ಬಲವಂತದ ಧಾರ್ಮಿಕ ಮತಾಂತರಗಳನ್ನು ‘ಬಹಳ ಗಂಭೀರ ಸಮಸ್ಯೆ’ ಎಂದು ಕರೆದ ಸುಪ್ರೀಂಕೋರ್ಟ್, ಒಕ್ಕೂಟ ಸರ್ಕಾರಕ್ಕೆ ಸೋಮವಾರ ನೋಟಿಸ್ ಜಾರಿಗೊಳಿಸಿ, ಈ ವಿಷಯದ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಕೇಳಿದೆ. ಬಲವಂತದ ಧಾರ್ಮಿಕ ಮತಾಂತರಗಳನ್ನು ನಿಯಂತ್ರಿಸಲು ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಆರ್.ಶಾ ಮತ್ತು ಹಿಮಾ ಕೊಹ್ಲಿ ಅವರ ಪೀಠವು ವಿಚಾರಣೆ ನಡೆಸುತ್ತಿದೆ.
ಅಶ್ವಿನಿ ಅವರು ತನ್ನ ಅರ್ಜಿಯಲ್ಲಿ, “ಬಲವಂತವಾಗಿ ಅಥವಾ ಕೆಲವು ರೀತಿಯ ಪ್ರಚೋದನೆಯಿಂದ ಮತಾಂತರ ನಡೆಸಲಾಗುತ್ತಿದ್ದು, ದೇಶದಲ್ಲಿ ಧಾರ್ಮಿಕ ಮತಾಂತರದಿಂದ ಮುಕ್ತವಾದ ಒಂದು ಜಿಲ್ಲೆ ಇಲ್ಲ” ಎಂದು ಪ್ರತಿಪಾದಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಉಡುಗೊರೆಗಳು ಮತ್ತು ಹಣದ ಬೆದರಿಸುವ, ಬೆದರಿಕೆ ಹಾಕುವ ಮೂಲಕ, ಮೋಸಗೊಳಿಸುವ ಮೂಲಕ ಮತ್ತು ಮಾಟಮಂತ್ರ, ಮೂಢನಂಬಿಕೆ, ಪವಾಡಗಳ ಮೂಲಕ ಮತಾಂತರಗಳನ್ನು ಮಾಡಲಾಗುತ್ತಿದೆ . ಈ ಆಚರಣೆಯನ್ನು ನಿಗ್ರಹಿಸಲು ಸರ್ಕಾರಗಳು ‘ಕಟ್ಟುನಿಟ್ಟಾದ ಕ್ರಮ’ಗಳನ್ನು ತೆಗೆದುಕೊಳ್ಳಬೇಕು” ಎಂದು ಅಶ್ವಿನಿ ತನ್ನ ಅರ್ಜಿಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆಯಡಿ ರಾಜ್ಯದಲ್ಲಿ ಮೊದಲ ಪ್ರಕರಣ ದಾಖಲು: ಒಪ್ಪಿತ ಮತಾಂತರಕ್ಕೂ ಕಾಯ್ದೆ ತೊಡಕು
ಬಲವಂತದ ಮತಾಂತರದ ಬಲಿಪಶುಗಳಲ್ಲಿ ಹೆಚ್ಚಿನವರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯದ ಜನರಾಗಿದ್ದು, ಈ ರೀತಿಯ ಮತಾಂತರವು ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೂಲಭೂತ ಹಕ್ಕುಗಳನ್ನು ಮಾತ್ರವಲ್ಲದೆ ಜಾತ್ಯತೀತತೆಯಂತಹ ಇತರ ಸಾಂವಿಧಾನಿಕ ತತ್ವಗಳನ್ನೂ ಕೂಡಾ ಉಲ್ಲಂಘನೆ ಮಾಡುತ್ತದೆ ಎಂದು ಅವರು ಆರೋಪಿಸಿದ್ದಾರೆ.
