ಐದು ಬಾರಿ ವಿಶ್ವಚಾಂಪಿಯನ್ ಆಗಿ ಮೆರೆದಿದ್ದ ಬಲಿಷ್ಠ ಬ್ರೆಜಿಲ್ ತಂಡ ಕ್ರೊಯೇಷಿಯಾ ವಿರುದ್ಧ ಅಷ್ಟು ಸುಲಭಕ್ಕೆ ಸೋಲುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಫುಟ್‌ಬಾಲ್ ದಂತಕಥೆ ಪೀಲೆ ದಾಖಲೆ ಮುರಿದು ಮುನ್ನುಗ್ಗುತ್ತಿದ್ದ ಬ್ರೆಜಿಲ್‌ನ ಸ್ಟಾರ್ ಆಟಗಾರ ನೇಯ್ಮರ್ ಕಣ್ಣೀರಿನೊಂದಿಗೆ ಅಂಗಳದಿಂದ ಹೊರನಡೆದ ಗಳಿಗೆಯನ್ನು ಫುಟ್‌ಬಾಲ್ ಜಗತ್ತು ಇನ್ನಷ್ಟು ದಶಕಗಳ ಕಾಲ ನೆನಪಿಟ್ಟುಕೊಳ್ಳಲಿದೆ. ಇನ್ನು ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬನಾದ ಕ್ರಿಸ್ಟಿಯಾನೊ ರೊನಾಲ್ಡೋ ಸಾರಥ್ಯದ ಪೋರ್ಚುಗಲ್ ಈ ವರ್ಷದ ಫೇವರಿಟ್ ತಂಡವಾಗಿತ್ತು. ಈ ತಂಡ ವಿಶ್ವಕಪ್ ಗೆಲ್ಲಲಿದೆ ಎಂದೇ ಹಲವರು ಹೇಳುತ್ತಿದ್ದರು. ಆದರೆ, ಸುಲಭ ತುತ್ತು ಎಂದೇ ಪರಿಗಣಿಸಲಾಗಿದ್ದ ಆಫ್ರಿಕಾದ ಪುಟ್ಟ ರಾಷ್ಟ್ರ ಮೊರೊಕ್ಕೊ ವಿರುದ್ಧ ಪೋರ್ಚುಗಲ್‌ಗೆ ಸೋಲಾದದ್ದು ಮತ್ತೊಂದು ಅಚ್ಚರಿಯ ಫಲಿತಾಂಶ. ಅಷ್ಟೇ ಅಲ್ಲ ಪಂದ್ಯದ ದೀರ್ಘಾವಧಿ ರೊನಾಲ್ಡೋ ಅಂಗಳದಿಂದ ಹೊರಗೆ ಉಳಿದದ್ದು ಏಕೆ ಎಂಬುದೂ ಹಲವು ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗದೆ ಹೋದ ಸಂಗತಿ!

ಈ ಎಲ್ಲ ಅಚ್ಚರಿಗಳ ನಡುವೆ ಇಡೀ ಜಗತ್ತು ಕುತೂಹಲದಿಂದ ಎದುರು ನೋಡುತ್ತಿದ್ದ ಫಿಫಾ ಫುಟ್‌ಬಾಲ್ ವಿಶ್ವಕಪ್ 2022 ಕೊನೆಗೂ ಅಂತಿಮ ಘಟ್ಟದತ್ತ ಹೆಜ್ಜೆ ಇಟ್ಟಿದೆ. ಡಿಸೆಂಬರ್ 18ರ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಮೊದಲ ಸೆಮಿಫೈನಲ್‌ನಲ್ಲಿ ಕ್ರೊಯೇಷಿಯಾ ಮಣಿಸಿರುವ ಅರ್ಜೆಂಟೀನಾ ಮತ್ತು ಎರಡನೇ ಸೆಮಿಫೈನಲ್ ನಲ್ಲಿ ಮೊರೊಕ್ಕೋ ಮಣಿಸಿದ ಫ್ರಾನ್ಸ್ ಫೈನಲ್ ತಲುಪಿವೆ. ಹೀಗಾಗಿ ಫೈನಲ್ ನಲ್ಲಿ ಅರ್ಜೆಂಟೀನಾ ಗೆಲ್ಲುವುದೇ ಅಥವಾ ಫ್ರಾನ್ಸ್ ಪಾರಮ್ಯ ಮೆರಯುವುದೇ ಎಂಬ ಪ್ರಶ್ನೆ ಈಗಾಗಲೇ ಫುಟ್‌ಬಾಲ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದೆ.
