Homeಪುಸ್ತಕ ವಿಮರ್ಶೆರಾಜಾರಾಂ ತಲ್ಲೂರು ಅವರ ’ಕರಿಡಬ್ಬಿ ಪುಸ್ತಕದಿಂದ ಆಯ್ದ ಅಧ್ಯಾಯ; #WHOCARES

ರಾಜಾರಾಂ ತಲ್ಲೂರು ಅವರ ’ಕರಿಡಬ್ಬಿ ಪುಸ್ತಕದಿಂದ ಆಯ್ದ ಅಧ್ಯಾಯ; #WHOCARES

- Advertisement -
- Advertisement -

ತುರ್ತುಸ್ಥಿತಿಗಳಲ್ಲಿ ನಾಗರಿಕರಿಗೆ ಸಹಾಯ ಮತ್ತು ಪರಿಹಾರಗಳನ್ನು ಒದಗಿಸುವುದಕ್ಕಾಗಿ ಪ್ರಧಾನಮಂತ್ರಿಗಳ ನಿಧಿ (PMCARES Fund- Prime Minister’s Citizen Assistance And Relief in Emergency Situations) ಸ್ಥಾಪನೆಗೊಂಡದ್ದು ಮಾರ್ಚ್ 27, 2020ರಂದು. ಸದ್ರಿ ಫಂಡಿನ ವೆಬ್‌ಸೈಟಿನಲ್ಲಿ ಇದನ್ನು ಒಂದು ಸಾರ್ವಜನಿಕ ಚಾರಿಟೆಬಲ್ ಟ್ರಸ್ಟ್ ಎಂದು ಹೆಸರಿಸಲಾಗಿದೆ. ದೇಶದ ಪ್ರಧಾನಮಂತ್ರಿ ಈ ಫಂಡಿನ “ಸೆಟ್ಲರ್” (ಅರ್ಥಾತ್, ಕರ್ತೃ) ಮತ್ತು ಆಡಳಿತ ಟ್ರಸ್ಟಿ ಆಗಿದ್ದು, ಪ್ರಧಾನಿ ಅಲ್ಲದೆ ರಕ್ಷಣಾ ಸಚಿವ, ಗೃಹ ಸಚಿವ ಮತ್ತು ಹಣಕಾಸು ಸಚಿವರು ಸದ್ಯಕ್ಕೆ ಆ ಟ್ರಸ್ಟಿನ ಟ್ರಸ್ಟಿಗಳಾಗಿರುತ್ತಾರೆ. ಟ್ರಸ್ಟಿಗೆ ಕನಿಷ್ಠ 4ಮತ್ತು ಗರಿಷ್ಠ 7ಮಂದಿ ಟ್ರಸ್ಟೀಗಳಿರಬಹುದು.

ಉದ್ದೇಶಗಳು

  1. ನೈಸರ್ಗಿಕ ವಿಪತ್ತುಗಳು ಮತ್ತು ಆರೋಗ್ಯ ತುರ್ತುಸ್ಥಿತಿಗಳ ಸಂದರ್ಭದಲ್ಲಿ ಆರೋಗ್ಯ, ಔಷಧಿ ರಂಗಗಳಲ್ಲಿ ಮೂಲ ಸೌಕರ್ಯ ನಿರ್ಮಾಣಕ್ಕೆ ಸಹಾಯ.
  2. ಸಂತ್ರಸ್ತಿರಿಗೆ ಆರ್ಥಿಕ ಸಹಾಯ ಒದಗಿಸುವುದು.
  3. ಪ್ರಧಾನಮಂತ್ರಿಗಳು ಪ್ರಕಟಿಸುವ ವಿಪತ್ತು ಪರಿಹಾರ ಯೋಜನೆಗಳಲ್ಲಿ ಬಳಕೆ ಮಾಡುವುದು.
  4. ಟ್ರಸ್ಟಿನ ಉದ್ದೇಶಗಳಿಗೆ ಪೂರಕವಾಗಿರುವ ಸಂಸ್ಥೆಯ, ವ್ಯಕ್ತಿ ಮತ್ತು ಕಾರ್ಯಕ್ರಮಗಳಿಗೆ ಸಹಾಯ ಮಾಡುವುದು
  5. ಯಾವುದೇ ಜಾತಿ, ವರ್ಗ, ಭಾಷೆ, ಧರ್ಮ, ಪ್ರದೇಶ, ಲಿಂಗ ತಾರತಮ್ಯಗಳಿಲ್ಲದೆ ಕಾರ್ಯನಿರ್ವಹಿಸುವುದು.

ಇವಿಷ್ಟು ಟ್ರಸ್ಟಿನ ಉದ್ದೇಶಗಳು ಎಂದು ಟ್ರಸ್ಟ್ ಡೀಡ್ ಹೇಳುತ್ತದೆ.

ಅದಿರುವಾಗ ಇದ್ಯಾಕೆ?

