Homeಅಂಕಣಗಳುಒಳಗಣ ಹೆಣ್ಣಿನ ಮೊಳಕೆ; ಮಂಜಮ್ಮ ಜೋಗತಿ ಅವರ ಆತ್ಮಕಥನ ’ನಡುವೆ ಸುಳಿವ ಹೆಣ್ಣು’ವಿನಿಂದ ಆಯ್ದ ಅಧ್ಯಾಯ

ಒಳಗಣ ಹೆಣ್ಣಿನ ಮೊಳಕೆ; ಮಂಜಮ್ಮ ಜೋಗತಿ ಅವರ ಆತ್ಮಕಥನ ’ನಡುವೆ ಸುಳಿವ ಹೆಣ್ಣು’ವಿನಿಂದ ಆಯ್ದ ಅಧ್ಯಾಯ

- Advertisement -
- Advertisement -

(ಮಂಜಮ್ಮ ಜೋಗತಿ ಅವರ ಆತ್ಮಕಥನ ’ನಡುವೆ ಸುಳಿವ ಹೆಣ್ಣು’ವಿನಿಂದ ಆಯ್ದ ಅಧ್ಯಾಯ)

ಆರು ಏಳನೆ ಕ್ಲಾಸಿನತನಕ ನನಗೆ ಗಂಡು ಹೆಣ್ಣು ಅನ್ನೋ ಸ್ವಭಾವ ಇರ್‍ತಿರ್‍ಲಿಲ್ಲ. ಎಲ್ರು ಒಟ್ಟಿಗೆ ಹೋಗ್ತಿದ್ವಿ, ಒಟ್ಟಿಗೆ ಬರ್‍ತಿದ್ವಿ. ನಾನು ಮೊದ್ಲಿಂದನೂ ಸ್ವಲ್ಪ ಹೆಣ್ಣು ಹುಡಿಗೇರ ಜತೆನೆ ಜಾಸ್ತಿ ಇರ್‍ತಿದ್ದೆ. ನಮ್ಮಮ್ಮ ಹುಡುಗರು ಇದ್ದಾಗಲೇ ನಮ್ಮ ಕೂಡ ಮುಸುರೆ ತಿಕ್ಸೋದು, ಸೆಗಣೀಲೆ ನೆಲ ಸಾರಿಸೋದು ಮಾಡಿಸ್ತಿತ್ತು. ಹಾಂಗಾಗಿ ನಮ್ಮ ಮನೇಲಿ ಹೆಣ್ಣು ಹುಡುಗ್ರು ಗಂಡು ಹುಡುಗ್ರು ಅಂತ ಭೇದ ಕಡಿಮೆ ಇತ್ತು.

