Homeಮುಖಪುಟಆಹಾರ ಆಹಾರವಾಗಿಯೇ ಇರಲಿ; ಅನವಶ್ಯಕ ಔಷಧವಾಗಿ ಬೇಡ

ಆಹಾರ ಆಹಾರವಾಗಿಯೇ ಇರಲಿ; ಅನವಶ್ಯಕ ಔಷಧವಾಗಿ ಬೇಡ

- Advertisement -
- Advertisement -

ಸ್ವಾತಂತ್ರ್ಯೋತ್ಸವದಂದು ಕೆಂಪು ಕೋಟೆಯ ಮೇಲೆ ಧ್ವಜ ಹಾರಿಸುತ್ತ ನಮ್ಮ ಮಾನ್ಯ ಪ್ರಧಾನ ಮಂತ್ರಿಗಳು ಪಡಿತರದಲ್ಲಿ ಸಿಗುವ ಮತ್ತು ಮಕ್ಕಳಿಗೆ ಕೊಡುವ ಅಕ್ಕಿಯಲ್ಲಿ ಕಬ್ಬಿಣಾಂಶ, ವಿಟಮಿನ್ ಬಿ12 ಮತ್ತು ಫೋಲಿಕ್ ಆಸಿಡ್‌ಗಳನ್ನು ಸೇರಿಸಿ ಕೊಡುತ್ತೇವೆಂದು ವಾಗ್ದಾನ ಮಾಡಿದ್ದಾರೆ. ಮಕ್ಕಳು ಮಹಿಳೆಯರಲ್ಲಿ ಅಪೌಷ್ಟಿಕತೆ ಮತ್ತು ರಕ್ತ ಹೀನತೆ ಹೆಚ್ಚಾಗಿರುವುದಕ್ಕೆ ಪೌಷ್ಟಿಕಾಂಶಗಳನ್ನು ಅಕ್ಕಿಯಲ್ಲಿ ಸೇರಿಸಿ ನೀಡುವುದೇ ಸರಿಯಾದ ಕ್ರಮವೆಂದು, 2024ರ ಹೊತ್ತಿಗೆ ದೇಶದ ಎಲ್ಲಾ ಭಾಗಗಳಲ್ಲೂ ಪೌಷ್ಟಿಕಾಂಶಯುಕ್ತ ಅಕ್ಕಿಯನ್ನು ನೀಡುವ ಗುರಿ ಹೊಂದಿದೆ. 2019ರಲ್ಲಿಯೇ ಈ ಯೋಜನೆಗೆ ಒಕ್ಕೂಟ ಸರಕಾರದ ಒಪ್ಪಿಗೆ ಸಿಕ್ಕಿದ್ದು 174.6 ಕೋಟಿ ರೂಪಾಯಿಗಳನ್ನು ತೆಗೆದಿರಿಸಲಾಗಿದೆ. ಐದಾರು ರಾಜ್ಯಗಳಲ್ಲೀಗ ಅದು ಆರಂಭವೂ ಆಗಿದ್ದು ಪಡಿತರದಲ್ಲಿ ಪೌಷ್ಟಿಕಾಂಶಯುಕ್ತ ಅಕ್ಕಿಯನ್ನು ಕೊಡುತ್ತಿದ್ದಾರೆ. 21-22ರಲ್ಲಿ ದೇಶದ ಕನಿಷ್ಟ 112 ಜಿಲ್ಲೆಗಳನ್ನು ಅದು ಒಳಗೊಳ್ಳಲಿದೆ. ನೀತಿ ಆಯೋಗ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದೊಂದಿಗೆ ಜರ್ಮನಿಯ ಬಿಎಎಸ್‌ಎಫ್, ಸ್ವಿಟ್ಸರ್ಲೆಂಡಿನ ಲೊಂಸಾ, ನೆದರ್‌ಲ್ಯಾಂಡಿನ ಎಡಿಎಂ ಮುಂತಾದ ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಟಾಟಾ ಟ್ರಸ್ಟ್, ವರ್ಲ್ಡ್ ಫುಡ್ ಪ್ರೊಗ್ರಾಂ, ಪಾಥ್ ಮತ್ತು ನ್ಯೂಟ್ರಿಶನಲ್ ಇಂಟರ್‌ನ್ಯಾಶನಲ್ ಮುಂತಾದ ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಿವೆ.

