Homeಎಕಾನಮಿದುಃಖಿತನಾಗಿದ್ದೇನೆ, ಆದರೆ ಆರ್ಥಿಕತೆ ಕುರಿತು ನನ್ನ ಭವಿಷ್ಯ ನಿಜವಾಗಿದೆ! - ಯಶವಂತ ಸಿನ್ಹಾ

ದುಃಖಿತನಾಗಿದ್ದೇನೆ, ಆದರೆ ಆರ್ಥಿಕತೆ ಕುರಿತು ನನ್ನ ಭವಿಷ್ಯ ನಿಜವಾಗಿದೆ! – ಯಶವಂತ ಸಿನ್ಹಾ

- Advertisement -
- Advertisement -

ಮೂಲ: ಯಶವಂತ ಸಿನ್ಹಾ
ಅನುವಾದ: ನಿಖಿಲ್ ಕೋಲ್ಪೆ

(ಯಶವಂತ ಸಿನ್ಹಾ ಮಾಜಿ ಬಿಜೆಪಿ ನಾಯಕ ಮತ್ತು 1998-2002ರಲ್ಲಿ ಕೇಂದ್ರ ಹಣಕಾಸು ಮಂತ್ರಿ ಹಾಗೂ 2002-2004ರಲ್ಲಿ ವಿದೇಶಾಂಗ ಮಂತ್ರಿಯಾಗಿದ್ದವರು).

ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ವಿನಾಶಕಾರಿ ವಿದ್ಯಮಾನಗಳು ನಮ್ಮ ಬೆನ್ನಿಗಿವೆಯಾದರೂ, ಈಗ ಹಿನ್ನೆಲೆಗೆ ಸರಿದುಹೋಗಿರುವ ನಮ್ಮ ಆರ್ಥಿಕತೆಯ ಸದ್ಯದ ಸ್ಥಿತಿಯತ್ತ ನಾವು ಗಮನಹರಿಸಬಹುದು.

ಕಳೆದ ಸೆಪ್ಟೆಂಬರ್, 2017ರಲ್ಲಿ ಭಾರತೀಯ ಆರ್ಥಿಕತೆ ತತ್ತರಿಸುತ್ತಿದ್ದಾಗ ನಾನು ಏನನ್ನೋ ಬರೆದಿದ್ದೆ ಮತ್ತು ಅದು ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದು ಆರ್ಥಿಕತೆಯ ಸಮಸ್ಯೆಗಳ ಕುರಿತು ಅಧಿಕಾರಸ್ಥರ ಗಮನಸೆಳೆದು, ಅವರು ಯಾವುದಾದರೂ ಪರಿಹಾರ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ನಿರೀಕ್ಷೆ ಹೊಂದಿತ್ತು. ಆದರೆ, ಆಗಿನ ಹಣಕಾಸು ಮಂತ್ರಿ ಅರುಣ್ ಜೇಟ್ಲಿ ನನ್ನನ್ನು ಗೇಲಿಮಾಡಿ, ನಾನು 80ರ ಹರೆಯದಲ್ಲಿ ಉದ್ಯೋಗ ಹುಡುಕುತ್ತಿರುವವನೆಂದು ಹೇಳಿ, ತನ್ನ ಚೇಲಾಗಳನ್ನು ರಂಜಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ, “ಮಹಾಭಾರತದಲ್ಲಿ ಕರ್ಣನ ರಥದ ಸಾರಥಿಯಾಗಿದ್ದು, ಆತನನ್ನು ವೈರಿಗಳ ಎದುರು ನಿಂದಿಸಿ, ನಿರಂತರವಾಗಿ ಅವಮಾನಿಸಿ, ವಿಚಲಿತಗೊಳಿಸಿದ ರಾಜ ಶಲ್ಯನ ರೀತಿ ನಾನು ವರ್ತಿಸುತ್ತಿದ್ದೇನೆ” ಎಂದು ಆರೋಪಿಸಿದರು.

ಆ ಇಬ್ಬರು ಮಹಾನುಭಾವರಿಗೆ ನಿಜವಾಗಿಯೂ ಚುಚ್ಚಿದ್ದು ಏನು? ಅದಕ್ಕೆ ಒಂದೇ ಒಂದು ಪದವೆಂದರೆ, ‘ಸತ್ಯ’. ಕಹಿಯಾದ ಸತ್ಯ!

