ಸೆಪ್ಟೆಂಬರ್ 21, 2024ರಂದು ಬೆಂಗಳೂರಿನ ವೈಯ್ಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ 29 ವರ್ಷದ ಮಹಾಲಕ್ಷ್ಮಿ ಎಂಬ ಮಹಿಳೆಯ ಕೊಲೆ ನಡೆದಿರುವುದು ಬೆಳಕಿಗೆ ಬಂದಿತ್ತು. ಮಹಾಲಕ್ಷ್ಮಿಯ ದೇಹವನ್ನು ಸುಮಾರು 30 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಡಲಾಗಿತ್ತು.
ದೆಹಲಿಯಲ್ಲಿ ಶ್ರದ್ದಾ ವಾಕರ್ ಎಂಬ ಯುವತಿಯ ಕೊಲೆ ನಡೆದ ರೀತಿಯಲ್ಲೇ ಮಹಾಲಕ್ಷ್ಮಿಯನ್ನು ಕೊಲೆ ನಡೆದಿತ್ತು. ಶ್ರದ್ದಾ ವಾಕರ್ ಕೊಲೆಯನ್ನು ಆಕೆಯ ಸ್ನೇಹಿತ ಅಫ್ತಾಬ್ ಅಮೀನ್ ಪೂನವಲ್ಲ ಎಂಬಾತ ಮಾಡಿರುವುದು ತನಿಖೆಯಿಂದ ಬಯಲಾಗಿತ್ತು. ಅದೇ ರೀತಿ ಮಹಾಲಕ್ಷ್ಮಿ ಕೊಲೆ ಪ್ರಕರಣದಲ್ಲೂ ಅಶ್ರಫ್ ಎಂಬಾತ ಹೆಸರು ತಳುಕು ಹಾಕಿಕೊಂಡಿತ್ತು.
‘ಅಶ್ರಫ್’ ಎಂಬ ಹೆಸರು ಕೇಳಿ ಬಂದಿದ್ದೆ ತಡ ಮಾಧ್ಯಮಗಳು, ಬಲಪಂಥೀಯ ಸಾಮಾಜಿಕ ಜಾಲತಾಣ ಪ್ರಭಾವಿಗಳು, ಕೆಲ ರಾಜಕೀಯ ಪಕ್ಷಗಳ ಮುಖಂಡರು ಒಂದು ಸಮುದಾಯದ ವಿರುದ್ದ ಆರೋಪಗಳ ಸುರಿಮಳೆ ಸುರಿಸಿದ್ದರು.
ಅನೇಕರು ಶ್ರದ್ದಾ ಕೊಲೆಗೆ ಮಹಾಲಕ್ಷ್ಮಿ ಕೊಲೆಯನ್ನು ಹೋಲಿಕೆ ಮಾಡಿ ಚರ್ಚಿಸಿದ್ದರು. ಇನ್ನೂ ಕೆಲವರು ‘ಲವ್ ಜಿಹಾದ್ ‘ ಆರೋಪ ಮಾಡಿದ್ದರು. ಮತ್ತೂ ಕೆಲವರು ಈ ರೀತಿಯ ಕೊಲೆಗಳು ‘ಒಂದು ಸಮುದಾಯದ ವಿರುದ್ದದ ವ್ಯವಸ್ಥಿತ ಸಂಚಿನ ಭಾಗ’ ಎಂದಿದ್ದರು. ಕೆಲ ಮಾಧ್ಯಮಗಳು ಸಾಮಾಜಿಕ ಜಾಲತಾಣವನ್ನೇ ಪ್ರಮುಖ ಮೂಲವನ್ನಾಗಿಟ್ಟುಕೊಂಡು ಒಂದು ಸಮುದಾಯದ ಜನರನ್ನು ಅರೋಪಿ ಸ್ಥಾನದಲ್ಲಿ ನಿಲ್ಲಿಸಿತ್ತು.
ಘಟನೆಯ ಕುರಿತು ಟಿವಿ ಚಾನೆಲ್‌ನಲ್ಲಿ ಸುದ್ದಿ ಓದಿದ ನ್ಯೂಸ್ 18 ಇಂಡಿಯಾದ ಸುದ್ದಿ ನಿರೂಪಕ ಹಾಗೂ ನೆಟ್‌ವರ್ಕ್ 18ನ ಹಿರಿಯ ಸಂಪಾದಕ ಅಮನ್ ಚೋಪ್ರಾ ” ಶ್ರದ್ಧಾ ವಾಕರ್ ಅನ್ನು ಹೇಗೆ ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇರಿಸಲಾಯಿತು ಎಂಬುವುದನ್ನು ನೆನಪಿಸಿಕೊಳ್ಳಿ. ಬೆಂಗಳೂರಿನಲ್ಲೂ ಅಂಥದ್ದೇ ಘಟನೆ ನಡೆದಿದೆ. ಆದರೆ, ಶ್ರದ್ದಾಳಿಂದ ಮಹಾಲಕ್ಷ್ಮಿಗೆ ಹೆಸರು ಬದಲಾಗಿದೆ. ಫ್ರಿಡ್ಜ್‌ನಲ್ಲಿ ಮಹಾಲಕ್ಷ್ಮಿ ಶವದ 50ಕ್ಕೂ ಹೆಚ್ಚು ತುಂಡುಗಳು ಪತ್ತೆಯಾಗಿವೆ. ಮೊದಲ ಪ್ರಕರಣದ ಆರೋಪಿ ಅಫ್ತಾಬ್, ಈಗ ಕುಟುಂಬ ಅಶ್ರಫ್ ಎಂಬಾತನ ಮೇಲೆ ಆರೋಪ ಹೊರಿಸಿದೆ” ಎಂದಿದ್ದರು. ಸುದ್ದಿ ಓದುವಾಗ ‘ಅಶ್ರಫ್’ ಎಂಬ ಹೆಸರನ್ನು ಅಮನ್ ಚೋಪ್ರಾ ಅನೇಕ ಬಾರಿ ಒತ್ತಿ ಹೇಳಿದ್ದರು. ಈ ಮೂಲಕ ಪರೋಕ್ಷವಾಗಿ ‘ಹಿಂದೂ ಮಹಿಳೆಯನ್ನು ಮುಸ್ಲಿಂ ಯುವಕ ಕೊಲೆ ಮಾಡಿದ್ದಾನೆ’ ಎಂಬ ಅಂಶವನ್ನು ಜನರ ತಲೆಗೆ ತುಂಬುವ ಪ್ರಯತ್ನ ಮಾಡಿದ್ದರು.
इस बार 50 से ज़्यादा टुकड़े करके फ़्रिज में रखे गये।
पहले श्रद्धा थी,
इस बार महालक्ष्मी है।नाम बदला,
modus operandi वही है।— Aman Chopra (@AmanChopra_) September 23, 2024
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕಟಿಸಿದ್ದ ವರದಿಯ ಸ್ಕ್ರೀನ್ ಶಾಟ್ ಅನ್ನು ಸೆಪ್ಟೆಂಬರ್ 22ರಂದು ಬಲಪಂಥೀಯ ಸುದ್ದಿ ವೆಬ್‌ಸೈಟ್ ಓಪ್ ಇಂಡಿಯಾ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದ ಕರ್ನಾಟಕ ಬಿಜೆಪಿ “ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದೆಗೆಟ್ಟಿದೆ. ಅಶ್ರಫ್‌ನಿಂದ ಮಹಾಲಕ್ಷ್ಮಿಯ ಕ್ರೂರ ಹತ್ಯೆಯು ಹಿಟ್ಲರ್ ನೇತೃತ್ವದ ಈ ರಾಜ್ಯದಲ್ಲಿ ಕನ್ನಡಿಗರು ಇನ್ನು ಸುರಕ್ಷಿತವಾಗಿಲ್ಲ ಎಂಬುದನ್ನು ಸ್ಪಷ್ಟವಾಗಿ ನೆನಪಿಸುತ್ತದೆ. ಸಿದ್ದರಾಮಯ್ಯ ಸರ್ಕಾರ ಮತ ಬ್ಯಾಂಕ್ ಅನ್ನು ಮೆಚ್ಚಿಸಲು ಮತ್ತು ತಪ್ಪಿತಸ್ಥರನ್ನು ಸಮಾಧಾನಪಡಿಸಲು ಇದನ್ನು ಕೇವಲ ಅಪಘಾತ ಅಥವಾ ತಮಾಷೆಯಾಗಿ ಪರಿಗಣಿಸಬೇಡಿ ಎಂದು ನಾವು ಕಾಂಗ್ರೆಸ್ ಮಂತ್ರಿಗಳನ್ನು ಒತ್ತಾಯಿಸುತ್ತೇವೆ. ರಾಹುಲ್ ಗಾಂಧಿಯವರೇ ನೀವು ಹಮಾಸ್ ಭಯೋತ್ಪಾದಕರಿಗಾಗಿ ಅಳುತ್ತಿರುವಾಗ, ನೀವು ಪರಿಗಣಿಸಬೇಕಾದ ವಿಷಯ ಇಲ್ಲಿದೆ. ಕಾಂಗ್ರೆಸ್ ಏಕೆ ಅಪರಾಧಿಗಳನ್ನು ಗಲ್ಲಿಗೇರಿಸುವುದನ್ನು ಮತ್ತು ಲವ್ ಜಿಹಾದ್ ವಿರೋಧಿ ಕಾನೂನುಗಳನ್ನು ವಿರೋಧಿಸುತ್ತಿದೆ ಎಂದು ಈ ಮೂಲಕ ಸ್ಪಷ್ಟವಾಗಿದೆ” ಎಂದು ಬರೆದುಕೊಂಡಿತ್ತು.