ಅಕ್ಕಿಗೆ ಪೌಷ್ಟಿಕಾಂಶವನ್ನು ಹೇಗೆ ಸೇರಿಸಲಾಗುತ್ತದೆ? ಮೊದಲು ಅಕ್ಕಿಯನ್ನು ಪುಡಿ ಮಾಡಿ, ಅದಕ್ಕೆ ಪೌಷ್ಟಿಕಾಂಶವನ್ನು ಬೆರೆಸಿ, ಅದನ್ನು ಮತ್ತೆ ಅಕ್ಕಿಯ ಕಾಳುಗಳಂತೆ ಮಾಡಿ 100ಕ್ಕೆ ಒಂದು ಪ್ರಮಾಣದಲ್ಲಿ ಅಕ್ಕಿಯೊಳಗೆ ಮಿಶ್ರಗೊಳಿಸಿ ಬಿಡುಗಡೆ ಮಾಡುತ್ತಾರೆ. ಇಡೀ ದೇಶಕ್ಕೆ ಪಡಿತರ, ಮಧ್ಯಾಹ್ನದ ಬಿಸಿಯೂಟ ಮತ್ತು ಅಂಗನವಾಡಿ ಆಹಾರಗಳಲ್ಲಿ ನೂರಕ್ಕೆ ಒಂದು ಪ್ರಮಾಣದಲ್ಲಿ ಪೌಷ್ಟಿಕಾಂಶ ಬೆರೆತ ಅಕ್ಕಿಯನ್ನು ಬೆರೆಸಬೇಕೆಂದರೂ ಕೂಡ ಲಕ್ಷಗಟ್ಟಲೆ ಟನ್ ಬೇಕು. ಪೌಷ್ಟಿಕಾಂಶವನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆರೆಸುವ ತಂತ್ರಜ್ಞಾನ ನಮ್ಮ ಸ್ಥಳೀಯ ಮಿಲ್‌ಗಳಿಗೆ ಎಲ್ಲಿಂದ ಯಾವಾಗ ಬರಬೇಕು?

ಆಹಾರದಲ್ಲಿ ಪೌಷ್ಟಿಕಾಂಶಗಳನ್ನು ಬೆರೆಸುವ ಯೋಜನೆ ಹೊಸದೇನೂ ಅಲ್ಲ. ಹಿಮಾಲಯದ ಗುಡ್ಡಗಾಡು ಪ್ರದೇಶದಲ್ಲಿ ಅಯೋಡಿನ್ ಕೊರತೆಯಿಂದಾಗಿ ಗಳಗಂಡ ರೋಗ ಬಹಳವಾಗಿತ್ತು. ಅದರ ಪರಿಣಾಮವಾಗಿ ಅಂಗವಿಕಲ ಮಕ್ಕಳು ಜನಿಸುತ್ತಿದ್ದರಿಂದ ಉಪ್ಪಿನಲ್ಲಿ ಅಯೋಡಿನ್‌ನ್ನು ಬೆರೆಸಿ ಕೊಡಬೇಕೆಂದು ಸರಕಾರವು ಅಯೋಡಿನ ಉಪ್ಪನ್ನು ಖಾತರಿಗೊಳಿಸಿತು. ಇಡೀ ದೇಶದಲ್ಲೇ ಸಾಮಾನ್ಯ ಉಪ್ಪನ್ನು ನಿಷೇಧಮಾಡಿದ ಉದಾಹರಣೆ ನಮ್ಮೆಲ್ಲರೆದುರು ಇದೆ. ಹಿಮಾಲಯದ ಗುಡ್ಡಗಾಡಿನ ಜನರ ಸಲುವಾಗಿ ಇಡೀ ದೇಶದ ಜನರ ಮೇಲೆ ಅಯೋಡಿನ್ ಉಪ್ಪನ್ನು ಹೇರಿದ್ದು ದೊಡ್ಡ ಕಂಪನಿಗಳ ಕಡೆ ಸರಕಾರ ವಾಲಿದ್ದನ್ನು ತೋರಿಸುತ್ತದೆ. ಅದರ ವಿರುದ್ಧ ಜನಾಂದೋಲನಗಳಾಗಿ, ಸಂಘಟನೆಗಳು ಕೋರ್ಟಿಗೆ ಹೋಗಿದ್ದೂ ಇದೆ. ಪ್ರಯೋಜನವಾಗಲಿಲ್ಲ.

