ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಭಾರತದ 75 ನೇ ಸ್ವಾತಂತ್ರ್ಯ ದಿನವನ್ನು ‘ಕಿಸಾನ್ ಮಜ್ದೂರ್ ಆಜಾದಿ ಸಂಗ್ರಾಮ ದಿವಸ್’ ಎಂದು ಆಚರಿಸಲಿದ್ದು, ಅಂದು ತಿರಂಗಾ ಯಾತ್ರೆ ನಡೆಸಲಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ ಹೇಳಿಕೆಯಲ್ಲಿ, ದೇಶಾದ್ಯಂತ ರೈತರು ಸ್ವಾತಂತ್ರ್ಯ ದಿನದಂದು ತಿರಂಗಾ ಯಾತ್ರೆಯಲ್ಲಿ ಬ್ಲಾಕ್ ಮತ್ತು ತಾಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಆದರೆ, ರೈತರು ದೆಹಲಿಯನ್ನು ಪ್ರವೇಶಿಸುವುದಿಲ್ಲ” ಎಂದು ಒತ್ತಿ ಹೇಳಿದೆ.
ರೈತ ಹೋರಾಟಕ್ಕೆ ಮಸಿ ಬಳಿಯುವ ಯತ್ನ ವಿವಿಧ ರೀತಿಯಲ್ಲಿ ಕಳೆದ ಎಂಟು ತಿಂಗಳಿಂದ ನಡೆಯುತ್ತಿದ್ದು, ಇಂತಹ ಅವಕಾಶಗಳನ್ನು ಬಳಸಿಕೊಳ್ಳುವ ಸಾಧ್ಯತೆಯನ್ನು ಅರಿತಿರುವ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ಶಾಂತಿಯುತವಾಗಿ ಜಿಲ್ಲಾ ಕೇಂದ್ರಗಳಲ್ಲಿ ರಾಷ್ಟ್ರಧ್ವಜದೊಂದಿಗೆ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಇದನ್ನೂ ಓದಿ: ‘ಯೋಗಿ ನಿಮ್ಮ ಚರ್ಮ ಸುಲಿಯುತ್ತಾರೆ!’; ರೈತರಿಗೆ ಬಹಿರಂಗವಾಗಿ ಬೆದರಿಸಿದ ಯುಪಿ ಬಿಜೆಪಿ
ತಿರಂಗಾ ಯಾತ್ರೆ ಹೆಸರಿನಲ್ಲಿ ನಡೆಯಲಿರುವ ಈ ಪ್ರತಿಭಟನೆಯಲ್ಲಿ ಟ್ರ್ಯಾಕ್ಟರ್, ಬೈಕ್, ಸೈಕಲ್ ಮತ್ತು ಇತರೆ ವಾಹನಗಳಿಗೆ ರಾಷ್ಟ್ರಧ್ವಜವನ್ನು ಕಟ್ಟಿ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಬ್ಲಾಕ್, ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಕೃಷಿ ಕಾಯ್ದೆಗಳು ಮತ್ತು ಒಕ್ಕೂಟ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಸ್‌ಕೆಎಂ ತಿಳಿಸಿದೆ.
“ಸಂಯುಕ್ತ ಕಿಸಾನ್ ಮೋರ್ಚಾ ಆಗಸ್ಟ್ 15 ರಂದು, ಎಲ್ಲಾ ಘಟಕಗಳಿಗೆ ಕಿಸಾನ್ ಮಜ್ದೂರ್ ಆಜಾದಿ ಸಂಗ್ರಾಮ ದಿವಸ್ ಎಂದು ಆಚರಿಸಲು ಕರೆ ನೀಡಿದೆ. ಆ ದಿನ ತಿರಂಗಾ ಯಾತ್ರೆಗಳನ್ನು ಆಯೋಜಿಸಲಾಗುವುದು” ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ್ ಸಮನ್ವಯ ಸಮಿತಿಯ ನಾಯಕಿ ಕವಿತಾ ಕುರುಗಂಟಿ ಹೇಳಿದ್ದಾರೆ.
ಸಿಂಘು, ಟಿಕ್ರಿ ಮತ್ತು ಘಾಜಿಪುರ ಸೇರಿದಂತೆ ದೆಹಲಿಯ ಗಡಿಗಳಲ್ಲಿ, ದಿನವಿಡೀ ತ್ರಿವರ್ಣ ಧ್ವಜದ ಮೆರವಣಿಗೆಗಳು ಮತ್ತು ಕಾರ್ಯಕ್ರಮಗಳು ನಡೆಯುತ್ತವೆ. ರೈತರ ಟೆಂಟ್, ಗುಡಿಸಲು, ಟ್ಯ್ರಾಲಿಗಳ ಮೇಲೆ ತಿರಂಗಾವನ್ನು ಹಾರಿಸಲಾಗುತ್ತದೆ.
“ಸಿಂಘು ಗಡಿಯಲ್ಲಿ, ರೈತರು ಪ್ರತಿಭಟನಾ ಸ್ಥಳದ ಮುಖ್ಯ ವೇದಿಕೆಯಿಂದ ಕೆಎಂಪಿ ಎಕ್ಸ್‌ಪ್ರೆಸ್‌ವೇಯವರೆಗೆ ಸುಮಾರು ಎಂಟು ಕಿಲೋಮೀಟರ್‌ಗಳವರೆಗೆ ತ್ರಿವರ್ಣ ಧ್ವಜ ಮತ್ತು ತಮ್ಮ ಕೃಷಿ ಒಕ್ಕೂಟಗಳ ಧ್ವಜಗಳೊಂದಿಗೆ ಮೆರವಣಿಗೆ ನಡೆಸುತ್ತಾರೆ” ಎಂದು ರೈತ ನಾಯಕ ಜಗಮೋಹನ್ ಸಿಂಗ್ ಮಾಹಿತಿ ನೀಡಿದ್ದಾರೆ.
“ಜನವರಿ 26 ರಂದು ನಡೆದ ಘಟನೆಗಳು ನಮ್ಮ ಚಳುವಳಿಗೆ ಧಕ್ಕೆ ತಂದಿವೆ. ಆದ್ದರಿಂದ ಆಗಸ್ಟ್ 15 ರಂದು ನಡೆಯುವ ತಿರಂಗಾ ಯಾತ್ರೆ ಯಾವುದೇ ನಗರವನ್ನು ಪ್ರವೇಶಿಸುವುದಿಲ್ಲ. ಆದರೆ ನಮ್ಮ ಬೇಡಿಕೆಗಳು ಈಡೇರುವವರೆಗೂ ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ” ಎಂದು ರೈತ ನಾಯಕ ಜಗಮೋಹನ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ: ಮುಂದಿನ 6 ತಿಂಗಳಿಗಾಗಿ ಪಡಿತರ ಸಂಗ್ರಹಿಸುತ್ತಿರುವ ರೈತ ಮಹಿಳೆಯರು


