Homeಕರ್ನಾಟಕಪೇಜಾವರರ ಪಂಥಾಹ್ವಾನ ಓಟ್ ಬ್ಯಾಂಕ್ ರಾಜಕಾರಣವಾಗಿದೆ: ಸಂದರ್ಶನದಲ್ಲಿ ಎಸ್.ಎಂ ಜಾಮದಾರ್

ಪೇಜಾವರರ ಪಂಥಾಹ್ವಾನ ಓಟ್ ಬ್ಯಾಂಕ್ ರಾಜಕಾರಣವಾಗಿದೆ: ಸಂದರ್ಶನದಲ್ಲಿ ಎಸ್.ಎಂ ಜಾಮದಾರ್

ಪೇಜಾವರರು ಎರಡು ವರ್ಷದ ಹಿಂದೆಯೂ ಇದೇ ರೀತಿ ಚರ್ಚೆಗೆ ಕರೆದು ಆನಂತರ ಚಾತುರ್ಮಾಸದ ನೆಪ ಹೇಳಿ ತಪ್ಪಿಸಿಕೊಂಡಿದ್ದರು.

- Advertisement -
- Advertisement -

ಕಳೆದ ವಿಧಾನಸಭಾ ಚುನಾವಣೆಗೆ ಮುಂಚೆ ಬಹುಚರ್ಚಿತವಾದ ಲಿಂಗಾಯಿತ ಧರ್ಮದ ವಿಚಾರವು ಮತ್ತೆ ಮುನ್ನೆಲೆಗೆ ಬಂದಿರುವುದು ಪೇಜಾವರರ ಪಂಥಾಹ್ವಾನದ ಕಾರಣಕ್ಕೆ. ಅದರ ಕುರಿತು ಲಿಂಗಾಯಿತ ಧರ್ಮದ ಚಳವಳಿಯ ಮುಂಚೂಣಿಯಲ್ಲಿದ್ದ ನಿವೃತ್ತ ಐಎಎಸ್ ಅಧಿಕಾರಿ ‘ಎಸ್.ಎಂ.ಜಾಮದಾರ್’ ಅವರುನ್ನು ‘ನಾನುಗೌರಿ.ಕಾಂ’ ಮಾತಾಡಿಸಿತು.

ಪ್ರಶ್ನೆ: ಪೇಜಾವರ ಸ್ವಾಮಿಗಳು ಲಿಂಗಾಯತ ಧರ್ಮದ ಕುರಿತು ಇಷ್ಟೊಂದು ತಲೆ ಕೆಡಿಸಿಕೊಂಡಿರುವುದೇಕೆ? ಯಾಕೆ ಪದೇ ಪದೇ ಲಿಂಗಾಯತ ಧರ್ಮದ ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ? ಲಿಂಗಾಯತ ಧರ್ಮದ ಕುರಿತು ನಿಮ್ಮಂಥವರಿಗೆ ಖಚಿತತೆ ಇದ್ದ ಮೇಲೆ ಬಹಿರಂಗ ಚರ್ಚೆಗೆ ಯಾಕೆ ಮುಂದಾಗಬಾರದು?
ಪೇಜಾವರ ಶ್ರೀಗಳಿಗೆ ಲಿಂಗಾಯತ ಹೋರಾಟದ ಬಗ್ಗೆ, ಲಿಂಗಾಯತ ಧರ್ಮದ ಬಗ್ಗೆ, ಶರಣಶಾಸನದ ಬಗ್ಗೆ, ಬಸವಣ್ಣನವರ ಬಗ್ಗೆ ತಿಳಿವಳಿಕೆ ಇಲ್ಲ ಅನ್ನುವುದು ಮೇಲ್ನೋಟಕ್ಕೆ ತಿಳಿಯುವ ವಿಷಯ. ಆದರೆ ನಾನು ಅಂತಹ ವಯೋವೃಧ್ಧ ಮಠಾಧೀಶರಾದ ಅವರಿಗೆ ಅಜ್ಞಾನ ಇದೆ ಎಂದು ನಾನು ಹೇಳಲು ಬಯಸುವುದಿಲ್ಲ. ಅವರಿಗೆ ಗೊತ್ತಿದ್ದರು ಸಹಾ ಪದೇ ಪದೇ ಅವರು ಈ ವಿಷಯವನ್ನ ಮತ್ತೆ ಮತ್ತೆ ಸಾರ್ವಜನಿಕ ಪ್ರಚಾರದಲ್ಲಿ ಇಟ್ಟುಕೊಳ್ಳಲಿಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಅದು ಯಾಕೆ ಅಂತ ನನಗೆ ಗೊತ್ತಾಗುತ್ತಿಲ್ಲ, ಬಹುಶಃ ಅದರ ಹಿಂದೆ ರಾಜಕೀಯ ಹುನ್ನಾರ ಇದೆ. ಅವರು ಒಂದು ರಾಜಕೀಯ ಪಕ್ಷಕ್ಕೆ ಸಪೋರ್ಟ್ ಮಾಡುವವರು. ಒಂದು ಪಕ್ಷದ ಪರವಾಗಿದ್ದಾರೆ ಅದು ಎಲ್ಲರಿಗೂ ಗೊತ್ತು. ಅವರ ಓಟ್ ಬ್ಯಾಂಕ್‍ಗೆ ತೊಂದರೆ ಆಗುತ್ತೆ ಅನ್ನೋ ಅರ್ಥದಲ್ಲಿ ಅವರು ಮಾತಾಡುತ್ತಿದ್ದಾರೆ ಅನ್ನೋದು ಸ್ಫಷ್ಟ.

