ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಭೇಟಿ ವಿರೋಧಿಸಿ ರೋಹ್ಟಕ್‌ನಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಪೊಲೀಸರು ಲಾಠಿಚಾರ್ಜ್ ಮಾಡಿದ್ದು, ಇಬ್ಬರು ವೃದ್ಧ ರೈತರು ಮತ್ತು ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ರೋಹ್ಟಕ್ ನಗರದ ಹೊರವಲಯದಲ್ಲಿರುವ ಬಾಬಾ ಮಸ್ನಾಥ್ ಮಠದ ಬಳಿ ಪ್ರತಿಭಟನಾನಿರತ ರೈತರು ಮತ್ತು ಪೊಲೀಸ್ ಸಿಬ್ಬಂದಿಗಳ ನಡುವೆ ಘರ್ಷಣೆ ನಡೆದಿತ್ತು. ರೋಹ್ಟಕ್‌ನಲ್ಲಿ ರೈತರ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಕ್ರಮವನ್ನು ವಿರೋಧಿಸಿ ಜಿಂದ್ ಜಿಲ್ಲೆಯ ವಿವಿಧ ಕಡೆಗಳಲ್ಲಿ ರೈತರು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಶನಿವಾರ, ಸ್ಥಳೀಯ ಬಿಜೆಪಿ ಸಂಸದ ಅರವಿಂದ್ ಶರ್ಮಾ ಅವರ ತಂದೆಯ ಸಂತಾಪ ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ರೋಹ್ಟಕ್‌ಗೆ ಭೇಟಿ ನೀಡಿದ್ದರು. ಅವರ ಭೇಟಿ ವಿರೋಧಿಸಿ, ವಿವಾದಿತ ಮೂರು ಕೃಷಿ ಕಾನೂನುಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರು ಪ್ರತಿಭಟನೆ ನಡೆಸುತ್ತಿದ್ದರು.
ಇದನ್ನೂ ಓದಿ: ಹರಿಯಾಣ ಉಪ ಮುಖ್ಯಮಂತ್ರಿಯ ಹೆಲಿಕಾಪ್ಟರ್ ಇಳಿಯದಂತೆ ಘೆರಾವ್ ಹಾಕಿದ ರೈತರು
ಆದರೆ, ರೈತರ ಆಕ್ರಮಣಕಾರಿ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಹೆಲಿಕಾಪ್ಟರ್‌ಅನ್ನು ಸ್ಥಳೀಯ ಪೊಲೀಸ್ ಲೈನ್ಸ್‌ನಲ್ಲಿ ಇಳಿಸಲಾಗಿತ್ತು. ಬಿಗಿ ಭದ್ರತೆಯ ಮಧ್ಯೆ ಖಟ್ಟರ್ ಅವರನ್ನು ಬೇರೆ ಮಾರ್ಗದ ಮೂಲಕ ಸಂತಾಪ ಸಭೆಗೆ ಕರೆದೊಯ್ಯಲಾಗಿತ್ತು.
ಈ ಸಮಯದಲ್ಲಿ ಹೆಲಿಕಾಪ್ಟರ್ ಇಳಿಯುವಿಕೆಗೆ ಸ್ವಲ್ಪ ಸಮಯದ ಮೊದಲು ಕಪ್ಪು ಧ್ವಜಗಳನ್ನು ಹೊತ್ತ ಹಲವಾರು ರೈತರು ಹೆಲಿಪ್ಯಾಡ್ ಕಡೆಗೆ ಸಾಗುತ್ತಿದ್ದರು. ತಕ್ಷಣ ಅಲ್ಲಿ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿ ಅವರನ್ನು ತಡೆಯಲು ಪ್ರಯತ್ನಿಸಿ, ಈ ವೇಳೆ ಘರ್ಷಣೆ ಉಂಟಾಗಿತ್ತು.
ಸಂಘಿ ಗ್ರಾಮದ ರಾಜ್ ಸಿಂಗ್ (73) ಮತ್ತು ರೋಹ್ಟಕ್ ಜಿಲ್ಲೆಯ ಬಸಂತ್‌ಪುರ್ ಗ್ರಾಮದ ಈಶ್ವರ್ (80) ಪೊಲೀಸ್ ಲಾಠಿಚಾರ್ಜ್ ವೇಳೆ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.
ಕೃಪೆ: ದಿ ಟ್ರಿಬ್ಯೂನ್
ರೈತರ ಮೇಲಿನ ಲಾಠಿಚಾರ್ಜ್ ಖಂಡಿಸಿ, ಕಪ್ಪು ಧ್ವಜಗಳನ್ನು ಹೊತ್ತ ರೈತರು ಬಿಜೆಪಿ ಕಚೇರಿಯಲ್ಲಿ ಜಮಾಯಿಸಿದ್ದರಿಂದ ಸಿರ್ಸಾ ಸಂಸದೆ ಸುನೀತಾ ದುಗ್ಗಲ್ ಅವರು ಫತೇಹಾಬಾದ್ ಭೇಟಿಯನ್ನು ರದ್ದುಗೊಳಿಸಿದ್ದಾರೆ.
ಗುರುವಾರ ಕೂಡ ಹರಿಯಾಣದ ಉಪ ಮುಖ್ಯಮಂತ್ರಿ ದುಶ್ಯಂತ್ ಚೌಟಾಲಾ ಹೆಲಿಕಾಪ್ಟರ್ ಮೂಲಕ ಹಿಸಾರ್ ತಲುಪಿದ್ದು, ಅವರನ್ನು ಪ್ರತಿಭಟನಾ ನಿರತ ರೈತರು ಘೆರಾವ್ ಹಾಕಿ, ಹೆಲಿಕಾಪ್ಟರ್ ಇಳಿಯಲು ಬಿಡದ ಕಾರಣ ಅದು ಬಂದ ದಾರಿಯಲ್ಲೇ ವಾಪಾಸ್ ಹೋದ ಘಟನೆ ನಡೆದಿತ್ತು.
ಇದನ್ನೂ ಓದಿ: ಹೋರಾಟ ತೀವ್ರಗೊಳಿಸಲು ಗಟ್ಟಿ ನಿರ್ಧಾರ: ಮೇ ತಿಂಗಳಿನಲ್ಲಿ ಪಾರ್ಲಿಮೆಂಟ್ ಚಲೋಗೆ ರೈತರ ಕರೆ


