Homeಮುಖಪುಟಆಹಾರ ಶ್ರೇಷ್ಠತೆಯ ರಾಜಕೀಯದ ವಿವಿಧ ಮುಖಗಳು

ಆಹಾರ ಶ್ರೇಷ್ಠತೆಯ ರಾಜಕೀಯದ ವಿವಿಧ ಮುಖಗಳು

- Advertisement -
- Advertisement -

ಭಾರತದಲ್ಲಿ ಆಹಾರದ ರಾಜಕೀಯ ಇತ್ತೀಚಿನ ಕೆಲವು ವರ್ಷಗಳಿಂದ ಹೆಚ್ಚು ವಿಕಾರಗೊಳ್ಳುತ್ತಿದೆ. ಬೀಫ್ ವಿರುದ್ಧವಾಗಿ ಎಷ್ಟೋ ವರ್ಷಗಳ ಹಿಂದೆ ಪ್ರಾರಂಭವಾದ ಈ ’ಸಣ್ಣತನದ’ ಆಹಾರದ ರಾಜಕೀಯ ದಿನಗಳೆದಂತೆ ಭಾರತದ ಬಹುಸಂಖ್ಯಾತ ಜನರ ಸಂಸ್ಕೃತಿಯ ಭಾಗವಾಗಿರುವ ದಿನನಿತ್ಯದ ಬಳಕೆಯ ಮಾಂಸಾಹಾರ – ಬಡಮಕ್ಕಳಿಗೆ ಪೌಷ್ಟಿಕಾಂಶದ ಕೊರತೆಯನ್ನು ಸಣ್ಣ ಮಟ್ಟಕ್ಕೆ ನೀಗಿಸಬಲ್ಲ, ಬಿಸಿಯೂಟದ ಭಾಗವಾಗಿ ಕೊಡುವ ಮೊಟ್ಟೆಯ ವಿರುದ್ಧದ ದಬ್ಬಾಳಿಕೆ ತೀವ್ರಗೊಂಡಿದೆ. ಇದು ಇಂದು ನಿನ್ನೆಯ ವಿದ್ಯಮಾನವೇನಲ್ಲ. ಭಾರತದ ಬಹಳಷ್ಟು ಸರ್ಕಾರಿ ಕಚೇರಿಗಳ, ಶಾಲಾ ಕಾಲೇಜುಗಳ ಕ್ಯಾಂಟೀನ್‌ಗಳಲ್ಲಿ ಮಾಂಸಾಹಾರವನ್ನು ನಿಷೇಧಿಸಲಾಗಿದೆ. ಮಾಂಸಾಹಾರಕ್ಕೆ, ಮಾಂಸಾಹಾರ ಸೇವಿಸುವವರ ಬಗ್ಗೆ ಕಳಂಕ ತಂದೊಡ್ಡುವ ಕಥೆಗಳಿಗೆ ಕೂಡ ಬರವೇನಿಲ್ಲ. ಯಾವುದೇ ತಾತ್ವಿಕ ಆಯಾಮಗಳಿಲ್ಲದೆ, ಹುಸಿ ಶ್ರೇಷ್ಠತೆಯ ತಾರತಮ್ಯದ ತಳಹದಿಯಲ್ಲಿ ಸಸ್ಯಾಹಾರವನ್ನು ಮೇಲರಿಮೆಯಾಗಿ ಸೃಷ್ಟಿಸುವಾಗ ಇಂತಹ ಸುಳ್ಳು ಪ್ರಪೋಗಾಂಡದ ಅವಶ್ಯಕತೆ ಇದ್ದೇ ಇರುತ್ತದೆ. ಮುಸ್ಲಿಮರ ಮೇಲೆ ಭಾರತದಲ್ಲಿ ಒಂದು ಕೋಮಿಗೆ ಇದ್ದ ಅತಾರ್ಕಿಕ ದ್ವೇಷವನ್ನು ಇಡೀ ದೇಶದ ದ್ವೇಷವಾಗಿ ಬದಲಾಯಿಸಲು ಆ ಕೋಮಿನವರೇ ಮುಂದಾಳತ್ವ ವಹಿಸಿರುವ ಸಂಘಪರಿವಾರ, ಮುಸಲ್ಮಾನರ ಆಹಾರ ಪದ್ಧತಿಯ ಮೇಲೆ ಹುಟ್ಟಿಸಿದ ಸುಳ್ಳುಗಳಿಗೆ ತುದಿಮೊದಲಿಲ್ಲ. ಇಂದಿಗೂ ಅದು ’ಹಲಾಲ್’ಅನ್ನು ಹೀಗಳೆಯುವುದರಿಂದ ಮುಂದುವರೆದಿದೆ. ಗೋಮಾತೆಯನ್ನು ಸಾರ್ವತ್ರಿಕಗೊಳಿಸುವ ಪ್ರಯತ್ನ ಬಹಳ ಹಳೆಯದಾಯಿತು. ಇನ್ನು ’ಆಹಾರ ತನ್ನಿಚ್ಛೆ’ ಎಂದು ಹೇಳಿಕೊಳ್ಳುತ್ತಲೇ ಮಾಂಸಾಹಾರದ ಬಗ್ಗೆ, ಮಾಂಸಾಹಾರಿಗಳ ಬಗ್ಗೆ ತಾರತಮ್ಯ-ಕೀಳರಿಮೆ ಆಚರಿಸುವವರ ಸಂಖ್ಯೆಗೆ ಕಡಿಮೆಯೇನಿಲ್ಲ. ’ಸಂಖ್ಯೆ’ಯ ದೃಷ್ಟಿಯಿಂದ ಅದು ದೊಡ್ಡದಲ್ಲದೇ ಹೋದರೂ, ತಲೆತಲೆಮಾರಿನಿಂದ ಸಿಕ್ಕಿರುವ ಸಾಮಾಜಿಕ ಬಂಡವಾಳದಿಂದ ಪ್ರಚಾರ ಮಾಧ್ಯಮಗಳನ್ನು, ಆಯಕಟ್ಟಿನ ಸ್ಥಾನಗಳನ್ನು ಆಕ್ರಮಿಸಿಕೊಂಡಿರುವ ಅವರು ಇಂತಹ ನರೆಟಿವ್‌ಅನ್ನು ಸಹಸ್ರಾರು ವರ್ಷಗಳಿಂದ ಕಟ್ಟುತ್ತಾ ಬಂದಿದ್ದಾರೆ. ವಿವಿಧ ಕಾಲಘಟ್ಟಗಳಲ್ಲಿ ಆ ನರೆಟಿವ್‌ಗೆ ಹೊಸಹೊಸ ಮಾರ್ಪಾಡುಗಳನ್ನು ತಂದುಕೊಂಡು, ಸಂಕೀರ್ಣತೆ-ಸಮಗ್ರತೆಗಳನ್ನು ಬದಿಗಿಟ್ಟು ಗೊಂದಲಗಳನ್ನು ಮೂಡಿಸುವ ತಂತ್ರವೂ ಅದರಲ್ಲಿ ಸೇರಿಕೊಂಡಿದೆ.