Under @INCKarnataka rule, appeasement policies have led to a complete collapse of law and order. The brutal murder of Mahalakshmi by Ashraf is a clear reminder that Kannadigas are no longer safe in this Hitler-led @siddaramaiah government. We urge Congress ministers not to… pic.twitter.com/eWt2IOK1UV
— BJP Karnataka (@BJP4Karnataka) September 22, 2024
ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 23,2024ರಂದು ಎಕ್ಸ್‌ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದ ಆಗಾಗ ಸುಳ್ಳು ಮತ್ತು ಕೋಮುದ್ವೇಷದ ಸುದ್ದಿಗಳನ್ನು ಹಬ್ಬಿಸುವ ಇಸ್ಕಾನ್ ಕೋಲ್ಕತ್ತಾದ ಉಪಾಧ್ಯಕ್ಷ ಮತ್ತು ವಕ್ತಾರ ರಾಧಾರಮನ್ ದಾಸ್ “ಅಬ್ದುಲ್‌ನ ಫ್ರಿಡ್ಜ್‌ನಲ್ಲಿ ಹಿಂದೂ ಹುಡುಗಿಯ ಮತ್ತೊಂದು ಶವ ಪತ್ತೆ. ಈ ಕಥೆ ಪುನರಾವರ್ತನೆಯಾಗುತ್ತಲೇ ಇರುತ್ತದೆ ಮತ್ತು ಅಬ್ದುಲ್‌ನ ಜೊತೆಗಿನ ಹಿಂದೂ ಹುಡುಗಿಯರು ‘ನನ್ನ ಅಬ್ದುಲ್ ಆ ರೀತಿಯಲ್ಲ’ ಎಂದು ಯೋಚಿಸುತ್ತಲೇ ಇರುತ್ತಾರೆ” ಎಂದು ಬರೆದುಕೊಂಡಿದ್ದರು.

ಸೆಪ್ಟೆಂಬರ್ 23, 2024ರಂದು ಎಕ್ಸ್‌ನಲ್ಲಿ ಇಂಡಿಯಾ ಟುಡೇ ಸುದ್ದಿಯನ್ನು ಪೋಸ್ಟ್ ಮಾಡಿದ್ದ ಕೋಮು ದ್ವೇಷದ ಸುದ್ದಿಗಳನ್ನು ಹರಡುವ ಬಲಪಂಥೀಯ ಸಾಮಾಜಿಕ ಜಾಲತಾಣ ಪ್ರಭಾವಿ ಮಿ.ಸಿನ್ಹಾ ” ಬೆಂಗಳೂರು ಕೊಲೆ ಪ್ರಕರಣದಲ್ಲಿ ಆಘಾತಕಾರಿ ಅಂಶ ಬಹಿರಂಗ: ಮಹಿಳೆಯ ಶವ 32 ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಶೇಖರಿಸಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಂಡಿಯಾ ಟುಡೇ ವರದಿ ಪ್ರಕಾರ ಸಂತ್ರಸ್ತೆಯನ್ನು ಮಹಾಲಕ್ಷ್ಮಿ ಎಂದು ಗುರುತಿಸಲಾಗಿದೆ. ಅಶ್ರಫ್ ಎಂಬ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಳು ಎಂದು ಆಕೆಯ ಪತಿ ಆರೋಪಿಸಿದ್ದಾರೆ” ಎಂದು ಬರೆದುಕೊಂಡಿದ್ದರು.
