Homeಮುಖಪುಟಹುಸಿ ರಾಷ್ಟ್ರೀಯತೆ-ಹಸಿ ಜಾತೀಯತೆ ವರ್ಸಸ್ ಘನತೆಯ ಬದುಕು

ಹುಸಿ ರಾಷ್ಟ್ರೀಯತೆ-ಹಸಿ ಜಾತೀಯತೆ ವರ್ಸಸ್ ಘನತೆಯ ಬದುಕು

- Advertisement -
- Advertisement -

ನಮ್ಮ ದೇಶದಲ್ಲಿ ನಾವಿಂದು ‘ವೈಚಾರಿಕ ಆತ್ಮ’ ಉಳಿಸಿಕೊಳ್ಳಲು ನಡೆಯುತ್ತಿರುವ ಕದನಕ್ಕೆ ಸಾಕ್ಷಿಯಾಗಿದ್ದೇವೆ. ‘ಹಿಂದೂ’ ಪ್ರಥಮ ಎಂಬ ಕಲ್ಪನೆಗೆ, ಈ ದೇಶದ ಐತಿಹಾಸಿಕ, ಅಪೇಕ್ಷಣೀಯ ಮತ್ತು ಆದರಣೀಯ ವೈವಿಧ್ಯತೆ, ಸಹಿಷ್ಣುತೆ ಅಡ್ಡಗಾಲಾಗುತ್ತದೆ ಎಂಬುದು ಸಾಂಪ್ರದಾಯಿಕ ತಿಳಿವಳಿಕೆಯಾಗಿದೆ. ಭಾರತ ‘ಜಾತ್ಯತೀತ ರಾಜಕೀಯ ಸಂಸ್ಕೃತಿ’ಯುಳ್ಳ ‘ಬಹು ಧರ್ಮೀಯರ ದೇಶ’ ಎಂಬ ಪರಿಕಲ್ಪನೆಗೆ ದೊಡ್ಡ ಅಪಾಯ ಕಾಡುತ್ತಿರುವುದನ್ನು ಇಂದು ಅಂದಾಜಿಸಬಹುದಾಗಿದೆ. ಮಹಾನ್ ಚೇತನಗಳಾದ ಬುದ್ಧ, ಬಸವ, ಗಾಂಧಿ, ಕನಕ, ನಾರಾಯಣಗುರು, ಕುವೆಂಪು ಪ್ರತಿಪಾದಿಸಿದ ‘ಅಹಿಂಸೆ’ ಮತ್ತು ‘ಜಾತ್ಯತೀತತೆಯ ಮೌಲ್ಯ’ಗಳಿಂದ ದೇಶ ದೂರಸರಿಯುತ್ತಿದೆ. ಹೀಗಾಗಿ, ಏರುತ್ತಿರುವ ಧರ್ಮದ ಘೋಷಣೆಗಳು ಅದರ ಸುತ್ತ ನಡೆಯುತ್ತಿರುವ ಧರ್ಮಾಧಾರಿತ ರಾಜಕೀಯಕ್ಕೆ ಬಲಿಯಾಗದಂತೆ ನಮ್ಮ ದೇಶವನ್ನು ಪ್ರಗತಿಪರ-ಜಾತ್ಯತೀತ ದೇಶವನ್ನಾಗಿ ಉಳಿಸಿಕೊಳ್ಳುವುದು ಕಷ್ಟಕರ.

ಇಷ್ಟು ಪೀಠಿಕೆಯನ್ನು ಹಾಕುತ್ತಿರುವುದಕ್ಕೆ ಕಾರಣವಿದೆ; ರಾಷ್ಟ್ರೀಯ ದಲಿತ ಸೇನೆಯ ಸಂಸ್ಥಾಪಕ ಹಮಾರಾ ಪ್ರಸಾದ್ ಆಡಿದ ಮಾತುಗಳನ್ನು ಆಲಿಸಿ ಯಾತನೆಯಿಂದ ನರಳಿರುವೆ. “ಹಿಂದೂ ಜನರ ಮನಸ್ಸು ಘಾಸಿಗೊಳಿಸುವಂತಹ ಪುಸ್ತಕವನ್ನು ಡಾ. ಬಿ.ಆರ್. ಅಂಬೇಡ್ಕರ್ ಬರೆದಿದ್ದಾರೆ. ಅವತ್ತು ನಾನು ಬದುಕಿದ್ದರೆ, ಗಾಂಧಿಯನ್ನು ಗೋಡ್ಸೆ ಕೊಂದಂತೆ ನಾನು ಅಂಬೇಡ್ಕರ್‌ರನ್ನು ಕೊಲ್ಲುತ್ತಿದ್ದೆ” ಎಂದು ಹಮಾರಾ ಪ್ರಸಾದ್ ಹೇಳಿದ್ದಾರೆ. ಇನ್ನು ನಮ್ಮ ನೆಲದಲ್ಲಿಯೇ, ಟಿಪ್ಪುಗೆ ಕಾಣಿಸಿದ ಗತಿಯನ್ನು ಸಿದ್ದರಾಮಯ್ಯ ಅವರಿಗೂ ಕಾಣಿಸಿ ಎಂದು ಕರ್ನಾಟಕದ ಸಚಿವರೊಬ್ಬರು ಹೇಳಿಕೆ ಕೊಟ್ಟಿದ್ದಾರೆ. ನಂತರ ವಿಷಾದವನ್ನು ವ್ಯಕ್ತಪಡಿಸಿದ್ದಾರೆ.