ಇಂತಹ ತಂತ್ರದ ಭಾಗವೇ ಈಗ ಹೊಸದಾಗಿ ಮುನ್ನೆಲೆಗೆ ಬಂದಿರುವ ವಾದ: ಲೈವ್‌ಸ್ಟಾಕ್ ಅಥವಾ ಜಾನುವಾರು ಸಾಕಣೆಯಿಂದ ಮೀಥೇನ್ ಅನಿಲ ಹೆಚ್ಚು ಉತ್ಪಾದನೆಯಾಗಿ ಹವಾಮಾನ ವೈಪರೀತ್ಯಕ್ಕೆ ಕಾರಣವಾಗುತ್ತದೆ ಎಂದು. ಇದು ’ವೇಗನ್’ಗಳು ಎಂದು ಕರೆದುಕೊಳ್ಳುವ ಮಾಂಸಾಹಾರವನ್ನಷ್ಟೇ ಅಲ್ಲದೆ ಪ್ರಾಣಿಜನ್ಯ (ಹಾಲು ಇತ್ಯಾದಿ) ಉತ್ಪನ್ನಗಳನ್ನು ತ್ಯಜಿಸುವ ಈ ವರ್ಗದ ಜನರಿಂದ ಪ್ರಚಲಿತವಾಗಿ, ಆಹಾರ ಶ್ರೇಷ್ಠತೆಯ ಪ್ರತಿಪಾದಕರೂ ಇದನ್ನು ಬಳಸಿಕೊಳ್ಳುವುದುಂಟು. ಆದರೆ ಇದಕ್ಕೆ ಸಮಗ್ರವಾದ ದೃಷ್ಟಿಕೋನದ ಕೊರತೆ ಇದೆ ಎನ್ನುತ್ತಾರೆ ಪರಿಸರವಾದಿ ಲಿಯೋ ಸಾಲ್ಡಾನಾ.