ಮತ್ತೊಂದು ಪೋಸ್ಟ್ ಹಾಕಿದ್ದ ಸಿನ್ಹಾ ” ಪ್ರಮುಖ ಶಂಕಿತ ‘ಹೊರಗಿನವನು’ ಮತ್ತು ತಲೆಮರೆಸಿಕೊಂಡಿದ್ದಾನೆ- ಬೆಂಗಳೂರು ಸಿಪಿ. ಮಹಾಲಕ್ಷ್ಮಿ ಪತಿ ಅಶ್ರಫ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ…ಕಳೆದ 9 ತಿಂಗಳಿಂದ ಆತನೊಂದಿಗೆ ಆಕೆ ವಾಸವಿದ್ದಳು” ಎಂದು ಬರೆದುಕೊಂಡಿದ್ದರು.
The prime suspect is an "outsider" & absconding – Bengaluru CP
The husband of Mahalakshmi has registered a case against Ashraf…She has been living with him for the last 9 months… https://t.co/FYcjl37UPN pic.twitter.com/9KnZltz55R
— Mr Sinha (@MrSinha_) September 23, 2024
ಇದೇ ರೀತಿ ಆರ್‌ಎಸ್‌ಎಸ್ ಮುಖವಾಣಿ ಪಾಂಚಜನ್ಯ, ಬಲಪಂಥೀಯ ಸಾಮಾಜಿಕ ಜಾಲತಾಣ ಪ್ರಭಾವಿಗಳಾದ ಕಾಜಲ್ ಹಿಂದುಸ್ತಾನಿ, ಜೈಪುರ್ ಡೈಲಾಗ್ಸ್, ರಿಶಿ ಬಾಗ್ರೀ, ಅಶ್ವಿನಿ ಶ್ರೀವಾಸ್ತವ್, ಸಂಜೀವ್ ನ್ಯೂವರ್, ಲಾಯರ್ ಶಶಾಂಕ್ ಶೇಖರ್ ಜ್ಹಾ, ಅಜೀತ್ ಭಾರ್ತಿ ಪೋಸ್ಟ್ ಹಾಕಿ, ಸುದ್ದಿ ಹಂಚಿಕೊಂಡು ಅಶ್ರಫ್ ಹೆಸರನ್ನು ಮುಂದಿಟ್ಟುಕೊಂಡು ಒಂದು ಸಮುದಾಯವನ್ನು ಗುರಿಯಾಗಿಸಿದ್ದರು.
ಕನ್ನಡ, ಹಿಂದಿ, ಇಂಗ್ಲಿಷ್‌ನ ಹಲವು ಮಾಧ್ಯಮಗಳು ಕೂಡ ಪ್ರಕರಣದ ಕುರಿತು ವರದಿ ಪ್ರಕಟಿಸಿತ್ತು. ಕೆಲವು ಅಶ್ರಫ್ ಕೊಲೆ ಮಾಡಿರುವುದಾಗಿ ನೇರವಾಗಿ ಆರೋಪಿಸಿದರೆ, ಇನ್ನೂ ಕೆಲವು ಮಹಾಲಕ್ಷ್ಮಿಯ ವಿಚ್ಚೇದಿತ ಪತಿಯ ಹೇಳಿಕೆಯನ್ನು ಉಲ್ಲೇಖಿಸಿತ್ತು.