ಆ ಲೇಖನದಲ್ಲಿ ಇತರ ವಿಷಯಗಳ ಜೊತೆಗೆ ನಾನು ಹೇಳಿದ್ದೆಂದರೆ, “ಖಾಸಗಿ ರಂಗದ ಹೂಡಿಕೆ ಎರಡು ದಶಕಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣಕ್ಕೆ ಕುಸಿದಿದೆ, ಕೈಗಾರಿಕಾ ಉತ್ಪಾದನೆ ಬಹುತೇಕ ಕುಸಿದಿದೆ, ಕೃಷಿಕ್ಷೇತ್ರವು ಆತಂಕದ ಸ್ಥಿತಿಯಲ್ಲಿದೆ, ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ನಿರ್ಮಾಣ ವಲಯವು ಡೋಲಾಯಮಾನವಾಗಿದೆ, ಉಳಿದ ಸೇವಾ ಕ್ಷೇತ್ರವು ನಿಧಾನ ಗತಿಯಲ್ಲಿ ಸಾಗುತ್ತಿದೆ, ಆರ್ಥಿಕತೆಯ ಒಂದೊಂದು ಕ್ಷೇತ್ರವೂ ಒಂದರ ಹಿಂದೆ ಇನ್ನೊಂದರಂತೆ ಆತಂಕದಲ್ಲಿದೆ. ಕೆಟ್ಟದಾಗಿ ಯೋಜಿಸಲಾದ ಮತ್ತು ಕೆಟ್ಟದಾಗಿ ಅನುಷ್ಟಾನಗೊಳಿಸಲಾದ ಜಿಎಸ್‌ಟಿ, ಉದ್ಯಮ ಕ್ಷೇತ್ರದಲ್ಲಿ ಉತ್ಪಾತ ಉಂಟುಮಾಡಿ, ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ”.

ಇದನ್ನು ಹೇಳುವಾಗ ನಾನು, ವಿನಾಶದ ಪ್ರವಾದಿಯಾಗಿರಲು ಬಯಸಿರಲಿಲ್ಲ. ನಾನು ಕೇವಲ ಪರಿಹಾರಾತ್ಮಕ ಕ್ರಮಗಳನ್ನು ಕೈಗೊಂಡು ಆರ್ಥಿಕತೆಯನ್ನು ಮರಳಿ ಹಳಿಗೆ ತರಬೇಕು ಎಂದು ಮಾತ್ರ ಬಯಸಿದ್ದೆ. ಇವತ್ತು ನಾನು ಬಹಳ ದುಃಖದಿಂದಲೇ ಹೇಳುತ್ತಿದ್ದೇನೆ: ನಾನು ಆ ಲೇಖನದಲ್ಲಿ ಬರೆದಿದ್ದದ್ದು ನಿಜವಾಗಿತ್ತು ಮಾತ್ರವಲ್ಲ; ಯವುದೇ ಪರಿಹಾರಾತ್ಮಕ ಕ್ರಮಗಳನ್ನು ಕೈಗೊಳ್ಳದಿದ್ದ ಪರಿಣಾಮವಾಗಿ ಇನ್ನಷ್ಟು ಕೆಟ್ಟ ಪರಿಸ್ಥಿತಿಗೆ ಬಂದು ನಿಂತಿದೆ. ಇವತ್ತು ಪ್ರತಿಯೊಬ್ಬರು ದೇಶದ ಆರ್ಥಿಕತೆಯು ಅಭೂತಪೂರ್ವವಾದ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂಬುದನ್ನು ಒಪ್ಪುತ್ತಾರೆ.

