ಭಾರೀ ಮಳೆ: ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ 83 ಜನರು ಬಲಿ!
PC: The Economic Times

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ಇದುವರೆಗೂ ಸುಮಾರು 83 ಜನ ಬಲಿಯಾಗಿದ್ದಾರೆ.

ಕಳೆದ ಎರಡು ದಿನಗಳಿಂದ ನಿರಂತರ ಮಳೆಯಿಂದಾಗಿ ಮಹಾರಾಷ್ಟ್ರದ ಮೂರು ಜಿಲ್ಲೆಗಳಲ್ಲಿ 20,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, 27 ಜನರು ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿಯೂ ಪರಿಸ್ಥಿತಿ ಹದಗೆಟ್ಟಿದ್ದು, ಮಹಾರಾಷ್ಟ್ರದ ನದಿಗಳು ತುಂಬಿದ್ದರಿಂದ ರಾಜ್ಯಕ್ಕೆ ನೀರು ಹೆಚ್ಚಾಗಿ ಹಲವಾರು ಪ್ರದೇಶಗಳು ಪ್ರವಾಹಕ್ಕೆ ಸಿಲುಕಿದವು. ಭಾನುವಾರದಿಂದ ಇಲ್ಲಿಯವರಗೆ 6 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಕ್ರಾಲ್‌.ಇನ್ ವರದಿ ಮಾಡಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮಳೆ ಅಬ್ಬರ, ಭರ್ತಿಯಾದ ಡ್ಯಾಂಗಳು: ನದಿಪಾತ್ರದ ಜನರಲ್ಲಿ ಪ್ರವಾಹ ಭೀತಿ

ಅತಿಯಾದ ಮಳೆಯಿಂದಾಗಿ ತೆಲಂಗಾಣದಲ್ಲಿ ಕನಿಷ್ಠ 50 ಜನರು ಪ್ರಾಣ ಕಳೆದುಕೊಂಡಿದ್ದು, ಸರ್ಕಾರವು ಪರಿಹಾರ ಕ್ರಮಗಳನ್ನು ಹೆಚ್ಚಿಸುವುದರೊಂದಿಗೆ ರಾಜ್ಯವು ಸಹಜ ಸ್ಥಿತಿಗೆ ಮರಳುತ್ತಿದೆ.

ಕರ್ನಾಟಕ;
ಯಾದಗಿರಿ, ರಾಯಚೂರು, ಬಳ್ಳಾರಿ, ಬೀದರ್, ವಿಜಯಪುರ, ಬಾಗಲಕೋಟೆ, ಬೆಳಗಾವಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಗದಗ್, ಕೊಪ್ಪಳ್, ಹಾವೇರಿ ಮತ್ತು ಧಾರವಾಡ ಜಿಲ್ಲೆಗಳು ಪ್ರವಾಹದಿಂದಾಗಿ ಹೆಚ್ಚು ಹಾನಿಗೊಳಗಾಗಿವೆ. ಎಲ್ಲಾ ಪ್ರಮುಖ ಅಣೆಕಟ್ಟುಗಳ ಫ್ಲಡ್ ಗೇಟ್‌ಗಳನ್ನು ತೆರೆಯಲಾಗಿದ್ದು, ಇದರ ಪರಿಣಾಮವಾಗಿ ವಿವಿಧ ಹಳ್ಳಿಗಳಲ್ಲಿ ನೀರು ತುಂಬಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.

ಕಳೆದ ಮೂರು ತಿಂಗಳಲ್ಲಿ ಇದು ರಾಜ್ಯದಲ್ಲಿ ಸಂಭವಿಸಿದ ಮೂರನೇ ವಿಕೋಪವಾಗಿದೆ. 515 ಪ್ರಾಣಿಗಳು ಪ್ರಾಣ ಕಳೆದುಕೊಂಡಿದ್ದು, 4,782 ಜನರನ್ನು 36 ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.

ನಿರಂತರ ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ಜಿಲ್ಲೆಗಳ ಆಡಳಿತ ಮಂಡಳಿಗಳೊಂದಿಗೆ ಪರಿಶೀಲನಾ ಸಭೆ ನಡೆಸುವುದಾಗಿ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಪರಿಹಾರ ಕಾರ್ಯಗಳಿಗಾಗಿ ಅಗತ್ಯ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರವಾಹ, ಕೊರೊನಾ ಸಂದರ್ಭದಲ್ಲಿ ಕಣ್ಮರೆ, ಗಲಭೆ ಆದಾಗ ಪ್ರತ್ಯಕ್ಷ: ಯಾರಿವರು ಗೊತ್ತೇ?

