Homeಮುಖಪುಟ“ರಾಸಾಯನಿಕ ಮುಕ್ತ ಕೃಷಿಯಲ್ಲಿ” ಯಶಸ್ಸನ್ನು ಕಾಣುವುದು ಹೇಗೆ?

“ರಾಸಾಯನಿಕ ಮುಕ್ತ ಕೃಷಿಯಲ್ಲಿ” ಯಶಸ್ಸನ್ನು ಕಾಣುವುದು ಹೇಗೆ?

- Advertisement -
- Advertisement -

| ಅವಿನಾಶ್ |

ಇತ್ತೀಚಿನ ದಿನಗಳಲ್ಲಿ “ರಾಸಾಯನಿಕ ಮುಕ್ತ ಕೃಷಿ ಪದ್ಧತಿ” ಬಗ್ಗೆ ಟೀಕೆ ಹೆಚ್ಚಾಗುತ್ತಿದೆ. ಅದರಲ್ಲೂ ನೈಸರ್ಗಿಕ ಕೃಷಿ ಪದ್ಧತಿ ಹೆಚ್ಚು ಟೀಕೆಗೆ ಒಳಗಾಗುತ್ತಿದೆ. ಇದು ಅವೈಜ್ಞಾನಿಕ ಪದ್ಧತಿ, ಇಳುವರಿಯನ್ನು ಪಡೆಯಲಾಗುವುದಿಲ್ಲ ಹಾಗು ನಾಟಿ ಹಸು, ನಾಟಿ ಬೀಜಗಳಿಂದಲೇ ವ್ಯವಸಾಯ ಮಾಡಲಾಗುವುದಿಲ್ಲವೆಂದು ದೂಷಿಸುತ್ತಿದ್ದಾರೆ. ನಾವು ನೈಸರ್ಗಿಕ ಕೃಷಿ ಪದ್ಧತಿಯಲ್ಲಿ (ನನ್ನ ಪ್ರಕಾರ ನೈಸರ್ಗಿಕ ಕೃಷಿ ಎಂದರೆ ರಾಸಯನಿಕ ಮುಕ್ತ ಕೃಷಿ ಪದ್ಧತಿ) ಹಲವಾರು ಪ್ರಯೋಗಗಳನ್ನು ನಡೆಸುತ್ತಿದ್ದೇನೆ. ಹಲವು ಪ್ರಯೋಗಗಳು ಯಶಸ್ಸನ್ನು ನೀಡಿದ್ದರೆ ಮತ್ತೆ ಕೆಲವು ಸಮಯವನ್ನು ತೆಗೆದುಕೊಳ್ಳುತ್ತಿವೆ. ಕಳೆದ ಹಲವಾರು ವರ್ಷಗಳಿಂದ ರಾಸಾಯನಿಕಗಳನ್ನು, ಕ್ರಿಮಿನಾಶಕಗಳನ್ನು ಬಳಸಿರುವುದರಿಂದ, ಅತಿಹೆಚ್ಚಿನ ಆಳಕ್ಕೆ ಉಳುಮೆ ಮಾಡಿದ್ದರಿಂದ ಮತ್ತು ಮರಗಿಡಗಳು ಸಾಕಷ್ಟು ಪ್ರಮಾಣದಲ್ಲಿ ಇಲ್ಲದಿರುವುದರಿಂದ ಭೂಮಿಯಲ್ಲಿ ಹ್ಯೂಮಸ್, ಸಾವಯವ ಇಂಗಾಲ ಕಮ್ಮಿಯಾಗಿದೆ. ಇದರಿಂದಾಗಿ ಜೀವಾಣುಗಳು, ಎರೆಹುಳುಗಳು ನಮ್ಮ ಭೂಮಿಯಲ್ಲಿ ನೆಲೆಸಲು ಅವಶ್ಯವಿರುವ ಸೂಕ್ಷ್ಮವಾತಾವರಣ ಇಲ್ಲದಂತಾಗಿದೆ.

