Homeಚಳವಳಿವಿಶ್ವ ಆಹಾರ ದಿನ: ಹಸಿವಿನ ಜಾಗತೀಕರಣಕ್ಕೆ ಆಹಾರ ಸಾರ್ವಭೌಮತ್ವವೇ ಮದ್ದು

ವಿಶ್ವ ಆಹಾರ ದಿನ: ಹಸಿವಿನ ಜಾಗತೀಕರಣಕ್ಕೆ ಆಹಾರ ಸಾರ್ವಭೌಮತ್ವವೇ ಮದ್ದು

ನಮ್ಮ ಭಾರತದಲ್ಲಿ ಒಂದು ಕಡೆ ಸರ್ಕಾರದ ಗೋದಾಮುಗಳಲ್ಲಿ, ಕಾಳಸಂತೆಯ ಖದೀಮರ ನಿಯಂತ್ರಣದಲ್ಲಿ ಕೊಳೆಯುತ್ತಿರುವ ಆಹಾರ ಇದ್ದರೆ ಮತ್ತೊಂದೆಡೆ ಆಹಾರವಿಲ್ಲದೆ ಅನೇಕರು ಹಸಿವಿನಿಂದ ಬಳಲುತ್ತಿದ್ದಾರೆ.

- Advertisement -
- Advertisement -

ವಿಶ್ವಸಂಸ್ಥೆಯು ಕೃಷಿ ಸಂಸ್ಥೆ ಸ್ಥಾಪನೆಯ ದಿನಾಂಕದ ಗೌರವಾರ್ಥವಾಗಿ ಮತ್ತು ಜಗತ್ತಿನ ಹಸಿವಿನ ನಿರ್ಮೂಲನೆಯ ಧ್ಯೇಯದೊಂದಿಗೆ ಪ್ರತಿವರ್ಷ ಅಕ್ಟೋಬರ್ 16ರನ್ನು ‘ವಿಶ್ವ ಆಹಾರ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ಏತನ್ಮಧ್ಯೆ ಪ್ರತಿಷ್ಠಿತ ನಾರ್ವೆಯ ನೊಬೆಲ್ ಸಮಿತಿ ‘ವಿಶ್ವ ಆಹಾರ ಕಾರ್ಯಕ್ರಮಕ್ಕೆ’ 2020ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರ ನೀಡಲು ನಿರ್ಧರಿಸಿದೆ. ಕೊರೊನಾ ಕಾರಣದಿಂದ ಹಸಿವು ಮತ್ತು ಆಹಾರ ಪೂರೈಕೆಯ ವಿಷಯಗಳು ಇಂದು ಜಗತ್ತಿನಾದ್ಯಂತ ಬಹು ಚರ್ಚೆಯ ವಿಷಯಗಳಾಗಿ ಮಾರ್ಪಟ್ಟಿವೆ.

ಸಂಶೋಧನೆಗಳ ಅಂಕಿ-ಅಂಶಗಳ ತಿಳಿಸುವ ಅಂದಾಜಿನ ಪ್ರಕಾರ ನಮ್ಮ ರೈತರು ಈಗಾಗಲೇ ಈ ಜಗತ್ತಿನ ಜನಸಂಖ್ಯೆಗೆ ಆಗುವಷ್ಟು ಆಹಾರವನ್ನು ಉತ್ಪಾದನೆ ಮಾಡುತ್ತಿದ್ದಾರೆ. ವಿಶ್ವದ ಪ್ರಮುಖ ಆಹಾರ ಉತ್ಪಾದಿಸುವ ದೇಶಗಳಲ್ಲಿ ಭಾರತವೂ ಒಂದು. ಆದರೂ 2020ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ, 107 ದೇಶಗಳಲ್ಲಿ ಭಾರತ 94ನೇ ಸ್ಥಾನದಲ್ಲಿದೆ ಮತ್ತು ಆಹಾರ ದೃಷ್ಟಿಯಿಂದ ಅಸುರಕ್ಷಿತ ಜನರ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ. ಇನ್ನು ನಮ್ಮ ಭಾರತದಲ್ಲಿ ಒಂದು ಕಡೆ ಸರ್ಕಾರದ ಗೋದಾಮುಗಳಲ್ಲಿ, ಕಾಳಸಂತೆಯ ಖದೀಮರ ನಿಯಂತ್ರಣದಲ್ಲಿ ಕೊಳೆಯುತ್ತಿರುವ ಆಹಾರ ಇದ್ದರೆ ಮತ್ತೊಂದೆಡೆ ಆಹಾರವಿಲ್ಲದೆ ಅನೇಕರು ಹಸಿವಿನಿಂದ ಬಳಲುತ್ತಿದ್ದಾರೆ. ಹಸಿವಿನಿಂದ ಸಾವುಗಳಾದ ಹಲವು ಪ್ರಕರಣಗಳು ಮಾಧ್ಯಮಗಳಲ್ಲಿ ವರದಿಯಾಗಿವೆ.