ಸ್ಕೂಲಲ್ಲಿ ನಾಟಕಗಳನ್ನ ಮಾಡ್ತಿದ್ರು. ಆರನೆ ಕ್ಲಾಸು ಓದೋಕಾದ್ರೆ ತಿರುನೀಲಕಂಠ ಅನ್ನೋ ನಾಟಕ ಆಡಿದ್ರು. ಈ ನಾಟಕದಲ್ಲಿ ನಾನು ಪರಮಾತ್ಮನ ಪಾತ್ರ ಮಾಡಿದ್ದೆ. ಅದು ಒಂದೇ ಸೀನಿತ್ತು. ಅದರ ಕಥೆ ಸ್ವಲ್ಪ ನೆಪ್ಪಿದೆ. ನೀಲಕಂಠ ವೇಶ್ಯೆ ಮನೆ ಮುಂದೆ ಬರುವ ಹೊತ್ತಿಗೆ ಸರಿಯಾಗಿ ವೇಶ್ಯೆ ಆಕಸ್ಮಾತ್ ಮುಸುರೆ ನೀರು ಚೆಲ್ಲುತ್ತಾಳೆ. ಅದು ನೀಲಕಂಠನ ಮೈಮೇಲೆ ಬಿದ್ದು ಬಟ್ಟೆಯೆಲ್ಲಾ ಒದ್ದೆಯಾಗುತ್ತೆ, ಇದನ್ನು ನೋಡಿ ಅಯ್ಯೋ ತಪ್ಪಾಯ್ತು ಎಂದು ನೀಲಕಂಠನಲ್ಲಿ ಕ್ಷಮೆ ಕೇಳುತ್ತಾಳೆ. ಘಟಿಸಿದ ತಪ್ಪಿಗಾಗಿ ನೀಲಕಂಠನನ್ನು ಒಳಗೆ ಕರೆದು ಬಟ್ಟೆ ತೊಳೆದು, ಬೇರೆ ಬಟ್ಟೆ ಕೊಟ್ಟು ಸ್ನಾನ ಮಾಡಿಸಿ, ಗಂಧಲೇಪನ ಮಾಡಿ ಕಾಲಿಗೆ ಬಿದ್ದು ಕಳಿಸಿರುತ್ತಾಳೆ. ಇದನ್ನು ನೋಡಿದ ಹೆಂಡತಿ ನೀನು ಸೂಳೆ ಮನೆಗೆ ಹೋಗಿದ್ದಿಯ ಎಂದು ಜಗಳ ಮಾಡ್ತಾಳೆ. ಈ ಜಗಳದಿಂದಾಗಿ ಶಿವನ ಮೇಲೆ ಪ್ರಮಾಣ ಮಾಡಿ ಗಂಡ ಹೆಂಡತಿ ಬೇರೆ ಬೇರೆಯಾಗ್ತಾರೆ. ಈ ನಾಟಕದಲ್ಲಿ ನನ್ನ ಪಾತ್ರ ಮುಗಿದ ಮೇಲೆ ನಾನು ಮೊದಲ ಬಾರಿಗೆ ಹೆಣ್ಣಿನ ಡ್ರೆಸ್ ಹಾಕೊಂಡು ಡಾನ್ಸ್ ಮಾಡಿದ್ದೆ. ಕಾಪಾಡು ಶ್ರಿ ಸತ್ಯನಾರಾಯಣ ಅನ್ನೋ ಹಾಡು ಹಾಕಿದ್ರು.

ಆಗ ಹಳ್ಳಿ ನಾಟಕಗಳಲ್ಲಿ ಹೆಣ್ಣು ಮಕ್ಕಳು ಪಾತ್ರ ಮಾಡ್ತಿರ್‍ಲಿಲ್ಲ. ಗಂಡುಮಕ್ಕಳೆ ಮೀಸೆ ಬೋಳಿಸಿಕೊಂಡು ಸೀರೆ ಉಟ್ಟು ಹೆಣ್ಣು ಪಾತ್ರ ಮಾಡ್ತಿದ್ದರು. ಆಗ ಸಂಗ್ಯಾಬಾಳ್ಯ ನಾಟಕದ ಪ್ರಚಾರ ಹೆಚ್ಚಾಗಿತ್ತು. ಕುರುಕ್ಷೇತ್ರ ನಾಟಕದಲ್ಲಿ ನಮ್ಮ ಅಯ್ಯ ದ್ರೋಣಾಚಾರ್ಯರ ಪಾತ್ರ ಮಾಡಿದ್ದರು. ನಾನು ಆಗ ಹುಡುಗೀರ ಜತೆ ಹೆಣ್ಣುವೇಷದಲ್ಲಿ ಸಖಿ ಪಾತ್ರ ಮಾಡಿದ್ದೆ. ಆಗ ಹೆಣ್ಣುಡುಗಿಯರು ಜಾಸ್ತಿ ಶಾಲೆಗೆ ಬರ್‍ತಿರ್‍ಲಿಲ್ಲ. ಹಂಗಾಗಿ ನನ್ನ ತಂಗಿಯರು ಕೂಡ ಓದಲಿಲ್ಲ. ಸರಿಯಾಗಿ ಶಾಲೆಗೆ ಬರುತ್ತಿರಲಿಲ್ಲ. ಶಾಲೆಗೆ ಅಂತ ಬಂದು ಚಕ್ಕರ್ ಹೊಡೆದು ಎಲ್ಲೆಲ್ಲೋ ಸುತ್ತುತ್ತಿದ್ರು. ಶಾಲೆಗಂತ ಬಂದು ಕಬ್ಬಿನ ಪ್ಯಾಕ್ಟ್ರಿಗೆ ಹೋಗಿ, ಶಾಲೆ ಬಿಡೋ ಟೈಮಿಗೆ ಮನಿಗೆ ಬರ್‍ತಿದ್ರು. ನನ್ನ ದೊಡ್ಡ ತಂಗಿ ಸಾಲಿಗೆ ಕಳ್ಸಿದ್ರೆ ಲಾರಿ ಬಾಯಿಗೆ ಬೀಳ್ತೀನಿ ಅಂತಿದ್ಲು. ಹಂಗಾಗಿ ಅವರು ಓದ್ಲೇ ಇಲ್ಲ, ವಿದ್ಯೆನೂ ಅತ್ಲಿಲ್ಲ.