ಈ ಹಿಂದೆಯೂ ಕೂಡ ಅವರು ಇದೇರೀತಿ ಹೇಳಿದಾಗ ಎರಡು ವರ್ಷದ ಕೆಳಗೆ 2017ರಲ್ಲಿ ನಾನು ಚರ್ಚೆಗೆ ಕರೆದಿದ್ದೆ. ಅದಕ್ಕೆ ಅವರು ನಾನು ಚಾತುರ್ಮಾಸದಲ್ಲಿ ಇದೀನಿ ಬರೋಕೆ ಆಗಲ್ಲ, ಅಲ್ಲಿಗೆ ಬನ್ನಿ ಇಲ್ಲಿಗೆ ಬನ್ನಿ ಅಂತ ಹೇಳಿ ಬರಲಿಲ್ಲ. ಮೊನ್ನೆ ಅವರು ಮತ್ತೆ ಪಂಥಾಹ್ವಾನಕ್ಕೆ ಕರೆದರು. ಅದಕ್ಕೆ ನಾನು ನೇರವಾಗಿ ಪತ್ರ ಬರೆದಿದ್ದೇನೆ. ಈ ಪಂಥಾಹ್ವಾನ ಎನ್ನುವುದು ಈ ದೇಶದ ಸಂಸ್ಕೃತಿಯಲ್ಲಿ ಬಹಳ ಪ್ರಾಚೀನವಾದಂತಹ ಪದ್ಧತಿ. ಎರಡು ವಾದಗಳ ನಡುವೆ ಭಿನ್ನಾಭಿಪ್ರಾಯಗಳಿದ್ದಾಗ ನಡೆಯುತ್ತಿತ್ತು. ‘ಮಂಡನಮಿಶ್ರರು’ ಎನ್ನುವವರು ಇರುತ್ತಿದ್ದರು. ಇವರು ಎರಡು ಬಣಗಳ ನಡುವೆ ಸಂಯೋಜಕರಾಗಿದ್ದು ವಾದವಿವಾದ ನಡೆಸಿಕೊಡುತ್ತಿದ್ದರು. ನಿರ್ಣಯಕ್ಕೆ ಅದು ಬೇರೆ ತಂಡ ಇತ್ತು. ಆ ಆಹ್ವಾನವನ್ನ ಪಂಥಾಹ್ವಾನ ಅಂತ ಕರಿತಾರೆ.