1948ರಲ್ಲಿ ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ಪಾಕಿಸ್ತಾನ-ಭಾರತ ವಿಭಜನೆ ಆದಾಗ, ಅಲ್ಲಿಂದ ಬಂದು ಭಾರತದಲ್ಲಿ ನೆಲೆಸಿದ ಜನಸಮುದಾಯಗಳ ಸಹಾಯಕ್ಕಾಗಿ ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯನ್ನು (PMNRF) ಸ್ಥಾಪಿಸಿದ್ದರು. ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಅದು ಇಂದಿಗೂ ಕೂಡ ಮಡಿದ ಕುಟುಂಬಗಳಿಗೆ ತುರ್ತು ಪರಿಹಾರ ಒದಗಿಸುವುದಕ್ಕಾಗಿ ಬಳಕೆಯಾಗುತ್ತದೆ. ಆರೋಗ್ಯ ತುರ್ತುಸ್ಥಿತಿ ಸೇರಿದಂತೆ ಎಲ್ಲ ತುರ್ತು ಸ್ಥಿತಿಗಳೂ ಈ ನಿಧಿಯ ವ್ಯಾಪ್ತಿಯಲ್ಲಿ ಬರುತ್ತವೆ. ಈ ನಿಧಿ ಈಗಲೂ ಚಾಲ್ತಿಯಲ್ಲಿದೆ; ಅಲ್ಲಿ ನಿಧಿಯ ಒಳಹರಿವು ಹೊರಹರಿವು ಎರಡೂ ಇದೆ. ಆದರೆ 2016-17ರ ಬಳಿಕ, ಈ ನಿಧಿಯ ಬಳಕೆಯಲ್ಲಿ ಗಮನಾರ್ಹ ಕುಸಿತ ಉಂಟಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಈ ನಿಧಿಗೆ ಒಳಹೊರ ಹರಿವುಗಳ ವಿವರ ಇಲ್ಲಿದೆ.

ಸ್ವತಃ ಪ್ರಧಾನಮಂತ್ರಿಗಳ ವಿವೇಚನೆಯಂತೆ ನಿರ್ವಹಣೆಯಾಗುವ, ಚಾರಿತ್ರಿಕವಾದ ಇಂತಹದೊಂದು ನಿಧಿ, ಹಾಲೀ PMCARES ಹೇಳುವಂತಹ ಉದ್ದೇಶಗಳಿಗಾಗಿಯೇ ಇರುವಾಗ, ಈಗ ಇನ್ನೊಂದು ಹೊಸ ನಿಧಿ ಸ್ಥಾಪನೆಯ ಆವಶ್ಯಕತೆ ಯಾಕೆ ಬಂತು? ಎಂಬ ಪ್ರಶ್ನೆಗೆ ಈ ತನಕ ಉತ್ತರ ದೊರೆತಿಲ್ಲ. ಇದನ್ನೂ ಕ್ಲಿಕ್ ಮಾಡಿ;  ನೋಡಿ

ಇಷ್ಟು ಮಾತ್ರವಲ್ಲ. ಹಳೆಯ PMNR ಮತ್ತು ಹಾಲೀ PM CARES ನಿಧಿ ಅಲ್ಲದೆ ವಿವಿಧ ರಾಜ್ಯಗಳ ವಿಪತ್ತು ಪರಿಹಾರ ನಿಧಿಗಳು, ರಾಜ್ಯಗಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗಳು, ಸಂಸದರ ವಿವೇಚನಾನಿಧಿ ಕೂಡ ಈ ರೀತಿಯ ಕೆಲಸಗಳಿಗಾಗಿ ಶಾಸಕಾಂಗ-ಕಾರ್ಯಾಂಗದ ಚೌಕಟ್ಟಿನೊಳಗೆ ಲಭ್ಯವಿವೆ.

ಪಾರದರ್ಶಕತೆ

ಸಾರ್ವಜನಿಕವಾದ ಸಂಸ್ಥೆಯೊಂದರಲ್ಲಿ ಯಾವುದೇ ಆರ್ಥಿಕ ಚಟುವಟಿಕೆಗಳು ನಡೆದಾಗ, ಅದು ಪಾರದರ್ಶಕವಾಗಿರಬೇಕಾದುದು ಆ ವ್ಯವಸ್ಥೆಯಿಂದ ಜನಸಾಮಾನ್ಯರಿಗಿರಬೇಕಾದ ಕನಿಷ್ಠ ನಿರೀಕ್ಷೆ. PMCARES ವಿಷಯಕ್ಕೆ ಬಂದಾಗ, ಸ್ವತಹ ದೇಶದ ಶಾಸಕಾಂಗದ ಸಾಂವಿಧಾನಿಕ ಮುಖ್ಯಸ್ಥರೇ ಕರ್ತೃ (ಸೆಟ್ಲರ್) ಆಗಿರುವ ಸಾರ್ವಜನಿಕ ಟ್ರಸ್ಟ್ ಒಂದರ ಹಣಕಾಸು ವ್ಯವಹಾರಗಳನ್ನು ಪಾರದರ್ಶಕವಾಗಿರಿಸಬೇಕಾದುದು ಅವರ ನೈತಿಕ ಜವಾಬ್ದಾರಿ ಕೂಡ ಹೌದು.

ಆದರೆ ಟ್ರಸ್ಟ್ ರಚನೆಯಾದ ದಿನದಿಂದಲೂ ಜಿದ್ದಿಗೆ ಬಿದ್ದವರಂತೆ ಟ್ರಸ್ಟಿನ ಆರ್ಥಿಕ ಚಟುವಟಿಕೆಗಳನ್ನು ಬಹಿರಂಗಪಡಿಸಲು ಹಿಂದೇಟು ಹಾಕಲಾಗುತ್ತಿದೆ. ಸದ್ಯಕ್ಕೆ ಸಾರ್ವಜನಿಕವಾಗಿ ಲಭ್ಯ ಇರುವುದು ಫಂಡಿನ ವೆಬ್‌ಸೈಟಿನಲ್ಲಿ ನೀಡಲಾಗಿರುವ 2020ನೇ ಹಣಕಾಸು ವರ್ಷದ (ಅರ್ಥಾತ್ ಆರಂಭಗೊಂಡಲ್ಲಿಂದ ಮೊದಲ ಮೂರು ದಿನಗಳ) ಲೆಕ್ಕಾಚಾರಗಳ ಒಂದು ಪುಟ ಮಾತ್ರ.