ನಮ್ಮಣ್ಣನಿಗೆ ಬಾರಿ ಸಿಟ್ಟು. ಒಂದ್ಸಲ ಹಾಸ್ಟೆಲಿನಿಂದ ಮನೆಗೆ ಬಂದಾಗ ಊಟಕ್ಕೆ ಕುಂತಿದ್ದ. ಆಗ ನೀರು ಕೊಡು ಮಂಜು ಅಂದ. ನಾನು ಕೊಡ್ಲಿಲ್ಲ. ಮತ್ತೆ ಕೇಳಿದ ‘ಹೋಗೊ ಮಿಂಡ್ರಿಗುಡ್ತಾನ ನಾ ಕೊಡೊದಿಲ್ಲ ಅಂದೆ. ಆಗ ‘ನೋಡು ಎದ್ದು ಬಂದ್ರ ಜೀವ ತೆಗದುಬಿಡ್ತಿನಿ’ ಅಂತ ಗದರಿಸಿದ. ನಾನು ಹೆದರಿ ನೀರು ಕೊಡೋಕೆ ಅಂತ ಚೆಂಬು ತೊಗೊಂಡು ದೊಡ್ಡ ಗುಡಾಣದಾಗ ನೀರು ತುಂಬ್ತಿದ್ದೆ, ಅಣ್ಣ ಬಂದೋನೆ ತಲೆ ಹಿಡ್ಕಂಡು ಆ ಗುಡಾಣದಾಗ ತುರುಕಿ ಇನ್ನೊಂದ್ಸಲ ಅಂತೀಯ ಅಂತ ಅದುಮಿಬಿಟ್ಟಿದ್ದ. ನನಗೆ ಉಸಿರುಕಟ್ಟಿದಂತಾಗಿ ಕಿರುಚಾಡಿದ್ದೆ. ಆವಾಗ ನನ್ನ ಹಲ್ಲು ಮುರಿದಿತ್ತು. ನಾನು ನೋವಿನಿಂದಾಗಿ ವಿಲವಿಲಾಂತ ಒದ್ದಾಡಿದ್ದೆ. ಈಗ್ಲೂ ಆ ಗುರುತು ಹಂಗೆ ಇದೆ. ಅವತ್ತೆ ಕಡೆ ನಾನು ಇವತ್ತಿಗೂ ಯಾರನ್ನೂ ಬೈಯೋದಿಲ್ಲ. ಅದ್ರಲ್ಲೂ ‘ಮಿಂಡ್ರಿಗುಡ್ತಾನ’ ಅನ್ನೋ ಬೈಗುಳ ಮಾತ್ರ ಅಪ್ಪಿತಪ್ಪಿ ಬರಲ್ಲ.

