ಗುಜರಾತಿನ ನಿರ್ಭೀತ ಪೊಲೀಸ್ ಅಧಿಕಾರಿ ಸಂಜೀವ್ ಭಟ್ ಬಿಡುಗಡೆ ಆಗಲಿದ್ದಾರೆಯೇ?

 | ಶ್ರೀನಿವಾಸ ಕಾರ್ಕಳ |

ಶತ್ರುಗಳ ಮನೆಗೇ ನುಗ್ಗಿ ಅವರನ್ನು ಕೊಲ್ಲುವುದು ನನ್ನ ಜಾಯಮಾನ” ಎಂದು ನರೇಂದ್ರ ಮೋದಿಯವರು ಆಗಾಗ ಹೇಳುತ್ತಿರುತ್ತಾರೆ. ಅವರ ಈ ಮಾತು ಬರೇ ಬೊಗಳೆಯಲ್ಲ. ಪಾಕಿಸ್ತಾನದ ವಿಷಯದಲ್ಲಿ ಅವರ ಈ “ಶತ್ರುಗಳ ಮನೆಗೇ ನುಗ್ಗಿ ಹೊಡೆದುಹಾಕುವ” ಕಾರ್ಯಾಚರಣೆಗಳು ಚರ್ಚಾರ್ಹವಿರಬಹುದು, ಕೆಲವೊಮ್ಮೆ ಹಾಸ್ಯಾಸ್ಪದವೂ ಇರಬಹುದು. ಆದರೆ ತಮ್ಮ ವಿರೋಧಿಗಳ ವಿಷಯದಲ್ಲಿ ಅವರು ನಡೆದುಕೊಂಡ ರೀತಿಯ ಮಟ್ಟಿಗೆ ಅವರ ಈ ಮಾತು ಸತ್ಯಕ್ಕೆ ತುಂಬ ಹತ್ತಿರವಿರುವಂಥದ್ದು. ಗುಜರಾತ್ ನರಮೇಧದ ಬಳಿಕದ ವಿದ್ಯಮಾನಗಳನ್ನು ಪರಾಂಬರಿಸಿ ನೋಡಿದರೆ ಹಳೆಯ ದ್ವೇಷ ಮುಂದುವರಿಸುತ್ತಾ ಮೋದಿ ಮತ್ತು ಶಾ ಜೋಡಿ ತಮ್ಮ ವಿರೋಧಿಗಳನ್ನು ಮಟ್ಟಹಾಕಲು ಮಾಡಿದ ಅವಿರತ ಯತ್ನಗಳ ಅಸಂಖ್ಯ ಉದಾಹರಣೆಗಳನ್ನು ನೋಡಬಹುದು (ಗುಜರಾತ್ ಮಾಜಿ ಗೃಹಮಂತ್ರಿ ಹರೇನ್ ಪಾಂಡ್ಯ ಹತ್ಯೆ ಮತ್ತು ಜಸ್ಟಿಸ್ ಲೋಯಾ ನಿಗೂಢ ಸಾವು ಈಗಲೂ ಅನೇಕ ಅನುಮಾನಗಳನ್ನು ಹುಟ್ಟು ಹಾಕಿದ್ದು, ಗುಮಾನಿಯ ಬೆರಳುಗಳು ನಿರ್ದಿಷ್ಟ ಇಬ್ಬರು ವ್ಯಕ್ತಿಗಳತ್ತಲೇ ತಿರುಗಿರುವುದು ಅಚ್ಚರಿಯ ಸಂಗತಿಯೇನಲ್ಲ).

ರಾಜಕೀಯದಲ್ಲಿ ಶತ್ರುತ್ವ ತುಂಬ ಸಹಜ. ಆದರೆ ಮುತ್ಸದ್ದಿಗಳೆನಿಸಿದ ಹೆಚ್ಚಿನ ರಾಜಕಾರಣಿಗಳು ತಮ್ಮ ಸ್ಥಾನದ ಘನತೆಯನ್ನು ಕಾಪಾಡಿಕೊಂಡು ಅವೆಲ್ಲವನ್ನೂ ಮರೆತು ಮುಂದುವರಿಯುವುದಿದೆ. ಆದರೆ ಗುಜರಾತ್‍ನ ಈ ಜೋಡಿ ಹಾಗಲ್ಲ. ಅವರು ತಮ್ಮ ಶತ್ರುಗಳನ್ನು ಎಂದೂ ಮರೆಯುವುದಿಲ್ಲ, ಆ ಶತ್ರುಗಳನ್ನು ಹಣ್ಣುಗಾಯಿ, ನೀರುಗಾಯಿ ಮಾಡದೆ ಅವರು ವಿರಮಿಸುವವರೂ ಅಲ್ಲ.

