ಕೇಂದ್ರದ ಕೃಷಿ ಕಾನೂನನ್ನು ವಿರೋಧಿಸಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರೈತ ಸಂಘಟನೆಗಳು ಇಂದು ಆಯೋಜಿಸಿದ್ದ ಟ್ರ್ಯಾಕ್ಟರ್ ರ‍್ಯಾಲಿಗೆ ಕೊನೆಗೂ ಪೊಲೀಸರು ಅನುಮತಿ ನೀಡಿದ್ದಾರೆ. ಪರಿಣಾಮ ಇಂದು ಬೆಳಗ್ಗೆಯಿಂದಲೇ ರಾಜಧಾನಿಯ ವಿವಿಧ ಗಡಿಗಳಲ್ಲಿ ಟ್ರ್ಯಾಕ್ಟರ್ ರ‍್ಯಾಲಿಗಾಗಿ ಕಾದು ಕುಳಿತಿದ್ದ ಸಾವಿರಾರು ಸಂಖ್ಯೆಯ ರೈತ ಹೋರಾಟಗಾರರು ಕೊನೆಗೂ ಇಂದು ಬೆಂಗಳೂರು ನಗರಪ್ರವೇಶಿಸುವಲ್ಲಿ ಸಫಲರಾಗಿದ್ದಾರೆ.
ಇಂದು ಬೆಳಗ್ಗೆಯಿಂದಲೇ ಮಾದಾವರ ಮೈದಾನದ ಬಳಿ ಭಾರತ ಬಾವುಟದ ಜೊತೆಗೆ ರೌಂಡ್ ಹಾಕುವ ಮೂಲಕ ಪೊಲೀಸರ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ದರು. ಆದರೆ, ಮಧ್ಯಾಹ್ನ 1 ಗಂಟೆಯ ವೇಳೆಗೆ ಟ್ರ್ಯಾಕ್ಟರ್ ರ‍್ಯಾಲಿಗೆ ಪೊಲೀಸರು ಅನುಮತಿ ನೀಡಿದ್ದಾರೆ. ಪೊಲೀಸರು ಅನುಮತಿ ನೀಡುತ್ತಿದ್ದಂತೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತರ ವಾಹನಗಳು ಮಾದಾವರದಿಂದ ಇದೀಗ ಪೆರೇಡ್ ಆರಂಭಿಸಿವೆ. ಮತ್ತೊಂದೆಡೆ ರೈತ ಮುಖಂಡ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಮೈಸೂರು ರಸ್ತೆ ಮೂಲಕವೂ ರೈತರು 30ಕ್ಕೂ ಹೆಚ್ಚು ಟ್ರ್ಯಾಕ್ಟರ್ ಜೊತೆಗೆ ಈಗಾಗಲೇ ಬೆಂಗಳೂರು ಪ್ರವೇಶಿಸಿದ್ದಾರೆ.
ಮಾದಾವರ ಮತ್ತು ಮೈಸೂರು ರಸ್ತೆಯ ರ‍್ಯಾಲಿಯಲ್ಲಿ ಸಾವಿರಾರು ಸಂಖ್ಯೆಯ ರೈತರು, ಐನೂರಕ್ಕೂ ಹೆಚ್ಚು ರೈತ ವಾಹನಗಳು ಭಾಗಿಯಾಗಿದ್ದು, ರೈತರಿಗೆ ದಲಿತ, ಕಾರ್ಮಿಕ, ಕನ್ನಡ, ಮಹಿಳಾ ಸಂಘಟನೆಗಳು ಸಾಥ್ ನೀಡಿವೆ. ಪೆರೇಡ್ ಮುಂಭಾಗದಲ್ಲಿ ಟ್ರಾಕ್ಟರ್, ಆನಂತರ ಕಾರು, ಟೆಂಪೋ, ಗೂಡ್ಸ್ ಗಾಡಿ ಆನಂತರ ಹೋರಾಟಗಾರರಿರುವ ಬಸ್ಗಳು ಸಾಲಾಗಿ ಮೆರವಣಿಗೆ ಹೊರಟಿದ್ದು, ಈ ಮೆರವಣಿಗೆ ಶೀಘ್ರದಲ್ಲೇ ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಹಾಗೂ ಅಲ್ಲಿಂದ ಫ್ರೀಡಂ ಪಾರ್ಕ್ಗೆ ತಲುಪಲಿದೆ ಎನ್ನಲಾಗುತ್ತಿದೆ.
ಇದಲ್ಲದೆ, ಹೊಸಕೋಟೆ ಮೂಲಕವೂ ರೈತರು ತಮ್ಮ ವಾಹನಗಳ ಮೂಲಕ ಬೆಂಗಳೂರು ಪ್ರವೇಶಿಸುತ್ತಿದ್ದಾರೆ. ಹೀಗಾಗಿ ಹೊಸಕೋಟೆ ಟೋಲ್ ಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಬೇಟಿ ನೀಡಿ ರೈತರ ರ‍್ಯಾಲಿ ಕುರಿತು ಮಾಹಿತಿ ಪಡೆದಿದ್ದಾರೆ. ಡಿಸಿಪಿ ದೇವರಾಜ್, ಗ್ರಾಮಾಂತರ ಜಿಲ್ಲೆ ಎಎಸ್ಪಿ ಲಕ್ಷ್ಮೀ ಗಣೇಶ್ ಸ್ಥಳದಲ್ಲಿ ಭದ್ರತೆ ಹೊಣೆ ಹೊತ್ತಿದ್ದು, ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗುತ್ತಿದೆ.
ಇನ್ನೂ ನಗರಕ್ಕೆ ರೈತರ ನೂರಾರು ವಾಹನಗಳ ಪ್ರವೇಶದಿಂದಾಗಿ ಮೈಸೂರು ರಸ್ತೆ, ನೈಸ್ ರೋಡ್ ಜಂಕ್ಷನ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದೆ ಎನ್ನಲಾಗುತ್ತಿದೆ. ಈ ಹೋರಾಟ ಮತ್ತು ರ‍್ಯಾಲಿ ಅಂತಿಮವಾಗಿ ಫ್ರೀಂಡಂ ಪಾರ್ಕ್ ಬಳಿ ಜಮಾಯಿಸಲಿದ್ದು ಶಾಂತಿಯುತವಾಗಿಯೇ ಪ್ರತಿಭಟನೆ ನಡೆಯಲಿದೆ ಎಂದು ರೈತ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಮುಖ್ಯಮಂತ್ರಿ ಯಡಿಯೂರಪ್ಪ ಮನೆಗೆ ಬಿಗಿ ಭದ್ರತೆ; ರೈತ ಹೋರಾಟಕ್ಕೆ ಬೆದರಿತೇ ಸರ್ಕಾರ?