ಈಗ ಅವರ ನಡುವೆ ವಾದ ಮಾಡಲಿಕ್ಕೆ ನನಗೆ ಯಾವ ಅಂಜಿಕೆಯೂ ಇಲ್ಲ, ಯಾವುದು ಭಯ ಇಲ್ಲ, ಆ ವಾದವನ್ನು ಸೋಲಿಸುತ್ತೇವೆ ಅನ್ನುವಂತಹ ಧೈರ್ಯ ನಮಗಿದೆ. ಆದರೆ ಈ ವಾದವನ್ನು ನಡೆಸಿಕೊಡುವವರು ಯಾರು, ಇದನ್ನ ನಿರ್ಣಯ ಮಾಡೋರು ಯಾರು? ಒಂದು ಗುಂಪಿನ ಪ್ರತಿನಿಧಿಗಳಾಗಿ ಕರೆದರೆ ಹೋಗೋಕೆ ಆಗಲ್ಲ. ಅದಕ್ಕೆ ನಾವು ಹೇಳಿದ್ದೇವೆ ನಿಮಗೆ ಯಾವುದೇ ರಾಜ್ಯ ಸರ್ಕಾರ ಆಗಲಿ, ಕೇಂದ್ರಸರ್ಕಾರ ಆಗಲಿ, ಮುಖ್ಯಮಂತ್ರಿಗಳಾಗಲಿ, ಪ್ರಧಾನಮಂತ್ರಿಗಳಾಗಲಿ, ಯಾವುದೇ ನ್ಯಾಯಾಲಯವಾಗಲಿ ಇದನ್ನ ನಿರ್ಣಯಮಾಡಿ ಅಂತ ಅಥಾರಿಟಿ ಲೆಟರ್ ಕೊಡಲಿ. ಆಗ ನಾನು ಖಂಡಿತ ಬರ್ತಿನಿ. ಅದು ಬಿಟ್ಟು ಸುಮ್ನೆ ವಾದಕ್ಕೆ ಬನ್ನಿ ಅಂದ್ರೆ ಗಾಳಿಲೀ ಗುದ್ದಿ ಮೈನೋಯಿಸಿಕೊಳ್ಳುವ ಕೆಲಸ ಬೇಡ. ನಾವು ನಿಮ್ಮ ಜೊತೆ ಬರಲ್ಲ ಆದರೆ ನಾವು ಪಂಥಾಹ್ವಾನಕ್ಕೆ ಸಿದ್ಧರಿದ್ದೇವೆ. ನಾನು ಅವರಿಗೆ ಇದನ್ನ ಬರಹದ ಮೂಲಕ ತಿಳಿಸಿದ್ದೇನೆ.