‘ಉಪ್ಪಿನ ಮೂಲಕ ಅನವಶ್ಯಕ ಅಯೋಡಿನ್ ಸೇವನೆ ಮಾಡಿದಾಗ ಅದು ಮೂತ್ರದ ಮೂಲಕ ಹೊರಹೋಗಿಬಿಡುತ್ತದೆ ಹೊರತು ದೇಹದೊಳಗಡೆ ಉಳಿದುಬಿಡುವುದಿಲ್ಲ. ಹಾಗಾಗಿ ಅಯೋಡಿನ್ ಮಿಶ್ರ ಮಾಡಿದ್ದು ನಮ್ಮ ಚಿಕ್ಕ ಚಿಕ್ಕ ಉಪ್ಪಿನ ಘಟಕಗಳಿಗೆ ಮಾರಕವಾಗಿತ್ತು ಮತ್ತು ನಮ್ಮ ಜೇಬಿಗೆ ಹೊಡೆತ ಕೊಡುತ್ತದೆಂಬುದನ್ನು ಬಿಟ್ಟರೆ ಆರೋಗ್ಯ ಸಮಸ್ಯೆಯೇನೂ ಆಗಿಲ್ಲ. ಆದರೆ ಕಬ್ಬಿಣಾಂಶ, ವಿಟಮಿನ್ ಎ ಅಂಥವುಗಳ ಮಿಶ್ರಿತ ಆಹಾರವನ್ನು ನಿತ್ಯವೂ ಸೇವನೆ ಮಾಡಿದಾಗ ಆಗಬಹುದಾದ ಆರೋಗ್ಯದ ಪರಿಣಾಮಗಳನ್ನು ಅಧ್ಯಯನ ಮಾಡಿ ಸರಕಾರವು ಪೌಷ್ಟಿಕಾಂಶಭರಿತ ಅಕ್ಕಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು.’ ಎನ್ನುತ್ತಾರೆ ‘ರಾಷ್ಟ್ರೀಯ ಪೌಷ್ಟಿಕತೆ ಸಂಸ್ಥೆ’ಯ ಮಾಜಿ ಮುಖ್ಯಸ್ಥೆ ಡಾ. ವೀಣಾ ಶತ್ರುಘ್ನ.