ಈ ಗೊಂದಲದ ಹಿನ್ನೆಲೆಯಲ್ಲಿ ಸಮ್ಯಕ್ ಗಂಗ್ವಾಲ್ ಎಂಬ ವಕೀಲರೊಬ್ಬರು, ದಿಲ್ಲಿ ಹೈಕೋರ್ಟಿನಲ್ಲಿ ಸೆಪ್ಟಂಬರ್ 13, 2020ರಂದು ದಾವೆ ಹೂಡಿ, PMCARES ನಿಧಿಯನ್ನು ಸರ್ಕಾರದ ನಿಧಿ (state fund) ಎಂದು ಘೋಷಿಸುವಂತೆ ಕೋರಿದ್ದಲ್ಲದೆ ಇನ್ನೊಂದು ದಾವೆಯ ಮೂಲಕ, ಪ್ರಧಾನಮಂತ್ರಿಗಳ ಕಾರ್ಯಾಲಯದ ಮುಖ್ಯ ಮಾಹಿತಿ ಅಧಿಕಾರಿಗಳು ಮಾಹಿತಿಹಕ್ಕು ಕಾಯಿದೆಯಡಿ ತಾನು ಕೇಳಿದ ಮಾಹಿತಿಗಳನ್ನು 2, ಜೂನ್, 2020ರಂದು ಕೊಡಲಾಗುವುದಿಲ್ಲ ಎಂದು ಹೇಳಿದ್ದಕ್ಕಾಗಿ, PMCARES ನ್ನು ಸಾರ್ವಜನಿಕ ಪ್ರಾಧಿಕಾರ ಎಂದು ಘೋಷಿಸಿ, ಮಾಹಿತಿ ಹಕ್ಕು ಕಾಯಿದೆಯಡಿ ತರಬೇಕೆಂದು ಕೋರಿದ್ದರು. ಸೆಪ್ಟಂಬರ್ 23, 2021ರಂದು, ಈ ಬಗ್ಗೆ ದಿಲ್ಲಿ ಹೈಕೋರ್ಟಿನಲ್ಲಿ ಅಫಿಡವಿಟ್ ಒಂದನ್ನು ಸಲ್ಲಿಸಿದ ಪ್ರಧಾನಮಂತ್ರಿಗಳ ಕಾರ್ಯಾಲಯವು, PMCARES ಎಂಬುದು ಭಾರತ ಸರ್ಕಾರದ ನಿಧಿ ಅಲ್ಲ, ಅಲ್ಲಿ ಸಂಗ್ರಹವಾದ ಸಂಪತ್ತು, ಭಾರತ ಸರ್ಕಾರದ ಅಸಂಚಿತ ನಿಧಿಯ (Consolidated Fund of India) ಭಾಗವಾಗಿರುವುದಿಲ್ಲ ಎಂದು ಹೇಳಿತ್ತು. ವಿವಾದ ಇನ್ನೂ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.

ದೇಶದ ಜನತೆ ವಿಪತ್ತಿನ ಕಾಲದಲ್ಲಿ ಬಳಸುವುದಕ್ಕೆಂದು ದೇಶದ ಜನತೆಯೇ ಸಂಗ್ರಹಿಸಿಕೊಟ್ಟಿರುವ ಈ ನಿಧಿಯನ್ನು ಬಳಕೆ ಮಾಡುವಲ್ಲಿ ಪಾರದರ್ಶಕತೆಯನ್ನು ನಿರಾಕರಿಸುವುದು ಯಾಕೋ ನೈತಿಕ ಅನ್ನಿಸುವುದಿಲ್ಲ. ಈಗಾಗಲೇ ಕೋವಿಡ್ ಕಾಲದಲ್ಲಿ ಔಷಧಿಗಳು, ವೆಂಟಿಲೇಟರ್-ಆಕ್ಸಿಮೀಟರ್- ಕಾನ್ಸಂಟ್ರೇಟರಿನಂತಹ ಉಪಕರಣಗಳೆಲ್ಲವಕ್ಕೂ ಕಾಳಸಂತೆಯ ದರಗಳು ಒಂದಕ್ಕೆ ಮೂರುಪಟ್ಟು ಏರಿಕುಳಿತಿದ್ದು, ಇಂತಹ ಸಂದರ್ಭಗಳಲ್ಲಿ ಕೋವಿಡ್ ನಿರ್ವಹಣೆಗೆ ಉಪಕರಣಗಳನ್ನು ಖರೀದಿ ಮಾಡುವಾಗ ಈ ನಿಧಿಯನ್ನು ಹೇಗೆಹೇಗೆ ಪಾರದರ್ಶಕವಾಗಿ ಬಳಸಲಾಗಿದೆ ಮತ್ತು ಪ್ರತಿಯೊಂದೂ ರೂಪಾಯಿ ಸದುಪಯೋಗಗೊಂಡಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ ಎಂಬುದನ್ನು ಸಾರ್ವಜನಿಕವಾಗಿ ತಿಳಿಸುವುದು ಟ್ರಸ್ಟಿನ ನೈತಿಕ ಜವಾಬ್ದಾರಿಯಾಗುತ್ತದೆ. ಪಕ್ಷ ರಾಜಕಾರಣ, ಸೈದ್ಧಾಂತಿಕ ಜಿದ್ದು, ರಾಜಕೀಯ ಮೇಲಾಟಗಳಿಂದ ಮೇಲೆದ್ದು ಇಂತಹದೊಂದು ಕ್ರಮವನ್ನು ತೆಗೆದುಕೊಳ್ಳದಿದ್ದರೆ, ದೇಶದ ಅತ್ಯುನ್ನತ ಹುದ್ದೆಯೊಂದು ಕೆಟ್ಟ ಪೂರ್ವ ಉದಾಹರಣೆ ಹಾಕಿಕೊಟ್ಟಂತಾಗುತ್ತದೆ ಮತ್ತು ರಾಜಕೀಯ ವ್ಯವಸ್ಥೆಯ ಮೇಲೆ ಈಗಾಗಲೇ ರಸಾತಲದಲ್ಲಿರುವ ಸಾರ್ವಜನಿಕರ ನಂಬಿಕೆ ಇನ್ನಷ್ಟು ಕುಸಿಯಲಿದೆ.

