ಕಳೆದ 9 ತಿಂಗಳಿಂದ ದೆಹಲಿಗಡಿಗಳಲ್ಲಿ ಭಾರತದ ರೈತರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಕೃಷಿ, ಕೃಷಿ ಭೂಮಿ ಮತ್ತು ರೈತನ ಅಸ್ತಿತ್ವಕ್ಕೆ ಕೊಡಲಿ ಪೆಟ್ಟಿನಂತಾಗಿರುವ ಮತ್ತು ಕಾರ್ಪೋರೇಟೀಕರಣಕ್ಕೆ ಅವಕಾಶ ಮಾಡಿಕೊಡುವ ಈ ಕಾಯ್ದೆಗಳನ್ನು ಹಿಂಪಡೆಯಬೇಕು ಎಂಬುದು ರೈತರ ಆಗ್ರಹ.
ದೇಶವಷ್ಟೇ ಅಲ್ಲ, ಜಗತ್ತಿನ ಗಮನಸೆಳೆದಿರುವ ಈ ಹೋರಾಟಕ್ಕೆ ವಿವಿಧ ದೇಶಗಳಿಂದ ಬೆಂಬಲವೂ ವ್ಯಕ್ತವಾಗಿದೆ. ಇಂಗ್ಲೆಂಡ್, ಅಮೆರಿಕ, ನ್ಯೂಜಿಲೆಂಡ್, ಕೆನಡಾ, ಆಸ್ಟ್ರೇಲಿಯಾ ದೇಶಗಳಿಂದ ಭಾರತೀಯರ ಹೋರಾಟಕ್ಕೆ ಬೆಂಬಲ ದೊರೆತಿದೆ. ಈ ಅಮೆರಿಕದ ರೈತರು ಭಾರತೀಯ ರೈತರ ಹೋರಾಟಕ್ಕೆ ದನಿಗೂಡಿಸಿದ್ದಾರೆ.
ದೇವವ್ರತ ಪೇನ್, ಸೃಷ್ಟಿ ಅಗರ್‌ವಾಲ್ ಮತ್ತು ರಾಜಶಿಕ್ ತಾರಾಫ್ದರ್ ಎಂಬ ಮೂವರು ಉತ್ಸಾಹಿಗಳು ‘ದೇಜಾವು’ ಹೆಸರಿನ ಸಾಕ್ಷ್ಯಚಿತ್ರವನ್ನು ಸಿದ್ಧಪಡಿಸಿದ್ದು, ಅದರ ತುಣುಕೊಂದನ್ನು ಆಗಸ್ಟ್ 15ರಂದು ಬಿಡುಗಡೆ ಮಾಡಿದ್ದು, ಇದರಲ್ಲಿ ಅಮೆರಿಕದ ರೈತರು,’ ಭಾರತೀಯ ರೈತರ ಬಗ್ಗೆ ನಮಗೆ ಹೆಮ್ಮೆ ಇದೆ’ ಎಂದು ತಮ್ಮ ಅಭಿಮಾನವನ್ನು ಹಂಚಿಕೊಂಡಿದ್ದಾರೆ.
ಜೊನೈ ನಿರ್ಮಾಣ ಸಂಸ್ಥೆಯ ಮೂಲಕ ಸಿದ್ಧವಾಗುತ್ತಿರುವ ಈ ಸಾಕ್ಷ್ಯಚಿತ್ರ ಅಮೆರಿಕದ ಕೃಷಿ ವಲಯದಲ್ಲಿ ನಡೆದ ಪ್ರಯೋಗ ಅಲ್ಲಿನ ಕೃಷಿಕರನ್ನು ಯಾವ ರೀತಿಯ ಸಂಕಷ್ಟಕ್ಕೆ ತಳ್ಳಿತು ಎಂಬುದನ್ನು ಬಿಚ್ಚಿಡುವ ಪ್ರಯತ್ನ ಮಾಡಲಿದೆ. ಹಾಗೆಯೇ ಭಾರತದ ಕೃಷಿವಲಯವನ್ನು ಮುಕ್ತ ಮಾರುಕಟ್ಟೆಗೆ ತೆರೆದುಕೊಳ್ಳುವಂತೆ ಕಾನೂನು ರಚನೆಯಾಗುತ್ತಿರುವಾಗ, ಭಾರತವು ಏನೆಲ್ಲಾ ಸವಾಲುಗಳನ್ನು ಎದುರಿಸಬೇಕಾಗಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವೂ ಇದಾಗಿದೆ ಎಂದು ನಿರ್ಮಾಣ ತಂಡ ಹೇಳಿದೆ.