ಅರ್ಜೆಂಟೀನಾ ಮತ್ತು ಫ್ರಾನ್ಸ್ ತಲಾ ಎರಡು ಭಾರಿ ವಿಶ್ವಕಪ್ ಜಯಿಸಿದ ಇತಿಹಾಸ ಹೊಂದಿವೆ. ಈ ಬಾರಿ ಗೆದ್ದವರು ಮೂರನೇ ಬಾರಿ ವಿಶ್ವಕಪ್ ಎತ್ತಿ ಹಿಡಿದ ಖ್ಯಾತಿ ಪಡೆಯಲಿದ್ದಾರೆ. ಎಲ್ಲರ ಕಣ್ಣು ಅರ್ಜೆಂಟೀನಾದ ಮೆಸ್ಸಿ ಮತ್ತು ಫ್ರಾನ್ಸ್ ತಂಡದ ಎಂಬಾಪೆ ಮೇಲಿದೆ.
ಅರ್ಜೆಂಟೀನಾ ವರ್ಸಸ್ ಕ್ರೊಯೇಷಿಯಾ
ಕತಾರ್‌ನ ಲುಸೈಲ್ ಕ್ರೀಡಾಂಗಣದಲ್ಲಿ 88 ಸಾವಿರಕ್ಕೂ ಅಧಿಕ ಪ್ರೇಕ್ಷಕರ ಎದುರು ನಡೆದ ಮೊದಲ ಸೆಮಿ ಹೈವೋಲ್ಟೇಜ್ ಕದನದಲ್ಲಿ ಅರ್ಜೆಂಟೀನಾ ಕ್ರೊಯೇಷಿಯಾ ವಿರುದ್ಧ 3-0 ಅಂತರದಿಂದ ಗೆದ್ದು ಬೀಗಿತು. ಅರ್ಜೆಂಟೀನಾ ತಂಡದ ಸೆಮಿಫೈನಲ್ ಪ್ರವೇಶದ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಗುಂಪು ಹಂತದಲ್ಲಿ ಸೌದಿ ಅರೇಬಿಯಾ ವಿರುದ್ಧ ಮೊದಲ ಪಂದ್ಯದಲ್ಲಿಯೇ ಅಚ್ಚರಿಯ ಸೋಲಿನ ಆಘಾತ ಅನುಭವಿಸಿದ್ದ ಅರ್ಜೆಂಟೀನಾ ಆತ್ಮವಿಶ್ವಾಸವನ್ನು ಮರುಗಳಿಸಿಕೊಳ್ಳುವುದು ಸುಲಭವಿರಲಿಲ್ಲ. ಆದರೆ, ಬಳಿಕ ಲಿಯೊನೆಲ್ ಮೆಸ್ಸಿ ನಾಯಕತ್ವದಲ್ಲಿ ಈ ತಂಡ ಮತ್ತೆ ಪುಟಿದೆದ್ದು ಈವರೆಗೆ ಅದ್ಭುತ ಪ್ರದರ್ಶನ ನೀಡಿ ಫೈನಲ್ ತಲುಪಿದೆ.
ಸೌದಿ ಅರೇಬಿಯಾ ವಿರುದ್ಧ 1-2 ಗೋಲುಗಳ ಅಂತರದಲ್ಲಿ ಸೋಲು, ನಂತರ ಮೆಕ್ಸಿಕೋ ವಿರುದ್ಧ 2-0 ಅಂತರ ಗೆಲುವು, ಪೋಲೆಂಡ್ ವಿರುದ್ಧವೂ 2-0 ಅಂತರದ ಜಯದೊಂದಿಗೆ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 2-1 ಅಂತರದ ಗೆಲುವು ಪಡೆದು ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು.