ವಿಶ್ವಸಂಸ್ಥೆಯ ಹೊಸ ವರದಿಯ ಪ್ರಕಾರ, ಜಾಗತಿಕ ಹಸಿವು ಮತ್ತು ಅಪೌಷ್ಟಿಕತೆಯ ದರ ಹೆಚ್ಚುತ್ತಿದೆ. ವಿಶ್ವಾದ್ಯಂತ 2 ಬಿಲಿಯನ್ ಜನರು ಹಸಿವಿನ ತೊಂದರೆಯಲ್ಲಿದ್ದಾರೆ. ಇದು ಶ್ರೀಮಂತ, ಮಧ್ಯಮ-ಆದಾಯ ಮತ್ತು ಕಡಿಮೆ ಆದಾಯದ ದೇಶಗಳಲ್ಲಿನ ಜನರನ್ನೂ ಒಳಗೊಂಡಿದೆ. 2019ರಲ್ಲಿ 690 ಮಿಲಿಯನ್ ಜನ ಅಂದರೆ ವಿಶ್ವದ ಜನಸಂಖ್ಯೆಯ 8.9% ಜನ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ವರದಿ ಅಂದಾಜಿಸಿದೆ. 2030ರ ವೇಳೆಗೆ ಈ ಸಂಖ್ಯೆ 840 ಮಿಲಿಯನ್ ಮೀರುತ್ತದೆ ಎಂದು ಅದು ಅಂದಾಜಿಸಿದೆ. ಕೋವಿಡ್-19 ಸಾಂಕ್ರಾಮಿಕ ರೋಗ ಈ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಸಾಂಕ್ರಾಮಿಕ ರೋಗ ಮತ್ತು ಅದರ ಜೊತೆಗೆ ಸೇರಿರುವ ಆರ್ಥಿಕ ಹಿಂಜರಿತವು 83 ದಶಲಕ್ಷದಿಂದ ಹೆಚ್ಚುವರಿ 132 ದಶಲಕ್ಷ ಜನರನ್ನು ಅಪೌಷ್ಟಿಕತೆಗೆ ತಳ್ಳುತ್ತದೆ ಎಂದು ವಿಶ್ವಸಂಸ್ಥೆಯ ವರದಿ ಅಂದಾಜಿಸಿದೆ. ಒಟ್ಟಾರೆಯಾಗಿ, ಯು.ಎನ್‍ನ ಮುಖ್ಯ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಒಂದಾದ, 2030ರ ವೇಳೆಗೆ ಹಸಿವನ್ನು ನಿರ್ಮೂಲನೆ ಮಾಡುವ ಗುರಿ, ಅಸಂಭವವೆಂದು ಅದರ ಸಂಶೋಧನೆಗಳೇ ಎಚ್ಚರಿಸುತ್ತವೆ.

