Homeಕರ್ನಾಟಕಆಹಾರ ಸಂಸ್ಕೃತಿ: ‘ಪರಕೀಯ’ವು ಸ್ವಕೀಯವಾಗುವ ಪರಿ

ಆಹಾರ ಸಂಸ್ಕೃತಿ: ‘ಪರಕೀಯ’ವು ಸ್ವಕೀಯವಾಗುವ ಪರಿ

- Advertisement -
- Advertisement -

“ನೂರಕ್ಕೆ ತೊಂಬತ್ತು ಪಾಲು ಭಾರತ ಭೂಮಾತೆ ಈಯ್ದ ಕಾಯಿಪಲ್ಯಗಳನ್ನೂ ಗಡ್ಡೆಗೆಣಸುಗಳನ್ನೂ ಹಣ್ಣುಹಂಪಲುಗಳನ್ನೂ ತಿಂದು ತೃಪ್ತಿಪಟ್ಟುಕೊಂಡಿದ್ದ ನಮ್ಮ ಹೊಟ್ಟೆಯೊಳಕ್ಕೆ, ಹದಿನಾರನೆಯ ಶತಮಾನದಿಂದ ಈಚೆಗೆ ಕಡಲಾಚೆಯಿಂದ ಕಾಲಿಟ್ಟ ಸಸ್ಯಜನ್ಯ ತಿನಿಸುಗಳು ಒದಗಿಬಂದವು. ಅವುಗಳಿಗೆ ನಮ್ಮ ನಾಲಿಗೆ ಲೊಟಗೆ ಹೊಡೆಯಿತು. ಹೊಟ್ಟೆ ತಾಳಹಾಕಿತು. ಹೀಗೆ ಬಂದ 50-100 ವರ್ಷಗಳೊಳಗಾಗಿ ಆಮದು ಸಸ್ಯಗಳ ಫಲವೇ ನಮ್ಮ ದೈನಂದಿನ ಉಣಿಸು ತಿನಿಸುಗಳಲ್ಲಿ ಮೇಲುಗೈಯಾಯಿತು. ಭಾರತೀಯ ಮಡಲಿನಲ್ಲಿ ಬೇರುಬಿಟ್ಟಿತು, ಬೆಳೆಯಿತು, ಸಾಗುವಳಿಗೆ ಒಗ್ಗಿತು, ಮಡಿಲ ವಿಸ್ತಾರದ ಬಹುಭಾಗವನ್ನು ಆಕ್ರಮಿಸಿಕೊಂಡಿತು. ಅದುವರೆಗೂ ನಮ್ಮ ಹೊಟ್ಟೆಪಾಡನ್ನು ನಿರ್ವಹಿಸಿಕೊಂಡು ಬಂದಿದ್ದ ಕಾಯಿಪಲ್ಯ ಹಣ್ಣು ಹಂಪಲುಗಳು ತೆರೆಯ ಹಿಂದೆ ಸರಿದವು. ‘ಸೀಮೆ’ ಆಹಾರವಸ್ತುಗಳು ಬಹಿರಂಗಕ್ಕೆ ಇಳಿದವು”

ಸಸ್ಯವಿಜ್ಞಾನಿ ಬಿಜಿಎಲ್. ಸ್ವಾಮಿಯವರ ‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ’ ಪುಸ್ತಕ ಶುರುವಾಗುವುದು ಹೀಗೆ. ಪುಸ್ತಕದಲ್ಲಿ ಟೊಮೊಟೊ, ಆಲೂಗಡ್ಡೆ, ಮುಸುಕಿನ ಜೋಳ, ಸೀತಾಫಲ, ನೆಲಗಡಲೆ, ಪಪ್ಪಾಯಿ, ತಿಂಗಳಹುರುಳಿ, ಸಪೋಟ, ಗೋಡಂಬಿ, ಸೀಮೆಬದನೆ, ಮರಗೆಣಸು, ಅನಾನಸು, ಸೀಬೆ ಮೊದಲಾದವು ಹೇಗೆ ಯಾವಾಗ ಬಂದವು ಎಂಬುದರ ವಿವರಣೆಯಿದೆ. ಜತೆಗೆ ಇವು ಹೇಗೆ ಭಾರತೀಯ ಅಡುಗೆ ಪದ್ಧತಿಯಲ್ಲೂ ಧಾರ್ಮಿಕ ಆಚರಣೆಗಳಲ್ಲೂ ಪ್ರವೇಶಿಸಿ ತಮ್ಮ ಪರಕೀಯತೆ ಕಳೆದುಕೊಂಡಿವೆ ಎಂಬ ಚಿತ್ರಣವೂ ಇದೆ.

