ದೇಶಾದ್ಯಂತ ಕೊರೊನಾ ಪ್ರಕರಣಗಳು ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರತ ರೈತರೊಂದಿಗೆ ಮಾತುಕತೆ ಪುನರಾರಂಭಿಸುವಂತೆ ಹರಿಯಾಣ ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಏಪ್ರಿಲ್ 15 ರಂದು ಪ್ರಧಾನಿಗೆ ಬರೆದ ಪತ್ರದಲ್ಲಿ, ಜೆಜೆಪಿ ನಾಯಕ, ದುಷ್ಯಂತ್ ಸಿಂಗ್ ಚೌತಾಲ ಚೌತಲಾ ಅವರು ಮೂರರಿಂದ ನಾಲ್ಕು ಹಿರಿಯ ಕ್ಯಾಬಿನೆಟ್ ಮಂತ್ರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿ ರೈತರೊಂದಿಗೆ ಮಾತುಕತೆ ಪುನರಾರಂಭಿಸಲು ಒತ್ತಾಯಿಸಿದ್ದಾರೆ.
“ಕೇಂದ್ರ ಸರ್ಕಾರದ ಹೊಸದಾಗಿ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ನಮ್ಮ ‘ಅನ್ನದಾತರು’ ದೆಹಲಿ ಗಡಿಯಲ್ಲಿ ರಸ್ತೆಗಳಲ್ಲಿದ್ದಾರೆ ಎಂದು ನಿಮ್ಮ ರೀತಿಯ ಗಮನಕ್ಕೆ ತರಲು ನಾನು ಬಯಸುತ್ತೇನೆ. ಈ ಆಂದೋಲನ ನೂರು ದಿನಗಳಿಗಿಂತ ಹೆಚ್ಚು ಕಾಲ ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಪರಸ್ಪರ ಚರ್ಚೆಯ ಮೂಲಕ ಪ್ರತಿಯೊಂದು ಸಮಸ್ಯೆಗೆ ಪರಿಹಾರವಿದೆ ಎಂದು ನಾನು ನಂಬುತ್ತೇನೆ” ಎಂದು ಪತ್ರದಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ರೈತರ ಆಕ್ರೋಶದ ಪರಿಣಾಮ: ಸರ್ಕಾರ ಪತನದ ಭೀತಿಯಲ್ಲಿ ಹರಿಯಾಣ ಸಿಎಂ!
“ಪ್ರತಿಭಟನಾ ನಿರತ ರೈತರೊಂದಿಗೆ ಮಾತುಕತೆ ನಡೆಸುವ ನಿಟ್ಟಿನಲ್ಲಿ, ಮೂರರಿಂದ ನಾಲ್ಕು ಹಿರಿಯ ಕ್ಯಾಬಿನೆಟ್ ಮಂತ್ರಿಗಳನ್ನು ಒಳಗೊಂಡ ತಂಡವು ಈ ವಿಷಯದಲ್ಲಿ ಸೌಹಾರ್ದಯುತ ತೀರ್ಮಾನವನ್ನು ತರಲು ರೈತರೊಂದಿಗೆ ಮಾತುಕತೆ ಪುನರಾರಂಭಿಸಬಹುದು” ಎಂದು ಚೌಟಾಲ ಪತ್ರದಲ್ಲಿ ತಿಳಿಸಿದ್ದಾರೆ.
ಶನಿವಾರವಷ್ಟೇ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ರೈತರು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟು ಮನೆಗೆ ಹಿಂದಿರುಗುವಂತೆ ಮನವಿ ಮಾಡಿದ್ದರು.
ಕೊರೊನಾದಿಂದ ರೈತರು ತೊಂದರೆಗೆ ಸಿಲುಕುವುದಕ್ಕೆ ನಾನು ಬಿಡುವುದಿಲ್ಲ. ಆದಷ್ಟು ಬೇಗ ಕಂದ್ರ ಸರ್ಕಾರ ರೈತರೊಂದಿಗೆ ಮಾತುಕತೆ ನಡೆಸಬೇಕು ಎಂದು ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಹೇಳಿದ್ದಾರೆ.
ಇದನ್ನೂ ಓದಿ: ಶಾಹಿನ್‌ಬಾಗ್ ಅನ್ನು ನಡೆಸಿಕೊಂಡಂತೆ ರೈತ ಹೋರಾಟಗಾರರನ್ನು ನಡೆಸದಿರಿ: ಕೇಂದ್ರಕ್ಕೆ ಟಿಕಾಯತ್

ಕಳೆದ ಸೆಪ್ಟೆಂಬರ್‌ನಲ್ಲಿ ಒಕ್ಕೂಟ ಸರ್ಕಾರ ಜಾರಿಗೆ ತಂದ ಮೂರು ವಿವಾದಿತ ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನದ ಲಕ್ಷಾಂತರ ರೈತರು ದೆಹಲಿಯ ನಾಲ್ಕು ಗಡಿ ಬಿಂದುಗಳಾದ ಸಿಂಘು, ಟಿಕ್ರಿ (ಹರಿಯಾಣದ ಉದ್ದಕ್ಕೂ), ಶಹಜಾನ್‌ಪುರ ಮತ್ತು ಗಾಜಿಪುರ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
“ಈ ಕಾನೂನುಗಳನ್ನು ರದ್ದುಪಡಿಸುವವರೆಗೂ ರೈತರು ಮನೆಗೆ ಹಿಂತಿರುಗುವುದಿಲ್ಲ. ಕೇಂದ್ರವು ಕೊರೊನಾ ವೈರಸ್ ಬಗ್ಗೆ ಮಾತನಾಡುತ್ತಾರೆ ಆದರೆ ಶಹೀನ್‌ಬಾಗ್ ಅನ್ನು ನಡೆಸಿಕೊಂಡಂತೆ ರೈತರನ್ನು ನಡೆಸಿಕೊಳ್ಳಬಾರದು ಎಂದು ಸರ್ಕಾರಕ್ಕೆ ತಿಳಿಸಿದ್ದೇವೆ. ಈ ಆಂದೋಲನ ಕೊನೆಗೊಳ್ಳುವುದಿಲ್ಲ. ನಾವು ಕೊರೊನಾ ವೈರಸ್ ಮಾರ್ಗಸೂಚಿಗಳನ್ನು ಅನುಸರಿಸುತ್ತೇವೆ. ಈ ಆಂದೋಲನವು ನಮ್ಮ ಬೇಡಿಕೆಗಳು ಈಡೇರುವವರೆಗೂ ಮುಂದುವರಿಯುತ್ತದೆ” ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಇದನ್ನೂ ಓದಿ: ಕೆಂಪು ಕೋಟೆ ದಾಂಧಲೆ ಪ್ರಕರಣ: ಜಾಮೀನು ದೊರೆತ ಕೆಲವೇ ಗಂಟೆಗಳಲ್ಲಿ ಮತ್ತೆ ದೀಪ್ ಸಿಧು ಬಂಧನ