“ಕೈಗಾರಿಕಾ ಉದ್ಯಮವಾಗಿ ಬದಲಾಗಿರುವ ಜಾನುವಾರು ಸಾಕಾಣೆ ಮತ್ತು ಉತ್ಪಾದನೆಯಲ್ಲಿ ಇಂತಹ ಸಮಸ್ಯೆಯನ್ನು ಗುರುತಿಸುವುದರಲ್ಲಿ ಒಂದು ಮಟ್ಟದ ನಿಜಾಂಶ ಇದೆ ಎಂದು ಒಪ್ಪಿಕೊಳ್ಳಬಹುದಾದರೂ, ಪಾರಂಪರಿಕವಾಗಿ ಜಾನುವಾರುಗಳನ್ನು ಬೆಳೆಸುವ ಮತ್ತು ಅವುಗಳನ್ನು ವಿವಿಧ ಬಗೆಯಲ್ಲಿ ಬಳಸಿಕೊಳ್ಳುವ ಭಾರತದಂತಹ ದೇಶಕ್ಕೆ ಇದು ಅನ್ವಯ ಆಗುವುದಿಲ್ಲ. ಲೈವ್‌ಸ್ಟಾಕ್ ಇಂಡಸ್ಟ್ರಿಗಳಲ್ಲಿ ಜಾನುವಾರುಗಳನ್ನು ಒಂದೇ ಕಡೆಗೆ ಕೂಡಿಹಾಕಿ ಬೆಳೆಸಲಾಗುತ್ತದೆ. ಇದಕ್ಕಾಗಿ ಅವುಗಳಿಗಾಗಿ ಮೇವನ್ನು ಬೆಳೆಯುವುದು ಅಗತ್ಯ. ಇದರ ಭಾಗವಾಗಿ ಸ್ವಾಭಾವಿಕವಾಗಿ ಇರಬೇಕಾದ ಹಸಿರು ವನಗಳನ್ನು, ಸಾಮುದಾಯಿಕ ಹುಲ್ಲುಗಾವಲುಗಳನ್ನು-ಗೋಮಾಳಗಳನ್ನು ನಾಶ ಮಾಡಲಾಗುತ್ತದೆ. ಆಗ ಹಾನಿಕಾರಕ ಅನಿಲಗಳನ್ನು ಹೀರಿಕೊಳ್ಳುವ ಹಸಿರು ನಾಶವಾಗುತ್ತದಲ್ಲದೆ, ಲಾಭದ ದೃಷ್ಟಿಯಲ್ಲಿ ಮೇವನ್ನು ಬೆಳೆಯುವುದಕ್ಕೆ ಉಪಯೋಗಿಸಲಾಗುವ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳು ಉಂಟುಮಾಡುವ ಪರಿಸರಹಾನಿ ಕೂಡ ಇಲ್ಲಿ ಪರಿಗಣಿಸಬೇಕು. ಆದರೆ ಭಾರತದಂತಹ ದೇಶಗಳಲ್ಲಿ ಪಾರಂಪರಾಗತವಾಗಿ ಗೋಮಾಳಗಳಿದ್ದವು. ಅಲ್ಲಿನ ಹುಲ್ಲು, ಗಿಡ-ಮರಗಳು ಹಾನಿಕಾರಕ ಅನಿಲಗಳನ್ನು ಹೀರಿಕೊಳ್ಳುತ್ತಿದ್ದವು. ಈ ಸಾಮುದಾಯಿಕ ಗೋಮಾಳಗಳನ್ನು ಮೇವಿಗಾಗಿ ಬಳಸಿಕೊಂಡು, ಜಾನುವಾರು ಸಾಕಾಣೆ ಮಾಡಲಾಗುತ್ತಿತ್ತು. ಸ್ಥಳೀಯ ತಳಿಗಳ ಜಾನುವಾರುಗಳ ಸಗಣಿಯಿಂದ ಹೊರಸೂಸುವ ಮೀಥೇನ್ ಅಪಾಯಕಾರಿ ಅನ್ನುವ ಮಟ್ಟದಲ್ಲಿ ಇರುವುದಿಲ್ಲ. ನಾಟಿ ತಳಿಗಳ ವಿಭಿನ್ನ ದೇಹರಚನೆಯೂ ಇದಕ್ಕೆ ಒಂದು ಕಾರಣ. ಅಲ್ಲದೆ ಇಂದು ಫಾಸಿಲ್ ಇಂಧನ ಮತ್ತು ವಿಪರೀತವಾಗಿ ಬೆಳೆದಿರುವ ವಾಹನಗಳು ಹೊರಸೂಸುವ ವಿಷಾನಿಲಗಳಿಗೆ ಹೋಲಿಸಿದರೆ ಕೈಗಾರಿಕೆಯಾಗಿರದ, ಪಾರಂಪರಿಕ ಜಾನುವಾರು ಸಾಕಾಣೆ ಹವಾಮಾನ ವೈಪರೀತ್ಯಕ್ಕೆ ಅಂತಹ ದೊಡ್ಡ ಮಟ್ಟದ ಕೊಡುಗೆಯೇನೂ ನೀಡುವುದಿಲ್ಲ. ಇದಕ್ಕೂ ಮಾಂಸಾಹಾರಕ್ಕೂ ತಳುಕು ಹಾಕುವ ಹುನ್ನಾರ ಹಲವು ವರ್ಷಗಳಿಂದ ಜಾರಿಯಲ್ಲಿದೆ. ಈ ತಾಪಮಾನ ಏರಿಕೆಯ ಸಂಕೀರ್ಣತೆಯನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳದೆ ಕೇವಲ ಮೀಥೇನ್ ಹೊರಸೂಸುವಿಕೆಯನ್ನು ಪ್ರತ್ಯೇಕಗೊಳಿಸಿ ನೋಡುವ ದೃಷ್ಟಿ ಸರಿಯಲ್ಲ” ಎನ್ನುತ್ತಾರೆ ಸ್ವತಃ ತಾವೇ ಹಮಾವಾನ ವೈಪರೀತ್ಯದ ಬಗ್ಗೆ ಜನರಿಗೆ ಕಾಳಜಿ ಮೂಡಿಸಲು ತೊಡಗಿಸಿಕೊಂಡಿರುವ ಲಿಯೋ ಸಾಲ್ಡಾನಾ.