ಆಗ ನಾವು ಕೊಳೆಬಟ್ಟೆಗಳನ್ನು ತೊಳೆಯಲೆಂದು ಗಂಟು ಕಟ್ಟಿಕೊಂಡು ಶಾಲೆಗೆ ಹೋಗ್ತಿದ್ವಿ. ಕ್ಲಾಸ್‌ರೂಮಿನಲ್ಲೆ ಒಂದು ಮೂಲೆಯಲ್ಲಿ ಆ ಗಂಟನ್ನು ಇಡ್ತಾ ಇದ್ವಿ. ಮಧ್ಯಾನ ಊಟಕ್ಕೆ ಬಿಟ್ಟಾಗ ಶಾಲೆ ಹಿಂದೆ ಇದ್ದ ಹಳ್ಳಕ್ಕೆ ಹೋಗಿ, ತಂದ ಬುತ್ತಿ ಊಟ ಮಾಡಿ, ಬಟ್ಟೆ ತೊಳೆದು, ಶಾಲೆ ಹಿಂದಿನ ಗಿಡಗಳಿಗೆ ಒಣಗಲು ಹಾಕ್ತಿದ್ವಿ. ಮಧ್ಯಾನದ ನಂತರ ಇಂಟರವೆಲ್ ಬಿಟ್ಟಾಗ ಒಣಗಿದ ಬಟ್ಟೆಗಳನ್ನು ಮಡಿಚ್ಕಂಡು ಗಂಟು ಕಟ್ಟಿ ಮತ್ತೆ ಕ್ಲಾಸ್‌ರೂಮಲ್ಲಿ ಇಟ್ಕೋತಿದ್ವಿ. ಸಂಜೆ ಶಾಲೆ ಬಿಟ್ಟಾಗ ತಂಗಿಯರ ಜತೆ ಗಂಟು ಹೊತ್ಕಂಡು ಮನೆಗೆ ಬರ್‍ತಿದ್ದೆ. ಮತ್ತೆ ಮನೇಲಿ ನೀರು-ಪಾರು ತಂದಾಕಿ ಊರಾಗ ಟೂಷನ್‌ಗೆ ಹೋಗ್ತಿದ್ವಿ.

ಒಂದ್ಸಲ ಟೂರ್‌ಗೆ ಹೋಗೋಕೆ ಮನೇಲಿ ದುಡ್ಡು ಕೊಡ್ಲಿಲ್ಲ, ನನಿಗೆ ಟೂರ್ ಹೋಗಬೇಕು ಅನ್ನೋದು ಬಾಳ ಆಸೆ. ಹೆಂಗಾದ್ರೂ ಮಾಡಿ ನಾನೆ ದುಡ್ಡು ದುಡುಕೊಂಡು ಟೂರ್ ಹೋಗ್ಬೇಕು ಅಂತ, ಪ್ಯಾಕ್ಟ್ರಿಗೆ ಬಕಾಸು ಹೊರಾಕ ಹೋಗ್ತಿದ್ವಿ. ಮಿಷನ್ನಿನಲ್ಲಿ ರಸ ತೆಗೆದ ಕಬ್ಬು ಇಪ್ಪಿಯ ಹಾಗೆ ಪುಡಿಪುಡಿಯಾಗಿ ಬೀಳ್ತಿತ್ತು. ಹಾಗೆ ಬಿದ್ದ ಇಪ್ಪಿಗೆ ನೀರು ಮಿಕ್ಸ್ ಮಾಡ್ತಿದ್ರು. ಅದನ್ನೆ ಬಕಾಸು ಅಂತಿದ್ರು. ನಾವು ಅದನ್ನ ತಗಂಡೋಗಿ ಮಿಷನ್‌ಗೆ ಹಾಕ್ತಿದ್ವಿ. ಅದು ಇಟಂಗಿ ತರ ಬಾಕ್ಸ್ ಬಾಕ್ಸ್ ಆಗಿ ಹೊರಗಡೆ ಬರ್‍ತಿತ್ತು. ಅದೇನೋ ಪೇಪರ್ ಮಾಡೋಕೆ ಹೋಗ್ತಿತ್ತಂತೆ. ರಾತ್ರಿ ಎಂಟು ಗಂಟೆಗೆ ಹೋಗಿ ಬೆಳಗಿನ ಜಾವ ನಾಲಕ್ ಗಂಟೆಗೆ ಬರ್‍ತಿದ್ವಿ. ಅದಕ್ಕ ಆರು ರೂಪಾಯಿನೋ ಏಳು ರೂಪಾಯಿನೋ ಕೊಡ್ತಿದ್ರು.

