Homeಸಿನಿಮಾಕ್ರೀಡೆಮಾನವ ಹಕ್ಕುಗಳ ಉಲ್ಲಂಘನೆ ಆರೋಪಗಳ ನಡುವೆಯೇ ಏರುತ್ತಿರುವ ಫಿಫಾ ಫೀವರ್

ಮಾನವ ಹಕ್ಕುಗಳ ಉಲ್ಲಂಘನೆ ಆರೋಪಗಳ ನಡುವೆಯೇ ಏರುತ್ತಿರುವ ಫಿಫಾ ಫೀವರ್

- Advertisement -
- Advertisement -

ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡಾ ಹಬ್ಬವಾದ ಫಿಫಾ 2022 ಫುಟ್‌ಬಾಲ್ ವಿಶ್ವಕಪ್‌ಗೆ ಕತಾರ್‌ನಲ್ಲಿ ವಿದ್ಯುಕ್ತ ಚಾಲನೆ ದೊರೆತಿದೆ. ವಿಶ್ವದ ಬಲಿಷ್ಠ 32 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದರೆ, ತಮ್ಮ ನೆಚ್ಚಿನ ತಂಡದ ಗೆಲುವಿಗಾಗಿ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಕ್ರಿಕೆಟನ್ನು ಉಸಿರಾಡುವ ಭಾರತದಲ್ಲೂ ಫುಟ್‌ಬಾಲ್ ಫೀವರ್ ದಿನೇದಿನೇ ಏರುತ್ತಲೇ ಇದೆ. ಕೋಲ್ಕತ್ತಾದ ಬೀದಿಗಳಲ್ಲಿ ಫುಟ್‌ಬಾಲ್ ದಂತಕಥೆಗಳಾದ ಲಿಯೋನಲ್ ಮೆಸ್ಸಿ, ಕ್ರಿಸ್ಟಿಯಾನೋ ರೊನಾಲ್ಡೋ, ನೇಯ್ಮರ್ ಚಿತ್ರಗಳು ರಾರಾಜಿಸುತ್ತಿದ್ದರೆ, ಕೇರಳದಲ್ಲಂತೂ ರಸ್ತೆಗಳ ಇಕ್ಕೆಲಗಳಲ್ಲಿ ಜನಪ್ರಿಯ ಫುಟ್‌ಬಾಲ್ ಆಟಗಾರರ ಕಟೌಟ್‌ಗಳು, ನೆಚ್ಚಿನ ತಂಡಗಳ ಬಾವುಟಗಳು ಕ್ರಿಕೆಟನ್ನೂ ನಾಚಿಸುತ್ತಿವೆ. ಏಕೆಂದರೆ ಫುಟ್‌ಬಾಲ್ ಎಂಬ ಆಟದ ಗಮ್ಮತ್ತೆ ಅಂಥದ್ದು.

ಜಗತ್ತಿನ ಫುಟ್‌ಬಾಲ್ ಕ್ರೀಡೆಯ ಅತ್ಯುನ್ನತ ಪ್ರಶಸ್ತಿ ಫಿಫಾ. ಇದನ್ನು ಸಾಮಾನ್ಯವಾಗಿ ವಿಶ್ವಕಪ್ ಫುಟ್‌ಬಾಲ್ ಎಂದೇ ಕರೆಯುವುದು ವಾಡಿಕೆ. ಈ ಪಂದ್ಯಾವಳಿಯು ಫಿಫಾ (ಅಂತಾರಾಷ್ಟ್ರೀಯ ಫುಟ್‌ಬಾಲ್ ಫೆಡರೇಷನ್) ಸದಸ್ಯ ರಾಷ್ಟ್ರಗಳ ಪುರುಷರ ತಂಡಗಳ ನಡುವೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ. 1930ರಲ್ಲಿ ಮೊಟ್ಟಮೊದಲ ಫಿಫಾ ವಿಶ್ವಕಪ್ ಟೂರ್ನಿಯನ್ನು ಆಯೋಜಿಸಲಾಗಿತ್ತು. 1940 ಮತ್ತು 1944ರಲ್ಲಿ ಎರಡನೇ ಮಹಾಯುದ್ಧದ ಕಾರಣಕ್ಕೆ ಈ ಟೂರ್ನಿಯನ್ನು ಆಯೋಜಿಸಿರಲಿಲ್ಲ. ಉಳಿದಂತೆ ವರ್ಷದಿಂದ ವರ್ಷಕ್ಕೆ ಈ ಕ್ರೀಡಾಕೂಟದ ಜನಪ್ರಿಯತೆ ಮತ್ತಷ್ಟು ಹೆಚ್ಚುತ್ತಲೇ ಇದೆ.