ಮಕ್ಕಳು ಮತ್ತು ಮಹಿಳೆಯರ ಅಪೌಷ್ಟಿಕತೆಯನ್ನು ಹೋಗಲಾಡಿಸುವುದಕ್ಕೆ ಇಡೀ ದೇಶದ ಎಲ್ಲಾ ಜನರಿಗೆ ಕಡ್ಡಾಯವಾಗಿ ಪೌಷ್ಟಿಕಾಂಶಭರಿತ ಆಹಾರವನ್ನು ಕೊಡುವುದೇ? ಈಗಿರುವ ಕೊರತೆಯನ್ನು ತುಂಬಲು ಎಷ್ಟು ಪ್ರಮಾಣದ ಪೌಷ್ಟಿಕಾಂಶಭರಿತ ಆಹಾರವನ್ನು ಎಷ್ಟುಕಾಲ ಕೊಡಬೇಕು? ಇದನ್ನು ಔಷಧದಂತೆ ಕೊಡಬಹುದೇ? ನಮ್ಮಲ್ಲಿ ಅಕ್ಕಿಯನ್ನಾಗಲೀ, ಬೇಳೆಯನ್ನಾಗಲೀ ತೊಳೆದೇ ಬೇಯಿಸುತ್ತಾರೆ. ತೊಳೆದಾಗ ಪೌಷ್ಟಿಕಾಂಶ ಹೋಗಿಬಿಡಬಹುದಲ್ಲವೇ? ಅದರ ಆರ್ಥಿಕ ಲೆಕ್ಕಾಚಾರವೇನು? ಮತ್ತೆ ಉಪ್ಪಿನ ವಿಚಾರದಲ್ಲಾದಂತೆ ಸಾಮಾನ್ಯ ಅಕ್ಕಿ ಮಿಲ್ಲುಗಳು ಮುಚ್ಚಿ ಬೃಹತ್ ಉದ್ದಿಮೆಗಳದ್ದೇ ಕೈಮೇಲಾಗಬಹುದಲ್ಲವೇ? ಮಕ್ಕಳಲ್ಲಿ ಪ್ರೊಟೀನಿನ ಕೊರತೆಯು ಹೆಚ್ಚು ಕಂಡುಬರುತ್ತಿರುವಾಗ ಆಹಾರದಲ್ಲಿ ವೈವಿಧ್ಯತೆ ಆದ್ಯತೆಯಾಗಬೇಕೇ ಅಥವಾ ಒಂದು ಆಹಾರದಲ್ಲಿ ಒಂದು ಪೋಷಕಾಂಶವನ್ನು ಸೇರಿಸುವ ದಾರಿ ಬೇಕೆ?

ಈ ಎಲ್ಲ ಪ್ರಶ್ನೆಗಳನ್ನಿಟ್ಟುಕೊಂಡು ಆಹಾರ ತಜ್ಞರು, ವಿಜ್ಞಾನಿಗಳು, ಜನಸಂಘಟನೆಗಳು ಸೇರಿ 170 ಜನರು ‘ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರತಿಷ್ಠಾನ’ಕ್ಕೆ ಪತ್ರವನ್ನು ಬರೆದಿದ್ದಾರೆ. ಹೈದರಾಬಾದಿನ ರಾಷ್ಟ್ರೀಯ ಪೌಷ್ಟಿಕ ಸಂಸ್ಥೆಯ ಮಾಜಿ ನಿರ್ದೇಶಕರಾದ ಡಾ. ವೀಣಾ ಶತ್ರುಘ್ನ ಅವರು ಹೇಳುವಂತೆ ನಮ್ಮದು ರೊಟ್ಟಿ ತಿನ್ನುವ ಜನರ ದೇಶ. ಗೋಧಿ ರೊಟ್ಟಿ (ಫುಲ್ಕೆ), ಜೋಳ ಮತ್ತು ಸಜ್ಜೆಯ ರೊಟ್ಟಿ, ಇವೆಲ್ಲವಕ್ಕೂ ಇಡಿಯ ಕಾಳನ್ನು ಹಿಟ್ಟು ಮಾಡಿಸಿ ರೊಟ್ಟಿ ಮಾಡುತ್ತಾರೆ ಹೊರತು ಮೈದಾವನ್ನು ಬಳಸುವುದಿಲ್ಲ. 100 ಗ್ರಾಂನ ಜೋಳದಲ್ಲಿ 4.1 ಮಿಲಿಗ್ರಾಂ, ಸಜ್ಜೆಯಲ್ಲಿ 8 ಮಿಲಿಗ್ರಾಂ, ರಾಗಿಯಲ್ಲಿ 3.9 ಮಿಲಿಗ್ರಾಂ, ಗೋಧಿಯಲ್ಲಿ 1.2 ಮಿಲಿಗ್ರಾಂ ಕಬ್ಬಿಣಾಂಶ ಇರುತ್ತದೆ. ಅದೇ 100 ಗ್ರಾಂ ಅಕ್ಕಿಯಲ್ಲಿ ಅತಿ ಕಡಿಮೆ ಎಂದರೆ 0.2 ಮಿಲಿಗ್ರಾಂ ಮಾತ್ರ ಕಬ್ಬಿಣಾಂಶ ಇದೆ. ವಿರೋಧಾಭಾಸ ನೋಡಿ! ಸರಕಾರ ಪಡಿತರದಲ್ಲಾಗಲೀ, ಮಧ್ಯಾಹ್ನದ ಬಿಸಿಯೂಟದಲ್ಲಾಗಲೀ ಕೊಡುವುದು ಅತಿ ಕಡಿಮೆ ಕಬ್ಬಿಣಾಂಶವಿರುವ ಚೆನ್ನಾಗಿ ಪಾಲಿಶ್ ಮಾಡಿರುವ ಅಕ್ಕಿ ಮತ್ತು ಗೋಧಿಯನ್ನು ಮಾತ್ರ. ಮಕ್ಕಳಲ್ಲಿ, ಮಹಿಳೆಯರಲ್ಲಿ ಅಪೌಷ್ಟಿಕತೆ, ರಕ್ತ ಹೀನತೆ ಇದೆಯೆಂದು ಅಕ್ಕಿಯಲ್ಲಿ ಕಬ್ಬಿಣಾಂಶವನ್ನು ದೊಡ್ಡ ಕಂಪನಿಗಳಿಂದ ತುಂಬಿಸಿ ದೇಶದಲ್ಲಿ ಎಲ್ಲರಿಗೂ ತಿನ್ನಿಸಲು ಹೊರಟಿದೆ.