ಆದರೆ ಪರಕೀಯವನ್ನು ಸ್ವಕೀಯಗೊಳಿಸುವ ಈ ಪ್ರಕ್ರಿಯೆ, ಹಣ್ಣು ತರಕಾರಿಗಳಿಗೆ ಸೀಮಿತವಾಗದು. ಭಾಷೆ ಬಟ್ಟೆ ಯಂತ್ರ ಸಾಹಿತ್ಯ ರಾಜಕಾರಣ, ಒಟ್ಟಾರೆ ಸಂಸ್ಕೃತಿಗೇ ಅನ್ವಯವಾಗುತ್ತದೆ. ಸಂಸ್ಕೃತಿ ಎನ್ನುವುದು ಭಾಷೆ ಸಾಹಿತ್ಯ ಧರ್ಮ ರಾಜಕಾರಣ ಸಮಾಜಗಳನ್ನೆಲ್ಲ ಒಳಗೊಳ್ಳುವ ವಿಶಾಲ ಹರಹಿನ ಪರಿಕಲ್ಪನೆಯಾಗಿ ಬಳಕೆಯಾಗುತ್ತಿದೆ. ಇದನ್ನು ಪ್ರದೇಶ ವಿಶಿಷ್ಟವಾದ ಆಹಾರಪದ್ಧತಿ ಉಡುಗೆತೊಡುಗೆ ಹಬ್ಬ ಜಾತ್ರೆ ಆಚರಣೆಗಳೆಂಬ ಸೀಮಿತ ಅರ್ಥದಲ್ಲಿಟ್ಟು ಹೇಳುವುದಾದರೆ, ದೈನಿಕ ಜೀವನದಲ್ಲಿರುವ ವಸ್ತುಗಳ ಮೂಲದ ಬಗ್ಗೆ ತಲೆಕೆಡಿಸಿಕೊಳ್ಳದೆ, ಅದು ಉಪಯುಕ್ತವಾಗಿದ್ದರೆ ಒಳಗೊಂಡು ಬದುಕುವ ನಿಲುವನ್ನು ಭಾರತದ ಸಂಸ್ಕೃತಿಗಳು ಪ್ರಕಟಿಸುತ್ತ ಬಂದಿವ. ಬ್ರಿಟಿಷರು ಬಂದಾಗ ನಮ್ಮ ಜನ ಪಂಚೆಯ ಮೇಲೆ ಯೂರೋಪಿಯನ್ ಕೋಟನ್ನು ಹಾಕುವುದಕ್ಕೆ ಆರಂಭಿಸಿದರು. ಒಂದು ಕಾಲಕ್ಕೆ ಪಂಜಾಬಿ ಮಹಿಳೆಯರು ಮಾತ್ರ ತೊಡುತ್ತಿದ್ದ ಪೈಜಾಮ-ಸಲ್ವಾರ್ ಕಮೀಜ್ ತನ್ನ ಉಪಯುಕ್ತತೆಯ ದೆಸೆಯಿಂದ ಅಖಿಲ ಭಾರತೀಯವಾಗಿದೆ. ಶಾಲಾ ಕಾಲೇಜುಗಳಲ್ಲಿ ಪ್ಯಾಂಟು-ಶರಟು, ಸಹಜವಾಗಿ ನೆಲೆಸಿದೆ. ಪಾಶ್ಚಿಮಾತ್ಯ ವಿಜ್ಞಾನ ತಂತ್ರಜ್ಞಾನ ಇಂಗ್ಲೀಷ್ ಮೊದಲಾದ ವಿಷಯದಲ್ಲೂ ಈ ಉಪಯುಕ್ತವಾದವು ಕೆಲಸ ಮಾಡುತ್ತದೆ. ಆದರೆ ಹೀಗೆ ಸ್ವೀಕರಿಸುವ ಗುಣವುಳ್ಳ ಸಮಾಜವು ತನ್ನ ವೈವಿಧ್ಯಗಳನ್ನು ತರತಮದ ಜತೆಯೇ ಸಂಭಾಳಿಸುತ್ತದ.

ಈ ಮುಕ್ತ ಸ್ವೀಕರಣ ಧೋರಣೆಯನ್ನು ಭಾರತದ ಆಹಾರ ಸಂಸ್ಕೃತಿ ಚೆನ್ನಾಗಿ ಪ್ರಕಟಿಸುತ್ತ ಬಂದಿದೆ. ಸಂಪ್ರದಾಯಸ್ಥ ಸಮಾಜಗಳಲ್ಲಿ ಆಹಾರವು ಮಡಿಮೈಲಿಗೆ ಅಸ್ಪೃಶ್ಯತೆ ನಿಷೇಧಗಳ ಉಪಕರಣ. ಏನನ್ನು, ಯಾರ ಜತೆ, ಯಾವಾಗ, ಯಾರು ತಯಾರಿಸಿದ್ದನ್ನು ತಿನ್ನಬಾರದು ಎಂಬ ವಿಧಿನಿಷೇಧಗಳ ಜಗತ್ತಿದು. ಆದರೆ ಇಲ್ಲಿಯೇ ಅತಿಹೆಚ್ಚು ವೈವಿಧ್ಯಗಳು ಏರ್ಪಟ್ಟಿವೆ. ಸ್ವೀಕರಣಗಳು ಸಂಭವಿಸಿವೆ. ಬಿರಿಯಾನಿ ಪಲಾವ್ ಕಬಾಬ್ ಕುರ್ಮ ಮೊದಲಾದ ಮಾಂಸಾಹಾರಿ ತಿನಿಸುಗಳು ಮಧ್ಯ ಏಶಿಯಾದಿಂದ ಬಂದವು. ಬ್ರೆಡ್-ಚೀಸ್, ಇಟಲಿಯ ರೊಟ್ಟಿ ಪಾಶ್ಚಾತ್ಯ ದೇಶಗಳವು. ನ್ಯೂಡಲ್ಸ್ ಮಂಚೂರಿಗಳು ಚೀನಾದವು.

ಆಹಾರದ ವೈವಿಧ್ಯದ ವಿಷಯದಲ್ಲಿ ಕರ್ನಾಟಕವೂ ಹೊರತಾಗಿಲ್ಲ. ಇಲ್ಲಿ ವರ್ಷದ ಮುನ್ನೂರ ಅರವತ್ತು ದಿನವೂ ಪುನರಾವರ್ತನೆ ಇಲ್ಲದೆ ಸಾರು ಮಾಡಬಲ್ಲ ಮನೆಗಳಿವೆ. ಒಂದು ಸಾವಿರಕ್ಕೂ ಮಿಕ್ಕಿ ಸಾರಿನ ಪ್ರಭೇದಗಳಿವೆ. ಒಂದೇ ಆಹಾರವು ಪ್ರದೇಶವಾರು ಮಾತ್ರವಲ್ಲದೆ, ಜಾತಿ ಮತ್ತು ಧಾರ್ಮಿಕ ಸಮುದಾಯಗಳ ಹಿನ್ನೆಲೆಯಲ್ಲೂ ಬೇರೆಯಾಗುತ್ತದೆ. ಕೋಳಿಸಾರನ್ನು ದಲಿತರು ಒಕ್ಕಲಿಗರು ಮೈಸೂರಿನವರು ಕರಾವಳಿಯವರು ಮುಸ್ಲಿಮರು ಆದಿವಾಸಿಗಳು ತಯಾರಿಸುವ ರೀತಿಯಲ್ಲಿ ಬೇರೆಯೇ ರುಚಿ ಪರಿಮಳ ಇರುತ್ತದೆ.