ಇನ್ನೂ ನೆದರ್ಲೆಂಡ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯವನ್ನು ಅರ್ಜೆಂಟೀನಾ ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಗೆದ್ದದ್ದೇ ಮತ್ತಷ್ಟು ರೋಚಕ. ಈ ಪಂದ್ಯದಲ್ಲಿ ಉಭಯ ತಂಡಗಳು ಹೆಚ್ಚುವರಿ ಅವಧಿಯ ನಂತರವೂ 2-2 ಅಂತರದ ಸಮಬಲ ಸಾಧಿಸಿದ್ದವು. ಹೀಗಾಗಿ ಪೆನಾಲ್ಟಿ ಶೂಟ್‌ಔಟ್ ನಡೆಸಲಾಯಿತು. ಇದರಲ್ಲಿ ಅರ್ಜೆಂಟೀನಾ 4-3 ಗೋಲುಗಳಿಂದ ಗೆದ್ದು ಬೀಗಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತ್ತು. ಅರ್ಜೆಂಟೀನಾ 1986ರ ಬಳಿಕ ವಿಶ್ವಕಪ್ ಗೆದ್ದಿಲ್ಲ. ಮೆಸ್ಸಿ ಈ ಬಾರಿ ಮರಡೋನಾ ರೀತಿಯಲ್ಲೇ ತಂಡವನ್ನು ಮುನ್ನಡೆಸಿ ತನ್ನ ದೇಶಕ್ಕೆ ಪ್ರಶಸ್ತಿ ತಂದುಕೊಡುತ್ತಾರೆ ಎಂದೇ ಅಭಿಮಾನಗಳ ನಿರೀಕ್ಷೆ! ಅಲ್ಲದೆ ಈ ವಿಶ್ವಕಪ್ ಮೆಸ್ಸಿ ಪಾಲಿಗೆ ಕೊನೆಯ ವಿಶ್ವಕಪ್ ಆಗಿರಲಿದ್ದು, ಈ ಕಾರಣದಿಂದಾಗಿಯೂ ಅರ್ಜೆಂಟೀನಾ ತಂಡಕ್ಕೆ ಇದು ಪ್ರತಿಷ್ಠೆಯ ಕದನ. ವಿಶೇಷವೆಂದರೆ ಅರ್ಜೆಂಟೀನಾ ತಾನಾಡಿರುವ ಆರು ವಿಶ್ವಕಪ್‌ಗಳ ಸೆಮಿಫೈನಲ್‌ನಲ್ಲಿ ಇದುವರೆಗೆ ಒಂದೇ ಒಂದು ಸೋಲುಂಡಿಲ್ಲ. ಆರು ಬಾರಿ ಕೂಡ ಫೈನಲ್‌ಗೇರಿರುವ ದಾಖಲೆ ಬರೆದಿದೆ.
ಇತ್ತ ಕ್ವಾರ್ಟರ್ ಫೈನಲ್‌ನಲ್ಲಿ ಬ್ರೆಜಿಲ್ ವಿರುದ್ಧ ಗೆದ್ದು ಸೆಮಿ ತಲುಪಿದ್ದ ಕ್ರೊಯೇಷಿಯಾ ಬಲಿಷ್ಠ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಅರ್ಜೆಂಟೀನಾಕ್ಕೆ ಮೆಸ್ಸಿ ಇದ್ದಂತೆ, ಕ್ರೊಯೇಷಿಯಾಕ್ಕೆ ಲುಕಾ ಮೊಡ್ರಿಕ್ ಬಲವಿದೆ. ಕ್ವಾರ್ಟರ್‌ಫೈನಲ್‌ನ ಮೊದಲ ಪಂದ್ಯದಲ್ಲಿ ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಮಿಂಚಿದ ಕ್ರೊಯೇಷಿಯಾ ತಂಡ ಐದು ಬಾರಿಯ ಚಾಂಪಿಯನ್ ಬ್ರೆಜಿಲ್ ತಂಡಕ್ಕೆ ಆಘಾತ ನೀಡಿತ್ತು. 120 ನಿಮಿಷಗಳ ಕಾಲ ನಡೆದ ಕಾದಾಟದಲ್ಲಿ ಉಭಯ ತಂಡಗಳು 1-1ರ ಅಂತರದಲ್ಲಿ ಸಮಬಲ ಕಂಡಿತ್ತು. ಪೆನಾಲ್ಟಿ ಶೂಟ್‌ಔಟ್‌ನಲ್ಲಿ 4-2 ಅಂತರದಿಂದ ಗೆದ್ದ ಕ್ರೊಯೇಷಿಯಾ ಸೆಮೀಸ್‌ನಲ್ಲಿ ಸೋಲುಂಡಿತು.