ಪ್ರಶ್ನೆ: ಚುನಾವಣೆಗೆ ಮುಂಚೆ ಅಷ್ಟೊಂದು ಬಿರುಸಿನಿಂದ ನಡೆದ ಸ್ವತಂತ್ರ ಲಿಂಗಾಯತ ಧರ್ಮದ ಚಳವಳಿಯು ಆ ನಂತರ ಮುಂದುವರೆಯುತ್ತಿಲ್ಲ. ಅಂದಮೇಲೆ ಅದು ರಾಜಕೀಯಪ್ರೇರಿತ ಎಂಬ ಆರೋಪ ಇದೆಯಲ್ಲ?
ಅದು ಕೆಲವರ ತಪ್ಪು ಕಲ್ಪನೆ. ಹೋರಾಟ ಅಂದ್ರೆ ಲಕ್ಷಾಂತರ ಜನ ಸೇರಿಸಿ ಬಹಿರಂಗ ಸಭೆಗಳು ನಡೆದದ್ದು ಪ್ರಾಥಮಿಕ ಹಂತ. ಇವತ್ತು ಏನಾಗಿದೆ ಸುತ್ತಮುತ್ತಲಿನ ವಾತಾವರಣದಿಂದ ಸುಮಾರು ಇನ್ನೂರು ಮುನ್ನೂರು ವರ್ಷಗಳ ದಬ್ಬಾಳಿಕೆಯಿಂದ ಲಿಂಗಾಯಿತರಿಗೆ ತಾವು ಯಾರು, ತಮ್ಮ ಧರ್ಮ ಏನು, ತತ್ವ ಏನು, ಅದರ ಸ್ಥಾಪಕರು ಯಾರು? ಅದು ಬೇರೆ ಧರ್ಮಕ್ಕಿಂತ ಹೇಗೆ ವಿಶಿಷ್ಟವಾದ ಪ್ರತ್ಯೇಕ ಧರ್ಮವಾಗಿದೆ ಎನ್ನುವುದು ಗೊತ್ತಿಲ್ಲ. ಅವರಿಗೆ ವಿಚಾರ ಮಾಡುವಂತಹ ಪ್ರವೃತ್ತಿ ಬೆಳೆಯಲಿ ಅಂತ ಈ ಬೃಹತ್ ರ್ಯಾಲಿಗಳನ್ನು ಮಾಡಿದ್ವಿ. ರಾಜಕೀಯ ಪರಿಣಾಮ ನಾವು ಬಯಿಸಿರಲಿಲ್ಲ, ಅದು ನಮ್ಮ ಉದ್ದೇಶವೂ ಅಲ್ಲ. ಈ ಸಭೆಗಳಿಂದ ರಾಷ್ಟ್ರ, ಅಂತಾರಾಷ್ಟ್ರ ವ್ಯಾಪಿಯಾಗಿ ಪ್ರಚಾರ ಸಿಕ್ತು. ಇದರಿಂದ ಲಿಂಗಾಯತ ಧರ್ಮದ ಬಗ್ಗೆ ಕುತೂಹಲ, ಉತ್ಸುಕತೆ ಹುಟ್ಟಿತು.

ಲಿಂಗಾಯತ ಮಹಾಸಭೆ ಅನ್ನೋದು ಮೊದಲು ಇರಲಿಲ್ಲ. ಲಿಂಗಾಯತ ವೇದಿಕೆ ಅಂತ ಚಾಲೂ ಮಾಡಿದ್ವಿ ಆದರೆ ಚುನಾವಣೆ ಮುಗಿದನಂತರ ಜಾಗತಿಕ ಲಿಂಗಾಯತ ಮಹಾಸಭೆ ನೋಂದಣಿ ಮಾಡಿದೆವು. ಇತ್ತೀಚಿಗೆ ಇದಕ್ಕೆ ಬಹಳ ದೊಡ್ಡ ಪ್ರಮಾಣದಲ್ಲಿ ಸದಸ್ಯರಾಗುತ್ತಿದ್ದಾರೆ. 15 ಜಿಲ್ಲೆಗಳಲ್ಲಿ ಜಿಲ್ಲಾ ಘಟಕಗಳಾಗಿವೆ. ಜನರು ಈಗ ಹತ್ತಿರ ಬರುತ್ತಿದ್ದಾರೆ. ಇದು ಚೆನ್ನಾಗಿ ನಡೆಯುತ್ತಿದೆ. ಜನ ಜಾಗೃತಿ, ನಿಜವಾದ ಸಂಘಟನೆ ಈಗ ಆಗುತ್ತಿದೆ.