ಇವತ್ತು ಆರ್ಥಿಕತೆಯಲ್ಲಿ ಬೇಡಿಕೆಯಿಲ್ಲ. ಮಾರುಕಟ್ಟೆಯಲ್ಲಿ ಚಲನೆಯಿಲ್ಲ. ಹೊಸ ಹೂಡಿಕೆ ಇಲ್ಲ. ಬೆಳವಣಿಗೆಯ ಮೇಲೆ ಹೂಡಿಕೆ ಮಾಡಲು ಸರಕಾರದ ಬಳಿ ಹಣವಿಲ್ಲ. ಕಂಪ್ಟ್ರೊಲರ್ ಎಂಡ್ ಅಡಿಟರ್ ಜನರಲ್ (ಸಿಎಜಿ) ಅವರ ಇತ್ತೀಚೆಗಿನ ವರದಿಯನ್ನು ನೋಡಿದರೆ ಆರ್ಥಿಕ ಪ್ರಗತಿ ಕುರಿತ ಸರಕಾರದ ದಾವೆಯು ಚಿಂದಿಯಾಗುತ್ತದೆ. ಅದರ ಪ್ರಕಾರ, 2017-18ರಲ್ಲಿ ಸರಕಾರವು ತನ್ನ ನೇರ ಹೊಣೆಗಾರಿಕೆಯನ್ನು ಬಜೆಟ್ ವಿಷಯಗಳಿಗೆ ವರ್ಗಾಯಿಸಿದೆ. ಇದು ನಾಲ್ಕು ಲಕ್ಷ ಕೋಟಿ ರೂ.ಗಳ ಮಟ್ಟಕ್ಕೆ ಏರಿದ್ದು, ಹಾಗೆ ಮಾಡದೇ ಇದ್ದಲ್ಲಿ, ಆ ವರ್ಷದ ಹಣಕಾಸು ಕೊರತೆಯು ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) 5.85 ಶೇಕಡಾಕ್ಕೆ ಏರುತ್ತಿತ್ತು. ಇದನ್ನು ಬಜೆಟ್‌ನಲ್ಲಿ ಮರೆಮಾಚಲಾಗಿದೆ.

ಎಲ್ಲಾ ಜನರನ್ನು ಏಕಕಾಲದಲ್ಲಿ ಮೂರ್ಖರಾಗಿಸಬಹುದು ಎಂಬ ನಂಬಿಕೆಯ ಮೇಲೆ ಸರಕಾರವು ಹುಟ್ಟುಹಾಕಿರುವ ಅಂಕಿಅಂಶಗಳ ವಿಷಯದ ಮುಂದಕ್ಕೆ ಇದು ನನ್ನನ್ನು ತಂದು ನಿಲ್ಲಿಸುತ್ತದೆ. ಅದು ಸುದೀಪ್ತೋ ಮೊಂಡಲ್ ಸಮಿತಿಯು ನೀಡಿದ್ದ ಅಂಕಿಅಂಶಗಳಿಗೆ ಏನು ಮಾಡಿದೆ ಎಂಬುದನ್ನು ನೋಡಿ. ಅದು ಹಿಂದಿನ ಆರ್ಥಿಕ ಕೊರತೆಯ ಲೆಕ್ಕಾಚಾರವನ್ನು ಏನು ಮಾಡಿದೆ ನೋಡಿ. ಅದು ಮೋದಿ ಆಡಳಿತದಲ್ಲಿ ಹಿಂದೆಂದೆಂದಿಗಿಂತಲೂ ಹೆಚ್ಚಿನ ವೇಗದಲ್ಲಿ ಆರ್ಥಿಕತೆ ಬೆಳೆಯಿತು ಎಂದು ಹೇಳುವ ರೀತಿಯಲ್ಲಿ ಅಂಕಿಅಂಶಗಳನ್ನು ತಿರುಚುವಂತೆ ‘ನೀತಿ’ (NITI) ಆಯೋಗಕ್ಕೆ ಹೇಳಿರುವುದಾಗಿದೆ. ಅದು ರಾಷ್ಟ್ರೀಯ ಅಂಕಿಅಂಶ ಇಲಾಖೆಯು ಮಾನ್ಯ ಮಾಡಿರುವ ಎನ್‌ಎಸ್‌ಎಸ್‌ಒ ಸಂಗ್ರಹಿಸಿದ ಅಂಕಿಅಂಶಗಳನ್ನು  ಕೂಡಾ ಹೀಗೆಯೇ ಮಾಡಿದೆ. ಈ ಅಂಕಿ ಅಂಶಗಳನ್ನು ತಾತ್ಕಾಲಿಕ ಎಂದು ಪರಿಗಣಿಸಿ, ಅನಧಿಕೃತ ಸೋರಿಕೆ, ನಂಬಿಕೆಗೆ ಅನರ್ಹ ಎಂದು ಹೇಳಿ ಅವಮಾನಿಸಿದೆ. ಈ ಆಯೋಗದ ಪ್ರಭಾರ ಅಧ್ಯಕ್ಷ ಮತ್ತು ಉಳಿದ ಏಕೈಕ ಸದಸ್ಯ ಕೂಡಾ ಈ ಅವಮಾನವನ್ನು ಇನ್ನಷ್ಟು ತಾಳಲಾರದೇ ರಾಜೀನಾಮೆ ಕೊಟ್ಟರು. ಈ ಕುರಿತು ಕಣ್ಣೀರು ಹರಿಸಲಾದರೂ, ಸರಕಾರ ಪ್ರತಿಷ್ಟಿತವಾದ ಕೊಲೆಯಿಂದ ಬಚಾವಾಯಿತು.