ಜಾಗತಿಕ ವ್ಯಾಪಾರ ವ್ಯವಸ್ಥೆಯು ಸದ್ಯ ಯಾವುದೇ ನಿರ್ದಿಷ್ಟವಾದ ಕಠಿಣ ನಿಯಮಾವಳಿಗಳಿಗೆ ಒಳಪಡದೇ ತನಗೆ ಅನುಕೂಲ ಆಗುವಂತಹ ನೀತಿ ನಿಯಮಗಳು ಮತ್ತು ಅವಕಾಶಗಳನ್ನು ಸೃಜಿಸಿಕೊಂಡು ಜಗತ್ತಿನಲ್ಲಿ ಬಡತನ, ಆರ್ಥಿಕ ಅಸಮಾನತೆ ಹಾಗು ಇನ್ನಿತರ ಅನೇಕ ಸಮಸ್ಯೆಗಳನ್ನು ಸೃಷ್ಟಿಸಿದೆ. ವಿಶ್ವ ವ್ಯಾಪಾರ ಸಂಸ್ಥೆಯು, ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ಬೃಹತ್ ಕೃಷಿ ಉದ್ಯಮಗಳಿಗೆ ಸಹಾಯವಾಗುವಂತಹ ಮುಕ್ತ ವ್ಯಾಪಾರ ನೀತಿಯನ್ನು ಸೃಷ್ಟಿಸುವುದರೊಂದಿಗೆ, ಅವುಗಳು ತಮ್ಮ ಕೃಷಿ ಚಟುವಟಿಕೆಗಳಿಗೆ ದೊಡ್ಡ ಮೊತ್ತದ ಸಬ್ಸಿಡಿಗಳನ್ನು ಪಡೆದು ಅಗ್ಗದ ಆಹಾರ ಪದಾರ್ಥಗಳನ್ನು ಆರ್ಥಿಕವಾಗಿ ದುರ್ಬಲವಾದ ರಾಷ್ಟ್ರಗಳಲ್ಲಿ ಸುರಿಯುವ/ಎಸೆಯುವ ಸ್ವಾತಂತ್ರವನ್ನು ನೀಡಿದೆ. ಈ ಕ್ರಮವು ಒಂದು ಕಡೆ ಸ್ಥಳೀಯ ಮಾರುಕಟ್ಟೆ ಬೆಲೆಗಳನ್ನು ಕುಸಿಯುವಂತೆ ಮಾಡುವದರ ಜೊತೆಜೊತೆಗೆ ರೈತರ ಮಾರುಕಟ್ಟೆ ವ್ಯವಸ್ಥೆಯನ್ನು ದುರ್ಬಲಗೊಳಿಸಿವೆ.

ಈ ಎಲ್ಲಾ ಕಾರಣಗಳಿಂದ ಜಾಗತಿಕವಾಗಿ ಅನೇಕ ದೇಶಗಳು ಆಹಾರ ಪೂರೈಕೆಗೆ ಜಾಗತಿಕ ಮಾರುಕಟ್ಟೆಯನ್ನು ಅವಲಂಬಿಸಿವೆ. ಇಂದು ಪ್ರಪಂಚದ ಅನೇಕ ದೇಶಗಳಲ್ಲಿ ಆಹಾರ ಸುರಕ್ಷತೆಯು ದೊಡ್ಡ ಕೈಗಾರಿಕಾ ಆಹಾರ ಉತ್ಪಾದನೆಯೊಂದಿಗೆ ಹೆಚ್ಚು ಸಂಬಂಧ ಹೊಂದಿದೆ. ಉದಾಹರಣೆಗೆ: ಸಿಂಗಾಪುರ್ ತನ್ನ ಆಹಾರದ 90% ಆಮದು ಮಾಡಿಕೊಳ್ಳುತ್ತದೆ. ಮಧ್ಯಪ್ರಾಚ್ಯದ ಬ್ರೆಡ್ ಬಾಸ್ಕೆಟ್ ಆಗಿದ್ದ ಇರಾಕ್ ತನ್ನ ಆಹಾರದದಲ್ಲಿ 80%ಕ್ಕೂ ಹೆಚ್ಚಿನದನ್ನು ವಿದೇಶದಿಂದ ಪಡೆಯುತ್ತದೆ. ಸುಮಾರು ಇಪ್ಪತ್ತಕ್ಕಿಂತ ಕಡಿಮೆ ಸಂಖ್ಯೆಯ ಜಾಗತಿಕ ಉದ್ದಿಮೆಗಳು ಇಂದು ನಾವು ಯಾವ ಆಹಾರವನ್ನು ಸೇವಿಸಬೇಕು, ಅದನ್ನು ಹೇಗೆ, ಎಲ್ಲಿ, ಯಾವ ರೂಪ ಮತ್ತು ಗಾತ್ರದಲ್ಲಿ ಖರೀದಿಸಬೇಕು ಎಂಬ ಸೂತ್ರವನ್ನು ಹೆಣೆದು ಜಾಗತಿಕ ಆಹಾರ ಸರಪಳಿಯನ್ನು ನಿಯಂತ್ರಿಸುತ್ತಿವೆ.