2002ರ ಗುಜರಾತ್ ನರಮೇಧ ನಡೆದಾಗ ಅಲ್ಲಿನ ಮುಖ್ಯಮಂತ್ರಿಯಾಗಿದ್ದವರು ನರೇಂದ್ರ ಮೋದಿ. ಸದರಿ ನರಮೇಧವನ್ನು ಸ್ವತಃ ಮೋದಿಯವರು ನಡೆಸಿದರು ಎಂದು ಅವರ ವಿರೋಧಿಗಳೂ ಆಪಾದಿಸುವುದಿಲ್ಲ. ಆದರೆ ಮುಖ್ಯಮಂತ್ರಿಯಾಗಿದ್ದ ಅವರಿಗೆ ಆ ನರಮೇಧವನ್ನು ತಡೆಯುವ ಹೊಣೆಗಾರಿಕೆಯಿತ್ತು. ಆ ಹೊಣೆಗಾರಿಕೆಯನ್ನು ಅವರು ನಿಭಾಯಿಸುವಲ್ಲಿ ವಿಫಲರಾದರು. ನರಮೇಧವನ್ನು ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದವರು ತಡೆಯಲು ಕನಿಷ್ಠ ಯತ್ನವನ್ನೂ ಮಾಡದಿರುವುದು ಎಂದರೆ ಒಂದರ್ಥದಲ್ಲಿ ಆ ಅಪರಾಧದಲ್ಲಿ ಭಾಗಿಯಾದುದಕ್ಕೆ ಸಮ.

ಒಂದೆಡೆಯಲ್ಲಿ ನರಮೇಧ ತಡೆಯಲು ಪರಿಣಾಮಕಾರಿಯಾಗಿ ಯತ್ನಿಸಲಿಲ್ಲ, ಇನ್ನೊಂದೆಡೆಯಲ್ಲಿ ನರಮೇಧದ ಅಪರಾಧಿಗಳಿಗೆ ಸರಿಯಾದ ಶಿಕ್ಷೆ ಆಗುವಂತೆಯೂ ನೋಡಿಕೊಳ್ಳಲಿಲ್ಲ. ನ್ಯಾಯ ಒದಗಿಸಬೇಕಾದ ಪ್ರಭುತ್ವವೇ ಅನ್ಯಾಯ ಎಸಗುತ್ತದೆ ಎಂಬುದು ಅರಿವಾಗುತ್ತಲೇ ತೀಸ್ತಾ ಸೆಟಲ್ವಾಡ್‍ರಂತಹ ಮಾನವತಾವಾದಿ ಹೋರಾಟಗಾರರು ದೊಡ್ಡ ರಿಸ್ಕ್ ತೆಗೆದುಕೊಂಡು ರಂಗಕ್ಕಿಳಿದರು, ಕೋರ್ಟ್ ಮೆಟ್ಟಲು ಹತ್ತಿದರು. ಗುಜರಾತಿನ ಪ್ರಕರಣಗಳನ್ನು ಸುಪ್ರೀಂ ಕೋರ್ಟು ಗಂಭೀರವಾಗಿ ಪರಿಗಣಿಸುವಂತೆ, ಕೆಲವೊಂದು ಪ್ರಕರಣಗಳಲ್ಲಿ ನ್ಯಾಯನೀಡುವಂತೆ ಮಾಡಲು ತೀಸ್ತಾರ ಈ ಯತ್ನ ಕಾರಣವಾಗಿತ್ತು. “ಗುಜರಾತ್ ಹೊತ್ತಿ ಉರಿಯುತ್ತಿದ್ದಾಗ ಆಧುನಿಕ ದಿನಗಳ ನೀರೋ ಬೇರೆಡೆಗೆ ನೋಡುತ್ತ ಕುಳಿತಿದ್ದ” ಎಂದು ನ್ಯಾಯಾಲಯ ಕಟುವಾಗಿ ಟೀಕಿಸುವಂತಾಯಿತು.