ಜಿಡಿಪಿ ಅಂಕಿಅಂಶಗಳನ್ನು ಹೇಗೆ 250 ಮೂಲಭೂತ ಅಂಕಗಳಿಂದ (basis points) ಮೇಲಂದಾಜು ಮಾಡಲಾಗಿದೆ ಎಂಬ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣ್ಯಂ ಅವರ ತರ್ಕವನ್ನೂ ಹೇಗೆ ಕಡೆಗಣಿಸಲಾಗಿದೆ ನೋಡಿ. ಆದರೆ, ತನ್ನ ಬಜೆಟಿನಲ್ಲಿ ಅಪ್ಪಟ ಸುಳ್ಳು ಅಂಕಿಅಂಶಗಳನ್ನು ಸೇರಿಸಿ, ಸಂಸತ್ತು ಮತ್ತು ಭಾರತೀಯ ಜನತೆಯನ್ನು ವಂಚಿಸಿದ ಹಣಕಾಸು ಸಚಿವೆಯನ್ನು ಅಭಿನಂದಿಸಲೇಬೇಕು. ಇದನ್ನು ಪತ್ತೆ ಹಚ್ಚಿದವರು ಬೇರಾರೂ ಅಲ್ಲ; ಪ್ರಧಾನಮಂತ್ರಿಯವರ ಆರ್ಥಿಕ ಸಲಹೆಗಾರರ ಮಂಡಳಿಯ ಸದಸ್ಯರಾದ ರತಿನ್ ರಾಯ್ ಅವರು. ಬಜೆಟ್‌ನಲ್ಲಿ 1,70,000 ಕೋಟಿ ರೂ.ಗಳ ಖೋತಾ ಇದೆ ಎಂದು ಅವರು ಇಡೀ ದೇಶಕ್ಕೆ ಸಾರಿ ಹೇಳಿದ್ದಾರೆ. ಹಣಕಾಸು ಸಚಿವರು ಲಭ್ಯವಿದ್ದ ಮತ್ತು ಬಳಸಲೇಬೇಕಾಗಿದ್ದ, ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ ಅವರ ನೀಡಿದ್ದ ವಾಸ್ತವಿಕ ಅಂಕಿಅಂಶಗಳಿಗೆ ಬದಲಾಗಿ, ಪಿಯೂಷ್ ಗೋಯೆಲ್ ಅವರು ಮಂಡಿಸಿದ್ದ ಮಧ್ಯಾವಧಿ ಬಜೆಟ್‌ನ ಅಂಕಿಅಂಶಗಳನ್ನು ಬಳಸಿದ್ದೇ ಈ ವ್ಯತ್ಯಾಸಕ್ಕೆ ಕಾರಣ.

ಭಯವು ಇಡೀ ನಾಡನ್ನು ಕಾಡುತ್ತಿದೆ. ಆದರೆ, ಸತ್ಯ ಮಾತನಾಡುವ ಧೈರ್ಯ ನಮ್ಮಲ್ಲಿ ಕೆಲವರಿಗಷ್ಟೇ ಇದೆ. ಆದಾಯ ತೆರಿಗೆ ಇಲಾಖೆ (ಐಟಿ), ಜಾರಿ ನಿರ್ದೇಶನಾಲಯ (ಇಡಿ), ಸಿಬಿಐ ಮತ್ತು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ದಾಳಿಗಳು ಎಗ್ಗಿಲ್ಲದೇ ಸಾಗುತ್ತಿವೆ. ಒಬ್ಬ ಉದ್ಯಮಿ (ಸಿದ್ಧಾರ್ಥ) ಆತ್ಮಹತ್ಯೆ ಮಾಡಿಕೊಂಡರು. ಹಲವಾರು ಉದ್ದಿಮೆಗಳು ದಿವಾಳಿ ಘೋಷಿಸುವ ಸರತಿಯ ಸಾಲಿನಲ್ಲಿವೆ. ಓಡಲು ಸಾಧ್ಯವಿರುವವರು ದೇಶಬಿಟ್ಟು ಓಡುತ್ತಿದ್ದಾರೆ. ಆಮದು ಮತ್ತು ಶ್ರೀಮಂತರನ್ನು ದಂಡಿಸುವುದು ಹೊಸ ಆರ್ಥಿಕ ಧೋರಣೆಯ ಬಹುಮುಖ್ಯ ಎಳೆಗಳಾಗಿವೆ. ಭಾರತ ಸರಕಾರವು ಅಸಹಾಯಕವಾಗಿ ನೋಡುತ್ತಾ ಇರುವಂತೆಯೇ, ಭಾರತ ತನ್ನ ಸಾರ್ವಭೌಮ ಬದ್ಧತೆಯನ್ನು ಗೌರವಿಸುವುದಿಲ್ಲ ಎಂದು ಇಡೀ ಜಗತ್ತಿಗೆ ಸಾಬೀತುಪಡಿಸಲು ಒಬ್ಬ ದಾರಿತಪ್ಪಿದ ಮುಖ್ಯಮಂತ್ರಿ ಸಾಕಾಗುತ್ತದೆ.