ಈ ಆಹಾರ ಅಭದ್ರತೆಯ ಪರಿಸ್ಥಿತಿಗೆ ಕಾರಣರಾಗಿರುವ ಕಾರ್ಪೋರೆಟ್ ದೈತ್ಯರಿಂದ ತುಳಿತಕ್ಕೊಳಗಾಗಿ ನಿರ್ಲಕ್ಷಿಸಲ್ಪಟ್ಟಿದ್ದ ಸಣ್ಣ ರೈತರು ಮತ್ತು ಇತರೆ ಸಣ್ಣ ಉತ್ಪಾದಕರನ್ನು ರಕ್ಷಿಸಲು ಅನೇಕ ದಶಕಗಳಿಂದ ಸರ್ಕಾರಗಳು ಏನು ಮಾಡಲಿಲ್ಲ.

ಅನೇಕ ದೇಶಗಳು ತನ್ನ ಆಹಾರ ಪೂರೈಕೆಗಾಗಿ ದೈತ್ಯ ಕೃಷಿ ವ್ಯಾಪಾರ ಸಂಸ್ಥೆಗಳ ಮೇಲೆ ಅವಲಂಬಿತರಾಗಿ, ಕಾರ್ಪೋರೆಟ್ ದೊರೆಗಳ ಲಾಭಾಂಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಸ್ಥಳೀಯ ಉತ್ಪಾದಕರನ್ನು ಕಡೆಗಣಿಸಿ ಅವರ ಉತ್ಪನ್ನಗಳನ್ನು ಅನ್ಯಾಯದ ಕಡಿಮೆ ಬೆಲೆಗೆ ಮಾರಾಟ ಆಗುವಂತಹ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರು. ಜಾಗತಿಕ ತಾಪಮಾನ ಏರಿಕೆಗೆ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಗೆ ಕೊಡುಗೆ ನೀಡುವಲ್ಲಿ ಸಾಂಪ್ರದಾಯಿಕ ಸಣ್ಣ-ಪ್ರಮಾಣದ ಕೃಷಿಗಿಂತ ದೊಡ್ಡ ಪ್ರಮಾಣದ ಕೃಷಿ ವ್ಯವಹಾರಗಳು ಭಾರಿ ಪ್ರಮಾಣದಲ್ಲಿ ಕಾರಣವಾಗಿರುವುದು ಅನೇಕ ವರದಿಗಳ ಮೂಲಕ ಜಗಜ್ಜಾಹೀರಾದಾಗಲೂ ಮೌನ ವಹಿಸಿದರು.ಸ್ಥಳೀಯ ರೈತ ಮಾರುಕಟ್ಟೆಗಳು ಸೂಪರ್ ಮಾರುಕಟ್ಟೆಗಳಿಗೆ ದಾರಿ ಮಾಡಿಕೊಟ್ಟವು. ಬಂಡವಾಳಶಾಹಿಗಳು ಮತ್ತು ಸರಕು ವ್ಯಾಪಾರ ಪಾಲುದಾರರು ದೊಡ್ಡ ಉದ್ಯಮಗಳನ್ನು ಸೃಷ್ಟಿಸಿ ಜಾಗತಿಕ ಆಹಾರ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಿದರು. ಕೃಷಿಯಲ್ಲಿನ ಸಾಮಾಜಿಕ ನ್ಯಾಯ ಮತ್ತು ಆಹಾರ ಸಾರ್ವಭೌಮತ್ವದ ಎಲ್ಲಾ ತತ್ವಗಳನ್ನು ಕಡೆಗಣಿಸಿದರು.