ಇದೇ ಕಾರಣಕ್ಕೆ ಮೋದಿಯವರ ಕೆಂಗಣ್ಣಿಗೆ ಗುರಿಯಾದರು ತೀಸ್ತಾ. ತೀಸ್ತಾರ ದುರದೃಷ್ಟಕ್ಕೆ ಮೋದಿಯರು ಮುಂದೆ ದೇಶದ ಪ್ರಧಾನಿಯೇ ಆದರು. ಆ ಬಳಿಕವೂ ತೀಸ್ತಾರನ್ನು ಮರೆಯದ ಮೋದಿಯವರು ಆಕೆಯನ್ನು ಜೈಲಿಗೆ ತಳ್ಳಲು ನಡೆಸಿದ ಯತ್ನ ಒಂದೆರಡು ಬಾರಿಯದಲ್ಲ. ತೀಸ್ತಾರ ಎನ್‍ಜಿಒ ಸಂಪೂರ್ಣ ನಿಷ್ಕ್ರಿಯವಾಗುವಂತೆ ಮಾಡಲಾಯಿತು. ಮಾತ್ರವಲ್ಲ, ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸಿರದಿದ್ದರೆ ಕಳೆದ ಐದು ವರ್ಷಗಳಿಂದಲೂ ಅವರು ಜೈಲಿನಲ್ಲಿರಬೇಕಾಗಿತ್ತು.

ಗುಜರಾತ್ ಗಲಭೆಯ ವಿಷಯಕ್ಕೆ ಬಂದಾಗ ತೀಸ್ತಾ ಸೆಟಲ್‍ವಾಡರ ಸಾಲಿನಲ್ಲಿಯೇ ಕೇಳಿಬರುವ ಇನ್ನೊಂದು ಹೆಸರು ಸಂಜೀವ ಭಟ್. ಗುಜರಾತಿನ  ಪೊಲೀಸ್ ಅಧಿಕಾರಿಯಾಗಿದ್ದ ಭಟ್ ಅವರು ಸದರಿ ಗಲಭೆಯಲ್ಲಿ ಮೋದಿಯವರ ಪಾತ್ರವನ್ನು ಬೆಟ್ಟು ಮಾಡಿದವರು; ಮೋದಿಯವರ ವಿರುದ್ಧ ಸಾಕ್ಷ್ಯ ನುಡಿದವರು. “ತಮ್ಮ ಆಕ್ರೋಶವನ್ನು ಹೊರಹಾಕಲು ಹಿಂದೂಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಗಲಭೆಯ ಸಮಯದ ಅಧಿಕಾರಿಗಳ ಸಭೆಯೊಂದರಲ್ಲಿ ಮೋದಿಯವರು ಹೇಳಿದ್ದರು, ನಾನೂ ಆ ಸಭೆಯಲ್ಲಿದ್ದೆ” ಎಂದು ನ್ಯಾಯಾಲಯದಲ್ಲಿ ಪ್ರಮಾಣಪತ್ರ ಸಲ್ಲಿಸಿ ಮೋದಿಯವರ ಶತ್ರುತ್ವ ಕಟ್ಟಿಕೊಂಡವರು. ಆ ಸಭೆಯಲ್ಲಿ ಸಂಜೀವ್ ಭಟ್ ಇದ್ದರೇ, ಮೋದಿ ಹಾಗೆ ಹೇಳಿದ್ದರೇ ಎಂಬುದೆಲ್ಲ ಸಾಬೀತಾಗಿಲ್ಲ, ಮಾತ್ರವಲ್ಲ ಅದು ಅನೇಕ ಅನುಮಾನಗಳಿಗೂ ಕಾರಣವಾಗಿದೆ.

ಆದರೆ ಸಂಜೀವ್ ಭಟ್ ತಮ್ಮ ವಿರುದ್ದ ಮಾತನಾಡಿದ್ದನ್ನು ಮೋದಿಯವರು ಹಗುರವಾಗಿ ತೆಗೆದುಕೊಳ್ಳಲಿಲ್ಲ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೇ ಅವರ ನೇತೃತ್ವದ ಗುಜರಾತ್ ಸರಕಾರ ಭಟ್ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಶುರು ಮಾಡಿತು. ಅವರನ್ನು ಕೆಲಸದಿಂದ ಅಮಾನತು ಮಾಡಲಾಯಿತು, ಅವರ ಮೇಲಿನ ಹಳೆಯ ಕೇಸುಗಳನ್ನು ಮತ್ತೆ ತೆರೆಯಲಾಯಿತು. ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂದೆಗೆದುಕೊಳ್ಳಲಾಯಿತು. ಅವರ ಮನೆಯ ಒಂದು ಭಾಗವನ್ನು ಕೆಡವಲಾಯಿತು. ಮೋದಿಯವರು ದೇಶದ ಪ್ರಧಾನಿಯಾದ ಬಳಿಕವಂತೂ ಭಟ್ ಅವರ ಮೇಲಿನ ಪ್ರತೀಕಾರ ಕ್ರಮಗಳು ಇನ್ನೂ ಹೆಚ್ಚಾದವು. ಅವರನ್ನು ಕೆಲಸದಿಂದಲೇ ವಜಾ ಮಾಡಲಾಯಿತು.

