Homeಅಂಕಣಗಳುಕಳೆದು ಹೋದ ದಿನಗಳು - 16: ಇಂದಿರಾಗಾಂಧಿ ಚಿಕ್ಕಮಗಳೂರಿನಲ್ಲಿ ಚುನಾವಣೆ ಗೆದ್ದುದ್ದು..

ಕಳೆದು ಹೋದ ದಿನಗಳು – 16: ಇಂದಿರಾಗಾಂಧಿ ಚಿಕ್ಕಮಗಳೂರಿನಲ್ಲಿ ಚುನಾವಣೆ ಗೆದ್ದುದ್ದು..

ಆಗ ಸಣ್ಣ ರೈತರು, ಕೂಲಿ ಕಾರ್ಮಿಕರು, ದಲಿತರು, ಸಹಜವಾಗಿಯೇ ಇಂದಿರಾ ಪರವಾಗಿ ಇದ್ದರು. ಬ್ಯಾಂಕ್ ರಾಷ್ಟ್ರೀಕರಣದಿಂದ ಸಾಲ ಸೌಲಭ್ಯ ಪಡೆದವರು ಸಂತುಷ್ಟರಾಗಿದ್ದರು.

- Advertisement -
- Advertisement -

ರವೀಂದ್ರನಾಥರು ಪ್ರಾರಂಭಿಸಿದ್ದ ಹೈನುಗಾರಿಕೆ ಸಕಲೇಶಪುರ ತಾಲ್ಲೂಕಿನಲ್ಲಿ ಒಂದು ಆಂದೋಲನದಂತೆ ಬೆಳೆಯಿತು.

ಆಗ ಉಪಾಸಿ ಸಂಸ್ಥೆಯಿಂದ ಹೈನುಗಾರಿಕೆ ಅಭಿವೃದ್ಧಿ ಯೋಜನೆಯೊಂದು ಪ್ರಾರಂಭವಾಗಿತ್ತು. ಉಪಾಸಿ ಸಂಸ್ಥೆಯ ಕೇಂದ್ರ ಕಛೇರಿಯಿರುವ ತಮಿಳುನಾಡಿನ ಕೂನೂರಿನಲ್ಲಿ ಒಂದು ಹೈನುಗಾರಿಕೆ ತರಬೇತಿ ಕೇಂದ್ರವಿತ್ತು. ಸಕಲೇಶಪುರ ತಾಲ್ಲೂಕಿನಿಂದ ತರಬೇತಿಗಾಗಿ ಮೂವರನ್ನು ರವೀಂದ್ರನಾಥರು ಅಲ್ಲಿಗೆ ಕಳುಹಿಸಿದರು. ಅವರಲ್ಲಿ ಒಬ್ಬ ನಾನು, ಇನ್ನೊಬ್ಬರು ಹಾರ್ಲೆಯಲ್ಲಿ ಡೈರಿ ಕೆಲಸ ಮಾಡುತ್ತಿದ್ದ ವಿಶ್ವನಾಥ್ ಎಂಬವರು. ಮತ್ತೊಬ್ಬರು ದೇವಾಲದ ಕೆರೆಯ ಕಾಫಿ ಬೆಳೆಗಾರ ಉಮೇಶ್. ವಿಶ್ವನಾಥ್ ಈಗ ಬೆಂಗಳೂರಿನಲ್ಲಿ ಸ್ವಂತ ಉದ್ಯಮ ನಡೆಸುತ್ತಿದ್ದಾರೆ.

ಕಾಫಿ ತೋಟಗಳಲ್ಲಿ ಕೆಲಸಗಾರರ ಪ್ರತಿ ಕುಟುಂಬಕ್ಕೂ ಒಂದೊಂದು ಹಸು ಕೊಡಿಸುವುದು, ಸಹಕಾರಿ ಪದ್ಧತಿಯಲ್ಲಿ ಅದರ ಉಸ್ತುವಾರಿ. ತೋಟದಲ್ಲೇ ಅದಕ್ಕಾಗಿ ಕೊಟ್ಟಿಗೆಗಳನ್ನು ಕಟ್ಟಿ ವ್ಯವಸ್ಥೆ ಮಾಡುವುದು. ರವೀಂದ್ರನಾಥರಲ್ಲಿ ಹೀಗೆಲ್ಲ ಯೋಜನೆಗಳಿದ್ದವು.

ಅದನ್ನು ಪ್ರಾರಂಭಿಸುವ ಮುಂಚೆ ಸಕಲೇಶಪುರದ ರೋಟರಿ ಭವನದಲ್ಲಿ ಕಾಫಿಬೆಳೆಗಾರರರ ಸಭೆಯೊಂದನ್ನು ರವೀಂದ್ರನಾಥರು ಕರೆದಿದ್ದರು. ಆ ದಿನ ಯಾಕೋ ನನಗೆ “ನೀನೂ ಸಭೆಗೆ ಬಾ” ಎಂದಿದ್ದರು. ಹಾಗೇ “ನೀನು ನಿನ್ನ ಅಭಿಪ್ರಾಯವನ್ನು ಅಲ್ಲಿ ಹೇಳಬಹುದು” ಎಂದೂ ಸೂಚನೆ ಕೊಟ್ಟಿದ್ದರು.

ಸಭೆಯಲ್ಲಿ ರವೀಂದ್ರನಾಥರು ಅದರ ವಿವರಗಳನ್ನು ಹೇಳುತ್ತಿದ್ದಂತೆ ನನಗೆ ಅದ್ಭುತ ಯೋಜನೆ ಎನಿಸಿತು.