ಹಮಾರಾ ಪ್ರಸಾದ್

ಶಾಲೆಯಲ್ಲಿ ಓದುವಾಗ ನನ್ನ ಮೇಷ್ಟ್ರು ‘ಜಾತ್ಯತೀತ’ತೆಯ ಅರ್ಥ ಹೇಳುತ್ತಿದ್ದಾಗ ಭಾರತದಂತಹ ಮಹಾನ್ ದೇಶದಲ್ಲಿ ಜನಿಸಿದ್ದೇನೆಂಬ ಹೆಮ್ಮೆ ಮತ್ತು ಗೌರವದಿಂದ ಬೀಗಿದ್ದೆ. ಎಲ್ಲಾ ಜಾತಿಯ, ಧರ್ಮೀಯ ಜನರು ಒಂದೇ ಸೂರಿನಡಿ ಸಾಮರಸ್ಯದಿಂದ ಬಾಳ್ವೆ ನಡೆಸುತ್ತಿದ್ದಾರೆಂದು ನಂಬಿದ್ದೆ. ಎಲ್ಲಾ ಬಗೆಯ ಹಬ್ಬಗಳನ್ನು ಒಂದಾಗಿ ಸಂಭ್ರಮ-ಸಡಗರದಿಂದ ಆಚರಿಸುತ್ತಿದ್ದಾರೆಂದು ಭಾವಿಸಿದ್ದೆ. ಜಾತ್ಯತೀತತೆಯ ಅಸಾಧಾರಣ ಪರಿಕಲ್ಪನೆಯ ಒಳನೋಟವನ್ನು ನಾನೂ ಅಳವಡಿಸಿಕೊಂಡೆ. ನಂತರ, ದಿನನಿತ್ಯದ ಜೀವನದಲ್ಲಿ ನಡೆಯುವ ಆಗುಹೋಗುಗಳನ್ನು ಗಮನಿಸಲು ಆರಂಭಿಸಿದೆ. ಆಗ ‘ಜಾತೀಯತೆ’, ‘ಧರ್ಮಾಂಧತೆ’, ‘ಸ್ವಜನಪಕ್ಷಪಾತ’ ಎಂಬ ಪೈಶಾಚಿಕ ಹಿನ್ನೆಲೆಯ ಸಂಗತಿಗಳು ಎಲ್ಲೆಡೆ ಅಸ್ತಿತ್ವದಲ್ಲಿರುವುದನ್ನು ಕಾಣಲು ಹೆಚ್ಚು ಸಮಯ ಬೇಕಾಗಲಿಲ್ಲ. ಬೆಳೆಯುತ್ತಾ ಹೋದಂತೆ ಇದರ ವಿಕೃತರೂಪ ನನ್ನ ಮುಂದೆ ಅನಾವರಣಗೊಳ್ಳುತ್ತಾ ಬಂದಿತು.

ಇವತ್ತು ಚಂದ್ರ ಮತ್ತು ಮಂಗಳನ ಅಂಗಳಕ್ಕೆ ಧುಮುಕಲು ಸಜ್ಜಾಗುತ್ತಿರುವುದಾಗಿ ನಮ್ಮ ಆಡಳಿತಗಾರರು ಅವಕಾಶ ಸಿಕ್ಕಾಗಲೆಲ್ಲಾ ಎದೆಯುಬ್ಬಿಸಿ ಹೇಳುತ್ತಿರುತ್ತಾರೆ. ಇದೇ ಹೊತ್ತಿನಲ್ಲಿ ಜಾತ್ಯತೀತ ಭಾರತದಲ್ಲಿ ದಲಿತನೊಬ್ಬ ಕುದುರೆ ಏರಿ ಹೋಗುವಂತಿಲ್ಲ ಎಂಬುದನ್ನು ಒಪ್ಪಿಕೊಳ್ಳಲು ಯಾರೊಬ್ಬರು ಸಿದ್ಧರಿಲ್ಲ.

ನಮ್ಮೊಂದಿಗೆ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಬಲಿಷ್ಠಗೊಳ್ಳಬೇಕು, ಸ್ವಾವಲಂಬಿಗಳಾಗಬೇಕೆಂದು ಕರೆ ನೀಡಲಾಗುತ್ತದೆಯೇ ಹೊರತು ಅವರನ್ನು ಆತ್ಮಾಭಿಮಾನದಿಂದ ಬದುಕಲು ಬಿಡುತ್ತಿಲ್ಲ.

ಕಳೆದವಾರ ಬೆಂಗಳೂರಿನ ಸರಹದ್ದಿನಲ್ಲಿರುವ ಗ್ರಾಮವೊಂದರ ಬಳಿ ಸಾಗುತ್ತಿದ್ದೆ. ಊಟದ ಸಮಯ ಮೀರುತ್ತಿತ್ತು. ಹೀಗಾಗಿ ಚಹಾ ಮತ್ತು ಬಿಸ್ಕತ್ತು ಸೇವಿಸಲು ಅಂಗಡಿಯೊಂದರ ಬಳಿ ಕಾರು ನಿಲ್ಲಿಸಿದೆ. ಸಕ್ಕರೆರಹಿತ ಚಹ ಅಲ್ಲಿರಲಿಲ್ಲವಾದ್ದರಿಂದ ಮನೆಯಿಂದ ತಂದುಕೊಡಲು ಅಂಗಡಿಯಾಕೆ ಕೂಗಿ ಹೇಳಿದರು. ಪಾಪದ ಹೆಣ್ಣುಮಗು ಸ್ಟೇನ್‌ಲೆಸ್ ಸ್ಟೀಲ್ ಗ್ಲಾಸ್‌ನಲ್ಲಿ ಚಹ ತಂದು ಕೈಗಿಡಲು ಬಂತು. ಅಂಗಡಿಯಲ್ಲಿದ್ದ ತಾಯಿಗೆ ನನ್ನ ಮೈಬಣ್ಣ ಅನುಮಾನ ಮೂಡಿಸಿರಬೇಕು. ಸ್ಟೀಲ್ ಲೋಟ ಕಸಿದು ಪೇಪರ್ ಗ್ಲಾಸ್‌ನಲ್ಲಿ ಸುರಿದುಕೊಟ್ಟರು. ಅವಮಾನ ತೀವ್ರವಾಗಿ ಕಾಡಿದರೂ, ಸಹಿಸಿಕೊಂಡು ಚಹ ಕುಡಿಯಲು ಮುಂದಾದೆ. ನಂತರ ಯಾತನೆ ತಡೆಯಲಾರದೆ, ನಾಲ್ಕು ಗುಟುಕು ಕುಡಿದು ಚಹ ಮೋರಿಗೆ ಸುರಿದು ಕಾರುಹತ್ತಿದೆ.