ಆದರೆ ಯಾವುದಕ್ಕೂ ಎದೆಗುಂದದ ಸಂಜೀವ ಭಟ್ ತಮ್ಮ ದಿಟ್ಟ ಮತ್ತು ಮೊನಚು ಮಾತುಗಳ ಮೂಲಕ ಮೋದಿಯವರ ನಡೆನುಡಿಗಳನ್ನು ಗೇಲಿ ಮಾಡುವ ಕೆಲಸ ಮುಂದುವರಿಸುತ್ತಲೇ ಹೋದರು. ಟ್ವಿಟರ್ ಮತ್ತು ಫೇಸ್‍ಬುಕ್‍ನಂತಹ ಸೋಶಿಯಲ್ ಮೀಡಿಯಾದಲ್ಲಿನ ಮೋದಿ ವಿರೋಧಿ ಬರೆಹಗಳ ಕಾರಣ ಅವರಿಗೆ ಲಕ್ಷಾಂತರ ಅಭಿಮಾನಿಗಳೂ ಹುಟ್ಟಿಕೊಂಡರು. ಆದರೆ ಸಂಜೀವ ಭಟ್ಟರಿಗೊಂದು ಪಾಠ ಕಲಿಸಲು ಹೊಂಚು ಹಾಕುತ್ತಲೇ ಇದ್ದ ಫ್ಯಾಸಿಸ್ಟ್ ಸರಕಾರದ ಏಜನ್ಸಿಗಳು ಕೊನೆಗೂ 23 ವರ್ಷಗಳ ಹಿಂದಿನ ಕೇಸೊಂದರಲ್ಲಿ ಅವರನ್ನು ಸೆಪ್ಟಂಬರ್ 5, 2018 ರಂದು ಜೈಲಿಗೆ ತಳ್ಳುವಲ್ಲಿ ಯಶಸ್ವಿಯಾದವು.

ಅಚ್ಚರಿಯ ಮತ್ತು ಆಘಾತಕಾರಿ ಅಂಶವೆಂದರೆ ನ್ಯಾಯಾಲಯ ಕೂಡಾ ಸಂಜೀವ್ ಭಟ್ ಅವರ ನೆರವಿಗೆ ಬರಲಿಲ್ಲ. ಸಂಜೀವ ಭಟ್ಟರನ್ನು ಭೇಟಿಯಾಗಲು ಅವರ ಪತ್ನಿ ಶ್ವೇತಾ ಭಟ್ಟರಿಗೂ ಸರಿಯಾಗಿ ಅವಕಾಶವನ್ನೂ ಕೊಡಲಿಲ್ಲ. ಅವರನ್ನು ಎಲ್ಲಿಟ್ಟಿದ್ದಾರೆ ಎಂಬುದೂ ಸರಿಯಾಗಿ ತಿಳಿಯದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಶ್ವೇತಾ ಭಟ್ ಅವರು ಸುಪ್ರೀಂಕೋರ್ಟ್ ಮೆಟ್ಟಲೇರಿದರೂ ಅವರಿಗೆ ನ್ಯಾಯ ದೊರಕಲಿಲ್ಲ. ಈ ನಡುವೆ ಶ್ವೇತಾ ಭಟ್ ಅವರ ಕಾರಿಗೆ ನಂಬರ್ ಪ್ಲೇಟ್ ರಹಿತ ಲಾರಿಯೊಂದನ್ನು ಗುದ್ದಿಸಿ ಅವರನ್ನು ಕೊಲ್ಲುವ ಯತ್ನ ನಡೆಸಲಾಯಿತು ಎಂದೂ ವರದಿಯಾಗಿತ್ತು.