“ಆದರೆ ಕೆಲವರು ಪ್ಲಾಂಟರುಗಳಿಗೆ ಕಡು ಕೋಪ ತರಿಸಿತು. ಇದೆಲ್ಲಾ ಮಾಡಿದರೆ ಆಳುಗಳೆಲ್ಲ ಹೆಚ್ಚಿಕೊಂಡು ಬಿಡ್ತಾರೆ. ನಾಳೆ ಕೆಲಸಕ್ಕೇ ಬರಲ್ಲ” ಎಂದು ತಕರಾರು ತೆಗೆದರು. ರವೀಂದ್ರನಾಥರು ನನ್ನತ್ತ ಕೈ ತೋರಿಸಿ ಇಲ್ಲೊಬ್ಬ ಇದ್ದಾನೆ ಅವನೇನು ಹೇಳ್ತಾನೆ ಕೇಳೋಣ ಎಂದರು. ನನಗೆ ಮಾತನಾಡಲು ಯಾವ ಸಿದ್ಧತೆಯೂ ಇರಲಿಲ್ಲ.

“ನಾನು ಎದ್ದು ನಿಂತು, ಕಾರ್ಮಿಕರ ಮತ್ತು ಮಾಲಿಕರ ಸಂಬಂಧ ಇರಬೇಕಾದ್ದು ಹೀಗೆ. ನನಗೆ ಈ ಯೋಜನೆಯಲ್ಲಿ ನನಗೂ ಒಂದು ಪಾಲು ಸಿಗುತ್ತದೆ ಎಂದು ಸಂತೋಷವಾಯಿತು. ನಾವು ದೇಶ ಎನ್ನುತ್ತೇವೆ. ದೇಶ ಭಕ್ತಿ ಎನ್ನುತ್ತೇವೆ, ನನ್ನದು ಎಂದು ಏನೂ ಇಲ್ಲದವನಿಗೆ ಇದು ನಿನ್ನ ದೇಶ ಎನ್ನುವುದಕ್ಕೆ ಏನರ್ಥ? ಎಂದು ಬಿಟ್ಟೆ.

ರವೀಂದ್ರನಾಥರು ಇದ್ದುದರಿಂದಲೋ ಏನೋ ನಾನು ಸಭೆಯಿಂದ ಹೊರಹಾಕಿಸಿಕೊಳ್ಳದೆ ಬಚಾವಾದೆ. ಆದರೆ ಆ ಸಭೆಯಲ್ಲಿ ನಾನೊಬ್ಬ ಅನಪೇಕ್ಷಿತ ಎಂದು ಹಲವರ ಮುಖಭಾವದಲ್ಲೇ ತಿಳಿಯುತ್ತಿತ್ತು.

ಯಾರೋ ಒಬ್ಬರು “ಯೋಜನೆಯೇನೋ ಒಳ್ಳೆಯದೇ ರವಿ, ಈಗ ಪ್ರಾಯೋಗಿಕವಾಗಿ ಅದನ್ನು ಅವರೇ ಮಾಡುತ್ತಾರೆ ನಂತರ ನಾವೆಲ್ಲ ಮಾಡೋಣ” ಎಂದು ತಿಪ್ಪೆ ಸಾರಿಸಿ ಸಭೆಯನ್ನು ಮುಗಿಸಿದರು.

ನಂತರ ಒಬ್ಬರು ಹಿಂದಿನಿಂದ, ರವಿ ಬೇಕಾಗಿ ಆ ತಲೆಹರಟೆಯನ್ನು (ನಾನು) ಕರೆದುಕೊಂಡು ಬಂದಿದ್ದಾರೆ, ಎಂದರು. ಇನ್ನುಕೆಲವರು, “ಇದೆಲ್ಲ ಪುಸ್ತಕದ ಬದನೇ ಕಾಯಿ” ಎಂದರು.

ಇದೇ ರೀತಿ ಒಮ್ಮೆ ಗಣಪಯ್ಯನವರೂ ಕೆಲಸಗಾರರಿಗೆ “ನೀವೆಲ್ಲ ತೋಟದ ಷೇರುದಾರರಾಗಿ ನಾವೆಲ್ಲ ಸೇರಿ ಕಂಪೆನಿ ಮಾಡೋಣ” ಎಂದಿದ್ದರು. ಆದರೆ ಅದು ಯಾವುದೂ ಆ ಕಾಲದಲ್ಲಿ ಕೆಲಸಗಾರರಿಗೂ ಅರ್ಥವಾಗುವ ಸ್ಥಿತಿ ಇರಲಿಲ್ಲ ಆದ್ದರಿಂದ ಇವು ಯಾವುವೂ ಜಾರಿಗೆ ಬರುವ ಸಾಧ್ಯತೆಯೂ ಇರಲಿಲ್ಲವೆನಿಸುತ್ತದೆ.

ವಾಸುದೇವರಾವ್ ಹಾರ್ಲೆಯ ಮ್ಯಾನೇಜರ್ ಆಗಿ ಹಲವು ವರ್ಷಗಳು ಕಳೆದಿದ್ದವು. ಸಕಲೇಶಪುರ ಸುತ್ತ ಮತ್ತ ಅವರೊಂದು ರೀತಿಯಲ್ಲಿ ದಂತ ಕತೆಯಂತಾಗಿದ್ದರು. ಅವರ ಉಗ್ರ ಶಿಸ್ತಿನಿಂದಾಗಿ ಅನೇಕ ಮೋಜಿನ ಪ್ರಸಂಗಗಗಳು ನಡೆಯುತ್ತಿದ್ದವು.