ಈ ರೀತಿ ಕೆಲಸ ಮಾಡೋದನ್ನು ಒಂದ್ಸಲ ಮೇಷ್ಟ್ರು ಬಸವರಾಜಪ್ಪ ಅಂತ ನನ್ನನ್ನ ನೋಡಿದ್ರು. ಅವರು ‘ಏನಲೇ ಶೆಟ್ಟಿ ಇಲ್ಲೇನು ಮಾಡ್ತಿ’ ಅಂದ್ರು. ಆಗ ನಾನು ತಡವರಿಸ್ತಾ ‘ಟೂರ್‌ಗೆ ಮನೇಲಿ ದುಡ್ಡು ಕೊಡ್ಲಿಲ್ಲ ಸಾ.. ಅದಕ್ಕೆ ಬಕಾಸು ಹೊರಾಕ ಬಂದೀನಿ’ ಅಂದಿದ್ದೆ. ಆಗ ಮೇಷ್ಟ್ರು ನಮ್ಮಪ್ಪನ ಹತ್ರ ಹೋಗಿ ‘ಶೆಟ್ರೆ ಮಕ್ಕಳನ್ನ ಹಂಗ ರಾತ್ರಿ ನಿದ್ದಿಗೆಡಸ್ಬಾರದು ಬೆಳಿಯೋ ಮಕ್ಕಳು, ನಿಮಗೆ ಗೊತ್ತಾಗಲ್ಲೇನು?’ ಅಂತ ಬೈದಾರ. ಆಗ ನಮ್ಮಪ್ಪ ನನ್ನ ಹತ್ರ ಬಂದು ‘ಮಂಜು ಮೇಷ್ಟ್ರು ಬೈದ್ರು ಇನ್‌ಮ್ಯಾಲೆ ಪ್ಯಾಕ್ಟ್ರಿಗೆ ರಾತ್ರಿ ಕೆಲಸಕ್ಕೆ ಬರಬ್ಯಾಡ’ ಅಂದ್ರು. ಅಷ್ಟೊತ್ತಿಗೆ ಬಕಾಸು ಹೊತ್ತು ಎಪ್ಪತ್ತು ರೂಪಾಯಿ ಕೂಡಿಸಿದ್ದೆ. ಅದೆ ಹಣ ತೊಗೊಂಡು ಟೂರಿಗೆ ಹೋದೆ.

ನಾವು ಆರು ಏಳನೆ ಕ್ಲಾಸು ಓದೋವಾಗ ಹುಡುಗರ ಸಂಖ್ಯೆ ಜಾಸ್ತಿ ಇತ್ತು. ಒಬ್ಬ ಮುಸ್ಲಿಂ ಟೀಚರ್ ಇದ್ರು. ಅವರು ಪ್ಯಾಕ್ಟರಿ ಮ್ಯಾನೇಜರ್ ಒಬ್ರನ್ನು ಪ್ರೀತಿಸ್ತಿದ್ರು. ಆಗ ನಮಿಗೆ ಲವ್ವು ಗಿವ್ವು ಅಂತವೆಲ್ಲಾ ಗೊತ್ತಾಗ್ತಿರ್‍ಲಿಲ್ಲ. ಆಯಮ್ಮ ಮ್ಯಾನೇಜರ್‌ಗೆ ಕೊಡೋಕೆ ನಮ್ಮ ಕೈಗೆ ಒಂದು ಚೀಟಿ ಕೊಟ್ಟು ಕಳಿಸ್ತಿದ್ರು. ಅದನ್ನು ನಾವು ಕೊಡ್ತಿದ್ವಿ. ಬೆಳಿಗ್ಗೆ ಮ್ಯಾನೇಜರ್ ಒಂದು ಚೀಟಿ ಕೊಡ್ತಿದ್ದರು ಅದನ್ನ ತೊಗೊಂಡೋಗಿ ಟೀಚರ್‌ಗೆ ಕೊಡ್ತಿದ್ವಿ. ಒಂದು ದಿನನಾದ್ರು ಆ ಚೀಟಿಗಳನ್ನ ಓದ್ಲಿಲ್ಲ. ಆಯಮ್ಮ ದಾವಣಗೆರೆಯಿಂದ ಬರುವಾಗ ಮುಸಲ್ಮಾನರ ತಾಳಿ ಕಟ್ಟಿಕೊಳ್ಳತಿದ್ಲು, ಕುಕ್ಕವಾಡಕ್ಕ ಬಂದ ತಕ್ಷಣ ಹಿಂದೂ ತರ ತಾಳಿ ಕಟ್ಟಿಕೊಳ್ತಿದು. ಹಂಗ್ಯಾಕ ಮಾಡ್ತಿದ್ರೋ ಗೊತ್ತಾಗ್ತಿರ್‍ಲಿಲ್ಲ.