ಸಂಜೀವ್ ಭಟ್‍ರನ್ನು ಬಂಧಿಸಿ ಸರಿ ಸುಮಾರು 8 ತಿಂಗಳುಗಳಾದವು. ಬಲಾಢ್ಯ ರಾಜಕಾರಣಿಯೊಬ್ಬರನ್ನು ಎದುರು ಹಾಕಿಕೊಂಡದ್ದಕ್ಕೆ ಪ್ರತೀಕಾರ ಕ್ರಮವಾಗಿಯೇ ಅವರನ್ನು ಬಂಧಿಸಿ ಜೈಲಿನಲ್ಲಿರಿಸಲಾಗಿದೆ ಎಂಬುದು ಮೇಲ್ನೋಟಕ್ಕೇ ಕಾಣಿಸುವ ಸತ್ಯ. ಇದು ದೇಶದ ಪ್ರಜಾತಂತ್ರ ವ್ಯವಸ್ಥೆಯ ಬಗ್ಗೆ, ಸಂವಿಧಾನಾತ್ಮಕ ಹಕ್ಕುಗಳ ಬಗ್ಗೆ, ನ್ಯಾಯಾಂಗದ ಬಗ್ಗೆ ವಿಶ್ವಾಸ ಕಳೆದುಕೊಳ್ಳುವಂತೆ ಮಾಡುವ ಒಂದು ವಿದ್ಯಮಾನ. ಸಂಜೀವ ಭಟ್ ಇನ್ನೂ ಅಪರಾಧಿ ಎಂದು ಘೋಷಿತರಾಗಿಲ್ಲ. ಕೇವಲ ವಿಚಾರಣಾಧೀನ ಕೈದಿಯಾಗಿ ಅವರು 250 ದಿನಗಳಿಂದ ಜೈಲಿನಲ್ಲಿದ್ದಾರೆ. ಅವರನ್ನು ಜೈಲಿನಿಂದ ಹೊರ ತರಲು ಅವರ ಪತ್ನಿ ಮಾತ್ರವಲ್ಲ ಅನೇಕ ಮಾನವ ಹಕ್ಕುಗಳ ಪರ ಹೋರಾಟಗಾರರು ಯತ್ನಿಸುತ್ತಲೇ ಇದ್ದಾರೆ. ಸಮಾಧಾನದ ಸಂಗತಿಯೆಂದರೆ ಇವತ್ತು ಟ್ವಿಟ್ಟರ್ ನಲ್ಲಿ ವ್ಯಕ್ತಿಯೊಬ್ಬರು (@sanjivbhatt) “ಗುಜರಾತ್ ಹೀರೋ ಸಂಜೀವ ಭಟ್‍ರನ್ನು (@Loneranger9new) ಜೈಲಿನಿಂದ ಬಿಡುಗಡೆಗೊಳಿಸಲು ಅಗತ್ಯವಿರುವ 560 ಪುಟಗಳ ದಾಖಲಾತಿಗಳನ್ನು ಸಂಗ್ರಹಿಸುವ ಕಾರ್ಯ ಮುಗಿಸಿದ್ದೇನೆ, ಕಾನೂನು ಪ್ರಕ್ರಿಯೆಗಳು ಮತ್ತು ಕೆಲವೊಂದು ಶಿಷ್ಟಾಚಾರದ ಕಾರಣ ಕೊಂಚ ತಡವಾಗಿಯಾದರೂ ಮುಂದಿನ ಜೂನ್ ಕೊನೆಯಲ್ಲಿ ಅವರು ಬಿಡುಗಡೆಯಾಗುವ ಸಂಭವವಿದೆ” ಎಂದು ಬರೆದುಕೊಂಡಿದ್ದಾರೆ. ಈ ಹೇಳಿಕೆಯ ಸತ್ಯಾಸತ್ಯತೆ ಗೊತ್ತಿಲ್ಲ. ಆದರೆ, ಗುಜರಾತಿನ ಹೀರೋ ಮಾಜಿ ಪೊಲೀಸ್ ಅಧಿಕಾರಿ ಸಂಜೀವ ಭಟ್ ಬೇಗನೇ ಬಿಡುಗಡೆಯಾಗಲಿ, ಫ್ಯಾಸಿಸ್ಟ್ ಶಕ್ತಿಯ ವಿರುದ್ಧದ ಹೋರಾಟವನ್ನು ಅವರು ಮತ್ತೆ ಮುಂದುವರಿಸುವಂತಾಗಲಿ ಎಂದು ಹಾರೈಸೋಣ.

 

 

 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here