ಕೈಗಾರಿಕಾ ಆಹಾರ ಉತ್ಪಾದನೆಯ ಆಕ್ರಮಣಕಾರಿ ವಿಸ್ತರಣೆಯು ಮಾನವನ ಆರೋಗ್ಯವನ್ನು ಹೆಚ್ಚು ಹಾನಿಗೊಳಗಾಗಿಸುತ್ತದೆ. ರಾಸಾಯನಿಕಗಳ ಅತಿಯಾದ ಬಳಕೆ ಮತ್ತು ಆಹಾರಗಳ ಅತಿಯಾದ ಸಂಸ್ಕರಣೆಯಿಂದ, ಅವುಗಳ ಪೌಷ್ಟಿಕಾಂಶ ಕಡಿಮೆಯಾಗುವಂತೆ ಮತ್ತು ಹೆಚ್ಚು ಹಾನಿಕಾರಕವಾಗುವಂತೆ ಮಾಡುತ್ತಿದೆ. ಇದು ಜೂನಾಟಿಕ್ ಕಾಯಿಲೆಗಳಲ್ಲಿ ಹೆಚ್ಚಿನ ಏರಿಕೆಗೆ ಕಾರಣವೂ ಆಗಿದೆ.

ನಮ್ಮ ಆಹಾರಕ್ಕಾಗಿ ಕಂಪನಿಗಳು ಮತ್ತು ದೊಡ್ಡ ಕೃಷಿ ವ್ಯವಹಾರ ಸಂಸ್ಥೆಗಳ ಮೇಲೆ ಅವಲಂಬಿಸುವುದನ್ನು ನಾವು ನಿಲ್ಲಿಸಬೇಕಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಈ ದುರಿತ ಕಾಲ ಸಾಕ್ಷಿ ಸಮೇತ ಇದನ್ನು ಸ್ಪಷ್ಟಪಡಿಸಿದೆ. ಅಂತರರಾಷ್ಟ್ರೀಯ ಆಹಾರ ಪೂರೈಕೆ ಸರಪಳಿಗಳ ಮೇಲಿನ ಈ ಅವಲಂಬನೆಯ ಅಪಾಯಗಳು ಈಗ ಸ್ಪಷ್ಟವಾಗಿ ಮುನ್ನೆಲೆಗೆ ಬರುತ್ತಿವೆ. ವಾಸ್ತವವಾಗಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಆಹಾರ ಕೈಗಾರಿಕೆಗಳ ಮೇಲೆ ಹೆಚ್ಚು ಅವಲಂಬಿತವಾಗಿರುವ ದೇಶಗಳ ಹೀನಾಯ ಸ್ಥಿತಿಯನ್ನು ಸಾಂಕ್ರಾಮಿಕ ರೋಗವು ಎತ್ತಿ ತೋರಿಸಿದೆ.