ಟ್ರಸ್ಟ್ ಕಾಯಿದೆ ಅನ್ವಯವಾಗಬೇಕಲ್ಲವೆ?

PMCARES ಒಂದು ಸಾರ್ವಜನಿಕ ಚಾರಿಟೆಬಲ್ ಟ್ರಸ್ಟ್ ಎಂದು ಸರ್ಕಾರ ಈಗಾಗಲೇ ಅಧಿಕೃತವಾಗಿ ನ್ಯಾಯಾಲಯದ ಮುಂದೆಯೂ ಹೇಳಿಯಾಗಿದೆ. ಗಮನಿಸಬೇಕಾದ ಸಂಗತಿ ಎಂದರೆ, PMCARES ಅಧಿಕೃತ ವೆಬ್‌ಸೈಟಿನಲ್ಲಿ, PMCARES Funಜನ ಕಾನೂನು ಚೌಕಟ್ಟು ಏನೆಂಬ ಪ್ರಶ್ನೆಗೆ, ಇದೊಂದು ಚಾರಿಟೆಬಲ್ ಟ್ರಸ್ಟ್ ಆಗಿದ್ದು, ಇದನ್ನು ನೋಂದಣಿ ಕಾಯಿದೆ 1908ರ ಅಡಿಯಲ್ಲಿ 27-03-2020ರಂದು ದಿಲ್ಲಿಯಲ್ಲಿ ನೋಂದಾಯಿಸಲಾಗಿದೆ ಎಂದು ಹೇಳಲಾಗಿದೆ!

ಇಲ್ಲಿ ಹೇಳದೇ ಉಳಿದಿರುವ ಅಂಶವೊಂದಿದೆ. ಅದೇನೆಂದರೆ, ಭಾರತದಲ್ಲಿ ಸಾರ್ವಜನಿಕ ಚಾರಿಟೆಬಲ್ ಟ್ರಸ್ಟ್‌ಗಳಿಗೆ ನಿರ್ದಿಷ್ಟವಾದ ಒಂದು ಕಾಯಿದೆ ಇದೆ. The Indian Trusts Act 1882 ಎಂದು ಕರೆಯಲಾಗುವ ಈ ಕಾಯಿದೆ ಟ್ರಸ್ಟ್‌ನ ಎಲ್ಲ ಅಂಶಗಳಗೂ ಒಂದು ಕಾನೂನಿನ ಚೌಕಟ್ಟು ಒದಗಿಸುತ್ತದೆ ಮತ್ತು ಅಲ್ಲಿ ಲೆಕ್ಕಪತ್ರಗಳ ಪಾರದರ್ಶಕತೆಯ ಬಗ್ಗೆಯೂ ಸ್ಪಷ್ಟವಾಗಿ ಹೇಳಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಟ್ರಸ್ಟ್ ಕಾಯಿದೆಯ ಅನ್ವಯ, ಟ್ರಸ್ಟಿಗೆ ಒಬ್ಬರು “ಕರ್ತೃ”, ಒಂದು “ನಿಧಿ”, ಆ ನಿಧಿಯ ನಿರ್ವಹಣೆಗೆ ಒಂದಿಷ್ಟು ಜನ “ಟ್ರಸ್ಟಿ”ಗಳು ಮತ್ತು ಆ ನಿಧಿಯ ಉದ್ದೇಶಿತ ಫಲವನ್ನು ಪಡೆಯುವ “ಫಲಾನುಭವಿಗಳು” ಇರುತ್ತಾರೆ. PM CARES ನಿಧಿಯ ಸಂದರ್ಭದಲ್ಲಿ, ಸ್ವತಃ ಪ್ರಧಾನಮಂತ್ರಿಗಳು ಈ ಟ್ರಸ್ಟಿನ “ಕರ್ತೃ” ಆಗಿದ್ದು, ಟ್ರಸ್ಟಿನಲ್ಲಿ 2,25,000 ರೂಪಾಯಿಗಳ ಮೂಲ “ನಿಧಿ” ಇದೆ. ಅದರ ನಿರ್ವಹಣೆಗೆ, ಒಕ್ಕೂಟ ಸರ್ಕಾರದ ಪ್ರಧಾನಿ, ರಕ್ಷಣಾ ಸಚಿವರು, ಗೃಹ ಸಚಿವರು ಮತ್ತು ಹಣಕಾಸು ಸಚಿವರು ಟ್ರಸ್ಟೀಗಳಾಗಿರುತ್ತಾರೆ ಮತ್ತು ದೇಶದ ನಾಗರಿಕರು ಈ ಟ್ರಸ್ಟಿನ ಫಲಾನುಭವಿಗಳಾಗಿರುತ್ತಾರೆ (Beneficiaries).

ಭಾರತೀಯ ಟ್ರಸ್ಟ್ ಕಾಯಿದೆಯ ಚಾಪ್ಟರ್ 2, ಸೆಕ್ಷನ್ 19, ಹೀಗೆ ಹೇಳುತ್ತದೆ: Accounts and information.—A trustee is bound (a) to keep clear and accurate accounts of the trust- property, and (b), at all reasonable times, at the request of the beneficiary, to furnish him with full and accurate information as to the amount and state of the trust-property. (ಟ್ರಸ್ಟಿಗಳು ಟ್ರಸ್ಟ್ ಆಸ್ತಿಯ ಸ್ಪಷ್ಟ-ನಿಖರ ಲೆಕ್ಕಾಚಾರ ಇರಿಸಿಕೊಳ್ಳಬೇಕು ಮತ್ತು ಫಲಾನುಭವಿ ಕೇಳಿದಾಗ ಅವರಿಗೆ ಸ್ಪಷ್ಟವಾದ ಲೆಕ್ಕಪತ್ರಗಳನ್ನು, ಟ್ರಸ್ಟ್ ಆಸ್ತಿಯ ವಿವರಗಳನ್ನು ಒದಗಿಸಬೇಕು.)