ಇರಲಿ, ಇದಕ್ಕಿಂತಲೂ ಬಹಳ ವೇದನೆ ಕೊಟ್ಟಿದ್ದು ಕೊಪ್ಪಳದ ಘಟನೆ. 3 ವರ್ಷದ ಮಗು ದೇಗುಲ ಪ್ರವೇಶಿಸಿತ್ತು. ಅದಕ್ಕೆ ಗ್ರಾಮದ ಹಿರಿಯರು 25 ಸಾವಿರ ದಂಡ ವಿಧಿಸಿದ್ದಾರೆ. ‘ದಂಡ’ವನ್ನು ದೇಗುಲ ಶುದ್ಧೀಕರಿಸಲು ಬಳಸಲಾಗುವುದಂತೆ! ಇಂತಹ ಘಟನೆಗಳು ಹೊಸತಲ್ಲ. 2018ರಲ್ಲಿ ಗುಜರಾತ್‌ನ ಭಾವನಗರ ಜಿಲ್ಲೆಯ ಉಮ್ರಾಲ ತಾಲೂಕಿನ ತಿಂಬಿ ಗ್ರಾಮದ 21 ವರ್ಷದ ಪ್ರದೀಪ್ ರಾಥೋಡ್ ಕುದುರೆ ಖರೀದಿಸಿ ಸಾಕಿಕೊಂಡಿದ್ದ. ಕುದುರೆ ಸವಾರಿ ಆರಂಭಿಸಿದಾಗಿನಿಂದ ನಿತ್ಯ ಬೆದರಿಕೆಗೆ ಒಳಗಾಗುತ್ತಿದ್ದ. ಅದೊಂದು ದಿನ ಕುದುರೆ ಏರಿ ಜಮೀನಿಗೆ ಹೋದವ ಸಜೀವವಾಗಿ ಮರಳಲೇ ಇಲ್ಲ. ಕುದುರೆ ಮಾತ್ರ ಹಿಂತಿರುಗಿತು. ಕಷ್ಟಪಟ್ಟು ಶೋಧಿಸಿದ ನಂತರ ರಾಥೋಡನ ಮೃತ ದೇಹ ರಕ್ತದ ಕಲೆ ಅಂಟಿಸಿಕೊಂಡು ಸಿಕ್ಕಿತ್ತು. 2019ರಲ್ಲಿ ದಲಿತ ವರನೊಬ್ಬ ಕುದುರೆ ಏರಿ ಮೆರವಣಿಗೆ ಹೊರಟಿದ್ದರಿಂದ, ಕುಟುಂಬ ಸಮೇತ ‘ಸಾಮಾಜಿಕ ಬಹಿಷ್ಕಾರ’ಕ್ಕೆ ಒಳಗಾಗಿತ್ತು. ಸೇನೆಯಲ್ಲಿ ಕೆಲಸ ಮಾಡಿಬಂದ ಸೈನಿಕನನ್ನು ‘ದಲಿತ’ನೆಂಬ ಕಾರಣಕ್ಕೆ ಕುದುರೆ ಮೇಲಿನಿಂದ ಕೆಳಕ್ಕೆ ಇಳಿಸಿದ್ದರು. ದೇಶ ಕಾದುಬಂದ ಯೋಧನೆಂಬುದು ಕೂಡ ಇಲ್ಲಿ ಗಣನೆಗೆ ಬಂದಿರುವುದಿಲ್ಲ. ಕಾಸ್ಗಂಜ ಜಿಲ್ಲೆಯಲ್ಲಿ ಠಾಕೂರರ ಪ್ರಾಬಲ್ಯದ ಹಳ್ಳಿಗಳ ಮೇಲೆ ತಿರುಗಾಡಲು 27 ವರ್ಷದ ದಲಿತ ವ್ಯಕ್ತಿಯೊಬ್ಬ 2 ತಿಂಗಳುಗಳ ಕಾಲ ಹೋರಾಡಿದ್ದ. ಮಧ್ಯಪ್ರದೇಶದ ಘಾಟಿಯಾ ಪಟ್ಟಣದ 27 ವರ್ಷದ ರಾಮಪ್ರಸಾದ್ ಭಾಮ್ನಿಯಾ ಓರ್ವ ಪೊಲೀಸ್ ಪೇದೆ. ಶಾಜಾಪುರದಲ್ಲಿ ಕೆಲಸ ಮಾಡುತ್ತಿದ್ದ. 2018ರ ಏಪ್ರಿಲ್ 2ರಂದು ಮದುವೆ ನಿಶ್ಚಯವಾಗಿತ್ತು. ಹಿಂದಿ ಹಾಡಿನೊಂದಿಗೆ ಮದುವೆ ಮೆರವಣಿಗೆ ಹೊರಟಿತ್ತು. 15-20 ಜನರ ಗುಂಪು ಅಲ್ಲಿಗೆ ಬಂದ ಅವರನ್ನು ಕುದುರೆಯಿಂದ ಕೆಳಗಿಳಿಸಿ, ಬೆದರಿಸಿದ್ದಾರೆ. ಪೊಲೀಸರ ಮಧ್ಯಪ್ರವೇಶದಿಂದ ದಲಿತರು ಬದುಕುಳಿದಿದ್ದಾರೆ.

