Homeಚಳವಳಿದೆಹಲಿ ಗಡಿಯಲ್ಲಿ ಹೋರಾಟದ ಹೊಸ ಭಾಷ್ಯ ಬರೆಯುತ್ತಿರುವ ದೇಶದ ರೈತರು: ಡಾ. ಪುರುಷೋತ್ತಮ ಬಿಳಿಮಲೆ

ದೆಹಲಿ ಗಡಿಯಲ್ಲಿ ಹೋರಾಟದ ಹೊಸ ಭಾಷ್ಯ ಬರೆಯುತ್ತಿರುವ ದೇಶದ ರೈತರು: ಡಾ. ಪುರುಷೋತ್ತಮ ಬಿಳಿಮಲೆ

- Advertisement -
- Advertisement -

ದೇಶದ ರಾಜಧಾನಿಯ ವಿವಿಧ ಗಡಿ ಭಾಗಗಳಲ್ಲಿ ಲಕ್ಷಾಂತರ ರೈತರು ಚಳವಳಿ ನಡೆಸುತ್ತಿದ್ದಾಗ, ಅದರ ಬಗ್ಗೆ ಪ್ರಾಥಮಿಕ ತಿಳಿವಳಿಕೆಯನ್ನಾದರೂ ಹೊಂದಿರಬೇಕಾದ್ದು ನಮ್ಮ ಕರ್ತವ್ಯ ಎಂಬ ಅರಿವಿನಲ್ಲಿ ಈ ಮುಂದಿನ ಟಿಪ್ಪಣಿಯನ್ನು ಸಿದ್ಧಪಡಿಸಲಾಗಿದೆ.

ಪಾಶ್ಚಾತ್ಯ ದೇಶಗಳಲ್ಲಿ ಅಲ್ಲಿನ ಕೃಷಿಯು ಸಾಧಿಸಿದ ಪ್ರಗತಿಯನ್ನು ನಮ್ಮ ದೇಶದ ಸಾಂಪ್ರದಾಯಕ, ಮಳೆ ಆಧಾರಿತ ಕೃಷಿ ಪದ್ಧತಿಯೊಡನೆ ಹೋಲಿಸಿ ನೋಡಿದಾಗ, ನಮ್ಮ ಕೃಷಿ ಪದ್ಧತಿಯಲ್ಲಿ ಸುಧಾರಣೆ ಅಗತ್ಯ ಎಂಬುದರಲ್ಲಿ ನನಗೆ ಯಾವ ಅನುಮಾನವೂ ಇಲ್ಲ. ಸರಕಾರವೇ ನೀಡಿದ ಅಂಕಿಅಂಶಗಳನ್ನು ಪರಿಶೀಲಿಸಿದರೆ, 1995ರಿಂದ 2019ರ ನಡುವೆ ಒಟ್ಟು 296438 ರೈತರು ನಮ್ಮ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 1990ರ ದಶಕದಲ್ಲಿ ಜಾರಿಗೆ ಬಂದ ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣ ಪ್ರಕ್ರಿಯೆಗಳು ಅನ್ನದಾತನ ಬದುಕಲ್ಲಿ ಅಂತಹ ಬದಲಾವಣೆಗಳೇನನ್ನೂ ತರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಕೃಷಿ ಸುಧಾರಣೆ ಅಗತ್ಯವೆಂಬ ವಾದದಲ್ಲಿ ಹುರುಳಿದೆ. ಆದರೆ ಹೇಗೆ? ಯಾವುದರ ಸುಧಾರಣೆ? ಎಂಬುದು ಸಮಸ್ಯೆ.

ಬಿಜೆಪಿಯು ಕೇಂದ್ರದಲ್ಲಿ ಅಧಿಕಾರ ಹಿಡಿದ ಮೇಲೆ ರೈತರಿಗಾಗಿ ಮಹತ್ವವಾದದ್ದೇನನ್ನೂ ಮಾಡಲಿಲ್ಲ. ಅದು ತನ್ನ ಪ್ರಮುಖ ಸಾಧನೆಗಳೆಂದು ಬಿಂಬಿಸಿಕೊಳ್ಳುತ್ತಿರುವುದರಲ್ಲಿ ರೈತ ಸಂಬಂಧಿಯಾದದ್ದು ಹೆಚ್ಚಿನವರ ಗಮನಕ್ಕೆ ಬಂದೂ ಇಲ್ಲ. ಆದರೆ ರೈತರಿಗೆ ಇದರ ಸಮಸ್ಯೆ ನೇರವಾಗಿ ತಟ್ಟಿತ್ತು. ಚಳವಳಿನಿರತ ರೈತರು ನೀಡುವ ಅಂಕಿ ಅಂಶಗಳ ಪ್ರಕಾರ 2014ರಿಂದ ರೈತ ಹೋರಾಟಗಳು ಶೇ.700ರಷ್ಟು ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಸರಕಾರವು ತರಾತುರಿಯಿಂದ ಹೊಸ ರೈತ ಕಾಯ್ದೆಗಳನ್ನು ಸುಗ್ರೀವಾಜ್ಞೆಯ ಮೂಲಕ ತಂದಿದೆ ಎಂದು ನಾವು ಸಮಾಧಾನ ಪಟ್ಟುಕೊಳ್ಳಬಹುದು. 2020ರ ಸೆಪ್ಟಂಬರ್ ತಿಂಗಳ 20ರಂದು ಜಾರಿಗೆ ತಂದ ಈ ಮೂರು ಹೊಸ ಕಾಯ್ದೆಗಳನ್ನು ಸಂಕ್ಷಿಪ್ತವಾಗಿ ಈ ಕೆಳಗಿನಂತೆ ವಿವರಿಸಬಹುದು:

1. “ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಸುಗ್ರೀವಾಜ್ಞೆ 2020”: ಇದರ ಪ್ರಕಾರ, ಎಪಿಎಂಸಿ-ನಿಯಂತ್ರಿತ ಮಂಡಿಗಳನ್ನು ಹೊರತುಪಡಿಸಿ ಬೇರೆ ಸ್ಥಳಗಳಲ್ಲಿಯೂ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತದೆ. ಮೇಲ್ನೋಟಕ್ಕೆ ಇದು ಮುಕ್ತ ವ್ಯವಸ್ಥೆಯಂತೆ ಕಂಡರೂ ನಿಧಾನವಾಗಿ ಅದು ಎಪಿಎಂಸಿಗಳನ್ನು ಸ್ಥಗಿತಗೊಳಿಸುತ್ತದೆ. ಹೀಗೆ ಮಾಡುವುದರ ಮೂಲಕ ಸರಕಾರವು ಈಗ ನೀಡುತ್ತಿರುವ ಅನೇಕ ಬಗೆಯ ಸಬ್ಸಿಡಿಗಳು ನಿಧಾನವಾಗಿ ಕೊನೆಗೊಳ್ಳುತ್ತವೆ. ಮೀಸಲಾತಿಯನ್ನೇ ಸಂಶಯದಿಂದ ಕಾಣುವವರು ಅಂತಿಮವಾಗಿ ಎಲ್ಲ ಬಗೆಯ ಸಬ್ಸಿಡಿಗಳಿಗೂ ವಿರೋಧವಾಗಿರುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಯಾರಿಗೂ ಕಷ್ಟ ಆಗಬಾರದು.

2. “ಅಗತ್ಯ ಸರಕುಗಳ (ತಿದ್ದುಪಡಿ) ಸುಗ್ರೀವಾಜ್ಞೆ, 2020”: ಇದನ್ನು“ಕೃಷಿ ಉದ್ಯಮದ ಮೂಲಕ ಆಹಾರ ಸಂಗ್ರಹಣೆ ಸ್ವಾತಂತ್ರ್ಯ” ಸುಗ್ರೀವಾಜ್ಞೆ ಎಂದು ಭಾವಿಸಬಹುದು. ಇದರಲ್ಲಿ ಆರ್ಥಿಕ ಏಜೆಂಟರಿಗೆ ಯಾವುದೇ ಕಾನೂನು ಕ್ರಮದ ಭಯವಿಲ್ಲದೆ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ಶೇಖರಿಸಿಡುವ ಮುಕ್ತ ಅವಕಾಶ ನೀಡಲಾಗಿದೆ. ಸರಕಾರ ಈ ನಿಟ್ಟಿನಲ್ಲಿ ಈಗಾಗಲೇ ಬಹಳ ಮುಂದೆ ಹೋಗಿಬಿಟ್ಟಿದೆ. ಅನ್ಯಾಯವಾದರೆ, ನ್ಯಾಯಾಲಯಕ್ಕೆ ಹೋಗುವಂತಿಲ್ಲ. ದಾಸ್ತಾನುಗಾರರು ಕೃತಕ ಅಭಾವ ಸೃಷ್ಟಿಸಿ, ಬೆಲೆ ಏರಿಕೆ ಮಾಡಿದರೆ ಯಾರಿಗೂ ಏನೂ ಮಾಡಲಾಗದು. ದೆಹಲಿಯಲ್ಲಿ ಕೃತಕ ಅಭಾವ ಸೃಷ್ಟಿಸುವ ದಾಸ್ತಾನುಗಾರರು ನೀರುಳ್ಳಿಗೆ ಕಿಲೋ ಒಂದಕ್ಕೆ 300 ರೂಪಾಯಿ ವಸೂಲಿ ಮಾಡುವಾಗ ಯಾವ ಸರಕಾರಗಳು ಯಾರ ಸಹಾಯಕ್ಕೂ ಬರಲಿಲ್ಲ. ನಾಳೆ ಅಕ್ಕಿ, ಗೋಧಿ, ಎಣ್ಣೆ, ಬೇಳೆಗಳಿಗೆ ಹೀಗಾಗುವ ಸಾಧ್ಯತೆಗಳು ನಮ್ಮ ಕಣ್ಣ ಮುಂದೆಯೇ ನಿಂತಿವೆ.

3. “ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆಗಳ ಖಾತರಿ ಒಪ್ಪಂದದ ಭರವಸೆ ಮತ್ತು ಕೃಷಿ ಸೇವೆಗಳ ಸುಗ್ರೀವಾಜ್ಞೆ, 2020”: ಇದನ್ನು ಗುತ್ತಿಗೆ ಕೃಷಿ ಸುಗ್ರೀವಾಜ್ಞೆಯಾಗಿ ಪರಿಗಣಿಸಲಾಗಿದೆ. ಇದು ಕಾರ್ಪೊರೇಟ್ ಕಂಪೆನಿಗಳು ಕೃಷಿಗೆ ಪ್ರವೇಶಿಸಲು ಒಂದು ಚೌಕಟ್ಟನ್ನು ಒದಗಿಸಿಕೊಡುತ್ತದೆ. ಈ ಪ್ರಕಾರ, ಆರೋಗ್ಯಕರ ಸಂಭಾವನೆಗೆ ಪ್ರತಿಯಾಗಿ ಕಂಪನಿಯು ಬಯಸಿದ್ದನ್ನು ಉತ್ಪಾದಿಸಲು ಕಂಪನಿಯೊಂದಿಗೆ ರೈತರು ಲಿಖಿತ ಒಪ್ಪಂದಕ್ಕೆ ಸಹಿ ಹಾಕಲು ಈ ಮಸೂದೆಯಲ್ಲಿ ಅವಕಾಶ ನೀಡಲಾಗಿದೆ. ಇದರಿಂದ ತಾವು ಹೇಗೆ ಶೋಷಣೆಗೆ ಒಳಗಾದೆವು ಎಂಬುದನ್ನು ಪಂಜಾಬಿನ ರೈತರು ತಮ್ಮ ಅನುಭವದ ಮೂಲಕ ವಿವರಿಸುತ್ತಾರೆ. ತಮ್ಮದೇ ಜಮೀನಿಗೆ ತಾವೇ ಕೂಲಿಯಾಳುಗಳಾಗಿಬಿಡುವ ಪರಿಸ್ಥಿತಿಯನ್ನು ಇದು ನಿರ್ಮಿಸುತ್ತದೆ. ಇದುವೇ ನವವಸಾಹತುಶಾಹಿ ವ್ಯವಸ್ಥೆ. ಇಲ್ಲಿ ಶೋಷಕನು ಅಥವಾ ವೈರಿಯು ನಮ್ಮ ಮೂಲಕವೇ ಪ್ರವೇಶ ಮಾಡುತ್ತಾನೆ. ಹೀಗಾಗಿ ಇದರ ವಿರುದ್ಧದ ಹೋರಾಟ ಬಹಳ ಸಂಕೀರ್ಣವಾಗಿರುತ್ತದೆ. ಅದರ ತೀವ್ರತೆ ಎಷ್ಟಿರುತ್ತದೆ ಎಂದರೆ ಹೋರಾಟಗಳನ್ನು ನಮ್ಮ ವಿರುದ್ಧ ನಾವೇ ಮಾಡಿಕೊಂಡಂತೆ ಇರುತ್ತದೆ.

ಈ ಮೂರೂ ಕಾಯ್ದೆಗಳನ್ನು ರೈತರ ಜೊತೆ ಚರ್ಚಿಸದೆ ಜಾರಿಗೊಳಿಸಿದ ಸರಕಾರವು ಈ ಮೂಲಕ ಕೃಷಿ ಮಾರುಕಟ್ಟೆಗಳನ್ನು ಉದಾರೀಕರಣಗೊಳಿಸಿ ರೈತರಿಗೆ ಹೆಚ್ಚು ಲಾಭವಾಗುವಂತೆ ಮಾಡುತ್ತೇವೆ ಎಂದು ಹೇಳುತ್ತಿದೆ. ಕೃಷಿ ಮಾರುಕಟ್ಟೆ ಉದಾರೀಕರಣದಿಂದ ವ್ಯವಸ್ಥೆಯು ಹೆಚ್ಚು ಪರಿಣಾಮಕಾರಿಯಾಗುತ್ತದೆ ಮತ್ತು ಸಂಬಂಧಪಟ್ಟ ಎಲ್ಲರಿಗೂ, ವಿಶೇಷವಾಗಿ ರೈತರಿಗೆ ತಮ್ಮ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗಲಿದೆ, ಅಲ್ಲದೆ ಕೃಷಿ ಕ್ಷೇತ್ರವನ್ನು ಈಗಿರುವುದಕ್ಕಿಂತಲೂ ಹೆಚ್ಚು ಆದಾಯ ಪಡೆಯುವ ಉದ್ಯಮವನ್ನಾಗಿ ಮಾಡುವುದು ಕೂಡ ಸಾಧ್ಯ ಎಂಬ ವಾದವನ್ನು ಜನರ ಮುಂದಿಡುತ್ತಿದೆ.

ಇದನ್ನು ಒಪ್ಪದ ರೈತರು, ಕಾರ್ಪೊರೇಟ್ ಹಿಡಿತಕ್ಕೆ ಕೃಷಿ ಕ್ಷೇತ್ರ ಬರುವುದನ್ನು ಒಪ್ಪದೆ, ಒಂದು ವೇಳೆ ಬಂದರೆ, ಅದು ಬೆಂಬಲ ಬೆಲೆ, ಗೊಬ್ಬರ ಸಬ್ಸಿಡಿ, ಬೆಳೆ ಪರಿಹಾರ, ಇತ್ಯಾದಿಗಳೆಲ್ಲ ಹಂತಹಂತವಾಗಿ ರದ್ದಾಗುವ ಅಪಾಯದ ಬಗ್ಗೆ ಎಚ್ಚರಿಸುತ್ತಾರೆ. ಜೊತೆಗೆ ಅಗತ್ಯ ವಸ್ತು ಬೆಲೆ ನಿಯಂತ್ರಣ ಇಲ್ಲವಾಗುವುದರಿಂದ ರೈತರೂ ಸೇರಿದಂತೆ ಎಲ್ಲರೂ ವಿಪರೀತ ಬೆಲೆ ಏರಿಕೆಗೆ ಬಲಿಯಾಗಬೇಕಾಗುತ್ತದೆ. ಇದರಿಂದ ಸಾವಿರಾರು ಸಮಸ್ಯೆಗಳು ಹೊಸದಾಗಿ ಉದ್ಭವಿಸಲಿವೆ ಎಂದು ಹೇಳುತ್ತಿದ್ದಾರೆ.