ಇದೇ ಕಾರಣಕ್ಕೆ ವಿಶ್ವದಲ್ಲೇ ಅತಿ ಹೆಚ್ಚಿನ ಜನ ದೂರದರ್ಶನದ ಮೂಲಕ ವೀಕ್ಷಿಸುವ ಕ್ರೀಡಾಕೂಟ ಎಂಬ ಶ್ರೇಯಕ್ಕೆ ಫಿಫಾ ಪಾತ್ರವಾಗಿದೆ. 2018 ವಿಶ್ವಕಪ್ ರಷ್ಯಾದಲ್ಲಿ ನಡೆದಿತ್ತು. ಇಡೀ ಕೂಟದ ಉದ್ದಕ್ಕೂ 64 ಪಂದ್ಯಗಳು ನಡೆದಿದ್ದವು. ಈ ಪಂದ್ಯಗಳನ್ನು ಟಿವಿಯಲ್ಲಿ ದಾಖಲೆಯ 191 ಮಿಲಿಯನ್ ಜನ ವೀಕ್ಷಿಸಿದ್ದರು ಎಂದರೆ ಫುಟ್‌ಬಾಲ್‌ನ ಜನಪ್ರಿಯತೆ ಎಂಥದ್ದು ಎಂಬುದು ಅರ್ಥವಾಗುತ್ತದೆ. ಪ್ರಸ್ತುತ ವರ್ಷ ಈ ದಾಖಲೆ ಮತ್ತಷ್ಟು ಸುಧಾರಿಸಲಿದೆ ಎಂದು ಅಂದಾಜಿಸಲಾಗಿದೆ. ಈ ವರ್ಷದ ಟೂರ್ನಿಯಲ್ಲಿ ವಿಶ್ವಕಪ್ ಗೆದ್ದ ತಂಡಕ್ಕೆ 42 ಮಿಲಿಯನ್ ಡಾಲರ್ ದೊರೆತರೆ, ಫೈನಲ್‌ನಲ್ಲಿ ಸೋತ ತಂಡಕ್ಕೆ 30 ಮಿಲಿಯನ್ ಡಾಲರ್ ಮತ್ತು ಪ್ರಶಸ್ತಿ ಲಭಿಸಲಿದೆ. ಇನ್ನೂ ಈ ಟೂರ್ನಿಯಲ್ಲಿ ಫಿಫಾ 5.31 ಟ್ರಿಲಿಯನ್ ಲಾಭ ಗಳಿಸಿದರೆ, ಆತಿಥೇಯ ಕತಾರ್ 1.27 ಲಕ್ಷ ಕೋಟಿ ಲಾಭ ನೋಡಲಿದೆ.

ಫುಟ್‌ಬಾಲ್ ಇತಿಹಾಸ ಏನು?