ಇಲ್ಲಿ ಎರಡು ಅಂಶಗಳನ್ನು ನಾವು ಗಮನಿಸಬೇಕು. ಒಂದು: ತಜ್ಞರು ಹೇಳುವಂತೆ ಯಾವುದೇ ಒಂದು ಪೋಷಕಾಂಶ ಒಂದೇ ಮೂಲದಿಂದ ಬರಬಾರದು. ಅದು ವೈವಿಧ್ಯಮಯ ಆಹಾರಗಳಿಂದ ಬರುತ್ತಿರಬೇಕು. ಒಂದು ಪೋಷಕಾಂಶ ಹೀರಲ್ಪಡಬೇಕಾದರೆ ಅದರೊಂದಿಗೆ ಇನ್ನೊಂದು ಪೋಷಕಾಂಶ ಅವಶ್ಯ.
ಅಂದಾಗ ಮಾತ್ರ ದೇಹದಲ್ಲಿ ಆ ಪೋಷಕಾಂಶ ರಕ್ತಗತವಾಗುತ್ತದೆ. ಕಬ್ಬಿಣಾಂಶ ರಕ್ತದಲ್ಲಿ ಸೇರಲಿಕ್ಕೆ ಪ್ರೋಟೀನ್ ಬೇಕು. ಪ್ರೋಟೀನ್ ಇರುವುದು ಬೇಳೆ ಮತ್ತು ಕಾಳುಗಳಲ್ಲಿ, ತತ್ತಿ ಮತ್ತು ಮಾಂಸದಲ್ಲಿ. ಇವೆಲ್ಲವನ್ನೂ ನಮ್ಮ ಪೂರಕ ಆಹಾರದಲ್ಲಿ ಸಂಪೂರ್ಣವಾಗಿ ನಿರಾಕರಿಸಲಾಗುತ್ತಿದೆ. ಪಡಿತರದಲ್ಲಿ ಮತ್ತು ಅಂಗನವಾಡಿ, ಶಾಲಾ ಆಹಾರದಲ್ಲಿ ಪೌಷ್ಟಿಕ ಆಹಾರವನ್ನು ಕೊಡಿ, ಬೇಳೆ ಮತ್ತು ಎಣ್ಣೆಯನ್ನು ಕೊಡಿ ಎಂಬ ಬೇಡಿಕೆ ಇಂದು ನಿನ್ನೆಯದಲ್ಲ. ಅದರ ಕಡೆ ನೋಡಲು ಸರಕಾರ ತಯಾರಿಲ್ಲ.

ಎರಡನೇ ಮುಖ್ಯ ವಿಷಯವೆಂದರೆ; ಕಬ್ಬಿಣಾಂಶವು ಅಗತ್ಯಕ್ಕಿಂತ ಹೆಚ್ಚಿಗೆ ಸಿಕ್ಕಿತೆಂದರೆ ದೇಹದಲ್ಲಿ ಬೇಕಾದ್ದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸೇರಿತೆಂದರೆ ಅದು ಹೊರಕ್ಕೆ ಹೋಗದೆ ದೇಹದೊಳಕ್ಕೇ ಸಂಗ್ರಹವಾಗುವ ಸಾಧ್ಯತೆ ಬಹಳವಿದೆ ಎನ್ನುತ್ತಾರೆ ಬೆಂಗಳೂರಿನ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನ ಫಿಸಿಯಾಲಜಿ ಮತ್ತು ನ್ಯುಟ್ರಿಷನ್ ಪ್ರೊಫೆಸರ್ ಅನುರಾ ಕರ್ಪದ್. ಗಂಡಸರಲ್ಲಂತೂ ಸಂಗ್ರಹವಾಗುವ ಕಬ್ಬಿಣಾಂಶವನ್ನು ಹೊರಹಾಕುವ ಸಾಧ್ಯತೆಯೇ ಇಲ್ಲ. ಇದರ ಕಾರಣದಿಂದ ಸಕ್ಕರೆ ರೋಗ ಹೆಚ್ಚಳವಾಗುವ ಸಾಧ್ಯತೆ ಬಹಳವಿದೆ ಎಂದು ಅವರು ಹೇಳುತ್ತಾರೆ.

ರಕ್ತಹೀನತೆಗೆ ಕಬ್ಬಿಣಾಂಶದ ಮಾತ್ರೆಗಳನ್ನು ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೊಡಲಾಗುತ್ತಿದೆ. ಆದರೆ ಅದನ್ನು ಮಹಿಳೆಯರು ಸರಿಯಾಗಿ ತೆಗೆದುಕೊಳ್ಳುತ್ತಿದ್ದಾರೆಯೇ? ಅಥವ ಎಸೆಯುತ್ತಿದ್ದಾರೆಯೇ? ಸೇವಿಸಿದ ಕಬ್ಬಿಣಾಂಶ ಹಿಮೋಗ್ಲೋಬಿನ್ ಆಗುತ್ತಿದೆಯೇ? ರಕ್ತಗತವಾಗಲು ಅತಿ ಅವಶ್ಯವಿರುವ ಪ್ರೊಟೀನ್ ಅವರಿಗೆ ಸಿಗುತ್ತಿದೆಯೇ? ಗೊತ್ತಿಲ್ಲ. ಇದನ್ನು ಪರಾಮರ್ಶಿಸುವ ಬದಲು ಸರಕಾರವು ಇನ್ನೊಂದು ರೂಪದಲ್ಲಿ ಕಬ್ಬಿಣಾಂಶವನ್ನು ಕೊಡಲು ವರ್ಷಕ್ಕೆ 2600 ಕೋಟಿ ರೂಪಾಯಿಗಳನ್ನು ವ್ಯಯಿಸಲು ಹೊರಟಿದೆ. ಆಗಲೂ ಕಬ್ಬಿಣಾಂಶದ ಹೀರಿಕೆ ಆಗದಿದ್ದರೆ? ‘ಪ್ರೋಟೀನ್ ಮತ್ತು ಇತರ ವೈವಿಧ್ಯಮಯ ಆಹಾರವು ಜನರ ತಟ್ಟೆಯೊಳಕ್ಕೆ ತಲುಪುವಂತೆ ಮಾಡುವುದೇ ನಿಜವಾಗಿ ಪ್ರಯೋಜನಕಾರಿ’ ಎನ್ನುತ್ತಾರೆ ಪ್ರೊ. ಕರ್ಪದ್