2012ರಲ್ಲಿ ಹೆಚ್.ಡಿ. ಕೋಟೆಯ ಸರಗೂರಿನ ಮದುವೆಯೊಂದು ನಡೆದಿತ್ತು. ವಧುವಿನ ಸಂಬಂಧಿಕರು ಚಾಮರಾಜನಗರ ಜಿಲ್ಲೆಯ ಹೆಗ್ಗೋಟರಾ ಗ್ರಾಮದ ಬಳಿ ಸಾಗುವಾಗ ತೊಟ್ಟಿಯೊಂದರಿಂದ ನೀರು ಕುಡಿದಿದ್ದಾರೆ. ಇಷ್ಟಕ್ಕೆ ಮಹಿಳೆಯನ್ನು ನಿಂದಿಸಿ, ಟ್ಯಾಂಕಿನ ನೀರನ್ನು ಹೊರಚೆಲ್ಲಿ, ಗೋಮೂತ್ರದಿಂದ ಶುದ್ಧೀಕರಿಸಲಾಗಿದೆ. 2022ರ ನವೆಂಬರ್ 7ರಂದು ರಾಜಸ್ತಾನದ ಜೋಧ್‌ಪುರ ಜಿಲ್ಲೆಯ ನೂರ್‌ಸಾಗರ್‌ನ ಕೊಳವೆ ಬಾವಿಯೊಂದರಲ್ಲಿ ನೀರು ಸೇದಿದ್ದಕ್ಕೆ 45 ವರ್ಷದ ವ್ಯಕ್ತಿ ಮೇಲೆ ಹಲ್ಲೆ ನಡೆಸಲಾಗಿತ್ತು. ಪೊಲೀಸರು ಬರುವವರೆಗೂ ಆಸ್ಪತ್ರೆಗೆ ಕರೆದೊಯ್ಯುವುದಿಲ್ಲವೆಂದು ಹಠ ಹಿಡಿದಿದ್ದರಿಂದ ಗಾಯಾಳು ಜೀವಬಿಟ್ಟಿದ್ದಾನೆ. 2022ರ ಸೆಪ್ಟೆಂಬರ್ 5ರಂದು ತುಮಕೂರಿನ ಮಿಡಿಗೇಶಿ ಗ್ರಾಮದ ತಿಪ್ಪೇಸ್ವಾಮಿ ಕುಟುಂಬ ಗಣೇಶ ದೇಗುಲ ನಿರ್ಮಿಸಲು ಮುಂದಾಗಿತ್ತು. ಇದನ್ನು ಸಹಿಸಲಾಗದೆ ತಿಪ್ಪೇಸ್ವಾಮಿಯ ಪತ್ನಿಯನ್ನು ಹಿಡಿದು ಕೊಲ್ಲಲಾಗಿದೆ. ಜೊತೆಗೆ ರಾಮಾಂಜಯ್ಯನನ್ನು ಇರಿಯಲಾಗಿದೆ. 2022ರ ಏಪ್ರಿಲ್ 6ರಂದು ಗದಗಿನಲ್ಲಿ ಜೈಭೀಮ್ ಹಾಡು ಹಾಡಲು ಗಾಯಕರನ್ನು ವಿನಂತಿಸಲಾಗಿದೆ. ಇಷ್ಟಕ್ಕೆ ದಲಿತರನ್ನು ಥಳಿಸಲಾಗಿದೆ. ಸೆಪ್ಟೆಂಬರ್ 8ರಂದು ಗ್ರಾಮದೇವ ಸಿಡೀರಣ್ಣನ ವಿಗ್ರಹಕ್ಕೆ ಜೋಡಿಸಲಾದ ಕಂಬವನ್ನು ಸ್ಪರ್ಶಿಸಿದ್ದಕ್ಕೆ 60 ಸಾವಿರ ದಂಡ ವಿಧಿಸಲಾಗಿದೆ. ಸೆಪ್ಟೆಂಬರ್ 29ರಂದು ಕಿವಿಯೋಲೆಗಳನ್ನು ಕದ್ದನೆಂದು 14 ವರ್ಷದ ದಲಿತ ಬಾಲಕನನ್ನು ಕಂಬಕ್ಕೆ ಕಟ್ಟಿ ಕ್ರೂರವಾಗಿ ಥಳಿಸಲಾಗಿದೆ. ರಾಜಸ್ತಾನ ಮೂಲದ ಐಪಿಎಸ್ ಅಧಿಕಾರಿ ಸುನೀಲ್‌ಕುಮಾರ್ ಧನ್ವಂತ ಮಣಿಪುರ ಕೇಡರ್‌ನ 2020ರ ಬ್ಯಾಚ್‌ನ ಅಧಿಕಾರಿ. ಇವರು ಕೂಡ ಜಾತಿಯ ಕಾರಣಕ್ಕಾಗಿ ಪೊಲೀಸರ ರಕ್ಷಣೆ ಪಡೆದು ಕುದುರೆ ಏರಿ ಮದುವೆ ಮೆರವಣಿಗೆಯನ್ನು ನಡೆಸಿದ್ದರು. “ನಾನು ಐಪಿಎಸ್ ಅಧಿಕಾರಿ ಆಗಿರಬಹುದು. ಆದರೆ, ಇಂದಿಗೂ ದಲಿತರು ಮದುವೆಯ ಮೆರವಣಿಗೆ ಹೋಗಲು ಭಯ ಪಡುತ್ತಾರೆಂದು” ನೋವನ್ನು ವ್ಯಕ್ತಪಡಿಸಿದ್ದಾರೆ.