ಫ್ಯಾಕ್ಟ್‌ಚೆಕ್ : ವರದಿಗಳ ಪ್ರಕಾರ, 29 ವರ್ಷದ ಮಹಾಲಕ್ಷ್ಮಿ ಅವರು ನೆಲಮಂಗಲದಲ್ಲಿ ವಾಸಿಸುವ ಮತ್ತು ಮೊಬೈಲ್ ಪರಿಕರಗಳ ಅಂಗಡಿಯನ್ನು ನಡೆಸುತ್ತಿರುವ ಹೇಮಂತ್ ದಾಸ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಒಂದು ಮಗು ಕೂಡ ಇದೆ. ತನ್ನ ಪತಿಯಿಂದ ಬೇರ್ಪಟ್ಟ ನಂತರ, ಆಕೆ ತನ್ನ ಸಹೋದರ ಹುಕುಮ್ ಸಿಂಗ್ ಮತ್ತು ಆತನ ಹೆಂಡತಿಯೊಂದಿಗೆ ವಾಸಿಸುತ್ತಿದ್ದರು. ಸಹೋದರರ ನಡುವೆ ಜಗಳ ನಡೆದ ನಂತರ ಹುಕುಮ್ ಸಿಂಗ್ ತನ್ನ ಹೆಂಡತಿಯೊಂದಿಗೆ ಮನೆ ಬಿಟ್ಟು ಹೋಗಿದ್ದರು. ಅಂದಿನಿಂದ ಮಹಾಲಕ್ಷ್ಮಿ ಒಂಟಿಯಾಗಿ ವಾಸಿಸುತ್ತಿದ್ದರು. ಆಕೆಯ, ತಾಯಿಯ ಹೇಳಿಕೆಯ ಪ್ರಕಾರ, ಮಹಾಲಕ್ಷ್ಮಿ ಸೆಪ್ಟೆಂಬರ್ 2 ರಂದು ಕೊನೆಯದಾಗಿ ತಾಯಿಗೆ ಕರೆ ಮಾಡಿ ಮಾತನಾಡಿದ್ದರು. ಶೀಘ್ರದಲ್ಲೇ ತನ್ನ ವಿಚ್ಛೇದಿತ ಪತಿಯನ್ನು ಭೇಟಿಯಾಗುವುದಾಗಿ ತಿಳಿಸಿದ್ದರು. ಸೆಪ್ಟೆಂಬರ್ 21 ರಂದು ಆಕೆ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.
ಮಹಾಲಕ್ಷ್ಮಿಯ ಕೊಲೆ ನಡೆದ ಬಳಿಕ, ಆಕೆಯ ವಿಚ್ಛೇದಿತ ಪತಿ ಹೇಮಂತ್ ದಾಸ್ ಒಬ್ಬ ವ್ಯಕ್ತಿಯ ಮೇಲೆ ಅನುಮಾನ ವ್ಯಕ್ತಪಡಿಸಿ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದರು. ಆಕೆ ಆತನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದಿದ್ದರು. ಆರು ವರ್ಷಗಳ ವೈವಾಹಿಕ ಜೀವನದ ಬಳಿಕ, ಒಂಬತ್ತು ತಿಂಗಳ ಹಿಂದೆ ನಾವು ಬೇರೆಯಾಗಿದ್ದೇವೆ. ನೆಲಮಂಗಲದ ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದ ಅಶ್ರಫ್ ಎಂಬಾತನೇ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಇದೆ ಎಂದು ಅವರು ಹೇಳಿದ್ದರು.
ಹೇಮಂತ್ ದಾಸ್ ಹೇಳಿರುವಂತೆ, ಮಹಾಲಕ್ಷ್ಮಿ ಅಶ್ರಫ್ ಜೊತೆ ಅಕ್ರಮ ಸಂಬಂಧ ಹೊಂದಿದ್ದರು. ಕೆಲ ತಿಂಗಳ ಹಿಂದೆ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಅಶ್ರಫ್ ವಿರುದ್ಧ ಮಹಾಲಕ್ಷ್ಮಿ ವಂಚನೆ ಆರೋಪ ಮಾಡಿ ದೂರು ಕೂಡ ದಾಖಲಿಸಿದ್ದರು.
ವಾಸ್ತವವಾಗಿ, ಪೊಲೀಸರು ಅಶ್ರಫ್ ಅನ್ನು ಪ್ರಮುಖ ಆರೋಪಿ ಎಂದು ಹೆಸರಿಸಿರಲಿಲ್ಲ. ಆತನನ್ನು ವಿಚಾರಣೆಗೆ ಒಳಪಡಿಸಿ ಬಿಟ್ಟು ಕಳಿಸಿದ್ದರು. ಆ ಕುರಿತ ಮಾಧ್ಯಮ ವರದಿ ಇಲ್ಲಿದೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 23 ರಂದು ಹೇಳಿಕೆ ನೀಡಿದ್ದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರು “ಪ್ರಕರಣದ ಪ್ರಮುಖ ಶಂಕಿತನನ್ನು ಗುರುತಿಸಲಾಗಿದೆ. ಆತ ಹೊರಗಿನ (ಹೊರ ರಾಜ್ಯದ) ವ್ಯಕ್ತಿಯಾಗಿದ್ದು, ತಲೆ ಮರೆಸಿಕೊಂಡಿದ್ದಾನೆ. ಪೊಲೀಸರು ಆತನ ಬಗ್ಗೆ ಹೆಚ್ಚುವರಿ ಮಾಹಿತಿಗಳನ್ನು ಕಲೆ ಹಾಕಿದ್ದಾರೆ ಎಂದಿದ್ದರು.