ಹಾಗಾಗಿ ಈ ಎಲ್ಲಾ ತಪ್ಪುಗಳನ್ನು ಸರಿಪಡಿಸುವ ಕೆಲಸ ನಮ್ಮ ಮೊದಲ ಆದ್ಯತೆಯಾಗಿದೆ. ಮೊದಲ ಮೂರ್ನಾಲ್ಕು ವರ್ಷಗಳ ಕಾಲ ಹ್ಯೂಮಸ್ ಮತ್ತು ಸಾವಯವ ಇಂಗಾಲವನ್ನು ವೃದ್ಧಿಸುವತ್ತ ನಮ್ಮ ಕೆಲಸ ಕಾರ್ಯಗಳು ನಡೆಯುತ್ತವೆ. ಇದರ ಜೊತೆಯಲ್ಲಿ ಆಯಾ ಸೀಸನ್‍ಗೆ ತಕ್ಕ ಬೆಳೆಗಳನ್ನು ಅಂತರ್ಬೆಳೆಗಳಾಗಿ ಬೆಳೆದು ಭೂಮಿಯ ಫಲವತ್ತತೆಯನ್ನು ಹೆಚ್ಚಿಸುತ್ತಾ, ಆದಾಯವನ್ನು ಪಡೆಯುವ ಕೆಲವು ಕೃಷಿ ಚಟುವಟಿಕೆಗೆ ಆದ್ಯತೆ ನೀಡಲಾಗುತ್ತಿದೆ. ಜೊತೆಗೆ ಅಂತರ್ಜಲಮಟ್ಟವನ್ನು ಹೆಚ್ಚಿಸಲು ಸಹಕರಿಸುವ ಪದ್ಧತಿಗಳನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ಇದೆಲ್ಲದರ ನಡುವೆ ಮಣ್ಣಿನ ಗುಣ, ಸಾಮಥ್ರ್ಯ ಹಾಗೂ ಬೆಳೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ನಾವು ನಡೆಸಿದ ಕೆಲವೊಂದು ಪ್ರಯೋಗಗಳು, ಪ್ರಯತ್ನಗಳು ಯಶಸ್ಸು ಕಂಡಿವೆ. ಕೆಲವೊಂದು ಉದಾಹರಣೆಗಳ ಮೂಲಕ ನಮ್ಮ ಪ್ರಯತ್ನವನ್ನು ಮತ್ತು ಯಶಸ್ಸನ್ನು ಹಂಚಿಕೊಳ್ಳುತ್ತಿದ್ದೇನೆ.

1. ಪಶ್ಚಿಮ ಗೋದಾವರಿ ಜಿಲ್ಲೆಯ ಗಿರಿಜನ ಪ್ರಾಂತ್ಯದಲ್ಲಿ ನೂರಾರು ರೈತರು ಗೋಡಂಬಿಯನ್ನು ಬೆಳೆಯುತ್ತಿದ್ದಾರೆ. ಇವರು ಹಲವಾರು ವರ್ಷಗಳಿಂದ ರಾಸಾಯನಿಕ ಗೊಬ್ಬರಗಳನ್ನು, ಕ್ರಿಮಿನಾಶಕಗಳನ್ನು ಬಳಸುತ್ತಿದ್ದರು. ಇದು ಸರಾಸರಿಗಿಂತ ಹೆಚ್ಚು ಮಳೆ ಬೀಳುವ ಪ್ರದೇಶ. ನೀರು ಹೆಚ್ಚಾಗಿದ್ದರಿಂದ ಬೆಳೆಗಳಿಗೆ  ಫ್ಹಂಗಸ್ ರೋಗ ಹರಡಿತ್ತು. ರೆಂಬೆಕೊಂಬೆಗಳು ಮುಟ್ಟಿದರೆ ಬೀಳುವಂತಹ ಪರಿಸ್ಥಿತಿಯಿತ್ತು. ಫ್ಹಂಗಸ್ ರೋಗವನ್ನು ನಿಯಂತ್ರಿಸಲಾಗದೆ ನಷ್ಟ ಅನುಭವಿಸುತ್ತಿದ್ದರು ಹಾಗು ರಾಸಾಯನಿಕಗಳನ್ನು ಬಳಸಿದ್ದರಿಂದ ಭೂಮಿಯಲ್ಲಿ ಜೀವಾಣುಗಳು, ಎರೆಹುಳುಗಳು ಇಲ್ಲದೆ ಬೆಳೆಗಳಿಗೆ  