ಚೆಂಡನ್ನು ಕಾಲಿನಿಂದ ಒದೆಯುವ ಮೂಲಕ ಗೋಲು ಗಳಿಸುವ ಫುಟ್‌ಬಾಲ್ ಆಟಕ್ಕೆ ಯೂರೋಪ್‌ನಷ್ಟೇ ಪ್ರಾಚೀನ ಇತಿಹಾಸವಿದೆ. ಯೂರೋಪ್ ದೇಶಗಳ ಪಾಲಿಗೆ ಫುಟ್‌ಬಾಲ್ ಎಂಬುದು ಅಲ್ಲಿನ ಪರಂಪರೆ ಮತ್ತು ಪ್ರಾಚೀನ ಸಂಪ್ರದಾಯಗಳ ಭಾಗ. ಹಿಂದಿನಿಂದಲೂ ಅಲ್ಲಿನ ರೈತರು ಕುಟುಂಬಸಮೇತರಾಗಿ ಈ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದ್ದರು ಎಂದು ಅಲ್ಲಿನ ಇತಿಹಾಸದ ಪುಟಗಳಲ್ಲಿ ಉಲ್ಲೇಖಿಸಲಾಗಿದೆ. 18-19ನೇ ಶತಮಾನಗಳಲ್ಲಿ ಯೂರೋಪಿನ ಇಂಗ್ಲಿಷ್ ಪಬ್ಲಿಕ್ ಶಾಲೆಗಳಲ್ಲಿ ಹಲವಾರು ಬದಲಾವಣೆಗಳೊಂದಿಗೆ ಈ ಆಟವನ್ನು ಸ್ಪರ್ಧಾತ್ಮಕಗೊಳಿಸಲಾಯಿತು. ತದನಂತರದ ಕಾಲದಲ್ಲಿ ಬ್ರಿಟಿಷರು ಈ ಆಟವನ್ನು ತಮ್ಮ ವಸಾಹತು ರಾಷ್ಟ್ರಗಳಿಗೂ ಪರಿಚಯಿಸಿದರು. ಈ ಮೂಲಕ ಫುಟ್‌ಬಾಲ್ ಮತ್ತಷ್ಟು ಜನಪ್ರಿಯವಾಯಿತು. ಇಂದು ವಿಶ್ವದಲ್ಲೇ ಅತಿಹೆಚ್ಚು ಜನಪ್ರಿಯತೆಯನ್ನು ಹೊಂದಿರುವ ಕ್ರೀಡೆಗಳ ಪಟ್ಟಿಯಲ್ಲಿ ಫುಟ್‌ಬಾಲ್‌ಗೆ ಅಗ್ರಸ್ಥಾನ ಎಂದರೆ ತಪ್ಪಾಗಲಾರದು.

ಇದನ್ನೂ ಓದಿ: ಫಿಫಾ ಪುಟ್ಬಾಲ್: ಏಕೈಕ ಗೋಲಿನಿಂದ ಗೆದ್ದ ಸ್ವಿಜರ್ಲ್ಯಾಂಡ್ – ಗೋಲು ಬಾರಿಸಿದ ಬ್ರೀಲ್ ಎಂಬೋಲೊ ಸಂಭ್ರಮಿಸಲಿಲ್ಲವೇಕೆ?