ನಾನು ಏಳನೇ ಕ್ಲಾಸು ಓದಬೇಕಾದ್ರೆ ಹೆಣ್ತನದ ಲಕ್ಷಣಗಳು ಬರೋಕೆ ಶುರುವಾಯ್ತು. ಊರಲ್ಲಿ ಎರಡು ಮೂರು ಸಲ ಹೆಣ್ಣುವೇಷ ಹಾಕಿ ನಾಟಕ ಮಾಡಿದೆ. ಆಗ ಎಲ್ಲರೂ ಮಂಜು ಸೇಮ್ ಹೆಣ್ಣು ಮಗಳು ಕಂಡಂಗ ಕಾಣ್ತಾನೆ ಅಂತ ಹೇಳ್ತಿದ್ರು. ಬಸವರಾಜಪ್ಪ ಮೇಷ್ಟ್ರು ಒಂದ್ಸಲ ನಾಟಕ ಮಾಡಿಸಿದ್ರು ಆ ನಾಟಕದಲ್ಲಿ ನಾನು ಹೆಣ್ಣುಡುಗಿ ಪಾತ್ರ ಮಾಡಿದ್ದೆ. ಆಗ ಅವರು ನನ್ನ ಹೆಸರು ಬಿಟ್ಟು ಬೆಂಗಳೂರು ಲತ ಅನ್ನೋ ಹೆಸರಲ್ಲಿ ಅನೋನ್ಸ್ ಮಾಡ್ತಿದ್ರು. ಆವಾಗಿನಿಂದ ಹೆಣ್ಣಮಕ್ಕಳ ಲಕ್ಷಣಗಳು ಕಾಣಿಸಿಕೊಳ್ಳಕೆ ಶುರುವಾದ್ವು. ಆ ದಿನ ಬೆಂಗಳೂರು ಲತಾ ಅಂತ ಕರೆಸಿಕೊಂಡದ್ದು, ಹೆಣ್ಣಿನ ಹಾಗೆ ಬಳುಕಿ ಡಾನ್ಸ್ ಮಾಡಿ ಜನರಿಂದ ಮೆಚ್ಚುಗೆಪಡೆದದ್ದಕ್ಕೆ ಮನಸಾರೆ ಖುಷಿ ಪಟ್ಟಿದ್ದೆ.

PC : Prajavani

ಒಂದ್ಸಲ ನಮ್ಮೂರಲ್ಲಿ ನಾಟಕದ ಕಂಪನಿ ಹಾಕಿದ್ರು. ಒಂದು ಟೇಬಲ್ಲಿನ ಮೇಲೆ ಒಬ್ಬಾತ ‘ಅತ್ತ ಇತ್ತ ನೋಡಿ ಬಂದೆ ಅವನು ಸಿಗಲಿಲ್ಲ’ ಅನ್ನೋ ರಿಕಾರ್ಡಿಗೆ ಡಾನ್ಸ್ ಮಾಡ್ತಿದ್ದ. ಅದನ್ನ ನೋಡಿ ಅದರಂಗ ನಾನು ಡಾನ್ಸ್ ಮಾಡ್ಬೇಕು ಅನ್ನೋ ಆಸೆ ಆಗ್ತಿತ್ತು. ನನಗೆ ಉದ್ದಕ್ಕ ಜಡೆ ಹಾಕ್ಕೊಂಡು, ಲಂಗ ಚೋಲಿ ಹಾಕ್ಕೊಂಡು ಡಾನ್ಸ್ ಮಾಡಬೇಕಂತ ಒಳಗಿಂದ ಆಸೆ ಉಕ್ಕಿ ಬರ್‍ತಿತ್ತು. ಆದರೆ ಮನೇಲಿ ಮಾಡಂಗಿರ್‍ಲಿಲ್ಲ. ಹಾಗೆ ಮಾಡಿದ್ರೆ ಹೆಂಗ್ಸು ಮಾಡಿದಂಗೆ ಮಾಡ್ತಿಯಲ್ಲೋ ಅಂತ ಬೈಯಿತಿದ್ರು. ಅಯ್ಯ ಒಡಿಯಾದು ಬೈಯಾದು ಮಾಡ್ತಿದ್ರು. ನಮ್ಮ ಮನೇಲಿ ಯಾರು ಇಲ್ದಾಗ ಹೆಣ್ಣುಮಕ್ಳ ಡ್ರೆಸ್ ಹಾಕ್ತಿದ್ದೆ. ಬರ್‍ತಾಬರ್‍ತಾ ಗಂಡು ಹುಡುಗರ ಜೊತೆ ಆಟ ಆಡೋದನ್ನು ಬಿಟ್ಟೆ. ಅವರನ್ನ ಮಾತಾಡ್ಸೋಕೆ ಒಂಥರಾ ನಾಚಿಕೆ ಸ್ವಭಾವ ಬರ್‍ತಿತ್ತು. ಹೆಣ್ಣ ಮಕ್ಕಳ ಜತೆನೂ ಜಾಸ್ತಿ ಹೋಗ್ತಿರ್‍ಲಿಲ್ಲ. ಯಾವಾಗ್ಲೂ ಒಬ್ಬನೇ ಇರ್‍ತಿದ್ದೆ. ಒಂಟಿಯಾಗಿರೋದು ಒಂದು ರೀತಿ ಖುಷಿ ಕೊಡ್ತಿತ್ತು. ಹಾಗಾಗಿ ನನ್ನ ಪಾಡಿಗೆ ನಾನು ಇರೋದೆ ಹೆಚ್ಚಾಯ್ತು.