ಮಹಾರಾಷ್ಟ್ರ;
ಮುಂದಿನ ಎರಡು ದಿನಗಳಲ್ಲಿ ಮಹಾರಾಷ್ಟ್ರ, ಕೊಂಕಣ ಮತ್ತು ದಕ್ಷಿಣ ಗುಜರಾತ್‌ನಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ಮುಂದಿನ 48 ಗಂಟೆಗಳಲ್ಲಿ ಮಳೆ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ಗುರುವಾರ ತಿಳಿಸಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಧ್ಯಕ್ಷತೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸುವ ಸಭೆ ನಡೆಸಿ, ಪಶ್ಚಿಮ ಮಹಾರಾಷ್ಟ್ರ ಮತ್ತು ಮರಾಠವಾಡದ ಕೆಲವು ಭಾಗಗಳಲ್ಲಿ ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ರಾಜ್ಯ ಆಡಳಿತ, ನೌಕಾಪಡೆ ಮತ್ತು ವಾಯುಪಡೆಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ನಿಲ್ಲದ ಪ್ರವಾಹ, ಬಾರದ ಪರಿಹಾರ: ಇಂದಿನ ಪ್ರಧಾನಿ ಸಭೆಯಲ್ಲಿ ದನಿಯೆತ್ತಲು ವಿಪಕ್ಷಗಳ ಆಗ್ರಹ

ತೆಲಂಗಾಣ;
ಹೈದರಾಬಾದ್ ಮತ್ತು ತೆಲಂಗಾಣದ ಇತರ ಭಾಗಗಳು ಗುರುವಾರ ಸಹಜ ಸ್ಥಿತಿಗೆ ಮರಳಿದವು. ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ಮಿತಿಯ ಹೆಚ್ಚಿನ ಭಾಗಗಳಲ್ಲಿ ನೀರು ಕಡಿಮೆಯಾಗುತ್ತಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ವಿಪತ್ತು ಪ್ರತಿಕ್ರಿಯೆ ಪಡೆ ತಂಡಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ.

ರಾಜ್ಯದಲ್ಲಿ ಸುಮಾರು 44,000 ಜನರನ್ನು 64 ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಯಿಗಿದ್ದು, 45,000 ಆಹಾರ ಪ್ಯಾಕೆಟ್‌ಗಳನ್ನು ರಾಜ್ಯದಲ್ಲಿ ನೀಡಲಾಯಿತು. ಮಳೆ ಮತ್ತು ಪ್ರವಾಹದಿಂದ ಉಂಟಾದ ಹಾನಿ ಸುಮಾರು 6,000 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಹೈದರಾಬಾದ್ ಅಧಿಕಾರಿಗಳು ಗುರುವಾರ ರಜಾದಿನವನ್ನು ಘೋಷಿಸಿ, ನಿವಾಸಿಗಳನ್ನು ಒಳಾಂಗಣದಲ್ಲಿರಲು ಹೇಳಿದರು. ಪ್ರವಾಹದಲ್ಲಿ ನಗರದ ಅನೇಕ ಭಾಗಗಳು ವಿದ್ಯುತ್ ಕಳೆದುಕೊಂಡಿದ್ದರಿಂದ ದೈನಂದಿನ ಜೀವನವೂ ಅಸ್ತವ್ಯಸ್ತಗೊಂಡಿತು.

ಇದರ ನಡುವೆ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಸಭೆ ನಡೆಸಿ, ಹಾನಿ ಪರಿಶೀಲನೆ ನಡೆಸಿದ್ದು, ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಿಗಾಗಿ 1,350 ಕೋಟಿ ರೂ.ಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕೋರಿದ್ದಾರೆ.


ಇದನ್ನೂ ಓದಿ: ರೈಲ್ವೆ ಪ್ಲಾಟ್‌ಫಾರ್ಮ್‌ಗಳಲ್ಲಿ ಸಿಲುಕಿಕೊಂಡಿರುವ ಬಿಹಾರದ ಪ್ರವಾಹ ಪೀಡಿತರು!  

LEAVE A REPLY

Please enter your comment!
Please enter your name here