ಇದಾದ ನಂತರ, ಕೊಲೆ ಪ್ರಕರಣದ ಶಂಕಿತ ಆರೋಪಿ ಒಡಿಶ್ಶಾದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಮಾಧ್ಯಮಗಳಲ್ಲಿ ವರದಿಯಾದಾಗ ಪ್ರಕರಣ ಮಹತ್ವದ ತಿರುವು ಪಡೆಯಿತು. ಆರೋಪಿ ಮುಕ್ತಿರಾಜನ್ ಪ್ರತಾಪ್ ರೇ ಯ ಮೃತದೇಹವು ಬುಧವಾರ (ಸೆ.25) ಬೆಳಿಗ್ಗೆ ಒಡಿಶಾದ ಭದ್ರಕ್ ಜಿಲ್ಲೆಯ ಭುಯಿನ್‌ಪುರ್ ಗ್ರಾಮದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆರೋಪಿ ಭುಯಿನ್‌ಪುರ್ ಗ್ರಾಮದವನು ಎಂದು ವರದಿಗಳು ಹೇಳಿತ್ತು. ಹೆಚ್ಚಿನ ವರದಿಗಳು ಆರೋಪಿ ಮುಕ್ತಿ ರಂಜನ್ ರೇ ಎಂದು ಹೆಸರನ್ನು ಉಲ್ಲೇಖಿಸಿತ್ತು.
ಭದ್ರಕ್ ಎಸ್ಪಿ ವರುಣ್ ಗುಂಟುಪಲ್ಲಿ ಅವರ ಪ್ರಕಾರ, ಬೆಂಗಳೂರು ಪೊಲೀಸ್ ತಂಡವು ಬಂಧಿಸುವ ಮೊದಲು, ಆರೋಪಿಯನ್ನು ಮುಕ್ತಿರಾಜನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಪತ್ರ ಸಿಕ್ಕಿದ್ದು, ಅದರಲ್ಲಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
Mahalakshmi murder case | Odisha | SP Bhadrak, Varun Guntupalli says, " A team of Bangalore Police had come here to probe the recent murder of a woman there. The team said that the prime accused belonged to Bhadrak. Before the team could apprehend the accused, Mukthirajan died by… pic.twitter.com/RpRqBqpYXb
— ANI (@ANI) September 26, 2024
“ಬೆಂಗಳೂರಿನ ಕೊಲೆಗೆ ಸಂಬಂಧಿಸಿದಂತೆ ಬಂಧನದ ಭಯದಿಂದ ಆತನು ತನ್ನ ಜೀವನವನ್ನು ಕೊನೆಗೊಳಿಸಿದ್ದಾನೆ ಎಂದು ನಾವು ಬಲವಾಗಿ ಅನುಮಾನಿಸುತ್ತೇವೆ” ಎಂದು ಟೈಮ್ಸ್ ಆಫ್ ಇಂಡಿಯಾಗೆ ಎಸ್ಪಿ ಹೇಳಿದ್ದರು.
ವರದಿಗಳ ಪ್ರಕಾರ, ಆತ್ಮಹತ್ಯೆ ಆರೋಪಿ ಮುಕ್ತಿರಾಜನ್ ಪ್ರತಾಪ್ ರಾಯ್ ಮತ್ತು ಕೊಲೆಯಾದ ಮಹಾಲಕ್ಷ್ಮಿ 2023 ರಿಂದ ಸಹೋದ್ಯೋಗಿಗಳಾಗಿದ್ದರು. ಈ ವಿಷಯ ತಿಳಿದ ಪೊಲೀಸರು ಮಹಾಲಕ್ಷ್ಮಿಯೊಂದಿಗೆ ಸಂಪರ್ಕ ಹೊಂದಿದ್ದ ಜನರನ್ನು ವಿಚಾರಣೆ ನಡೆಸಿದ್ದರು. ಆಗ ಸ್ವಲ್ಪ ದಿನಗಳಿಂದ ರಾಯ್ ತಲೆಮರೆಸಿಕೊಂಡಿರುವುದು ಗೊತ್ತಾಗಿದೆ. ಸೆಪ್ಟೆಂಬರ್ 1ರಿಂದ ಮಹಾಲಕ್ಷ್ಮಿ ಮತ್ತು ರಾಯ್ ಇಬ್ಬರೂ ಕೆಲಸಕ್ಕೆ ಬಂದಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಪೊಲೀಸರು ರಾಯ್‌ನ ಸಹೋದರನನ್ನು ಸಂಪರ್ಕಿಸಿದಾಗ, “ರಾಯ್ ಪಶ್ವಿಮ ಬಂಗಾಳದಿಂದ ಕರೆ ಮಾಡಿ ಕೊಲೆ ಮಾಡಿರುವ ವಿಚಾರ ನನಗೆ ತಿಳಿಸಿದ್ದಾನೆ. ನಾನು ಆತನಿಗೆ ಒಡಿಶಾದ ತಮ್ಮ ಹಳ್ಳಿಗೆ ಬರುವಂತೆ ಹೇಳಿದ್ದೇನೆ” ಎಂದು ವಿವರಿಸಿದ್ದಾನೆ. ಪ್ರಸ್ತುತ ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.