ನಮ್ಮ ದೇಶದಲ್ಲಿ ಕೇವಲ 10% ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುತ್ತದೆ. ಶೇ.50ಕ್ಕಿಂತ ಕಡಿಮೆ ಜನರಿಗೆ ಸರಿಯಾದ ಆಹಾರ ಸಿಗುತ್ತದೆ. ಇದಕ್ಕೆ ಆಹಾರವಷ್ಟೇ ಕಾರಣವಲ್ಲ. ಸಾಮಾಜಿಕ ಕಾರಣವೇ ಬಹಳವಿದೆ. ದಲಿತರು, ಹೆಣ್ಣುಮಕ್ಕಳು, ಭೂಹೀನರು ಇವರೆಲ್ಲರ ದೇಹದೊಳಗೆ ಕಬ್ಬಿಣಾಂಶವು ಹೋದರೂ ಕೂಡ ಅದು ರಕ್ತದೊಳಗೆ ಸೇರುವುದಿಲ್ಲ. ಇವರಿಗೆ ಸರಕಾರವು ಕೊಡುತ್ತಿರುವ ಪೂರಕ ಆಹಾರದಲ್ಲಿ ತತ್ತಿ, ಬೇಳೆಕಾಳುಗಳನ್ನು ಸೇರಿಸಿ. ಎಣ್ಣೆಯನ್ನು ಸೇರಿಸಿ. ಸ್ಥಳೀಯ ಸಿರಿಧಾನ್ಯಗಳನ್ನು ಕೊಡಿ. ರಾಷ್ಟ್ರೀಯ ಆಹಾರ ಭದ್ರತಾ ಕಾನೂನಿನೊಳಗೆ ಸಿರಿಧಾನ್ಯಗಳು ಇದ್ದರೂ ಅವನ್ನು ಇಂದಿಗೂ ಸೇರಿಸುತ್ತಿಲ್ಲ ಎಂದು ವಿಷಾದದಿಂದ ಹೇಳುತ್ತಾರೆ ದೆಹಲಿಯ ಮಕ್ಕಳ ತಜ್ಞೆ ಡಾ. ವಂದನಾ ಪ್ರಸಾದ್. ಕರ್ನಾಟಕದಲ್ಲಿಯೇ ಜೋಳ, ರಾಗಿಯನ್ನು ಸೇರಿಸಬೇಕು, ಸೇರಿಸುತ್ತೇವೆ ಎಂದು ಮತ್ತೆ ಮತ್ತೆ ಸರಕಾರವು ಹೇಳುತ್ತಿದೆಯಾದರೂ ಆ ನಿಟ್ಟಿನಲ್ಲಿ ಯಾವುದೇ ಕ್ರಮವಿಲ್ಲ.