ಮತ್ತೊಂದು ವೈಯಕ್ತಿಕ ಘಟನೆ; ಅದೊಂದು ದಿನ ಸಂಜೆ ಗೆಳೆಯನ ಕರೆಯ ಮೇರೆಗೆ ಅವರ ಮನೆಗೆ ಹೋಗಿದ್ದೆ. ಗೆಳೆಯನ ಪತ್ನಿ ಅಕ್ಕರೆಯಿಂದ ಒಗ್ಗರಣೆ ಮಾಡಿದ್ದರು. ಒಗ್ಗರಣೆ ತಿನ್ನುವಾಗ, 3ನೇ ತರಗತಿ ಓದುತ್ತಿದ್ದ ಅಂಜಲಿ ನೆರೆಮನೆಯಲ್ಲಿರುವ ಸಹಪಾಠಿಯ ಹುಟ್ಟುಹಬ್ಬ ಆಚರಣೆಗೆ ಹೋಗಿ ಬರುವೆನೆಂದು ಗೆಳೆಯನ ಬಳಿ ಉಸುರುತ್ತಿತ್ತು. ಅಲ್ಲಿ ಕುಳಿತಿದ್ದ ಅಜ್ಜಿ, ಹುಟ್ಟುಹಬ್ಬ ಯಾರದ್ದೆಂದು ಪ್ರಶ್ನಿಸಿತು. ಸಂಜಯನ ಹುಟ್ಟುಹಬ್ಬ ಎನ್ನುತ್ತಿದ್ದಂತೆ, ಕೂತಿದ್ದ ಅಜ್ಜಿ ಕಣ್ಣಿನ ರೆಪ್ಪೆ ಅಲುಗಾಡಿಸದೆ ಅಚೇತಳಾಯಿತು. ನಂತರ ಮೊರದಗಲ ಕಣ್ಣುಬಿಟ್ಟು, ಹೋಗುವುದು ಬೇಡವೆಂದು ಪಟ್ಟುಹಾಕಿತು. ಅಜ್ಜಿಯ ಕೂಗಿಗೆ ಪಾಪದ ಮಗು ಗುಬ್ಬಚ್ಚಿಯಂತಾಯಿತು. ಇದರ ಪ್ರಕಾರ ದಲಿತರ ಮನೆಗೆ ಹೋಗಬಾರದು. ಅವರು ಗೆಳೆತನಕ್ಕೆ ಅರ್ಹರಲ್ಲ. ಗೆಳೆಯನ ತಾಯಿಯ ವರ್ತನೆ ಖಂಡಿಸಬೇಕೆಂದು ಮನತುಡಿಯಿತು. ಆದರೆ, ನನ್ನ ಮಾತುಗಳು ಮತ್ತಷ್ಟು ಕೆರಳಿಸಿಯಾವೆಂದು ಮೂಕಸಾಕ್ಷಿಯಾದೆ.

60 ದಶಕದಲ್ಲಿ ಸೈದ್ಧಾಂತಿಕ ಚರ್ಚೆಗಳು ಅಂತ್ಯಗೊಳ್ಳುತ್ತವೆ ಎಂದು ಸಮಾಜಶಾಸ್ತ್ರಜ್ಞ ಡೆನಿಯಲ್ ಬೆಲ್ ಪ್ರತಿಪಾದಿಸಿದ್ದರು. ‘ಸಮತಾವಾದ’ ಅಂತ್ಯಗೊಂಡು ಕಲ್ಯಾಣ ರಾಜ್ಯದ ಉದಯದಿಂದ ‘ಸೈದ್ಧಾಂತಿಕತೆ ಅಂತ್ಯ’ಗೊಳ್ಳುತ್ತದೆ ಎಂದಿದ್ದರು. ಆದರೆ, ಇವತ್ತು ಸಮತಾವಾದವನ್ನು ಹಿಮ್ಮೆಟ್ಟಿಸಲಾಗಿದೆ. ‘ಬಂಡವಾಳಶಾಹಿ ಪ್ರಜಾಪ್ರಭುತ್ವ’ವನ್ನು ಪರಿಣಾಮಕಾರಿಯಾಗಿ ಪ್ರಶ್ನಿಸಿ ಹಿಮ್ಮೆಟ್ಟಿಸುವ ಯಾವುದೇ ಸಿದ್ಧಾಂತಗಳಿಲ್ಲವಾಗಿದೆ. ಇದರ ಬೆನ್ನುಹತ್ತಿ ಶೋಧಿಸುತ್ತಾ ಸಾಗಿದರೆ, ‘ರಾಷ್ಟ್ರೀಯತೆಯ ಸಿದ್ಧಾಂತ’, ‘ಜಾತೀಯತೆಯ ಸಿದ್ಧಾಂತ’, ‘ಸ್ವಜನಪಕ್ಷಪಾತ’ ಹೇರಳವಾಗಿ ಕಾಣಸಿಗುತ್ತವೆ.

ಇದನ್ನೂ ಓದಿ: ಇದು ಕ್ರಿಕೆಟ್ ಪಂದ್ಯವೋ ರಾಜಕೀಯ ರ್‍ಯಾಲಿಯೋ?: ಬಿಜೆಪಿಯವರೇ ಟಿಕೆಟ್‌ ಖರೀದಿಸಿದ ಕಥೆ!

ಪ್ರತಿಯೊಂದು ರಾಜಕೀಯ ಸಿದ್ಧಾಂತಗಳಲ್ಲಿಯೂ ’ರಾಷ್ಟ್ರೀಯವಾದ’ ವ್ಯಾಪಕವಾಗಿ ಹರಡಿಕೊಂಡಿದೆ. ಜಾತೀಯತೆ, ಸ್ವಜನಪಕ್ಷಪಾತಕ್ಕಿಂತಲೂ ‘ರಾಷ್ಟ್ರೀಯತೆ’ ಗುಲಗಂಜಿ ತೂಕ ತೀವ್ರವಾಗಿ ಕಾಡುತ್ತಿದೆ. ‘ರಾಷ್ಟ್ರೀಯತೆ’ ಎಂದರೆ ಒಂದು ದೇಶದ ಶ್ರೇಷ್ಠತೆ ಮತ್ತು ಐಕ್ಯತೆಗೆ ಸಂಬಂಧಿಸಿದ ಉತ್ಪ್ರೇಕ್ಷಿತ ನಂಬಿಕೆ. ಇನ್ನೊಂದು ಬಗೆಯಲ್ಲಿ ಹೇಳುವುದಾದರೆ, ಇದು ‘ಸಂಸ್ಕೃತಿ, ಐತಿಹಾಸಿಕ ಮತ್ತು ಪ್ರಾದೇಶಿಕ ಅಸ್ಮಿತೆ’ ಕೂಡ ಆಗಿದೆ. ಕೆಲವೊಮ್ಮೆ ಇದನ್ನು ‘ಶ್ರೇಷ್ಠತೆಯ ಉತ್ಕರ್ಷ’ ಎಂತಲೂ ಹೇಳಬಹುದಾಗಿದೆ.