ಲಿಯೋ ಸಾಲ್ಡಾನಾ

ಅಲ್ಲದೆ, ಹಲವು ದಶಕಗಳಿಂದ ಜನಪ್ರಿಯ ಮಾಧ್ಯಮಗಳಲ್ಲಿ ಸಸ್ಯಾಹಾರ ಮಾಂಸಾಹಾರಕ್ಕಿಂತಲೂ ಆರೋಗ್ಯಕರ ಜೀವನಶೈಲಿಗೆ ಸಹಾಯ ಮಾಡುತ್ತದೆ, ಸಸ್ಯಾಹಾರ ಸೇವನೆಯಿಂದ ಕೊಲೆಸ್ಟ್ರಾಲ್ ಹೆಚ್ಚುವುದಿಲ್ಲ ಎಂಬ ಬರಹಗಳು, ಮಾತುಗಳು ಯಥೇಚ್ಛವಾಗಿ ಮೂಡುವುದನ್ನು ನಾವು ನೋಡಿಯೇ ಇರುತ್ತೇವೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂಬುದು ಹಲವು ತಜ್ಞರ ಅಭಿಮತ.

ನ್ಯೂಯಾರ್ಕ್ ಮೆಟ್ರೋಪಾಲಿಟನ್ ಆಸ್ಪತ್ರೆಯ ತಜ್ಞ ವೈದ್ಯ ಹಾಗು ಸಂಶೋಧಕ ಡಾ. ಸಂದೀಪ್ ಸಾಮೇತ್ತಡ್ಕ ನಾಯಕ್ ಅವರು ಇದನ್ನು ಸಂಪೂರ್ಣವಾಗಿ ಅಲ್ಲಗಳೆಯುತ್ತಾರೆ. “ಇಂತಹ ಮಾತುಗಳಿಗೆ ಯಾವುದೇ ವೈಜ್ಞಾನಿಕ ತಳಹದಿ ಇಲ್ಲ. ಸಂಶೋಧನೆ ಅಥವಾ ಪುರಾವೆಗಳಿಲ್ಲ. ಸಕ್ಕರೆ ಭರಿತ ಆಹಾರದಿಂದ ಬೇಡವಾದ ಕೊಲೆಸ್ಟ್ರಾಲ್ ಹೆಚ್ಚುತ್ತದೆಯೇ ಹೊರತು ಸಕ್ಕರೆ ರಹಿತ ಮಾಂಸಾಹಾರದಿಂದಲ್ಲ ಎಂದು ಹಲವು ಸಂಶೋಧನೆಗಳು ತಿಳಿಸಿವೆ. ಆ ನಿಟ್ಟಿನಲ್ಲಿ ನಮ್ಮ ಆಹಾರದ ಬಗ್ಗೆ ಹೆಚ್ಚಿನ ಚಿಂತನೆ ನಡೆಯಬೇಕಿದೆ. ಸ್ವಾಭಾವಿಕವಾಗಿ ಬೆಳೆಸಿ, ತಯಾರಿಸಿಕೊಳ್ಳುವ ಮಾಂಸಾಹಾರ ಆರೋಗ್ಯಕ್ಕೆ ಹಾನಿಕಾರಕವಲ್ಲ. ಆದರೆ ಕಾರ್ಖಾನೆಯಲ್ಲಿ ಸಂಸ್ಕರಿಸಿದ ಮಾಂಸವಾಗಲಿ ಅಥವಾ ಆಹಾರ ಎಂಬ ನೆಪದಲ್ಲಿ ಮಾರಲ್ಪಡುವ ಕಾರ್ಖಾನೆಯ ಉತ್ಪನ್ನಗಳ ಬಗ್ಗೆ ಎಚ್ಚರ ವಹಿಸಬೇಕು” ಎನ್ನುತ್ತಾರೆ.

ಶಾಲೆಗಳಲ್ಲಿ ಮೊಟ್ಟೆ ನೀಡುವುದಕ್ಕೆ ಇರುವ ವಿರೋಧವನ್ನು ಕೂಡ ರಾಜಕೀಯ ಪ್ರೇರಿತ ತಪ್ಪುನಡೆ ಎನ್ನುತ್ತಾರೆ ಡಾ. ನಾಯಕ್. “ಶಾಸಕಾಂಗ ಇಂತಹ ವಿಷಯಗಳಲ್ಲಿ ತಜ್ಞರು ಮತ್ತು ವಿಜ್ಞಾನಿಗಳನ್ನು ನೆಚ್ಚಿಕೊಳ್ಳಬೇಕು. ಮಠಾಧಿಪತಿಗಳನ್ನಲ್ಲ. ಕಡಿಮೆ ವೆಚ್ಚದಲ್ಲಿ ಸುಲಭವಾಗಿ ಮಕ್ಕಳ ಪೌಷ್ಟಿಕಾಂಶಗಳನ್ನು ನೀಗಿಸಬಲ್ಲ ಆಹಾರ ಮೊಟ್ಟೆ. ಈ ನಿಟ್ಟಿನಲ್ಲಿ ವೈದ್ಯರು ಮತ್ತು ಪೌಷ್ಟಿಕ ತಜ್ಞರು ನೀಡುವ ಸಲಹೆಗೆ ಹೆಚ್ಚು ಬೆಲೆ ಇರಬೇಕು. ಇದು ಸ್ಥಳೀಯವಾಗಿ ಬಹುಜನರ ಆಹಾರ ಸಂಸ್ಕೃತಿಯ ಭಾಗವೂ ಆಗಿರುವುದರಿಂದ ಇದರ ಬಗ್ಗೆ ಇರುವ ವಿರೋಧಕ್ಕೆ ಯಾವುದೇ ಗಟ್ಟಿಯಾದ ನೆಲೆಯಿಲ್ಲ” ಎನ್ನುತ್ತಾರೆ.

ಮಾಂಸಾಹಾರಕ್ಕಾಗಿ ಮಾಡುವ ಜಾನುವಾರು ಸಾಕಣೆ ಮತ್ತು ಉತ್ಪಾದನೆಗೆ, ಜಾಗತಿಕ ತಾಪಮಾನ ಏರಿಕೆಯನ್ನು ತಳುಕು ಹಾಕುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸುವ ಡಾ.ನಾಯಕರು “ಸಾವಿರಾರು ವರ್ಷಗಳಿಂದ ಮಾಂಸಾಹಾರ ಪದ್ಧತಿ ಆಹಾರ ಸಂಸ್ಕೃತಿಯ ಭಾಗವಾಗಿ ಬೆಳೆದುಬಂದಿದೆ. ಆಗ ಹವಾಮಾನ ಬದಲಾವಣೆ ಆಗದಿದ್ದುದು, ಈಗ ವೈಪರೀತ್ಯಕ್ಕೆ ಕಾರಣ ಆಯಿತೇ ಎಂಬ ಪ್ರಶ್ನೆ ಹಾಕಿಕೊಳ್ಳಬೇಕು. ಕೈಗಾರಿಕೀಕರಣ ಉಂಟುಮಾಡಿರುವ ಸಮಸ್ಯೆಯನ್ನು ಎಲ್ಲ ರೀತಿಯ ಜಾನುವಾರು ಸಾಕಣೆಗೆ ತಳುಕುಹಾಕುವುದು ಸರಿಯಲ್ಲ. ಸ್ವಾಭಾವಿಕವಾಗಿ ಜಾನುವಾರುಗಳನ್ನು ಬೆಳೆಯುವ ಮತ್ತು ಅವುಗಳನ್ನು ಆಹಾರ ಮತ್ತಿತರ ಉತ್ಪನ್ನಗಳಿಗೆ ಬಳಸುವುದು ಸಮಸ್ಯೆಯಲ್ಲ. ಕೈಗಾರಿಕೆಗಳು, ಇಂಧನಗಳು ಹೊರಸೂಸುವ ಹಾನಿಕಾರಿಕ ಅನಿಲಗಳನ್ನು ತಗ್ಗಿಸುವತ್ತ ಮೊದಲು ಗಮನ ಹರಿಸಬೇಕಿದೆ.” ಎನ್ನುತ್ತಾರೆ.