ಅದೇ ಕಾಯಿದೆಯ ಚಾಪ್ಟರ್ 6, ಸೆಕ್ಷನ್ 57 ಹೀಗೆ ಹೇಳುತ್ತದೆ: 57. 57. Right to inspect and take copies of instrument of trust, accounts, etc.—The beneficiary has a right, as against the trustee and all persons claiming under him with notice of the trust, to inspect and take copies of the instrument of trust, the documents of title relating solely to the trust-property, the accounts of the trust-property and the vouchers (if any) by which they are supported, and the cases submitted and opinions taken by the trustee for his guidance in the discharge of his duty. (ತಾತ್ಪರ್ಯ: ಟ್ರಸ್ಟಿನ ದಾಖಲೆಗಳು, ಲೆಕ್ಕಪತ್ರಗಳನ್ನು ಪರಿಶೀಲಿಸಲು ಟ್ರಸ್ಟಿನ ಫಲಾನುಭವಿಗೆ ಸಂಪೂರ್ಣ ಹಕ್ಕು ಇದೆ.)

ಈ ಹಿನ್ನೆಲೆಯಲ್ಲಿ, ಮಾಹಿತಿ ಹಕ್ಕಿನಡಿ ಕೊಡುವುದಿಲ್ಲ ಎಂದಾದರೆ, ಟ್ರಸ್ಟ್ ಕಾಯಿದೆಯ ಅಡಿಯಲ್ಲಿ ಮಾಹಿತಿಗಳನ್ನು ಪಾರದರ್ಶಕವಾಗಿ ಒದಗಿಸುವುದು ಟ್ರಸ್ಟಿಗಳ ಕರ್ತವ್ಯವಾಗುತ್ತದೆ. ಹಾಗಾಗಿ, ಈಗ ಎದ್ದಿರುವ “PM CARES ಅಪಾರದರ್ಶಕ” ಎಂಬ ವಿವಾದ ತೀರಾ ಅನಗತ್ಯವಾದದ್ದು. ಉತ್ತರದಾಯಿತ್ವದ ಜವಾಬ್ದಾರಿ ಹೊತ್ತಿರುವ, ಸಾರ್ವಜನಿಕ ಬದುಕಿನಲ್ಲಿರುವ ಯಾರೇ ಮರ್ಯಾದಸ್ಥರು ಪೂರೈಸಲೇಬೇಕಾಗಿರುವ ಕನಿಷ್ಠ ಬದ್ಧತೆ ಇದು.

ಎಲ್ಲಿ ವೆಚ್ಚ ಆಗಿದೆ?

PM CARES ಕುರಿತು ಸದ್ಯಕ್ಕೆ ಸಾರ್ವಜನಿಕವಾಗಿ ಲಭ್ಯವಿರುವ ಅಧಿಕೃತ ಮಾಹಿತಿಗಳು ಕೇವಲ 31 ಮಾರ್ಚ್ 2020ರ ತನಕದ್ದಾಗಿದ್ದು, ಆ ದಾಖಲೆಗಳ ಪ್ರಕಾರ ಕೇವಲ ಐದು ದಿನಗಳಲ್ಲಿ PM CARES ಫಂಡ್ 3076.62 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಅದರಲ್ಲಿ 2000 ಕೋಟಿ ರೂ.ಗಳನ್ನು 50,000 ಮೇಡ್ ಇನ್ ಇಂಡಿಯಾ ವೆಂಟಿಲೇಟರ್‌ಗಳನ್ನು(!) ಖರೀದಿಸಿ ಸರಬರಾಜು ಮಾಡಲು ಬಳಸಲಾಗಿದೆ; 1000 ಕೋಟಿ ರೂ.ಗಳನ್ನು ವಲಸೆ ಕಾರ್ಮಿಕರ ಕಲ್ಯಾಣಕ್ಕೆಂದು ರಾಜ್ಯ ಸರ್ಕಾರಗಳಿಗೆ ವಿತರಿಸಲಾಗಿದೆ; 100 ಕೋಟಿ ರೂ.ಗಳನ್ನು ಲಸಿಕೆ ಅಭಿವೃದ್ಧಿಗಾಗಿ ವಿನಿಯೋಗಿಸಲಾಗಿದೆ ಎಂದು ಅಧಿಕೃತ ವೆಬ್‌ಸೈಟ್ ತಿಳಿಸುತ್ತದೆ. ಅಂದರೆ 3100 ಕೊಟಿ ರೂ.ಗಳ ಖರ್ಚಿಗೆ ಲೆಕ್ಕ ಕೊಡಲಾಗಿದೆ.