ಭಾರತದ ಸಾಂಪ್ರದಾಯಿಕ ಆಹಾರ ತಯಾರಿಕೆಯ ಸಾಮಗ್ರಿಗಳು ಜಗತ್ತಿನ ನಾನಾ ಭಾಗಗಳಿಂದ ಆಗಮಿಸುತ್ತವೆ. ಕೇಸರಿ ಕಾಶ್ಮೀರದಿಂದ, ಇಂಗು ಆಫ್ಘಾನಿಸ್ಥಾನದಿಂದ, ಗರಂ ಮಸಾಲೆ ಘಟ್ಟಪ್ರದೇಶದಿಂದ, ಬೆಳ್ಳುಳ್ಳಿ ಪಾಕಿಸ್ತಾನದಿಂದ, ತಾಳೆಯೆಣ್ಣೆ ಮಲೇಶಿಯಾದಿಂದ, ಬದಾಮಿ ಅಮೆರಿಕದಿಂದ, ಖರ್ಜೂರ ಅರಬಸ್ಥಾನದಿಂದ. ದಕ್ಷಿಣ ಕರ್ನಾಟಕದ ಜನಪ್ರಿಯ ಆಹಾರ ಮುದ್ದೆಗೆ ಬೇಕಾದ್ದು ಬಂದಿದ್ದು ಆಫ್ರಿಕಾದಿಂದ. ನಮ್ಮ ಆಹಾರ ಸಂಸ್ಕೃತಿಯಲ್ಲಿ ಬಳಕೆಯಾಗುವ ಪದಾರ್ಥಗಳ ಖಂಡಾಂತರ ಮೂಲವು ಗುರುತಿಸಲು ಕಷ್ಟವಾಗುವಂತೆ ಮಿಲನ ಏರ್ಪಟ್ಟಿದೆ.

ಕರ್ನಾಟಕದ ಆಹಾರ ಬಹುತ್ವದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರಗಳ ಪಾಲು ಸಮಸಮನಾಗಿದೆ. ರೊಟ್ಟಿಗಳಲ್ಲಿ ಹಾಸನ ಸೀಮೆಯ ಬಳೇರೊಟ್ಟಿ, ಕರಾವಳಿ ಕೋರಿರೊಟ್ಟಿ, ತಾಳಿಪಟ್ಟು, ತಂದೂರಿ, ರುಮಾಲಿ ರೋಟಿ, ರಾಜಸ್ಥಾನದ ಫುಲ್ಕ ಮತ್ತು ಕೆಂಡದ ರೊಟ್ಟಿ, ಚಳ್ಳಕೆರೆ ಭಾಗದ ಹಬೆಚಪಾತಿ. ಅನ್ನಗಳಲ್ಲಿ ಚಿತ್ರಾನ್ನ ಹುಳಿಯನ್ನ ಪುಳಿಯೊಗರೆ ಮೊಸರನ್ನ ಮೆಂತ್ಯಬಾತ್ ಟೊಮೊಟೊಬಾತ್, ವಾಂಗಿಬಾತ್; ಜನಪ್ರಿಯ ಸಂಸ್ಕೃತಿಯ ಭಾಗವಾಗಿರುವ ಮಾಂಸಾಹಾರದಲ್ಲೂ ಬಹಳ ವೈವಿಧ್ಯಗಳಿವ. ಮಂಡ್ಯ ಸೀಮೆಯಲ್ಲಿ ಬೀಗರೂಟವು ಖ್ಯಾತವಾಗಿರುವುದು ಮಾಂಸದ ಅಡುಗೆಗಳಿಂದ. ಉರುಸು ಮಾರಿಹಬ್ಬ ಜನಪ್ರಿಯವಾಗಿರುವುದು ಮಾಂಸ ಭಕ್ಷ್ಯಗಳಿಂದ.

ಸಾಮಾನ್ಯವಾಗಿ ಉತ್ತರ ಕರ್ನಾಟಕವು ಜೋಳದ, ಕರಾವಳಿ-ಮಲೆಸೀಮೆಗಳು ಅಕ್ಕಿಯ, ದಕ್ಷಿಣ ಕರ್ನಾಟಕವು ರಾಗಿಯ ಕೇಂದ್ರದಲ್ಲಿ ತಮ್ಮ ಆಹಾರ ಸಂಸ್ಕೃತಿ ರೂಪಿಸಿಕೊಂಡಿವೆ. ಆದರೆ ಈ ಸಂಸ್ಕೃತಿಗಳು ಅಂತರ್‌ಪ್ರಾಂತೀಯ ಚಲನೆಯನ್ನೂ ಪಡೆದುಕೊಂಡಿವೆ. ಉಡುಪಿ ಹೋಟೆಲುಗಳ ದೆಸೆಯಿಂದ ದಕ್ಷಿಣ ಕರ್ನಾಟಕಕ್ಕೆ ಸೀಮಿತವಾದ ಇಡ್ಲಿ ದೋಸೆಗಳು ಅಖಿಲ ಕರ್ನಾಟಕವಾಗಿವೆ. ಕೆಲವು ಊರುಗಳು ಒಂದೊಂದು ವಿಶಿಷ್ಟ ಆಹಾರಕ್ಕೆ ಹೆಸರಾಗಿವೆ. ಕ್ಯಾತ್ಸಂದ್ರದ ತಟ್ಟೆಇಡ್ಲಿ, ದಾವಣಗೆರೆಯ ಬೆಣ್ಣೆದೋಸೆ, ಗೋಕಾಕದ ಕರದಂಟು, ಬೆಳಗಾವಿಯ ಕುಂದಾ, ಮಂಗಳೂರಿನ ನೀರ್‌ದೋಸೆ ಇತ್ಯಾದಿ. ಕೆಲವು ಆಹಾರಗಳಿಗೆ ಕೆಲವು ಹೋಟೆಲುಗಳು ಪ್ರಸಿದ್ಧವಾಗಿವೆ- ಮೈಲಾರಿ ಹೋಟೆಲಿನ ದೋಸೆ, ಕುಂದಾಪುರದ ಶೆಟ್ಟಿ ಮತ್ತು ಮಂಗಳೂರಿನ ನಾರಾಯಣ ಹೋಟೆಲಿನ ಮೀನೂಟ, ಧಾರವಾಡದ ಪ್ರಭು ಖಾನಾವಳಿಯ ರೊಟ್ಟಿ, ಬಿಡದಿಯ ರೇಣುಕಾ ಹೋಟೆಲಿನ ತಟ್ಟೆಯಿಡ್ಲಿ, ಶಿವಾಜಿನಗರದ ಬಿರಿಯಾನಿ, ಬಾಬುರಾಯನಕೊಪ್ಪಲಿನ ತಲೆಕಾಲು ಬೋಟಿಸಾರು, ಗಾಂಧಿಬಜಾರಿನ ವಿದ್ಯಾರ್ಥಿಭವನದ ಮಸಾಲೆದೋಸೆ, ಎಂಟಿಆರ್‌ನ ತಿಂಡಿಗಳು ಹೀಗೆ. ಈಚೆಗೆ ಅಡುಗೆಯ ಯೂಟೂಬ್ ಚಾನಲ್ಲುಗಳೂ ಪಾಕತಜ್ಞರೂ ಜನಪ್ರಿಯ ಆಗಿರುವುದುಂಟು. ಮುಖ್ಯವಾಗಿ ಮೀನು-ಮಾಂಸದ ಅಡುಗೆಗಳು ಹಿಂಜರಿಕೆ ಕಳೆದುಕೊಂಡಿವೆ. ಒಂದು ಪ್ರದೇಶದ ಆಹಾರವು ಅಡುಗೆಪುಸ್ತಕದ ನೆರವಿಲ್ಲದೆಯೇ ಮತ್ತೊಂದು ಪ್ರದೇಶಕ್ಕೆ ಸುಲಭವಾಗಿ ವಲಸೆಹೋಗುತ್ತಿದೆ. ಸಾಂಸ್ಕೃತಿಕ ಬಹುತ್ವದ ದೃಷ್ಟಿಯಿಂದ ಆಹಾರವು ಉಡುಪು ಭಾಷೆಗಳಿಗಿಂತ ಹೆಚ್ಚು ಸಂಚಲನಕಾರಿ.

ಆಹಾರ ಬಹುತ್ವಕ್ಕೂ ಮೇಲ್ವರ್ಗದ ವಿಲಾಸಿ ಅಭಿರುಚಿ, ಆರೋಗ್ಯ, ಜನವಲಸೆಗಳಿಗೂ ವಿಶಿಷ್ಟ ಸಂಬಂಧವಿದೆ. ಬೆಂಗಳೂರು ಕಾಸ್ಮೊಪಾಲಿಟನ್ ನಗರವಾಗಿ ಬೆಳೆದ ಬಳಿಕ, ಜಾಗತಿಕ ವರ್ಗಾವಣೆಯಿರುವ ಕಂಪನಿಗಳಲ್ಲಿ ದುಡಿವವರು ವಲಸೆ ಬಂದಿದ್ದಾರೆ. ಇಲ್ಲಿ ಗುಜರಾತಿ ಬಂಗಾಳಿ ರಾಜಸ್ಥಾನಿ ಕೇರಳ; ಚೀನೀ ಜಪಾನಿ ಥಾಯಿ ಇಟಾಲಿಯನ್ ಟರ್ಕಿಶ್ ಅರೇಬಿಯನ್ ಆಹಾರಗಳು ಲಭ್ಯವಿವೆ. ವಿಶ್ವಾತ್ಮಕ ಮತ್ತು ಸ್ಥಳೀಯ ಆಹಾರಗಳೆರಡೂ ಒಂದೇ ಹೋಟೆಲಿನಲ್ಲಿ ಉಣ್ಣಬಹುದು. ಇವನ್ನು ಒಂದೇ ಟೇಬಲಿನಲ್ಲಿ ಕೂತು ತರಿಸಿಕೊಂಡು ಜನ ತಿನ್ನುವರು. ಈ ಸಹನಶೀಲ ಬಹುತ್ವದ ಹಿಂದೆ ಉಚ್ಚವರ್ಗದ ಜೀವನಕ್ರಮದ ಸ್ವಾತಂತ್ರ್ಯವೂ ಇದೆ. ಉತ್ತರ ಕರ್ನಾಟಕದ ರೊಟ್ಟಿಯೂಟ, ಕರಾವಳಿಯ ಮೀನೂಟ, ದಕ್ಷಿಣ ಕರ್ನಾಟಕದ ಮುದ್ದೆ-ಉಪ್ಸಾರು, ಕೊಡಗಿನ ಪಂದಿಕರಿ ಸಿಗುತ್ತವೆ. ಹೋಟೆಲುಗಳು ಬೇರೆಬೇರೆ ಭಾಗಕ್ಕೆ ಅಡುಗೆಯವರನ್ನು ಕಳಿಸಿ ಬಂಗುಡೆ ಮಸಾಲೆ ವಗ್ಗಾಣಿ ಮಿರ್ಚಿ ಜೋಳದರೊಟ್ಟಿ ಬಿರಿಯಾನಿ ಮಾಡುವ ತರಬೇತಿ ಕೊಡಿಸಿವೆ. ಬಡಿಸಲು ದೇಶೀ ಉಡುಪು ಧರಿಸಿದ ಹಲವು ಭಾಷೆಯನ್ನಾಡುವ ಮಾಣಿಗಳು. ಊಟ ಮಾಡುವಾಗ ಕಾಣುವಂತೆ ನಾಡಿನ ವಿಭಿನ್ನ ಪ್ರದೇಶದ ರಂಗಭೂಮಿ ಕ್ರೀಡೆ ನೃತ್ಯ ಜಾತ್ರೆಗಳ ಪಟಗಳನ್ನು ಹಾಕಿ ಸ್ಥಳೀಯ ಪರಂಪರೆಯ ಭಾವ ಬರುವಂತೆ ಮಾಡಲಾಗಿದೆ.

ಆಹಾರ ಬಹುತ್ವ ಮತ್ತು ದೇಶೀಯತೆಯು ಈಗ ಅನಾರೋಗ್ಯದಿಂದ ತಪ್ಪಿಸಿಕೊಳ್ಳುವ ಅನಿವಾರ್ಯತೆಯಿಂದಲೂ ಏರ್ಪಡುತ್ತಿದೆ. ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಬಂದ ಅಣೆಕಟ್ಟು, ಹಸಿರುಕ್ರಾಂತಿ, ಯಾಂತ್ರೀಕೃತ ಕೃಷಿ, ಜಂಕ್‌ಫುಡ್ಡಿನ ಜನಪ್ರಿಯತೆಗಳು, ಬೆಳೆ ಮತ್ತು ಆಹಾರ ಪದ್ಧತಿಯಲ್ಲಿದ್ದ ಪಾರಂಪರಿಕ ಬಹುತ್ವ ಮತ್ತು ದೇಶೀಯತೆಯನ್ನು ವಿಚಲಿತಗೊಳಿಸಿದವು. ಈಗಲೂ ಡ್ಯಾಮಿನ ಹಿಂದು-ಮುಂದಿನ ಬೆಳೆ ಮತ್ತು ಆಹಾರ ಪದ್ಧತಿಗಳ ವ್ಯತ್ಯಾಸ ಗಮನಿಸಬಹುದು. ಡ್ಯಾಮಿನ ಹಿಂದೆ ಕಾಲುವೆ ನೀರು ಹರಿಯದ ಜಾಗಗಳಲ್ಲಿ ಮಳೆಯಾಸರೆಯ ಹತ್ತಾರು ಬೆಳೆಯನ್ನು ಬೆಳೆವ ಹೊಲಗಳಿದ್ದರೆ, ಡ್ಯಾಮಿನ ಮುಂದೆ ಕಾಲುವೆ ನೀರಿನಿಂದ ಗದ್ದೆಗಳಲ್ಲಿ ಕೇವಲ ಭತ್ತ ಬಾಳೆ ಕಬ್ಬು. ಈ ಬೆಳೆಪದ್ಧತಿ ಮತ್ತು ಆಹಾರಗಳ ಏಕರೂಪಿಕರಣವು ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಹುಟ್ಟುಹಾಕಿತು. ಸಮಾಜ ಏಕರೂಪಿಯಾದ ಕೃತಕ ಆಹಾರದಿಂದ ಬಹುತ್ವದ ಸಹಜ ಆಹಾರಕ್ಕೆ ಹಿಂದಿರುಗಲು ಆರಂಭಿಸಿತು. ಸಹಜಕೃಷಿ ಸಾವಯವ ಕೃಷಿಗಳು ಜನಪ್ರಿಯ ಆದವು. ಭತ್ತದ ಬೆಳೆಯ ಸಾರ್ವತ್ರಿಕತೆಯಿಂದ ಬಡವರ ಧಾನ್ಯಗಳೆಂದು ತಿರಸ್ಕೃತವಾಗಿದ್ದ ರಾಗಿ ಜೋಳ ನವಣೆ ಬರಗ ಕೊರಲೆ ಸಾವೆಗಳಿಗೂ ಅವುಗಳ ಆಹಾರಕ್ಕೂ ಹೊಸ ಮಾರುಕಟ್ಟೆ ಸೃಷ್ಟಿಯಾಯಿತು. ಹೋಟೆಲುಗಳಲ್ಲಿ ಸಿರಿಧಾನ್ಯದ ಆಹಾರ ಲಭ್ಯವಾಗತೊಡಗಿತು. ಈ ಬಹುತ್ವವು ಬಿಕ್ಕಟ್ಟನ್ನು ಎದುರಿಸುತ್ತ ಅಸ್ತಿತ್ವ ಉಳಿಸಿಕೊಳ್ಳುವುದರ ಭಾಗವಾಗಿ ಬಂದಿದ್ದು. ಆಹಾರ ಸಂಸ್ಕೃತಿಯಲ್ಲಿರುವ ಶ್ರೇಣೀಕರಣ ಮತ್ತು ತರತಮವನ್ನು ಅಳಿಸಲೆಂದು ಅಲ್ಲ. ಇದನ್ನು ಬಿಕ್ಕಟ್ಟಿನಲ್ಲಿ ಹುಟ್ಟುವ ಬಹುತ್ವಪ್ರಜ್ಞೆ ಎನ್ನಬಹುದು.

ಜಾಗತೀಕರಣದ ಭಾಗವಾಗಿರುವ ಬಂಡವಾಳವಾದವು, ಸಾಮಾನ್ಯವಾಗಿ ತನ್ನ ಏಕರೂಪೀ ಉತ್ಪನ್ನಗಳಿಗೆ ಬೇಕಾದ ಮಾರುಕಟ್ಟೆ ಸೃಷ್ಟಿಸಲು, ಸ್ಥಳೀಯ ವೈವಿಧ್ಯವನ್ನು ನಾಶ ಮಾಡುತ್ತದೆ. ಅಮೆರಿಕನ್ ಪಾನೀಯ ಕಂಪನಿಗಳು ಇದಕ್ಕೆ ನಿದರ್ಶನ. ಆದರೆ ಇದೇ ಮಾರುಕಟ್ಟೆ ಶಕ್ತಿಗಳು ಲಾಭಕ್ಕಾಗಿ ಸ್ಥಳೀಯ ವೈವಿಧ್ಯ ಮತ್ತು ಬಹುತ್ವವನ್ನು ಬಳಸುತ್ತವೆ. ನಮ್ಮ ಆಹಾರ ವೈವಿಧ್ಯ ಮತ್ತು ಬಹುತ್ವದ ಹಿಂದೆ ಆಧುನಿಕ ಬಂಡವಾಳಶಾಹಿ ಉತ್ಪಾದನಾ ಕ್ರಮವು ಹುಟ್ಟಿಸಿದ ಏಕರೂಪೀತನದ ಒತ್ತಡವಿರಬಹುದು; ಆಹಾರದ ಏಕತಾನದಿಂದ ಬದಲಾವಣೆ ಬಯಸುವ ಮಧ್ಯಮವರ್ಗದ ವಿಲಾಸಿ ಬದುಕಿನ ಆಶೋತ್ತರಗಳಿರಬಹುದು. ನಫೆಗಾಗಿ ಏಕಾಕಾರೀ ದ್ವೇಷ ಅಥವಾ ಬಹುತ್ವರೂಪೀ ಸಹನಶೀಲತೆಯನ್ನೂ ಮಾರುವ ವ್ಯಾಪಾರಿ ಜಗತ್ತಿನ ಅವಕಾಶವಾದಿ ಧೋರಣೆಯೂ ಇರಬಹುದು. ಮಹಾನಗರಗಳ ಆಹಾರ ಬಹುತ್ವವು ಕಾಸ್ಮೊಪಾಲಿಟನ್ ನಗರದ ಗ್ರಾಹಕರನ್ನು ಸೆಳೆಯಲು ರೂಪುಗೊಂಡ ವಣಿಕ ತಂತ್ರವೇ ಹೊರತು, ಭಾರತದ ರಾಜಕೀಯ ಸಾಮಾಜಿಕ ಬಹುತ್ವಕ್ಕೆ ಸಂಬಂಧಪಟ್ಟಿದ್ದಲ್ಲ. ಯಾಕೆಂದರೆ ಇದೇ ಮಹಾನಗರಗಳು, ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ, ಏಕರೂಪೀ ಸಂಸ್ಕೃತಿಯ ಹೇರುವ ಬಲಪಂಥೀಯ ಪಕ್ಷಗಳನ್ನು ಸಾಮಾನ್ಯವಾಗಿ ಚುನಾವಣೆಗಳಲ್ಲಿ ಆರಿಸುವರು.

ಇದನ್ನೂ ಓದಿ: ಆಹಾರ ಶ್ರೇಷ್ಠತೆಯ ರಾಜಕೀಯದ ವಿವಿಧ ಮುಖಗಳು

ಆಹಾರ ಬಹುತ್ವವು ನಾನಾ ಕಾರಣಗಳಿಂದ ಚಳವಳಿಯಾಗಿ ಮೌಲ್ಯವಾಗಿ ಹರಡುತ್ತಿರುವ ಕಾಲಕ್ಕೆ, ಮಾಂಸಾಹಾರವನ್ನು ತಾಮಸವೆಂದು ಹೀಗಳೆವ ಸಂಗತಿಗಳು ಭಾರತದಲ್ಲಿ ಹೆಚ್ಚಾಗುತ್ತಿವೆ. ಇದೊಂದು ವೈರುಧ್ಯ. ಆದರೆ ಈ ವೈರುಧ್ಯದ ಬೇರುಗಳು ನಮ್ಮ ಸಂಪ್ರದಾಯಗಳಲ್ಲಿವೆ. ಕನ್ನಡ ಸಾಹಿತ್ಯದಲ್ಲಿ ಮಾಂಸಾಹಾರ ತಯಾರಿಕೆ ಮತ್ತು ಉಣ್ಣುವ ವರ್ಣನೆಗಳು ತೀರ ಕಡಿಮೆ. ಮಾಂಸಾಹಾರವನ್ನು ಅಸಹ್ಯವೆಂದೂ ಹಿಂಸೆಯೆಂದೂ ಬಣ್ಣಿಸುವ ನೂರಾರು ಸನ್ನಿವೇಶಗಳು ಕನ್ನಡ ಸಾಹಿತ್ಯದಲ್ಲಿವೆ. ಜೈನ ಲಿಂಗಾಯತ ಬ್ರಾಹ್ಮಣ ಲೇಖಕರು, ಮಾಂಸಾಹಾರ ಪ್ರಾಣಿಬಲಿಗಳ ಮೇಲೆ ತಳೆದ ಧಾರ್ಮಿಕ ನಿಲುವು ಸಹ ಆಹಾರದ ದುರುಳೀಕರಣವನ್ನು ಸಾಮಾನ್ಯವಾಗಿಸಿತು. ಕನ್ನಡದ ಸಿನಿಮಾಗಳಲ್ಲೂ ಮಾಂಸಾಹಾರ ಅಡುವ-ತಿನ್ನುವ ದೃಶ್ಯ ಕಡಿಮೆ. ನಿಜಜೀವನದಲ್ಲಿ ಮಾಂಸಾಹಾರಿಯಾಗಿದ್ದ ರಾಜಕುಮಾರ್ ಅವರ ಚಿತ್ರಗಳಲ್ಲಿ ಮುದ್ದೆ ಅನ್ನ ರೊಟ್ಟಿ ತಿನ್ನುವ ದೃಶ್ಯಗಳು ಮಾತ್ರ ಇವೆ. ಕನ್ನಡ ಸಿನಿಮಾ ನಿರ್ಮಾಣದಲ್ಲಿ ಬ್ರಾಹ್ಮಣವಾದಿ ಆಲೋಚನೆ ದೊಡ್ಡ ಪ್ರಮಾಣದಲ್ಲಿ ಸಕ್ರಿಯವಾಗಿದ್ದುದು ಇದಕ್ಕೊಂದು ಕಾರಣ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಕೇಡಿಯ ಬಣ್ಣ ಕಪ್ಪು. ಅವನು ಮಾಂಸಾಹಾರಿ ಮತ್ತು ಸೆರೆಗುಡುಕ. ಆಹಾರವೈವಿಧ್ಯಕ್ಕೆ ವಿರುದ್ಧವಾದ ಮನೋಭಾವವನ್ನು ಬ್ರಾಹ್ಮಣವಾದಿ ಸಿನಿಮಾ ಮತ್ತು ಸಾಹಿತ್ಯಗಳು ಉದ್ದಕ್ಕೂ ಉತ್ಪಾದಿಸಿದವು. ವಿದೇಶೀ ಉಡುಗೆ ಭಾಷೆ ಆಧುನಿಕತೆ ತಂತ್ರಜ್ಞಾನ ತರಕಾರಿ ಹಣ್ಣು ಆಹಾರಗಳ ಸ್ವೀಕಾರದಲ್ಲಿ ಉದಾರವಾದಿ ಆಗಿರುವ ಸಮಾಜವು, ಹಿಂಸೆ ಜಾತಿ ಮತೀಯ ಅಸ್ಮಿತೆಗಳಿಗೆ ತಗುಲಿಕೊಂಡು ಮಾಂಸಾಹಾರದ ಬಗ್ಗೆ ನೇತ್ಯಾತ್ಮಕ ಧೋರಣೆ ಬೆಳೆಸಿಕೊಂಡಿದ್ದು ವೈರುಧ್ಯ. ಕುವೆಂಪು ‘ರಾಮಾಯಣ ದರ್ಶನಂ’ ಬರೆದು ಮುಗಿಸುವ ತನಕ ಮಾಂಸಾಹಾರ ತ್ಯಜಿಸಿದ್ದರು ಎಂಬ ಮಾಹಿತಿ ಕೂಡ, ಆಹಾರವು ಆಧ್ಯಾತ್ಮಿಕ ಸಾಧನೆಗೆ ತೊಡಕು ತಾಮಸ ಎಂಬ ನಿಲುವಿನಿಂದ ಹುಟ್ಟಿದ್ದು. ಬೆಂಗಳೂರಿನಲ್ಲಿ ಕಾಫಿ ಚಹಗಳನ್ನು, ವಿದೇಶದಿಂದ ಬಂದವು ಮತ್ತು ತಾಮಸಗುಣ ಹೊಂದಿವೆಯೆಂದು ಹೊರಗಿನ ಗೂಡಿನಲ್ಲಿ ಸರಬರಾಜು ಮಾಡುವ ಹೋಟೆಲುಗಳಿವೆ. ಭಾರತದಲ್ಲಿ ಸಸ್ಯಾಹಾರವಾದವು ವೈಜ್ಞಾನಿಕವಾಗಿ ತಪ್ಪಾಗಿದೆ ಮಾತ್ರವಲ್ಲ, ಸಾಂಸ್ಕೃತಿಕವಾಗಿ ಬಹುರೂಪತೆಯನ್ನು ನಿರಾಕರಿಸುವ ಶುದ್ಧತೆಯ ವ್ಯಸನವಾಗಿದೆ. ಹೆಚ್ಚಿನ ’ಶುದ್ಧ’ ಸಸ್ಯಾಹಾರಿಗಳು ಹಿಂಸೆಯಲ್ಲಿ ನಂಬಿಕೆಯುಳ್ಳ ಸಿದ್ಧಾಂತಗಳಲ್ಲಿ ರಾಜಕೀಯ ಒಲವುಳ್ಳವರಾಗಿರುತ್ತಾರೆ.

ಹೀಗೆ ಸಸ್ಯಾಹಾರವಾದವು ಭಾರತದಲ್ಲಿ ಆಹಾರ ವೈವಿಧ್ಯವನ್ನು ನಿರಾಕರಿಸುವ, ಆಹಾರ ದ್ವೇಷಿಸುವ ಮತ್ತು ಹೇರುವ ಉಪಕರಣವಾಗಿದೆ. ಕನ್ನಡದಲ್ಲಿ ಮಾಂಸಾಹಾರ ಸಸ್ಯಾಹಾರ ಶಬ್ದಗಳು ಆಹಾರ ಸಂಸ್ಕೃತಿಯನ್ನು ಲಂಬವಾಗಿ ವಿಭಜಿಸುವ ತರತಮೀಯ ಪರಿಕಲ್ಪನೆಗಳಾಗಿದ್ದು, ಇವು ಅವಾಸ್ತವಿಕವೂ ಆಗಿವೆ. ನಮ್ಮ ಸಮಾಜದಲ್ಲಿ ಕೇವಲ ಮಾಂಸಾಹಾರಿಗಳಿಲ್ಲ. ಅನ್ನ ಮುದ್ದೆ ರೊಟ್ಟಿಗಳ ಭಾಗವಾಗಿಯೇ ಮಾಂಸ ಮೀನು ಮೊಟ್ಟೆ ಸ್ವೀಕರಿಸುವರು. ಮಾಂಸದ ಸಾರಿನಲ್ಲಿ ತರಕಾರಿ ಹಾಕುವರು. ಸಸ್ಯಾಹಾರವಲ್ಲದ್ದು ಎಂಬ ನೇತ್ಯಾತ್ಮಕ ಪರಿಕಲ್ಪನೆಯಲ್ಲಿ ಹುಟ್ಟಿದ ‘ನಾನ್‌ವೆಜ್’ ಶಬ್ದ ಮತ್ತಷ್ಟು ಬಹುತ್ವವಿರೋಧಿ. ‘ಸಸ್ಯಾಹಾರ’ ‘ಶುದ್ಧಸಸ್ಯಾಹಾರ’ ಪರಿಕಲ್ಪನೆಗಳು ವೈಜ್ಞಾನಿಕವಲ್ಲ. ಹಾಲು ತುಪ್ಪ ಮೊಸರ ಮಜ್ಜಿಗೆಗಳು ಪ್ರಾಣಿಜನ್ಯ ವಸ್ತುಗಳು. ಮೊಸರು ಮಜ್ಜಿಗೆಗಳಲ್ಲಿರುವ ಹುಳಿಯನ್ನು, ದೋಸೆ ಇಡ್ಲಿ ಹಿಟ್ಟಿನಲ್ಲಿರುವ ಬುರುಗನ್ನು ಸೂಕ್ಷ್ಮ ಜೀವಾಣುಗಳು ಸೃಷ್ಟಿಸುತ್ತವೆ. ಜೇನಂತೂ ಕೀಟಗಳ ಎಂಜಲು. ಹಾಲನ್ನು ಕರುವಿನಿಂದ ಜೇನನ್ನು ಕೀಟಗಳಿಂದ ಕಸಿದುಕೊಳ್ಳುವುದು ಹಿಂಸೆಯೇ.

ಚಿತ್ರನಟ ರಾಜಕುಮಾರ್ ಅವರು ಮಾಂಸಾಹಾರ ಸವಿಯುತ್ತಿರುವ ಪಟವೊಂದು ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. ಅದನ್ನು ಮಾಂಸಾಹಾರ ಪ್ರಿಯರು ತಮ್ಮ ಆಹಾರದ ಜನಪ್ರಿಯತೆಗೂ ಅದರ ನ್ಯಾಯಬದ್ಧತೆಗೂ ನಿದರ್ಶನವಾಗಿ ಬಳಸುವರು. ಇದು ಆಹಾರವು ತನ್ನ ಸಹಜ ಅಸ್ತಿತ್ವಕ್ಕೆ ಮಾಡುವ ಹೋರಾಟದ ಸಂಕೇತದಂತಿದೆ. ಮಾಂಸಾಹಾರವನ್ನು ತಾಮಸ ಆಹಾರವೆಂದು ಹೀಗಳೆವ ಸಂಗತಿಗಳು ಸಮಾಜದಲ್ಲಿ ಹೆಚ್ಚಾಗುತ್ತಿವೆ. ಶಾಲೆಯ ಮಕ್ಕಳಿಗೆ ಮೊಟ್ಟೆ ಕೊಡುವ ನಿರ್ಧಾರಕ್ಕೆ ಧಾರ್ಮಿಕ ವಲಯಗಳಿಂದ ಬಂದ ಪ್ರತಿರೋಧವನ್ನು ನೆನೆಯಬೇಕು. ಆಹಾರದಲ್ಲಿ ಬಹುತ್ವ ಹೊಂದಿರುವ ಸಮಾಜವೇ ಜಾತಿಪದ್ಧತಿ ಧರ್ಮದ್ವೇಷ, ಪುರುಷವಾದಂತಹ ಬಹುತ್ವವಿರೋಧಿ ಆಲೋಚನಾಕ್ರಮಗಳಿಗೂ ಅವಕಾಶ ಕೊಟ್ಟಿದೆ. ಇದು ದೇವರೊಬ್ಬ ನಾಮಹಲವು, ಎಲ್ಲದರಲ್ಲೂ ಬ್ರಹ್ಮನಿದ್ದಾನೆ ಎಂಬ ದಾರ್ಶನಿಕತೆ ಇರುವ ದೇಶದಲ್ಲೇ ದೇವರ ಹೆಸರಲ್ಲಿ ಹೆಚ್ಚು ಕ್ರೌರ್ಯಗಳು ನಡೆಯುವಂತೆ. ಈ ಹಿನ್ನೆಲೆಯಲ್ಲಿ ಅಸಹ್ಯಬಾರದಂತೆ ಪ್ರಾಣಿಬಲಿ ಮಾಂಸಾಹಾರದ ಅಡುಗೆ ತಿನ್ನಾಟವನ್ನು ಬಣ್ಣಿಸುವ ‘ಬದುಕು’ ಕಾದಂಬರಿ, ಮಾಂಸಾಹಾರಿ ಆಹಾರ ತಯಾರಿಸುವ ಯೂಟ್ಯೂಬರುಗಳು ಆಹಾರ ಬಹುತ್ವವನ್ನು ಎತ್ತಿಹಿಡಿಯುವುದು ಮುಖ್ಯ ಸಂಗತಿಯಾಗಿದೆ.

ಪ್ರೊ. ರಹಮತ್ ತರೀಕೆರೆ

ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು- ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...