿಗೇ ಹೋಗುವುದಿಲ್ಲ. ಬದಲಾಗಿ ಅದೇ ಸಂಪ್ರದಾಯಕ್ಕೆ ಕಟ್ಟುಬಿದ್ದು ಸಾಯುವ ಹೊಸ್ತಿಲಲ್ಲಿರುವ ಕಾತ್ಯಾಯಿನಿಯ ಬಾಯಿಗೆ ಗಂಗಾಜಲವನ್ನು ಹಾಕಿಸುತ್ತಾನೆ ಮತ್ತು ಸನ್ಯಾಸವನ್ನು ಅರಸುತ್ತಾ ಅದ್ಯಾವುದೋ `ಪುಣ್ಯ’ ಕ್ಷೇತ್ರಕ್ಕೆ ಹೊರಡುತ್ತಾನೆ. ಅಂದರೆ ಕಾತ್ಯಾಯಿನಿ ಮತ್ತು ಶ್ರೋತ್ರಿ- ಇಬ್ಬರಲ್ಲೂ ಬ್ರಾಹ್ಮಣಿಕೆ ಕಟ್ಟುಪಾಡುಗಳನ್ನು ಮೀರಿದ್ದಕ್ಕೆ ಪಾಪಪ್ರಜ್ಞೆ ಹುಟ್ಟುತ್ತದೆಯೇ ವಿನಃ ವಿಮೋಚನಾ ಭಾವವಲ್ಲ. ಆದ್ದರಿಂದ ಸಾಹಿತ್ಯಿಕವಾಗಿ `ವಂಶವೃಕ್ಷ’ ಕುರಿತ ವಿಮರ್ಶೆ ಏನೇ ಇದ್ದರೂ ಅದರ ತಾತ್ವಿಕ ದರ್ಶನ ಈ ಬ್ರಾಹ್ಮಣೀಯ ಕಟ್ಟುಪಾಡನ್ನು ಮೀರುವುದರಿಂದ ಉಂಟಾಗುವ `ಪಾಪಪ್ರಜ್ಞೆ’ಯೇ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ.

ಈ ಬ್ರಾಹ್ಮಣಿಕೆಯ ಎತ್ತಿಹಿಡಿಯುವಿಕೆ ಕೇವಲ `ವಂಶವೃಕ್ಷ’ದಲ್ಲಿ ಮಾತ್ರ ಸಂಭವಿಸುವುದಿಲ್ಲ. ಭೈರಪ್ಪನವರ `ದಾಟು’ ಕಾದಂಬರಿಯಲ್ಲೂ ಅಬ್ರಾಹ್ಮಣನನ್ನು ಸತ್ಯಭಾಮೆ ಪ್ರೀತಿಸಿದ್ದಕ್ಕೆ ಇಡೀ ಹಳ್ಳಿಯೇ ಸರ್ವನಾಶವಾಗುತ್ತದೆ. `ತಬ್ಬಲಿಯು ನೀನಾದೆ ಮಗನೆ’ಯಲ್ಲೂ ನಾಯಕ ತಬ್ಬಲಿಯಾಗುವುದು ಹಿಂದೂ ಧರ್ಮದ ಕಟ್ಟಳೆಯನ್ನು ಮೀರಿದ್ದಕ್ಕೆ. ಹೀಗೆ ಭೈರಪ್ಪನವರು ಕಾತ್ಯಾಯಿನಿಯರ ಮತ್ತು ಸತ್ಯಭಾಮೆಯರ `ಮಹಿಳಾ ಪ್ರಜ್ಞೆ’ಯನ್ನು ಸೋಲಿಸುತ್ತಾ ಬ್ರಾಹ್ಮಣಿಕೆಯ ವಿಜಯದ ಕಥೆಗಳನ್ನೇ ಹೇಳುತ್ತಾ ಬಂದಿದ್ದಾರೆ.