ಆದರೆ, ಇಂಡಿಯಾ ಸ್ಪೆಂಡ್ ಎಂಬ ವೆಬ್ ಪತ್ರಿಕೆ ಸರ್ಕಾರದ ಅಧಿಕೃತ ಪತ್ರಿಕಾ ಪ್ರಕಟಣೆಗಳ (PIB ರಿಲೀಸ್‌ಗಳು) ಆಧಾರದಲ್ಲಿ, ಖಾಸಗಿ ಕಂಪನಿಗಳು ತಾವು PM CARESಗೆ ನೀಡಿರುವ ದೇಣಿಗೆಗಳ ಬಗ್ಗೆ ನೀಡಿದ ಪತ್ರಿಕಾ ಹೇಳಿಕೆಗಳನ್ನು ಆಧರಿಸಿ PM CARESಗೆ ಮೊದಲ 52 ದಿನಗಳಲ್ಲಿ 9677.9 ಕೋಟಿ ರೂ.ಗಳ ನಿಧಿ ಸಂಗ್ರಹ ಆಗಿದೆ ಎಂದು ಅಂದಾಜಿಸಿತ್ತು. (ನೋಡಿ)  ಇದರಲ್ಲಿ, 4308.3ಕೋಟಿ ರೂಪಾಯಿಗಳು ಸರ್ಕಾರಿ ಸಂಸ್ಥೆಗಳಿಂದ-ಸಿಬ್ಬಂದಿಗಳಿಂದ ಸಂಗ್ರಹವಾದದ್ದು, 438.8 ಕೋಟಿ ರೂಪಾಯಿಗಳು ಸರ್ಕಾರಿ ಸಿಬ್ಬಂದಿಗಳ ಒಂದು ದಿನದ ಸಂಬಳ ಕಡಿತ ಮಾಡಿ ಸಂಗ್ರಹಿಸಲಾದ ಹಣ. ಮತ್ತು ಕನಿಷ್ಠ 5369.6 ಕೋಟಿ ರೂಪಾಯಿಗಳು ವಿವಿಧ ಖಾಸಗಿ ಕಂಪನಿಗಳ CSR (ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ) ನಿಧಿ ಮತ್ತಿತರ ಮೂಲಗಳಿಂದ ಬಂದ ಹಣ ಎಂದು ಅದು ವರದಿ ಮಾಡಿತ್ತು.

ಇದು ಮೊದಲ 52 ದಿನಗಳ ಕತೆ. ಆದರೆ ಈಗ PM CARES ಸ್ಥಾಪನೆಗೊಂಡು ಬಹುತೇಕ ಒಂದೂವರೆ ವರ್ಷಗಳು ಸಂದಿವೆ. ಈ ಅವಧಿಯಲ್ಲಿ ನಿಜಕ್ಕೂ ಎಷ್ಟು ಹಣ PM CARESನಲ್ಲಿ ಸಂಗ್ರಹಗೊಂಡಿದೆ ಎಂಬುದು ಸ್ಪಷ್ಟವಿಲ್ಲ. ಕೋವಿಡ್ ಕಾಲದಲ್ಲಿ ಕಾರ್ಪೋರೆಟ್‌ಗಳ CSR ನಿಧಿಯಿಂದ ಹಣವನ್ನು PM CARESಗೆ ವ್ಯಾಕ್ಯೂಂ ಕ್ಲೀನಿಂಗ್ ಮಾಡಿ ಗುಡಿಸಿ ಎತ್ತಲಾಗಿದೆ ಎಂಬ ಗುಲ್ಲು ಇತ್ತು. ಇದನ್ನು ಖಚಿತಪಡಿಸುವಂತೆ ಮೇ 20, 2021ರಂದು ಸುತ್ತೋಲೆಯೊಂದನ್ನು ಹೊರಡಿಸಿರುವ ಒಕ್ಕೂಟ ಸರ್ಕಾರದ ಕಾರ್ಪೊರೆಟ್ ವ್ಯವಹಾರಗಳ ಇಲಾಖೆಯು “it is hereby clarified that where a company has contributed any amount to ‘PM CARES Fund’ on 31.03.2020, which is over and above the minimum amount as prescribed under section 135(5) of the Companies Act, 2013 (“Act”) for FY 2019-20, and such excess amount or part thereof is offset against the requirement to spend under section 135(5) for FY 2020-21 in terms of the aforementioned appeal, then the same shall not be viewed as a violation” ಎಂದು ಸ್ಪಷ್ಟೀಕರಣ ನೀಡಿತ್ತು. (ನೋಡಿ)

ಈ ಹಿನ್ನೆಲೆಯಲ್ಲಿ ಭಾರತದೊಳಗೆ, ಸಾಮಾನ್ಯವಾಗಿ ಕಾರ್ಪೊರೆಟ್ ಕಂಪನಿಗಳು ಒಂದು ವರ್ಷದಲ್ಲಿ ಎಷ್ಟು ಹಣವನ್ನು CSR ನಿಧಿಯಾಗಿ ವೆಚ್ಚಮಾಡುತ್ತವೆ ಎಂಬುದನ್ನು ಕಂಡರೆ, PM CARESಗೆ ಎಷ್ಟು ಗಾತ್ರದಲ್ಲಿ ನಿಧಿ ಒಳಹರಿದಿರಬಹುದು ಎಂಬುದರ ಸ್ಥೂಲ ಚಿತ್ರಣ ಸಿಗುತ್ತದೆ. ಕಳೆದ ಆರು ವರ್ಷಗಳಲ್ಲಿ ಭಾರತೀಯ ಕಂಪನಿಗಳು CSRಗೆ ವೆಚ್ಚ ಮಾಡಿದ ಹಣದ ಪ್ರಮಾಣ ಹೀಗಿದೆ:

ಇಂತಹದೊಂದು ವ್ಯವಸ್ಥೆ ಮಾಡಿಕೊಡುವುದಕ್ಕಾಗಿ CSR ನಿಯಮದಲ್ಲೇ ಬದಲಾವಣೆ ಮಾಡಲಾಗಿದೆ. CSR ಆರಂಭದಲ್ಲಿ ಆ ನಿಧಿಯನ್ನು ಸರ್ಕಾರಿ ಬೊಕ್ಕಸಕ್ಕೆ ನೀಡುವಂತಿಲ್ಲ ಎಂದಿತ್ತು. ಆದರೆ ಕೋವಿಡ್ ಕಾಲದಲ್ಲಿ ನಿಧಿ
ಸಂಗ್ರಹಕ್ಕಾಗಿ, ಆ ನಿಯಮವನ್ನೇ ಬದಲಾಯಿಸಿ, CSR ನಿಧಿಯನ್ನು PM CARESಗೆ ನೀಡುವುದಕ್ಕೂ ಅವಕಾಶ ಮಾಡಿಕೊಡಲಾಗಿದೆ. (ನೋಡಿ)

ಒಕ್ಕೂಟ ಸರ್ಕಾರ PM CARES ನಿಧಿಯಿಂದ ಇನ್ನಷ್ಟು ವೆಚ್ಚ ಆಗಿರುವುದನ್ನು ವಿವಿಧ ಮಾಧ್ಯಮ ವರದಿಗಳ ಮೂಲಕ ಗುರುತಿಸಬಹುದು.