ಹಾರ್ಲೆ ತೋಟಗಳಲ್ಲಿ ಪಶುಸಂಗೋಪನೆ ಪ್ರಾರಂಭಿಸಿದ ಮೇಲೆ ಸಕಲೇಶಪುರ ನಗರದಲ್ಲಿಯೂ  ಒಂದು ಘಟಕವಿತ್ತು. ಸುಮಾರು ಇಪ್ಪತ್ತು ಮೂವತ್ತು ಕರೆಯುವ ಹಸುಗಳನ್ನು ಅಲ್ಲಿ ಇಟ್ಟಿರುತ್ತಿದ್ದರು. ಸುತ್ತಲಿನ ನೂರಾರು ಮನೆಗಳವರು ಅಲ್ಲಿನ ಗ್ರಾಹಕರು. ಒಂದಿಷ್ಟೂ ನೀರು ಹಾಕದ ಶುದ್ಧ ತಾಜಾ ಹಾಲಿನಿಂದ ಅವರೆಲ್ಲ ಸಂತುಷ್ಟರಾಗಿದ್ದರು. ಇನ್ನು ಉಳಿದಂತೆ ಪೂರ್ಣಿಮಾ ಡೈರಿ, ಶ್ರೀನಿವಾಸ ಎಸ್ಟೇಟ್, ಹಾಗೂ ಕಪ್ಪಳ್ಳಿ ಘಟಕಗಳಿಂದ ಅಲ್ಲಿ ಸ್ಥಳೀಯವಾಗಿ ಕೊಟ್ಟು ಉಳಿದ ಹಾಲು ಸೈಕಲ್ ಮೂಲಕ ನಗರಕ್ಕೆ ಬರುತ್ತಿತ್ತು.

ಹಾರ್ಲೆ ಡೈರಿಗಳಿಗೆ ಲಾರಿ ಲೋಡುಗಳ ಲೆಕ್ಕದಲ್ಲಿ ಪಶು ಆಹಾರ ಬೇಕಿತ್ತು. ತಾಲ್ಲೂಕಿನಲ್ಲಿ ಬೇರೆಯವರೂ ಪಶು ಆಹಾರ ಕೊಳ್ಳುವವರಿದ್ದರು. ಹಾಗಾಗಿ ರವೀಂದ್ರನಾಥರು ಸಕಲೇಶಪುರದಲ್ಲಿ ಒಂದು ಪಶು ಆಹಾರ ಮಾರಾಟ ಮಳಿಗೆಯನ್ನು ಪ್ರಾರಂಭಿಸಿದರು.

ಅದನ್ನು ನೋಡಿಕೊಳ್ಳಲು ಒಬ್ಬ ಯುವಕನಿದ್ದ. ಕೆಲವೇ ಕಡೆಗಳಲ್ಲಿ ಫೋನಿದ್ದ ಕಾಲವದು. ಆಗ ಹಾರ್ಲೆ ಬಂಗಲೆಯಲ್ಲಿ ಒಂದು ಫೋನಿತ್ತು ಅಷ್ಟೇ. ಉಳಿದ ಕಡೆಗಳಲ್ಲಿ ಫೋನಿರಲಿಲ್ಲ. ಸಕಲೇಶಪುರದ ಪಶು ಆಹಾರ ಅಂಗಡಿಗೂ ಫೋನಿರಲಿಲ್ಲ, ಪಕ್ಕದ ಶೆಟ್ಟರ ಅಂಗಡಿಯಲ್ಲೊಂದು ಫೋನಿತ್ತು. ಕೆಲವು ಸಲ ತೋಟಕ್ಕೇನಾದರೂ ಸಾಮಾನು ಬೇಕಾದರೆ ಅಲ್ಲಿಗೆ ಫೋನ್ ಮಾಡಿ ತಿಳಿಸುತ್ತಿದ್ದರು.

ಒಮ್ಮೆ ಹೀಗೇ ಏನೋ ವಿಷಯಕ್ಕೆ ವಾಸುದೇವರಾವ್ ಅವರು ಅಂಗಡಿಯ ಯುವಕನಿಗೆ ಫೋನ್ ಮಾಡಿದ್ದಾರೆ. ಫೋನ್ ಕರೆ ಬರುವಾಗ ಸಿಗರೇಟು ಆತ ಸೇದುತ್ತಿದ್ದ. ಆತನಿಗೆ ಗಾಭರಿಯಾಯಿತು. ತಾನು ಸಿಗರೇಟು ಸೇದುತ್ತಿರುವುದು ವಾಸುದೇವರಾವ್ ಅವರಿಗೆ ತಿಳಿದರೆ? ಸಿಗರೇಟನ್ನು ಅಲ್ಲೇ ದೂರಕ್ಕೆ ಎಸೆದ.

ಮ್ಯಾನೇಜರ್ ವಾಸುದೇವ ರಾವ್ (ಕನ್ನಡಕ ಧಾರಿ)

ವಾಸನೆ ಬಂದರೆ? ಎಂದುಕೊಂಡ. ಬಾಯಿ ಮುಕ್ಕಳಿಸಲು ನೀರಿಲ್ಲ. ಬೇರೆ ಏನೂ ಪಕ್ಕದಲ್ಲಿ ಇರಲಿಲ್ಲ. “ಒಂದು ನಿಮಿಷ ಶೆಟ್ಟರೇ” ಎಂದು ಹೇಳಿ ಒಂದು ಹಿಡಿ ಪಶು ಆಹಾರವನ್ನು ಬಾಯಿಗೆ ಹಾಕಿಕೊಂಡು ಬೇಗ ಬೇಗ ಅಗಿದು ಉಗಿದು…..ಬಾಯಿ ಒರೆಸಿಕೊಂಡು ಹೋಗಿ ಮಾತಾಡಿದ!

