83 ದಿನಗಳು ತುಂಬಿದ ರೈತ ಹೋರಾಟ ಹಲವಾರು ರೀತಿಯ ಸೇವೆಗಳಿಂದ ಹೆಸರುವಾಸಿಯಾಗುತ್ತಿದೆ. ಸೇವೆಯನ್ನು ಹೀಗೂ ಮಾಡಬಹುದು ಎಂಬುದನ್ನು ಈ ಐತಿಹಾಸಿಕ ಹೋರಾಟದಲ್ಲಿ ಸಿಖ್ ಸಮುದಾಯ ಜಗತ್ತಿಗೆ ತಿಳಿಸಿಕೊಟ್ಟಿದೆ. ಸಿಂಘು ಗಡಿಯಲ್ಲಿ ಪ್ರತಿಭಟನಾ ನಿರತ ಬೂಟಾ ಸಿಂಗ್ ಐರನ್ (ಇಸ್ತ್ರಿ) ಸೇವೆ ನೀಡುತ್ತಿದ್ದಾರೆ.
ಬೂಟಾ ಸಿಂಗ್ ತರನ್ ತಾರನ್ ಸಾಹಿಬ್ (Tarn Taran Sahib) ಜಿಲ್ಲೆಯವರು. ಅವರು ಮೂಲತಃ ಕೃಷಿಕರಾಗಿದ್ದು, ಸದ್ಯ ಸಿಂಘು ಗಡಿಯಲ್ಲಿ ಐರನ್ ಅಂಗಡಿ ಇಟ್ಟು ಪ್ರತಿಭಟನಾ ನಿರತರ ಬಟ್ಟೆಗಳನ್ನು ಐರನ್ ಮಾಡುವ ಸೇವೆ ಮಾಡುತ್ತಿದ್ದಾರೆ.
“ಈ ಹಿಂದೆ ಸರ್ಕಾರದ ವಿರುದ್ಧ, ಕೆಟ್ಟ ಯೋಜನೆಗಳ ವಿರುದ್ಧ ನಿಂತಿದ್ದವರು, ವಿರೋಧಿಸಿದವರು ಬೇರೆ. ಅಂದಿನ ಪ್ರತಿಭಟನಾ ಸ್ವರೂಪವೂ ಬೇರೆ. ಆದರೆ ಈಗ ಪ್ರಧಾನಿ ಮೋದಿ ತಮ್ಮ ಕೆಟ್ಟ ಕಾನೂನುಗಳ ಮೂಲಕ ಎದುರು ಹಾಕಿಕೊಂಡಿರುವುದು ಅವರ ಅಳಿಯಂದಿರನು. ಅಳಿಯರ ಮುಂದೆ ಮಾವ ಗೆದ್ದ ಉದಾಹರಣೆ ಇಲ್ಲವೆ ಇಲ್ಲ” ಎಂದು ರೈತ ಬೂಟಾ ಸಿಂಗ್ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಗೆದ್ದೇ ಮನೆಗೆ ತೆರಳುತ್ತೇವೆ, ಇಲ್ಲವೆಂದರೆ ತ್ರಿವರ್ಣ ಧ್ವಜದಲ್ಲಿ ನಮ್ಮ ಮೃತದೇಹ ಹೋಗಲಿವೆ!
ತರನ್ ತಾರನ್ ಸಾಹಿಬ್ ಜಿಲ್ಲೆಯಲ್ಲಿ ಭತ್ತ, ಜೋಳ, ಕಡಲೆ ಮತ್ತು ಕಬ್ಬು ಬೆಳೆಯುವ ಬೂಟಾ ಸಿಂಗ್, ಪ್ರತಿಭಟನಾ ಸ್ಥಳದಲ್ಲಿ ಒಂದೂವರೆ ತಿಂಗಳು ವಾಷಿಂಗ್ ಮಷಿನ್‌ಗಳನ್ನು ಇಟ್ಟು ರೈತರ ಬಟ್ಟೆ ಸ್ವಚ್ಛಗೊಳಿಸುತ್ತಿದ್ದರು. ದಿನೇ ದಿನೇ ವಾಷಿಂಗ್ ಮಷಿನ್‌ಗಳ ಸಂಖ್ಯೆ ಹೆಚ್ಚಾದ ಕಾರಣ ಮತ್ತು ತೀವ್ರ ಚಳಿ ಮತ್ತು ಮಂಜಿನಲ್ಲಿ ಬೇಗ ಬಟ್ಟೆ ಒಣಗದಿರುವುದನ್ನು ಗಮನಿಸಿ ಐರನ್ ಸೇವೆ ನೀಡುತ್ತಿದ್ದಾರೆ.

ಐರನ್ ಸೇವೆ ನೀಡಲು 20 ಜನರ ತಂಡ ಇಲ್ಲಿದೆ. 8 ಜನರ ಪಾಳಿಯಂತೆ ಇಡೀ ದಿನ ಬಟ್ಟೆಗಳ್ನು ಐರನ್ ಮಾಡಿ ಕೊಡಲಾಗುತ್ತದೆ. ವಾಷಿಂಗ್ ಮಷಿನ್ ಇಟ್ಟಿರುವ ಸ್ಥಳದ ಮುಂದೆಯೇ ಇವರು ತಮ್ಮ ಟ್ಯ್ರಾಲಿಯನ್ನು ಇಟ್ಟುಕೊಂಡಿದ್ದಾರೆ.
ಅಮನ್ ಸಿಂಗ್, ಜಸ್ಪಿಂದರ್ ಸಿಂಗ್, ಬಲದೇವ್ ಸಿಂಗ್, ಬಲ್ಜಿಂದರ್ ಸಿಂಗ್ ಮತ್ತು ಲಕ್ಕಿ ಸಿಂಗ್ ಸೇರಿದಂತೆ ೨೦ ಮಂದಿಯ ತಂಡ ಬೂಟಾ ಸಿಂಗ್ ಅವರ ನೇತೃತ್ವದಲ್ಲಿ ಐರನ್ ಸೇವೆ ನೀಡುತ್ತಿದೆ. ಬಿಸಿಲು ಮರೀಚಿಕೆಯಾಗಿದ್ದ ಸಮಯದಲ್ಲಿ ಈ ಸೇವೆ ಆರಂಭಿಸಲಾಗಿತ್ತು. ಈಗ ಪರಿಸ್ಥಿತಿ ಪರವಾಗಿಲ್ಲ. ಸ್ವಲ್ಪ ಬಿಸಿಲು ಇದೆ. ಚಳಿ ಮತ್ತು ಮಂಜಿನಲ್ಲಿ ಐರನ್ ಸೇವೆ ನಿಜಕ್ಕೂ ಅನಿವಾರ್ಯವಾಗಿತ್ತು ಎನ್ನುತ್ತಾರೆ ರೈತರು.
‘ನಮ್ಮನ್ನು ಖಾಲಿಸ್ತಾನಿಗಳು ಎಂದು ಕರೆಯುತ್ತಾರೆ. ನಮ್ಮ ಜಿಲ್ಲೆಯನ್ನು ಖಾಲಿಸ್ತಾನಿಗಳ ಜಿಲ್ಲೆ ಎನ್ನುತ್ತಾರೆ. ಹಾಗೆಂದು ನಾವು ನಮ್ಮವರು ತೊಂದರೆಯಲ್ಲಿದ್ದಾಗ ಅವರ ಸೇವೆ ಮಾಡದೇ ಇರಲು ಸಾಧ್ಯವೆ..? ನಮ್ಮ ಹಕ್ಕು ಕೇಳಿದರೆ ನಾವು ಖಾಲಿಸ್ತಾನಿಯರಾಗುತ್ತೇವೆ. ಅದೇ ನಾವು ದೇಶಕ್ಕಾಗಿ ಯುದ್ಧಗಳಲ್ಲಿ ಪ್ರಾಣ ಬಿಟ್ಟಾಗ ನಾವು ಖಾಲಿಸ್ತಾನಿಯರು ಎಂದು ಅನಿಸುವುದಿಲ್ಲವೆ..?’ ಎಂದು ಆಕ್ರೋಶ ಹೊರಹಾಕುತ್ತಾರೆ ರೈತ ಬೂಟಾ ಸಿಂಗ್.

ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಹೊರಾಟ ನಡೆಸುತ್ತಿರುವ ರೈತರು ವಿಭಿನ್ನ ಸೇವೆಗಳಿಂದ ವಿಶೇಷ ಸ್ಥಾನ ಪಡೆದುಕೊಂಡಿದ್ದಾರೆ. ತಮ್ಮ ಊರುಗಳಲ್ಲಿ ತಾವು ಮಾಡುವ ಕೆಲಸ ಬೇರೆ. ಆದರೆ ಇಲ್ಲಿ ಇವರು ಸೇವೆ ಮಾಡಲು ಯಾವುದು ಅವಶ್ಯಕವಾಗಿದೆಯೋ ಅದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸೇವೆಯಲ್ಲಿ ದೊಡ್ಡದು, ಚಿಕ್ಕದು ಎಂಬ ಭೇದವಿಲ್ಲದೆ ಇಲ್ಲಿ ಜನ ಕೆಲಸ ಮಾಡುತ್ತಾರೆ.
ಇದನ್ನೂ ಓದಿ: ಗೆಲ್ಲುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ: ಸಿಂಘು ಗಡಿಯಲ್ಲಿ ಗುರ್ತೇಜ್ ಸಿಂಗ್ ಗುಡುಗು