ಸುಪ್ರೀಂಕೋರ್ಟ್ ಒಕ್ಕೂಟ ಸರ್ಕಾರ, ಗೃಹ ಸಚಿವಾಲಯ ಮತ್ತು ಕಾನೂನು ಸಚಿವಾಲಯದಿಂದ ಪ್ರತಿಕ್ರಿಯೆಯನ್ನು ಕೇಳಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಪ್ರಸ್ತುತ ವಿಚಾರಣೆ ವೇಳೆ, ಧಾರ್ಮಿಕ ಸ್ವಾತಂತ್ರ್ಯ ಇರಬಹುದಾದರೂ, ಬಲವಂತದ ಮತಾಂತರದ ಸ್ವಾತಂತ್ರ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ನಿಟ್ಟಿನಲ್ಲಿ ಒಕ್ಕೂಟ ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ ಎಂದು ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರನ್ನು ಕೇಳಿದೆ. “ನಿಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸಿ, ನೀವು ಯಾವ ಕ್ರಮವನ್ನು ತೆಗೆದುಕೊಳ್ಳಲು ಪ್ರಸ್ತಾಪಿಸುತ್ತೀರಿ. ಸಂವಿಧಾನದ ಅಡಿಯಲ್ಲಿ ಮತಾಂತರವು ಕಾನೂನುಬದ್ಧವಾಗಿದೆ, ಆದರೆ ಬಲವಂತದ ಮತಾಂತರವಲ್ಲ” ಎಂದು ಕೋರ್ಟ್ ಹೇಳಿದೆ ಎಂದು ‘ಲೈವ್ ಲಾ’ ವರದಿಯು ಉಲ್ಲೇಖಿಸಿದೆ.
ಇದನ್ನೂ ಓದಿ: ಆಪ್ ಸಚಿವನ ನೇತೃತ್ವದಲ್ಲಿ ಬೌದ್ಧ ಧರ್ಮಕ್ಕೆ ಸಾಮೂಹಿಕ ಮತಾಂತರ: ಪ್ರತಿಜ್ಞೆ ಆಕ್ಷೇಪಿಸಿದ ಬಿಜೆಪಿ
ಮಧ್ಯಪ್ರದೇಶ ಮತ್ತು ಒರಿಸ್ಸಾದಂತಹ ರಾಜ್ಯಗಳಲ್ಲಿ ಈ ವಿಷಯದ ಬಗ್ಗೆ ವಿವಿಧ ಕಾನೂನುಗಳಿವೆ. ಜೊತೆಗೆ ಈ ರಾಜ್ಯದ ಕಾನೂನುಗಳ ಸಿಂಧುತ್ವವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ ಎಂದು ಮೆಹ್ತಾ ನ್ಯಾಯಾಲಯಕ್ಕೆ ಹೇಳಿದ್ದಾರೆ. ಇದಲ್ಲದೆ, ಮೆಹ್ತಾ ಅವರು ಜನರು ಮತಾಂತರಗೊಂಡರೆ ಅಕ್ಕಿ ಮತ್ತು ಗೋಧಿಯಂತಹ ಸಹಾಯಗಳನ್ನು ನೀಡಿದ ನಿದರ್ಶನಗಳನ್ನು ಒದಗಿಸಿದ್ದಾರೆ.
ಸರ್ಕಾರ ಮಧ್ಯಪ್ರವೇಶಿಸುವ ಅಗತ್ಯವಿದೆ ಎಂದು ಸೂಚಿಸಿದ ಪೀಠ
“ಆಪಾದಿತ ಬಲವಂತದ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದಂತೆ, ಅದು ನಿಜವೆಂದು ಕಂಡುಬಂದರೆ, ಇದು ಬಹಳ ಗಂಭೀರವಾದ ವಿಷಯವಾಗಿದೆ. ಇದು ಅಂತಿಮವಾಗಿ ರಾಷ್ಟ್ರದ ಭದ್ರತೆ ಮತ್ತು ಧಾರ್ಮಿಕ ಸ್ವಾತಂತ್ರ್ಯ ಮತ್ತು ನಾಗರಿಕರ ಆತ್ಮಸಾಕ್ಷಿಯ ಮೇಲೆ ಪರಿಣಾಮ ಬೀರಬಹುದು” ಎಂದು ಸುಪ್ರಿಂಕೋರ್ಟ್ ಹೇಳಿದೆ.