ಫಿಫಾ ವಿಶ್ವಕಪ್

ಕ್ರೀಡಾಲೋಕದಲ್ಲಿ ಒಲಿಂಪಿಕ್ಸ್‌ಗೆ ತನ್ನದೇ ಆದ ಸ್ಥಾನವಿದೆ. ಆದರೆ 1904ರಲ್ಲಿ ಸ್ಥಾಪಿತವಾದ ಫಿಫಾ ಒಲಿಂಪಿಕ್ಸ್‌ನ ಹೊರಗೆ ಒಂದು ಜಾಗತಿಕ ಮಟ್ಟದ ಫುಟ್‌ಬಾಲ್ ಕ್ರೀಡಾಕೂಟವನ್ನು ಆಯೋಜಿಸಲು ಕ್ರಮಕೈಗೊಂಡಿತ್ತು. ಆದರೆ ಆರಂಭದ ಯತ್ನಗಳು ಸಫಲವಾಗಲಿಲ್ಲ. ಬ್ರಿಟಿಷ್ ಫುಟ್‌ಬಾಲ್ ಅಸೋಸಿಯೇಷನ್ ಮತ್ತು ಫಿಫಾದ ನಡುವೆ ಸಾಕಷ್ಟು ತಿಕ್ಕಾಟ ನಡೆದು ಕೊನೆಗೆ ಫಿಫಾ ಒಲಿಂಪಿಕ್ ಫುಟ್‌ಬಾಲ್‌ಗೆ ಮಾನ್ಯತೆ ನೀಡಿತು, ಅಲ್ಲದೆ 1920ರ ಒಲಿಂಪಿಕ್ಸ್‌ನಲ್ಲಿ ಫುಟ್‌ಬಾಲ್ ಪಂದ್ಯಾವಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿತು. ಹೀಗೆ ನಿಜವಾದ ಅರ್ಥದಲ್ಲಿ ಅಂತಾರಾಷ್ಟ್ರೀಯ ಫುಟ್‌ಬಾಲ್ ಪಂದ್ಯಾವಳಿಯು ಮೊದಲ ಬಾರಿಗೆ 1920ರಲ್ಲಿ ಒಲಿಂಪಿಕ್ಸ್‌ನಲ್ಲಿ ಜರುಗಿತು.

ತರುವಾಯ ಫಿಫಾ ತನ್ನದೇ ಆದ ವಿಶ್ವ ಫುಟ್‌ಬಾಲ್ ಚಾಂಪಿಯನ್‌ಶಿಪ್ ನಡೆಸುವ ತನ್ನ ಹಳೆಯ ಯೋಜನೆಗೆ ಮತ್ತೆ ಜೀವ ತುಂಬಿ 1930ರಲ್ಲಿ ಉರುಗ್ವೆಯಲ್ಲಿ ಪ್ರಪ್ರಥಮ ಫುಟ್‌ಬಾಲ್ ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸಲು ಮುಂದಾಯಿತು. 1924 ಮತ್ತು 1928ರ ಒಲಿಂಪಿಕ್ಸ್‌ನಲ್ಲಿ ಉರುಗ್ವೆ ತಂಡವು ಫುಟ್‌ಬಾಲ್ ಸ್ವರ್ಣಪದಕ ಪಡೆದಿತ್ತು. ಅಲ್ಲದೇ ಉರುಗ್ವೆಯು 1930ರಲ್ಲಿ ತನ್ನ ಸ್ವಾತಂತ್ರ್ಯೋತ್ಸವದ ಶತಮಾನವನ್ನು ಆಚರಿಸಲು ಮುಂದಾಗಿತ್ತು. ಹೀಗಾಗಿ ಸಹಜವಾಗಿಯೇ ಮೊದಲ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯನ್ನು ಆಯೋಜಿಸುವ ಅವಕಾಶವನ್ನು ಯೂರೋಪ್ ದೇಶಗಳ ಕಡು ವಿರೋಧದ ನಡುವೆಯೂ ಉರುಗ್ವೆ ಪಡೆದುಕೊಂಡಿತು. ಈ ಪಂದ್ಯಾವಳಿಯ ಕನಸನ್ನು ನನಸಾಗಿಸುವಲ್ಲಿ ಫಿಫಾದ ಅಂದಿನ ಅಧ್ಯಕ್ಷ ಜೂಲ್ಸ್ ರಿಮೆ ಪ್ರಧಾನ ಪಾತ್ರ ವಹಿಸಿದ್ದರು. ನಂತರ ನಡೆದದ್ದೆಲ್ಲವೂ ಇತಿಹಾಸ.

