(ಇಂಟ್ರೋ: ಶ್ರವಣಕುಮಾರ್ ಹಡಗಲಿ ಮತ್ತು ರಫೀಕ್ ಕೊಣ್ಣೂರು- ಗೌರಿ ಲಂಕೇಶ್ ರವರ ಅಭಿಮಾನಿಗಳಾದ ಈ ಇಬ್ಬರು ಗದಗ ಜಿಲ್ಲೆಯ ರೋಣ ಮತ್ತು ನರಗುಂದ ತಾಲೂಕುಗಳ ಪ್ರವಾಹಪೀಡಿತ ಊರುಗಳಿಗೆ ಭೇಟಿ ಕೊಟ್ಟು ಫೋಟೊ ಮತ್ತು ವಿಡಿಯೋ ಒದಗಿಸಿದ್ದಾರೆ. ಅವರಿಗೆ ನಮ್ಮ ತಂಡದಿಂದ ಧನ್ಯವಾದಗಳು)
ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಗೆ ಹೋಲಿಸಿದರೆ ಮಳೆ-ಪ್ರವಾಹದ ಕಾರಣಕ್ಕೆ ಗದಗ ಜಿಲ್ಲೆಗೇನೂ ದೊಡ್ಡ ನಷ್ಟ (ಸಾಪೇಕ್ಷವಾಗಿ) ಸಂಭವಿಸಿಲ್ಲ. ಧಾರವಾಡ-ಹುಬ್ಬಳ್ಳಿ ಕಡೆ ಹದಿನೈದು ದಿನಗಟ್ಟಲೇ ಮಳೆ ಹಿಡಿಯಿತೆಂದರೆ ಬೆಣ್ಣೆಹಳ್ಳ ಭರಪೂರ ಹರಿಯುತ್ತದೆ, ನವಿಲುತೀರ್ಥದಿಂದ ನೀರು ಬಿಡುಗಡೆ ಹೆಚ್ಚಾದಂತೆ ಮಲಪ್ರಭೆ ಉಕ್ಕತೊಡಗುತ್ತಾಳೆ.
ಮಹಾರಾಷ್ಟ್ರದ ಕೋಯ್ನಾದಿಂದ ಯಾವಾಗ ಎಷ್ಟು ಪ್ರಮಾಣದ ನೀರು ಬಿಡುತ್ತಾರೋ ಎಂಬುದರ ಮಾಹಿತಿ ಅಸಮರ್ಪಕವಾಗಿರುವುದರಿಂದ ಬೆಳಗಾವಿಯ ಜಿಲ್ಲಾಡಳಿತ ತತ್ತರಿಸಿ ಹೋಗುತ್ತದೆ. ಆದರೆ, ಗದಗಿಗೆ ಮೊದಲೇ ಮುನ್ಸೂಚನೆ ಸಿಗುವುದರಿಂದ ಇಲ್ಲಿ ಮೊದಲೇ ನಿಗಾ ವಹಿಸಲು ಸಾಧ್ಯ. ಈ ಸಲ ಜಿಲ್ಲಾಡಳಿತ ಮೊದಲೇ ಎಚ್ಚೆತ್ತ ಪರಿಣಾಮವಾಗಿ ಅಂತಹ ಹಾನಿಯೇನೂ ಸಂಭವಿಸಿಲ್ಲ.
ಎಲ್ಲಿ ಜನಪ್ರತಿನಿಧಿಗಳು?
ಅಂಡು ಸುಟ್ಟ ಬೆಕ್ಕಿನಂತೆ ಈಗ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಕೊಡುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ತಲೆ ತುಂಬ ಸಂಪುಟ ವಿಸ್ತರಣೆಯನ್ನೆ ತುಂಬಿಕೊಂಡ ಪರಿಣಾಮ ಅವರ ಆಗಮನದಿಂದ ಅಧಿಕಾರಿಗಳ ಮೇಲೆ ಯಾವ ಪರಿಣಾಮವೂ ಆಗಿಲ್ಲ. ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳ ಶಾಸಕರಿಗೆ ಪ್ರವಾಹ ದುರಂತ ತಾಕಿಯೇ ಇಲ್ಲ. ಬಿಜೆಪಿಯ ಶಾಸಕರಂತೂ ಸಚಿವಗಿರಿ ಪಡೆಯುವ ಉಮೇದಿನಲ್ಲೇ ಇದ್ದಾರೆ.