“ಆದ್ದರಿಂದ, ಒಕ್ಕೂಟ ಸರ್ಕಾರವು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಬಲವಂತವಾಗಿ, ಆಮಿಷ ಅಥವಾ ಮೋಸದ ವಿಧಾನಗಳಿಂದ ಇಂತಹ ಬಲವಂತದ ಮತಾಂತರಗಳನ್ನು ನಿಗ್ರಹಿಸಲು ಒಕ್ಕೂಟ ಮತ್ತು ಇತರ ಸರ್ಕಾರ ಯಾವ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದರ ಕುರಿತು ಪ್ರತಿವಾದವನ್ನು ಸಲ್ಲಿಸುವುದು ಉತ್ತಮ” ಎಂದು ಸುಪ್ರಿಂಕೋರ್ಟ್ ಹೇಳಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಜನಸಂಖ್ಯೆ ಹೆಚ್ಚಳ, ಮತಾಂತರ ಕುರಿತು ಮೋಹನ್ ಭಾಗವತ್ ಮಾತಿನ ಮರ್ಮವೇನು? ವಾಸ್ತವವೇನು?
ಅದರಂತೆ, ನ್ಯಾಯಾಲಯವು ನವೆಂಬರ್ 22 ರೊಳಗೆ ಒಕ್ಕೂಟ ಸರ್ಕಾರದ ಪ್ರತಿ-ಅಫಿಡವಿಟ್ ಅನ್ನು ಕೋರಿದ್ದು, ಮುಂದಿನ ವಿಚಾರಣೆಯನ್ನು ನವೆಂಬರ್ 28 ರಂದು ನಡೆಯಲಿದೆ.
ಬಿಜೆಪಿ ನಾಯಕ ಅಶ್ವಿನಿ ಅವರು ದೆಹಲಿ ಹೈಕೋರ್ಟ್‌ಗೆ ಕೂಡಾ ಇದೇ ರೀತಿಯ ಅರ್ಜಿಯನ್ನು ಸಲ್ಲಿಸಿದ್ದರು. ಈ ವರ್ಷ ಜುಲೈನಲ್ಲಿ ಬಲವಂತದ ಮತಾಂತರಗಳನ್ನು ತಡೆಯಲು ಕಾನೂನನ್ನು ರಚಿಸುವಂತೆ ಒಕ್ಕೂಟ ಮತ್ತು ದೆಹಲಿ ಸರ್ಕಾರಗಳಿಗೆ ನಿರ್ದೇಶಿಸಲು ಹೈಕೋರ್ಟ್ ನಿರಾಕರಿಸಿತ್ತು. ಅಶ್ವಿನಿ ಅವರು ತಮ್ಮ ಅರ್ಜಿಯಲ್ಲಿ ಬಲವಂತದ ಮತಾಂತರದ ಯಾವುದೇ ನಿರ್ದಿಷ್ಟ ನಿದರ್ಶನಗಳನ್ನು ಒದಗಿಸಿಲ್ಲ ಎಂದು ಹೈಕೋರ್ಟ್ ಹೇಳಿದೆ. ಒಕ್ಕೂಟ ಮತ್ತು ರಾಜ್ಯ ಶಾಸಕಾಂಗವು ಅಂತಹ ಶಾಸನವನ್ನು ರಚಿಸಲು ಸ್ವತಂತ್ರವಾಗಿದೆ. ಅವರಿಗೆ ನ್ಯಾಯಾಲಯದ ಶಿಫಾರಸು ಅಗತ್ಯವಿಲ್ಲ ಎಂದು ಹೈಕೋರ್ಟ್ ಹೇಳಿತ್ತು.