ವಿವಾದದಲ್ಲಿ ಫಿಫಾ ಮತ್ತು ಕತಾರ್

ಫಿಫಾ 2014ರ ವಿಶ್ವಕಪ್ ಟೂರ್ನಿ ನಡೆಯುತ್ತಿರುವಾಗಲೇ 2018ರ ವಿಶ್ವಕಪ್ ಆತಿಥ್ಯವನ್ನು ರಷ್ಯಾಗೆ ಹಾಗೂ 2022ರ ವಿಶ್ವಕಪ್ ಆತಿಥ್ಯವನ್ನು ಕತಾರ್ ದೇಶಕ್ಕೆ ನೀಡಲಾಗಿತ್ತು. ಕತಾರ್ ಹಿಂಬಾಗಿಲಿನ ಮೂಲಕ ತನ್ನ ಹಣ ಬಲದ ಸಹಾಯದಿಂದಲೇ ಈ ಆತಿಥ್ಯವನ್ನು ಗಳಿಸಿದೆ ಎಂಬ ಆರೋಪ ಅಂದಿನಿಂದಲೂ ಚಾಲ್ತಿಯಲ್ಲಿದೆ. ಫಿಫಾ ವಿಶ್ವಕಪ್ ಆಯೋಜಿಸಿದ ಮೊದಲ ಅರಬ್ ರಾಷ್ಟ್ರ ಎಂಬ ಶ್ರೇಯಕ್ಕೆ ಕತಾರ್ ಪಾತ್ರವಾಗಿರುವುದೇನೋ ನಿಜ. ಆದರೆ, ವಿವಾದಗಳು ಮಾತ್ರ ಸದ್ಯಕ್ಕಂತೂ ಕತಾರ್ ಮತ್ತು ಫಿಫಾವನ್ನು ಬೆಂಬಿಡದೆ ಕಾಡುತ್ತಿದೆ.

ಕತಾರ್ ದೇಶವು 2013ರಲ್ಲಿ ದೋಹಾ ವಿಶ್ವಕಪ್ ಆಯೋಜಿಸುವ ಬಿಡ್‌ಅನ್ನು ಗೆದ್ದಾಗಲೇ, ಹಲವು ಮಾನವ ಹಕ್ಕುಗಳ ಸಂಘಟನೆಗಳು ಇದನ್ನು ವಿರೋಧಿಸಿದ್ದವು. ಕ್ರೀಡೆ ಎಂಬುದು ಶಾಂತಿ, ಸಮಾನತೆ ಮತ್ತು ಸೌಹಾರ್ದತೆಯ ಸಂಕೇತ. ಆದರೆ, ಮಾನವ ಹಕ್ಕುಗಳ ವಿಚಾರದಲ್ಲಿ ಕಳಪೆ ಸಾಧನೆ ಹೊಂದಿರುವ ಕತಾರ್‌ಗೆ ದೋಹಾ ವಿಶ್ವಕಪ್ ಆಯೋಜನೆಯ ಅವಕಾಶ ನೀಡಿದ್ದು ಸರಿಯಲ್ಲ ಎಂದು ವಾದಿಸಿದ್ದವು. ಅದರಲ್ಲೂ ವಿಶೇಷವಾಗಿ LGBT ಹಕ್ಕುಗಳು, ನಾಗರಿಕ ಸ್ವಾತಂತ್ರ್ಯ ಮತ್ತು ವಲಸೆ ಕಾರ್ಮಿಕರ ಚಿಕಿತ್ಸೆ ವಿಚಾರದಲ್ಲಿ ಕತಾರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಕಳಪೆ ದಾಖಲೆ ಹೊಂದಿದೆ. ಹೀಗಾಗಿ ಕ್ರೀಡಾಕೂಟದ ಆಯೋಜನೆ ಅವಕಾಶವನ್ನು ಕತಾರ್‌ಗೆ ನೀಡಬಾರದು ಎಂಬ ವಾದ ಮುನ್ನೆಲೆಗೆ ಬಂದಿತ್ತು. ಆದರೆ, ಈ ವಿವಾದ ತಣ್ಣಗಾಗುವ ಮೊದಲೆ ಫಿಫಾ ಆಯೋಜಿಸುವ ಅವಕಾಶವೂ ಕತಾರ್ ಪಾಲಾಗಿದ್ದು ಕ್ರೀಡಾ ಅಭಿಮಾನಿಗಳನ್ನು ಕೆರಳಿಸಿತ್ತು.