ಪ್ರಶ್ನೆ : ಲಿಂಗಾಯತ ಎನ್ನುವುದೊಂದು ತತ್ವ, ಜೀವಪರ ಸಿದ್ಧಾಂತದ ಮೇಲೆ ನಿಂತಿರುವುದು ಎಂಬುದೇ ನಿಜವಾಗಿದ್ದಲ್ಲಿ ಅದನ್ನು ಪಾಲಿಸುತ್ತಿರುವ ತಮ್ಮಂಥಹವರು ಬೋಧನೆಯ ಮಟ್ಟದಲ್ಲಿ ಜಾತ್ಯತೀತತೆ, ಮೌಢ್ಯ ನಿರ್ಮೂಲನೆಗೆ ಕೈ ಹಾಕಿದ್ದೀರಿ, ಆದರೆ ಆಚರಣೆಯಲ್ಲಿ ಅಸ್ಪೃಶ್ಯತೆ ನಿವಾರಣೆ, ಅಂಧಶ್ರಧ್ಧೆ ನಿವಾರಣೆ, ಮನುಷ್ಯರಲ್ಲಿ ಪರಿವರ್ತನೆಗೆ ಬೇಕಾದ ಪ್ರಾಯೋಗಿಕ ಕೆಲಸಗಳಿಗೆ ಯಾರೂ ಮುಂದಾಗುತ್ತಿಲ್ಲವಲ್ಲಾ?
ಇದು ದೊಡ್ಡ ಪ್ರಮಾಣದ ನಿರೀಕ್ಷೆ. ಮಗು ಹುಟ್ಟಿದಾಗ ತಂದೆತಾಯಿಗಳ ಸಹಾಯವಿಲ್ಲದೆ ಬದುಕೋಕ್ಕಾಗಲ್ಲ. ಬದುಕಿದರು ಕೂಡ ಅದು ಓಡಿ ಹೋಗಿ ಒಲಂಪಿಕ್ಸ್ ನಲ್ಲಿ ಭಾಗವಹಿಸೋಕೆ ಆಗೋದಿಲ್ಲ. ಹಾಗೆಯೇ ಈಗ ಸುಮಾರಾಗಿ ಇನ್ನೂರು ಮುನ್ನೂರು ವರ್ಷಗಳ ವೀರಶೈವರಿಂದ ಸಂಸ್ಕಾರಗಳನ್ನು ಸಂಪೂರ್ಣವಾಗಿ ಭ್ರಷ್ಟಗೊಳಿಸಿರುವುದರಿಂದ ಬಹಳಷ್ಟು ಜನ ಲಿಂಗಾಯತರು ದಾರಿತಪ್ಪಿದ್ದು, ಸಂಸ್ಕಾರಗಳನ್ನ ಮರೆತಿದ್ದು, ತಾನೇ ಒಂದು ಜಾತಿಯಾಗಿದ್ದು ಅದು ಒಂದು ದುರ್ದೈವ ಅಂತ ಇಟ್ಟುಕೊಳ್ಳಬೇಕು. ಆದರೆ ಈಗ ಬರುತ್ತಿರುವ ಅರಿವು ಅದು ಮಾನವೀಯತೆಯ ದಾರಿಯಲ್ಲಿಯೇ ಇದೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ನೋಡಬಹುದೇ ಹೊರತಾಗಿ ಆರು ತಿಂಗಳು ಒಂದು ವರ್ಷದಲ್ಲಿ ಆಗುವಂತಹದ್ದಲ್ಲ, ಹಾಗಾಗಿ ಹಲವು ಜನ ಪ್ರಶ್ನೆ ಕೇಳುತ್ತಾರೆ, ಲಿಂಗಾಯಿತರಿಗೆ ಅಷ್ಟೇ ಯಾಕೆ ಬಸವಣ್ಣನನ್ನ ಸೀಮಿತ ಮಾಡತಿದ್ದೀರಿ ಅಂತ? ಇಲ್ವಲ್ಲ. ನಿನ್ನೆ ಪಂಡಿತಾರಾಧ್ಯರು ಚೆನ್ನಾಗಿ ಹೇಳಿದ್ದಾರೆ. ಬಸವತತ್ವವನ್ನು ಜಾತಿ ಮಟ್ಟಕ್ಕೆ ಇಳಿಸಬೇಡಿ, ಇದು ಜಾತಿನು ಅಲ್ಲ, ಧರ್ಮನೂ ಅಲ್ಲ ಅದು ಒಂದು ತತ್ವ – ಸಿದ್ಧಾಂತ. ಅದನ್ನು ನಂಬುವವರೆಲ್ಲ ಲಿಂಗಾಯತರೆ ಎಂದಿದ್ದಾರೆ. ಆ ನಂಬಿಕೆ ದೊಡ್ಡ ಪ್ರಮಾಣದಲ್ಲಿ ಇಳಿದಾಗ ನೀವು ಹೇಳಿದ ಕೆಲಸಕ್ಕೆ ಕೈ ಹಾಕಬಹದು. ಅಂತರ್ಜಾತಿಯ ವಿವಾಹ, ಅಸ್ಪೃಶ್ಯತೆ ಸುಧಾರಣೆ, ಸಮಾನತೆಯ ಶಿಕ್ಷಣ, ದೀನದುರ್ಬಲರ ಕಲ್ಯಾಣ ಮತ್ತು ಮಹಿಳೆಯರಿಗೆ ಸಮಾನವಾದ ಅವಕಾಶ ಇರಬಹುದು ಇವೆಲ್ಲ ಬಸವತತ್ವ ಆಗಿ ಮತ್ತೆ ಪುನರುಜ್ಜೀವನ ಪಡೆಯಬೇಕಾಗಿದೆ. ಅದನ್ನ ಕಡಿಮೆ ಸಮಯದಲ್ಲಿ ಹೆಚ್ಚು ನಿರೀಕ್ಷೆ ಮಾಡಿದರೆ ಆಗೋದಿಲ್ಲ. ಕಾಯಬೇಕು