ಮಳೆ ಮತ್ತು ಪ್ರವಾಹ ಕೇವಲ ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಕಲಬುರಗಿ, ಗದಗ ಜಿಲ್ಲೆಗಳಿಗೆ ಅಷ್ಟೇ ಸೀಮಿತವಾಗಿಲ್ಲ. ಕೊಡಗು ಮತ್ತು ಕರಾವಳಿಯ ಮೂರು ಜಿಲ್ಲೆಗಳೂ ಇದರಿಂದ ತೊಂದರೆಗೆ ಸಿಲುಕಿವೆ. ಅಧಿಕೃತ ಅಂಕಿಅಂಶದ ಪ್ರಕಾರವೇ ರಾಜ್ಯದ 15 ಜಿಲ್ಲೆಗಳು ಮಳೆ ಮತ್ತು ಪ್ರವಾಹದ ಕಾರಣದಿಂದ ತತ್ತರಿಸಿ ಹೋಗಿವೆ. 15 ಜಿಲ್ಲೆಗಳು ಸಂಕಟದಲ್ಲಿ ಇರುವಾಘ ರಾಜ್ಯದ 28 ಸಂಸದರು ಎಲ್ಲ ಮುಚ್ಚಿಕೊಂಡು ಸುಮ್ಮನಿದ್ದಾರೆ. ಅದರಲ್ಲೂ ಬಿಜೆಪಿಯ 25 ಸಂಸದರು ಈ ಬಗ್ಗೆ ಮಾತೇ ಆಡಿಲ್ಲ.
ನಿನ್ನೆ ಬಾಯಿ ಬಿಟ್ಟಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳುತ್ತಾರೆ: ರಾಜ್ಯದಿಂದ ಅನುದಾನ ಕೋರಿ ಕೇಂದ್ರಕ್ಕೆ ಮನವಿಯೇ ಬಂದಿಲ್ಲ ಎಂದು…..
ಶಿವನೇ, sorry, ರಾಘವೇಂದ್ರ ಸ್ವಾಮಿಯೇ, ಈ ಜೋಶಿ ಎಂಬ ಮನೆಹಾಳನಿಗೆ ಮೊದಲು ಬುದ್ಧಿ ಕೊಡು. ತಮ್ಮದೇ ಪಕ್ಷದ ರಾಜ್ಯ ಸರ್ಕಾರ ವಿಶೇಷ ನೆರವಿಗೆ ಮನವಿ ಸಲ್ಲಿಸಬೇಕಂತೆ! ಅಲ್ಲಿವರೆಗೆ ಈ ಜೋಶಿ ಸಾಹೇಬರು ಕೇಂದ್ರದ ಜೊತೆ ಮಾತಾಡಲ್ಲವಂತೆ!