ಫ್ರಾನ್ಸ್ ವರ್ಸಸ್ ಮೊರೊಕ್ಕೊ
ವಿಶ್ವಕಪ್ ತಂಡಗಳಲ್ಲೇ ಅತ್ಯಂತ ಆಕ್ರಮಣಕಾರಿ ತಂಡ ಎಂಬ ಹೆಗ್ಗಳಿಕೆಯೊಂದಿಗೆ ಕತಾರ್‌ಗೆ ಬಂದಿಳಿದಿದ್ದ ಫ್ರಾನ್ಸ್ ಆರಂಭದಿಂದಲೂ ಉತ್ತಮ ಪ್ರದರ್ಶನವನ್ನೇ ನೀಡಿತ್ತು. ಗ್ರೂಪ್ ಹಂತದ ಮೊದಲ ಪಂದ್ಯದಲ್ಲೇ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 4-1 ಅಂತರದಲ್ಲಿ ಗೆಲುವು ಸಾಧಿಸಿತ್ತು. ಎರಡನೇ ಪಂದ್ಯದಲ್ಲಿ ಡೆನ್ಮಾರ್ಕ್ ವಿರುದ್ಧ 2-1 ಅಂತರದಲ್ಲಿ ಗೆಲುವು ಸಾಧಿಸಿದ್ದ ಫ್ರಾನ್ಸ್ ತನ್ನ ಮೂರನೇ ಪಂದ್ಯದಲ್ಲಿ ಟ್ಯುನೀಷಿಯಾ ವಿರುದ್ಧ 1-0 ಅಂತರದಲ್ಲಿ ಮುಗ್ಗರಿಸಿತ್ತು. ಆದರೂ, ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೋಲೆಂಡ್ ವಿರುದ್ಧದ 3-1 ಅಂತರದ ಗೆಲುವು ಹಾಗೂ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸಾಧಿಸಿದ 2-1 ಗೆಲುವು ಮತ್ತು ಸೆಮಿಫೈನಲ್‌ನಲ್ಲಿ 2-0 ಅಂತರದಿಂದ ಮೊರಾಕ್ಕೊ ವಿರುದ್ಧ ಗೆಲುವು ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.