ಪ್ರಶ್ನೆ: ನಿಮ್ಮ ಪ್ರಕಾರ _ ಲಿಂಗಾಯಿತ ಸ್ವತಂತ್ರ ಧರ್ಮವು ಹನ್ನೆರಡನೆ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದುದಾದರೆ , ಆ ನಂತರ ಅದರ ವೈದೀಕೀಕರಣ ಯಾವಾಗಿನಿಂದ ಶುರು ಆಯಿತು?
15/16ನೇ ಶತಮಾನಗಳಲ್ಲಿ ಮತ್ತು ನಂತರ. ಬುದ್ದ, ಮಹಾವೀರ, ಗುರುನಾನಕ್ ಇವರೆಲ್ಲ ಯಾವ ರೀತಿ ಪರಿಕಲ್ಪನೆಗಳನ್ನ ಇಟ್ಟುಕೊಂಡು ಚಳವಳಿ ಶುರು ಮಾಡಿದರು ಮತ್ತು ಧರ್ಮಗಳು ಬೆಳೆದ ನಂತರ ಆದದ್ದು ಬೇರೆ ಬೇರೆ. ಲಿಂಗಾಯತ ಧರ್ಮದಲ್ಲಿಯೂ ಕೆಲವು ಅಧ್ವಾನಗಳಾದವು. ಬಸವಣ್ಣನು ನೋಡಿದ ಜೀವನ ದೃಷ್ಟಿ ಬಿಡಿಬಿಡಿಯಾದದ್ದಲ್ಲ, ಸಮಗ್ರವಾದದ್ದು. ಸಮಾನತೆ ಅಂದರೆ ಸಮಗ್ರವಾದ ಸಮಾನತೆ. ಇದರ ಜೊತೆ ಧಾರ್ಮಿಕ ಸಮಾನತೆಯು ಸೇರಿದೆ. ವೀರಶೈವ ಸಂಪಾದಕರು ಸರಳ ವಚನಗಳಿಗೆ ಕ್ಲಿಷ್ಟವಾದ ಶ್ಲೋಕಗಳನ್ನು ಹಾಕಿ ವಚನಗಳನ್ನು ಭ್ರಷ್ಟಗೊಳಿಸಿದ್ದಾರೆ.