ಅಲ್ರೀ, ಈ ಜೋಶಿಯೂ ಕೇಂದ್ರ ಸರ್ಕಾರದ ಭಾಗವೇ ಅಲ್ಲವೇ? ಮೂರು ದಿನದ ಹಿಂದೆ ಬೆಳಗಾವಿ ತಲುಪುವ ಮೊದಲು ದೆಹಲಿಯಲ್ಲಿ ರಾಜ್ಯ ಸಚಿವ ಸಂಪುಟ ರಚನೆ ಬಗ್ಗೆ ಅನುಮತಿ ಪಡೆಯಲು ಗುಲಾಮನ ತರಹ ಓಡಿ ಹೋಗಿದ್ದ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಗೃಹ ಸಚಿವರಿಗೆ ವಿಶೇಷ ನೆರವಿಗಾಗಿ ಮನವಿ ಮಾಡಬಹುದಿತ್ತಲ್ಲ? ಕಾಶ್ಮೀರದ ‘ಅಭಿವೃದ್ಧಿ’ಗಾಗಿ ಅಲ್ಲಿ ಸಂಸತ್ತಿನಲ್ಲಿ ವೋಟಿಂಗ್ ಮಾಡುವುದು ಮುಗಿದ ನಂತರವಾದರೂ ನಮ್ಮ ಸಂಸದರು ಕರ್ನಾಟಕದ ಸಂಕಷ್ಟದ ಬಗ್ಗೆ ಯೋಚಿಸಬೇಕಿತ್ತಲ್ಲವಾ? ಈ ಹೊತ್ತಿನಲ್ಲೂ ಕೇಂದ್ರ ನೆರವು ಘೋಷಿಸಿಲ್ಲ, ರಾಜ್ಯ ಸರ್ಕಾರ ಕೇಳಿಯೇ ಇಲ್ಲ…
ಸರ್ಕಾರವೇ ಪ್ರವಾಹದಲ್ಲಿ ಸಿಕ್ಕಾಗ…
ಇಲ್ಲಿ ಸರ್ಕಾರವೇ ಇಲ್ಲ ಎಂಬ ಭಾವನೆ ಜನರಿಗೆ ಬರತೊಡಗಿದೆ. ಏಕೆಂದರೆ ಆಪರೇಷನ್ ಕಮಲ ಎಂಬ ಅಸಹ್ಯ ಹಣದ ಪ್ರವಾಹ ಹರಿಸಿ ಸರ್ಕಾರ ರಚನೆ ಮಾಡಿದ ಮೇಲೆ, ಮುಖ್ಯಮಂತ್ರಿ ಬಿಟ್ಟರೆ ಬೇರಾವ ಸಚಿವರೂ ಇಲ್ಲವೇ ಇಲ್ಲ. ಹೀಗಾಗಿ ರಾಜ್ಯ ಬಿಜೆಪಿಯೇ ಈಗ ಅಧಿಕಾರ ಮತ್ತು ಕೇಂದ್ರದ ಅಡಿ ಗುಲಾಮಗಿರಿ ಎಂಬ ಪ್ರವಾಹದಲ್ಲಿ ಮುಳುಗಿದೆ. ಹೀಗಾಗಿ, ಸಚಿವ ಸ್ಥಾನ ಆಕಾಂಕ್ಷಿಗಳಾದ ಜಗದೀಶ ಶೆಟ್ಟರ್, ಈಶ್ವರಪ್ಪ, ಶ್ರೀರಾಮುಲು, ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ ಇತ್ಯಾದಿಗಳಿಗೆ ಪ್ರವಾಹದ ಸಂಕಟ ತಟ್ಟಿಯೇ ಇಲ್ಲ.
ಗದಗ: ಶಾಶ್ವತ ಪರಿಹಾರವೇ ಇಲ್ಲವೇ?
2008-2009ರ ಪ್ರವಾಹದಲ್ಲಿ ಬಾಧೆಗೆ ಒಳಗಾದ ಗ್ರಾಮಗಳೇ ಈಗಲೂ ತೊಂದರೆಗೆ ಒಳಗಾಗಿವೆ. ಗದಗ ಜಿಲ್ಲೆಯಲ್ಲಿ ಪ್ರವಾಹ ಬಂದರೆ ನರಗುಂದ ಮತ್ತು ರೋಣ ತಾಲೂಕುಗಳ ನೂರಾರು ಗ್ರಾಮಗಳು ಸಮಸ್ಯೆಗೆ ಸಿಲುಕುತ್ತವೆ. ಬೆಣ್ಣೆಹಳ್ಳ ಮತ್ತು ಮಲಪ್ರಭೆಯ ಹರಿವು ಆರ್ಭಟಿಸಿಬಿಟ್ಟರೆ ಈ ನೂರಾರು ಹಳ್ಳಿಗಳ ಜನರ ಬದುಕು ಎಕ್ಕುಟ್ಟಿ ಹೋಗುತ್ತದೆ.
2008-09ರ ಭೀಕರ ಪ್ರವಾಹದ ನಂತರ ಮೂವರು ಇದೇ ಜಿಲ್ಲೆಯವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಇವರ್ಯಾರೂ ಈ ಹಳ್ಳಿಗಳ ಶಾಶ್ವತ ಪುನರ್ವಸತಿಗೆ ಎಂದೂ ಪ್ರಾಮಾಣಿಕ ಪ್ರಯತ್ನ ಮಾಡಲೇ ಇಲ್ಲ.