ಗ್ರೂಪ್ ಹಂತದಲ್ಲಿ ಕ್ರೊಯೇಷಿಯಾ ವಿರುದ್ಧ ಡ್ರಾ ಸಾಧಿಸುವ ಮೂಲಕವೇ ಅಭಿಯಾನ ಆರಂಭಿಸಿದ್ದ ಮೊರೊಕ್ಕೊ ನಂತರ ಮಾಡಿದ್ದೆಲ್ಲವೂ ಅಕ್ಷರಶಃ ಮೋಡಿಯೇ ಸರಿ! ತನ್ನ ಎರಡನೇ ಪಂದ್ಯದಲ್ಲೇ ಬೆಲ್ಜಿಯಂ ವಿರುದ್ಧ 2-0 ಅಂತರದಲ್ಲಿ ಗೆದ್ದ ಮೊರೊಕ್ಕೊ ಮುಂದಿನ ಪಂದ್ಯಗಳಲ್ಲಿ, ಕೆನಡಾ ವಿರುದ್ಧ 2-1, ಸ್ಪೇನ್ ವಿರುದ್ಧ ಪೆನಾಲ್ಟಿ ಶೂಟ್‌ಔಟ್‌ನಲ್ಲಿ 3-0 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತ್ತು. ಇನ್ನು ಕ್ವಾಟರ್ ಫೈನಲ್ ಪಂದ್ಯದಲ್ಲಿ ಪೋರ್ಚುಗಲ್ ವಿರುದ್ಧದ 1-0 ಅಂತರದ ಗೆಲುವನ್ನು ಮೊರೊಕ್ಕೊ ಫುಟ್ಬಾಲ್ ಇತಿಹಾಸ ಸುವರ್ಣಾಕ್ಷರದಲ್ಲಿ ಬರೆದಿಟ್ಟುಕೊಳ್ಳಲಿದೆ. ಆದರೆ ಮೊರೊಕ್ಕೊ ತಂಡ ಫ್ರಾನ್ಸ್ ಎದುರು ಸೋತು ಈಗ ಮೂರನೇ ಸ್ಥಾನಕ್ಕಾಗಿ ಕ್ರೋವೆಶಿಯ ವಿರುದ್ಧ ಸೆಣಸಲಿದೆ.
ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ಆಫ್ರಿಕಾ ಖಂಡದ ದೇಶ ಎಂಬ ಹೆಗ್ಗಳಿಕೆ ಮೊರೊಕ್ಕೊಗೆ ದಕ್ಕಿದೆ.
ಫೈನಲ್- ಫ್ರಾನ್ಸ್ ಪರ ರೊನಾಲ್ಡೊ ಒಲವು!
ಫಿಫಾ 2022ರ ವಿಶ್ವಕಪ್ ಯಾರ ಮುಡಿಗೆ ಎಂಬ ಪ್ರಶ್ನೆ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಈ ನಡುವೆ ಸೋಲಿನ ನಿರಾಸೆಯೊಂದಿಗೆ ಕೂಟದಿಂದಲೇ ಹೊರನಡೆದಿರುವ ಫುಟ್ಬಾಲ್ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ “ಪ್ರಸ್ತುತ ಹಾಲಿ ಚಾಂಪಿಯನ್ ಆಗಿರುವ ಫ್ರಾನ್ಸ್ ತಂಡ ಟ್ರೋಫಿ ಗೆಲ್ಲುವುದನ್ನು ನೋಡಲು ಇಷ್ಟಪಡುತ್ತೇನೆ” ಎಂದು ಹೇಳಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ರೊನಾಲ್ಡೊ, “ಫ್ರಾನ್ಸ್ ತಂಡದ ಸ್ಟಾರ್ ಆಟಗಾರನಾಗಿರುವ ಕೈಲಿಯನ್ ಎಂಬಾಪೆ ಶ್ರೇಷ್ಠ ಮತ್ತು ನೈಜ ಆಟಗಾರ. ಫುಟ್‌ಬಾಲ್‌ಗೆ ಅಗತ್ಯವಾದ ತಾಂತ್ರಿಕ ಗುಣ ಅವರಲ್ಲಿದೆ. ಕಲಾತ್ಮಕ ಹಾಗೂ ರಕ್ಷಣಾತ್ಮಕ ಆಟ ಪ್ರದರ್ಶಿಸುವ ಮೂಲಕ ಅವರು ಗೋಲು ಗಳಿಸುತ್ತಿದ್ದಾರೆ. ಅಲ್ಲದೆ, ಫ್ರಾನ್ಸ್ ತಂಡಕ್ಕೆ ಮತ್ತೊಂದು ವಿಶ್ವಕಪ್ ಗೆದ್ದು ಕೊಡುವ ಛಲವೂ ಅವರಲ್ಲಿದೆ” ಎಂದು ತಿಳಿಸಿದ್ದಾರೆ.