ಸಾಮಾನ್ಯವಾಗಿ ಅವರ ಎದುರು ನಿಂತು ಮಾತಾಡಲು ಎಲ್ಲರೂ ಹೆದರುತ್ತಿದ್ದರು. ನಾವು ಹೇಳಿದ್ದು ಅವರಿಗೆ ವಿರೋಧವಾದರೆ ಅವರು ಕೆಲವು ಸಲ ಹಠಕ್ಕೆ ಬೀಳುವರು.

ನನಗೆ ಸ್ವತಂತ್ರವಾಗಿ ಏನಾದರೂ ಮಾಡಬೇಕೆಂಬ ಹಂಬಲವಿದ್ದುದರಿಂದ ನನ್ನ ಮುಂದಿನ ಗುರಿ ಇದ್ದುದು, ಹೇಗಾದರೂ ಮಾಡಿ ವಾಸಕ್ಕೊಂದು ಮನೆ ಮಾಡಿಕೊಳ್ಳುವುದು ಮತ್ತು ಊಟಕ್ಕೆ ಆಗುವಷ್ಟು ಏನಾದರೂ ವ್ಯವಸ್ಥೆ ಮಾಡಿಕೊಳ್ಳುವುದು. ಇಷ್ಟಿದ್ದರೆ ನಾನು ಮನೆಯವರನ್ನು ಕಟ್ಟಿಕೊಂಡೇ ಮನಸ್ಸು ಬಂದಾಗ ಕೆಲಸ ಬಿಡಬಹುದೆಂದು ನನ್ನ ಯೋಜನೆ. ಬಾಲ್ಯದಿಂದಲೇ ಇದೇ ಊರಲ್ಲೇ ಬೆಳೆದವನಾದ್ದರಿಂದ ಊರೊಳಗೆ ನನಗೆ ಚೆನ್ನಾಗಿ ಸಂಪರ್ಕವಿತ್ತು. ಊರಿನ ಗೆಳೆಯರ ಮತ್ತು ಹಿರಿಯರ ಸಹಾಯ ಪಡೆದು ಪಕ್ಕದಲ್ಲೇ ಒಬ್ಬರು ರೈತರ ಒಂದು ಎಕರೆ ಗದ್ದೆಯನ್ನು ಹತ್ತು ವರುಷಕ್ಕೆ ಗುತ್ತಿಗೆಗೆ ಪಡೆದೆ. ಹೇಗೂ ಮಡಿಕೇರಿಯಲ್ಲಿ ಕಾಲೇಜಿಗೆ ಹೋಗುವಾಗ ಬಂಧುಗಳ ಮನೆಯಲ್ಲಿ ಎರಡು ವರ್ಷ ಗದ್ದೆಯಲ್ಲಿ ಎಲ್ಲ ಕೆಲಸ ಮಾಡಿದ ಅನುಭವ ಇತ್ತು.

ಆದರೆ ನಾನು ಗದ್ದೆ ಗುತ್ತಿಗೆ ಮಾಡಿದ್ದು ಎಸ್ಟೇಟಿನ ಕಾನೂನಿಗೆ ವಿರೋಧ. ನಾನು ಕೆಲಸಕ್ಕೆ ಬೇರೆಯವರನ್ನು ಇಟ್ಟಿದ್ದರೂ, ನನ್ನ ಕೆಲಸವನ್ನು ನಾನು ಸರಿಯಾಗಿ ಮಾಡುತ್ತಿದ್ದರೂ.. ಕಾನೂನು ಕಾನೂನೇ…

ವಾಸುದೇವರಾವ್ ಇದನ್ನ ಒಪ್ಪಲು ಸಾಧ್ಯವೇ ಇರಲಿಲ್ಲ. ಹಾಗಾಗಿ ನಾನು ತೋಟದ ಪಟ್ಟಿಯಲ್ಲಿ ಸೇರುವುದನ್ನು ಮುಂದೆ ಹಾಕುತ್ತ ಹೋದೆ.  ಹೀಗಾಗಿ ನಾನು ಇನ್ನೂ ಅವರ ಹಿಡಿತಕ್ಕೆ ಸಿಕ್ಕಿರಲಿಲ್ಲ.

ನಾನು  ಎಸ್ಟೇಟ್‌ನ ಪಟ್ಟಿಯಲ್ಲಿ ದಾಖಲಾಗದೆ ಇದ್ದುದರಿಂದ ನನಗೆ ಸಂಬಳವಲ್ಲದೆ ಬೇರೆ ಯಾವ ಸೌಲಭ್ಯಗಳು ಸಿಗುವಂತಿರಲಿಲ್ಲ. ಈ ಬಗ್ಗೆ ರವೀಂದ್ರನಾಥರು ನನ್ನನ್ನು ಎಚ್ಚರಿಸಿದ್ದರೂ ನಾನು ಸುಮ್ಮನಿದ್ದೆ.