ಜನವರಿ 05, 2021ರಂದು ಆಕ್ಸಿಜನ್ ಪ್ಲ್ಯಾಂಟ್‌ಗಳ ಸ್ಥಾಪನೆಗೆ 201.58 ಕೋಟಿ; ಫೆಬ್ರವರಿಯಲ್ಲಿ ಲಸಿಕೆ ವಿತರಣೆಯ ಮೊದಲ ಹಂತಕ್ಕೆಂದು 2200 ಕೋಟಿ ರೂ; ಇದಲ್ಲದೆ PM CARES Children ಯೋಜನೆಯಡಿ, ಕೋವಿಡ್ ಕಾಲದಲ್ಲಿ ಹೆತ್ತವರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗಾಗಿ ನಿಧಿ ಸ್ಥಾಪನೆ (ಈ ಮಕ್ಕಳಿಗೆ 18ಪ್ರಾಯ ತುಂಬಿದಾಗ ಮಾಸಿಕ ಸ್ಟೈಫಂಡ್ ಮತ್ತು 23 ಪ್ರಾಯವಾದಾಗ ರೂ. 10 ಲಕ್ಷದ ನಿಧಿ ಕೊಡಲಾಗುವುದಂತೆ). ಇವಿಷ್ಟು ಗಮನಕ್ಕೆ ಬಂದವು. ಇನ್ನುಳಿದದ್ದನ್ನು ಸರ್ಕಾರವೇ ಪ್ರಕಟಿಸಬೇಕು.

ಪರಿಣಾಮಗಳು

PM CARES ತನ್ನ ಅಸ್ತಿತ್ವ ಮತ್ತು ಸ್ವರೂಪದ ಕಾರಣದಿಂದಾಗಿ ಮಾಡಬಹುದಾದ ಪರಿಣಾಮಗಳು ಹಲವಿವೆ.
ಒಂದು ಸರ್ಕಾರಿ ವ್ಯವಸ್ಥೆ, ತನ್ನ ಚೌಕಟ್ಟನ್ನು ದಾಟಿ, ಹೀಗೆ “ಸ್ವತಂತ್ರವಾಗಿ” ಸಾರ್ವಜನಿಕರಿಂದ ದೇಣಿಗೆ ಹಣ ಸಂಗ್ರಹಿಸುವುದು (ಕೆಲವೊಮ್ಮೆ ಒತ್ತಡ ಹೇರಿ, ಇನ್ನು ಕೆಲವೊಮ್ಮೆ ವಿನಂತಿ ಮಾಡಿ) ಮತ್ತು ಹಾಗೆ ಸಂಗ್ರಹಿಸುವ ಹಣದ ಕುರಿತು ಮಾಹಿತಿಯನ್ನು (ರಾಜಕೀಯ ಕಾರಣಕ್ಕಾಗಿ ಅಥವಾ ಬೇರೆ ಕಾರಣಗಳಿಗಾಗಿ) ಅಪಾರದರ್ಶಕವಾಗಿ ಇರಿಸುವುದು ಅಭೂತಪೂರ್ವ ವಿದ್ಯಮಾನವಾಗಿದ್ದು, ಅಪಾಯಕಾರಿ ಪೂರ್ವೋದಾಹರಣೆ ಕೂಡ ಹೌದು. ಒಂದು ಸರ್ಕಾರ ಇರುವುದೇ ಆ ದೇಶದ ಪ್ರಜೆಗಳ ಸುಖ-ಕಷ್ಟಗಳ ನಿರ್ವಹಣೆಗೆ ಇರುವ ಒಂದು ವ್ಯವಸ್ಥೆಯ ರೂಪದಲ್ಲಿ. ಅಂತಹ ಒಂದು ವ್ಯವಸ್ಥೆಯಲ್ಲಿ ಸಾಂವಿಧಾನಿಕ ಚೌಕಟ್ಟಿನ ಒಳಗೇ ಜನಕಲ್ಯಾಣಕ್ಕೆ ನೂರಾರು ಹಾದಿಗಳಿರುತ್ತವೆ. ಜೊತೆಗೆ ಶಾಸಕಾಂಗ-ಕಾರ್ಯಾಂಗ-ನ್ಯಾಯಾಂಗಗಳ ಚೆಕ್-ಬ್ಯಾಲೆನ್ಸ್ ಇರುತ್ತದೆ. ಇವನ್ನೆಲ್ಲ ಬದಿಗೊತ್ತಿ, ಸರ್ಕಾರೇತರವಾದ ಖಾಸಗಿ ವ್ಯವಸ್ಥೆಯೊಂದನ್ನು ಸರ್ಕಾರೀ ವ್ಯವಸ್ಥೆಯ ಭಾಗ ಹೌದೋ ಅಲ್ಲವೋ ಎಂದು ಗೊಂದಲ ಉಂಟಾಗುವಂತೆ ಸೃಷ್ಟಿಸಿಕೊಂಡು, ಅದರ ಅಡಿಯಲ್ಲಿ ನಿಧಿ ಸಂಗ್ರಹ ಮತ್ತು ವಿತರಣೆಗಳನ್ನು ಅಪಾರದರ್ಶಕವಾಗಿ ಇರಿಸಿಕೊಳ್ಳುವುದು ಖಂಡಿತಕ್ಕೂ ಒಳ್ಳೆಯ ವಿದ್ಯಮಾನ ಅಲ್ಲ.

