ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಪ್ರಸಿದ್ದ ಕೃಷ್ಣರಾಜ ಸಾಗರ ಅಣೆಕಟ್ಟು (ಕೆಆರ್‌ಎಸ್ ಡ್ಯಾಂ) ಬಳಿ ಇರುವ ಬೃಂದಾವನ ಉದ್ಯಾನವನ್ನು ಸಿದ್ದರಾಮಯ್ಯ ಸರ್ಕಾರ ನಾಶ ಮಾಡಲು ಹೊರಟಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಬೃಂದಾವನ ಉದ್ಯಾನವನದ ಹಳೆಯ ಫೋಟೋವೊಂದನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಬಳಕೆದಾರರೊಬ್ಬರು ” ಆಘಾತಕಾರಿ ಸುದ್ದಿ!! ಮೈಸೂರಿನ ಹೊರವಲಯದಲ್ಲಿರುವ ಐತಿಹಾಸಿಕ ಯುನೆಸ್ಕೋ ಪಾರಂಪರಿಕ ತಾಣ ಬೃಂದಾವನ ಉದ್ಯಾನವು ಶಾಶ್ವತವಾಗಿ ನಾಶವಾಗಲಿದೆ. ಸಿದ್ದು ಸರ್ಕಾರ ಈ ದುರಂತಕ್ಕೆ ಕೋಟ್ಯಾಂತರ ರೂಪಾಯಿ ಮಂಜೂರು ಮಾಡಿದೆ. ಇದನ್ನು ಆದಷ್ಟು ಬೇಗ ತಡೆಯಬಹುದು ಎಂಬ ಭರವಸೆಯಿದೆ” ಎಂದು ಬರೆದುಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್ : ಬೃಂದಾವನ ಉದ್ಯಾನವನವನ್ನು ನಾಶ ಮಾಡಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ ಎಂಬ ಸಾಮಾಜಿಕ ಜಾಲತಾಣದ ಪ್ರತಿಪಾದನೆ ಸುಳ್ಳು. ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಬೃಂದಾವನ ಉದ್ಯಾನವನವನ್ನು ನಾಶ ಮಾಡಲುತ್ತಿಲ್ಲ. ಬದಲಾಗಿ, ಖಾಸಗಿ ಸಹಭಾಗಿತ್ವದಲ್ಲಿ ಉದ್ಯಾನವನವನ್ನು ನವೀಕರಿಸುವ 2,663 ಕೋಟಿ ರೂಪಾಯಿ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ.

ಜುಲೈ 26,2024ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ” ಕೆಆರ್‌ಎಸ್ ಅಣೆಕಟ್ಟೆಯನ್ನು ಇನ್ನಷ್ಟು ವಿದ್ಯುತ್ ದೀಪಗಳೊಂದಿಗೆ ಅಲಂಕರಿಸುವುದು, ಜಲಕ್ರೀಡೆಯ ಸೌಲಭ್ಯ ಸ್ಥಾಪಿಸುವುದು, ಕೆಆರ್‌ಎಸ್ ಸುತ್ತಮುತ್ತ ಹೋಟೆಲ್‌ಗಳನ್ನು ನಿರ್ಮಿಸುವುದು ಸೇರಿದಂತೆ ಒಟ್ಟಾರೆಯಾಗಿ ಬೃಂದಾವನ ಉದ್ಯಾನವನ್ನು ಫ್ಯಾಂಟಸಿ ಪಾರ್ಕ್ ಮಾದರಿಯಲ್ಲಿ ಮೇಲ್ದರ್ಜೆಗೇರಿಸುವ 2,663 ಕೋಟಿ ರೂ.ಮೊತ್ತದ ಯೋಜನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಫ್ಯಾಂಟಸಿ ಪಾರ್ಕ್‌ನಲ್ಲಿ ಏನೆಲ್ಲಾ ಇರಲಿದೆ?
ಕೆಆರ್‌ಎಸ್ ಸರ್ಕಲ್ ವಿಸ್ತರಣೆ, ಟೋಲ್ ಗೇಟ್, ವಾಹನಗಳ ಪಾರ್ಕಿಂಗ್, ವಿಸ್ತಾರವಾದ ಪಾದಚಾರಿ ಮಾರ್ಗ, ಬೋಟಿಂಗ್ ಲೇಕ್, ಆಂಫಿಥಿಯೇಟರ್, ಕಾವೇರಿ ಪ್ರತಿಮೆ, ಸ್ವಾಗತ ಕಮಾನುಗಳು, ಮೀನಾ ಬಜಾರ್, ಜಂಗಲ್ ಟ್ರ‍್ಯಾಕ್, ಡೋಲ್ ಮ್ಯೂಸಿಯಂ, ಪೆಂಗ್ವಿನ್ ಪಾರ್ಕ್, ಇಂಡೋರ್ ಅಮ್ಯೂಸ್ ಮೆಂಟ್ ಪಾರ್ಕ್, ಗಾಜಿನ ಮೇಲ್ಸೇತುವೆ, ವ್ಯಾಕ್ಸ್ ಮ್ಯೂಸಿಯಂ, ಅರೋಮ ಗಾರ್ಡನ್ ಮತ್ತು ಮಕ್ಕಳಿಗಾಗಿ ವಿಶೇಷ ಪಾರ್ಕ್, ಪ್ಯಾರಾ ಸೇಲಿಂಗ್, ವಾಟರ್ ಪ್ಲೇನ್, ಬಟಾನಿಕಲ್ ಗಾರ್ಡನ್, ಲೇಸರ್ ಶೋ ಪ್ರಾಜೆಕ್ಟ್ ವಾಲ್, ಹೆಲಿಪ್ಯಾಡ್, ಜೈಹೋ ಫೌಂಟನ್ ಇರಲಿದೆ.
ಕೆಆರ್‌ಎಸ್ ಅಣೆಕಟ್ಟು ಬಳಿಯ ಬೃಂದಾವನ ಉದ್ಯಾನವನ ಪ್ರಸ್ತುತ ಬಹಳ ಅಚ್ಚುಕಟ್ಟಾಗಿದೆ. ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಸರ್ಕಾರದ ಬೊಕ್ಕಸಕ್ಕೆ ಉತ್ತಮ ಆದಾಯ ತಂದು ಕೊಡುವ ರಾಜ್ಯದ ಅತ್ಯುತ್ತಮ ಪ್ರವಾಸಿ ತಾಣಗಳಲ್ಲಿ ಬೃಂದಾವನ ಉದ್ಯಾನವನ ಕೂಡ ಒಂದು. ಕಳೆದ ವರ್ಷವಷ್ಟೇ ಉದ್ಯಾನವನದ ಕಾರಂಜಿಯನ್ನ ನವೀಕರಿಸಲಾಗಿದೆ. ಹೀಗಿರುವಾಗ ಸರ್ಕಾರ ಅದನ್ನು ನಾಶಪಡಿಸಲಿದೆ ಎನ್ನುವುದು ದಾರಿ ತಪ್ಪಿಸುವ ಹೇಳಿಕೆಯಾಗಿದೆ.
ಇದನ್ನೂ ಓದಿ : FACT CHECK : ವಯನಾಡ್ ಸಂತ್ರಸ್ತರಿಗೆ RSS ಸಹಾಯ ಮಾಡುತ್ತಿದೆ ಎಂದು ಸಂಬಂಧವಿಲ್ಲದ ವಿಡಿಯೋ, ಪೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ


