Homeಮುಖಪುಟ‘ರೈತರ ಆದಾಯ ಡಬಲ್ ಆಗಲಿಲ್ಲ. ಬದಲಿಗೆ ರೈತರ ಉತ್ಪಾದನಾ ವೆಚ್ಚ ಮಾತ್ರ ಡಬಲ್ ಆಗಿದೆ’

‘ರೈತರ ಆದಾಯ ಡಬಲ್ ಆಗಲಿಲ್ಲ. ಬದಲಿಗೆ ರೈತರ ಉತ್ಪಾದನಾ ವೆಚ್ಚ ಮಾತ್ರ ಡಬಲ್ ಆಗಿದೆ’

ಕೇಂದ್ರ ಸರ್ಕಾರ 18 ಬೆಳೆಗಳಿಗೆ ಎಂಎಸ್‍ಪಿ ಘೋಷಣೆ ಮಾಡಿದೆ. ಆದರೆ ಅದು ಜಾರಿಯಾಗುತ್ತಿಲ್ಲ. ಹಾಗಾಗಿ ಕೇವಲ ಬೆಲೆ ಘೋಷಣೆ ಮಾಡುವುದಷ್ಟೇ ಅಲ್ಲದೇ ಅದಕ್ಕಿಂತ ಕಡಿಮೆ ಬೆಲೆಗೆ ಯಾರು ಕೊಂಡುಕೊಳ್ಳಬಾರದು ಎಂದು ಕಾನೂನು ಮಾಡಬೇಕು.

- Advertisement -
- Advertisement -

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಮುಂದು ಮಾಡಿದ್ದ ಕೃಷಿ ಸಂಬಂಧಿ ಮೂರು ಮಸೂದೆಗಳ ವಿರುದ್ಧ ದೇಶದಾದ್ಯಂತ ಹಲವು ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಈ ಯಾವ ಪ್ರತಿಭಟನೆಗಳಿಗೂ ಸ್ಪಂದಿಸದೆ, ಸಂಸತ್ತಿನಲ್ಲಿ ಪ್ರಶ್ನೋತ್ತರಕ್ಕೂ ಅವಕಾಶ ನೀಡದೆ ಈ ಮೂರು ಮಸೂದೆಗಳಿಗೆ ಕೇಂದ್ರ ಸರ್ಕಾರ ಬಹುಮತದ ಅಂಗೀಕಾರ ಪಡೆದು ಕಾಯ್ದೆಗಳನ್ನಾಗಿಸಿತು. ಈ ಕಾಯ್ದೆಗಳು ರೈತರ ಹಿತಾಸಕ್ತಿಗೆ ಮಾಡುವ ಅನಾಹತಗಳನ್ನು ವಿರೋಧಿಸಿ ಹೋರಾಟಗಳು ಇನ್ನೂ ಮುಂದುವರೆಯುತ್ತಲೇ ಇವೆ.

ಕರ್ನಾಟಕದಲ್ಲಿಯು ಹಲವು ಸಂಘಟನೆಗಳು ಒಗ್ಗೂಡಿ ಒಂದು ವಾರಕ್ಕೂ ಹೆಚ್ಚು ಕಾಲ ಹೋರಾಟ ನಡೆಸಿದವು. ಕೇಂದ್ರ ಸರ್ಕಾರದ ಕಾಯ್ದೆಗಳಿಗೆ ಪೂರಕವಾದ ಹಲವು ಕಾಯ್ದೆಗಳು ವಿಧಾನಸಭೆಯಲ್ಲಿ ಮಂಜೂರಾದವು. ಸದ್ಯಕ್ಕೆ ವಿಧಾನ ಪರಿಷತ್ತಿನಲ್ಲಿ ಈ ಕಾಯ್ದೆಗಳನ್ನು ತಡೆಹಿಡಿಯಲಾಗಿದೆ.

ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ಹೋರಾಟಗಳನ್ನು ಕುರಿತು ಕರ್ನಾಟಕದ ರೈತಮುಖಂಡರಾದ ಬಡಗಲಪುರ ನಾಗೇಂದ್ರ ಮತ್ತು ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ತಮಿಳು ನಾಡಿನ ರೈತ ಮುಖಂಡರಾದ ಕಣ್ಣಯ್ಯನ್ ಸುಬ್ರಮಣಿಯನ್ ಅವರನ್ನು ನ್ಯಾಯಪಥ ಸಂದರ್ಶಿಸಿತು. ಮೂವರೂ ಮುಖಂಡರು ಈ ಕಾಯ್ದೆಗಳಿಂದ ಒದಗಲಿರುವ ಅಪಾಯಗಳನ್ನು ಹಾಗೂ ತಾವು ಮುಂದುವರೆಸಲಿರುವ ಹೋರಾಟದ ಸ್ವರೂಪವನ್ನು ಚರ್ಚಿಸಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರರವರ ಜೊತೆಗಿನ ಸಂದರ್ಶನದ ಸಾರ ಇಲ್ಲಿದೆ.

1. ಕೇಂದ್ರ ಸರ್ಕಾರವು ಇತ್ತೀಚೆಗಷ್ಟೇ ಜಾರಿ ಮಾಡಿದ ಮೂರು ಕಾಯ್ದೆಗಳ ಬಗ್ಗೆ ಮತ್ತು ರಾಜ್ಯದ ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಭೂಸುಧಾರಣ ತಿದ್ದುಪಡಿ ವಿರುದ್ಧ ಹೋರಾಟ ನಡೆಸಿದ್ದು ಏಕೆ?

ಈ ಮೂರು ಮಸೂದೆಗಳನ್ನು ಜೂನ್ 03ರಂದು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಜಾರಿಗೊಳಿಸಿತು. ಅದಕ್ಕೆ ಅನುಗುಣವಾಗಿ ರಾಜ್ಯಗಳು ಸಹ ಸುಗ್ರೀವಾಜ್ಞೆ ತಂದವು. ಇವುಗಳ ಜೊತೆಗೆ ವಿದ್ಯುತ್ ಖಾಸಗೀಕರಣ ನೀತಿಯನ್ನು ತರುತ್ತಿದ್ದಾರೆ. ಇವೆಲ್ಲವೂ ಒಂದಕ್ಕೊಂದು ಪೂರಕವಾಗಿದ್ದು, ಪತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಕೃಷಿಯನ್ನು ಕಾರ್ಪೋರೇಟಿಕರಣ ಮಾಡಲು ಹೊರಟಿರುವುದರ ಆರಂಭದ ಹೆಜ್ಜೆಗಳಿವು. ಅದರಲ್ಲಿಯೂ ಬಿಜೆಪಿ ಸರ್ಕಾರ ತನ್ನ ಅಧಿಕಾರ ದುರುಪಯೋಗ ಮಾಡಿಕೊಂಡು ಕೊರೊನಾ ಸಾಂಕ್ರಾಮಿಕ ಕಾಲದಲ್ಲಿ ರೈತ ಸಮುದಾಯವನ್ನು ಬಲಿಕೊಡಲು ಹೊರಟಿತು. ಹಾಗಾಗಿ ಹೋರಾಟ ಅನಿವಾರ್ಯವಾಯಿತು.

photo courtesy : Prajarajya tv

2. ಐಕ್ಯ ಹೋರಾಟದ ಬೇಡಿಕೆಗಳು ಒಂದು ಮಟ್ಟಕ್ಕೆ ಜನ ಸಾಮಾನ್ಯರಿಗೆ ತಲುಪಿದವಾದರೂ ಮೂರು ಕಾಯ್ದೆಗಳನ್ನು ತಂದ ಕೇಂದ್ರ ಸರ್ಕಾರವಾಗಲೀ ಅದಕ್ಕೆ ಪೂರಕ ಕಾಯ್ದೆಗಳನ್ನು ತಂದ ರಾಜ್ಯ ಸರ್ಕಾರವಾಗಲೀ ಇವುಗಳಿಂದ ವಿಚಲಿತವಾಗಲೇ ಇಲ್ಲವಲ್ಲಾ ಏಕೆ?

ಇದು ಹೇಳಿ ಕೇಳಿ ಫ್ಯಾಸಿಸ್ಟ್ ಸರ್ಕಾರ. ಅದು ಪ್ರಜಾತಂತ್ರ ವ್ಯವಸ್ಥೆಗೆ, ಸಂವಿಧಾನಕ್ಕೆ, ಸ್ವಾತಂತ್ರ್ಯ ಹೋರಾಟದ ಆದರ್ಶಗಳಿಗೆ ಕಿಂಚಿತ್ತೂ ಗೌರವ ಕೊಡುತ್ತಿಲ್ಲ. ಜನಹೋರಾಟಗಳು ಭುಗಿಲೇಳುತ್ತವೆ ಎಂದು ಗೊತ್ತಿದ್ದೆ ಅದು ಕೊರೊನಾ ಸಾಂಕ್ರಾಮಿಕ ಕಾಲದಲ್ಲಿ ಸುಗ್ರೀವಾಜ್ಞೆ ಹೊರಡಿಸಿದೆ. ಏಕೆಂದರೆ ಅವರು ಖಾಸಗಿಯವರಿಗೆ ಈ ಕಾಯ್ದೆಗಳನ್ನು ತರುವುದಾಗಿ ಮಾತುಕೊಟ್ಟುಬಿಟ್ಟಿದ್ದಾರೆ. ಆದರೆ ಸರ್ಕಾರಕ್ಕೆ ಎಷ್ಟೇ ಬಹುಮತವಿರಲಿ ಜನರು ಬೀದಿಗಿಳಿದರೆ ಅದು ಉಳಿಯಲು ಸಾಧ್ಯವಿಲ್ಲ. ಉದಾಹರಣೆಗೆ 2014-15ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದ ಕೂಡಲೇ ಭೂಸ್ವಾಧೀನ ಮಸೂದೆಗೆ ಸುಗ್ರೀವಾಜ್ಞೆ ತಂದು ಜಾರಿಗೊಳಿಸಲು ಮುಂದಾಗಿದ್ದರು. ಆದರೆ ದೇಶಾದ್ಯಂತ ರೈತರು ಬೀದಿಗಿಳಿದ್ದರಿಂದ ಅದನ್ನು ಅವರು ವಾಪಸ್ ಪಡೆಯಬೇಕಾಯಿತು. ಈಗ ಹೋರಾಟವನ್ನು ದಮನ ಮಾಡುತ್ತಿದೆ. ಹೋರಾಟಗಳ ಮೇಲೆ ಸುಳ್ಳು ಅಪಪ್ರಚಾರ ಮಾಡುತ್ತಿದೆ. ಇಡೀ ರೈತರ ಹೋರಾಟವನ್ನು ಯಾವುದೋ ಒಂದು ಪಕ್ಷದ್ದು ಎಂಬು ಬಿಂಬಿಸಲು ಹೋಗಿ ವಿಫಲವಾಗಿದೆ. ಮುಂದೊಂದು ದಿನ ಈ ಹೋರಾಟಕ್ಕೆ ಯಶ ಸಿಗಲಿದೆ. ಏಕೆಂದರೆ ಐಕ್ಯ ಹೋರಾಟ ಸಮುದಾಯ ಚಳವಳಿ ಆಗುತ್ತಿದೆ. ಇದು ಕೇವಲ ರೈತರ ವಿಚಾರ ಮಾತ್ರವಲ್ಲ. ಕಾರ್ಮಿಕರು, ದಲಿತರು, ಗ್ರಾಹಕರು, ಬೀದಿ ಬದಿ ವ್ಯಾಪಾರಿಗಳು ಎಲ್ಲರೂ ಸೇರಿ ಹೋರಾಟ ಮಾಡುತ್ತೇವೆ.

3. ಎಪಿಎಂಸಿ ಕೂಡ ರೈತರ ಹಿತಕ್ಕಾಗಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆದರೆ ಕೇಂದ್ರ ಸರಕಾರ ಈಗ ತರಲು ಹೊರಟಿರುವ ಫ್ರೀ ಮಾರುಕಟ್ಟೆ ಅದಕ್ಕಿಂತಲೂ ಮಾರಕ ಎಂಬುದು ರೈತ ಹೋರಾಟಗಾರರ ಕೂಗು. ಆದರೆ, ಹಿಂದೆಯೂ ತಮ್ಮ ಪರವಾಗಿ ಇರದಿದ್ದ ಎಪಿಎಂಸಿ ಕುರಿತಾಗಿ ರೈತರಿಗೇಕೆ ಆಸಕ್ತಿ ಇರುತ್ತದೆ? ಹಾಗಾಗಿಯೇ ಇದು ದೊಡ್ಡ ಹೋರಾಟವಾಗಲಿಲ್ಲವಾ? ನಿಮ್ಮ ಅನಿಸಿಕೆಯೇನು?

ಎಪಿಎಂಸಿ ಮಹತ್ವದ ಬಗ್ಗೆ ಒಂದು ಉದಾಹರಣೆ ಹೇಳುತ್ತೇನೆ. ನಾವು ಅರಿಶಿಣ ಮತ್ತು ಹತ್ತಿಗೆ ಖಾಸಗಿ ಮಾರುಕಟ್ಟೆಯನ್ನು ಅವಲಂಬಿಸಿದ್ದೇವೆ. ಅಲ್ಲಿಗೆ ಒಗ್ಗಿಕೊಂಡಿರುವ ರೈತರು ಇಲ್ಲಿಂದ ತ್ರಿಚೂರ್‍ಗೆ ತೆಗೆದುಕೊಂಡು ಹೋಗುತ್ತಾರೆ. ಆದರೆ ಎಷ್ಟೋ ಬಾರಿ ಖಾಸಗಿ ವ್ಯಾಪರಿಗಳು ನಮ್ಮಿಂದ ಖರೀದಿಸಿ ದುಡ್ಡು ಕೊಡದೇ ಮೋಸ ಮಾಡಿದ್ದಿದೆ. ಹಲವು ಹೋರಾಟ ಮಾಡಿ ಹಣ ಪಡೆಯಬೇಕಾದ ಪರಿಸ್ಥಿತಿ ಬಂದಿದೆ. ಈಗಲೂ ಅಲ್ಲಲ್ಲಿ ಈಗಲೂ ಖಾಸಗಿ ವ್ಯಕ್ತಿಗಳು ಬಂದು ಖರೀದಿಸಿ ದುಡ್ಡು ಕೊಡದೇ ಮೋಸ ಮಾಡುತ್ತಿರುವ ಘಟನೆಗಳು ನಡೆಯುತ್ತಿವೆ.

1966ರಲ್ಲಿ ಈ ನಿಯಂತ್ರಣ ಕಾಯ್ದೆ ಬಂದಾಗ ‘ಕೃಷಿ ಉತ್ಪನ್ನಗಳಿಗೆ ತನ್ನದೇಯಾದ ಆಡಳಿತ ಮಂಡಳಿಯಿರಬೇಕು, ತನ್ನದೇ ಆದ ಆವರಣ ಇರಬೇಕು. ಅಲ್ಲಿ ರೈತರಿಗೆ ಮೋಸ ಆಗದ ರೀತಿ ಬೆಲೆ ನಿಗದಿ ಮಾಡಬೇಕು, ರೈತ ಮಾರಲು ಸಾಧ್ಯವಿಲ್ಲದಾಗ ಅದನ್ನು ಅಡವಿಟ್ಟು ಮುಂಗಡ ಪಡೆಯಬಹುದು, ಬೆಳೆ ಕೆಡದಂತೆ ಸಂಗ್ರಹಗಾರಗಳು ಇರಬೇಕು’ ಎಂಬೆಲ್ಲಾ ಸೌಕರ್ಯಗಳು ಸೃಷ್ಟಿಯಾದವು.

ಕರ್ನಾಟಕದಲ್ಲಿ ಸದ್ಯ 173 ಎಪಿಎಂಸಿಗಳಿದ್ದು ನಗರಗಳ ಕೇಂದ್ರ ಭಾಗದಲ್ಲಿಯೇ ಹತ್ತಾರು ಸಾವಿರ ಎಕರೆ ಜಮೀನು ಇದ್ದು, ಅದು ಸಾವಿರಾರು ಕೋಟಿ ರೂ ಬೆಲೆ ಬಾಳುತ್ತದೆ. ಅದರ ಮೇಲೆ ಕಣ್ಣಿಟ್ಟಿರುವ ಕಾರ್ಪೋರೇಟ್‍ಗಳು ಕಾಯ್ದೆ ತಿದ್ದುಪಡಿಗೆ ಒತ್ತಡ ಹಾಕುತ್ತಿದ್ದಾರೆ.

ಎಪಿಎಂಸಿಯಿಂದ ವಹಿವಾಟು ತೆರಿಗೆ ಎಂದು ಸರ್ಕಾರಕ್ಕೆ ಹಣ ಬರುತ್ತದೆ. ದಲ್ಲಾಳಿಗಳು ರೈತರಿಂದ ಕಮಿಷನ್ ತೆಗೆದುಕೊಳ್ಳಬಾರದು, ಕೊಳ್ಳುವವರಿಂದ ಮಾತ್ರ ಪಡೆಯಬೇಕು, ರೈತರಿಗೆ ತೂಕದಲ್ಲಿ ಮೋಸ ಮಾಡಬಾರದು ಎಂಬ ಕಾನೂನುಗಳಿವೆ. ರೈತರಿಗೆ ನ್ಯಾಯ ಕೊಡಬೇಕು ಎಂದು 1966ರ ಕಾನೂನಿನಲ್ಲಿದೆ. ಆದರೆ ಇವು ಜಾರಿಯಾಗುತ್ತಿಲ್ಲ. ಇದರಲ್ಲಿ ಕೆಲ ದೋಷಗಳಿವೆ. ಈ ದೋಷಗಳನ್ನು ತಿದ್ದುಪಡಿ ಮಾಡಿ ಕಾನೂನನ್ನು ಬಲಗೊಳಿಸುವುದನ್ನು ಬಿಟ್ಟು ಇದನ್ನೆ ನೆಪವಾಗಿಟ್ಟುಕೊಂಡು ಇಡೀ ಕಾಯ್ದೆಯನ್ನೇ ಮುಗಿಸುವುದು ಎಷ್ಟು ಸರಿ?