ಸರಕಾರದ ಮತ್ತು ರೈತರ ವಾದಗಳಿಗೆ ಕಿವಿಗೊಟ್ಟ ಮೇಲೆಯೂ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ:

1. ಜನರು ಕೊರೊನಾ ಭಯದಲ್ಲಿದ್ದಾಗ ಸರಕಾರ ಸುದೀರ್ಘ ಪರಿಣಾಮ ಬೀರುವ ಈ ಕಾಯಿದೆಗಳನ್ನು ವ್ಯಾಪಕವಾಗಿ ಚರ್ಚಿಸದೆ, ಸುಗ್ರೀವಾಜ್ಞೆಯ ಮೂಲಕ ತರುವ ಅಗತ್ಯವೇನಿತ್ತು?

2. ಈ ಕಾಯಿದೆ ಅಧಿಕೃತವಾಗಿ ಜಾರಿಯಾಗುವ ಮುನ್ನವೇ ಸರಕಾರವು ಬಹುರಾಷ್ಟ್ರೀಯ ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆಯೇ?

3. ರಾಜ್ಯ ಸರಕಾರಗಳೂ ಸುಗ್ರೀವಾಜ್ಞೆಗಳನ್ನು ಹೊರಡಿಸಲು ಕೇಂದ್ರವು ಪತ್ರಗಳನ್ನು ಬರೆದದ್ದು ಯಾಕೆ?

4. ಮಸೂದೆಯನ್ನು ರಾಜ್ಯ ಸಭೆಯಲ್ಲಿ ಧ್ವನಿಮತದಿಂದ ಅಂಗೀಕರಿಸಿದ್ದು ಯಾಕೆ? ಯಾಕೆ ಮತಕ್ಕೆ ಹಾಕಲಿಲ್ಲ?

5. ಸಂವಿಧಾನದ ಪ್ರಕಾರ ಕೃಷಿಯು ರಾಜ್ಯ ಸರಕಾರದ ಪಟ್ಟಿಯಲ್ಲಿ ಬರುತ್ತದೆ. ಅದರ ಬಗ್ಗೆ ಕೇಂದ್ರ ಸರಕಾರವು ಈ ಬಗೆಯ ತೀರ್ಮಾನ ತೆಗೆದುಕೊಂಡದ್ದು ಸಂವಿಧಾನಬಾಹಿರವಲ್ಲವೇ?

ಇವೆಲ್ಲವನ್ನೂ ಗಮನಿಸುತ್ತಿದ್ದ ಪಂಜಾಬ್, ಹರ್ಯಾಣ ಮತ್ತು ರಾಜಸ್ಥಾನದ ರೈತರು ಈ ಮಸೂದೆಯನ್ನು ಹಿಂದೆಗೆದುಕೊಳ್ಳುವಂತೆ ಪ್ರತಿಭಟನೆ ಆರಂಭಿಸಿದರು. ಕಾಯ್ದೆ ಜಾರಿಗೆ ಬಂದ ನಾಲ್ಕನೇ ದಿವಸವೇ ಪಂಜಾಬಿನ ರೈತರು ಸಪ್ಟಂಬರ 24ರಂದು ರೈಲ್ ರೋಖೋ ಚಳವಳಿ ನಡೆಸಿದರು. ಆನಂತರ ದೇಶದ ಸುಮಾರು 500 ರೈತ ಸಂಘಟನೆಗಳನ್ನು ಸೇರಿಸಿ ಅಕ್ಟೋಬರ್ 27ರಂದು ದೆಹಲಿಯಲ್ಲಿ ಸಭೆ ಸೇರಿದರು. ಆಗ ಎಚ್ಚೆತ್ತ ಸರಕಾರ ನವಂಬರ್ 13ರಂದು ರೈತರ ಸಭೆಯನ್ನು ಕರೆದರೂ ಅದು ವಿಫಲವಾಯಿತು. ಮುಂದೆ ರೈತರು ನವಂಬರ 26ರಂದು ಡೆಲ್ಲಿ ಚಲೋ ಚಳವಳಿಗೆ ಕರೆಕೊಟ್ಟರು. ಅದರ ಪರಿಣಾಮವಾಗಿ ದೆಹಲಿ ಗಡಿ ಭಾಗದಲ್ಲಿ ಇವತ್ತು ಸುಮಾರು ಎರಡೂವರೆ ಲಕ್ಷ ಜನರು ಸೇರಿದ್ದಾರೆ ಮತ್ತು ಸಾವಿರಾರು ಟ್ರ್ಯಾಕ್ಟರುಗಳು ಬೀಡುಬಿಟ್ಟಿವೆ.

ಸರಕಾರವು ಮೊದಲ ಹಂತದಲ್ಲಿ ರೈತರನ್ನು ಲಘುವಾಗಿ ಪರಿಗಣಿಸಿತು. ದೆಹಲಿಗೆ ಆಗಮಿಸುತ್ತಿದ್ದ ರೈತರು ಬುರಾರಿ ಎಂಬಲ್ಲಿ ಜಮಾಯಿಸಬಹುದೆಂದು ಹೇಳಿತು. ಯಾವುದೇ ವ್ಯವಸ್ಥೆ ಇಲ್ಲದ ಬುರಾರಿಯನ್ನು ರೈತರು ತಿರಸ್ಕರಿಸಿದರು. ಬಹುಶಃ ಇದು ರೈತರಿಗೆ ಸಿಕ್ಕ ಮೊದಲ ಜಯ.

ಆಮೇಲೆ ಪೋಲೀಸರು ರೈತರನ್ನು ತಡೆದರು. ರಸ್ತೆಗಳನ್ನು ಅಗೆದು ಅವರು ಒಳ ಪ್ರವೇಶ ಮಾಡದಂತೆ ಮಾಡಿದರು. ಯಾವುದಕ್ಕೂ ಸಹನೆ ಕಳಕೊಳ್ಳದ ಚಳವಳಿಗಾರರು ದೆಹಲಿಯ ಗಡಿ ಭಾಗಗಳಾದ ಸಿಂಗು, ಟಿಕ್ರಿ, ಅವುಚಂದಿ, ಲಾಂಪುರ್, ಮಣಿಯಾರಿ, ಮಂಗೇಶ್ ಮತ್ತು ಝರೋಡಾದಲ್ಲಿ ಠಿಕಾಣಿ ಹೂಡಿದರು.

ಈ ಹೊತ್ತಿಗೆ ರೈತರ ಬಗ್ಗೆ ಅಪಪ್ರಚಾರಗಳನ್ನು ವ್ಯಾಪಕವಾಗಿ ನಡೆಸಲಾಯಿತು. ಈ ಹಂತದಲ್ಲಿ ಜೆಎನ್‌ಯು ಮತ್ತು ಜಾಮಿಯಾ ಮಿಲಿಯಾದ ವಿರುದ್ಧ ಬಳಸಲಾದ ದೇಶದ್ರೋಹಿಗಳು, ಭಯೋತ್ಪಾದಕರು, ಅರ್ಬನ್ ನಕ್ಸಲರು, ವಿರೋಧ ಪಕ್ಷಗಳ ಏಜಂಟರು, ಪಾಕಿಸ್ತಾನಿ ಬೆಂಬಲಿಗರು, ಕಮ್ಯುನಿಸ್ಟ್ಟರು ಮೊದಲಾದ ಪದಗಳನ್ನು ಹರಿಬಿಡಲಾಯಿತು. ಕೋಮುವಾದಿ ಬಣ್ಣ ಬಳಿಯಲೂ ಪ್ರಯತ್ನಿಸಲಾಯಿತು. ಚಳವಳಿ ನಿರತರು ಪಂಜಾಬಿಗಳಾದ್ದರಿಂದ ಖಾಲಿಸ್ಥಾನಿಗಳೆಂದೂ ಕರೆಯಲಾಯಿತು. ಆದರೆ ಇವ್ಯಾವೂ ರೈತರ ಮೇಲೆ ಪರಿಣಾಮ ಬೀರಲಿಲ್ಲ. ರೈತರು ಗಟ್ಟಿಯಾಗಿ ನಿಂತಾಗ ಈ ಅಪಪ್ರಚಾರಗಳೆಲ್ಲ ತಾವೇ ತಣ್ಣಗಾಗಿ ಮೂಲೆ ಸೇರಿದವು. ಇದು ರೈತರಿಗೆ ಸಿಕ್ಕ ಎರಡನೇ ಜಯ.

ಹೆಚ್ಚಿನ ಮಾಧ್ಯಮಗಳೆಲ್ಲ ಆಳುವ ವರ್ಗದ ಪರವಾಗಿರುವುದನ್ನು ಮನಗಂಡ ರೈತರು ಪರ್ಯಾಯ ಮಾಧ್ಯಮಗಳನ್ನು ಸೃಷ್ಟಿಸಿಕೊಂಡು ಅವುಗಳ ಮೂಲಕ ತಮ್ಮ ನಿಲುವುಗಳನ್ನು ವಿಶ್ವಕ್ಕೆ ತಿಳಿಯಪಡಿಸಿದರು. ಪಂಜಾಬಿನ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸುತ್ತಿರುವ ಯುವಕರು ಫೇಸ್‌ಬುಕ್, ಟ್ವಿಟರ್, ವಾಟ್ಸಪ್‌ಗಳಲ್ಲಿ ಹತ್ತಾರು ಹ್ಯಾಶ್‌ಟ್ಯಾಗ್‌ಗಳ ಮೂಲಕ ಜನರನ್ನು ತಲುಪುವಲ್ಲಿ ಯಶಸ್ವಿಯಾದರು. ಇದರ ಪರಿಣಾಮವಾಗಿ ಇವತ್ತು ರೈತ ಹೋರಾಟದ ಬಗ್ಗೆ ಜಗತ್ತಿಗೇ ತಿಳಿದಿದೆ.

ದೆಹಲಿ ಗಡಿ ಭಾಗದಲ್ಲಿರುವ ರೈತರು ರಸ್ತೆಗಳನ್ನೇ ತಮ್ಮ ನೆಲೆಯಾಗಿಸಿಕೊಂಡಿದ್ದಾರೆ. ಅಲ್ಲಿ ಎಲ್ಲರಿಗೂ ಉಚಿತ ಊಟ ದೊರೆಯುತ್ತದೆ. ಉಪನ್ಯಾಸಗಳು ಕೇಳಲು ದೊರೆಯುತ್ತವೆ. ಗ್ರಂಥಾಲಯವಿದೆ. ವೈದ್ಯಕೀಯ ವ್ಯವಸ್ಥೆ, ಚಿತ್ರಕಲಾ ಶಿಬಿರಗಳು, ಪೋಸ್ಟರ್‌ಗಳ ನಿರ್ಮಾಣ ನಿರಂತವಾಗಿ ನಡೆಯುತ್ತಿದೆ. ಮುಂದಿನ ಆರು ತಿಂಗಳುಗಳವರೆಗೆ ಅಲ್ಲಿರಲು ಅವರೆಲ್ಲ ಮಾನಸಿಕವಾಗಿ ಸಿದ್ಧರಾಗಿದ್ದಾರೆ.

