ಕೇರಳದ ವಯನಾಡ್ ಜಿಲ್ಲೆಯ ಮುಂಡಕ್ಕೈ, ಚೂರಲ್ಮಲಾ, ಅಟ್ಟಮಲಾ ಪ್ರದೇಶಗಳಲ್ಲಿ ಜುಲೈ 30,2024ರಂದು ಸಂಭವಿಸಿದ ಭೀಕರ ಭೂಕುಸಿತ, ಜಳಪ್ರಳಯ ಸುಮಾರು 300ರಷ್ಟು ಜನರನ್ನು ಬಲಿ ಪಡೆದಿದೆ. ಎರಡು ಗ್ರಾಮಗಳೇ ನಾಮಾವಶೇಷವಾಗಿವೆ. ಈ ಘಟನೆ ದೇಶದ ಅತಿ ದೊಡ್ಡ ದುರಂತಗಳಲ್ಲಿ ಒಂದಾಗಿದೆ.
ಭೂಕುಸಿತ ಸಂಭವಿಸಿದ ಸ್ಥಳಕ್ಕೆ ಧಾವಿಸಿರುವ ಭಾರತೀಯ ಸೇನೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿಶಾಮಕ ತಂಡಗಳು, ಜಿಲ್ಲಾಡಳಿತದ ಸಿಬ್ಬಂದಿ, ಹಲವಾರು ಸಂಘ-ಸಂಸ್ಥೆಗಳ ಸ್ವಯಂ ಸೇವಕರೂ ಮತ್ತು ಸ್ಥಳೀಯರು ರಕ್ಷಣೆ ಮತ್ತು ಪರಿಹಾರ ಕಾರ್ಯಗಳಲ್ಲಿ ತೊಡಗಿದ್ದಾರೆ.
ನೂರಾರು ಸಂಘಟನೆಗಳು, ಸಂಸ್ಥೆಗಳು ದುರಂತದಲ್ಲಿ ಬದುಕುಳಿದವರಿಗೆ ಬೇಕಾದ ಆಹಾರ ಸೇರಿದಂತೆ ಇತರ ಅತ್ಯಗತ್ಯ ಸಾಮಗ್ರಿಗಳನ್ನು ಪೂರೈಸುವ ಮಹತ್ಕಾರ್ಯ ಮಾಡುತ್ತಿವೆ. ದೇಶದ ವಿವಿಧ ಭಾಗಗಳಿಂದ ವಯನಾಡ್‌ಗೆ ಸಹಾಯಹಸ್ತ ಹರಿದು ಬರುತ್ತಿದೆ. ಕರ್ನಾಟಕ ಸೇರಿದಂತೆ ರಾಜ್ಯ ಸರ್ಕಾರಗಳು, ಕೇಂದ್ರ ಸರ್ಕಾರ ಕೂಡ ಪರಿಹಾರ ಕಾರ್ಯದಲ್ಲಿ ತೊಡಗಿದೆ.
ಈ ನಡುವೆ ಕೆಲವು ರಾಜಕೀಯ, ಕೋಮುವೈಷಮ್ಯ, ಅಮಾನವೀಯ ವರ್ತನೆಗಳು ಕೂಡ ನಡೆಯುತ್ತಿದೆ. ಅನೇಕ ಅಮಾನವೀಯರು ಸಾಮಾಜಿಕ ಜಾಲತಾಣಗಳ ಪೋಸ್ಟ್, ಕಾಮೆಂಟ್‌ಗಳ ಮೂಲಕ ಪ್ರಕೃತಿ ದುರಂತಕ್ಕೆ ಕೋಮು ವಿಷ ತಾಕಿಸಿ ವಿಘ್ನ ಸಂತೋಷಪಡುತ್ತಿದ್ದಾರೆ. ಇವೆಲ್ಲದರ ಹೊರತಾಗಿ ಸೇವಾ ಕಾರ್ಯಗಳ ಕ್ರೆಡಿಟ್ ಪಡೆಯುವುದರಲ್ಲಿ ಪೈಪೋಟಿಯೂ ಏರ್ಪಟ್ಟಿದೆ.
ವಯನಾಡ್ ದುರಂತ ಸ್ಥಳದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ವಿತರಿಸುವ ಮೂಲಕ ಹಗಲು-ರಾತ್ರಿ ಸಾಂತ್ವನ ಕಾರ್ಯದಲ್ಲಿ ತೊಡಗಿದೆ ಎಂದು ವಿಡಿಯೋವೊಂದು ಭಾರೀ ವೈರಲ್ ಆಗಿದೆ.