ಜಾಗತಿಕ ಪರಿಸ್ಥಿತಿ ಸಮಾಧಾನಕರವಾಗಿಲ್ಲ. ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಇರುವಾದ ಜಾಗತಿಕ ಆರ್ಥಿಕತೆಗೆ ಏನೂ ಆಗಬಹುದು. ಒಂದು ಸಂಕೇತ ನಮ್ಮ ಆರ್ಥಿಕತೆಯಲ್ಲಿ ಬಿಕ್ಕಟ್ಟು ಸೃಷ್ಟಿಸಬಹುದು. ನಾನು ಯಾವತ್ತೂ ಶೇರುಮಾರುಕಟ್ಟೆ ಮತ್ತು ವಿದೇಶಿ ವಿನಿಮಯ ಮಾರುಕಟ್ಟೆ ನಡುವಿನ ಕರುಳುಬಳ್ಳಿ ಸಂಬಂಧದ ಬಗ್ಗೆ ಹುಚ್ಚೆನಿಸುವಷ್ಟು ಭಯಹೊಂದಿದ್ದೆ. ವಿದೇಶಿ ಪೋರ್ಟ್‌ಫೋಲಿಯೋ ಹೂಡಿಕೆದಾರರು (ಎಫ್‌ಪಿಐ) ಈಗಿಲ್ಲಿ ಹೆಚ್ಚುವರಿ ತೆರಿಗೆಯ ಹೊರೆಯಲ್ಲಿದ್ದಾರೆ. ಅವರು ತಾವು ಹೊಂದಿರುವ ಶೇರುಗಳನ್ನು ಮಾರಲು ಆರಂಭಿಸಬಹುದು. ಅವರು ವಿದೇಶಿ ವಿನಿಮಯ ಮಾರುಕಟ್ಟೆಯನ್ನು ಪ್ರವೇಶಿಸಿ, ರೂಪಾಯಿಯನ್ನು ಡಾಲರ್‌ಗಳಾಗಿ ಪರಿವರ್ತಿಸಬಹುದು. ಇದು ರೂಪಾಯಿಯ ಮೇಲೆ ಅತೀವ ಒತ್ತಡ ಹೇರಿ, ಅನಪೇಕ್ಷಿತ ಪರಿಣಾಮಗಳಿಗೆ ಕಾರಣವಾಗಬಹುದು. ನಮ್ಮ ಮಾರುಕಟ್ಟೆಯಲ್ಲಿ ಬಹುಮಟ್ಟಿಗೆ ಈ ವಿದ್ಯಮಾನ ಈಗಾಗಲೇ ಗೋಚರವಾಗುತ್ತಿದೆ. ನಾವು ದೊಡ್ಡ ಪ್ರಮಾಣದ ವಿದೇಶಿ ವಿನಿಮಯ ಮೀಸಲು ಹೊಂದಿದ್ದೇವೆ ಎಂಬುದು ನಿಜ. ಆದರೆ, ನಾವು 1991ನ್ನು ಮರೆಯುವುದು ಬೇಡ.