ಹೀಗೆ ಮಾಡಿಕೊಂಡದ್ದನ್ನು ದೇಶದ ನಾಗರಿಕರು ಮಾಹಿತಿ ಹಕ್ಕಿನಡಿ ಕೇಳಿದಾಗಲಾದರೂ ಅದನ್ನು ವಿವರವಾಗಿ ಒದಗಿಸಿ ಪಾರದರ್ಶಕತೆಯನ್ನು ತಂದುಕೊಳ್ಳಬಹುದಿತ್ತು. ಆದರೆ ಒಕ್ಕೂಟ ಸರ್ಕಾರ ಆ ಅವಕಾಶವನ್ನೂ ಕೈಚೆಲ್ಲಿಕೊಂಡಿದೆ.

ಸ್ವತಃ ಸರ್ಕಾರ ತನ್ನ ಪ್ರಜೆಗಳಿಗೆ ದಿನದ ಸಂಬಳ ಮುರಿದುಕೊಂಡು, ಅದು ದೇಣಿಗೆ ಅನ್ನುವುದು ಅಥವಾ ಕಾರ್ಪೊರೇಟ್‌ಗಳಿಗೆ ನಿಮ್ಮ CSR ನಿಧಿಯನ್ನು ತನಗೆ ದೇಣಿಗೆಯಾಗಿ ಕೊಡಿ ಎಂದು ಹೇಳಿ, ಅದಕ್ಕೆ ಅಗತ್ಯ ಕಾನೂನು ಏರ್ಪಾಡುಗಳನ್ನು ಮಾಡಿಕೊಡುವ ಮೂಲಕ, CSR ಚಟುವಟಿಕೆಗಳ ಮೂಲಭೂತ ಉದ್ದೇಶವನ್ನೇ ನಾಶಮಾಡುವುದು-ಇ॒ವೆಲ್ಲ ಕಾಗದಗಳ ಮೇಲೆ ಕಾನೂನುಬದ್ಧ ಅನ್ನಿಸಿಕೊಳ್ಳಬಹುದೇ ಹೊರತು “ನೈತಿಕವೇ?” ಎಂಬ ಪ್ರಶ್ನೆಗೆ ಯಾವುದಾದರೊಂದು ಹಂತದಲ್ಲಿ ಸರ್ಕಾರ ಉತ್ತರದಾಯಿ ಆಗಲೇಬೇಕಾಗುತ್ತದೆ.

ಒಕ್ಕೂಟ ಸರ್ಕಾರವೊಂದು ಇಂತಹ ಚಟುವಟಿಕೆಗಳಿಗೆ ಇಳಿದಾಗ, ಅದು ರಾಜ್ಯ ಸರ್ಕಾರಗಳಿಗೆ ತಮ್ಮ ಹಕ್ಕನ್ನು ನಿರಾಕರಿಸುತ್ತದೆ ಮತ್ತು ರಾಜ್ಯಗಳು ಒಕ್ಕೂಟ ಸರ್ಕಾರದ ಎದುರು ಹಣಕ್ಕಾಗಿ ಕೈಚಾಚಿ ನಿಲ್ಲಬೇಕಾಗುತ್ತದೆ. ಕೋವಿಡ್ ಕಾಲದಲ್ಲಿ ಇಂತಹ ಹಲವು ಸನ್ನಿವೇಶಗಳು ಎದುರಾದದ್ದನ್ನು ನಾವು ಕಂಡಿದ್ದೇವೆ.

ಒಕ್ಕೂಟ ಸರ್ಕಾರ ಇಷ್ಟೊಂದು ಹಣವನ್ನು ಸಾರ್ವಜನಿಕರಿಂದಲೇ ಸಂಗ್ರಹಿಸಿದ್ದರೂ, ಇಷ್ಟು ಮಾತ್ರವಲ್ಲದೇ ಬೇರೆಬೇರೆ ಮೂಲಗಳಿಂದ ಅಪಾರ ಪ್ರಮಾಣದಲ್ಲಿ ಹಣವನ್ನು ಸರ್ಕಾರದ ಬೊಕ್ಕಸಕ್ಕೆ ಹರಿಸಿಕೊಂಡಿದ್ದರೂ, RT PCRನಂತಹ ಕೋವಿಡ್ ತಪಾಸಣೆಗಳನ್ನು ಬಹಳ ಕಾಲ ಉಚಿತವಾಗಿ ಮಾಡಲಿಲ್ಲ ಮತ್ತು ಲಸಿಕೆ ನೀಡಿಕೆಯನ್ನೂ ಬಹಳ ಕಾಲ ಉಚಿತವಾಗಿ ಮಾಡಲಿಲ್ಲ ಎಂಬುದು ಗಮನಾರ್ಹ!

ರಾಜಾರಾಂ ತಲ್ಲೂರು

ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಉಡುಪಿಯ ನಿವಾಸಿ. ಉದಯವಾಣಿ ದಿನಪತ್ರಿಕೆಯ ಆರೋಗ್ಯ ಪುರವಣಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅವರು ನಂತರ ಅದರಿಂದ ಹೊರಬಂದು ಸ್ವಂತ ಉದ್ಯಮ ಆರಂಭಿಸಿದ್ದಾರೆ. ನುಣ್ಣನ್ನ ಬೆಟ್ಟ, ದುಪ್ಪಟ್ಟು, ನಮ್ದೇಕತೆ ಅವರ ಕೆಲವು ಪ್ರಕಟಿತ ಪುಸ್ತಕಗಳು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

 


ಇದನ್ನೂ ಓದಿ: ಮೋದಿ ಸರ್ಕಾರದ್ದೊಂದು ಮೌಲ್ಯಮಾಪನ: ಭಾಗ-5

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...