ಯಡಿಯೂರಪ್ಪ ಕೃಪೆಯಿಂದ ಸಚಿವರಾಗಿದ್ದ ನರಗುಂದ ಶಾಸಕ ಸಿ.ಸಿ. ಪಾಟೀಲ, ಜಗದೀಶ ಶೆಟ್ಟರ್ ಆಶಿರ್ವಾದದಿಂದ ಸಚಿವರಾಗಿದ್ದ ರೋಣ ಶಾಸಕ ಕಳಕಪ್ಪ ಬಂಡಿ ತಮ್ಮ ಆ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಜಿಲ್ಲೆಯಲ್ಲಿ ಪ್ರವಾಹ ಬಂದರೆ ಇವರಿಬ್ಬರ ತಾಲೂಕುಗಳೇ ತೊಂದರೆಗೆ ಸಿಲುಕುವುದು. ಆದರೆ ಈ ಇಬ್ಬರೂ ಒಂದು ಶಾಶ್ವತ ಪರಿಹಾರಕ್ಕೆ ಯತ್ನಿಸಲೇ ಇಲ್ಲ.
ಈಗ ಬನ್ನಿ, 2013-18ರ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಎಚ್.ಕೆ. ಪಾಟೀಲರು ಕಳಕಪ್ಪ ಬಂಡಿ ಮತ್ತು ಸಿ.ಸಿ. ಪಾಟಲರಂತೆ ಪಂಡರಾಪಟ್ಟಿ ಶಾಸಕ ಎಂದು ಅನಿಸಿಕೊಂಡವರಲ್ಲ. ರಾಜ್ಯ ರಾಜಕಾರಣದಲ್ಲಿ ಎಚ್ಕೆ ಅವರಿಗೆ ಒಂದು ಗೌರವದ ಸ್ಥಾನವಿದೆ.
ಆದರೆ, ಅವರು ಕೂಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಈ ನೆರೆ-ಪ್ರವಾಹ ಸಮಸ್ಯೆಗೆ ಒಂದು ಶಾಶ್ವತ ಪರಿಹಾರ ರೂಪಿಸಲೇ ಇಲ್ಲ. ಅವರು ಒಂದು ಪರಿಹಾರ ಹುಡುಕಿ ಆ ಪ್ರಸ್ತಾಪವನ್ನು ಅವರ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿಟ್ಟಿದ್ದರೂ ಸಾಕಿತ್ತು, ತಕ್ಷಣ ಅನುಮೋದನೆ ಸಿಗುತ್ತಿತ್ತು. ಗದಗಿಗೆ ನಿತ್ಯ ನೀರು ಒದಗಿಸುವ, ಗದಗ ಜಿಲ್ಲೆಯ ಎಲ್ಲ ಹಳ್ಳಿಗಳಿಗೂ ಮೇಲ್ಮೈ ನೀರು (ಸರ್ಫೆಸ್ ವಾಟರ್, ನದಿ ನೀರು) ಒದಗಿಸುವ ದೊಡ್ಡ ಯೋಜನೆಗಳಿಗೆ ಎಲ್ಲ ನೆರವು ನೀಡಿದ ಸಿದ್ದರಾಮಯ್ಯ ಪ್ರವಾಹ ಪರಿಹಾರದ ಯೋಜನೆ ರೂಪಿಸಿದ್ದರೆ ಖಂಡಿತ ಇಲ್ಲ ಅನ್ನುತ್ತಿರಲಿಲ್ಲ.

ಹೀಗಾಗಿ, ಬಂಡಿ, ಸಿಸಿ ಪಾಟೀಲರಂತಹ ತರಹೇವಾರಿ ರಾಜಕಾರಣಿಗಲನ್ನು ಬಿಟ್ಟು ಬಿಡೋಣ. ಎಚ್. ಕೆ. ಪಾಟೀಲರಂತಹ ಹಿರಿಯ, ಗೌರವಾನ್ವಿತ ರಾಜಕಾರಣಿಯನ್ನೇ ಈಗ ನಾವು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲೇಬೇಕಿದೆ….



Innu Jastine Serisi Ugibeku