ಇದನ್ನೂ ಓದಿ: ಫಿಫಾ ವಿಶ್ವಕಪ್‌ನಲ್ಲಿ ಏಷ್ಯಾ ದೇಶಗಳ ಗೆಲುವು: ಫೈನಲ್‌ವರೆಗೆ ಸಾಗಬೇಕಾದ ಹಾದಿ ಹೀಗಿದೆ

ಹೀಗಾಗಿ ಫಿಫಾ ಮತ್ತು ಫುಟ್‌ಬಾಲ್ ಅಭಿಮಾನಿಗಳು ಕತಾರ್ ವಿಶ್ವಕಪ್ ಆಯೋಜಿಸುವ ಅವಕಾಶ ನೀಡಿದ್ದಕ್ಕೆ ಸಾಕಷ್ಟು ಆಕ್ರೋಶ ಹೊರಹಾಕಿದ್ದರು. ಅಲ್ಲದೆ, ಕಳೆದ ನಾಲ್ಕು ವರ್ಷಗಳಿಂದ ಎಲ್ಲೇ ಫುಟ್‌ಬಾಲ್ ಪಂದ್ಯಾವಳಿ ನಡೆದರೂ ಅಭಿಮಾನಿಗಳು ಬಾಯ್ಕಾಟ್‌ಕತಾರ್2022 ಎಂಬ ಬ್ಯಾನರ್‌ಗಳನ್ನು ಹಿಡಿದು ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದರು. ಆದರೂ, ಫಿಫಾ ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ.

ಪರಿಣಾಮ ಕತಾರ್‌ನ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಖಂಡಿಸಿ ಆಸ್ಟ್ರೇಲಿಯಾ ತಂಡವು ಈಗಾಗಲೇ ವೀಡಿಯೊ ಒಂದನ್ನು ಬಿಡುಗಡೆ ಮಾಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿದೆ. ಡೆನ್ಮಾರ್ಕ್ ತಂಡ ಇಡೀ ಟೂರ್ನಿಯ ಉದ್ದಕ್ಕೂ ಕಪ್ಪು ಬಣ್ಣದ ಪಟ್ಟಿ ಧರಿಸಿ ಆಡಲು ನಿರ್ಧರಿಸಿದೆ. ಇಂಗ್ಲೆಂಡ್‌ನ ಸ್ಟಾರ್ ಆಟಗಾರ ಹ್ಯಾರಿ ಕೇನ್ ಮತ್ತು ಯುರೋಪಿಯನ್ ತಂಡಗಳ ನಾಯಕರು ’ಒನ್‌ಲವ್’ ಆರ್ಮ್‌ಬ್ಯಾಂಡ್‌ಗಳನ್ನು ಧರಿಸಿ ಆಡುವುದಾಗಿ ತಿಳಿಸಿದ್ದಾರೆ. ಕತಾರ್‌ನಲ್ಲಿ ಮಾನವ ಹಕ್ಕುಗಳನ್ನು ದಮನಿಸಲಾಗುತ್ತಿದೆ ಎಂಬ ಕಾರಣಕ್ಕೆ ಪಾಪ್ ಸಂಗೀತ ಲೋಕದ ಖ್ಯಾತ ತಾರೆ ದುವಾ ಲಿಪಾ ಫಿಫಾ ಉದ್ಘಾಟನಾ ಸಮಾರಂಭದಲ್ಲಿ ತಾನು ಪ್ರದರ್ಶನ ನೀಡುವುದಿಲ್ಲ ಎಂದು ಫಿಫಾ ಅವಕಾಶವನ್ನು ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಶ್ವಕಪ್ ಗೆದ್ದ ತಂಡಗಳಿವು!