ಒಟ್ಟಿನಲ್ಲಿ, 29 ವರ್ಷದ ಮಹಾಲಕ್ಷ್ಮಿಯ ಕೊಲೆ ಪ್ರಕರಣದ ಆರೋಪಿಯ ಹೆಸರು ಮುಕ್ತಿರಾಜನ್ ಪ್ರತಾಪ್ ರೇ ಎಂದಾಗಿದ್ದು, ಆತ ಒಡಿಶ್ಶಾದ ತನ್ನ ಹಳ್ಳಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಬಂಧನದ ಭೀತಿಯಿಂದ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು. ಆತನ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ಮಹಾಲಕ್ಷ್ಮಿಯನ್ನು ಕೊಲೆ ಮಾಡಿರುವುದು ನಾನೇ ಎಂದು ಒಪ್ಪಿಕೊಂಡಿದ್ದಾನೆ ಎಂದು ವರದಿಗಳು ಮತ್ತು ಪೊಲೀಸರ ಹೇಳಿಕೆಯಿಂದ ತಿಳಿದು ಬಂದಿದೆ. ಆದ್ದರಿಂದ ಮಹಾಲಕ್ಷ್ಮಿಯನ್ನು ಅಶ್ರಫ್ ಕೊಲೆ ಮಾಡಿದ್ದಾನೆ ಎಂಬುವುದು ದೃಢಪಟ್ಟಿಲ್ಲ.
ಈ ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದೆ. ಸತ್ಯಾಸತ್ಯತೆ ಪೊಲೀಸರ ತನಿಖೆ ಪೂರ್ಣಗೊಂಡ ಬಳಿಕ ಗೊತ್ತಾಗಲಿದೆ. ಆದರೆ, ಪ್ರಸ್ತುತ ಅಶ್ರಫ್ ಎಂಬಾತ ಕೊಲೆ ಮಾಡಿದ್ದಾನೆ ಎಂಬುವುದನ್ನು ಪೊಲೀಸರು ದೃಢಪಡಿಸಿಲ್ಲ. ಆತ್ಮಹತ್ಯೆ ಮಾಡಿಕೊಂಡಿರುವ ಮುಕ್ತಿರಾಜನ್ ಪ್ರತಾಪ್ ರೇ ಕೂಡ ಆರೋಪಿ ಎಂದೇ ಪರಿಗಣಿಸಲ್ಪಟ್ಟಿದ್ದಾನೆ. ಪ್ರಕರಣಕ್ಕೆ ಕೆಲವರು ಕೋಮು ಬಣ್ಣ ಬಳಿದಿರುವುದರಿಂದ, ಇದುವರೆಗೆ ಆದ ಬೆಳವಣಿಗೆಯ ಸತ್ಯಾಸತ್ಯತೆಯನ್ನು ಮಾತ್ರ ನಾವಿಲ್ಲಿ ವಿವರಿಸಿದ್ದೇವೆ.
ಇದನ್ನೂ ಓದಿ : FACT CHECK : ಮುಂಬೈನಲ್ಲಿ ಮುಸ್ಲಿಮರಿಂದ ಶಕ್ತಿ ಪ್ರದರ್ಶನ ಎಂದು ಸಂಬಂಧವಿಲ್ಲದ ವಿಡಿಯೋ