ಪೋಷಕಾಂಶಗಳ ಕೊರತೆಯುಂಟಾಗಿತ್ತು. ರಾಸಾಯನಿಕಗಳನ್ನು ನಿಲ್ಲಿಸಿ ಜೀವಾಮೃತವನ್ನು ಉಪಯೋಗಿಸಿದ ಮೇಲೆ ಮರಗಿಡಗಳ ಬೆಳವಣಿಗೆ ಸುಧಾರಿಸಿತು. ಹೊಸ ಚಿಗುರು ಕಾಣಿಸತೊಡಗಿತು. ಆದರೆ ಗೋಡಂಬಿಯ ಗಾತ್ರದಲ್ಲಿ ಯಾವುದೇ ಬದಲಾವಣೆ ಕಾಣಲಾಗಲಿಲ್ಲ. ನಂತರದ ದಿನಗಳಲ್ಲಿ ಗೋಡಂಬಿ ಮರ ಹೂವುಗಳನ್ನು ಬಿಟ್ಟಾಗಿನಿಂದ ಕಾಯಿಗಳನ್ನು ಕೊಯ್ಯುವವರೆಗೂ ಒಟ್ಟು 6 ಬಾರಿ ಪಂಚಗವ್ಯವನ್ನು ಸಿಂಪಡಿಸಿದೆವು. ಅಚ್ಚರಿಯ ವಿಷಯವೆಂದರೆ ಗೋಡಂಬಿಯ ಗಾತ್ರದಲ್ಲಿ ಬದಲಾವಣೆ ಕಾಣಿಸಿತು. ಇಂದು ಹೆಚ್ಚು ಇಳುವರಿಯನ್ನು ಪಡೆಯುವುದರ ಜೊತೆ ಅಂತಾರಾಷ್ಟ್ರಿಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

2. ಆಂಧ್ರ ಪ್ರದೇಶದ ಜಗ್ಗಂಪೇಟೆಯಲ್ಲಿರುವ ರಾಮಚಂದ್ರ ಎನ್ನುವ ರೈತನ 2.5 ಎಕರೆ ಪ್ರದೇಶದಲ್ಲಿ ಹಲವಾರು ವರ್ಷಗಳ ಕಾಲ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಹಸಿಮೆಣಸಿನಕಾಯಿ ಮತ್ತು ಅರಿಶಿನವನ್ನು ಬೆಳೆಯುತ್ತಿದ್ದರು ಕೂಡಾ ಸರಾಸರಿ ಇಳುವರಿಯನ್ನು ಕಾಣಲು ಸಾಧ್ಯವಾಗಿರಲಿಲ್ಲ. ನಾಲ್ಕು ವರ್ಷಗಳ ಕೆಳಗೆ ಈ 2.5 ಎಕರೆ ಭೂಮಿಯಲ್ಲಿ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿ, ಬೆಳಕಿನ ತೀವ್ರತೆಗೆ ತಕ್ಕಂತೆ ಅಂದಾಜು 3000 ಗಿಡಮರಗಳನ್ನು ಸಂಯೋಜಿಸಿದೆವು. ಮಾವು, ತೆಂಗು, ಕಿತ್ತಳೆ, ಮೋಸಂಬಿ, ನಿಂಬೆ, ಸೀಬೆ, ಬಾಳೆ, ಪಪ್ಪಾಯ, ಸೀತಾಫಲ, ಮುಂತಾದವು. ಅಂತರ ಬೆಳೆಯಾಗಿ ತರಕಾರಿಗಳು, ಧಾನ್ಯಗಳು, ಕಾಳುಗಳು, ಅರಿಶಿನ ಮುಂತಾದವು. ಇಂದು ಅವರ ಭೂಮಿಯಲ್ಲಿ ಹ್ಯೂಮಸ್ ಉತ್ಪತ್ತಿಯಾಗಿದೆ. ಸಾವಯವ ಇಂಗಾಲ ಶೇ 2ಕ್ಕಿಂತ ಹೆಚ್ಚಿದೆ. ಕೃಷಿಗಾಗಿ ಮಾಡುತ್ತಿದ್ದ ಖರ್ಚನ್ನು ಶೇ 