ಕಾನೂನಿನ ಪ್ರಕಾರ ದಲ್ಲಾಳಿಗಳು ನಮಗೆ ಮೋಸ ಮಾಡಿದರೆ ನಾವು ಅದನ್ನು ಪ್ರಶ್ನಿಸಬಹುದಿತ್ತು. ದೂರು ನೀಡಬಹುದಿತ್ತು. ಈಗ ಕಾರ್ಪೋರೆಟ್‍ಗಳ ವಿರುದ್ಧ ನಾವು ದೂರು ನೀಡಿ ಜಯಿಸಲು ಸಾಧ್ಯವೇ?

ಕಾಂಟ್ರಾಕ್ಟ್ ಕೃಷಿ ಬರುತ್ತಿದೆ. ಆರಂಭದ ಎರಡು ಮೂರು ವರ್ಷಗಳಲ್ಲಿ ಕಾರ್ಪೋರೆಟ್‍ಗಳು ಒಳ್ಳೆಯ ಬೆಲೆ ನೀಡಿ ಅವರಿಗೆ ಬೇಕಾದ ಕುಲಾಂತರಿ ಬೀಜ, ಅವರಿಗೆ ಬೇಕಾದ ಬೆಳೆ ಬೆಳೆದುಕೊಡುವಂತೆ ಒತ್ತಡಹಾಕುತ್ತಾರೆ. ನಂತರ ಈ ಎಪಿಎಂಸಿಗಳು ಮುಚ್ಚಿಹೋದ ಮೇಲೆ ಏಕಸ್ವಾಮ್ಯ ಸಾಧಿಸುವ ಅವರು, ಅವರಿಗೆ ಬೇಕಾದ್ದನ್ನು ಮಾತ್ರ ಬೆಳೆಯುವಂತೆ ರೈತರ ಮೇಲೆ ಒತ್ತಡ ಹೇರಿ ರೈತರ ಸ್ವಾತಂತ್ರ್ಯ ಕಸಿದುಕೊಳ್ಳುವುದು ಈಗಿರುವುದಕ್ಕಿಂತಲೂ ಅಪಾಯಕಾರಿ.

ಎಪಿಎಂಸಿಯಲ್ಲಿ ಈಗಿರುವ ದೋಷಗಳನ್ನು ಸರಿಪಡಿಸಬಹುದು. ಪ್ರಾಂಗಣಗಳನ್ನು ಇನ್ನಷ್ಟು ವಿಸ್ತರಿಸಬಹುದು. ತಾಲ್ಲೂಕು, ಹೋಬಳಿಗಳಲ್ಲಿ ಎಪಿಎಂಸಿ ತೆರೆದು ರೈತರು ಮಾರುವಂತೆ ಉತ್ತೇಜಿಸಬಹುದು. ಅದನ್ನು ಬಿಟ್ಟು ಎಪಿಎಂಸಿಯನ್ನೇ ಮುಗಿಸುವುದು ಅಪಾಯಕಾರಿಯಾಗಿದೆ.

4. ಬೆಂಬಲ ಬೆಲೆ, ವೈಜ್ಞಾನಿಕ ಬೆಲೆ ಇತ್ಯಾದಿಗಳು ಸ್ವಾಮಿನಾಥನ್ ಅವರ ಶಿಫಾರಸ್ಸಿನ ನಂತರ ಇನ್ನೂ ಬಲ ಪಡೆದುಕೊಳ್ಳಬೇಕಿತ್ತು. ಆದರೆ ಹಾಗಾಗುತ್ತಿಲ್ಲ. ಇದಕ್ಕೆ ಕಾರಣವೇನು?

ಮೊದಲನೇ ಪಂಚವಾರ್ಷಿಕ ಯೋಜನೆಯಿಂದಲೂ ಕೈಗಾರಿಕೆಗಳಿಗೆ ಪ್ರಾಮುಖ್ಯತೆ ನೀಡದರೆ ಹೊರತು ಕೃಷಿಗೆ ಪ್ರಾಧಾನ್ಯತೆ ನೀಡಲಿಲ್ಲ. ಕೃಷಿಗೊಂದು ನೀತಿ, ಕೈಗಾರಿಕೆಗೊಂದು ನೀತಿ ಎಂಬುದೇ ರೈತರ ನಿರಂತರ ಸಮಸ್ಯೆಗೆ ಕಾರಣವಾಗಿದೆ. 2004ರಲ್ಲಿ ವಿದರ್ಭ ರೈತರ ಆತ್ಮಹತ್ಯೆಗಳ ಹಿನ್ನೆಲೆಯಲ್ಲಿ ಸ್ವಾಮಿನಾಥನ್ ಆಯೋಗ ರಚನೆಯಾಯ್ತು. ಅದು ರೈತರು ಬೆಳೆದ ಬೆಳೆಗೆ ಖರ್ಚು ಸೇರಿ 50% ಸೇರಿಸಿ ಬೆಲೆ ನಿಗದಿ ಮಾಡಬೇಕು ಎಂದು ವರದಿ ಸಲ್ಲಿಸಿತು. ಕೃಷಿಗೆ ಸಾರ್ವಜನಿಕ ಬಂಡವಾಳ ಹರಿದು ಬರಬೇಕೆಂದು ಅದು ಹೇಳಿತು.