ಗೋಲ್ಡನ್ ಬೂಟ್ ರೇಸ್ ನಲ್ಲಿ ಮೆಸ್ಸಿ, ಎಂಬಾಪೆ, ಗಿರೌಲ್ಡ್
ಫಿಫಾ ಫುಟ್‌ಬಾಲ್ ವಿಶ್ವಕಪ್ 2022 ಟೂರ್ನಿಯಲ್ಲಿ ಅರ್ಜೆಂಟೀನಾದ ಲಿಯೋನಲ್ ಮೆಸ್ಸಿ 5 ಗಳಿಸಿದರೆ, ಫ್ರಾನ್ಸ್ ತಂಡದ ಮುಂಚೂಣಿ ಆಟಗಾರ ಕೈಲಿಯನ್ ಎಂಬಾಪೆ ಸಹ 5 ಗೋಲು ಗಳಿಸುವ ಮೂಲಕ ಗೋಲ್ಡನ್ ಬೂಟ್ ಗೆಲ್ಲುವ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಎಂಬಾಪೆ ಸಹ ಆಟಗಾರ ಒಲಿವಿಯರ್ ಗಿರೌಲ್ಡ್ 4 ಗೋಲು ಗಳಿಸಿದ್ದು, ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಲು ಎದುರು ನೋಡುತ್ತಿದ್ದಾರೆ. ಫೈನಲ್ ಪಂದ್ಯದಲ್ಲಿ ಈ ಆಟಗಾರರಲ್ಲಿ ಯಾರು ಹೆಚ್ಚು ಗೋಲು ಗಳಿಸುತ್ತಾರೊ ಅವರಿಗೆ ಈ ವಿಶ್ವಕಪ್‌ನ ಗೋಲ್ಡನ್ ಬೂಟ್ ಪ್ರಶಸ್ತಿ ಮುಡಿಗೇರಲಿದೆ.
ವಿಶ್ವಕಪ್ ಗೆದ್ದ ತಂಡಗಳಿವು!
1930 ರಿಂದ 2018ರ ನಡುವೆ ಒಟ್ಟು 21 ಬಾರಿ ವಿಶ್ವಕಪ್ ಫುಟ್‌ಬಾಲ್ ಟೂರ್ನಿ ಜರುಗಿದೆ. ಈ ಪೈಕಿ ಖ್ಯಾತ ಬ್ರೆಜಿಲ್ ತಂಡ 5 ವಿಶ್ವಕಪ್‌ನಲ್ಲಿ ಗೆಲ್ಲುವ ಮೂಲಕ ಫುಟ್‌ಬಾಲ್ ಲೋಕದಲ್ಲಿ ಪಾರಮ್ಯ ಸಾಧಿಸಿದೆ. ಇದು ತಂಡವೊಂದರ ಅತಿಹೆಚ್ಚು ಗೆಲುವು. ಇನ್ನೂ ಜರ್ಮನಿ ಮತ್ತು ಇಟಲಿ ತಲಾ 4 ಬಾರಿ ಹಾಗೂ ದಕ್ಷಿಣ ಅಮೆರಿಕದ ಪುಟ್ಟ ರಾಷ್ಟ್ರ ಉರುಗ್ವೆ, ಅರ್ಜೆಂಟೀನಾ ಮತ್ತು ಫ್ರಾನ್ಸ್ ಎರಡು ಬಾರಿ ವಿಶ್ವಕಪ್‌ಅನ್ನು ತನ್ನ ಮುಡಿಗೇರಿಸಿಕೊಂಡಿವೆ. ಇಂಗ್ಲೆಂಡ್ ಮತ್ತು ಸ್ಪೇನ್ ದೇಶಗಳು ತಲಾ ಒಂದು ಬಾರಿ ವಿಶ್ವಕಪ್ ವಿಜಯಿಗಳಾಗಿವೆ.

ಅಶೋಕ್ ಕುಮಾರ್
ಮೂಲತಃ ಭದ್ರಾವತಿಯವರಾದ ಅಶೋಕ್, ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವಿ ಯುವ ಪತ್ರಕರ್ತರು.