ನನಗೆ ಏಳು ಎಂಟನೇ ಕ್ಲಾಸಿನ್ಯಾಗ ಪಿಡುಸು ಬಂದಂಗ ಬರ್‍ತಿತ್ತು. ಕೈ ಸೊಟ್ಟಾಗೋದು, ನಾಲಿಗಿ ಕಡಕಳ್ಳಾದು, ಬಾಯಾಗ ಬುರುಗು ಬರೋದು ಈ ತರವೆಲ್ಲಾ ಆಗ್ತಿತ್ತು. ಅಂಗಾದಾಗ ಪಿಡ್ಸು ಬರ್‍ತಾತಿ ಅಂತ ಆಸ್ಪತ್ರೆಗೆ ಹೋಗಿ ಚಕಪ್ ಮಾಡಿಸ್ತಿದ್ರು. ಡಾಕ್ಟರನ್ನ ಕೇಳಿದ್ರೆ ಏನೂ ಇಲ್ಲ ಅಂತಿದ್ರು. ಮೂರು ತಿಂಗಳಿಗೊಮ್ಮೆ ಹಿಂಗಾಗ್ತಿತ್ತು. ಆಗ ಜೋತಿಷಿಗಳನ್ನು ಕೇಳಿಸಿ ನೋಡಿದ್ರೆ ದೇವರ ಒಲುಮೆ ಕಾಟ ಐತಿ ಅಂತ ಹೇಳ್ತಿದ್ರು. ಇದನ್ನು ಕೇಳಿದ ಅಯ್ಯಂಗೆ ಅಮ್ಮಂಗೆ ಸೇರಿಕಿ ಬರ್‍ತಿರ್‍ಲಿಲ್ಲ. ಯಾವ ದೇವ್ರು ಇಲ್ಲ ದಿಂಡ್ರು ಇಲ್ಲ. ಇವನು ಬೇಕಂತನೆ ಆ ರೀತಿ ಮಾಡ್ತಾನೆ. ಮುಂದೆ ಸರಿ ಹೋಗ್ತಾನೆ ಬಿಡು ಅಂತ ಆ ವಿಷ್ಯನ ಅಲ್ಲಿಗೆ ಬಿಡ್ತಿದ್ರು.