photo courtesy : Dailyhunt

ಬಿಜೆಪಿಯು 2014ರ ಚುನಾವಣಾ ಪ್ರಣಾಳಿಕೆಯಲ್ಲಿ ಈ ವರದಿ ಜಾರಿಗೊಳಿಸುವುದಾಗಿ ಘೋಷಿಸಿಕೊಂಡಿತ್ತು. ಆದರೆ ಅಧಿಕಾರಕ್ಕೆ ಬಂದ ನಂತರ ಸುಪ್ರೀಂ ಕೋರ್ಟ್‍ನಲ್ಲಿ ವರದಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ರಿಟ್ ಪಿಟಿಷನ್ ಸಲ್ಲಿಸಿದೆ.

ಇನ್ನು ಈ ಆಯೋಗದ ವರದಿಯನ್ನು ರಾಜ್ಯಸರ್ಕಾರಗಳು ಸಂಪನ್ಮೂಲಗಳನ್ನು ಒಗ್ಗೂಡಿಸಿ, ಆವರ್ತ ನಿಧಿ ಉಪಯೋಗಿಸಿ ಜಾರಿಗೊಳಿಸಬಹುದು. ಆದರೆ ಯಾವ ರಾಜ್ಯ ಸರ್ಕಾರವೂ ಮಾಡುತ್ತಿಲ್ಲ. ಹೋಗಲಿ ಕೇಂದ್ರ ಸರ್ಕಾರ ಜಾರಿಗೊಳಿಸಲಿ ಎಂದು ಹೋರಾಟ ಕೂಡ ಮಾಡುತ್ತಿಲ್ಲ. ಇದು ದೊಡ್ಡ ದುರಂತವಾಗಿದೆ.

ಪ್ರಧಾನಿ ಮೋದಿಯವರು ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ಸುಳ್ಳು ಹೇಳಿದರು. ಆದರೆ ಈಗ ರೈತರ ಉತ್ಪಾದನಾ ವೆಚ್ಚ ಮಾತ್ರ ಡಬಲ್ ಆಗಿದೆ. ರೈತರಿಗೆ ಸಬ್ಸಿಡಿಗಳು ನಿಂತುಹೋಗಿವೆ. ಸಾಲ ಸೌಲಭ್ಯಗಳು ಕಡಿಮೆಯಾಗಿವೆ. ಇನ್ನು ಎಂಎಸ್‍ಪಿಯ ವಿಚಾರಕ್ಕೆ ಬರುವುದಾದರೆ ಕೇಂದ್ರ ಸರ್ಕಾರ 18 ಬೆಳೆಗಳಿಗೆ ಎಂಎಸ್‍ಪಿ ಘೋಷಣೆ ಮಾಡಿದೆ. ಆದರೆ ಅದು ಜಾರಿಯಾಗುತ್ತಿಲ್ಲ. ಹಾಗಾಗಿ ಕೇವಲ ಬೆಲೆ ಘೋಷಣೆ ಮಾಡುವುದಷ್ಟೇ ಅಲ್ಲದೇ ಅದಕ್ಕಿಂತ ಕಡಿಮೆ ಬೆಲೆಗೆ ಯಾರು ಕೊಂಡುಕೊಳ್ಳಬಾರದು ಎಂದು ಕಾನೂನು ಮಾಡಬೇಕು. ಅವುಗಳನ್ನು ಮಾಡದೇ ಸುಮ್ಮನೆ ಬೊಗಳೆ ಬಿಡುವುದು ಸರಿಯಿಲ್ಲ. ಈಗ ತಂದಿರುವ ಎಪಿಎಂಸಿ ತಿದ್ದುಪಡಿಯಲ್ಲಿ ಎಂಎಸ್‍ಪಿ ಬಗ್ಗೆ ಚಕಾರವೇ ಇಲ್ಲ. ಖಾಸಗಿಯವರಿಗೆ ಯಾವುದೇ ನಿಯಂತ್ರಣವಿಲ್ಲ.

ಬಿಜೆಪಿ ಪಕ್ಷಕ್ಕೂ ಕೃಷಿಗೂ ಸಂಬಂಧವೇ ಇಲ್ಲ. ಕೃಷಿ ಬೆವರಿನ ಸಂಸ್ಕೃತಿ ಅವರಿಗೆ ಗೊತ್ತಿಲ್ಲ. ಬದಲಿಗೆ ಬಿಜೆಪಿಗೂ ಭೂಮಿಗೂ ಸಂಬಂಧವಿದೆ. ರಿಯಲ್ ಎಸ್ಟೇಟ್ ಸೇರಿದಂತೆ ಬೇರೆ ಬೇರೆ ವ್ಯವಹಾರ ಮಾಡಲಿಕ್ಕೆ ಇಟ್ಟುಕೊಂಡಿರುವ ಸಂಬಂಧ ಅದು. ಹಾಗಾಗಿ ಈ ಕಾಯ್ದೆಗಳನ್ನು ಅವರು ತರುತ್ತಿದ್ದಾರೆಯೆ ಹೊರತು ರೈತರ ಹಿತಾಸಕ್ತಿಯಿಂದಲ್ಲ ಎಂಬುದು ಸ್ಪಷ್ಟವಾಗುತ್ತದೆ.

5. ಕೋವಿಡ್ ಸಂದರ್ಭವು ಕೃಷಿ ಕ್ಷೇತ್ರದ ಮೇಲೆ ಯಾವ ಪರಿಣಾಮವನ್ನು ಬೀರಿತು?

ವಲಸೆ ಕಾರ್ಮಿಕರು, ಸಣ್ಣಪುಟ್ಟ ವ್ಯಾಪರಿಗಳು, ರೈತರು ಹೆಚ್ಚು ಸಂಕಷ್ಟ ಅನುಭವಿಸಿದರು. ವಲಸೆ ಕಾರ್ಮಿಕರು ಸಹ ನಮ್ಮ ಹಳ್ಳಿಯಿಂದ ನಗರಗಳಿಗೆ ಹೋದವರು. ಇವರೆಲ್ಲರನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದು ಮಾತ್ರವಲ್ಲ ಇವರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಯಿತು. ಇನ್ನು ರೈತರ ಬೆಳೆಗಳಿಗೆ ಸರಿಯಾದ ಬೆಲೆ ಕೊಡಲಿಲ್ಲ. 20 ಲಕ್ಷ ಕೋಟಿಯ ಪ್ಯಾಕೇಜ್ ಯಾರಿಗೂ ತಲುಪಲಿಲ್ಲ. ಕೋವಿಡ್ ಸಮಯದಲ್ಲಿ ರೈತರಿಗೆ ಅಂದಾಜು 2 ಕೋಟಿ ರೂ ನಷ್ಟವಾಗಿದೆ. ಗ್ರಾಮೀಣ ಆರ್ಥಿಕತೆಗೆ ದೊಡ್ಡ ಪೆಟ್ಟು ಬಿದ್ದಿದೆ.

6. ಬಿಡಿಬಿಡಿಯಾಗಿ ಹೋರಾಟ ನಡೆಸುತ್ತಿದ್ದ ಸಂಘಟನೆಗಳ ಒಟ್ಟಾಗಿ ಸೇರಿ ಬಂದ್‌ಗೆ  ಕರೆ ನೀಡಿದಿರಿ. ಈ ಐಕ್ಯತೆ ಮುಂದೆಯೂ ಮುಂದುವರೆಯಲಿದೆಯೇ?

ಈಗ ನಮಗೆ ನಿಜವಾದ ಹೋರಾಟದ ಅರಿವು ಬಂದಿದೆ. ಒಂಟಿ ಒಂಟಿಯಾಗಿ ನಡೆದರೆ ಪ್ರಯೋಜನವಿಲ್ಲ. ಸಮಸ್ಯೆಗಳನ್ನು ಪ್ರತ್ಯೇಕವಾಗಿ ನೋಡದೇ ಸಮಗ್ರವಾಗಿ ನೋಡಲು ಆರಂಭಿಸಿದ್ದೇವೆ. ಹಾಗಾಗಿ ಐಕ್ಯ ದನಿಯಾಗಿ ಹೋರಾಟ ಮಾಡಲು ಮುಂದಾಗಿದ್ದೇವೆ. ರೈತ-ದಲಿತ-ಕಾರ್ಮಿಕ ಐಕ್ಯ ಹೋರಾಟದಲ್ಲಿ 32 ಸಂಘಟನೆಗಳು ಒಗ್ಗೂಡಿದ್ದೇವೆ. ಈ ಒಂದು ತಿಂಗಳಿನಲ್ಲಿಯೇ ನಾವು ಗಮನಸೆಳೆಯುವ ಹೋರಾಟ ಮಾಡಿದ್ದೇವೆ. ಇನ್ನು ಮುಂದೆ ಇನ್ನೂ ಸಮಗ್ರ ದೃಷ್ಟಿಕೋನ ಇಟ್ಟುಕೊಂಡು ನಾವು ಒಗ್ಗೂಡಿ ಹೋರಾಡಲಿದ್ದೇವೆ. ನಮ್ಮಲ್ಲಿ ವ್ಯಕ್ತಿ ನಾಯಕತ್ವ ಮುಖ್ಯವಲ್ಲ ಬದಲಿಗೆ ಸಮಷ್ಠಿ ಹೋರಾಟ ಮುಖ್ಯವಾಗಲಿದೆ.