ಬಸವಣ್ಣನವರದು ವಿಶ್ವಮಾನವತೆಯ ಪರಿಕಲ್ಪನೆ. ಶೇ.2ರಷ್ಟು ಇರುವ ಜನ, ಶ್ರಮಜೀವಿಗಳಾಗಿದ್ದ ಶೂದ್ರರನ್ನ ನಮ್ಮ ಸೇವೆ ಮಾಡಲು ನೀವು ಇರುವುದು ಎಂಬಂತೆ ಬಳಸಿಕೊಂಡರು. ಇದು ಮಾನವೀಯತೆ ಅಲ್ಲ ಇದರ ವಿರುಧ್ಧ ಬಂಡೆದ್ದಿದ್ದು ಬಸವಣ್ಣ. ದೇವರು ನಿಮ್ಮ ಹೃದಯದಲ್ಲಿದ್ದಾನೆ ಅಂದರು. ದೇವರು ಅನ್ನೋದು ಅಮೂರ್ತ ಪರಿಕಲ್ಪನೆ ಅದಕ್ಕೆ ಒಂದು ಚಿಕ್ಕ ಕಲ್ಲಿನ ಮೂಲಕ ಮೂರ್ತರೂಪ ಕೊಟ್ಟರು. ಅದು ಶಿವಲಿಂಗ ಅಲ್ಲ, ಬಹಳ ಮೂಢನಂಬಿಕೆಗಳಿದ್ದ ಕಾಲದಲ್ಲಿ ಲಿಂಗಾಯತರು ಕರ್ಮಠತೆಯನ್ನು ರೂಢಿಸಿಕೊಂಡರು. ಆ ಲಿಂಗಕ್ಕೆ ಕುಂಕುಮ ಹಚ್ಚೋದು ಆ ರೀತಿ ಪೂಜೆ ಮಾಡೋದು ಎಲ್ಲಾ ಮೂರ್ತಿ ಪೂಜೆಗೆ ಸಮಾನವೇ. ಮಡಿ ಮೈಲಿಗೆ ಲಿಂಗಾಯತದಲ್ಲಿ ಹೇಳಿಲ್ಲ. ಇದೆಲ್ಲ ವೀರಶೈವರ ಕಲ್ಪನೆ. ಅದಕ್ಕೆ ಹೇಳೋದು ವೀರಶೈವರಿಂದ ಲಿಂಗಾಯತ ತತ್ವ ಹಾಳಾಯಿತು ಎಂದು.

ಪ್ರಶ್ನೆ: ಇತ್ತೀಚಿಗೆ ಮತ್ತೆ ಕಲ್ಯಾಣ ಎಂಬ ಆಂದೋಲನ ನಡೆಯುತ್ತಿದೆ. ಅದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನಾನು ಇದರ ಜೊತೆಗೆ ಇದ್ದೇನೆ, ಗಮನಿಸುತ್ತಿದ್ದೇನೆ ಅದು ಚೆನ್ನಾಗಿ ನಡೆಯುತ್ತಿದೆ ಮತ್ತು ಅದರಿಂದ ಒಳ್ಳೆಯದಾಗುತ್ತೆ. ಯಾರಾದರೂ ಒಳ್ಳೆಯದು ಮಾಡುತ್ತಿದ್ದಾರೆಂದರೆ ಅವರ ಕಾಲೆಳೆಯುವ ಜನ ಜಾಸ್ತಿ. ಅದು ಮಾಡಬಾರದು. ಆಗಲಾರದವರು ಜಾಸ್ತಿ ನಿಂದನೆ ಮಾಡುತ್ತಾರೆ. ಅದಕ್ಕೆ ತಲೆ ಕೆಡಿಸಿಕೊಳ್ಳಬಾರದು. ಸಾಣೇಹಳ್ಳಿ ಸ್ವಾಮೀಜಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಇಂತಹವನ್ನ ಸಕಾರಾತ್ಮಕವಾಗಿ ನೋಡಬೇಕು. ಹೊಸ ಚಿಂತನೆಗಳು ಇದರಿಂದ ಬರುತ್ತವೆ ಅನ್ನುವ ನಂಬಿಕೆ ನನಗಿದೆ.

ಸಂದರ್ಶನ: ಅನಿಲ್ ಕುಮಾರ್ ಚಿಕ್ಕದಾಳವಟ್ಟ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...