ಹೀಗೆ ಬಾಡೂಟದ ಬಗ್ಗೆ ವೈಜ್ಞಾನಿಕವಾಗಿ ಯಾವುದೇ ತಳಹದಿ ಇಲ್ಲದ, ತಲೆಬುಡವೇ ಇಲ್ಲದೆ ಮಾಡುವ ಅಪಪ್ರಚಾರಗಳನ್ನು ತರ್ಕಬದ್ಧವಾಗಿ ನಿರಾಕರಿಸಿದರೆ ನಂತರ ಇನ್ನಷ್ಟು ಕುತರ್ಕಗಳು ಹುಟ್ಟುತ್ತವೆ. ಅವುಗಳಲ್ಲಿ ಒಂದು, ’ಅಭ್ಯಾಸವಾಗಿರುವ ಸಾಮಾಜಿಕ ನಿಷಿದ್ಧ’ಗಳನ್ನು ಎಳೆತಂದು ಹಂಗಿಸುವ ಮಾತುಗಳು. ಎಲ್ಲೋ ಹಾವು, ಚೇಳು, ಹಲ್ಲಿಗಳನ್ನು ತಿನ್ನುತ್ತಾರೆ. ನೀವು ತಿನ್ನುತ್ತೀರಾ? ಹಸಿ ಮಾಂಸ ತಿನ್ನುತ್ತೀರ ಎಂಬಂತಹ ಚರ್ಚೆಗೇ ಯೋಗ್ಯವಿಲ್ಲದ ಮಾತುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಆಡುತ್ತಿದ್ದಾರೆ. ಸಸ್ಯಾಹಾರವಾಗಲೀ ಮಾಂಸಾಹಾರವಾಗಲೀ ಅವರವರ ಆಹಾರ ಕ್ರಮದಂತೆ ಸರಿಯಾಗಿ ಬೇಯಿಸಿ ಸಿದ್ಧಪಡಿಸಿ ತಿನ್ನುವುದು ಕ್ರಮ. ಇದೂ ತಿಳಿಯದೆ ಅಥವಾ ತಿಳಿದೂ ಅತಿ ಜಾಣರಾಗಿ ಆದರೆ ಬೆತ್ತಲೆಯಾಗಿ ಕುಸ್ತಿಗೆ ಬರುವವರನ್ನು ಉಪೇಕ್ಷಿಸುವುದೇ ಸರಿ. ಇನ್ನು ಸೋಶಿಯಲ್ ಟಬೂಗಳು ಹೊಸ ಆಹಾರ ಅನ್ವೇಷಣೆಯ ವಿರುದ್ಧವಾಗಿ ಕೆಲಸ ಮಾಡುವುದು ಹೊಸತೇನಲ್ಲ. ಇದು ಎಷ್ಟೋ ಸಸ್ಯಾಹಾರ ಖಾದ್ಯಗಳಿಗೂ ಅನ್ವಯಿಸುತ್ತದೆ. ಆದರೆ ಹೊಸತೊಂದು ಸಂಸ್ಕೃತಿಯನ್ನು ಎಕ್ಸ್ಪೋರ್ ಮಾಡುವುದು ಯಾವುದೇ ವ್ಯಕ್ತಿಯ ಅನುಭವವನ್ನು, ತಿಳಿವನ್ನು ವಿಸ್ತರಿಸುವುದರಲ್ಲಿ ಎರಡು ಮಾತಿಲ್ಲ. ಇದು ಆಹಾರ ಸಂಸ್ಕೃತಿಗೂ ಅನ್ವಯ ಆಗುತ್ತದೆ. ಕೆಡುಕಿಲ್ಲಬಹುದಾದ ಟಬೂಗಳನ್ನು ಮುರಿಯುವುದನ್ನು ಮಾನವ ಹಿಂದೆಂದಿನಿಂದಲೂ ಮಾಡಿಕೊಂಡು ಬಂದಿರುವಂತಾದ್ದೆ. ಎಕಾಲಜಿಗೆ ಸಮಸ್ಯೆ ಬಾರದಂತೆ ಇರುವ (ವನ್ಯಜೀವಿಗಳನ್ನು ಭಕ್ಷಿಸುವುದಕ್ಕೆ ಕಾನೂನು ತಂದಿರುವ ಒಂದು ಉದಾಹರಣೆ – ಸ್ಥಳೀಯವಾಗಿ ಸಮುದಾಯಗಳ ನಡುವೆ ಉಳಿದಿದ್ದ ಬೇಟೆ ಮತ್ತು ನಿಯಂತ್ರಿತ ಬಳಕೆ ಎಂದಿಗೂ ಸಮಸ್ಯೆ ಆಗಿರದೆ, ಹೊರಗಿನವರ ಪ್ರಭಾವದಿಂದ ಮಾರುಕಟ್ಟೆಯಾಗಿ ವಿಸ್ತಾರಗೊಂಡಮೇಲೆ ಹುಟ್ಟಿದ ಬಿಕ್ಕಟ್ಟಿದು – ಇದು ಬೇರೇಯೇ ಚರ್ಚೆಯಾದೀತು) ವಿವಿಧ ಆಹಾರ ಸಂಸ್ಕೃತಿಗಳ ಜೊತೆಗೆ ಒಡನಾಟ ಬೆಳೆಸಿಕೊಳ್ಳುವುದು ಈ ನಿಟ್ಟಿನಲ್ಲಿ ಆರೋಗ್ಯಕರ ಮನಸ್ಸಿನ ಮನುಷ್ಯನ ಲಕ್ಷಣವಾದೀತು.

ಡಾ. ಸಂದೀಪ್ ಸಾಮೇತ್ತಡ್ಕ ನಾಯಕ್

ಇನ್ನು ಜಾಗತಿಕವಾಗಿ ಭಾರತ ಸಸ್ಯಾಹಾರ ದೇಶ ಎಂಬ ತಪ್ಪು ಕಲ್ಪನೆ ಹೇಗೆ ಗಟ್ಟಿಯಾಯಿತು ಅನ್ನುವುದು ಕೂಡ ಸೋಜಿಗವೇ! ತಮಿಳುನಾಡಿನಲ್ಲಿ ಇಡ್ಲಿ ವಡೆ, ದೋಸೆಯನ್ನು ಮಾತ್ರ ತಿನ್ನುತ್ತಾರೆ ಎಂಬಂತೆ ತೋರಿಸುವ ಹಲವು ಪಶ್ಚಿಮದ ಫುಡ್ ಶೋಗಳ ತಯಾರಕರಿಗೆ, ಆ ರಾಜ್ಯದಲ್ಲಿ ಸಸ್ಯಹಾರಿಗಳ ಸಂಖ್ಯೆ ಸುಮಾರು ಶೇ.2 ಮಾತ್ರ ಎನ್ನುವುದು ತಿಳಿದಿಲ್ಲ. ಮಹಾತ್ಮ ಗಾಂಧಿಯವರ ಸಸ್ಯಾಹಾರ ಪ್ರಯೋಗ ಕೂಡ ಭಾರತದ ಬಗೆಗೆ ಈ ಭಾವನೆ ಬೆಳೆಯುವುದಕ್ಕೆ ಅನುಕೂಲ ಮಾಡಿಕೊಟ್ಟಿರಬಹುದು. ಇಂದು ಲಿಂಗಾಯತ ಮಠದ ಕೆಲವು ಸ್ವಾಮಿಗಳು ಮಾಂಸಾಹಾರ ಮತ್ತು ಮೊಟ್ಟೆಯ ಬಗೆಗೆ ವಿರೋಧ ವ್ಯಕ್ತಪಡಿಸುತ್ತಿರುವುದೂ ಆತಂಕಕಾರಿಯಾದದ್ದು. ಎಷ್ಟೋ ವಚನಕಾರರು ತಮ್ಮ ವಚನಗಳಲ್ಲಿ ಮಂಸಾಹಾರವನ್ನು ಸಮರ್ಥಿಸಿಕೊಂಡ ಉದಾಹರಣೆಗಳು ಇವೆ. ಭಾರತದಲ್ಲಿ ಯಾವ್ಯಾವ ರಾಜ್ಯಗಳಲ್ಲಿ ಸಸ್ಯಾಹಾರ ಸ್ವಲ್ಪ ಮಟ್ಟಿಗೆ ಹೆಚ್ಚಿದೆ ಎಂಬ ಭೂಪಟವನ್ನು ಗಮನಿಸಿದರೆ, ಆ ರಾಜ್ಯಗಳಲ್ಲಿ ಬಿಜೆಪಿ ಪಕ್ಷದ ಮತ್ತು ಸಂಘ ಪರಿವಾರದ ಉಪಸ್ಥಿತಿ ಹೆಚ್ಚಿದೆ ಎಂಬುದು ಗೋಚರಿಸುತ್ತದೆ. ಅಂದರೆ ಇಲ್ಲಿ ನೆಲೆಗೊಂಡಿರುವ ತಾರತಮ್ಯದ ಅಸ್ತಿತ್ವದ ಮೇಲೆ ಸೌಧ ಕಟ್ಟಿ ಸಮಾಜದಲ್ಲಿ ಹೆಚ್ಚು ಒಡಕು ಉಂಟುಮಾಡುವವರು ಯಾರು ಮತ್ತು ಹೇಗೆ ಎಂಬುದು ಇಲ್ಲಿ ಸುಲಭಕ್ಕೆ ಗೋಚರಿಸಬಹುದು! ಆದುದರಿಂದ, ಆಹಾರದ ಬಗ್ಗೆ ಕೀಳರಿಮೆಗಳನ್ನು ತೊಲಗಿಸುವ ನಿಟ್ಟಿನಲ್ಲಿ ನಾಗರಿಕರು ಇನ್ನಾದರೂ ಬಹುಜನರ ಆಹಾರದ ಬಗ್ಗೆ ಹೆಚ್ಚೆಚ್ಚು ಮಾತನಾಡಬೇಕಿದೆ. ಈ ನಿಟ್ಟಿನಲ್ಲಿ ಈ ವಾರ ಪತ್ರಿಕೆ ಆಹಾರ ಸಂಸ್ಕೃತಿ ಮತ್ತು
ರಾಜಕೀಯಗಳನ್ನು ಚರ್ಚಿಸುವ ಹಲವು ಬರಹಗಳನ್ನು ಒಳಗೊಂಡಿದೆ.


ಕೊನೆ ಮಾತು: ಆಹಾರ ಸಂಸ್ಕೃತಿಯನ್ನು ಸಮರ್ಥಿಸಿಕೊಳ್ಳುವ ಇದೇ ಸಮಯದಲ್ಲಿ ಎಷ್ಟೋ ಜನ ಹಸಿವಿನಲ್ಲಿ ಇರುವುದನ್ನು ಉಪೇಕ್ಷಿಸಲಾಗದ ಸತ್ಯವಾಗಿದೆ. ವಿಪರ್ಯಾಸ ಎಂದರೆ, ಇಂದು ಆಹಾರದ ಉತ್ಪಾದನೆ ಎಷ್ಟಿದೆ ಎಂದರೆ ಜಗತ್ತಿನ ಯಾರೂ ಹಸಿವಿನಿಂದ ನರಳದಂತೆ ಸಾಕಾಗುವಷ್ಟು. ಆದರೆ ಸಸ್ಯಾಹಾರದ ಶ್ರೇಷ್ಠತೆಯನ್ನು ಪ್ರತಿಪಾದಿಸುವಂತಹ ವ್ಯವಸ್ಥೆಯೇ ಇಂದು ಎಷ್ಟೋ ಬಡಜನರನ್ನು ಆಹಾರ ವಂಚಿತರನ್ನಾಗಿಸುವ ವ್ಯವಸ್ಥೆಯನ್ನು ಸೃಷ್ಟಿಸಿರುವುದು. ಲಾಕ್‌ಡೌನ್ ಸಮಯದಲ್ಲಿ ಎಷ್ಟೋ ಜನ ಆಹಾರ ಸಮಸ್ಯೆಯಿಂದ ನರಳುತ್ತಿದ್ದರೆ, ಹಲವು ಸರ್ಕಾರಿ ಉಗ್ರಾಣಗಳಲ್ಲಿ ಆಹಾರ ಕೊಳೆಯುತ್ತಿದ್ದರ ಬಗ್ಗೆ ವರದಿಯಾಗಿತ್ತು. ಆದುದರಿಂದ ಎಲ್ಲರ ಆಹಾರ ಭದ್ರತೆಗೂ ಆಡಳಿತ ವ್ಯವಸ್ಥೆಗಳನ್ನು ಪ್ರಶ್ನಿಸಬೇಕಾದ ಅಗತ್ಯ ಇಂದು ನಮ್ಮ ಮುಂದಿದೆ.

  • ಗುರುಪ್ರಸಾದ್ ಡಿ ಎನ್, ನ್ಯಾಯಪಥ-ನಾನುಗೌರಿ ಸಂಪಾದಕರು

ಇದನ್ನೂ ಓದಿ: ಆಹಾರ ಆಹಾರವಾಗಿಯೇ ಇರಲಿ; ಅನವಶ್ಯಕ ಔಷಧವಾಗಿ ಬೇಡ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...