7. ಒಳ್ಳೆಯ ಮುಂಗಾರು ಮತ್ತು ಒಳ್ಳೆಯ ಬಿತ್ತನೆಯಾಗಿರುವ ಈ ಹೊತ್ತಿನಲ್ಲಿ ಬಂಪರ್ ಬೆಳೆ ಮತ್ತು ಬೆಲೆ ಕುಸಿತ ಸಂಭವಿಸಬಹುದು. ಆ ನಿಟ್ಟಿನಲ್ಲಿ ನಿಮ್ಮ ಮುಂದಾಲೋಚನೆಯೇನು?

ಸರ್ಕಾರ ಉತ್ಪಾದನೆ ಹೆಚ್ಚಿಸಲು ಈ ಕಾಯ್ದೆಗಳನ್ನು ತರುತ್ತಿದ್ದೇವೆ ಎನ್ನುತ್ತಿದೆ. ಆದರೆ ಸತ್ಯ ಏನೆಂದರೆ ಇನ್ನು ಎರೆಡು ವರ್ಷಗಳಿಗೆ ಸಾಕಾಗುವಷ್ಟು ಆಹಾರವನ್ನು ನಮ್ಮ ರೈತರು ಆಗಲೇ ಬೆಳೆದು ಇಟ್ಟಿದ್ದಾರೆ. ಹಾಗಾಗಿ ಉತ್ಪಾದನೆ ಹೆಚ್ಚಿಸಲು ಕಾರ್ಪೋರೆಟ್‍ಗಳು ಬರಬೇಕಾದ ಅಗತ್ಯವಿಲ್ಲ. ಸದ್ಯಕ್ಕೆ ನಮ್ಮ ರೈತರ ಮಕ್ಕಳು ವಲಸೆ ಹೋಗಿದ್ದವರು ವಾಪಸ್ ಹಳ್ಳಿಗೆ ಬಂದು ಕೃಷಿ ಮಾಡುತ್ತಿದ್ದಾರೆ. ಅವರಿಗೆ ನ್ಯಾಯ ಕೊಡಲು ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆದು ಕೊಳ್ಳುವ ಕೆಲಸ ಮಾಡಬೇಕು. ಹಾಗಾಗಿ ಈಗಿನಿಂದಲೇ ಸರ್ಕಾರದ ಮೇಲೆ ಒತ್ತಡ ತರಲು ಹೋರಾಟ ರೂಪಿಸುತ್ತೇವೆ.

ಬಡಗಲಪುರ ನಾಗೇಂದ್ರ

(ರೈತ ವಿದ್ಯಾರ್ಥಿ ಒಕ್ಕೂಟದ ಸಮಯದಿಂದಲೂ ರೈತ ಚಳುವಳಿಯಲ್ಲಿ ಸಕ್ರಿಯವಾಗಿರುವ ನಾಗೇಂದ್ರ ಅವರು ವಕೀಲರೂ ಹೌದು. ಹೆಚ್.ಡಿ.ಕೋಟೆ ತಾಲೂಕಿನ ಬಡಗಲಪುರದಲ್ಲಿ ನೈಸರ್ಗಿಕ ಬೇಸಾಯದಲ್ಲಿ ತೊಡಗಿದ್ದು, ಮೈಸೂರಿನಲ್ಲಿ ವಕೀಲರಾಗಿ ಪ್ರಾಕ್ಟೀಸ್ ಮಾಡುತ್ತಾ ಚಳುವಳಿಯಲ್ಲೂ ಇರುವ ಅವರು ಈಗ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾಗಿ ಪೂರ್ಣ ಚಳುವಳಿಯಲ್ಲೇ ತೊಡಗಿದ್ದಾರೆ.)

ಸಂದರ್ಶನ: ಮುತ್ತುರಾಜ್


ಇದನ್ನೂ ಓದಿ: ಕಾಯ್ದೆ ವಿರೋಧಿ ಮೋದಿ ಸರ್ಕಾರದ ಕಾಯ್ದೆ ತಿದ್ದುಪಡಿಗಳು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...