ಸಮಸ್ಯೆ ಎಂದರೆ, ಈ ಸರಕಾರದಲ್ಲಿ ಯಾರೇ ಒಬ್ಬರು ಅರ್ಥಶಾಸ್ತ್ರವನ್ನು ಅರ್ಥ ಮಾಡಿಕೊಳ್ಳುವವರು ಇದ್ದಾರೆ ಎಂದು ನನಗನಿಸುವುದಿಲ್ಲ. ಇದು ಕುರುಡರಿಗೆ ಕುರುಡರು ಮಾರ್ಗದರ್ಶನ ಮಾಡುವ ಪ್ರಕರಣ. ಚುನಾವಣೆಗಳನ್ನು ಗೆಲ್ಲುವುದು ಸುಲಭ. ಉತ್ತಮ ಆಡಳಿತ ನೀಡುವುದು ಬೇರೆಯೇ ವಿಷಯ. ಇಂದು ವಿರೋಧಪಕ್ಷವು ಅಸಡ್ಡಾಳವಾಗಿದೆ ಎಂಬುದು ನಿಜ. ಸರಕಾರವು ಸಂಸತ್ತಿನ ಒಳಗೂ, ಹೊರಗೂ ಅದರ ಪೂರ್ಣ ಲಾಭ ಎತ್ತುತ್ತಿದೆ. ವಿರೋಧ ಪಕ್ಷಗಳನ್ನು ಸಂಸತ್ತಿನಲ್ಲಿ ಇಷ್ಟು ಹೀನವಾಗಿ ನಡೆಸಿಕೊಳ್ಳಲಾಗುತ್ತಿರುವಾಗ, ಅವುಗಳಿಗೆ ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸಲು ಅಥವಾ ಅದನ್ನು ಬಹಿಷ್ಕರಿಸಲು ಏಕೆ ಸಾಧ್ಯವಿಲ್ಲ ಎಂದೇ ನನಗೆ ಅರ್ಥವಾಗುವುದಿಲ್ಲ. ಸರಕಾರ ಬೇಕಾದರೆ ತನಗೆ ಬೇಕಾಗಿರುವ ಯಾವುದೇ ಮಸೂದೆಯನ್ನು ಅಂಗೀಕರಿಸುವಂತೆ ಮಾಡಲಿ; ಹೇಗಿದ್ದರೂ ಅದು ಅಂಗೀಕರಿಸುತ್ತಿದೆ ಕೂಡಾ!

ಒಂದು ವೇಳೆ ಇಲೆಕ್ಟ್ರಾನಿಕ್ ಮತಯಂತ್ರಗಳ ಬಗ್ಗೆ ವಿರೋಧ ಪಕ್ಷಗಳಿಗೆ ಆತಂಕವಿದ್ದರೆ, ಅದರ ಬದಲು ಹಿಂದಿನ ಕಾಗದದ ಮತಪತ್ರ ಬಳಕೆಯ ಬೇಡಿಕೆಯನ್ನು ಸರಕಾರ ಕಡೆಗಣಿಸುತ್ತಾ ಇದ್ದರೆ, ಚುನಾವಣಾ ಆಯೋಗಕ್ಕೆ ಗಟ್ಟಿ ಧ್ವನಿಯಲ್ಲಿ ಅದನ್ನು ಹೇಳಲು ಅವುಗಳಿಗೆ ಧೈರ್ಯವೇಕಿಲ್ಲ?

ಸಮಾಜವಾದಿ ರಾಮಮನೋಹರ ಲೋಹಿಯಾ ಅವರೊಂದು ಮಾತು ಹೇಳಿದ್ದರು: “ಝಿಂದಾ ಕೌಮೇ ಪಾಂಚ್ ಸಾಲ್ ತಕ್ ಇಂತಝಾರ್ ನಹೀಂ ಕರ್ ತಿ” (ಜೀವಂತ ಜನರು ಐದು ವರ್ಷಗಳ ಕಾಲ ಕಾಯುವುದಿಲ್ಲ.) ಹಾಗಾಗಿ ನಾವು ಕಾಯುತ್ತಿರುವುದು ಏಕಾಗಿ?

ಕೃಪೆ: ಎನ್.ಡಿ.ಟಿ.ವಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತೆಯರಿಗೆ ಸಹಾಯವಾಣಿ ಆರಂಭಿಸಿದ ಎಸ್‌ಐಟಿ

0
ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತರಿಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಹಾಯವಾಣಿ ತೆರೆದಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಸ್‌ಐಟಿ ಮುಖ್ಯಸ್ಥ ಬಿ.ಕೆ ಸಿಂಗ್, "ಹಾಸನ ಜಿಲ್ಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯ...