ದೆಹಲಿ ರೈತ ಹೋರಾಟವನ್ನು ಬೆಂಬಲಿಸಿ ರಾಜ್ಯದ ವಿವಿಧ ರೈತ ಸಂಘಟನೆಗಳು ಇಂದು ಕರ್ನಾಟಕದಲ್ಲೂ ಸಹ ಟ್ರ್ಯಾಕ್ಟರ್ ರ‍್ಯಾಲಿಗೆ ಕರೆ ನೀಡಿವೆ. ಪರಿಣಾಮ ದೆಹಲಿಯಷ್ಟೇ ಬೆಂಗಳೂರಿನಲ್ಲೂ ರೈತ ಹೋರಾಟದ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇನ್ನೂ ಗಣರಾಜ್ಯೋತ್ಸವ ದಿನವಾದ ಇಂದು ರೈತರು ರಾಜ್ಯ ರಾಜಧಾನಿಯಲ್ಲೂ ಟ್ರ್ಯಾಕ್ಟರ್ ರ‍್ಯಾಲಿ ಆಯೋಜಿಸಿರುವ ಬೆನ್ನಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನೆಗೆ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ.
ರೈತ ಮುಖಂಡರು ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ಘೋಷಿಸುತ್ತಿದ್ದಂತೆ, ಬೆಂಗಳೂರಿಗೆ ಹೊಂದಿಕೊಂಡಿರುವ ತುಮಕೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು ಕೊಡಗು ಸೇರಿದಂತೆ ಅನೇಕ ಕಡೆಗಳಿಂದ ರೈತರು ಈಗಾಗಲೇ ಟ್ರ್ಯಾಕ್ಟರ್ ಸಮೇತ ಬೆಂಗಳೂರನ್ನು ಪ್ರವೇಶಿಸಲು ಮುಂದಾಗಿದ್ದಾರೆ. ಆದರೆ, ಅವರನ್ನು ನಗರದ ಗಡಿ ಭಾಗಗಗಳಲ್ಲೇ ತಡೆದು ನಿಲ್ಲಿಸಲಾಗಿದೆ.
ವಾಸ್ತವವಾಗಿ ಕೇಂದ್ರ ಕೃಷಿ ಕಾಯ್ದೆಗಳಿಗಿಂತ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ “ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ” ಮತ್ತು “ಎಪಿಎಂಸಿ ಕಾಯ್ದೆ” ವಿರುದ್ಧ ರಾಜ್ಯದ ರೈತರಿಗೆ ತೀವ್ರ ಆಕ್ರೋಶವಿದೆ. ಇದೇ ಕಾರಣಕ್ಕೆ ರೈತ ಎರಡು ತಿಂಗಳ ಹಿಂದೆಯೇ ಈ ಕಾಯ್ದೆಗಳನ್ನು ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗಿತ್ತು.
ಇನ್ನೂ ಇಂದು ಕೇಂದ್ರ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ರಸ್ತೆಗಿಳಿಯುತ್ತಿರುವ ಪರಿಣಾಮ ರೈತರ ಹೋರಾಟ ಮತ್ತಷ್ಟು ಉಗ್ರವಾಗಿರಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆಗೂ ಮುತ್ತಿಗೆ ಹಾಕುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಹೀಗಾಗಿ ಕುಮಾರಕೃಪ ರಸ್ತೆಯಲ್ಲಿರುವ ಮುಖ್ಯಮಂತ್ರಿ ನಿವಾಸಕ್ಕೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. 6 ರಿಂದ 8 ಬಿಎಂಟಿಸಿ ಬಸ್ಸುಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಪೊಲೀಸರನ್ನು ಕರೆತಂದು ಬಿಎಸ್ವೈ ಮನೆ ಸುತ್ತ ಬಂದೋಬಸ್ತ್ಗೆ ನಿಲ್ಲಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.