70ಕ್ಕಿಂತ ಹೆಚ್ಚುಕಮ್ಮಿ ಮಾಡಿಕೊಂಡಿದ್ದಾರೆ. ಪ್ರತಿ ತಿಂಗಳು ಆದಾಯವನ್ನು ಕಾಣುತ್ತಿದ್ದಾರೆ. ಇದರಿಂದ ಪ್ರೇರೇಪಿತರಾದ ರಾಮು ತನಗಿರುವ ಒಟ್ಟು 8 ಎಕರೆ ಭೂಮಿಯನ್ನು ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಹಲವಾರು ಬೆಳೆಗಳನ್ನು ಆಯೋಜಿಸಿಕೊಂಡಿದ್ದಾರೆ.

ಇಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾಗಿರುವುದು ಏಕಬೆಳೆ ಪದ್ಧತಿಯನ್ನು ಅನುಸರಿಸಿ, ಬೀಜಾಮೃತ, ಜೀವಾಮೃತ, ಕಷಾಯಗಳನ್ನು ಬಳಸಿದರೆ ನೈಸರ್ಗಿಕ ಕೃಷಿಯಲ್ಲಿ ಯಶಸನ್ನು ಕಾಣಲು ಸಾಧ್ಯವಾಗುವುದಿಲ್ಲ. ಟ್ರೆಂಚಸ್, ಹ್ಯೂಮಸ್, ಸಾವಯವ ಇಂಗಾಲವನ್ನು ವೃದ್ಧಿಸುವತ್ತ ಕೆಲಸ ಮಾಡಿ, ಬೆಳಕಿನ ತೀವ್ರತೆಗೆ ತಕ್ಕಂತೆ ಬಹು ಬೆಳೆ ಪದ್ಧತಿಯನ್ನು ಅನುಸರಿಸಿ, ಜೀವಾಮೃತವನ್ನು ಬಳಸಿದಾಗ ಮಾತ್ರ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಯಶಸ್ಸು ದೊರಕುತ್ತದೆ.

3. ಕಳೆದ ವರ್ಷ ಹಲವಾರು ಪ್ರದೇಶಗಳಲ್ಲಿ ಪಿಂಕ್ ಬೋಲ್ ವರ್ಮ್ ರೋಗ ಮೆಕ್ಕೆ ಜೋಳಕ್ಕೆ ಹೆಚ್ಚಿನ ಮಟ್ಟದ ಹಾನಿಯುಂಟುಮಾಡಿತ್ತು. ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡ ರೈತರ ಜಮೀನುಗಳಲ್ಲಿ ಪ್ರಾಯೋಗಿಕವಾಗಿ ನಾವು ನಮ್ಮದೆ ಆವಿಷ್ಕಾರವಾದ ಕಷಾಯವನ್ನು ಸಿಂಪರಣೆ ಮಾಡಿದರು ಮತ್ತು ಅದರಲ್ಲಿ ಯಶಸ್ಸನ್ನು ಕಂಡರು. ಇದು ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಈರುಳ್ಳಿ, ತಂಬಾಕು, ಬೇವಿನೆಲೆ, ಎಕ್ಕದೆಲೆ, ಮುಟ್ಟಿದರೆ ಮುನಿಸೊಪ್ಪು, ಹೊಂಗೆ, ಸೀತಾಫಲ, ತೇಗ, ಲಂಟಾನದ ಎಲೆಗಳಿಂದ ತಯಾರಿಸಿದ ಕಷಾಯ. ಇದು ಹೆಚ್ಚಿನ ಪರಿಣಾಮ ಬೀರಿದೆ. ಇದಕ್ಕೆ ನಾನು ಕೂಡ ಸಾಕ್ಷಿಯಾಗಿದ್ದೇನೆ.

