ಬೀಳಗಿ ಮತಕ್ಷೇತ್ರದಿಂದ ಮುರಗೇಶ್ ನಿರಾಣಿ ಅವರು ಈಗಾಗಲೇ ನಾಲ್ಕು ಬಾರಿ ಸ್ಪರ್ಧೆ ಮಾಡಿ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಮುಂದಿನ ಮುಖ್ಯಮಂತ್ರಿ ರೇಸ್‌ನಲ್ಲೂ ನಿರಾಣಿ ಹೆಸರು ಮುಂಚೂಣಿಯಲ್ಲಿದೆ. ಆದರೆ ಮುರಗೇಶ್ ನಿರಾಣಿ ಅವರು ಕಾಂಗ್ರೆಸ್ ಅಭ್ಯರ್ಥಿ ಜೆಟಿ ಪಾಟೀಲ್ ವಿರುದ್ಧ ಭಾರೀ ಹಿನ್ನಡೆ ಅನುಭವಿಸುತ್ತಿದ್ದಾರೆ.
ಗೆಲುವಿಗಾಗಿ ಕ್ಷೇತ್ರದಲ್ಲಿ ಹಣದ ಹೊಳೆ ಹರಿಸಿದ್ದ ಮುರಗೇಶ್ ನಿರಾಣಿ ಅವರಿಗೆ ಗೆಲುವಿನ ಹಾದಿ ಕಷ್ಟವಾಗಿದೆ. 30,000ಮತಗಳಷ್ಟು ಹಿನ್ನಡೆ ಅನುಭವಿಸಿದ್ದಾರೆ. ಇನ್ನು ಅವರ ಗೆಲುವು ಮರಿಚಿಕೆ ಎನ್ನುವುದು ಸ್ಪಷ್ಟವಾಗುತ್ತಿದೆ.
ಬೀಳಗಿ
ಕಾಂಗ್ರೆಸ್- ಜೆಟಿ ಪಾಟೀಲ್- ಮುನ್ನಡೆ
ಬಿಜೆಪಿ- ಮುರಗೇಶ್ ನಿರಾಣಿ- ಹಿನ್ನಡೆ
ಜೆಡಿಎಸ್- ರುಕ್ಮುದ್ದೀನ್ ಸೌದಗಲ್- ಹಿನ್ನಡೆ
2004ರ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದ ಮುರಗೇಶ ನಿರಾಣಿ, ಕಾಂಗ್ರೆಸ್ ಹುರಿಯಾಳು ಜೆಟಿ ಪಾಟೀಲ್ ಅವರ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕಿದರು. ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿಸಿದ ನಿರಾಣಿ, ಜೆಟಿ ಪಾಟೀಲ್ ವಿರುದ್ಧ 17,325 ಮತಗಳ ಅಂತರಿಂದ ಗೆಲುವು ಕಂಡರು.
2008ರ ಚುನಾವಣೆಯಲ್ಲಿ ಮತ್ತೆ ಮುರುಗೇಶ ನಿರಾಣಿ ಬಿಜೆಪಿ ಪಕ್ಷದಿಂದ ಗೆಲುವು ಕಂಡರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯಥಿಯಾಗಿದ್ದ ಅಜಯ್ ಕುಮಾರ್ ಸರನಾಯಕ ಅವರು ಪ್ರಬಲ ಪೈಪೋಟಿ ನೀಡಿ ಕೇವಲ 3,124 ಮತಗಳ ಅಂತರದಿಂದ ನಿರಾಣಿ ವಿರುದ್ಧ ಸೋಲುಣಬೇಕಾಯಿತು. ಗೆದ್ದ ನಿರಾಣಿ ಮಂತ್ರಿಯಾದರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಜೆ.ಟಿ ಪಾಟೀಲ ಅವರನ್ನು ಕಣಕ್ಕಿಳಿಸಿದರು. ಈ ವೇಳೆ ನಿರಾಣಿಯ ಹ್ಯಾಟ್ರಿಕ್ ಗೆಲುವಿಗೆ ಜೆ.ಟಿ ಪಾಟೀಲ ಬ್ರೇಕ್ ಹಾಕಿದರು. ನಿರಾಣಿ ವಿರುದ್ಧ 11,238 ಮತಗಳ ಅಂತರದಿಂದ ಗೆದ್ದ ಜೆಟಿ ಪಾಟೀಲ್ ಅವರು ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.
ಕಳೆದ ಬಾರಿಯ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮುರುಗೇಶ ನಿರಾಣಿ 85,135 ಮತ ಪಡೆಯುವ ಮೂಲಕ ಗೆಲುವಿನ ನಗೆ ಬೀರಿದರು. ಕಾಂಗ್ರೆಸ್ ಅಭ್ಯರ್ಥಿ ಜೆ.ಟಿ ಪಾಟೀಲ್ ತೀವ್ರ ಪೈಪೋಟಿ ನೀಡಿ ಕೇವಲ 4,811 ಮತಗಳ ಅಂತರದಿಂದ ಸೋಲುಂಡರು. ಬಿಜೆಪಿ ಸರ್ಕಾರದಲ್ಲಿ ನಿರಾಣಿ ಎರಡನೇ ಬಾರಿ ಮಂತ್ರಿಯಾದರು.