1930 ರಿಂದ 2018ರ ನಡುವೆ ಒಟ್ಟು 21 ಬಾರಿ ವಿಶ್ವಕಪ್ ಫುಟ್‌ಬಾಲ್ ಟೂರ್ನಿ ಜರುಗಿದೆ. ಈ ಪೈಕಿ ಖ್ಯಾತ ಬ್ರೆಜಿಲ್ ತಂಡ 5 ವಿಶ್ವಕಪ್‌ನಲ್ಲಿ ಗೆಲ್ಲುವ ಮೂಲಕ ಫುಟ್‌ಬಾಲ್ ಲೋಕದಲ್ಲಿ ಪಾರಮ್ಯ ಸಾಧಿಸಿದೆ. ಇದು ತಂಡವೊಂದರ ಅತಿಹೆಚ್ಚು ಗೆಲುವು. ಇನ್ನೂ ಜರ್ಮನಿ ಮತ್ತು ಇಟಲಿ ತಲಾ 4 ಬಾರಿ ಹಾಗೂ ದಕ್ಷಿಣ ಅಮೆರಿಕದ ಪುಟ್ಟ ರಾಷ್ಟ್ರ ಉರುಗ್ವೆ, ಅರ್ಜೆಂಟೀನಾ ಮತ್ತು ಫ್ರಾನ್ಸ್ ಎರಡು ಬಾರಿ ವಿಶ್ವಕಪ್‌ಅನ್ನು ತನ್ನ ಮುಡಿಗೇರಿಸಿಕೊಂಡಿವೆ. ಇಂಗ್ಲೆಂಡ್ ಮತ್ತು ಸ್ಪೇನ್ ದೇಶಗಳು ತಲಾ ಒಂದು ಬಾರಿ ವಿಶ್ವಕಪ್ ವಿಜಯಿಗಳಾಗಿವೆ.

ಫುಟ್‌ಬಾಲ್ ಅಂದರೆ ಮೆಸ್ಸಿ, ರೊನಾಲ್ಡೋ ಅಷ್ಟೇ ಅಲ್ಲ

ಭಾರತದ ಬಹುಸಂಖ್ಯಾತರ ಮಟ್ಟಿಗೆ ಫುಟ್‌ಬಾಲ್ ಎಂದ ತಕ್ಷಣ ತಟ್ಟನೆ ನೆನಪಾಗುವುದು ಅರ್ಜೆಂಟೀನಾದ ಲಿಯೊನೆಲ್ ಮೆಸ್ಸಿ, ಪೋರ್ಚುಗೀಸ್‌ನ ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಬ್ರೆಜಿಲ್ ದೇಶದ ನೇಯ್ಮರ್ ಹೆಸರು ಮಾತ್ರ. ಆದರೆ, ಜಾಗತಿಕ ಫುಟ್‌ಬಾಲ್‌ನಲ್ಲಿ ಪ್ರಸ್ತುತ ಇವರಿಗಿಂತ ಸದ್ದು ಮಾಡುತ್ತಿರುವ, ತಂಡದ ಪಾಲಿಗೆ ಅತಿಮುಖ್ಯವಾಗಿರುವ ಹಾಗೂ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಹಲವಾರು ಆಟಗಾರರಿದ್ದಾರೆ.