ದಿನದಿಂದ ದಿನಕ್ಕೆ ಮನೆ ಕೆಲಸ ಮಾಡೋದು, ಪೂಜೆ ಮಾಡೋದ್ರಲ್ಲಿ ನನಗೆ ಹೆಚ್ಚು ಆಸಕ್ತಿ ಬೆಳೀತು. ನಾನು ಪೂಜೆ ಮಾಡೋಕೆ ಶುರು ಮಾಡಿದೆ. ಆವಾಗಿನಿಂದ ನಮ್ಮಮ್ಮ ಪೂಜೆ ಮಾಡೋದನ್ನೆ ಬಿಡ್ತು. ನಾನು ಅಮ್ಮನಿಗಿಂತ ಅಚ್ಚುಕಟ್ಟಾಗಿ ಪೂಜೆ ಮಾಡ್ತಿದ್ದೆ. ನಮ್ಮನೇಲಿ ಚೌಡಮ್ಮ, ಈರಣ್ಣ, ವೆಂಕಟೇಶ್ವರಸ್ವಾಮಿ ನಮ್ಮ ಕುಲದೇವತೆ ಕನ್ನಿಕಾ ಪರಮೇಶ್ವರಿ ಚಿತ್ರಪಟಗಳಿದ್ವು. ನಮ್ಮಮ್ಮನಿಗೆ ಚೌಡಮ್ಮನ ಒಲುಮೆಯಾಗಿತ್ತು. ಕುಕ್ಕವಾಡದ ಮನೇಲಿ ಅಡ್ಡಗೋಡೆ ಮೇಲೆ ಮಗುವಿಗೆ ಹಾಲು ಕುಡಿಸುವ ರೀತಿ ಐದು ಲಿಂಗಗಳು, ಏಳು ಅಡಿ ಸರ್ಪದ ಆಕಾರದಲ್ಲಿ ಹುತ್ತದ ಆಕಾರ ಒಡಮೂಡಿತ್ತು. ಒಂದು ದೊಡ್ಡಾವು ನಮ್ಮ ಮನೆಗೆ ಬಂದೊಗ್ತಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ದೇವಿಯ ಒಲುಮೆ ಮೊದಲಿನಿಂದಲೂ ಇತ್ತು. ಅದೇ ದೇವಿನೆ ನನಗೂ ಒಲುಮೆಯಾಗಿದೆ ಅಂತ ಊರಲ್ಲಿ ಜನ ಮಾತಾಡಿಕೊಳ್ತಾ ಇದ್ರು.

(ಈ ಪುಸ್ತಕವನ್ನು ಪಲ್ಲವ ಪ್ರಕಾಶನ ಪ್ರಕಟಿಸಿದ್ದು, ಅರುಣ್ ನಿರೂಪಿಸಿದ್ದಾರೆ)

ಅರುಣ್ ಜೋಳದಕೂಡ್ಲಿಗಿ

ಅರುಣ್ ಜೋಳದಕೂಡ್ಲಿಗಿ
ಬಳ್ಳಾರಿ ಜಿಲ್ಲೆಯ ಜೋಳದಕೂಡ್ಲಿಗಿಯವರು. ಸದ್ಯಕ್ಕೆ ಪ್ರೊ.ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಜನಪದ ಕವಿಗಳ ಕುರಿತು ಉನ್ನತ ಸಂಶೋಧನೆಯಲ್ಲಿ ತೊಡಗಿದ್ದಾರೆ. ನೆರಳು ಮಾತನಾಡುವ ಹೊತ್ತು, ಸಂಡೂರು ಭೂಹೋರಾಟ, ಅವ್ವನ ಅಂಗನವಾಡಿ, ಕನ್ನಡ ಜಾನಪದ ತಾತ್ವಿಕ ನೆಲೆಗಳು ಪ್ರಮುಖ ಕೃತಿಗಳು


ಇದನ್ನೂ ಓದಿ: ಪುಸ್ತಕ ಪರಿಚಯ: ಕಾವ್ಯದ ಗೆರೆಯ ಮೇಲೆ ನಡೆದುಬಂದ ಪಾತ್ರಗಳು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿಯಲ್ಲಿ ‘ಅಬ್ ಕಿ ಬಾರ್ ರಾಬರ್ಟ್ ವಾದ್ರಾ’ ಪೋಸ್ಟರ್; ಪ್ರಿಯಾಂಕಾ ಪತಿ ಸ್ಪರ್ಧೆಗೆ ಹೆಚ್ಚಿದ...

0
2019ರ ಲೋಕಸಭಾ ಚುನಾವಣೆ ಸೋಲಿನ ನಂತರ ರಾಹುಲ್ ಗಾಂಧಿ ತಮ್ಮ ಕ್ಷೇತ್ರವನ್ನು ಅಮೇಥಿಯಿಂದ ಕೇರಳದ ವಯನಾಡಿಗೆ ಸ್ಥಳಾಂತರಿಸಿದ್ದಾರೆ. ಆದರೆ, ಬಿಜೆಪಿ ಹಾಲಿ ಸಂಸದೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿ ಯಾರು...