ಪಲ್ಸ್ ಪೋಲಿಯೋ ಲಸಿಕೆಯನ್ನು 5 ವರ್ಷದೊಳಗಿನ ಹಾಕಿಸುವುದರಿಂದ ಒಂದು ದೊಡ್ಡ ಪಿಡುಗನ್ನು ನಾವು ತಡೆಗಟ್ಟಿದ್ದೇವೆ. ಅಷ್ಟರಮಟ್ಟಿಗೆ ಪೋಲೀಯೋ ಲಸಿಕೆ ಬಹಳಷ್ಟು ಜನರ ಬದುಕನ್ನು ಸುಧಾರಿಸಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿನ ಕೆಲವು ವಿಕೃತ ಮನಸ್ಸಿನವರು ‘ದಯಮಾಡಿ ಬೇಗ ಶೇರ್ ಮಾಡಿ ನಾಳೆ ಐದು ವರ್ಷದ ಒಳಗೆ ಇರುವ ಮಕ್ಕಳಿಗೆ ಪೋಲಿಯೋ ಹಾಕಿಸಬೇಡಿ, ಅದರಲ್ಲಿ ವೈರಸ್ ಬೆರೆಸಿರುತ್ತದೆ. ಅದಕ್ಕಾಗಿ ಪೋಲಿಯೋ ತಯಾರು ಮಾಡಿದ ಆ ಕಂಪನಿಯ ಮಾಲೀಕರನ್ನು ಅರೆಸ್ಟ್ ಮಾಡಿದ್ದಾರೆ. ದಯಮಾಡಿ ಎಲ್ಲರಿಗೂ ತುರ್ತು ಶೇರ್ ಮಾಡಿ, ಇದು ಸತ್ಯ ಸತ್ಯ’ ಎಂಬ ಸುಳ್ಳು ಸುದ್ಧಿಯನ್ನು ಹರಡಿ ಆತಂಕ ಸೃಷ್ಟಿಸುತ್ತಿದ್ದಾರೆ.

ಆದರೆ ಅದು ಸತ್ಯಕ್ಕೆ ದೂರವಾದ ಸಂದೇಶವಾಗಿದ್ದು ಇಂತಹ ವದಂತಿಗಳಿಗೆ ಪೋಷಕರು ಕಿವಿಕೊಡಬಾರದೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರು ಮನವಿ ಮಾಡಿಕೊಂಡಿದ್ದಾರೆ. ಹಾಗೂ ಪೋಲಿಯೋ ಮಾಹಿತಿಯ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂಗನವಾಡಿ ಫಲಾನಭವಿಗಳಿಗೆ/ಫೋಷಕರಿಗೆ ತಿಳಿಸಲು ಸೂಕ್ತ ಕ್ರಮವಹಿಸಲು ಎಲ್ಲಾ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳಿಗೆ, ಮೇಲ್ವಿಚಾರಕಿಯರಿಗೆ ಮತ್ತು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕರಿಗೆ ಸೂಚಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಕರು ತುರ್ತು ಪತ್ರ ಬರೆದಿದ್ದಾರೆ.

ಪೋಲಿಯೋ ನಿವಾರಣೆ ಮಾಡಲೆಂದು ಇರುವ ಒಂದು ಒಳ್ಳೆಯ ಯೋಜನೆಯ ಬಗ್ಗೆ ತಪ್ಪು ಸಂದೇಶ ರವಾನಿಸುತ್ತಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಪೊಲೀಸರು ಕ್ರಮ ತೆಗೆದುಕೊಳ್ಳಬೇಕಿದೆ. ಪ್ರಜ್ಞಾವಂತ ಜನರು ಎಲ್ಲರಿಗೂ ಸತ್ಯವನ್ನು ತಿಳಿಸಿ ಪೋಲಿಯೋ ಕಾರ್ಯಕ್ರಮ ಯಶಸ್ವಿಯಾಗುವಂತೆ ಮಾಡುವ ಮೂಲಕ ಮಕ್ಕಳಿಗೆ ಪೋಲಿಯೋ ತಗುಲದಂತೆ ನೋಡಿಕೊಳ್ಳಬೇಕಿದೆ.
ಸುಳ್ಳು ಸುದ್ದಿ ಹರಡುವವರಿಗೆ ಏನು ಸಿಗುತ್ತದೆ? ಯಾಕೀಗೆ ಮಾಡುತ್ತಾರೆ? ಜಾತಿ ಧರ್ಮಗಳ ವಿಷಯದಲ್ಲಿ ಸುಳ್ಳು ಸುದ್ದಿಗಳನ್ನು ಹರಡಿದ ನಂತರ ಇವರು ಮಕ್ಕಳ ಆರೋಗ್ಯದ ಮೇಲೆ ಪ್ರಭಾವ ಬೀರುವ ವಿಷಯಗಳಲ್ಲಿಯೂ ಕೂಡ ಸುಳ್ಳು ಸುದ್ದಿ ಹಬ್ಬಿಸುತ್ತಾರೆಂದರೆ ಇವರೆಂಥ ನೀಚರಿರಬೇಕು?
ಇನ್ನು ಸಾಮಾಜಿಕ ಜಾಲತಾಣಗಳ ಬಳಕೆದಾರರು ಯಾವುದು ಸತ್ಯ ಯಾವುದು ಮತ್ತು ಯಾವುದು ಸುಳ್ಳು ಯಾವುದು ಎಂಬ ವಿಷಯಗಳನ್ನು ಮೊದಲು ತಿಳಿದು ನಂತರ ಶೇರ್ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳದೆ ಹೋದರೆ ಇಂತಹ ಬೇಜಾವಾಬ್ದಾರಿ ಘಟನೆಗಳು ನಡೆಯುತ್ತಲೇ ಇರುತ್ತವೆ. ಹಾಗಾಗಿ ಯಾವುದೇ ಸುದ್ದಿಯ ಫ್ಯಾಕ್ಟ್ ಚೆಕ್ ಮಾಡದೇ ಫಾರ್ವಾಡ್ ಮಾಡುವುದು ಸಹ ತಪ್ಪಾಗುತ್ತದೆ. ಸುಳ್ಳು ಸುದ್ದಿಗಳಿಂದ ಗುಂಪು ಹಲ್ಲೆಗಳಾಗಿ ಕೆಲವು ಸಾವುಗಳೇ ಸಂಭವಿಸಿದರೂ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳದೆ ಇರುವುದು ವಿಷಾಧನೀಯ. ಯುವಜನತೆ ದಾರಿ ತಪ್ಪದಂತೆ ಸರ್ಕಾರ ಎಚ್ಚರ ವಹಿಸಬೇಕಿದೆ.