ಇದನ್ನೂ ಓದಿ: ಅಪ್ಪಂದಿರ ಹೊಲಗಳಲ್ಲಿನ ಪರಿಶ್ರಮ, ಒಲಿಂಪಿಕ್ಸ್‌ನಲ್ಲಿ ಮಕ್ಕಳ ಪ್ರತಿಫಲ
ಈಗ ಭಾರತದಲ್ಲಿ ಜಾರಿಗೆ ಬರಬೇಕೆಂದಿರುವ ಕೃಷಿ ಕಾಯ್ದೆಗಳು, ಪ್ರಯೋಗಗಳು, ಕೃಷಿ ನೀತಿಗಳು ನಲವತ್ತು ವರ್ಷಗ ಳ ಹಿಂದೆಯೇ ಅಮೆರಿಕದಲ್ಲಿ ನಡೆದಿವೆ. ಅದರ ಫಲವೇನು? ನಿಜಕ್ಕೂ ರೈತರಿಗೆ ಲಾಭವಾಗಿದೆಯೇ? ಬದುಕು ಸುಧಾರಿಸಿದೆಯೇ ಎಂಬ ಪ್ರಶ್ನೆಗಳೊಂದಿಗೆ ಸುಮಾರು 10 ಸಾವಿರ ಕಿ.ಮೀ. ಸಂಚರಿಸಿರುವ ತಂಡವು ಸಣ್ಣ ಹಿಡುವಳಿದಾರರು ಎದುರಿಸುತ್ತಿರುವ ಸಂಕಷ್ಟವನ್ನು ‘ದೇಜಾವು’ ಸಾಕ್ಷ್ಯಚಿತ್ರ ತೆರೆದಿಡಲಿದೆ.
ಈ ಸಾಕ್ಷ್ಯಚಿತ್ರ ಅನಾವರಣ ಮಾಡುವ ಅಂಶಗಳು ರೈತರ ಹೋರಾಟದ ಹಿಂದಿನ ಕಾಳಜಿ ಮತ್ತು ಆತಂಕಗಳನ್ನು ಬಿಚ್ಚಿಡುವ ಜೊತೆಗೆ, ಭಾರತೀಯರೆಲ್ಲರೂ ರೈತರ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿ, ಹೋರಾಟಕ್ಕೆ ಬೆಂಬಲಿಸಬೇಕು ಎಂಬುದನ್ನು ಮನವರಿಕೆ ಮಾಡಿಕೊಡುತ್ತದೆ ಎಂದು ಸಾಕ್ಷ್ಯಚಿತ್ರ ನಿರ್ಮಾಣ ತಂಡದ ಸದಸ್ಯರು ಹೇಳುತ್ತಾರೆ.
ಸಾಕ್ಷ್ಯಚಿತ್ರಕ್ಕಾಗಿ ಮಿಸ್ಸೋರಿ, ವಿಸ್ಕಾನ್ಸಿನ್ ಸೇರಿದಂತೆ ವಿವಿಧ ರಾಜ್ಯಗಳ ರೈತರನ್ನು ತಂಡವು ಮಾತನಾಡಿಸಿದಾಗ, ಕಾರ್ಪೋರೇಟ್ ಶಕ್ತಿಗಳ ದುಷ್ಟತನ, ಕೃಷಿ ವಲಯಕ್ಕೆ ಅವರ ಪ್ರವೇಶದಿಂದ ಸೃಷ್ಟಿಯಾಗಲಿರುವ ಅಲ್ಲೋಲ ಕಲ್ಲೋಲ, ಆತ್ಮಹತ್ಯೆಯಂತಹ ಸಂಕಷ್ಟಗಳು, ಕೃಷಿಯನ್ನೇ ತೊರೆಯಬೇಕಾದ ಪರಿಸ್ಥಿತಿ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಹೋರಾಟ ನಿರತ ಭಾರತೀಯ ರೈತರ ಬಗ್ಗೆ ಹೆಮ್ಮೆ ಮಾತುಗಳನ್ನಾಡಿದ್ದು, ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.