ರಾಷ್ಟ್ರೀಯತೆಯ ಕುರಿತು ಮೂರು ಬಗೆಯ ಟೀಕೆಗಳಿವೆ. ಇದು ಅಸಹಿಷ್ಣುತೆ ಮತ್ತು ತಾರತಮ್ಯವನ್ನು ಹುಟ್ಟುಹಾಕುತ್ತದೆ. ಇದು ಪ್ರತಿಪಾದಕನ ಸ್ವರೂಪದಲ್ಲಿದ್ದು ’ತಾರತಮ್ಯ’ ಎಂಬುದು ’ಮಾನವೀಯ ನಿಯಂತ್ರಣ’ದ ಕಡಿವಾಣ ಮೀರಿರುತ್ತದೆ. ಜನಾಂಗ, ವರ್ಣ, ಕುಲ, ಭಾಷೆ ಇವು ಇದರ ಪ್ರಮುಖ ಘಟಕಾಂಶಗಳಾಗಿವೆ. ಇಂತಹ ಅಂಶಗಳು ಹಿಟ್ಲರ್, ಮುಸಲೋನಿಯಂತಹ ಜೀವವಿರೋಧಿಗಳನ್ನು ಹುಟ್ಟುಹಾಕಿತು. ಇದು ’ವಿಶ್ವಭ್ರಾತೃತ್ವ ಮತ್ತು ಮಾನವೀಯತೆಯ ಎಲ್ಲೆ’ಯನ್ನು ಮೊಟಕುಗೊಳಿಸುತ್ತದೆ. ಜೊತೆಗೆ ತನ್ನದೇ ಆದ ‘ನೈತಿಕತೆ’ಯನ್ನು ಪರಿಚಯಿಸುತ್ತದೆ. ’ರಾಷ್ಟ್ರೀಯತೆ’ಯ ಹೆಸರಿನಲ್ಲಿ ಯುದ್ಧಗಳನ್ನು ಮತ್ತು ಹಿಂಸಾಚಾರಗಳನ್ನು ಕೂಡ ಸಮರ್ಥಿಸಲಾಗುತ್ತದೆ. ಇದು ಆಧ್ಯಾತ್ಮಿಕ ವಿಕಾಸಕ್ಕೆ ಒಂದು ಸವಾಲು. ಅತ್ಯಂತ ಸಂಕುಚಿತ ಮನೋಭಾವ ಹುಟ್ಟುಹಾಕುವ ಮೂಲಕ ಒಂದು ಜನಾಂಗದ ಕುರಿತು ‘ಪೂರ್ವಾಗ್ರಹ’ವನ್ನು ಹುಟ್ಟುಹಾಕಲಾಗುತ್ತದೆ. ಅವರನ್ನು ಶತ್ರುಗಳಂತೆ ಕಾಣಲು ಪ್ರೇರೇಪಿಸುತ್ತದೆ.

ಇಷ್ಟಲ್ಲದೆ ‘ರಾಷ್ಟ್ರೀಯತೆ’ಯ ಉಗಮದೊಂದಿಗೆ ‘ನೈತಿಕ ಮಾನದಂಡಗಳು’ ವಿಕಸನಗೊಂಡಿವೆ. ಅಂದರೆ ‘ರಾಷ್ಟ್ರೀಯವಾದ ನೈತಿಕತೆ’ ಉದಯವಾಗಿದೆ. ಇದರ ಬಗ್ಗೆ ಅನ್ವೇಷಿಸಲು ಮುಂದಾದರೆ 1798ರ ಫ್ರೆಂಚ್ ಕ್ರಾಂತಿಗೂ ‘ರಾಷ್ಟ್ರೀಯತೆ’ಯೇ ಕಾರಣವಾಗಿರುವುದು ಕಂಡುಬರುತ್ತದೆ. ಇದು ಫ್ರೆಂಚರ ಭಾವನೆಗಳನ್ನು ಉದ್ದೀಪಿಸಿತ್ತು. ಜೊತೆಗೆ ಯುರೋಪ್‌ನ ಉಳಿದ ಭಾಗಗಳನ್ನು ಮುಕ್ತಗೊಳಿಸುವ ಉದ್ದೇಶವನ್ನು ಹೊಂದಿತ್ತು. ಇದರೊಂದಿಗೆ ಬೊನಾಪಾರ್ಟೆ ನೆಪೋಲಿಯನ್‌ನ ಸೈನ್ಯ ಆಮೂಲಾಗ್ರವಾದ ‘ಉದಾರವಾದ’ವನ್ನು ಹರಡಿತು. ಹೀಗೆ ‘ರಾಷ್ಟ್ರೀಯತೆ’ ಎಂಬುದು ಸದ್ದಿಲ್ಲದೆ ವ್ಯಾಪಕವಾಗಿ ಹರಡಿಕೊಂಡಿತು. 1850ರ ಹೊತ್ತಿಗೆ, ಯುರೋಪಿನ ಚಿಂತಕರು ಜರ್ಮನಿ ಮತ್ತು ಇಟಲಿಯಲ್ಲಿ ರಾಷ್ಟ್ರವನ್ನು ‘ಅಂತಿಮ ಮಾನವೀಯ ಮೌಲ್ಯ’ವೆಂದು ವ್ಯಾಖ್ಯಾನಿಸಿದರು.

ಅನ್ಯರಿಂದ ಆಳಿಸಿಕೊಳ್ಳಬೇಡಿ ಎಂಬುದನ್ನು ‘ರಾಷ್ಟ್ರೀಯತೆ’ ಹೇಳುತ್ತದೆ. ಇದರಿಂದಾಗಿ ಪ್ಯಾಲಸ್ತೇನಿಯರು, ಸರ್ಬಿಯನ್ನರು, ಲುಥನಿಯನ್ನರು ರಷ್ಯನ್ನರಿಂದ ಆಳಿಸಿಕೊಳ್ಳಲು ಒಪ್ಪಿರಲಿಲ್ಲ. ಹಾಗೆಯೇ ಕೆನಡಾದಿಂದ ಕ್ವಿಬೆಕೋಯಿನರು, ಸ್ಪೇನ್‌ನಿಂದ ಬಾಸ್ಕ್‌ಗಳು, ಚೀನಾದಿಂದ ಟಿಬೆಟಿಯನ್ನರು ಬೇರ್ಪಟ್ಟರು. ಬಹುಶಃ ಇದೇ ಮಾದರಿಯಲ್ಲಿ ಕೊಡಗಿನವರು ಪ್ರತ್ಯೇಕ ರಾಜ್ಯದ ಕೂಗನ್ನು ಎಬ್ಬಿಸುತ್ತಿರುತ್ತಾರೆ. ಉತ್ತರ ಕರ್ನಾಟಕ ಕೂಡ ಪ್ರತ್ಯೇಕ ರಾಜ್ಯವಾಗಬೇಕೆಂದು ಮಾಜಿ ಸಚಿವ ಉಮೇಶ್ ಕತ್ತಿ ಅವರು ಬಯಸಿದ್ದರು. ಮುಂದೆ ಇನ್ನೆಂತಹ ಬಗೆಯ ‘ಕೂಗು’ ಏಳಬಹುದೆಂದು ಊಹಿಸುವುದು ಕಷ್ಟಕರ.

ರಾಷ್ಟ್ರೀಯತೆ ಸ್ವಾತಂತ್ರ್ಯ ಸಂಗ್ರಾಮಕ್ಕೂ ಕಾರಣವಾಗಿದೆ, ಪ್ರತ್ಯೇಕತೆಯ ಕೂಗಿಗೂ ಅತ್ತು ಅತಿರೇಕಕ್ಕೆ ಹೋಗಿ ಕೆಲವು ಅಲ್ಪಸಂಖ್ಯಾತ ಜನಾಂಗಗಳನ್ನು ದ್ವೇಷಿಸುವಂತೆ ಮಾಡುವುದಕ್ಕೂ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಂತೂ ಇದು ಹುಸಿ ರಾಷ್ಟ್ರೀಯತೆಯೆಂದೇ ಜನಪ್ರಿಯವಾಗಿ ಈ ದೇಶಕ್ಕೆ ಅಪಾಯವನ್ನು ತಂದೊಡ್ಡುತ್ತಿದೆ.

‘ಮಾನವೀಯತೆ’ಯ ವಿರುದ್ಧವೂ ಜನರನ್ನು ಒಗ್ಗೂಡಿಸುವ ಶಕ್ತಿ ‘ರಾಷ್ಟ್ರೀಯತೆ’ಗೆ ಇದೆ. ಹಿಟ್ಲರನು ‘ಸಮಾಜವಾದ’ವನ್ನು ಪ್ರತಿಪಾದಿಸಿದ್ದು ನಿಜ. ಆದರೆ, ಅವನ ನಿಜವಾದ ಗುರಿ ‘ಯುದ್ಧ’ವಾಗಿತ್ತು. ‘ಯುದ್ಧ’ ನಾಯಕನನ್ನು ಸೃಷ್ಟಿಸುತ್ತದೆ ಎಂದು ಬಲವಾಗಿ ನಂಬಿದ್ದ. ಅಲ್ಪಸಂಖ್ಯಾತ ಜನಸಮುದಾಯವಾದ ಯಹೂದಿಗಳನ್ನು ದ್ವೇಷಿಸಲು ಕರೆಕೊಟ್ಟ. ಇದು ಇಚ್ಛಾಶಕ್ತಿಯೇ?

ರಾಷ್ಟ್ರೀಯತೆ ಮನುಷ್ಯರನ್ನು ಮುನ್ನಡೆಸುವ ಶಕ್ತಿಯೇ? ಜನರ ಪ್ರೇರಕ ಶಕ್ತಿಯೇ? ಅಥವಾ ಆರಾಧಿಸಿದರೆ ಆನಂದ ಲಭಿಸುತ್ತದೆಯೇ? ರಾಷ್ಟ್ರೀಯತೆಯನ್ನು ಪ್ರತಿಪಾದಿಸಲಾಗುವ ಸಂದರ್ಭ ಮತ್ತು ಅದರ ಹಿಂದಿರುವ ಮನೋವಿಜ್ಞಾನಿಕ ಸಮಾಜಶಾಸ್ತ್ರವನ್ನು ಅರ್ಥೈಸಿಕೊಂಡು, ‘ರಾಷ್ಟ್ರೀಯತೆ’ಯನ್ನು ವಿಮರ್ಶಾತ್ಮಕ ಮಸೂರದಿಂದ ಕಾಣಬೇಕಾಗಿರುವುದು ಮುಖ್ಯ. ‘ರಾಷ್ಟ್ರೀಯತೆ’ಯ ಕಾರಣದಿಂದಾಗಿಯೇ ಭಾರತ ವಿಭಜನೆಗೊಂಡಿತ್ತೆಂಬುದನ್ನೂ ಮರೆಯುವಂತಿಲ್ಲ.

ಇಂದಿಗೂ ನಮ್ಮ ದೇಶದಲ್ಲಿ ಕೆಲವು ಜಾತಿಯ ಜನ ಸ್ಥಳೀಯವಾಗಿ ತಮ್ಮ ಸ್ವಂತ ವಾಹನದಲ್ಲಿ ಓಡಾಡುವಂತಿಲ್ಲ. ಮೃತ ದೇಹವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ತೆಗೆದು ಹೋಗುವಂತಿಲ್ಲ. ಮದುವೆ ಮೆರವಣಿಗೆಯಲ್ಲಿ ಕುದುರೆ ಇರಲಿ, ಮಂಗಳವಾದ್ಯದೊಂದಿಗೂ ಊರಿನ ಮುಖ್ಯ ಬೀದಿಗಳಲ್ಲಿ ತೆರಳುವಂತಿಲ್ಲ. ಹೀಗಿರುವಾಗ ‘ಸ್ವಾತಂತ್ರ್ಯ’ ಎಂಬುದು ಜನರಿಗೆ ಸಿಕ್ಕಿದೆಯೇ? ಖಂಡಿತವಾಗಿಯೂ ಇಲ್ಲ. ಸ್ವಾತಂತ್ರ್ಯ ಸಿಕ್ಕಿರುವುದು ದೇಶಕ್ಕೆ ಮಾತ್ರ.

ಇವೆಲ್ಲವನ್ನು ಕಂಡನಂತರ, ನಾವಿಂದು ಪ್ರಜ್ಞಾವಂತ, ಜವಾಬ್ದಾರಿಯುತ ನಾಗರಿಕರಾಗಿ ‘ನಾವು ಮಾತ್ರ ಶ್ರೇಷ್ಠ’ರೆಂಬ ಪೂರ್ವಾಗ್ರಹ ಭಾವನೆಯಿಂದ ಹೊರಬರಬೇಕಿದೆ. ಅದನ್ನು ‘ಬೇರುಸಹಿತ’ ಕಿತ್ತುಹಾಕಬೇಕಿದೆ. ತಲೆಯಲ್ಲಿ ತುಂಬಿಕೊಂಡಿರುವ ‘ಮೌಢ್ಯತೆ’ಯನ್ನು ತೊಲಗಿಸಬೇಕಿದೆ. ಬೆಳಗಾಗೆದ್ದು ಜಾಡಮಾಲಿ, ಸವಿತಾ ಬಂಧುವಿನ ಮುಖ ಕಾಣಬಾರದೆಂಬ ಗೊಡ್ಡುಪುರಾಣಗಳಿಂದಲೂ ಹೊರಬರಬೇಕಿದೆ. ವಿಶ್ವಮಾನವರಾಗಲು ಕುವೆಂಪು ಅವರಂತಹ ಪ್ರಖ್ಯಾತ ಸಾಹಿತಿ-ಚಿಂತಕ ಕರೆಕೊಟ್ಟಿದ್ದರೂ, ‘ಅನಿಷ್ಠ’ ಒಂದಲ್ಲ ಒಂದು ರೀತಿಯಲ್ಲಿ ಉಳಿದುಕೊಂಡುಬಿಟ್ಟಿದೆ. ಇದರ ನಿವಾರಣೆಗೆ ‘ಶಿಕ್ಷಣ’ ಪ್ರಬಲವಾದ ಆಯುಧ ಎಂಬುದು ಸತ್ಯವಾದರೂ, ವಿಫಲಗೊಂಡಿರುವುದು ಕೂಡ ವಾಸ್ತವ.

ನಮ್ಮ ದೇಶವನ್ನು ಅಶೋಕ-ಅಕ್ಬರ್, ಪಲ್ಲವ-ಚೋಳ, ಹೊಯ್ಸಳ-ಮೈಸೂರು ಅರಸರು – ಹೀಗೆ ಹಲವರು ಆಳಿದ್ದಾರೆ. ಬುದ್ಧ-ಬಸವ, ಕನಕ-ಕುವೆಂಪು, ವಾಲ್ಮೀಕಿ-ನಾರಾಯಣಗುರು ತತ್ವ ಬಿತ್ತನೆ ಮಾಡಿದ್ದಾರೆ. ಹೀಗಾಗಿ ಎಲ್ಲಾ ಭಾರತೀಯರಿಗೂ ಕುದುರೆ ಏರಲು, ಸರಿಸಮಾನರಾಗಿ ಕೂರಲು, ಉಡುಗೆ ತೊಡಲು, ಶುದ್ಧ ನೀರು ಕುಡಿಯಲು ‘ಸಮಾನಹಕ್ಕು’, ಘನತೆಯ ಬದುಕು ನಡೆಸಲು ಅವಕಾಶ ಬೇಕಿದೆ. ಹಾಗಾದಾಗ ಮಾತ್ರ ವಿಶ್ವ ನಾಗರಿಕತೆಗೆ ನಾವು ಸೇರುತ್ತೇವೆ.

ಡಾ. ಎಂ.ಎಸ್. ಮಣಿ

ಡಾ. ಎಂ.ಎಸ್. ಮಣಿ
ಸಾಮಾಜಿಕ ಮತ್ತು ಸಂಶೋಧನಾತ್ಮಕ ಲೇಖನಗಳನ್ನು ಬರೆಯುವ ಡಾ.ಎಂ.ಎಸ್.ಮಣಿ ಅವರು ಪತ್ರಕರ್ತರ ಸಂಘಟನೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ತಲ್ಲಣ, ಹರಿವು, ಒಡಲಾಗ್ನಿ, ಭಾವಭಿತ್ತಿ, ಮನುಭಾರತ ಪುಸ್ತಕಗಳು ಪ್ರಕಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...