ಜನಸಮೂಹವನ್ನು ಆರೋಗ್ಯಕರ ಮತ್ತು ಸುಸ್ಥಿರವಾಗಿ ಪೋಷಿಸಲು ಆಹಾರ ಸಾರ್ವಭೌಮತ್ವ ಅತ್ಯಗತ್ಯ. ಆಹಾರ ಸಾರ್ವಭೌಮತ್ವದಡಿಯಲ್ಲಿ, ಭೂಮಿ, ಬೀಜಗಳು, ನೀರು, ಮಾರುಕಟ್ಟೆಗಳು ಮತ್ತು ಆಹಾರ ಉತ್ಪಾದಿಸಲು ಹಾಗೂ ಒದಗಿಸಲು ಅವಶ್ಯಕವಾಗಿರುವ ಎಲ್ಲದರ ಮೇಲೂ ರೈತರು ಮತ್ತು ಜನರು ನಿಯಂತ್ರಣ ಹೊಂದಿರುತ್ತಾರೆ. ಎಲ್ಲ ರಾಷ್ಟ್ರಗಳು ತಮ್ಮ ಆಹಾರ ವ್ಯವಸ್ಥೆಯನ್ನು ಸ್ಥಳೀಯ ರೈತರಿಗೆ ವಹಿಸಿಕೊಡಬೇಕೇ ಹೊರತು ವಿದೇಶೀ ಸಂಸ್ಥೆಗಳಿಗಲ್ಲ ಎಂಬ ಮಾತನ್ನು ಆಹಾರ ಸಾರ್ವಭೌಮತ್ವವು ಒತ್ತಿ ಹೇಳುತ್ತದೆ. ಜನರು ತಮ್ಮದೇ ಆದ ಆಹಾರ ಮತ್ತು ಕೃಷಿ ವ್ಯವಸ್ಥೆಗಳನ್ನು ನಿರ್ಧರಿಸುವ ಹಕ್ಕು ಮತ್ತು ಆರೋಗ್ಯಕರ ಹಾಗೂ ಸಾಂಸ್ಕೃತಿಕವಾಗಿ ಸೂಕ್ತವಾದ ಆಹಾರವನ್ನು ಉತ್ಪಾದಿಸುವ ಮತ್ತು ಸೇವಿಸುವ ಹಕ್ಕನ್ನು ಹೊಂದಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ತಂದೊಡ್ಡಿರುವ ಈ ತುರ್ತು ಪರಿಸ್ಥಿತಿ ಸಂದರ್ಭ ಆಹಾರ ಸಾರ್ವಭೌಮತ್ವದ ಪ್ರಾಮುಖ್ಯತೆಯನ್ನು ಸಾರಿ ಹೇಳುತ್ತದೆ. ಜನರ ಆಹಾರ ಸಾರ್ವಭೌಮತ್ವವು ಯಾವುದೇ ಆರ್ಥಿಕ ಆಘಾತದ ವಿರುದ್ಧ ನಾವು ಕಟ್ಟಿಕೊಳ್ಳಬಹುದಾದ ಅತ್ಯುತ್ತಮ ರಕ್ಷಣೆಯಾಗಿದೆ. ಸ್ಥಳೀಯ ಪ್ರದೇಶದಲ್ಲಿ ಅಥವಾ ನೆರೆಹೊರೆಗಳಲ್ಲಿ ಬೆಳೆಯುವ, ಉತ್ಪಾದಿಸುವ ರೈತರ ಬಗ್ಗೆ ತಿಳಿವಳಿಕೆ ಇರುವ, ಆರೋಗ್ಯಕರ, ಪೌಷ್ಟಿಕವಾದ ಮತ್ತು ಹವಾಮಾನಕ್ಕೆ ಸೂಕ್ತವಾದ ಆಹಾರವನ್ನು ಹೊಂದುವುದು ಸದ್ಯದ ತುರ್ತಾಗಿದೆ. ಸಾಮಾಜಿಕ ನ್ಯಾಯದಡಿಯಲ್ಲಿ ಪರಿಸರಕ್ಕೆ ಪೂರಕವಾದ ವಾತಾವರಣದಲ್ಲಿ ಬೆಳೆಯುವ ಆಹಾರ ಕ್ರಮವು ನಿಸರ್ಗಕ್ಕೆ ಹತ್ತಿರವಾಗಿದೆ ಮತ್ತು ಹಾನಿಕಾರಕ ಕೀಟನಾಶಕಗಳು ಮತ್ತು ರಾಸಾಯನಿಕ ಗೊಬ್ಬರಗಳನ್ನು ದೂರ ತಳ್ಳುತ್ತದೆ.