ದೆಹಲಿ
PC: yahoo

ಸದ್ಯ ರೈತರು 10 ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದಾರೆ. ಅವುಗಳಲ್ಲಿ ಮುಖ್ಯವಾದುವುಗಳೆಂದರೆ:

1. ಕಾನೂನು ಹಿಂದೆಗೆಯಲು ವಿಸೇಷ ಪಾರ್ಲಿಮೆಂಟ್ ಸೆಷನ್ ಕರೆಯುವುದು
2. ಎಂಎಸ್‌ಪಿ ಕಾನೂನು ಬದ್ಧಗೊಳಿಸುವುದು
3. ಸ್ವಾಮಿನಾಥನ್ ವರದಿ ಜಾರಿ ಮಾಡುವುದು
4. ಡೀಸೆಲ್ ಬೆಲೆಯಲ್ಲಿ 50% ರಿಯಾಯತಿ ಕೊಡುವುದು
5. ವಿದ್ಯುತ್ ಕಾಯ್ದೆಯ ರದ್ದತಿಯ ಮರುಪರಿಶೀಲನೆ
6. ರಾಜ್ಯದ ಅಧಿಕಾರಗಳನ್ನು ಮೊಟಕುಗೊಳಿಸದೆ ಇರುವುದು ಇತ್ಯಾದಿ

ಸದ್ಯಕ್ಕೆ ರೈತರ ಈ ಹೋರಾಟ ಬಹಳ ಮುಖ್ಯವಾಗಿದೆ ಏಕೆಂದರೆ, ಇದು

1. ಕೇಂದ್ರ ರಾಜ್ಯಗಳ ಸಂಬಂಧದ (ಫೆಡರಲ್ ರಚನೆ) ಪರಿಶೀಲನೆ ನಡೆಸಲು ಒತ್ತಾಯಿಸುತ್ತದೆ.
2. ಖಾಸಗೀಕರಣ ಮತ್ತು ನವ ವಸಾಹತುಶಾಹಿ ಶಕ್ತಿಗಳ ಆಕ್ರಮಣದ ವಿರುದ್ಧ ಧ್ವನಿ ಎತ್ತಿದೆ.
3. ಹೋರಾಟದ ಹೊಸ ತಂತ್ರಗಳ ಅನ್ವೇಷಣೆ ನಡೆಸಿದೆ.

 

ಡಾ. ಪುರುಷೋತ್ತಮ ಬಿಳಿಮಲೆ

ಪುರುಷೋತ್ತಮ ಬಿಳಿಮಲೆ
ಜನಪದ, ಯಕ್ಷಗಾನ ಮತ್ತು ಸಾಂಸ್ಕೃತಿಕ ಸಂಶೋಧನೆ ಮತ್ತು ಅಧ್ಯಯನಗಳಲ್ಲಿ ಡಾ. ಪುರುಷೋತ್ತಮ ಬಿಳಿಮಲೆ ಅವರದ್ದು ಚಿರಪರಿಚಿತ ಹೆಸರು. ಹಲವು ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ನಂತರ ಜೆಎನ್‌ಯುವಿನಲ್ಲಿ ಕನ್ನಡ ಪೀಠದ ಪ್ರಥಮ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ೨೦ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಬಿಳಿಮಲೆ, ಅವರ ’ಕಾಗೆ ಮುಟ್ಟಿದ ನೀರು’ ಆತ್ಮಕಥೆ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.


ಇದನ್ನೂ ಓದಿ: ರೈತರ ಹೋರಾಟದಲ್ಲಿ ರೈತರೊಂದಿಗೆ ನಿಂತ ವಾಷಿಂಗ್‌ ಮಷಿನ್‌ಗಳು..!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...