ಇವೆಲ್ಲವೂ ಜನಸಾಮಾನ್ಯರನ್ನು, ರೈತರನ್ನು ಬದುಕಿಸುವ ಕ್ರಮಗಳು. ಆದರೆ ನಮ್ಮ ಇಂದಿನ ಸರಕಾರ ವಾಲುತ್ತಿರುವುದು ತನಗೆ ಮತನೀಡಿದ ಜನರತ್ತ ಅಲ್ಲ, ದೇಶದ ತುಂಬೆಲ್ಲ ದೊಡ್ಡ ದೊಡ್ಡ ಪೋಸ್ಟರ್‌ಗಳನ್ನು ಹಾಕಲು ಹಣ ಕೊಟ್ಟ ಕಾರ್ಪೊರೇಟ್ ಉದ್ದಿಮೆಗಳತ್ತ. ಆಹಾರದಲ್ಲಿ ಪೌಷ್ಟಿಕಾಂಶವನ್ನು ಸೇರಿಸುವ ಕುರಿತು ವಿಜ್ಞಾನಿಗಳೊಂದಿಗೆ, ಆಹಾರ ತಜ್ಞರೊಂದಿಗೆ ಚರ್ಚಿಸಲು ಅದು ತಯಾರಿಲ್ಲ. ಬದಲಿಗೆ ದೊಡ್ಡ ದೊಡ್ಡ ಕಂಪನಿಗಳ ತಜ್ಞರು ಹೇಳಿದಂತೆ ಕೇಳುವುದನ್ನೇ ತನ್ನ ಧರ್ಮವಾಗಿಸಿಕೊಂಡಿದೆ. ಎಲ್ಲರೂ ಕಡ್ಡಾಯವಾಗಿ ಪೋಷಕಾಂಶಭರಿತ ಅಕ್ಕಿಯನ್ನೇ ತಿನ್ನಬೇಕೆಂದು ಸರಕಾರ ಕಡ್ಡಾಯ ಮಾಡತೊಡಗಿತೆಂದರೆ, ಬಹುರಾಷ್ಟ್ರೀಯ ಕಂಪನಿಗಳಾದ ಬಿಎಎಸ್‌ಎಫ್, ಲೊಂಸಾ, ಎಡಿಎಂ ಮುಂತಾದವು ಆಹಾರದಲ್ಲಿ ಕಬ್ಬಿಣಾಂಶ, ವಿಟಮಿನ್ ’ಎ’ಗಳನ್ನು ಸೇರಿಸತೊಡಗಿದವೆಂದರೆ ಸ್ಥಳೀಯ ಅಕ್ಕಿಗಿರಣಿಗಳು, ಎಣ್ಣೆ ಗಾಣಗಳು, ಚಿಕ್ಕ ಪುಟ್ಟ ಆಹಾರ ಸಂಸ್ಕರಣಾ ಘಟಕಗಳು ಎಲ್ಲವೂ ಮುಚ್ಚಿಕೊಂಡುಹೋಗುವ ಅಪಾಯವಿದೆ. ವೈವಿಧ್ಯಮಯ ಆಹಾರ ಬೆಳೆಯುವ ರೈತರ ಜೀವನೋಪಾಯ ಮತ್ತು ಜೀವನಕ್ಕೂ ಅದು ಕುತ್ತು ತರಲಿದೆ.

ಶಾರದಾ ಗೋಪಾಲ

ಶಾರದಾ ಗೋಪಾಲ
ಶಾರದಾ ಮಹಿಳಾಪರ ಕಾಳಜಿಯ ಚಿಂತಕಿ, ಬರಹಗಾರ್ತಿ ಮತ್ತು ಸಾಮಾಜಿಕ ಕಾರ್ಯಕರ್ತೆ. ಜನಾರೋಗ್ಯದ ಪ್ರಯತ್ನಗಳಲ್ಲಿ ಗಂಭೀರವಾಗಿ ದಶಕಗಳಿಂದ ತೊಡಗಿಸಿಕೊಂಡವರು. ಎಲ್ಲ ಸಮಾಜಮುಖಿ ಚಟುವಟಿಕೆಗಳ ಒಡನಾಡಿ. ಪ್ರಸ್ತುತ ಧಾರವಾಡದಲ್ಲಿ ನೆಲೆಸಿದ್ದಾರೆ.


ಇದನ್ನೂ ಓದಿ: ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಲಾಕ್‌ಡೌನ್‌ ಸಂದರ್ಭದ ಆಹಾರ ಭತ್ಯೆ ನೀಡಿ: KVS ಒತ್ತಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...