ಅತೀವ ಕಠಿಣ ಕ್ರಮಗಳ ಮೇಲೆ ನಡೆಯುವ ಮುಕ್ತ ಮಾರುಕಟ್ಟೆ ಆರ್ಥಿಕತೆಯ ಸ್ಪರ್ಧಾತ್ಮಕ ತರ್ಕವು ಅಂತರರಾಷ್ಟ್ರೀಯ ವ್ಯಾಪಾರವನ್ನು ವ್ಯಾಖ್ಯಾನಿಸುವುದನ್ನು ಮತ್ತು ನಿಯಂತ್ರಿಸುವುದನ್ನು ನಿಲ್ಲಿಸಬೇಕು. ಐಕ್ಯಮತ ಮತ್ತು ಸೌಹಾರ್ದತೆಯ ಮಾನವ ತತ್ವಗಳು, ಜಾಗತಿಕ ವ್ಯಾಪಾರ ನೀತಿಗಳು ಮತ್ತು ನೆಟ್‍ವರ್ಕ್‍ಳನ್ನು ನಿರ್ಧರಿಸಬೇಕು. ಹವಾಮಾನ ಅಥವಾ ಇತರ ವ್ಯತಿರಿಕ್ತ ಪರಿಸ್ಥಿತಿಗಳಿಂದಾಗಿ ಸ್ಥಳೀಯ ಉತ್ಪಾದನೆ ಅಸಾಧ್ಯ ಅಥವಾ ತೀವ್ರವಾಗಿ ಸವಾಲಾಗಿರುವ ದೇಶಗಳಲ್ಲಿ, ವ್ಯಾಪಾರವು ಸ್ಪರ್ಧೆಯನ್ನು ಮೀರಿ ಸಹಕಾರವನ್ನು ಅವಲಂಬಿಸಿರಬೇಕು. ಅದಕ್ಕಾಗಿಯೇ, ವರ್ಷಗಳಿಂದ, ಕರ್ನಾಟಕ ರಾಜ್ಯ ರೈತ ಸಂಘ, ಭಾರತೀಯ ಕಿಸಾನ್ ಯೂನಿಯನ್ ಮತ್ತು ಭಾರತದ ಪ್ರಮುಖ ರೈತ ಸಂಘಟನೆಗಳು ಮತ್ತು ಪ್ರಪಂಚದಾದ್ಯಂತದ ಲಾ ವಯಾ ಕ್ಯಾಂಪೆಸಿನಾದಂತಹ ರೈತ ಚಳುವಳಿಗಳು ಅಭಿಯಾನವನ್ನು ನಡೆಸಿ, ಕೃಷಿಯನ್ನು ಎಲ್ಲಾ ಮುಕ್ತ ವ್ಯಾಪಾರ ಮಾತುಕತೆಗಳಿಂದ ದೂರವಿಡುವಂತೆ ಒತ್ತಾಯಿಸುತ್ತ ಬಂದಿವೆ.