ಒಂದು ದಿನ ರವೀಂದ್ರನಾಥರು ನೀನು ಹೀಗೆ ಇದ್ದರಾಗದು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು. ನಾನು ಏನೂ ಮಾತಾಡಲಿಲ್ಲ ನಂತರ ಯೋಚಿಸಿ ಅಗತ್ಯ ಬಿದ್ದರೆ ರಾಜೀನಾಮೆ ಕೊಟ್ಟರಾಯಿತು ಎಂದುಕೊಂಡು ಅಧಿಕೃತವಾಗಿ ಕೆಲಸಕ್ಕೆ ಸೇರಿದೆ.

ಆ ವೇಳೆಗಾಗಲೇ ನಾನೊಬ್ಬ ಡೋಂಟ್ ಕೇರ್ ಮಾಸ್ಟರ್, ಸ್ವಲ್ಪ ಉಡಾಫೆಯವನು ಎಂದೆಲ್ಲಾ ಖ್ಯಾತಿಯನ್ನು ಪಡೆದಿದ್ದೆ.

ಕಾಲೇಜು ದಿನಗಳಲ್ಲೇ ಪಿತ್ರಾರ್ಜಿತ ಹವ್ಯಾಸವಾದ ಬೀಡಿಸೇದುವುದು ಅಭ್ಯಾಸವಾಗಿತ್ತು. ಅದೀಗ ಸಿಗರೇಟಿಗೆ ಭಡ್ತಿ ಹೊಂದಿತು. ಒಮ್ಮೆ ವಾಸುದೇವರಾಯರ ಆಫೀಸಿಗೆ ಹೋಗುವಾಗ ಸಿಗರೇಟು ಸೇದಿದ ನಂತರ ಹೋಗಿದ್ದೆ. ಆಫೀಸಿನಲ್ಲಿ ಮಾತಾಡುವಾಗ ಅವರಿಗೆ ವಾಸನೆ ಬಂದಿರಬೇಕು. ಒಂದರೆಡು ಸಲ ಉಸಿರಿನಲ್ಲೇ ವಾಸನೆಯ ಅಭಿವ್ಯಕ್ತಿ ಆಯಿತು. ನಾನು ಜಗ್ಗಲಿಲ್ಲ ಅಲ್ಲೇ ಇದ್ದೆ. ಮತ್ತೊಮ್ಮೆ ಮೂಗಿನಲ್ಲೇ ಫ್ಙೂ ಪ್ಙೂ ಎಂದರು. ಅದಕ್ಕೂ ನಾನು ಸೊಪ್ಪು ಹಾಕಲಿಲ್ಲ.

ನಂತರ ಅವರೇ “ ಏನು ಸಿಗರೇಟು ಸೇದಿದ್ದೀಯಾ?” ಎಂದು ಗುಡುಗಿದರು.

“ಹೌದು ಸೇದಿದ್ದೀನಿ” ಬಹಳ ಆತ್ಮ ವಿಶ್ವಾಸದಿಂದ, ನಿರ್ವಿಕಾರದಿಂದ ಹೇಳಿದೆ!

“ಇಲ್ಲ” ಎಂದು ಸುಳ್ಳು ಹೇಳುತ್ತಾನೆ. ಆಗ ಜೋರುಮಾಡಬಹುದು ಎಂದು ಅಂದುಕೊಂಡಿದ್ದರೇನೋ, ಅವರಿಗೆ ಜಗ್ಗುತ್ತಿದ್ದ ಹಗ್ಗವನ್ನೂ ಕೈಬಿಟ್ಟಂತಾಗಿರಬೇಕು. ಏನೂ ಹೇಳಲು ಹೊಳೆಯಲಿಲ್ಲ, ಒಂದು ಕ್ಷಣ ಸುಮ್ಮನಾಗಿಬಿಟ್ಟರು. ಆದರೆ ಸಾವರಿಸಿಕೊಂಡು ಮತ್ತೆ ಅದೇ ದೊಡ್ಡದನಿಯಲ್ಲಿ “ಒಂದು ಕಾಲದಲ್ಲಿ ನಾನೂ ಸೇದ್ತಿದ್ದೆ, ಅದೆಲ್ಲ ಹಾಳುಬುದ್ದಿ ಅಂತ ಗೊತ್ತಾದ ಮೇಲೆ ಬಿಟ್ಟೆ” ಎಂದರು.

ಆಮೇಲೆ ನಾನು ಹೋದ ಕೆಲಸ ಮುಗಿಸಿಕೊಂಡು ಹೊರಟೆ. ಆಗ ನಾನು ಸುಮ್ಮನಿರಲಾರದೆ,

“ನಾನೂ ಅಷ್ಟೆ, ಅದೆಲ್ಲ ಹಾಳು ಬುದ್ದಿ ಅಂತ ಗೊತ್ತಾದ ಮೇಲೆ ಬಿಡ್ತೇನೆ” ಎಂದು ಅಧಿಕ ಪ್ರಸಂಗಿತನ ಮಾಡಿದೆ.

ವಾಸುದೇವರಾಯರಿಗೆ ಸಿಟ್ಟು ತಡೆಯಲಾಗಲಿಲ್ಲ. ನನಗೆ ಮುಖ ತೋರಿಸಬೇಡ ಹೋಗು ಇಲ್ಲಿಂದ ಎಂದು ಬೈದು ಅಟ್ಟಿದರು.

ಇಂತಹ ಹಲವು ಪ್ರಸಂಗಗಳು ನಡೆದಿದ್ದರೂ, ಅವರು ನಿವೃತ್ತರಾದ ನಂತರ ಅವರ ಮನೆಗೆ ಹೋದಾಗ ಪ್ರೀತಿಯಿಂದ ಮಾತಾಡಿದ್ದಾರೆ. ನನ್ನ ಅಪ್ಪನೊಡನೆ ಅವರಿಗೆ ವಿಶ್ವಾಸವಿತ್ತು. ನಿವೃತ್ತಿಯ ನಂತರವೂ ಅವರಿಬ್ಬರಲ್ಲಿ ಪತ್ರ ವ್ಯವಹಾರವೂ ಇತ್ತು.

