ಈರುಳ್ಳಿ ಸೇರಿದಂತೆ ಕೆಲವು ಉತ್ಪನ್ನಗಳ ವಿದೇಶಕ್ಕೆ ರಫ್ತು ನಿಷೇಧಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಸಮರ್ಥಿಸಿಕೊಂಡಿದ್ದಾರೆ. ‘ದೇಶೀಯ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವುದು ಅತ್ಯಗತ್ಯ’ ಎಂದು ಅವರು ಪ್ರತಿಪಾದಿಸಿದ್ದಾರೆ. ಮತ್ತೊಂದೆಡೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ನಾಸಿಕ್ ಜಿಲ್ಲೆಯ ಚಂದ್‌ವಾಡ್‌ನಲ್ಲಿ ಈರುಳ್ಳಿ ರಫ್ತು ನಿಷೇಧವನ್ನು ವಿರೋಧಿಸಿ ನಡೆದ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ನೀಡಿದ್ದಾರೆ.
ಈ ಕುರಿತು ಲೋಕಸಭೆಯಲ್ಲಿ ಮಂಗಳವಾರ ಮಾತನಾಡಿರುವ ನಿರ್ಮಲಾ ಸೀತಾರಾಮನ್, ‘ನಾವು ರೈತರು ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ಸಮತೋಲನಗೊಳಿಸುವುದಕ್ಕೆ ಆದ್ಯತೆ ನೀಡಿದ್ದೇವೆ. ಆಗಾಗ ಬೆಲೆಗಳು ಹೆಚ್ಚಾಗುತ್ತಿವೆ. ಈ ಸಂದರ್ಭದಲ್ಲಿ ನಾವು ಕೆಲವು ನಿರ್ಬಂಧಗಳನ್ನು ತೆಗೆದುಹಾಕಬೇಕು. ನಾವು ರೈತರಿಂದ ಖರೀದಿಸಿದ್ದಕ್ಕೆ ನೀಡುತ್ತಿರುವ ಬೆಲೆ ಸಮರ್ಪಕವಾಗಿದೆ ಎಂಬ ಪ್ರಜ್ಞೆ ನಮಗಿದೆ’ ಎಂದರು.
‘ನಮ್ಮ ಆರ್ಥಿಕತೆಯು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಮಾರ್ಪಟ್ಟಿದ್ದೇವೆ. ಎರಡನೇ ತ್ರೈಮಾಸಿಕದಲ್ಲಿ 7.6% ಬೆಳವಣಿಗೆಯು ವಿಶ್ವದಲ್ಲೇ ಅತ್ಯಧಿಕವಾಗಿದೆ. ಸಾಮಾಜಿಕ ಕಲ್ಯಾಣದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ ಹಣಕಾಸಿನ ವಿವೇಕವು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ’ ಎಂದು ಸೀತಾರಾಮನ್ ಹೇಳಿದರು.
ರೈತರ ಹೋರಾಟಕ್ಕೆ ಎನ್‌ಸಿಪಿ ಬೆಂಬಲ:
ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಮತ್ತು ಕೇಂದ್ರದ ಮಾಜಿ ಕೃಷಿ ಸಚಿವ ಶರದ್ ಪವಾರ್ ಸೋಮವಾರ ನಾಸಿಕ್ ಜಿಲ್ಲೆಯ ಚಂದ್‌ವಾಡ್‌ನಲ್ಲಿ ಈರುಳ್ಳಿ ರಫ್ತು ನಿಷೇಧವನ್ನು ವಿರೋಧಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದ್ದಾರೆ. ಮತ್ತೊಂದು ಕಡೆ ಎನ್‌ಸಿಪಿ ಸಂಸದರು ಚಳಿಗಾಲದ ಅಧೀವೇಶನದಲ್ಲಿ ಧ್ವನಿ ಎತ್ತಿದ್ದಾರೆ.

‘ಕೇಂದ್ರದ ಬಿಜೆಪಿ ಸರ್ಕಾರಕ್ಕೆ ರೈತರ ಶ್ರಮದ ಬಗ್ಗೆ ಗೌರವವಿಲ್ಲ ಮತ್ತು ಅದಕ್ಕಾಗಿಯೇ ರೈತರ ಹಿತಾಸಕ್ತಿ ವಿರುದ್ಧ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗುವುದು’ ಎಂದು ರೈತರಿಗೆ ಭರವಸೆ ನೀಡಿದ್ದರು.
‘ಈರುಳ್ಳಿ ಬೆಲೆ ಹೆಚ್ಚಳದಿಂದ ರೈತರು ಲಾಭ ಮಾಡುತ್ತಿದ್ದರೆ ಅದರಲ್ಲಿ ಯಾವುದೇ ತಪ್ಪಿಲ್ಲ. ಕುಟುಂಬದ ಒಟ್ಟು ಆಹಾರ ವೆಚ್ಚದಲ್ಲಿ ಈರುಳ್ಳಿಯ ಪಾಲು ಅತ್ಯಲ್ಪವಾಗಿರುವುದರಿಂದ ಜನರು ಅಂತಹ ತಾತ್ಕಾಲಿಕ ಬೆಲೆ ಹೆಚ್ಚಳವನ್ನು ಸಹಿಸಿಕೊಳ್ಳಬೇಕು’ ಎಂದು ಪವಾರ್ ಜನರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ; ಗುರ್ಜರ್ ಜಮೀನಿಗೆ ನುಗ್ಗಿದ ಮೇಕೆಗಳು: ದಲಿತ ಮಹಿಳೆಯರಿಗೆ ಅಮಾನವೀಯವಾಗಿ ಥಳಿಸಿದ ಭೂ ಮಾಲೀಕ!