ಆಹಾರ ಮಾನವನ ಮೂಲ ಹಕ್ಕು

ಪ್ರತಿಯೊಬ್ಬರಿಗೂ ಸದೃಢ, ಪೌಷ್ಟಿಕ ಮತ್ತು ಆಹಾರ ಸಂಸ್ಕೃತಿಗೆ ತಕ್ಕನಾದ ಆರೋಗ್ಯಕರ ಸಮರ್ಪಕ ಆಹಾರವು ಲಭ್ಯವಿರಬೇಕು. ಪ್ರತಿ ದೇಶದಲ್ಲಿಯೂ ಆಹಾರದ ಲಭ್ಯತೆಯನ್ನು ಸಾಂವಿಧಾನ ಹಕ್ಕು ಎಂದು ಸರ್ಕಾರಗಳು ಘೋಷಿಸಬೇಕು. ಹಸಿವಿನ ವಿರುದ್ಧದ ಈ ಹೋರಾಟದಲ್ಲಿ, ಅಗತ್ಯ ಆರೋಗ್ಯ ಕ್ರಮಗಳನ್ನು ಅನುಸರಿಸುತ್ತಾ ಭೂಮಿ, ಬೀಜ, ನೀರು, ಮಣ್ಣು ಮತ್ತು ಇತರೆ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ ಮಾಡುವುದರ ಜೊತೆಗೆ ಸಣ್ಣ ರೈತರ ಕೃಷಿಯಲ್ಲಿ ಹೂಡಿಕೆ ಮಾಡುವ ಮತ್ತು ರೈತರಬೆಳೆಗಳಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡುವಂತಹ ಸ್ಥಳೀಯ ರೈತ ಮಾರುಕಟ್ಟೆಗಳನ್ನು ಬೆಂಬಲಿಸುವ, ತುರ್ತು ಸರ್ಕಾರಗಳ ಮುಂದಿದೆ.

ಜನ ಸಮುದಾಯಗಳ ಆಹಾರ ಸಾರ್ವಭೌಮತ್ವವನ್ನು ಎತ್ತಿಹಿಡಿಯುವ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ರೈತರು ಮತ್ತು ಇತರ ಜನರ ಹಕ್ಕುಗಳನ್ನು ಖಾತರಿಪಡಿಸುವ ಸಮಯ ಇದಾಗಿದೆ. ಗ್ರಾಮೀಣ ಕಾರ್ಮಿಕರು, ಮಹಿಳೆಯರು, ವಲಸಿಗರು ಮತ್ತು ನಗರಗಳಲ್ಲಿ ದುಡಿಯುವ ವರ್ಗದಂತಹ ಅತ್ಯಂತ ದುರ್ಬಲ ವರ್ಗದ ಜನರಿಗೆ ಅನುಕೂಲವಾಗುವ ಸಾರ್ವಜನಿಕ ನೀತಿಗಳನ್ನು ಉತ್ತೇಜಿಸುವುದು ಈಗ ಅವಶ್ಯಕವಾಗಿದೆ. ಪ್ರಪಂಚವು ಸಾಂಕ್ರಾಮಿಕ ರೋಗದ ಕುಸಿತಕ್ಕೆ ತುತ್ತಾಗಿರುವ ಸಂದರ್ಭದಲ್ಲಿ, ಸಮಾನ, ನ್ಯಾಯಯುತ ಆಹಾರ ವ್ಯವಸ್ಥೆಯನ್ನು ಆಹಾರ ಸಾರ್ವಭೌಮತ್ವದ ತತ್ವದ ಮೇಲೆ ನಿರ್ಮಿಸಲು ಇದು ನಮಗೆ ಒಳ್ಳೆಯ ಸಮಯ.

  • ನವಾಜ್ ಹೆಗ್ಗೆರೆ
    (ಸಾಮಾಜಿಕ ನ್ಯಾಯ, ರೈತ ಮತ್ತು ಜನ ಚಳವಳಿ, ಸುಸ್ಥಿರ ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ನೀತಿಗಳ ಅಧ್ಯಯನಗಳಲ್ಲಿ ಆಸಕ್ತಿ ಹೊಂದಿರುವ ನವಾಜ್ ಹೆಗ್ಗೆರೆ ಸದ್ಯಕ್ಕೆ ಭಾರತದ ಕೃಷಿ ಚಳವಳಿಗಳೊಡನೆ ಕೆಲಸ ಮಾಡುತ್ತಿದ್ದಾರೆ.)

ಇದನ್ನೂ ಓದಿ: ಲಾಕ್‌ಡೌನ್‌ ಅವಧಿಯಲ್ಲಿ 1,550 ಟನ್ ಆಹಾರಧಾನ್ಯ ಹಾಳು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...