ಇಂತ ಸಮಯದಲ್ಲೇ ನನಗೆ ಮತ್ತೊಂದು ಸದವಕಾಶ ಸಿಕ್ಕಿತು. ಅದು ಇಂದಿರಾ ಗಾಂಧಿಯವರ ಚಿಕ್ಕಮಗಳೂರು ಚುನಾವಣೆ. ಇಡೀ ದೇಶವೇ ಎದ್ದುಕುಳಿತು ನೋಡಿದ ಚುನಾವಣೆ ಅದು, ಗಣಪಯ್ಯ ರವಿಂದ್ರನಾಥ ಇಬ್ಬರೂ ಚುನಾವಣೆ ಕೆಲಸಗಳಲ್ಲಿ ಭಾಗಿಯಾಗಿದ್ದರು. ಸಕಲೇಶಪುರ ತಾಲ್ಲೂಕಿನಿಂದ ನೂರಾರು ಯುವಕರು ಇಂದಿರಾ ವಿರುದ್ಧ ಪ್ರಚಾರಕ್ಕೆ ತೆರಳಿದ್ದರು. ನಾನು ಒಂದು ದಿನ ರಜೆ ಹಾಕಿ ಮೂಡಿಗೆರೆ ತಾಲ್ಲೂಕಿನಲ್ಲಿ ಪ್ರಚಾರಕ್ಕೆ ಹೋದೆ. ಅದು ಗಣಪಯ್ಯನವರಿಗೆ ತಿಳಿಯಿತು. “ನೀನು ಪ್ರಚಾರಕ್ಕೆ ಹೋದರೆ ಮೂಡಿಗೆರೆಲಿ ನಿನಗೆ ಯಾರಿದ್ದಾರೆ?” ಎಂದರು. ನಾನಾಗ ಮೂಡಿಗೆರೆ, ಮಾತ್ರವಲ್ಲ ನನಗೆ  ಚಿಕ್ಕಮಗಳೂರಿನ ಹಲವು ಕಡೆ ಗೆಳೆಯರಿದ್ದಾರೆ ಎಂದು ಉತ್ಸಾಹದಿಂದ ವಿವರ ಕೊಟ್ಟೆ.  ನನಗೆ ನಾಲ್ಕು ದಿನ ಅಧಿಕೃತವಾಗಿಯೇ ಪ್ರಚಾರಕ್ಕೆ ಹೋಗಲು ಅನುಮತಿ ಸಿಕ್ಕಿತು. ಇದು ಜಾರ್ಜ್ ಫೆರ್ನಾಂಡಿಸ್‌ರಂತವರನ್ನು ಹತ್ತಿರದಿಂದ ಕಾಣುವ ಅವರ  ಜೊತೆ ಓಡಾಡುವ ಅವಕಾಶವನ್ನು ಮಾಡಿಕೊಟ್ಟಿತು. ಅಷ್ಟೇ ಅಲ್ಲ ಹಲವಾರು ಜನ ಎಡ ಪಕ್ಷಗಳ ಕಾರ್ಯಕರ್ತರ ನಿಕಟ ಸಂಪರ್ಕಕ್ಕೆ ಕಾರಣವಾಯಿತು.

ಅದೇ ಚುನಾವಣೆಯಲ್ಲಿ ಕಲಿಯುಗ ಕೃಷ್ಣ ಎಂದು ಬಣ್ಣಿಸಲ್ಪಟ್ಟ ಜಾರ್ಜ್ ಫರ್ನಾಂಡೀಸ್

ಆಗ ಸಣ್ಣ ರೈತರು, ಕೂಲಿ ಕಾರ್ಮಿಕರು, ದಲಿತರು, ಸಹಜವಾಗಿಯೇ ಇಂದಿರಾ ಪರವಾಗಿ ಇದ್ದರು. ಕಾಫಿ ಪ್ಲಾಂಟರುಗಳಲ್ಲಿಯೂ ಗಣನೀಯ ಸಂಖ್ಯೆಯ ಜನರು ಕಾಫಿಗೆ ಒಳ್ಳೆಯ ಬೆಲೆ ಸಿಕ್ಕಿ, ಬ್ಯಾಂಕ್ ರಾಷ್ಟ್ರೀಕರಣದಿಂದ ಸಾಲ ಸೌಲಭ್ಯ ಸುಲಭವಾಗಿದ್ದರಿಂದ ಸಂತುಷ್ಟರಾಗಿದ್ದರು. ಇವರೆಲ್ಲರೂ ಇಂದಿರಾ ಪರವಾಗಿದ್ದರು.

ಹಾಗಾದರೆ ಜನತಾ ಬೆಂಬಲಿಗರು ಯಾರಾಗಿದ್ದರು? ಎಂದರೆ ಮುಖ್ಯವಾಗಿ ಮೊದಲಿನಿಂದಲೂ ರಾಜಕೀಯವಾಗಿ ಕಾಂಗ್ರೆಸ್ ಪಕ್ಷದ ವಿರೋಧಿ ನೆಲೆಯಲ್ಲಿದ್ದವರು. ತುರ್ತುಪರಿಸ್ಥಿತಿಯ ಸರ್ವಾಧಿಕಾರಿ ನಡೆಯನ್ನು ವಿರೋಧಿಸಿದ ಸಾಂಸ್ಕೃತಿಕ ವಲಯದವರು. ಎಡ ಪಕ್ಷಗಳ ಕಾರ್ಮಿಕ ಸಂಘಟನೆಗಳು. ಜೊತೆಗೆ ಭೂಸುಧಾರಣೆ ಕಾಯಿದೆಯ ವಿರೋಧಿಗಳು ಮತ್ತು ಋಣ ಮುಕ್ತ ಕಾಯಿದೆಯಿಂದ ಹಣ ಕಳೆದುಕೊಂಡವರು ಇದ್ದರು.

ಅತಿ ದೊಡ್ಡ ಜಿದ್ದಾ ಜಿದ್ದಿನ, ಆ ಚುನಾವಣೆಯನ್ನು ದೇವರಾಜ ಅರಸರು ಇಂದಿರಾ ಗಾಂಧಿಗೆ ಗೆದ್ದುಕೊಟ್ಟರು. ಆದರೆ ಚುನಾವಣೆಯೆಂದರೆ ಹೇಗಾದರೂ ಸರಿ, ಏನು ಬೇಕಾದರೂ ಮಾಡಿ ಗೆಲ್ಲುವ ಯುದ್ಧ ಎಂಬ ಸಿದ್ಧಾಂತಕ್ಕೆ ಎರಡೂ ಕಡೆಯವರು ಬೀಜ ಬಿತ್ತಿದ್ದರು. ಮುಂದೆ ಇದು ಭೂತಾಕಾರವಾಗಿ ಬೆಳೆಯಿತು.

ಇದಾದ ನಂತರ ಗಣಪಯ್ಯನವರೂ ಅವರ ಸಾಮಾಜಿಕ ಕೆಲಸಗಳಲ್ಲಿ ನನಗೆ ಸಣ್ಣ ಸಣ್ಣ ಜವಾಬ್ದಾರಿಗಳನ್ನು ಕೊಡಲು ಪ್ರಾರಂಭಿಸಿದರು. ನಂತರ ವಾಸುದೇವ ರಾವ್ ನನ್ನನ್ನು ವಿಚಾರಿಸಿಕೊಳ್ಳುವುದನ್ನೇ ಬಿಟ್ಟರು!

ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದು ಹೋದ ದಿನಗಳು  -8: ಕರ್ನಾಟಕದಲ್ಲಿ ಸ್ವತಂತ್ರ ಪಾರ್ಟಿ ಕಟ್ಟಿ ಬೆಳೆಸಿದ್ದ ಗಣಪಯ್ಯನವರು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ’: ಪ್ರಿಯಾಂಕ್ ಖರ್ಗೆ

ಬೆಂಗಳೂರು: ‘ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ನಿಯಮಗಳಿಗೆ ಅತೀತರಲ್ಲ’ ಎಂದು ಆರ್.ಎಸ್.ಎಸ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಮತ್ತೆ ಗುಡುಗಿದ್ದಾರೆ.  ರಾಜ್ಯದ ಗಮನ‌ ಸೆಳೆದಿದ್ದ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ...

“ಮಾಸ್ಕ್ ಧರಿಸಿದರೂ ಪ್ರಯೋಜನವಿಲ್ಲ”: ದೆಹಲಿ ವಾಯುಮಾಲಿನ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್

ದೆಹಲಿಯ ವಾಯುಮಾಲಿನ್ಯ 'ಗಂಭೀರ ಮಟ್ಟ' ತಲುಪಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಮಾಸ್ಕ್‌ ಧರಿಸಿದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ವಕೀಲರು ವರ್ಚುವಲ್ ಮೂಲಕ ನ್ಯಾಯಾಲಯಕ್ಕೆ ಹಾಜರಾದರೆ ಸಾಕು ಎಂದು ಹೇಳಿದೆ. ವಿವಿಧ ಪ್ರಕರಣಗಳಲ್ಲಿ...

ಛತ್ತೀಸ್‌ಗಢ| ಇಬ್ಬರು ಉನ್ನತ ಕಮಾಂಡರ್‌ಗಳು ಸೇರಿದಂತೆ ಆರು ಜನ ಮಾವೋವಾದಿಗಳ ಎನ್‌ಕೌಂಟರ್‌

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನವೆಂಬರ್ 11 ರಂದು ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಆರು ಮಾವೋವಾದಿಗಳಲ್ಲಿ ಮಾವೋವಾದಿ ನಾಯಕಿ, ಹಿರಿಯ ಕಾರ್ಯಕರ್ತ ಪಾಪಾ ರಾವ್ ಅವರ ಪತ್ನಿ ಊರ್ಮಿಳಾ ಮತ್ತು ಬುಚಣ್ಣ...

ಗ್ರೆನೇಡ್ ದಾಳಿಗೆ ಸಂಚು ರೂಪಿಸಿದ್ದ, ಪಾಕ್ ಐಎಸ್ಐ ಬೆಂಬಲಿತ ಗುಂಪು: ವಿದೇಶಿ ಮೂಲದ 10 ಹ್ಯಾಂಡ್ಲರ್‌ಗಳ ಬಂಧನ

ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಮಹತ್ವದ ಪ್ರಗತಿ ಸಾಧಿಸಿರುವ ಲುಧಿಯಾನ ಕಮಿಷನರೇಟ್ ಪೊಲೀಸರು, ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಬೆಂಬಲಿತ ಗ್ರೆನೇಡ್ ದಾಳಿ ಘಟಕದ 10 ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಅವರಿಂದ ಸ್ಪೋಟಕಗಳನ್ನು ವಶಕ್ಕೆ ಪಡೆದಿದ್ದಾರೆ.  ನವೆಂಬರ್...

ಗಾಜಾದಲ್ಲಿ ಮುಂದುವರೆದ ಪ್ಯಾಲೆಸ್ತೀನಿಯನ್ ಮಕ್ಕಳ ಕಾಣೆ ಪ್ರಕರಣ: ಮಕ್ಕಳ ಹಕ್ಕುಗಳ ಗುಂಪು

ಬುಧವಾರ ಪ್ಯಾಲೆಸ್ತೀನಿಯನ್ ಹಕ್ಕುಗಳ ಗುಂಪಿನ ವರದಿಯ ಪ್ರಕಾರ, ಇತ್ತೀಚಿನ ತಿಂಗಳುಗಳಲ್ಲಿ ಗಾಜಾದಿಂದ ಕನಿಷ್ಠ ಆರು ಮಕ್ಕಳು ಕಣ್ಮರೆಯಾಗಿದ್ದಾರೆ ಎಂದು 'ಮಕ್ತೂಬ್‌ ಮೀಡಿಯಾ' ವರದಿ ಮಾಡಿದೆ. ಕಾಣೆಯಾದ ಮಕ್ಕಳ ಕುಟುಂಬಗಳು ಈ ಪ್ರದೇಶದಲ್ಲಿನ ತನ್ನ ಮಿಲಿಟರಿ...

ರೂ. 15 ಲಕ್ಷ ಲಂಚ ಪಡೆದ ಪ್ರಕರಣ : ನ್ಯಾಯಾಧೀಶನ ಮೇಲೆ ಕೇಸ್, ಕೋರ್ಟ್ ಗುಮಾಸ್ತ ಅರೆಸ್ಟ್

ವಾಣಿಜ್ಯ ಮೊಕದ್ದಮೆಯೊಂದರಲ್ಲಿ ಅನುಕೂಲಕರ ಆದೇಶವನ್ನು ಪಡೆಯಲು 15 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮತ್ತು ಸ್ವೀಕರಿಸಿದ ಆರೋಪದ ಮೇಲೆ ಮುಂಬೈ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮಜಗಾಂವ್ ಸಿವಿಲ್ ಮತ್ತು ಸೆಷನ್ಸ್...

ಅಲಿಘರ್| ಶಾಲೆಯಲ್ಲಿ ‘ವಂದೇ ಮಾತರಂ’ ಹಾಡುವುದಕ್ಕೆ ಆಕ್ಷೇಪಿಸಿದ ಶಿಕ್ಷಕನ ಅಮಾನತು

ಉತ್ತರ ಪ್ರದೇಶದ ಶಾಹಪುರ್ ಕುತುಬ್‌ನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 'ವಂದೇ ಮಾತರಂ' ಹಾಡುವುದನ್ನು ಆಕ್ಷೇಪಿಸಿದ ಆರೋಪದ ಮೇಲೆ ಸರ್ಕಾರಿ ಶಾಲಾ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ರಾಷ್ಟ್ರಗೀತೆಯ ನಂತರ ವಂದೇಮಾತರಂ...

ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ ನೀಡಿದ ಹೈಕೋರ್ಟ್

ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥಸಂಚಲನಕ್ಕೆ ಕರ್ನಾಟಕ ಹೈಕೋರ್ಟ್ ನ ಕಲಬುರಗಿ ಪೀಠ ಷರತ್ತುಬದ್ಧ ಅನುಮತಿ ನೀಡಿದೆ. ಇದರಿಂದ ತೀವ್ರ ಪ್ರತಿಷ್ಠೆಯ ವಿಷಯವಾಗಿದ್ದ ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನಕ್ಕೆ ದಿನಾಂಕ ನಿಗದಿಯಾಗಿದೆ. ನವೆಂಬರ್ 16ರ‌ ಭಾನುವಾರ...

ಯಡಿಯೂರಪ್ಪ ವಿರುದ್ದದ ಪೋಕ್ಸೋ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಈ ಮೂಲಕ ನ್ಯಾಯಮೂರ್ತಿ ಎಂ.ಐ ಅರುಣ್ ಅವರು, ವಿಚಾರಣಾ ನ್ಯಾಯಾಲಯ ಸಂಜ್ಞೇ (cognisance)ಪರಿಗಣಿಸಿ ಯಡಿಯೂರಪ್ಪ ಅವರಿಗೆ ಸಮನ್ಸ್ ಜಾರಿ...

ಗುಜರಾತ್| ಗೋಹತ್ಯೆ ಮಾಡಿದ್ದಕ್ಕಾಗಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ; ರೂ.18 ಲಕ್ಷ ದಂಡ

ಗುಜರಾತ್‌ನ ಅಮ್ರೇಲಿಯಲ್ಲಿರುವ ಸೆಷನ್ಸ್ ನ್ಯಾಯಾಲಯವು, ಗುಜರಾತ್ ಪ್ರಾಣಿ ಸಂರಕ್ಷಣಾ ಕಾಯ್ದೆಯಡಿ ಗೋಹತ್ಯೆ ಮಾಡಿದ್ದಕ್ಕಾಗಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಗೋ ಕುಟುಂಬಕ್ಕೆ ಸೇರಿದ ಪ್ರಾಣಿಗಳ ಹತ್ಯೆಯನ್ನು ಕಾನೂನು...