ಇಲ್ಲಿ ಆಂಧ್ರಪ್ರದೇಶದ ರೈತರ ಉದಾಹರಣೆಯನ್ನು ನೀಡಲು ಕಾರಣ, ನಾನು 2015 ರಿಂದ ರೈತು ಸ್ವಾಧಿಕಾರ್ ಸಂಸ್ಥೆ ಆಂಧ್ರ ಪ್ರದೇಶ ಸರ್ಕಾರದಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಈ ಸಂಸ್ದೆ ನೈಸರ್ಗಿಕ ಕೃಷಿ ಪದ್ಧತಿಯನ್ನು ರಾಜ್ಯಾದ್ಯಂತವಿರುವ ರೈತರ ಜಮೀನಿನಲ್ಲಿ ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತಿದೆ. ಹಲವಾರು ಪ್ರಯೋಗಗಳು, ಪ್ರಯತ್ನಗಳು, ಸಂಶೋಧನೆಗಳು ನಡೆಯುತ್ತಿವೆ. ಪ್ರತಿಯೊಂದು ಹಂತವನ್ನು ದಾಖಲಿಸುತ್ತಿದ್ದೇವೆ. ನಾವು ಆಯ್ಕೆ ಮಾಡಿಕೊಂಡ ಕ್ಲಸ್ಟರ್‍ನ ವ್ಯಾಪ್ತಿಯಲ್ಲಿ ಬರುವ ರೈತರನ್ನು ಮೂರು ವರ್ಗಗಳಾಗಿ ಪರಿಗಣಿಸುತ್ತೇವೆ. 1. ಸಂಪೂರ್ಣವಾಗಿ ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿರುವ ರೈತರು, 2. ಭಾಗಶಃ ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಸ್ವಲ್ಪ ಭಾಗ ರಾಸಾಯನಿಕಗಳನ್ನು ಬಳಸುತ್ತಿರುವ ಮತ್ತು 3. ಮೊದಲ ಬಾರಿ ನೈಸರ್ಗಿಕ ಕೃಷಿ ಪದ್ಧತಿಯತ್ತ ಒಲವನ್ನು ತೋರುತ್ತಿರುವ ರೈತರು.

ಈ ಮೂರು ವರ್ಗದಲ್ಲಿರುವ ರೈತರನ್ನು ನಿರಂತರವಾಗಿ ಅಧ್ಯಯನ ಮಾಡುತ್ತಾ, ಭೂಮಿಯಲ್ಲಾಗುತ್ತಿರುವ ಬದಲಾವಣೆಯನ್ನು ದಾಖಲಿಸುತ್ತಾ, ಬೆಳೆಗಳ, ಕೀಟಗಳ, ರೋಗಗಳ ಅಧ್ಯಯನವನ್ನು ನಡೆಸಲಾಗುತ್ತಿದೆ. ಜೊತೆಯಲ್ಲಿ ಹ್ಯೂಮಸ್, ಸಾವಯವ ಇಂಗಾಲ ಮತ್ತು ಪಿ ಹೆಚ್ ಪ್ರಮಾಣದಲ್ಲಾಗುತ್ತಿರುವ ಬದಲಾವಣೆಗಳನ್ನು ದಾಖಲಿಸಲಾಗುತ್ತಿದೆ. ಅಂತರ್ಜಲಮಟ್ಟವನ್ನು ಹೆಚ್ಚಿಸಲು ಟ್ರೆಂಚಸ್ ಪದ್ಧತಿಯನ್ನು ಅಳವಡಿಸಿಕೊಂಡಿದ್ದೇವೆ. ಒಂದು ಎಕರೆಯಲ್ಲಿ 167 ಅಡಿ ಉದ್ದದ x 3 ಅಡಿ ಅಗಲದ x 1.5 ಅಡಿ ಆಳದ ಸುಮಾರು 10 ಟ್ರೆಂಚಸ್‍ಗಳು ಬರುತ್ತವೆ. ಒಂದು ಎಕರೆಯಲ್ಲಿ ಟ್ರೆಂಚಸ್‍ಗಾಗಿ ಬಳಸಿಕೊಳ್ಳುವ ಜಾಗ ಅಂದಾಜು 5000 ಚದರಡಿಗಳು. ಈ ಟ್ರೆಂಚಸ್‍ನಲ್ಲಿ ಕಲ್ಲು ಕಂಬಗಳನ್ನು ನೆಟ್ಟು ಅದಕ್ಕೆ ಬಳ್ಳಿ ತರಕಾರಿಗಳು ಹಬ್ಬಿಸುವುದರಿಂದ ಪ್ರತಿಯೊಂದು ಇಂಚು ಜಾಗವನ್ನು ಬೆಳೆಗಾಗಿ ಬಳಸಿಕೊಳ್ಳಬಹುದು. ಮಳೆಗಾಲದಲ್ಲಿ ಈ ಟ್ರೆಂಚಸ್‍ಗಳು ಮಳೆ ನೀರಿನಿಂದ ತುಂಬಿದರೆ ಅಂದಾಜು 2 ಲಕ್ಷ ಲೀಟರ್ ನೀರನ್ನು ನಮ್ಮ ಭೂಮಿಗೆ ಹಿಂಗಿಸಬಹುದು. ಹೀಗೆ ಪ್ರತಿವರ್ಷ ಸಾಧ್ಯವಾದಷ್ಟು ಮಳೆ ನೀರನ್ನು ಅಂತರ್ಜಲ ಮಟ್ಟವನ್ನು ವೃದ್ಧಿಸಲು ಪ್ರಯತ್ನಿಸುತ್ತಿದ್ದೇವೆ. ಇದರಿಂದ ಬೋರ್ವೆಲ್‍ಗಳ ಕಾರ್ಯಕ್ಷಮತೆಯೂ ಹೆಚ್ಚಾಗುತ್ತದೆ.

ಭೂಮಿಯಲ್ಲಿ ಜೀವಾಣುಗಳನ್ನು ವೃದ್ದಿಸಲು ನಾಟಿ ಹಸುವಿನಿಂದ ತಯಾರಿಸಿದ ಜೀವಾಮೃತವನ್ನೇ ಬಳಸುತ್ತಿದ್ದೇವೆ. ಸಸ್ಯಗಳ ಬೆಳವಣಿಗೆಯಲ್ಲಿ ಕೋಟಿ ಕೋಟಿ ಜೀವಾಣುಗಳ ಅವಶ್ಯವಿರುತ್ತದೆ. ಇವುಗಳಲ್ಲಿ ಬಹು ಮುಖ್ಯವಾಗಿ ಅವಶ್ಯವಿರುವ 72 ಜೀವಾಣುಗಳ ಹುಟ್ಟು ದೇಸಿ ಹಸುವಿನ ಸಗಣಿ ಮತ್ತು ಗಂಜಳದಲ್ಲಿ. ಓಈಃ, NFB, PSB, BSB ಇತ್ಯಾದಿ ಜೀವಾಣುಗಳು ಹೆಚ್ಚಿನ ಸಂಖ್ಯೆಯಲ್ಲಿರುತ್ತವೆ. ಇದರ ಜೊತೆಯಲ್ಲಿ ಸಸ್ಯಗಳ ಬೆಳವಣಿಗೆಗೆ ಅವಶ್ಯವಿರುವ ಆಮ್ಲಜನಕ, ಸಾರಜನಕ, ಫಾಸ್ಪರ್, ಸಲ್ಪರ್, ಐರನ್, ಜಿಂಕ್… ಮುಂತಾದ ಪೋಷಕಾಂಶಗಳು ಬೇರೆ ಯಾವುದೇ ತಳಿಗಳಿಗೆ ಹೋಲಿಸಿದರೆ ಶೇ 70ಕ್ಕಿಂತ ಹೆಚ್ಚಿರುತ್ತದೆ. ಹಾಗಾಗಿ ನಮಗೆ ನಾಟಿತಳಿಗಳು ಅತ್ಯಗತ್ಯವೆನಿಸುತ್ತವೆ. ನಾಟಿ ಹಸು ಹೆಚ್ಚು ಹಾಲು ಕೊಡುವುದಿಲ್ಲವೆಂದು ಹೈಬ್ರೀಡ್ ತಳಿಗಳನ್ನು ಬೆಳೆಸುತ್ತಿದ್ದೇವೆ. ಮೊದಮೊದಲು ಈ ಹೆಚ್‍ಎಫ್, ಜರ್ಸಿ ಹಸು 8 ರಿಂದ 10 ಲೀಟರ್ ಹಾಲನ್ನು ಕೊಡುತ್ತಿತ್ತು. ಇಂದು 3 ರಿಂದ 5 ಲೀಟರ್‍ಗೆ ಇಳಿದಿದೆ ಜೊತೆಗೆ ಹೆಚ್ಚಿನ ಆರೈಕೆಯನ್ನೂ ಬೇಡುತ್ತವೆ. ಪೋಷಕಾಂಶಗಳು, ವಿಟಮಿನ್‍ಗಳು ಮುಂತಾದವುಗಳನ್ನು ಕೃತಕವಾಗಿ ಒದಗಿಸಬೇಕಾದ ಪರಿಸ್ಧಿತಿಯಿದೆ. ಖರ್ಚು ಕೂಡ ಹೆಚ್ಚಾಗುತ್ತಿದೆ. ಅದೇ ನಾಟಿ ಹಸುಗಳಿಗೆ ಸಹಜವಾಗಿ ದೊರೆಯುವ ಆಹಾರ ಸಾಕು.

ರಾಸಾಯನಿಕ ಮುಕ್ತ ಕೃಷಿ ಪದ್ಧತಿಯಲ್ಲಿ ಬೆಳೆದ ಬೆಳೆಗಳಲ್ಲಿ ಹೆಚ್ಚು ವಿಟಮಿನ್, ಪ್ರೋಟಿನ್, ಕಾರ್ಬೋಹೈಡ್ರೇಟ್ಸ್, ಮಿನರಲ್ಸ್ ಇತ್ಯಾದಿ ಲಭ್ಯವಿರುವುದರಿಂದ ಇವುಗಳನ್ನು ನಾಟಿ ಹಸುವಿಗೆ ಒದಗಿಸುವುದರಿಂದ ಹೆಚ್ಚು ಸದೃಢವಾಗಿ ಬೆಳೆಯಲು ಸಹಕಾರಿಯಾಗುವುದರ ಜೊತೆ ನಿಧಾನವಾಗಿ ಹಾಲಿನ ಇಳುವರಿ ಹೆಚ್ಚುತ್ತದೆ. ಇಂದು ಹಲವಾರು ರೈತರು ನಾಟಿತಳಿಗಳ ಹಸುವಿನಲ್ಲಿ ಪ್ರತಿದಿನ 5 ರಿಂದ 8 ಲೀಟರ್ ಹಾಲನ್ನು ಪಡೆಯುತ್ತಿದ್ದಾರೆ. ಆಹಾರದ ಕೊರತೆಯನ್ನು ನೀಗಿಸುವ ಸಲುವಾಗಿ ಪ್ರಯೋಗಗಳನ್ನು, ಸಂಶೋಧನೆಗಳನ್ನು ನಡೆಸಿ ಹೆಚ್ಚು ಇಳುವರಿ ಬರುವ ಹೈಬ್ರಿಡ್ ತಳಿಗಳನ್ನು ಸಂಶೋಧಿಸಿದ್ದೇವೆಂದು ಹೇಳುತ್ತಾರೆ. ಇಷ್ಟೆಲ್ಲಾ ಪ್ರಯತ್ನಗಳ ನಡುವೆಯೂ ಶೇ 40ಕ್ಕು ಹೆಚ್ಚು ಪ್ರತಿಶತ ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳನ್ನು ಭಾರತ ಹೊರದೇಶದಿಂದ ರಪ್ತು ಮಾಡಿಕೂಳ್ಳುತ್ತಿದೆ. ಇದರ ಜೊತೆ ಅತಿ ಹೆಚ್ಚು ಹೈಬ್ರಿಡ್ ತಳಿಗಳು ಹೊರದೇಶದ ಕಂಪನಿಗಳ ಮುಷ್ಠಿಯಲ್ಲಿವೆ.

ಇವು ರಾಸಾಯನಿಕಗಳಿಲ್ಲದೆ, ರಸಗೊಬ್ಬರಗಳಿಲ್ಲದೆ, ಕ್ರಿಮಿನಾಶಕಗಳಿಲ್ಲದೆ ಬದುಕುವುದಿಲ್ಲ, ನಿಶ್ಚಿತವಾಗಿ ನಮ್ಮನ್ನು ಸಾವಿನ ದವಡೆಗೆ ಅರಿವಿಲ್ಲದೆ ಕರೆದೊಯ್ಯುತ್ತಿವೆ. ಇಲ್ಲಿ ನಮಗೆ ಅವಶ್ಯವಿರುವುದು ನನ್ನ ಸುತ್ತಮುತ್ತಲಿನ ವಾತಾವರಣದಲ್ಲಿ ಬೆಳೆದ ನಾಟಿ ಬೀಜಗಳು. ಅವು ಕೈಗೆಟುಕುವ ಬೆಲೆಯಲ್ಲಿ ಹಾಗೂ ಅವಶ್ಯವಿರುವಾಗ ದೊರಕುವ ಮತ್ತು ರೋಗರುಜಿನಗಳಿಲ್ಲದ ಹಾಗೂ ರೋಗರುಜಿನಗಳಿಗೆ ಜಗ್ಗದ, ನೀರನ್ನು ಕಮ್ಮಿ ಬೇಡುವ ಬೀಜಗಳು. ಈ ನಿಟ್ಟಿನಲ್ಲಿ ಪ್ರಯೋಗಗಳು, ಸಂಶೋಧನೆಗಳು ನಡೆಯಬೇಕು. ಹೊಸ ಪ್ರಯೋಗಗಳು, ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಇರಬೇಕು. ಪ್ರತಿ 8 ಕಿಲೋಮೀಟರ್ ಅಂತರದಲ್ಲೂ ವಾತಾವರಣ, ಬೆಳಕಿನ ತೀವ್ರತೆ, ಮಳೆ, ರೋಗಗಳು, ಕೀಟಗಳು, ಭೂಮಿಯ ಫಲವತ್ತತೆ, ಪೋಷಕಾಂಶಗಳು, ಮುಂತಾದ ಪ್ರಕೃತಿಯ ವೈಪರೀತ್ಯ ಬದಲಾಗುತ್ತಿರುತ್ತವೆ. ಇಲ್ಲಿ ನಾವು ಕೃಷಿಯನ್ನು ಆರಂಭಿಸುವಾಗ ವಾತಾವರಣವನ್ನು, ಮಣ್ಣಿನ ಗುಣವನ್ನರಿತು, ಬೆಳಕಿನ ತೀವ್ರತೆಗೆ ತಕ್ಕಂತೆ ಬೆಳೆಗಳನ್ನು ಆಯೋಜಿಸಿದರೆ “ರಾಸಾಯನಿಕ ಮುಕ್ತ ಕೃಷಿಯಲ್ಲಿ” ಯಶಸ್ಸನ್ನು ಕಾಣಲು ಸಾಧ್ಯ. ಬನ್ನಿ ನಮ್ಮೊಂದಿಗೆ ಕೈಜೋಡಿಸಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...