ಭೈರಪ್ಪನವರು ಹಲವಾರು ಬಾರಿ ಸಾಹಿತ್ಯ ಸೃಷ್ಟಿಯ ಬಗ್ಗೆ ಮಾತನಾಡುವಾಗ ತಾವು ಸಿದ್ಧಾಂತಕ್ಕಿಂತ `ಸತ್ಯ ಮತ್ತು ಸೌಂದರ್ಯ’ಕ್ಕೆ ಬದ್ಧ ಎಂದು ಹೇಳಿದ್ದಾರೆ. ಮಾತ್ರವಲ್ಲ ಲೇಖಕ ಸಿದ್ಧಾಂತಕ್ಕೆ ಬದ್ಧನಾದಾಗ ಉತ್ತಮ ಸಾಹಿತ್ಯ ಸೃಷ್ಟಿಯಾಗುವುದಿಲ್ಲ ಎಂದೆಲ್ಲ ಪ್ರತಿಪಾದಿಸಿದ್ದಾರೆ.
ಆದರೆ ಭೈರಪ್ಪನವರು `ಗೃಹಭಂಗ’ ಮತ್ತು `ಪರ್ವ’ ಎಂಬ ಎರಡು ಕೃತಿಗಳನ್ನು ಬಿಟ್ಟರೆ ಮಿಕ್ಕಂತೆ ಬರೆದಿರುವುದೆಲ್ಲ ತಾವು ನಂಬಿರುವ ಸಿದ್ಧಾಂತದ ಪ್ರಚಾರಕ್ಕಾಗಿಯೇ. ಆದ್ದರಿಂದಲೇ ಅವೆಲ್ಲ ಕೆಟ್ಟ ಕೃತಿಗಳಾಗಿವೆ. ಆರೆಸ್ಸೆಸ್ ಸಿದ್ಧಾಂತ ಮಾತ್ರವಲ್ಲದೆ ಆ ಸಂಘಟನೆಯ ವೈಭವೀಕರಣವನ್ನೇ ವಸ್ತುವಾಗಿಟ್ಟುಕೊಂಡ ಅವರ ಮೊದಲ ಕಾದಂಬರಿಯಾದ `ಗೃಹಶ್ರೀ’ಯಿಂದ ಹಿಡಿದು ಇತ್ತೀಚೆಗೆ ಮುಸ್ಲಿಮರನ್ನು ತುಚ್ಛವಾಗಿ ಚಿತ್ರಿಸಲೆಂದೇ ಬರೆದ `ಆವರಣ’ ಮತ್ತು ಸ್ವಾಭಿಮಾನಿ ಮಹಿಳೆಯರ ಬಗ್ಗೆ ಬ್ರಾಹ್ಮಣೀಯ ಪುರುಷಾಧಿಪತ್ಯದ ತಿರಸ್ಕಾರದಿಂದ ಹುಟ್ಟಿಕೊಂಡ `ಕವಲು’ ಎಲ್ಲವೂ ಅವರು ನಂಬಿರುವ ಹಿಂದೂತ್ವ ಸಿದ್ಧಾಂತಹ ಕರಪತ್ರಗಳಷ್ಟೇ ಎಂದರೆ ತಪ್ಪಾಗಲಾರದು.

ಭೈರಪ್ಪನವರ ಈ ಮತಾಂಧಕ್ಕೆ ಕಾರಣ ಇಲ್ಲದಿಲ್ಲ. ಅವರು ತಮ್ಮ ಬದುಕು ಮತ್ತು ಅನುಭವಕ್ಕೆ ನಿಷ್ಠರಾಗಿ ಬರೆದಾಗ `ಗೃಹಭಂಗ’ ಸೃಷ್ಟಿಯಾಗುತ್ತದೆ. ಯಾವಾಗ ಅವರು ಬದುಕು ಮತ್ತು ಅನುಭವಕ್ಕೆ ನಿಷ್ಠರಾಗದೆ ತಮ್ಮ ಮೆದುಳು ಮತ್ತು ಹೃದಯದಲ್ಲಿ ಇರುವ ಮನು ಮಹರ್ಷಿಯನ್ನು ಆವಾಹಿಸಿಕೊಳ್ಳುತ್ತಾರೋ (ಅನಂತಮೂರ್ತಿಯವರು ಹೇಳಿದ್ದಂತೆ) ಹೈಸ್ಕೂಲ್ ಮಟ್ಟದ ಡಿಬೆಟ್ ತರಹ ಬಾಲಿಶ ಸ್ವರೂಪದ, ಯಾವುದೇ ಸಾಹಿತ್ಯಿಕ ಮೌಲ್ಯವನ್ನು ಹೊಂದಿರದ ಕೃತಿಗಳನ್ನು ಸೃಷ್ಟಿಸುತ್ತಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...