ಸಾಕ್ಷ್ಯಚಿತ್ರದ ನಾಲ್ಕೂವರೆ ನಿಮಿಷಗಳ ತುಣುಕು ಇಲ್ಲಿದೆ. ನೋಡಿ:
ಸಾಕ್ಷ್ಯಚಿತ್ರ ನಿರ್ಮಾಣ ಮಾಡುತ್ತಿರುವವರು ಯಾರು ಗೊತ್ತೆ?
ದೇವವ್ರತ ಪೇನ್
ಪಶ್ಚಿಮ ಬಂಗಾಳದ ಮೂಲದ ದೇವವ್ರತ ಭೌತಶಾಸ್ತ್ರದ ವಿಜ್ಞಾನಿ. ನಾಸಾದರಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಚಿತ್ರ ನಿರ್ಮಾಣದಲ್ಲೂ ಆಸಕ್ತರು. ಒಂಬತ್ತು ವರ್ಷಗಳ ಹಿಂದೆ ಚಿತ್ತಗಾಂಗ್ (ಮನೋಜ್ ಬಾಜಪಾಯಿ, ನವಾಝುದ್ದೀನ್ ಸಿದ್ದಿಕಿ, ರಾಜ್‌ಕುಮಾರ್ ರಾವ್ ನಟಿಸಿದ ಚಿತ್ರ) ಹೆಸರಿನ ಹಿಂದಿ ಚಿತ್ರ ನಿರ್ಮಿಸಿ, ನಿರ್ದೇಶಿಸಿದ ಇವರಿಗೆ ಮೊದಲ ಚಿತ್ರಕ್ಕೆ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಲಭಿಸಿತ್ತು.

ರಾಜಶಿಕ್ ತರಫ್ದಾರ್
ಪಶ್ಚಿಮ ಬಂಗಾಳದವರಾದ ರಾಜಶಿಕ್ ಭೌತಶಾಸ್ತ್ರದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. , ಕ್ಯಾಲಿಫೋರ್ನಿಯ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬೋಧನೆ ಮಾಡುತ್ತಿದ್ದಾರೆ.
ಸೃಷ್ಟಿ ಅಗರ್‌ವಾಲ್
ಭೌತಶಾಸ್ತ್ರಜ್ಞರು. ಅಮೆರಿಕದ ಕೊಲರಾಡೊದಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಟ್ಯಾಂಡರ್ಡ್ಸ್ ಅಂಡ್ ಟೆಕ್ನಾಲಜಿಯಲ್ಲಿ ಸಹ ಸಂಶೋಧಕಿ.
ಕೃಪೆ: ಅನ್ನದ ಋಣ
ಇದನ್ನೂ ಓದಿ: ರೈತ ಹೋರಾಟ: ದೆಹಲಿಯ ಗಡಿಗಳಲ್ಲಿ ರೈತರ ತಿರಂಗಾ ಯಾತ್ರೆ



ರೈತರ ಹೋರಾಟದ ಬಗ್ಗೆ ಚಿತ್ರ ಬರುತ್ತಿರುವುದು ಸ್ವಾಗತಾರ್ಹ ಮತ್ತು ಸಂತದ ವಿಚಾರ.avaagalaadaru ಸಂಪೂರ್ಣ ಜನರ ಬೆಂಬಲ ನೀಡುವ ಮೂಲಕ, ರೈತರ ಹೋರಾಟ ಜಯಪ್ರದಾ ವಾಗಲಿ ಎಂದು ಪ್ರಾರ್ಥನೆ ಅನ್ನು ದೇವರಿಗೆ ಸಲ್ಲಿಸೋಣ.