ಫ್ರಾನ್ಸ್ ದೇಶಕ್ಕಾಗಿ ಆಡುತ್ತಿರುವ ಕೈಲಿಯನ್ ಎಂಬಪ್ಪೆ ಪ್ರಸ್ತುತ ವಿಶ್ವದ ನಂಬರ್ ೧ ಆಟಗಾರ. ಫಾರ್ವರ್ಡ್ ಪೊಸಿಷನ್‌ನಲ್ಲಿ ಆಡುವ ಕೈಲಿಯನ್ ಎಂಬಪ್ಪೆ ಪಂದ್ಯದ ಫಿನಿಶರ್ ಆಗಿ ಸಾಕಷ್ಟು ಹೆಸರು ಮಾಡಿದ್ದಾರೆ. ಫ್ರಾನ್ಸ್ ದೇಶಕ್ಕಾಗಿ ಫಾರ್ವರ್ಡ್ ಪೊಸಿಷನ್‌ನಲ್ಲೇ ಆಡುವ ಮತ್ತೋರ್ವ ಆಟಗಾರ ಕರೀಮ್ ಬೆಂಜೆಮಾ ವಿಶ್ವದ ನಂಬರ್ ೨ ಶ್ರೇಯಾಂಕಿತ ಆಟಗಾರ.

ಇನ್ನೂ ಬೆಲ್ಜಿಯಂ ದೇಶದ ಆಟಗಾರರಾದ ಕೆವಿನ್ ಡಿ ಬ್ರೂಯ್ನೆ ಮತ್ತು ಥಿಬೌಟ್ ಕೋರ್ಟೊಯಿಸ್, ಪೋಲೆಂಡ್‌ನ ರಾಬರ್ಟ್ ಲೆವಾಂಡೋಸ್ಕಿ, ಕ್ರೊವೇಶಿಯಾದ ಲ್ಯೂಕ್ ಮೊಡ್ರಿಕ್, ಬ್ರೆಜಿಲ್‌ನ ವಿನಿಸಿಯಸ್ ಜೂನಿಯರ್, ಸೆನೆಗಲ್‌ನ ಸೆಡಿಯೋ ಮಾನೆ, ಇಂಗ್ಲೆಂಡ್‌ನ ಹ್ಯಾರಿ ಕೇನ್ ಸೇರಿದಂತೆ ಹಲವು ಆಟಗಾರರು ಯೂರೋಪಿನ ಶ್ರೀಮಂತ ಫುಟ್‌ಬಾಲ್ ಲೀಗ್‌ಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಈ ಆಟಗಾರರ ಪ್ರದರ್ಶನದ ಮೇಲೂ ಫುಟ್‌ಬಾಲ್ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆಗಳಿವೆ.

ಫಿಫಾ ಟೂರ್ನಿ ವೀಕ್ಷಣೆ ಹೇಗೆ?

ಫಿಫಾ ವಿಶ್ವಕಪ್ 2022 ಪಂದ್ಯಗಳನ್ನು ಭಾರತದ ಹೊಸ ಪ್ರೀಮಿಯರ್ ಸ್ಪೋರ್ಟ್ಸ್ ನೆಟ್ವರ್ಕ್ ವಯಾಕಾಮ್18ನ ಸ್ಪೋರ್ಟ್ಸ್18 ಮತ್ತು ಸ್ಪೋರ್ಟ್ಸ್18 ಹೆಚ್‌ಡಿ ಟಿವಿ ಚಾನೆಲ್‌ಗಳಲ್ಲಿ ವೀಕ್ಷಿಸಬಹುದಾಗಿದೆ. ಭಾರತದಲ್ಲಿ ಈ ಚಾನೆಲ್‌ಗಳನ್ನು ಹೊರತುಪಡಿಸಿ ಜಿಯೋ ಸಿನಿಮಾ ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಉಚಿತ ಲೈವ್ ಸ್ಟ್ರೀಮಿಂಗ್ ಲಭ್ಯವಿದೆ.

ಅಶೋಕ್ ಕುಮಾರ್

ಅಶೋಕ್ ಕುಮಾರ್
ಮೂಲತಃ ಭದ್ರಾವತಿಯವರಾದ ಅಶೋಕ್, ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವಿ ಯುವ ಪತ್ರಕರ್ತರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...