ಮಲಯಾಳಂ ನಟಿ ನಿಖಿಲಾ ವಿಮಲ್ ಮತ್ತು ಒಂದಷ್ಟು ಯುವಜನರು ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡುತ್ತಿರುವ ವಿಡಿಯೋವೊಂದನ್ನು ಆರ್‌ಎಸ್‌ಎಸ್‌ನ “ನಮಸ್ತೆ ಸದಾ ವತ್ಸಲೆ ಮಾತೃಭೂಮಿ” ಗೀತೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಇದಲ್ಲದೆ ಇನ್ನೂ ಕೆಲ ಫೋಟೋ, ವಿಡಿಯೋಗಳು ಆರ್‌ಎಸ್‌ಎಸ್‌ನ ಹೆಸರಿನಲ್ಲಿ ಹರಿದಾಡುತ್ತಿದೆ.
ಫ್ಯಾಕ್ಟ್‌ಚೆಕ್ : ಆರ್‌ಎಸ್‌ಎಸ್ ಹೆಸರಿನಲ್ಲಿ ಹರಿದಾಡುತ್ತಿರುವ ನಟಿ ನಿಖಿಲಾ ವಿಮಲ್ ಕಾಣಿಸಿಕೊಂಡಿರುವ ವಿಡಿಯೋದ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ಈ ವೇಳೆ ಆ ವಿಡಿಯೋ ಡೆಮಾಕ್ರಟಿಕ್ ಯೂಥ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‌ಐ) ಸಂಘಟನೆಗೆ ಸಂಬಂಧಿಸಿದ್ದು ಎಂದು ತಿಳಿದು ಬಂದಿದೆ.
“ವಯನಾಡ್‌ಗೆ ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡಲು ಮತ್ತು ರವಾನಿಸಲು ಡಿವೈಎಫ್ಐ ಸ್ಥಾಪಿಸಿದ ಕಣ್ಣೂರಿನ ತಳಿಪರಂಬ ಸಂಗ್ರಹ ಕೇಂದ್ರದಲ್ಲಿ ಸ್ವಯಂ ಸೇವಕರೊಂದಿಗೆ ನಟಿ ನಿಖಿಲಾ ಕೈ ಜೋಡಿಸಿದರು” ಎಂದು ಮಾಧ್ಯಮ ವರದಿಗಳು ಹೇಳಿವೆ.
ವರದಿ ಆಧರಿಸಿ ಡಿವೈಎಫ್ ಕೇರಳದ ಇನ್‌ಸ್ಟಾಗ್ರಾಂ ಪೇಜ್ ನಾವು ಪರಿಶೀಲಿಸಿದ್ದೇವೆ. ಈ ವೇಳೆ ಅಲ್ಲೂ ವಿಡಿಯೋ ಲಭ್ಯವಾಗಿದೆ.
ಇನ್ನು ಆರ್‌ಎಸ್‌ಎಸ್ ಸ್ವಯಂ ಸೇವಕರು ಮನೆ ಮನೆಗೆ ತೆರಳಿ ಅಗತ್ಯ ಸಾಮಾಗ್ರಿಗಳನ್ನು ನೀಡುತ್ತಿರುವ ಫೋಟೋಗಳು ಕೂಡ ವಯನಾಡ್‌ಗೆ ಸಂಬಂಧಿಸಿದಲ್ಲ. ಅದು 2018ರದ್ದು ಎಂದು ನಮ್ಮ ಪರಿಶೀಲನೆಯಲ್ಲಿ ತಿಳಿದು ಬಂದಿದೆ.
ವಯನಾಡ್ ಭೂಕುಸಿತ ಸ್ಥಳದಲ್ಲಿ ಆರ್‌ಎಸ್‌ಎಸ್‌ನ ಸೇವಾಭಾರತಿ ಸ್ವಯಂ ಸೇವಾ ಸಂಘಟನೆ ಸಾಂತ್ವನ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ನಿಜ. ಆದರೆ, ವೈರಲ್ ಆಗಿರುವ ವಿಡಿಯೋ, ಫೋಟೋಗಳು ಅದಕ್ಕೆ ಸಂಬಂಧಿಸಿದಲ್ಲ. ಆರ್‌ಎಸ್‌ಎಸ್ ಮಾತ್ರವಲ್ಲದೆ, ಎಸ್‌ವೈಎಸ್ ಸಾಂತ್ವನ, ಇಸಾಬಾ, ಎಸ್‌ಎಸ್‌ಎಫ್, ಎಸ್‌ಕೆಎಸ್‌ಎಸ್‌ಎಫ್ ವಿಖಾಯ, ಎಸ್‌ಡಿಪಿಐ, ಯುವ ಕಾಂಗ್ರೆಸ್, ಜಾಮಿಅ ಮರ್ಕಝ್ ಸೇರಿದಂತೆ ಅನೇಕ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸಂಘ-ಸಂಸ್ಥೆಗಳು ವಯನಾಡ್‌ನಲ್ಲಿ ಸಾಂತ್ವನ ಕಾರ್ಯಗಳಲ್ಲಿ ತೊಡಗಿಸಿಕೊಂಡಿವೆ.
ಇದನ್ನೂ ಓದಿ : FACT CHECK : ರಾಹುಲ್ ಗಾಂಧಿ ಹಿಂದೂಗಳಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಎಡಿಟೆಡ್ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